ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವಿಗೆ ತಾತ್ಕಾಲಿಕ ತಡೆ

Last Updated 21 ಅಕ್ಟೋಬರ್ 2016, 19:52 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಸಹಕಾರ ಸಂಘದ ಬಡಾವಣೆಯ 45 ನಿವಾಸಿಗಳು ಕಟ್ಟಡ ತೆರವಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಈ ಸಂಬಂಧ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಅಬ್ದುಲ್ ನಜೀರ್‌ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.
ತೆರವು ನೋಟಿಸ್ ಕುರಿತಂತೆ ತಹಶೀಲ್ದಾರ್ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರ ಮನೆಗಳನ್ನು ವಶಕ್ಕೆ ಪಡೆಯುವುದಾಗಲಿ ಅಥವಾ ತೆರವುಗೊಳಿಸುವುದಾಗಲಿ ಮಾಡುವಂತಿಲ್ಲ ಎಂದು ಆದೇಶ ಮಾಡಿತು.

ನಾಲ್ಕು ವಾರಗಳಲ್ಲಿ ನೋಟಿಸ್ ಕುರಿತು ಹೆಚ್ಚುವರಿ ಆಕ್ಷೇಪಣೆಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಬಹುದು ಎಂದು ತಿಳಿಸಿದ ನ್ಯಾಯಪೀಠ ಅರ್ಜಿಗಳನ್ನು ವಿಲೇವಾರಿ ಮಾಡಿತು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಉದಯ ಹೊಳ್ಳ, ‘ತೆರವಿಗೆ ನೋಟಿಸ್ ನೀಡುವ ಅಧಿಕಾರ ತಹಶೀಲ್ದಾರ್‌ ಅವರಿಗೆ ಇಲ್ಲ’ ಎಂದು ವಾದ ಮಂಡಿಸಿದರು.

ಇದಕ್ಕೆ ಸರ್ಕಾರಿ ವಕೀಲ ಟಿ.ಎಲ್‌. ಕಿರಣ್‌ ಕುಮಾರ್, ‘ಅರ್ಜಿದಾರರು ಸರ್ಕಾರಿ ಜಮೀನು ಒತ್ತುವರಿ ಮಾಡಿರುವುದು ಸಾಬೀತಾದ ಕಾರಣ ತಹಶೀಲ್ದಾರ್ ಒತ್ತುವರಿ ತೆರವಿಗೆ ಸೂಚಿಸಿ ನೋಟಿಸ್ ನೀಡಿರುವ ಕ್ರಮ ಸರಿಯಾಗಿದೆ. ಸದ್ಯ ನೋಟಿಸ್ ಅಷ್ಟೇ ನೀಡಲಾಗಿದ್ದು, ಅದಕ್ಕೆ ಅರ್ಜಿದಾರರು ತಹಶೀಲ್ದಾರ್‌ಗೆ ಆಕ್ಷೇಪಣೆ ಸಲ್ಲಿಸಬಹುದು. ಒಂದು ವೇಳೆ ತಹಶೀಲ್ದಾರ್ ನೀಡುವ ಆದೇಶ ವ್ಯತಿರಿಕ್ತವಾಗಿದ್ದರೆ ಸಕ್ಷಮ ಪ್ರಾಧಿಕಾರದ ಮುಂದೆ ಮೇಲ್ಮನವಿ ಮೂಲಕ ಪ್ರಶ್ನಿಸಬಹುದು’ ಎಂದರು.

ವಾದ ಪ್ರತಿವಾದ ಆಲಿಸಿದ ಪೀಠವು, ‘ನೋಟಿಸ್ ಕುರಿತಂತೆ ತಹಶೀಲ್ದಾರ್ ವಿಚಾರಣೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬಾರದು’ ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT