ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒತ್ತಡ ನೀಗಿಸಲು ಸಮಾಲೋಚಕರ ನೇಮಕ’

ಪೊಲೀಸ್ ಸಂಸ್ಮರಣಾ ದಿನಾಚರಣೆ: ಕರ್ತವ್ಯದ ಸಮಯದಲ್ಲಿ ಪ್ರಾಣ ತೆತ್ತ 473 ಪೊಲೀಸರಿಗೆ ಗೌರವ ನಮನ
Last Updated 21 ಅಕ್ಟೋಬರ್ 2016, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಪೊಲೀಸರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅವರ ಒತ್ತಡ ನಿವಾರಣೆಗಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಸಮಾಲೋಚಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಶುಕ್ರವಾರ ನಡೆದ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ ಎಂದು ನ್ಯಾಯಾಲಯವೇ ಹೇಳಿದೆ. ಆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕುಟುಂಬದ ಬಗ್ಗೆ ಯೋಚನೆ ಮಾಡಬೇಕು. ಆತ್ಮಸ್ಥೈರ್ಯದಿಂದ ಕೆಲಸ ಮಾಡಬೇಕಾದ ಪೊಲೀಸರೇ, ಇಂಥ ದಾರಿ ತುಳಿದರೆ ಹೇಗೆ?’

‘ರೈತರು, ಪೊಲೀಸರು ಸೇರಿದಂತೆ ಯಾರೇ ಆಗಲಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಇದು ನನ್ನ ಕಳಕಳಿ. ಒತ್ತಡದಲ್ಲಿರುವ ಸಿಬ್ಬಂದಿಗೆ ಕೌನ್ಸೆಲಿಂಗ್ ಮಾಡಿಸಬೇಕು ಎಂದು ಡಿಜಿಪಿ ಓಂಪ್ರಕಾಶ್ ಮನವಿ ಮಾಡಿದ್ದಾರೆ. ಅವರ ಕೋರಿಕೆಯಂತೆಯೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಮಾಲೋಚಕರನ್ನು ನೇಮಿಸಲಾಗುವುದು’ ಎಂದು ಹೇಳಿದರು.

ರಾಜ್ಯದಲ್ಲಿ 22 ಹುತಾತ್ಮರು: ‘ಪ್ರತಿ ವರ್ಷ ಅಕ್ಟೋಬರ್ 21ರಂದು ಹುತಾತ್ಮ ಪೊಲೀಸರನ್ನು ಸ್ಮರಿಸುತ್ತೇವೆ. ಕಳೆದ ವರ್ಷ ದೇಶದಲ್ಲಿ 473 ಪೊಲೀಸರು ಕರ್ತವ್ಯದ ಸಮಯದಲ್ಲೇ ಪ್ರಾಣ ತೆತ್ತಿದ್ದಾರೆ. ರಾಜ್ಯದಲ್ಲಿ 22 ಸಿಬ್ಬಂದಿ ಜೀವ ಬಿಟ್ಟಿದ್ದಾರೆ. ಈ ಎಲ್ಲ ಹುತಾತ್ಮರಿಗೂ ನಾಡಿನ ಜನತೆ ಪರವಾಗಿ ಗೌರವ ವಂದನೆ ಸಲ್ಲಿಸುತ್ತೇನೆ.’

‘ಪೊಲೀಸರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಿಬಿಎಸ್‌ಸಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಸಿಬ್ಬಂದಿಯ  ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಾರ್ಯನಿಮಿತ್ತ ಬೆಂಗಳೂರಿಗೆ ಬರುವ ಸಿಬ್ಬಂದಿಗೆ ₹ 15 ಕೋಟಿ ವೆಚ್ಚದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಪ್ರತಿ ಯೂನಿಟ್‌ನಲ್ಲಿ ಪೊಲೀಸ್ ಕ್ಯಾಂಟಿನ್ ತೆರೆಯಲಾಗುತ್ತಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್, ಅವರ ಸಲಹೆಗಾರ ಕೆಂಪಯ್ಯ, ಡಿಜಿಪಿ ಓಂಪ್ರಕಾಶ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಇದ್ದರು.

‘ವೇತನ ಪರಿಷ್ಕರಣೆ ಭಿನ್ನಾಭಿಪ್ರಾಯ ಇಲ್ಲ’
‘ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಎಡಿಜಿಪಿ ರಾಘವೇಂದ್ರ ಔರಾದಕರ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ. ಅದನ್ನು ಜಾರಿಗೊಳಿಸುವ ವಿಚಾರವಾಗಿ ನನ್ನ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ನಡುವೆ  ಮನಸ್ತಾಪ ಉಂಟಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ನಮ್ಮ ನಡುವೆ ಅಂಥ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘ಕೆಳಹಂತದ ಸಿಬ್ಬಂದಿ ಬಗ್ಗೆ ಸಹಾನಭೂತಿ ಇದೆ. ಅವರ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಬಗೆಹರಿಸುತ್ತೇನೆ. ವೇತನ ಪರಿಷ್ಕರಣೆ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಪ್ರಸ್ತಾವ ಸಲ್ಲಿಸುವಂತೆ ಹಣಕಾಸು ಇಲಾಖೆಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT