ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತುಬಂಧ ಜೀವನದ ಅಂತ್ಯವಲ್ಲ

Last Updated 21 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಪ್ರತಿ ಹೆಣ್ಣು ತನ್ನ ಜೈವಿಕ ರಚನೆ ಹಾಗೂ ಜವಾಬ್ದಾರಿಗಳಿಂದಾಗಿ ಋತುಚಕ್ರ, ತಾಯ್ತನ, ಹಾಲುಣಿಸುವಿಕೆ ಮತ್ತು ಋತುಬಂಧ (ಮುಟ್ಟಂತ್ಯ-ಮೆನೋಪಾಸ್‌) ಇವುಗಳನ್ನು ದಾಟಲೇಬೇಕು. ಮುಟ್ಟಂತ್ಯ ಒಂದು ಜೈವಿಕ ವಿದ್ಯಮಾನವಾದರೂ ಮಹಿಳೆಯ ಜೀವನದಲ್ಲಿ ಪರ್ವಕಾಲ. ಯಾಕೆಂದರೆ ಪ್ರತಿ ಹೆಣ್ಣಿಗೂ ಇದು ಬೇರೆ ಬೇರೆ ರೀತಿಯ ಅನುಭವ ಆಗಬಹುದು ಹಾಗೂ ಜೀವನದ 1/3 ಭಾಗವನ್ನು ಕಳೆಯಬೇಕಾದ ಪರಿಸ್ಥಿತಿ ಹೆಣ್ಣಿಗಿದೆ.

ಇಂತಹ ಪರಿಸ್ಥಿತಿಯನ್ನು ಹಲವು ಮಹಿಳೆಯರು ಜೀವನದ ಅಂತ್ಯವೆಂದೇ ಭಾವಿಸಿ, ನಿರಾಸಕ್ತಿ, ಖಿನ್ನತೆ, ಬೇಸರಗಳಿಂದಲೇ ಕಳೆಯುತ್ತಾರೆ. ಇದಕ್ಕೆ ಕಾರಣವಿಲ್ಲದಿಲ್ಲ.ಋತುಚಕ್ರ ಆರಂಭದಿಂದ ಅಂತ್ಯದವರೆಗೂ ಹೆಣ್ಣಿನ ಜೀವನವು ಹಾರ್ಮೋನುಗಳ ನಿಯಂತ್ರಣದಲ್ಲಿದ್ದು 45 ವರ್ಷಗಳ ನಂತರ ಗರ್ಭಕೋಶದ ಪಕ್ಕದಲ್ಲಿರುವ ಅಂಡಾಶಯದಿಂದ ಅಂಡಾಣು ಉತ್ಪತ್ತಿ ನಿಲ್ಲುತ್ತಾ ಬಂದು, ಅದರಿಂದ ಸ್ರವಿಸಲ್ಪಡುವ ಹೆಣ್ತನದ ಹಾರ್ಮೋನುಗಳಾದ ಇಸ್ಟ್ರೋಜನ್‌ ಮತ್ತು ಪ್ರೊಜೆಸ್ಟಿರಾನ್‌ ಹಾರ್ಮೋನುಗಳು ಕಡಿಮೆಯಾಗುತ್ತಾ ಬರುತ್ತದೆ. ಹಾಗೂ 45 ರಿಂದ  52 ವರ್ಷದೊಳಗೆ ಮಾಸಿಕ ಮುಟ್ಟು ನಿಂತು ಹೋಗುತ್ತದೆ. ಇದು ಹಲವು ಬದಲಾವಣೆಗಳನ್ನೂ ಉಂಟು ಮಾಡುತ್ತದೆ.ಈ ವಯಸ್ಸು ಕೌಟುಂಬಿಕ ಹಿನ್ನೆಲೆ ಹಾಗೂ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ.

ಮೆನುಪಾಸ್‌ನಲ್ಲಾಗುವ ಬದಲಾವಣೆಗಳೇನು?
ಋತುಚಕ್ರ ನಿಲ್ಲುವ ಎರಡು ಮೂರು ವರ್ಷಗಳ ಮೊದಲೇ ರಕ್ತದಲ್ಲಿ ಕಡಿಮೆಯಾಗುತ್ತಾ ಬರುವ ಸ್ತ್ರೀತ್ವದ ಹಾರ್ಮೋನುಗಳಿಂದ ಸೆಕೆ ಸೆಕೆ. ಬೆವರು ಬೆವರು. ಕೆಲವರಲ್ಲಿ ಚಳಿ ಚಳಿ, ಹೃದಯ ವೇಗವಾಗಿ ಹೊಡೆದುಕೊಳ್ಳುವುದು (ಉಷ್ಣ ಅಲೆಗಳು ಅಥವಾ ಹಾಟ್‌ ಪ್ಲಶನ್‌), ನಿದ್ರಾಹೀನತೆ ಇತ್ಯಾದಿ ಉಂಟಾಗಬಹುದು. ಕುಂದುವ ಏಕಾಗ್ರತೆ, ಸಿಡಿಮಿಡಿ, ಕೋಪ, ಖಿನ್ನತೆ, ಮರೆಗುಳಿತನ, ಮಕ್ಕಳೆಲ್ಲ ದೂರವಿದ್ದರೆ ಖಾಲಿಗೂಡಿನ ಅನುಭವ. ಕೆಲವರಲ್ಲಿ ಮುಗಿದು ಹೋಯಿತೆನ್ನುವ ಭಾವನೆ ಇತ್ಯಾದಿ ಭಾವನಾತ್ಮಕ ಏರಿಳಿತಗಳಾಗುತ್ತವೆ.

ಗರ್ಭಕೋಶ ಅಂಡಾಶಯಗಳ ಗಾತ್ರ ಕಿರಿದಾಗುತ್ತದೆ. ಯೋನಿಪದರವು ತೆಳ್ಳಗಾಗಿ ಪದೇ ಪದೇ ಸೋಂಕಾಗಬಹುದು. ಕೆಮ್ಮಿದರೆ, ಸೀನಿದರೆ ಮೂತ್ರ ವಿಸರ್ಜನೆಯಾಗಬಹುದು ಮತ್ತು  ಮೂತ್ರದೊತ್ತಡ ತಡೆ ಹಿಡಿಯಲು ಕಷ್ಟವಾಗಬಹುದು. ಚರ್ಮ ಸುಕ್ಕಾಗಿ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಹೆಚ್ಚಾಗುವ ಬೊಜ್ಜು, ಕುಗ್ಗುವ ಸ್ತನಗಳ ಗಾತ್ರ ಎಲ್ಲವೂ ಸಾಮಾನ್ಯ ಬದಲಾವಣೆಗಳು, ಲೈಂಗಿಕ ಆಸಕ್ತಿಯೂ ಕುಂದುತ್ತದೆ.

ಮಾಸಿಕ ಋತುಚಕ್ರದಲ್ಲಿಯೂ ಏರುಪೇರಾಗಿ ಕೆಲವರಲ್ಲಿ ಕಡಿಮೆ ಮುಟ್ಟಾಗಬಹುದು. ಕೆಲವರಲ್ಲಿ ಪದೇ ಪದೇ ಮುಟ್ಟಾಗಬಹುದು. ಅತಿ ರಕ್ತಸ್ರಾವವಾದರೆ ತಜ್ಞವೈದ್ಯರ ಸಲಹೆ ಅತ್ಯಗತ್ಯ. ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಸಮಸ್ಯೆ ಹೆಚ್ಚುವ ಮೊದಲೇ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಹೃದಯ ಹಾಗೂ ಮೂಳೆಗಳ ಮೇಲೆ ಹೆಣ್ತನದ ಹಾರ್ಮೋನುಗಳು ಬೀರುವ ರಕ್ಷಣಾತ್ಮಕ ಪರಿಣಾಮ ಕಡಿಮೆಯಾಗುತ್ತಾ ಮೂಳೆಗಳ ಸವೆತ ಹೆಚ್ಚಾಗುತ್ತದೆ. (ಮೂರರಲ್ಲಿ ಒಬ್ಬರಿಗೆ ಋತುಬಂಧದ ನಂತರ ಮೂಳೆಸವೆತ ಉಂಟಾಗುತ್ತದೆ) ಮತ್ತು ಹೃದಯಾಘಾತ ಸಂಭವವೂ ಹೆಚ್ಚಾಗುತ್ತದೆ.

ಈ ಮೇಲೆ ಹೇಳಿದ ಇವೆಲ್ಲ ಋತುಬಂಧದ ಲಕ್ಷಣಗಳೂ ಸಹಜ ಋತುಬಂಧದಲ್ಲಿ ಕಂಡು ಬಂದ ಹಾಗೆ ಗರ್ಭಕೋಶವನ್ನು ಕೃತಕವಾಗಿ ತೆಗೆಸಿಕೊಂಡಾಗ (ಹಿಸ್ಟರೆಕ್ಟಮಿ) ಹಾಗೂ ಕ್ಯಾನ್ಸರ್‌ ಚಿಕಿತ್ಸೆಗಾಗಿ ಕಿಮೋ ರೇಡಿಯೋ ತೆರಪಿ ಮಾಡಿಸಿಕೊಂಡಾಗ ತೀವ್ರತರವಾಗಿ ಕಾಣಿಸಿಕೊಳ್ಳಬಹುದು.

ಮುಟ್ಟಂತ್ಯವನ್ನು ಎದುರಿಸುವುದು ಹೇಗೆ?
40 ವರ್ಷದ ನಂತರ ಮಹಿಳೆ ತನ್ನ ನಿಜವಾದ ಜೀವನ ಪ್ರಾರಂಭವೆಂದು ತಿಳಿಯಬೇಕು. ಈ ಹಂತದಲ್ಲಿ ಮಹಿಳೆಗೆ ಯೌವನದ  ಜೀವನೋತ್ಸಾಹ ಇಲ್ಲದಿದ್ದರೂ ವಿವೇಚನೆ ಹೆಚ್ಚಾಗಿರುವುದರಿಂದ ಸಂತಾನೋತ್ಪತ್ತಿ ಚಟುವಟಿಕೆಯಿಂದ ಮುಕ್ತವಾಗಿ ಸ್ವಯಂಉತ್ಪತ್ತಿ ವ್ಯವಸ್ಥೆಗೆ ಕಾಲಿಡುತ್ತಿದ್ದೇವೆ ಎಂದು ತಿಳಿಯುವ ಸಕಾಲ. ನಮ್ಮಲ್ಲಿರುವ ಉತ್ಪಾದಕತೆ, ಕ್ರಿಯಾಶೀಲತೆ, ಜವಾಬ್ದಾರಿತನದ ಪರಮಾವಧಿಯನ್ನು ತಲುಪಿದ್ದೇವೆ ಎಂದು ತಿಳಿದುಕೊಂಡು ತಮ್ಮನ್ನು ತಾವು ಸಂಪೂರ್ಣ ಬೆಳೆಸಿಕೊಳ್ಳುವ ಅತ್ಯುತ್ತಮ ಅವಕಾಶ.

1978ರಲ್ಲಿ ವಿಶ್ವ ಮೆನುಪಾಸ್‌ ಸೊಸೈಟಿ (ಐ.ಎಂ.ಎಸ್‌.) ಪ್ರಾರಂಭವಾಗಿ ಪ್ರತಿವರ್ಷವೂ ಅಕ್ಟೋಬರ್‌ 18ರಂದು ಋತುಬಂಧ ದಿನವನ್ನು ಆಚರಿಸುತ್ತಾ ಈ ಬಗ್ಗೆ  ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ.

 ಐ.ಎಂ.ಎಸ್‌.ನ ಅಧ್ಯಕ್ಷ ರಾಡ್‌ಬೇಬ್‌ರವರ ಪ್ರಕಾರ ಈ ಸಂದರ್ಭವೂ ಮಹಿಳೆ ತನ್ನ ಆರೋಗ್ಯದ ಬಗ್ಗೆ ಲೆಕ್ಕಹಾಕಲು (ಆಡಿಟ್‌) ಪ್ರಾರಂಭಿಸುವ ಸಕಾಲ ಯಾಕೆಂದರೆ ಮುಟ್ಟಂತ್ಯದ ಆರಂಭದ ದಿನಗಳಲ್ಲಿ ತನ್ನ ಬಗ್ಗೆ ತೆಗೆದುಕೊಳ್ಳುವ ಮುಂಜಾಗ್ರತೆ ಮುಂದಿನ ದಿನಗಳಲ್ಲಿ ಆರೋಗ್ಯವಾಗಿರಲು ಉತ್ತಮ ಅವಕಾಶ.

ಮುಟ್ಟಂತ್ಯದಿಂದಲೇ ಹೆಚ್ಚಾಗಿ ಸಂಭವಿಸುವ ಮೂಳೆಗಳ ಸವೆತ (ಆಸ್ಟಿಯೋ ಪೊರೋಸಿಸ್‌), ಹೃದಯ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆ, ಕುಂಠಿತ ಅವಗಾಹನ ಶಕ್ತಿ, ಜೊತೆಗೂಡುವ ದೀರ್ಘಕಾಲಿಕ ಕಾಯಿಲೆಗಳಾದ ಮಧುಮೇಹ, ಏರುರಕ್ತದೊತ್ತಡ, ಕ್ಯಾನ್ಸರ್‌ ಇತ್ಯಾದಿಗಳಿಂದ ತೊಂದರೆ ತಪ್ಪಿಸಿಕೊಳ್ಳಲು ತನ್ನ ಹಿಂದಿನ ಜೀವನದ ಅವಲೋಕನ ಮಾಡಿ ಮುಂದಿನ ಜೀವನವನ್ನು ಆರೋಗ್ಯ ಪೂರ್ಣವಾಗಿ ಕಳೆಯಬೇಕೆಂದು ಪ್ರತಿ ಹೆಣ್ಣು ನಿರ್ಧಾರ ತೆಗೆದುಕೊಳ್ಳುವ ಕಾಲ ಒದಗಿಬಂದಿದೆ ಎಂದು ತಿಳಿಯಬೇಕು.

ಮಾನಸಿಕ ಸ್ಥೈರ್ಯ ಬೆಳೆಸಿಕೊಂಡು ಳಸಿಕೊಂಡು ತಾನು ಸಂಪೂರ್ಣವಾಗಿ ಬೆಳೆಯಲು ಅತ್ಯುತ್ತಮ ಅವಕಾಶವೆಂದು ತಿಳಿದು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ಪಡೆಯಬೇಕು. ಮನೆಯವರು ಕೂಡ ಮಹಿಳೆಯ ಮಾನಸಿಕ ಸ್ಥಿತಿಯನ್ನು ಅರಿತುಕೊಂಡು ಅವರಿಗೆ ಸಹಕಾರವನ್ನು ನೀಡುವಂತಹ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು.

ಉತ್ತಮ ದೈಹಿಕ ಚಟುವಟಿಕೆ
ಪ್ರತಿದಿನ ಕನಿಷ್ಠ 45ರಿಂದ 50 ನಿಮಿಷ ದೈಹಿಕ ಚಟುವಟಿಕೆ ಅತ್ಯಗತ್ಯ. ಮನೆಗೆಲಸದ ಜೊತೆಗೆ ವಾಕಿಂಗ್‌, ಸೈಕ್ಲಿಂಗ್‌, ಏರೋಬಿಕ್ಸ್, ಸ್ವಮ್ಮಿಂಗ್‌, ಡ್ಯಾನ್ಸಿಂಗ್‌ ಇತ್ಯಾದಿ ಯಾವುದೇ ರೀತಿಯ ದೈಹಿಕ ಚಟುವಟಿಕೆಯಿಂದ ಶರೀರದಲ್ಲಿ ಎಂಡಾರ್ಫಿನ್‌ ಮಟ್ಟ ಹೆಚ್ಚಿ ಸಂತೋಷದ ಅನುಭವವಾಗುತ್ತದೆ. ಮಾನಸಿಕ ದೃಢತೆಯು ಹೆಚ್ಚುತ್ತದೆ.

ತೂಕ ನಿರ್ವಹಣೆಗೆ ಸಹಾಯಕ ಹಾಗೂ ಮೂಳೆ ಹಾಗೂ ಹೃದಯದ ಆರೋಗ್ಯ ರಕ್ಷಣೆಗೆ ಸಹಾಯಕ ಪ್ರತಿದಿನ 11ರಿಂದ 3 ಗಂಟೆಯೊಳಗಿನ ಬಿಸಿಲಿಗೆ 15–20 ನಿಮಿಷ ಮೈಯೊಡ್ಡಿದರೆ ಸಾಕಷ್ಟು ವಿಟಮಿನ್‌ ‘ಡಿ’ ಸಿಗುತ್ತದೆ.

ಯೋಗ–ಪ್ರಾಣಾಯಾಮಗಳನ್ನು ಸರಿಯಾಗಿ ಕಲಿತು ನಿಯಮಿತವಾಗಿ ಮಾಡುವುದರಿಂದ ದೈಹಿಕ ಮಾನಸಿಕ ದೃಢತೆ ಉಂಟಾಗಿ ಭಾವನಾತ್ಮಕ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು.  ಸ್ನೇಹಿತರನ್ನು ಹೊಂದಿ ಕುಟುಂಬ ವರ್ಗದವರೊಡನೆ, ಬಂಧುಗಳೊಡನೆ ಸಂಬಂಧ ಕಾಪಾಡಿಕೊಳ್ಳಿ.ಇಷ್ಟೆಲ್ಲವಾದರೂ ನಿಮಗೆ ಮುಟ್ಟಂತ್ಯ ಎದುರಿಸಲು ಸಾಧ್ಯವಾಗದಿದ್ದಲ್ಲಿ ಉತ್ತಮ ಹೃದಯವಂತ ಸ್ತ್ರೀರೋಗತಜ್ಞರ, ಆಪ್ತ ಸಮಾಲೋಚಕರ ಸಹಾಯ ತೆಗೆದುಕೊಳ್ಳಿ. 

ಮುಂಜಾಗ್ರತೆಗಳು
ಆಹಾರಸೇವನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಹೆಚ್ಚು ಐಸೋಪ್ಲೇವಿನ್‌ ಇರುವ ಸೋಯಾ, ಫೈಟೋಇಸ್ಟ್ರೋಜನ್‌ಗಳಿಂದ ಕೂಡಿದ ಅಗಸೇಬೀಜ, ಮೆಂತ್ಯ, ದ್ವಿದಳ ಧಾನ್ಯಗಳು, ಬೀನ್ಸ್, ಹಸಿರು ತರಕಾರಿಗಳು, ಹಸಿರುಸೊಪ್ಪು, ಸುವರ್ಣ ಗಡ್ಡೆ, ಮೊಳಕೆಕಾಳುಗಳು, ಕ್ಯಾರೆಟ್‌, ಕುಂಬಳಬೀಜ, ಸೇಬು ಓಟ್ಸ್, ಜೋಳ ಹಾಗೂ ಇತರ ಸಿರಿಧಾನ್ಯಗಳು ಮುಂತಾದವುಗಳನ್ನು ಹಿತಮಿತವಾಗಿ ಇಸ್ಟ್ರೋಜನ್‌ ಹಾರ್ಮೋನುಗಳ ಕೊರತೆಯನ್ನು ಸರಿದೂಗಿಸಬಹುದು.

ಉಷ್ಣ ಅಲೆಗಳಿಂದ ರಕ್ಷಿಸಿಕೊಳ್ಳಲು (ಹಾಟ್‌ ಪ್ಲಶಸ್‌) ಕಾಫಿ, ಟೀ, ಕೋಲಾಗಳನ್ನು ಕಡಿಮೆಮಾಡಿ ಕರಿದ, ಹುರಿದ ಸಂಸ್ಕರಿಸಿದ ಆಹಾರ, ಬೇಕರಿ ಆಹಾರಗಳನ್ನು ಕಡಿಮೆ ಮಾಡಿ, ಅತಿಯಾದ ಖಾರ ಮಸಾಲೆ ಬಳಕೆ ಬೇಡ. ಧೂಮಪಾನ, ಮದ್ಯಪಾನ ವರ್ಜಿಸಿ, ನೀರು, ನಾರಿನ ಬಳಕೆ ಸರಿಯಾಗಿರಲಿ.

***
* ದೇಹಪ್ರಕೃತಿಯ ಮೇಲೆ ಅವಲಂಬನೆ

* ಮೂರರಲ್ಲಿ ಒಬ್ಬರಿಗೆ ಮೂಳೆ ಸವೆಯುತ್ತದೆ

* ಆಹಾರಸೇವನೆಯ ಬಗ್ಗೆ ಕಾಳಜಿ ವಹಿಸಿ

* ಕರಿದ ಪದಾರ್ಥಗಳನ್ನು ಕಡಿಮೆ ಮಾಡಿ

* 40ರ ಬಳಿಕ ಜೀವನದ ಪ್ರಾರಂಭ

* ಭಾವನೆಗಳಲ್ಲಿ ಸ್ಥಿರವಾಗಿರಿ

* ನಿಯಮಿತವಾಗಿ ವ್ಯಾಯಾಮ ಮಾಡಿ

* ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT