ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಖಾದ್ಯದ ಸವಿ ರುಚಿ

ನಳಪಾಕ
Last Updated 21 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮೂಲತಃ ಕುಂದಾಪುರ ತಾಲೂಕಿನ ಕೋಟದವರಾದ ಸುಷ್ಮಾ ವೆಂಕಟೇಶ್‌ ಭಟ್‌ ಪಾಕಪ್ರಿಯೆ.  ಬಾಲ್ಯದಿಂದಲೂ ಅಡುಗೆಯ ಬಗ್ಗೆ ವಿಶೇಷ ಆಸಕ್ತಿ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಎಸ್ಸಿ ಬಯೋಟೆಕ್ನಾಲಜಿ ಪದವಿ ಪಡೆದಿರುವ ಇವರು ಸದ್ಯ ಗೃಹಿಣಿಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ತಮ್ಮ ತಾಯಿಯಿಂದ ಕಲಿತ ಕೆಲವು ಅಡುಗೆಗಳನ್ನು ಅವರು ಇಲ್ಲಿ ವಿವರಿಸಿದ್ದಾರೆ.

ಕ್ಯಾಪ್ಸಿಕಂ ಸಾಸಿವೆ
ಬೇಕಾಗುವ ಸಾಮಾಗ್ರಿಗಳು

ಒಂದು ದಪ್ಪ ಮೆಣಸಿನಕಾಯಿ, ಸಾಸಿವೆ, ಒಂದು ಹಸಿಮೆಣಸಿನಕಾಯಿ, ಕರಿಬೇವು ಸ್ವಲ್ಪ, ತೆಂಗಿನಕಾಯಿ ತುರಿ 2 ಚಮಚ, ಕೊತ್ತಂಬರಿ ಸೊಪ್ಪು ಮೊಸರು ಒಂದು ಕಪ್‌, ಉಪ್ಪು ರುಚಿಗೆ.

ಒಗ್ಗರಣೆಗೆ: ತುಪ್ಪ 2 ಚಮಚ, ಸಾಸಿವೆ, ಉದ್ದಿನಬೇಳೆ, ಒಂದು ಒಣಮೆಣಸು.

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ; ಅದು ಬಿಸಿಯಾದ ಮೇಲೆ ಉದ್ದಿನಬೇಳೆ ಹಾಕಿ. ಉದ್ದಿನಬೇಳೆ ಕೆಂಪಾದ ಮೇಲೆ ಸಾಸಿವೆ, ಹಸಿಮೆಣಸು, ಕರಿಬೇವು, ಕ್ಯಾಪ್ಸಿಕಂ ಹೋಳುಗಳನ್ನು ಹಾಕಿ ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಬಾಡಿಸಿ.

ನಂತರ ಎಣ್ಣೆಯಲ್ಲಿ ಬಾಡಿಸಿ ವಸ್ತುಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ರುಬ್ಬಿದ ಮಿಶ್ರಣಕ್ಕೆ ಮೊಸರು ಸೇರಿಸಿ. ನಂತರ ತುಪ್ಪ ಬಿಸಿಮಾಡಿ ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕೆಂಪುಮೆಣಸಿನ ಕಾಯಿ ಹಾಕಿ ಒಗ್ಗರಣೆ ರೆಡಿ ಮಾಡಿಕೊಂಡು ಮೇಲಿನ ಮಿಶ್ರಣಕ್ಕೆ ಸೇರಿಸಿದರೆ ಕ್ಯಾಪ್ಸಿಕಂ ಸಾಸಿವೆ ರೆಡಿ.

***
ಕ್ಯಾರೆಟ್‌ ಮಿಲ್ಕ್‌ ಶೇಕ್‌
ಬೇಕಾಗುವ ಸಾಮಾಗ್ರಿಗಳು

ಕ್ಯಾರೆಟ್‌ 4, ಗೋಡಂಬಿ 8 ರಿಂದ 10, ಸಕ್ಕರೆ , ತುಪ್ಪ – ಸ್ವಲ್ಪ,  ಹಾಲು ಅರ್ಧ ಲೀಟರ್.

ಮಾಡುವ ವಿಧಾನ
ಮೊದಲು ಕ್ಯಾರೆಟ್‌ ಅನ್ನು ಬೇಯಿಸಿಕೊಳ್ಳಿ, ನಂತರ ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ನಂತರ ಬೇಯಿಸಿದ ಕ್ಯಾರೆಟ್, ಹುರಿದ ಗೋಡಂಬಿ, ಸಕ್ಕರೆ ಎಲ್ಲವನ್ನೂ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಹಾಲನ್ನು ಕಾಯಿಸಿ. ಹಾಲು ತಣ್ಣಗಾದ ಮೇಲೆ ರುಬ್ಬಿಕೊಂಡ ಮಿಶ್ರಣವನ್ನು ಅದರೊಂದಿಗೆ ಸೇರಿಸಿ. ಸ್ವಲ್ಪ ಹೊತ್ತು ಫ್ರಿಡ್ಜ್‌ನಲ್ಲಿ ಇರಿಸಿದರೆ ಕ್ಯಾರೆಟ್‌ ಮಿಲ್ಕ್‌ ಶೇಕ್ ರೆಡಿ.

***
ಅಕ್ಕಿ ಚಕ್ಕುಲಿ
ಬೇಕಾಗುವ ಸಾಮಗ್ರಿ
ಅರ್ಧ ಕೆಜಿ ಅಕ್ಕಿ, ಕಾಲು ಕೆ.ಜಿ. ಉದ್ದು, ತೆಂಗಿನ ಹಾಲು (ಒಂದು ತೆಂಗಿನಕಾಯಿ ಪೂರ್ತಿ ರುಬ್ಬಿಕೊಂಡು ಅದರಿಂದ ದಪ್ಪ ಹಾಲು ತಯಾರಿಸಿಕೊಂಡಿರಬೇಕು), ಜೀರಿಗೆ, ಅರಶಿಣ ಚಿಟಿಕೆ, ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ
ಅಕ್ಕಿ ಹಾಗೂ ಉದ್ದನ್ನು ಚೆನ್ನಾಗಿ ತೊಳೆದು ಸ್ವಲ್ಪ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ. ನಂತರ ಅವೆರಡನ್ನೂ ಹುಡಿ ಮಾಡಿಕೊಳ್ಳಿ. ನಂತರ ಅಕ್ಕಿ ಹಾಗೂ ಉದ್ದಿನಬೇಳೆ ಮಿಶ್ರಣದ ಪುಡಿಗೆ ಕಾಯಿಹಾಲು, ಅರಶಿಣ, ಜೀರಿಗೆ ಹಾಕಿ ತೀರಾ ದಪ್ಪ ಆಗದಂತೆ, ತೆಳುವೂ ಆಗದಂತೆ ಕಲಿಸಿಕೊಂಡು ಚಕ್ಕುಲಿ ಅಚ್ಚಿನಲ್ಲಿ ಹಾಕಿ, ಕುದಿಯುವ ಎಣ್ಣೆಗೆ ಬಿಡಿ. ನಂತರ ಚಕ್ಕುಲಿ ಕಂದುಬಣ್ಣದ ಬರುವವರೆಗೂ ಕಾಯಿಸಿ ತೆಗಿಯಿರಿ. ಈಗ ಬಿಸಿ ಬಿಸಿ ಅಕ್ಕಿ ಚಕ್ಕುಲಿ ತಿನ್ನಲು ರೆಡಿ.

***
ಹೀರೆಕಾಯಿ ಚಟ್ನಿ
ಬೇಕಾಗುವ ಸಾಮಗ್ರಿಗಳು

ಮಧ್ಯಮ ಗಾತ್ರದ ಹೀರೆಕಾಯಿ ಒಂದು, ಹಸಿಮೆಣಸಿನಕಾಯಿ 4 ರಿಂದ 5, ಒಂದೂವರೆ ಚಮಚ ದನಿಯಾ, 2 ಚಮಚ ತೆಂಗಿನಕಾಯಿ ತುರಿ,  ತೆಂಗಿನ ಎಣ್ಣೆ ಸ್ವಲ್ಪ, ಇಂಗು

ಒಗ್ಗರಣೆಗೆ: ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಕೆಂಪು ಮೆಣಸು

ಮಾಡುವ ವಿಧಾನ
ಹೋಳುಗಳನ್ನಾಗಿ ಮಾಡಿದ ಹೀರೆಕಾಯಿ, ದನಿಯಾ, ಹಸಿಮೆಣಸು, ಹುಣಸೆಹಣ್ಣು, ತೆಂಗಿನಕಾಯಿ ತುರಿ, ಉಪ್ಪು, ತೆಂಗಿನ ಎಣ್ಣೆ, ಇವೆಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.

ಮೇಲೆ ತಿಳಿಸಿದಂತೆ ಬೇಯಿಸಿಕೊಂಡ ವಸ್ತು ಆರಿದ ನಂತರ ಸ್ವಲ್ಪ ಇಂಗು ಸೇರಿಸಿ ಬೇಯಿಸಿದ ಮಿಶ್ರಣವನ್ನು ರುಬ್ಬಿಕೊಳ್ಳಿ. ನಂತರ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ತಯಾರಿಸಿದ ಒಗ್ಗರಣೆ ಹಾಕಿ. ಈಗ ಹೀರೆಕಾಯಿ ಚಟ್ನಿ ತಯಾರಾಗುತ್ತದೆ. ಇದನ್ನು ಅನ್ನ ಹಾಗೂ ದೋಸೆಯ ಜೊತೆ ತಿನ್ನಲು ರುಚಿಯಾಗಿರುತ್ತದೆ.

***
ಅವಲಕ್ಕಿ ದೋಸೆ
ಬೇಕಾಗುವ ಸಾಮಗ್ರಿಗಳು

ಮುಕ್ಕಾಲು ಕಪ್‌ ಅವಲಕ್ಕಿ,  ಕಾಲು ಕಪ್‌ಅಕ್ಕಿ, ತೆಂಗಿನ ತುರಿ ಅರ್ಧ ಕಪ್, ಉಪ್ಪು ರುಚಿಗೆ.

ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಅವಲಕ್ಕಿಯನ್ನು ನೆನೆಸಿಕೊಳ್ಳಬೇಕು. ನೆನೆದ ಅಕ್ಕಿ–ಅವಲಕ್ಕಿಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ತೆಂಗಿನಕಾಯಿ ತುರಿಯನ್ನು  ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರಾತ್ರಿ ದೋಸೆಹಿಟ್ಟು ತಯಾರಿಸಿಕೊಂಡು ಬೆಳಿಗ್ಗೆ ದೋಸೆ ಮಾಡಿದರೆ ಉತ್ತಮ.

ದೋಸೆಗೆ ಚಟ್ನಿ
ಬೇಕಾಗುವ ಸಾಮಗ್ರಿ

ಈರುಳ್ಳಿ, ಕರಿಬೇವು, ಒಣಮೆಣಸು, ಸಾಸಿವೆ, ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ
ಕರಿಬೇವು ಮತ್ತು ಒಣಮೆಣಸನ್ನು ಎಣ್ಣೆ ಹಾಕದೆಯೇ ಹುರಿದುಕೊಳ್ಳಬೇಕು. ನಂತರ ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ. ಅದು ಕಾದ ನಂತದ ಸಾಸಿವೆ ನಂತರ  ಹೆಚ್ಚಿದ ಈರುಳ್ಳಿಯನ್ನು ಹಾಕಿ ಹುರಿಯಬೇಕು.  ನಂತರ ಮಿಕ್ಸಿ ಜಾರಿಗೆ ಹುರಿದ ಕೆಂಪು ಮೆಣಸಿನಕಾಯಿ, ಕರಿಬೇವು, ಈರುಳ್ಳಿ, ಹುಣಸೆಹಣ್ಣು, ಉಪ್ಪನ್ನು ಸೇರಿಸಿ ನೀರು ಹಾಕದೆ ರುಬ್ಬಿಕೊಂಡರೆ ರುಚಿಯಾದ ಚಟ್ನಿ ತಯಾರಾಗುತ್ತದೆ. ಇದು ಅವಲಕ್ಕಿ ದೋಸೆಯ ಜೊತೆ ತಿನ್ನಲು ಉತ್ತಮ ಕಾಂಬಿನೇಷನ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT