ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿನ ಸೇತುವೆ: ರಾಜ್ಯಪಾಲರಿಗೆ ಮನವಿ ಪತ್ರ

Last Updated 21 ಅಕ್ಟೋಬರ್ 2016, 20:11 IST
ಅಕ್ಷರ ಗಾತ್ರ

ಬೆಂಗಳೂರು: ಉಕ್ಕಿನ ಸೇತುವೆ ಕಾಮಗಾರಿ ಟೆಂಡರ್‌ ರದ್ದುಪಡಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಲು ಮುಂದಾದ ‘ಬೆಂಗಳೂರು ನಾಗರಿಕರ ವೇದಿಕೆ’ ಸದಸ್ಯರಿಗೆ ಶಿಷ್ಟಾಚಾರಗಳ ಕಾರಣದಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರ ಭೇಟಿ ಸಾಧ್ಯವಾಗಲಿಲ್ಲ. ಆದರೆ, ಮನವಿ ಪತ್ರವನ್ನು ರಾಜ
ಭವನದ ಅಧಿಕಾರಿಗಳು ಸ್ವೀಕರಿಸಿದರು.

ರಾಜ್ಯಪಾಲರ ಭೇಟಿಗೆ ಕಾಲಾವಕಾಶ ನೀಡುವಂತೆ ಸದಸ್ಯರು ಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್‌ ಬೆಳವಾಡಿ, ‘ಮನವಿ ಪತ್ರ
ವನ್ನು ರಾಜಭವನದ ಅಧಿಕಾರಿಗಳು ಸ್ವೀಕರಿಸಿದ್ದಾರೆ. ಒಂದೆರಡು ದಿನಗಳಲ್ಲಿ ರಾಜ್ಯಪಾಲರ ಭೇಟಿಗೆ ಅವಕಾಶ ದೊರೆಯಲಿದೆ’ ಎಂದು ಹೇಳಿದರು.

‘ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ, ಯೋಜನೆಯ ಸಮಗ್ರ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸುವ ರೆಂಬ ವಿಶ್ವಾಸವಿದೆ. ಸರ್ಕಾರವು ಯೋಜನೆಯ ಮಾಹಿತಿಯನ್ನು ಜನರಿಗೆ ನೀಡಲು ನಿರಾಕರಿಸಿದಂತೆ, ರಾಜ್ಯಪಾಲರಿಗೆ ನಿರಾಕರಿಸಲು ಸಾಧ್ಯವಿಲ್ಲ’ ಎಂದರು.

‘ಉಕ್ಕಿನ ಸೇತುವೆ ವಿರೋಧಿಸಿ ಮಾನವ ಸರಪಳಿ ರಚಿಸುವುದು ಸೇರಿ ದಂತೆ, ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಅಭಿಯಾನ ಹಮ್ಮಿಕೊಂಡಿದ್ದೆವು. ಯೋಜನೆ ಬಗೆಗೆ ಎಲ್ಲ ಮೂಲಗಳಿಂದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮನವಿ ಪತ್ರ ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದರು.

‘ಎನ್ವಿರಾನ್ಮೆಂಟ್‌ ಸಪೋರ್ಟ್‌ ಗ್ರೂಪ್‌ನ ಲಿಯೋ ಎಫ್. ಸಲ್ಡಾನಾ  ಸೇರಿದಂತೆ ಹಲವು ಸದಸ್ಯರು,  ನ್ಯಾಯಾಲಯಗಳ ತೀರ್ಪು, ಆದೇಶಗಳ ಮಾಹಿತಿ
ಯನ್ನು ಒದಗಿಸಿಕೊಟ್ಟಿದ್ದಾರೆ. ಈ ಅಂಶಗಳನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ಯೋಜನೆ ಬಗ್ಗೆ ನಮಗಿರುವ ಆತಂಕ
ವಿವರಿಸಿದ್ದೇವೆ’ ಎಂದರು.

ಮನವಿ ಪತ್ರದಲ್ಲಿ ಏನಿದೆ?: ಒಟ್ಟು ಆರು ಪುಟಗಳ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಯೋಜನೆಯಲ್ಲಿ ಪಾರದರ್ಶಕತೆ ಇಲ್ಲದಿರು ವುದು, 812 ಮರಗಳ ಹನನ, ₹1,791 ಕೋಟಿ ಮೊತ್ತದ ಬೃಹತ್‌ ಯೋಜನೆ, ಈ ವಿಷಯದಲ್ಲಿ ಸರ್ಕಾರದ ವರ್ತನೆ, ಸಾರ್ವಜನಿಕರ ಅಭಿಪ್ರಾಯ ಆಲಿಸದಿರುವುದು ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

‘ಉಕ್ಕಿನ ಸೇತುವೆ ನಿರ್ಮಾಣವು ಹೈಕೋರ್ಟ್‌ ಆದೇಶ ಹಾಗೂ ಕರ್ನಾಟಕ ನಗರ ಮತ್ತು ಗ್ರಾಮ ಯೋಜನೆ ಕಾಯ್ದೆಯ ಉಲ್ಲಂಘನೆ ಆಗುತ್ತದೆ’ ಎಂಬ ಅಂಶವನ್ನು ಹೇಳಲಾಗಿದೆ.

‘ಉಕ್ಕಿನ ಸೇತುವೆಯನ್ನು ವಿರೋ ಧಿಸಿ ಆನ್‌ಲೈನ್‌ನಲ್ಲಿ ಆರಂಭಿ ಸಿರುವ ಅಭಿಯಾನಕ್ಕೆ 35 ಸಾವಿರ ಮಂದಿ ಸಹಿ ಹಾಕಿದ್ದಾರೆ. ಜಟ್್ಕಾ (Jhatkaa) ಸಂಸ್ಥೆ ಆರಂಭಿಸಿದ್ದ ಮಿಸ್ಡ್‌ ಕಾಲ್‌ ಅಭಿಯಾನ ವನ್ನು ಒಂದು ಲಕ್ಷ ಬೆಂಬಲಿಸಿದ್ದಾರೆ.’

‘ನಮ್ಮ ಬೆಂಗಳೂರು ಫೌಂಡೇಷನ್‌ ಉಕ್ಕಿನ ಸೇತುವೆ ಯೋಜನೆ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸಿದೆ. ಉಕ್ಕಿನ ಸೇತುವೆ ಬೇಡ ಎಂದು ಸಾವಿರಾರು ಮಂದಿ ಮತ ಪತ್ರಗಳ ಮೇಲೆ ಸಹಿ ಮಾಡಿದ್ದಾರೆ. ಭಾನುವಾರ ಮತ ಪತ್ರಗಳ ಎಣಿಕೆ ನಡೆಯಲಿದೆ’ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ನಾಳೆ ಸಮಾಲೋಚನಾ ಸಭೆ
ನಗರದ ಲ್ಯಾವೆಲ್ಲೆ ರಸ್ತೆಯ ರೋಟರಿ ಹೌಸ್‌ನಲ್ಲಿ ಭಾನುವಾರ (ಅ.23) ಸಂಜೆ 4 ಗಂಟೆಗೆ ಉಕ್ಕಿನ ಸೇತುವೆ ವಿಸ್ತೃತ ಯೋಜನಾ ವರದಿಯ ಬಗ್ಗೆ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಬಿಡಿಎ ಆಯುಕ್ತ ರಾಜ್‌ಕುಮಾರ್‌ ಖತ್ರಿ ಅವರಿಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ.

ಉಕ್ಕಿನ ಸೇತುವೆ ಯೋಜನೆ ಕುರಿತ ಜನಾಭಿಪ್ರಾಯವನ್ನು ವಿವರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ವೇದಿಕೆಯ ಸದಸ್ಯರು ಒಂದು ವಾರದಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಕಚೇರಿಯು ಭೇಟಿಗೆ ಅವಕಾಶ ನೀಡುತ್ತಿಲ್ಲ.

ಅಧ್ಯಯನ ವರದಿಯಲ್ಲಿ ಉಕ್ಕಿನ ಸೇತುವೆ ಪ್ರಸ್ತಾಪವಿಲ್ಲ
‘ರಾಯಲ್‌ ಹಾಸ್ಕೊ ನಿಂಗ್‌ ಡಿಎಚ್‌ವಿ ಹಾಗೂ ಅಡಾಪ್ಟ್‌ ಟೆಕ್ನಾಲಜೀಸ್ ಸಂಸ್ಥೆಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿರುವ ನಗರ ಸಂಚಾರ ಸಮಸ್ಯೆಗಳ ಪರಿಹಾರ ವರದಿಯಲ್ಲಿ ಉಕ್ಕಿನ ಸೇತುವೆಯನ್ನು ನಮೂದಿಸಿಲ್ಲ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ  ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರ ಸಾರಿಗೆಯ ಶೇ 70ರಷ್ಟು  ಪಾಲು ಹೊಂದುವಂತೆ ಸಮೂಹ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು. ಉಪನಗರ ರೈಲು  ಯೋಜನೆ ಹಾಗೂ ಮೆಟ್ರೊ ರೈಲು ಸಾರಿಗೆಯಲ್ಲಿ ಹೆಚ್ಚಿನ ಬಂಡವಾಳ ಹೂಡುವ ಮೂಲಕ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ’ ಎಂದರು.

‘ಕರ್ನಾಟಕ ಮುನ್ಸಿಪಲ್‌  ಕಾರ್ಪೊರೇಷನ್ ಕಾಯ್ದೆ ಪ್ರಕಾರ, ಪಾಲಿಕೆಗಳ ವ್ಯಾಪ್ತಿಯಲ್ಲಿ ಯಾವುದೇ ಟೋಲ್‌ ಸಂಗ್ರಹಿಸುವಂತಿಲ್ಲ. ಆದರೆ, ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ ಈ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ’ ಎಂದು ದೂರಿದರು.

ಮೂಲ ಯೋಜನೆಗೆ ಅನುಮೋದನೆ
 ‘ಉಕ್ಕಿನ ಸೇತುವೆಯ ಮೂಲ ಯೋಜನೆಗೆ (ಬಸವೇಶ್ವರ ವೃತ್ತದಿಂದ ಹೆಬ್ಬಾಳ ಫ್ಲೈಓವರ್‌ವರೆಗೆ) ಮಾತ್ರ ಬಿಡಿಎ ಆಡಳಿತ ಮಂಡಳಿ ಸಭೆ ಅನುಮೋದನೆ ನೀಡಿದೆ’ ಎಂದು ಬಿಡಿಎ ಅಧ್ಯಕ್ಷ ಮಹೇಂದ್ರ ಜೈನ್‌ ಹೇಳಿದರು.

‘ಉಕ್ಕಿನ ಸೇತುವೆ ಮಾರ್ಗ ವಿಸ್ತರಿಸಬೇಕಾದರೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು.  ಈ ಮಾರ್ಗದ ಯೋಜನಾ ವೆಚ್ಚ, ಪೂರಕ ಅಂದಾಜು
ಗಳ ಮಾಹಿತಿ ಸಲ್ಲಿಸಬೇಕು’ ಎಂದರು.

ಮಾಹಿತಿ ಇಲ್ಲ: ‘ಉಕ್ಕಿನ ಸೇತುವೆ ವಿಸ್ತರಣೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಯೋಜನೆಯ ಕಾರ್ಯದ ಆದೇಶ ತಲುಪಿದ ಬಳಿಕವಷ್ಟೇ ಈ ಬಗ್ಗೆ ಪ್ರತಿಕ್ರಿಯೆ ನೀಡಬಹುದು’ ಎಂದು ಎಲ್‌ ಅಂಡ್‌ ಟಿ ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಎಸ್ಟೀಮ್‌ ಮಾಲ್‌ವರೆಗೆ ಉಕ್ಕಿನ ಸೇತುವೆ ವಿಸ್ತರಣೆ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್‌ ಅನುಮತಿ ನೀಡಿದ್ದಾರೆ’ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ನೀವೂ ಬರೆಯಿರಿ
ಬಹುಕೋಟಿ ವೆಚ್ಚದ ಉಕ್ಕಿನ ಸೇತುವೆಯಿಂದ ಬಾಲಬ್ರೂಯಿ, ಕಾರ್ಲ್‌ಟನ್‌ ಹೌಸ್‌, ಬೆಂಗಳೂರು ಗಾಲ್ಫ್‌ ಕ್ಲಬ್‌, ನೆಹರೂ ತಾರಾಲಯ ಜಾಗ ಕಳೆದು ಕೊಳ್ಳಲಿದೆ. ಈ ಬಗ್ಗೆ ಓದುಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಯೋಜನೆ ಬೇಕೆ, ಬೇಡವೆ? ಪರ್ಯಾಯವೇನು ಎನ್ನುವ ಬಗ್ಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. bangalore@prajavani. co.in, whatsap number-95133 22930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT