ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಜಾತ್ಯತೀತ ಬೇಡಿಕೆ!

Last Updated 22 ಅಕ್ಟೋಬರ್ 2016, 11:30 IST
ಅಕ್ಷರ ಗಾತ್ರ

ಏಕರೂಪ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೆ ತರುವುದು ಸಂವಿಧಾನ ನಿರ್ಮಾತೃಗಳ ಕನಸು, ಆಶಯ. ಸಂವಿಧಾನ ಕರಡು ರಚನಾ ಸಭೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್, ಕೆ.ಎಂ.ಮುನ್ಷಿ ಸೇರಿದಂತೆ ಹಲವರು ಆಡಿದ ಮಾತುಗಳು ಇದನ್ನು ದೃಢಪಡಿಸುತ್ತವೆ.

ಆದರೆ, ಕರಡು ರಚನಾ ಸಮಿತಿಯ ಎಲ್ಲ ಸದಸ್ಯರಿಂದ ಇದಕ್ಕೆ ಬೆಂಬಲ ಸಿಗಲಿಲ್ಲ. ನಿರ್ದಿಷ್ಟ ವರ್ಗಗಳಿಂದ ವಿರೋಧ ವ್ಯಕ್ತವಾದರೂ, ಸಂವಿಧಾನದ 44ನೇ ವಿಧಿಯಲ್ಲಿ, ‘ಸರ್ಕಾರವು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಯತ್ನಿಸಬೇಕು’ ಎಂದು ಹೇಳಲಾಗಿದೆ. ಇಲ್ಲಿ ಒಂದು ವಿಚಾರ ಸ್ಪಷ್ಟ. ಸಮಾನತೆಯನ್ನು ಹೇಳುವ 14ನೇ ವಿಧಿ, ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ 25ನೇ ವಿಧಿಯನ್ನು ರಚಿಸಿದ ನಂತರವೇ, ಕರಡು  ರಚನಾ ಸಮಿತಿಯು 44ನೇ ವಿಧಿಯನ್ನು ರೂಪಿಸಿತು.

ದೇಶದಲ್ಲಿ ವಿವಿಧ ಧರ್ಮ, ಜಾತಿ, ವರ್ಗಗಳನ್ನು ಪ್ರಭುತ್ವ ಸಮಾನವಾಗಿ ಕಾಣಬೇಕು (12ನೇ ವಿಧಿ), ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು (25ನೇ ವಿಧಿ) ಎಂದು ಹೇಳುವ ಸಂವಿಧಾನ, ಆಸ್ತಿ– ವಿವಾಹ– ದತ್ತು ಸ್ವೀಕಾರ ಸೇರಿದಂತೆ ವೈಯಕ್ತಿಕ ಕಾನೂನುಗಳ ವ್ಯಾಪ್ತಿಗೆ ಬರುವ ವಿಚಾರಗಳಲ್ಲಿ ಎಲ್ಲರಿಗೂ ಅನ್ವಯವಾಗುವ ಸಮಾನ ಸಂಹಿತೆಯನ್ನು ರೂಪಿಸಬೇಕು ಎಂದಿದೆ. ಅಂದರೆ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯವನ್ನು ಕಾಯ್ದುಕೊಂಡೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸಾಧ್ಯ ಎಂಬ ನಂಬಿಕೆ ಕರಡು ರಚನಾ ಸಭೆಗೆ ಇತ್ತು ಎಂದು ಪರಿಭಾವಿಸಬಹುದು.

‘ಏಕರೂಪ ಸಂಹಿತೆಗೆ ಕಾಲ ಪಕ್ವವಾಗಿಲ್ಲ’ ಎಂದು ಜವಾಹರಲಾಲ್‌ ನೆಹರೂ ಅವರು ಹೇಳಿ ಅರ್ಧ ಶತಮಾನ ಕಳೆದಿದೆ. ಹಾಗಾದರೆ, ಕಾಲ ಈಗಲೂ ಪಕ್ವವಾಗಿಲ್ಲವೇ? ಆಗಿದೆ ಎಂದಾದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಹುದು. ಆಗಿಲ್ಲ ಎಂದಾದರೆ, ದೇಶವನ್ನು ಪಕ್ವಗೊಳಿಸುವ ಕೆಲಸವಾದರೂ ಆರಂಭವಾಗಬೇಕು. ಏಕರೂಪ ನಾಗರಿಕ ಸಂಹಿತೆ ಹೇಗಿರಬೇಕು ಎಂಬ ಬಗ್ಗೆ ಸಮಾಜದ ಎಲ್ಲ ವರ್ಗಗಳಿಂದ ಅಭಿಪ್ರಾಯ ಸಂಗ್ರಹಿಸಲು ಈಗ ರಾಷ್ಟ್ರೀಯ ಕಾನೂನು ಆಯೋಗ ಮುಂದಾಗಿದೆ.

ಇದೇ ಹೊತ್ತಿನಲ್ಲಿ, ಮುಸ್ಲಿಂ ವೈಯಕ್ತಿಕ ಕಾನೂನಿನ ವ್ಯಾಪ್ತಿಗೆ ಬರುವ, ಏಕಕಾಲದಲ್ಲಿ ಮೂರು ಬಾರಿ ತಲಾಖ್‌ ಹೇಳಿ ಪತ್ನಿಗೆ ವಿಚ್ಛೇದನ ನೀಡುವ ಪದ್ಧತಿಗೆ ತನ್ನ ವಿರೋಧ ಇದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಕೇಂದ್ರ ಸರ್ಕಾರ ಇಂಥದ್ದೊಂದು ಪ್ರಮಾಣಪತ್ರ ಸಲ್ಲಿಸಿರುವುದು ದೇಶದ ಇತಿಹಾಸದಲ್ಲೇ ಮೊದಲು. ತಲಾಖ್‌ ನಿಷೇಧಿಸುವಂತೆ ಕೋರಿ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಸಲ್ಲಿಸಿರುವ ಪ್ರಮಾಣಪತ್ರ ಇದು.

ಏಕರೂಪ ನಾಗರಿಕ ಸಂಹಿತೆ ಜಾರಿ ಹಾಗೂ ತಲಾಖ್‌ ನಿಷೇಧ ಒಂದೇ ಎನ್ನುವಂತಿಲ್ಲ. ತಲಾಖ್‌ ಲಿಂಗ ಸಮಾನತೆಗೆ ಸಂಬಂಧಿಸಿದ ವಿಚಾರ, ಏಕರೂಪ ನಾಗರಿಕ ಸಂಹಿತೆ ವಿವಿಧ ಜಾತಿ– ಧರ್ಮ– ವರ್ಗಗಳ ನಡುವೆ ವಿವಾಹ, ಆಸ್ತಿ ಹಕ್ಕು, ಉತ್ತರಾಧಿಕಾರದಲ್ಲಿ ಸಮಾನತೆ ತರುವ ವಿಚಾರ. ಆದರೆ, ಸಂಹಿತೆ ಜಾರಿ ಹಾಗೂ ತಲಾಖ್‌ ನಿಷೇಧಗಳೆರಡಕ್ಕೂ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ವೈಯಕ್ತಿಕ ಕಾನೂನುಗಳೂ ಧಾರ್ಮಿಕ ಆಚರಣೆಯ ಭಾಗ. ಹಾಗಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಯ ಹೆಸರಿನಲ್ಲಿ ವೈಯಕ್ತಿಕ ಕಾನೂನುಗಳನ್ನು ನಿರ್ಬಂಧಿಸಲಾಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

1950ರ ದಶಕದಲ್ಲಿ ವಿವಿಧ ಕಾನೂನುಗಳ ಮೂಲಕ ಹಿಂದೂ ವೈಯಕ್ತಿಕ ಕಾನೂನುಗಳಿಗೆ ನೆಹರೂ ನೇತೃತ್ವದ ಸರ್ಕಾರ ಏಕರೂಪ ನೀಡಿತು. ಹಿಂದೂಗಳು ಭಾರತದಲ್ಲಿ ಬಹುಸಂಖ್ಯಾತರು. ಆದರೆ, ‘ಹಿಂದೂ’ ಎಂಬುದು ಏಕರೂಪಿ ಸಮಾಜವಲ್ಲ, ಅದು ಬೇರೆಬೇರೆ ಆಚರಣೆಗಳ ಜನರ ಒಂದು ಸಮೂಹ ಎಂಬ ಮಾತು ದೇಶದ ಬೌದ್ಧಿಕ ವಲಯದಲ್ಲೇ ಇದೆ. ಅಂದರೆ, ಹಿಂದೂ ಎಂಬ ಬಹುರೂಪಿ ಸಮಾಜವನ್ನು ಏಕರೂಪ ನಾಗರಿಕ ಸಂಹಿತೆಯ ವ್ಯಾಪ್ತಿಗೆ ತರಲು ಸಾಧ್ಯವಾಗಿದೆ. ‘ದೇಶದ ಎಲ್ಲರಿಗೂ ಅನ್ವಯವಾಗುವ ನಾಗರಿಕ ಸಂಹಿತೆಯನ್ನು ತರದೇ ಇರುವುದಕ್ಕೆ ಸಮರ್ಥನೆ ಇಲ್ಲ’ ಎಂದು 1995ರಲ್ಲಿ ಸರಳಾ ಮುದ್ಗಲ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.

‘ಸಮಾನತೆ ಎಂಬುದು ನಮ್ಮ ಸಂವಿಧಾನದ ಮೂಲಮಂತ್ರ. ಧಾರ್ಮಿಕ ಹಕ್ಕುಗಳು ಮತ್ತು ಸಾಮಾಜಿಕ ಕಟ್ಟುಪಾಡುಗಳ ನಡುವೆ ವ್ಯತ್ಯಾಸ ಇದೆ. ಸಾಮಾಜಿಕ ಸಮಾನತೆ ತಂದಾಗ ಧಾರ್ಮಿಕ ಹಕ್ಕಿಗೆ ಚ್ಯುತಿಯಾಗಬೇಕು ಎಂದೇನೂ ಇಲ್ಲ. ಅದೇನೇ ಇದ್ದರೂ, ಏಕರೂಪ ನಾಗರಿಕ ಸಂಹಿತೆ ಹೇಗಿರಬೇಕು ಎಂಬುದನ್ನು ಕಾನೂನು ಆಯೋಗ ಪರಿಶೀಲಿಸುತ್ತಿದೆ. ಅದು ಅಭಿಪ್ರಾಯ ನೀಡಿದ ನಂತರ ಕೇಂದ್ರ ತನ್ನ ತೀರ್ಮಾನ ತೆಗೆದುಕೊಳ್ಳುತ್ತದೆ’ ಎಂಬ ವಿವರಣೆಯನ್ನು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ನೀಡುತ್ತಾರೆ.

ಹಿಂದೂ ಕಾನೂನುಗಳ ಜಾರಿಯ ಮೂಲಕ, ಹಿಂದೂ ಸಮಾಜ ಮುಸ್ಲಿಂ ಸಮಾಜದ ಪ್ರಗತಿಪರ ಧೋರಣೆಯನ್ನು ಅನುಕರಿಸಿದ ಸೂಕ್ಷ್ಮವನ್ನು ಇಲ್ಲಿ ಉಲ್ಲೇಖಿಸಬೇಕು.

‘ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಹಕ್ಕಿರಬೇಕು ಎಂಬ ವಿಚಾರದಲ್ಲಿ ಹಿಂದೂ ಸಮುದಾಯಕ್ಕಿಂತ ಮುಸ್ಲಿಂ ಸಮುದಾಯವರು ಮೊದಲಿನಿಂದಲೂ ಹೆಚ್ಚು ಪ್ರಗತಿಪರವಾಗಿದ್ದರು. ಸ್ವಾತಂತ್ರ್ಯಾನಂತರ ಹಿಂದೂ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡಲಾಯಿತು. ಹಿಂದೂಗಳಲ್ಲಿ ಸುಧಾರಣೆ ಕಂಡುಬಂತು. ಹಿಂದೂಗಳು ಇನ್ನೊಂದು ಸಮುದಾಯದಿಂದ ಪ್ರಗತಿಪರ ಮೌಲ್ಯವೊಂದನ್ನು ಕಲಿತಂತೆ, ಇತರರೂ ಸುಧಾರಣೆಗೆ ಒಳಪಡಬೇಕು’ ಎನ್ನುವುದು ಸುಪ್ರೀಂ ಕೋರ್ಟ್‌ ವಕೀಲ ಕೆ.ವಿ.ಧನಂಜಯ್ ಅವರ ನಿಲುವು.

ಏಕರೂಪ ನಾಗರಿಕ ಸಂಹಿತೆ ಪರ ನಿಲುವನ್ನು ಸುಪ್ರೀಂ ಕೋರ್ಟ್‌ 1985ರ ಶಾಬಾನೊ ಪ್ರಕರಣದಲ್ಲೂ ತಳೆದಿತ್ತು. ಆದರೆ ಶಾಬಾನೊ ಪ್ರಕರಣ ನಂತರದ ದಿನಗಳಲ್ಲಿ ಬೇರೆಯದೇ ಬಣ್ಣ ಪಡೆದುಕೊಂಡಿದ್ದು ದುರ್ದೈವ.

ವೈಯಕ್ತಿಕ ಕಾನೂನುಗಳು ಒಂದೇ ಧರ್ಮಕ್ಕೆ ಸೀಮಿತವಾಗಿಲ್ಲ. ಅವು ಎಲ್ಲ ಧರ್ಮಗಳಲ್ಲೂ ಇವೆ. ವೈಯಕ್ತಿಕ ಕಾನೂನುಗಳು ಸಂವಿಧಾನದ ಆಶಯಕ್ಕೆ ಧಕ್ಕೆ ತಾರದಿದ್ದರೆ, ಅವುಗಳನ್ನು ಹಾಗೇ ಉಳಿಸಿಕೊಳ್ಳಬಹುದು. ಒಂದು ವೇಳೆ, ಅವು ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಿದ್ದರೆ, ಅಂತಹ ಕಾನೂನುಗಳನ್ನು ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ ಅನಿಸಿಕೆ ವ್ಯಕ್ತಪಡಿಸಿದರು.

ಬಿಜೆಪಿಗೆ ಭಾರತದ ರಾಜಕೀಯ ವಲಯದಲ್ಲಿ ‘ಕೋಮುವಾದಿ’ ಎಂಬ ಹಣೆಪಟ್ಟಿ ಅಂಟಿರುವ ಕಾರಣದಿಂದ, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅದೇ ಬಿಜೆಪಿ ನೇತೃತ್ವದ ಸರ್ಕಾರ ಮಾತನಾಡುತ್ತಿರುವುದರಿಂದ, ನಾಗರಿಕ ಸಂಹಿತೆ ಬೇಕು ಎಂಬ ಬೇಡಿಕೆಗೇ ಕೋಮುವಾದದ ಬಣ್ಣ ಅಂಟಿಕೊಳ್ಳುವ ಅಪಾಯವಿದೆ.

‘ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಬಹುತೇಕ ತೀರ್ಮಾನಗಳನ್ನು ಅಲ್ಲಿನ ಧಾರ್ಮಿಕ ಮುಖಂಡತ್ವವೇ ತೆಗೆದುಕೊಳ್ಳುತ್ತಿದೆ. ಆದರೆ ವಿವಾಹ ವಿಚ್ಛೇದನ, ನಾಗರಿಕ ಸಂಹಿತೆ ಕುರಿತು ಆ ಸಮುದಾಯದ ಸಮಾಜ ವಿಜ್ಞಾನಿಗಳೂ ಮಾತನಾಡಬೇಕು. ಜನರನ್ನು ಧಾರ್ಮಿಕ ಹಿಡಿತದಿಂದ ಹೊರತರಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಜೊತೆ ಗುರುತಿಸಿಕೊಂಡಿರುವ ‘ಸಾಮರಸ್ಯ’ ವೇದಿಕೆಯ ವಾದಿರಾಜ್ ಹೇಳುತ್ತಾರೆ.

‘ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸ್ಪಷ್ಟತೆ ಇನ್ನೂ ಬಂದಿಲ್ಲ. ಸಂಹಿತೆಯ ಕರಡು ಸಿದ್ಧವಾಗಿಲ್ಲ. ಹಾಗಾಗಿ ಅದರ ಬಗ್ಗೆ ನಾನು ಮಾತನಾಡಲಾರೆ’ ಎಂದರು ಲೇಖಕ ರಹಮತ್ ತರೀಕೆರೆ.

‘ಏಕಕಾಲಕ್ಕೆ ಮೂರು ಬಾರಿ ತಲಾಖ್‌ ಹೇಳಿ ವಿಚ್ಛೇದನ ನೀಡುವುದನ್ನು ಮುಸ್ಲಿಂ ಮಹಿಳೆಯರು, ಪ್ರಗತಿಪರ ಮುಸ್ಲಿಮರು ಇಷ್ಟಪಡಲಾರರು. ಹೀಗೆ ತಲಾಖ್‌ ಹೇಳುವುದು ಕುರ್‌ಆನ್‌ಗೂ ವಿರುದ್ಧ. ಆದರೆ, ಸ್ತ್ರೀಯರು ಮನೆಗೇ ಸೀಮಿತವಾಗಿರಬೇಕು ಎನ್ನುವ ಸಂಘ ಪರಿವಾರದ ಮುಖಂಡರೇ ಈ ವಿಚಾರದ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯ. ಮುಸ್ಲಿಮರಲ್ಲಿ ಗಂಡನಿಗೆ ವಿಚ್ಛೇದನ ನೀಡುವ ಹಕ್ಕನ್ನು ಪತ್ನಿಗೂ ನೀಡಲಾಗಿದೆ’ ಎಂದು ರಹಮತ್ ತಿಳಿಸಿದರು.
ತ್ರಿವಳಿ ತಲಾಖ್‌ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್‌ ಮುಂದಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಸುಪ್ರೀಂ ಕೋರ್ಟ್‌ ತೀರ್ಪಿನ ಮೂಲಕ ಜಾರಿಗೊಳಿಸಲು ಆಗದು. ಅದನ್ನು ಜಾರಿಗೊಳಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ.

ಭಾರತೀಯರ ಧಾರ್ಮಿಕ ವಿಚಾರದಲ್ಲಿ ಮೂಗು ತೂರಿಸುವ ಅಧಿಕಾರ ಪ್ರಭುತ್ವಕ್ಕೆ ಇಲ್ಲ ಎಂಬುದು ನಿಜ. ಆದರೆ, ದೇಶವಾಸಿಗಳ ಬದುಕಿನ ಜಾತ್ಯತೀತ ಚಟುವಟಿಕೆಗಳ ಬಗ್ಗೆ ಕಾನೂನು ರೂಪಿಸುವ ಅಧಿಕಾರ ಪ್ರಭುತ್ವಕ್ಕೆ ಇರುತ್ತದೆ. ‘ಮದುವೆ, ಉತ್ತರಾಧಿಕಾರದಂತಹ ಜಾತ್ಯತೀತ ಸ್ವರೂಪದ ವಿಷಯಗಳನ್ನು, ಧಾರ್ಮಿಕ ಸ್ವಾತಂತ್ರ್ಯದ ಅಡಿ ತರಲಾಗದು’ ಎಂದು 2003ರಲ್ಲಿ ಜಾನ್‌ ವಳ್ಳಮಟ್ಟಂ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿ.ಎನ್. ಖರೆ ಬರೆದಿದ್ದಾರೆ. ಅಂದರೆ, ಧಾರ್ಮಿಕ ಸ್ವಾತಂತ್ರ್ಯವು ‘ಜಾತ್ಯತೀತ’ ಬೇಡಿಕೆಯಾದ ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಅಡ್ಡಿಯಾಗದು, ಅಲ್ಲವೇ?

ನೆಹರೂ ಹೇಳಿದ್ದರು...
‘1950ರ ದಶಕದಲ್ಲಿ ಜವಾಹರಲಾಲ್‌ ನೆಹರೂ ನೇತೃತ್ವದ ಸರ್ಕಾರ ಹಲವು ಕಾಯ್ದೆಗಳನ್ನು ರೂಪಿಸಿ, ಹಿಂದೂ ವೈಯಕ್ತಿಕ ಕಾನೂನುಗಳಿಗೆ ಏಕರೂಪ ನೀಡಿತು. ಹಿಂದೂ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಸಂದರ್ಭದಲ್ಲಿ ಪ್ರಧಾನಿ ನೆಹರೂ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕಾಲ ಇನ್ನೂ ಪಕ್ವವಾಗಿದೆ ಅನಿಸುತ್ತಿಲ್ಲ ಎಂದಿದ್ದರು’.

‘ಸಂವಿಧಾನದಲ್ಲಿ ಇರುವ 44ನೇ ವಿಧಿ ಸಾಂಕೇತಿಕ ಎನ್ನುವಂತಿದ್ದರೂ, ರಾಷ್ಟ್ರೀಯ ಏಕತೆ ಸಾಧಿಸುವ ನಿಟ್ಟಿನಲ್ಲಿ ಇದು ಬಹುದೊಡ್ಡ ಹೆಜ್ಜೆ ಎಂದು ನೆಹರೂ ಭಾವಿಸಿದ್ದರು. ಆದರೆ, ವೈಯಕ್ತಿಕ ಕಾನೂನುಗಳು ಭಾರತದಲ್ಲಿ ಧರ್ಮದ ಜೊತೆ ಬೆಸೆದುಕೊಂಡಿರುವ ಕಾರಣ, ಆ ಕಾನೂನುಗಳನ್ನು ಸುಲಭದಲ್ಲಿ ತೆಗೆಯಲಾಗದು ಎಂದು ನೆಹರೂ ತಿಳಿದಿದ್ದರು’ ಎಂದು ‘ವಸಾಹತೋತ್ತರ ರಾಜಕೀಯ ಮತ್ತು ವೈಯಕ್ತಿಕ ಕಾನೂನುಗಳು’ ಕೃತಿಯಲ್ಲಿ ರೀನಾ ವಿಲಿಯಮ್ಸ್‌ ಬರೆದಿದ್ದಾರೆ.

*
ಧರ್ಮಾಚರಣೆ ಹಕ್ಕು ನೀಡುವ ಸಂವಿಧಾನದ 25, 26ನೇ ವಿಧಿಗಳಲ್ಲಿ, ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುವ ಅಂಶ ಖಂಡಿತ ಇಲ್ಲ. ಈ ಎರಡು ವಿಧಿಗಳು, ಶಾಸಕಾಂಗವು ಧರ್ಮನಿರಪೇಕ್ಷತೆ ಕಾಯಲು ಧಾರ್ಮಿಕ ಆಚರಣೆಗಳಲ್ಲೂ ಹಸ್ತಕ್ಷೇಪ ಮಾಡಬಹುದೆಂದು ಸಾರಿವೆ.
-ಕೆ.ವಿ.ಧನಂಜಯ್, ಸುಪ್ರೀಂ ಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT