ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಕೂಪನ್‌ ವ್ಯವಸ್ಥೆಗೆ ಗ್ರಾಹಕರ ಅಪಸ್ವರ

ಹಲವು ಲೋಪ ದೋಷಗಳನ್ನು ಎತ್ತಿ ತೋರಿಸಿದ ಜನ– ಮನ ಕಾರ್ಯಕ್ರಮ
Last Updated 22 ಅಕ್ಟೋಬರ್ 2016, 6:40 IST
ಅಕ್ಷರ ಗಾತ್ರ
ಉಡುಪಿ: ರಾಜ್ಯ ಸರ್ಕಾರದ ಯೋಜನೆ ಗಳು ಅಚ್ಚು– ಮೆಚ್ಚು. ಆದರೆ ಇನ್ನೂ ಬೇಕು ಹೆಚ್ಚು... ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಫಲಾನುಭ ವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇರ ಸಂವಾದ ಕಾರ್ಯಕ್ರಮ ‘ಜನ–ಮನ’ದಲ್ಲಿ ವ್ಯಕ್ತವಾದ ಅಭಿಪ್ರಾ ಯವಿದು. ಅಲ್ಲದೆ ಯೋಜನೆಗಳಲ್ಲಿನ ಲೋಪಗಳನ್ನು ಸಹ ಕೆಲವರು ಎತ್ತಿ ತೋರಿಸಿ ಗಮನ ಸೆಳೆದರು.
 
ಸರ್ಕಾರದ ಪ್ರಮುಖ ಯೋಜನೆ ಗಳಲ್ಲಿ ಒಂದಾದ ಅನ್ನ ಭಾಗ್ಯಕ್ಕೆ ಫಲಾನು ಭವಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಅವರು ನಡೆಸಿದ ಜನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಪಿಎಲ್‌ ಕಾರ್ಡ್‌ ಅನ್ನು ಅಂತ್ಯೋದಯ ಕಾರ್ಡ್‌ ಆಗಿ ಪರಿವರ್ತಿಸಿಕೊಂಡ ಲಲಿತಾ ಪ್ರಭು ಅವರು ಮಾತನಾಡಿ, ಈಗ ಪ್ರತಿ ತಿಂಗಳು ಆಹಾರ ಧಾನ್ಯ ಸಿಗುತ್ತಿದೆ. ಮನೆ ಕೆಲಸ ಮಾಡಿ ಜೀವನ ಸಾಗಿಸುವ ನನಗೆ ಇದರಿಂದ ಅನುಕೂಲವಾಗುತ್ತಿದೆ ಎಂದರು. ಕೆಲ ದಿನಗಳ ಹಿಂದೆ ಪರಿಚಯಿಸಿರುವ ಕೂಪನ್‌ ವ್ಯವಸ್ಥೆಯ ಬಗ್ಗೆ ಅಪಸ್ವರ  ಕೇಳಿ ಬರುತ್ತಿದೆ. ಆದರೆ ಕೂಪನ್‌ ವ್ಯವಸ್ಥೆ ಚೆನ್ನಾಗಿದೆ ಎಂದು ಹಲವರು ಅಭಿಪ್ರಾಯಪಟ್ಟರು.
 
ಯುವ ಕೃಷಿಕ ವಿಜಯ್ ಗಂಗೊಳ್ಳಿ ಅವರು ಕೃಷಿ ಭಾಗ್ಯದ ಲಾಭ ಪಡೆದು ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇನೆ. ಆದರೆ ಬೆಲೆ ಮಾತ್ರ ಸರಿಯಾಗಿ ಸಿಗುತ್ತಿಲ್ಲ. ನ್ಯಾಯಯುತ ಬೆಲೆ ಸಿಗುವಂತೆ ಮಾಡಿದರೆ ರೈತರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು. ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆ ಚೆನ್ನಾಗಿದೆ. ಆದರೆ, ಅದನ್ನು ವಾರದ ಎಲ್ಲ ದಿನಗಳೂ ನೀಡಬೇಕು ಎಂದು ಹಲವು ವಿದ್ಯಾರ್ಥಿಗಳು ಬೇಡಿಕೆ ಮುಂದಿಟ್ಟರು. ಮೂರು ದಿನ ಹಾಲು ಸಿಗುತ್ತದೆ ಆದರೆ ಉಳಿದ ಮೂರು ದಿನ ಹಸಿವಿನಿಂದ ಪಾಠ ಕೇಳಬೇಕಾಗುತ್ತದೆ ಎಂದು ಪಡುಬಿದ್ರಿಯ ಸರ್ಕಾರಿ ಶಾಲೆಯ ಭಾಗ್ಯಶ್ರೀ ಹೇಳಿದರು.
 
ವೃದ್ಧಾಪ್ಯ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ ಯೋಜನೆಯಲ್ಲಿ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ಅದನ್ನು ಹೆಚ್ಚು ಮಾಡಿ ಎಂದು ಹಲವರು ಮನವಿ ಮಾಡಿದರು. ಕೃಷಿ ಭಾಗ್ಯ ಯೋಜನೆಯಲ್ಲಿ ರೈತರಿಗೆ ಬೇಕಾದ ಸಲಕರಣೆಗಳು ಸಿಗುತ್ತಿಲ್ಲ ಎಂದು ಸಹ ಕೆಲವರು ಪ್ರಶ್ನಿಸಿದರು.
ಬ್ರಹ್ಮಾವರ ವಲಯದಲ್ಲಿ ಶೂ ಬದಲು ಚಪ್ಪಲಿ ನೀಡಿರುವುದಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಚಪ್ಪಲಿ ಬದಲು ಶೂ ನೀಡಿ ಎಂದು  ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
 
*
ಹೆಣ್ಣು ಕರು ಹುಟ್ಟುತ್ತಿಲ್ಲ!
ನಾನು ಸಹ ಮನೆಯಲ್ಲಿ ದನ– ಕರುಗಳನ್ನು ಸಾಕಿದ್ದೇನೆ. ಪ್ರತಿ ದಿನ ಅವುಗಳಿಗೆ ನವ ಧಾನ್ಯ ನೀಡಿದ ನಂತರವೇ ನಾನು ತಿಂಡಿ ತಿನ್ನುವುದು. ಆದರೆ, ಇತ್ತೀಚೆಗೆ ಹೆಣ್ಣು ಕರು ಹುಟ್ಟಿಲ್ಲ. ಆರು ಗಂಡು ಕರು ಹುಟ್ಟಿವೆ. ಇದಕ್ಕೆ ಏನಾದರೂ ಉಪಾಯ ಕಂಡುಕೊಳ್ಳಬೇಕು. ಬಂಜೆ ಹಾಗೂ ಗಂಡು ಕರುಗಳನ್ನು ಸಾಕುವುದು ವೆಚ್ಚದಾಯಕ ವಾಗಿದ್ದು ಸಾಮಾನ್ಯರಿಗೆ ಕಷ್ಟವಾಗುತ್ತದೆ. ಆದರೆ ನನಗೆ ಸಾಕಲು ಶಕ್ತಿ ಇದೆ ಎಂದು ಸಚಿವ ಪ್ರಮೋದ್ ಹೇಳಿದರು.
 
*
ಯಾರಿಗೆ ವೋಟ್?
ಪೂರ್ಣ ಪ್ರಜ್ಞ ನಿರ್ವಹಣಾ ಸಂಸ್ಥೆಯ ಸುದೀಪ್ ಅವರು ವಿದ್ಯಾಸಿರಿ ಯೋಜನೆ ಚೆನ್ನಾಗಿದೆ ಎಂದರು. ಆಗ ಮಧ್ಯ ಪ್ರವೇಶಿಸಿದ ಪ್ರಮೋದ್ ಮಧ್ವರಾಜ್ ಅವರು, ವೋಟ್‌ ಹಾಕ್ತೀರ, ಯಾರಿಗೆ ವೋಟ್ ಹಾಕ್ತೀರ ಎಂದು ಪ್ರಶ್ನಿಸಿದರು. ಯೋಜನೆಗಳು ಚೆನ್ನಾಗಿವೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಲೆಕ್ಕ ಮಾಡಿದಾಗ ಮಾತ್ರ (ಕಾಂಗ್ರೆಸ್ ಬೆಂಬಲಿಸುತ್ತಿಲ್ಲ ಎಂಬ ಅರ್ಥದಲ್ಲಿ) ಕಡಿಮೆ ಇರುತ್ತದೆ ಎಂದರು. ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹಲವು ಬಾರಿ ಒತ್ತಿ ಹೇಳಿದರು.
 
*
ಪ್ರೋತ್ಸಾಹ ಧನ– 5 ದಿನದಲ್ಲಿ ಖಾತೆಗೆ
ಸರ್ಕಾರ ಪ್ರತಿ ಲೀಟರ್ ಹಾಲಿಗೆ ನೀಡಬೇಕಾದ ₹4 ಪ್ರೋತ್ಸಾಹ ಧನ ಐದು ತಿಂಗಳಾದರೂ ಬಂದಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆಯ ಕಾರ್ಯದರ್ಶಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು, ಖಜಾನೆಗಳಿಗೆ ಹಣ ಬಿಡುಗಡೆಯಾಗಿದ್ದು ಇನ್ನು 5 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಕಾರ್ಯಕ್ರಮದಲ್ಲಿಯೇ ಘೋಷಿಸಿದರು.
 
**
ಹಾಲು, ಶೂ, ಸಮವಸ್ತ್ರ ಸಿಗುತ್ತಿದೆ. ಆದರೆ, ನಮಗೆ ಅಗತ್ಯವಾಗಿ ಬೇಕಾಗಿ ರುವುದು ಕಂಪ್ಯೂಟರ್ ಶಿಕ್ಷಣ. ಇದನ್ನು ಜಾರಿಗೊಳಿಸಿದರೆ ಖಾಸಗಿ ಶಾಲೆಯ ಮಕ್ಕಳಂತೆ ನಾವು ಕಂಪ್ಯೂಟರ್ ಕಲಿಯಲು ಅನುಕೂಲವಾಗಲಿದೆ. 
-ಕಾವ್ಯಾ,  ಸರ್ಕಾರಿ ಶಾಲೆ, ಬೈಲೂರು 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT