ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ, ಕಿಸ್ ದ ವರ್ಲ್ಡ್!

ಕಥೆ
Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

-ಡಾ. ಲೋಕೇಶ ಅಗಸನಕಟ್ಟೆ

ಕೊನೆಗೂ ರಿಯಾದ್‌ಗೆ ಮಗನನ್ನು ಕಳಿಸಲು ಒಪ್ಪಿದ ಹೆಂಡತಿಯೊಂದಿಗೆ ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ನಿಂತು ಆಚಾರ್ಯರು ವಿಮಾನ ಮೇಲೇರುವ ಕ್ಷಣವನ್ನು ಎದುರು ನೋಡುತ್ತಿದ್ದರು. ಚೆಕ್‌ಇನ್‌ಗೆ ಎರಡು ಗಂಟೆಯ ಮುಂಚೆಯೇ ಒಳಹೋದ ಮಗ ಕೊನೆಯ ಕ್ಷಣದಲ್ಲಿ ಮೂರ್ನಾಲ್ಕು ಫೋಟೊಗಳನ್ನು ತನ್ನ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡಿದ್ದ.

ಅದರಲ್ಲಿ ಅಮ್ಮನನ್ನು ತಬ್ಬಿಕೊಂಡು ತೆಗೆಸಿದ ಪೋಟೋಗಳೇ ಹೆಚ್ಚು. ಅಪ್ಪನೆಂದರೆ ಕೊಂಚ ಭಯ–ಗೌರವ. ಅಮ್ಮನೊಟ್ಟಿಗೆ ಸಲಿಗೆ, ಜಗಳ, ಎಲ್ಲವೂ.ಅವಳಾದರೋ ಅವನನ್ನು ಮತ್ತೆ ನೋಡುತ್ತೇನೋ ಇಲ್ಲವೋ ಎಂಬ ಭಯದ ಭಾವದಲ್ಲೇ ಕಣ್ಣನ್ನು ತುಂಬಿಕೊಳ್ಳುತ್ತಿದ್ದಳು. ಅವನನ್ನು ಮುಟ್ಟಿ ಮುಟ್ಟಿ ಮಾತಾಡಿಸುತ್ತಲೇ ಕಳಿಸಿದ್ದಳು. ‘ವಿಮಾನ ಹೊರಡುವವರೆಗಾದರೂ ನನ್ನ ಬಳಿ ಇರು’ ಎಂಬುದು ಅವಳ ಒತ್ತಾಯ.

ಹಾಗೆ ಮಾಡಲು ಸಾಧ್ಯವೇ? ಆಚಾರ್ಯರೇ ಅವಳಿಗೆ ಚೆಕ್‌ಇನ್, ಔಟ್, ವೀಸಾ – ಎಲ್ಲ ಔಪಚಾರಿಕ ತಪಾಸಣೆ ಕುರಿತು ವಿವರಿಸಿ ಸಮಾಧಾನಿಸಿದ್ದರು. ಮೊದಲಹಾಗೆ ಪಾಸ್ ಪಡೆದು ನಿಲ್ದಾಣದ ಮಹಡಿ ಮೇಲೇರಿ ಜಾಲರಿ ಮುಖೇನ ಮಗ ವಿಮಾನವೇರಿ ಮರೆಯಾಗುವುದನ್ನಾದರೂ ನೋಡಬಹುದಿತ್ತು. ಭದ್ರತೆಯ ನೆಪದಲ್ಲಿ ಎಲ್ಲವನ್ನು ಬಿಗಿಗೊಳಿಸಿರುವುದರ ಬಗೆಗೆ ಆಚಾರ್ಯರು ಕೊಂಚ ಕಸಿವಿಸಿಗೊಂಡರು. ಹೆಂಡತಿಯ ಮುಖದಲ್ಲಿ ಮನೆ ಮಾಡಿ ನಿಂತ ಸ್ಮಶಾನಮೌನ ಅವರನ್ನು ಮತ್ತಷ್ಟು ಗಲಿಬಿಲಿಗೊಳಿಸಿತು.

ಇರುವ ಒಬ್ಬನೇ ಮಗನನ್ನು ದುಡಿಯಲು ‘ಸಾಬರ ದೇಶಕ್ಕೆ’ ಕಳಿಸಲು ಅವಳು ಮೊದಲಿಗೆ ಸುತಾರಾಂ ಒಪ್ಪಿರಲಿಲ್ಲ. ಇಲ್ಲೇ ಅವನು ಕಣ್ಣು ಮುಂದೆ ಓಡಾಡಿಕೊಂಡಿರಲೆಂಬುದು ಅವಳ ವರಾತ. ಅವಳಿಗೆ ಅವನು ಇನ್ನೂ ಸಣ್ಣವನೆ. ಅವನಾದರೋ ಅಂತವನೆ? ಕ್ಷಣದೊಳಗೆ ಜಗತ್ತೆಲ್ಲವನ್ನು ಲ್ಯಾಪ್‌ಟಾಪ್‌ನ ಜಾಲರಿಯ ಮೇಲೆ ಜಾಲಾಡಿ, ಅಲ್ಲಿಗೆ ಹೋಗಬೇಕು – ಇಲ್ಲಿಗೆ ಹೋಗಬೇಕೆಂದು ಹಂಬಲಿಸುವವನು.

ಅವನಿಗೆ ಅಮೇರಿಕವೇ ಗಮ್ಯ. ತನ್ನ ಬದುಕಿನ ಸಾರ್ಥಕತೆ ಇರುವುದು ಅಲ್ಲಿಯೇ ಎಂದು ನಂಬಿದವನು. ಇಲ್ಲೇ ಅಪ್ಪನ ಪೆನ್‌ಷನ್‌ಗೆ ಕೈ ಒಡ್ಡುತ್ತಾ ಕೂರಲಾರದ ಸ್ವಾಭಿಮಾನಿ. ಉಣ್ಣುವಾಗ, ಉಡುವಾಗ, ಬೈಕ್ ಏರುವಾಗ, ಮೊಬೈಲ್‌ಗೆ ಕರೆನ್ಸಿ ಹಾಕಿಸುವಾಗ ಸಂಕೋಚದಿಂದ ಮುದುಡುತ್ತಿದ್ದವನನ್ನು ಆಚಾರ್ಯರು ಸೂಕ್ಷ್ಮವಾಗಿಯೇ ಗಮನಿಸಿದ್ದಾರೆ ಮತ್ತೂ ಅವನಿಗೆ ಹೇಳಿಯೂ ಹೇಳಿದ್ದಾರೆ. ಅವನ ಕಣ್ಣಿನ ಸಮಾ ಅಳತೆಯಲ್ಲಿ ನೂರರ ಅನೇಕ ನೋಟುಗಳನ್ನು ಹರವಿದ್ದಾರೆ.

‘ಇದೆಲ್ಲಾ ನಿನ್ನದೇ ಅಲ್ಲವೇ? ಎಂದೂ ನೋಡಿದ್ದಾರೆ. ಅಷ್ಟಾದರೂ ಅವನೊಳಗೆ ಕರುಳಿಗೆ ಕತ್ತರಿಯಾಡುತ್ತಿದ್ದುದನ್ನು ಆಚಾರ್ಯರು ಅವನ ಕಣ್ಣಲ್ಲೇ ಗಮನಿಸಿದ್ದಾರೆ.ತನ್ನ ಸರೀಕರೆಲ್ಲಾ ಆರಂಕಿ ಸಂಬಳ ಪಡೆಯುತ್ತಿದ್ದರೂ ನಾನು ಇನ್ನೂ ಹೀಗೇ ಇದ್ದೇನಲ್ಲಾ ಎಂಬುದು ಅವನೊಳಗಿನ ಕೊರಗಾದರೂ ‘ಅವರ ಜಗತ್ತೇ ಬೇರೆ ತನ್ನದೇ ಬೇರೆ’ ಎಂಬ ಸಣ್ಣ ಸಮಾಧಾನವಾದರೂ ಅವನಲ್ಲಿದೆಯಲ್ಲಾ, ನಾನು ಬದುಕಿದೆ ಎಂದು ಅಂದುಕೊಳ್ಳುತ್ತಾರೆ ಆಚಾರ್ಯರು.

‘ಇದಕ್ಕೆಲ್ಲಾ ನೀವೇ ಕಾರಣ’ ಎಂದು ಅವಳು ಅಂದಾಗ, ಆಚಾರ್ಯರಾಗಲಿ, ಮಗನಾಗಲೀ ಸುತಾರಾಂ ಒಪ್ಪಿರಲಿಲ್ಲ. ‘ಬಿಈನೋ... ಎಂಬಿಬಿಎಸ್ಸೋ ಮಾಡಿಸೋದು ಬಿಟ್ಟು ಇದ್ಯಾವುದೋ ಸುಡುಗಾಡು ಓದಿರೋದ್ಕೆ ನೀನು ಹೀಗಾದೆ’ ಎಂಬುದು ಅವಳ ರಾಗ. ಅದೂ ಸಾಲದೆಂಬಂತೆ ‘ನಿಮ್ಮ ಅಣ್ಣನ ಮಕ್ಕಳನ್ನು ನೋಡಿ... ನನ್ನ ಕ್ಲಾಸ್‌ಮೇಟ್ ಮಗ್ಳನ್ನ ನೋಡ್ರಿ...’ ಎಂದು ಹೋಲಿಕೆ ಮಾಡಿ ಒರಾಕಲ್, ಮೈಂಟ್ರಿ, ಇನ್ಫಿಗಳ ಜಪಮಾಡಿಬಿಡುತ್ತಾಳೆ. ‘ನೀವು ಅವನಿಗೆ ಸರಿಯಾದುದನ್ನು ಓದಿಸಲಿಲ್ಲ, ಅವನೂ ಬೇಕಾದುದನ್ನು ಓದಲಿಲ್ಲ’ ಎಂಬುದು ಅವಳ ಆಕ್ಷೇಪ. ಅದಕ್ಕೆ ಮಗನಾಗಲೀ ಆಚಾರ್ಯರಾಗಲಿ ಮೌನವಾಗಿರುತ್ತಿದ್ದರೇ ವಿನಾ ಪ್ರತಿ ಆಡುತ್ತಿರಲಿಲ್ಲ.

ಅದರರ್ಥ ಅವರು ಅವಳ ಮಾತನ್ನು ಒಪ್ಪಿದರೆಂದಲ್ಲ. ಲೋಕಪ್ರೇರಿತ ದೃಷ್ಟಿಯಾಚೆಗೆ ಅವಳು ಜಿಗಿಯಲಾರಳು ಎಂಬ ಕಾರಣದಿಂದ. ಅದೇನೋ ಲೋಕದ ನಡಾವಳಿಯನ್ನು ಕುರುಡಾಗಿ ಅನುಸರಿಸುವುದು ಆಚಾರ್ಯರಿಗೆ ಮೊದಲಿನಿಂದಲೂ ಒಗ್ಗಿ ಬಂದಿಲ್ಲ. ನೀವು ಅವರ ಮನೆಗೆ ಬಂದಿರೆಂದರೆ ಹಾಲ್‌ನಲ್ಲಿ ಬುದ್ಧನ ಪ್ರತಿಮೆಯೊಂದಿಗೆ ತಾವು, ಹೆಂಡತಿ ಮತ್ತು ಮಗ ತೆಗೆಸಿಕೊಂಡ ಪೋಟೋ ಒಂದನ್ನು ಬಿಟ್ಟರೆ ಆ ಮನೆಯಲ್ಲಿ ಒಂದೇ ಒಂದು ದೇವರ ಪೋಟೋವಿರಲಿ, ದೇವರ ಕೋಣೆಯೆಂಬುದನ್ನೂ ನೀವು ಕಾಣಲಾರಿರಿ. ಪೂಜೆ, ಊದುಬತ್ತಿ ಗಂಟೆ ಸದ್ದುಕಾಣದ ಮನೆ ಅವರದು.

ಹಾಂಗ್‌ಕಾಂಗ್‌ಗೆ ಹೋದಾಗ, ಚೀನಾ ಸುತ್ತಿ ಬಂದಾಗ ಅವರು ನೋಡಿದ ಮುನ್ನೂರು ಬುದ್ಧ ಪ್ರತಿಮೆಗಳಲ್ಲಿ ಅಗಾಧವೂ ಭವ್ಯವೂ ಆದ ಲೂಷನ್‌ನ ಬಳಿಯ ಬುದ್ದನ ವಿಗ್ರಹದ ಬಳಿ ನಿಂತು ತೆಗೆಸಿದ ಚಿತ್ರವೆಂದರೆ ಅವರಿಗೆ ತುಂಬಾ ಅಚ್ಚುಮೆಚ್ಚು. ಕನ್‌ಪ್ಯೂಶಿಯಸ್, ತಾವೋ ಫಿಲಾಸಫಿ ಅವರಿಗೆ ಪಂಚಪ್ರಾಣ. ಬುದ್ಧನ ಸಪ್ತಶೀಲಗಳೇ ಬಸವಣ್ಣನಲ್ಲಿ ಇಣುಕುತ್ತವೆಂಬುದು ಅವರ ವಾದ.

ಪುಸ್ತಕಗಳಿಂದ ಸಿಗುವ ಆನಂದಕ್ಕೆ ಸರಿಸಮಾನವಾದ ಆನಂದವನ್ನು ತಂದುಕೊಡುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ ಎಂಬುದು ಅವರ ಅಭಿಮತ. ಹಾಗೆಂದೇ ಸರಿಸುಮಾರು ಇಪ್ಪತ್ತು ಸಾವಿರ ಪುಸ್ತಕಗಳು ಅವರ ಮನೆಯ ಕೊಠಡಿಯಲ್ಲಿ ವಿರಾಜಮಾನವಾಗಿವೆ. ಮಗ ಆಗೊಮ್ಮೆ ಈಗೊಮ್ಮೆ ಅವುಗಳತ್ತ ಕಣ್ಣು ಹಾಯಿಸಿದಾಗ ಅವರಿಗೆ ಸಂತೋಷವೂ ಆಗಿದೆ. ಹೈಸ್ಕೂಲ್‌ನಲ್ಲಿರುವಾಗಲೇ ‘ಪ್ಯಾಪಿಲಾನ್’ ಎಂದೂ ‘ಮಹಾಪಲಾಯನ’, ‘ಬರ್ಮುಡಟ್ರ್ಯಾಂಗಲ್’ ದಾಟಿ ‘ಗಾಂಧಿಬಂದ’ ಕೃತಿಯವರೆಗೆ ಮಗ ಬಂದಕೂಡಲೇ ಆಚಾರ್ಯರಿಗೆ ಸಂಭ್ರಮವೋ ಸಂಭ್ರಮ.

ಅವನನ್ನು ಸಾಹಿತ್ಯದ ಓದಿಗೇ ಹಚ್ಚಬೇಕು, ತಾನು ಓದಿನಿಂದ ಪಡೆದ ಅನುಭವ ಮತ್ತು ಆನಂದದ ಬೆಳಕಿನಲ್ಲೇ ಮಗನ ಕೈ ಹಿಡಿದು ನಡೆಸಬೇಕೆಂಬ ಬಹುದೊಡ್ಡ ಕನಸು ಕಂಡವರವರು – ತಾನು ಹಳ್ಳಿಯಲ್ಲೇ ಓದಿದ್ದರಿಂದ ಸರಿಯಾಗಿ ಇಂಗ್ಲೀಷ್ ಕಲಿಯಲಾಗಲಿಲ್ಲ; ಎಲ್ಲ ಜ್ಞಾನವೂ ಅಲ್ಲಿ ಲಭ್ಯವಾಗುವುದರಿಂದ ಮಗನಿಗೆ ಇಂಗ್ಲಿಷ್ ಸಾಹಿತ್ಯವನ್ನೇ ಓದಿಸಬೇಕೆಂಬ ಹುಕಿ ಅವರದಾಗಿತ್ತು, ಹಾಗೆ ಮಾಡಿಸಿದರು ಕೂಡ. ಈ ಬಗ್ಗೆ ಹೆಂಡತಿ ಜಗಳ ತೆಗೆಯದ ದಿನಗಳೇ ಇಲ್ಲ.

‘ಮಗನನ್ನು ಹಾಳುಮಾಡುತ್ತಿದ್ದೀರಿ... ನನ್ನ ಆಸೆಗಳೆಲ್ಲವನ್ನೂ ನಿರಾಸೆಗೊಳಿಸುತ್ತಿದ್ದೀರಿ... ಬೇರೆಯವರಿಗಿರುವ ಬುದ್ಧಿ ನಿಮಗಿಲ್ಲ’ – ಇಂಥ ಪುಂಖಾನುಪುಂಖ ಮಾತುಗಳು ತೇಲಿಬಂದಾಗಲೆಲ್ಲಾ ‘ಹೌದು, ನಾನು ಅವರ ಸ್ವಾತಂತ್ರ್ಯವನ್ನೂ ಆಯ್ಕೆಯನ್ನು ಕಸಿಯುತ್ತಿರುವೆನಾ?’ ಎಂಬ ಪ್ರಶ್ನೆ ಮೂಡಿದ್ದಿದೆ. ಮಕ್ಕಳನ್ನು ಕೈ ಹಿಡಿದು ನಾವು ನಡೆಸಬೇಕಾದ ಹೊಣೆಯನ್ನು ಕೈ ಚೆಲ್ಲಿ ಕೂರಬೇಕಾ ಎಂದೂ ಅಂದುಕೊಂಡಿದ್ದಾರೆ. ಅವಳ ನೋಟದಂತೆ ಅವಳ ನುಡಿ, ಅವಳದೇನೂ ತಪ್ಪಿಲ್ಲ ಎಂಬ ಭಾವ ಆಚಾರ್ಯರಿಗೆ ಬಂದದ್ದರಿಂದಲೇ ಅವರು ಅವಳ ಮಾತಿಗೆ ಸದಾ ಮೌನಧರಿಸುತ್ತಲೇ ಬಂದಿದ್ದರು.

ಆಚಾರ್ಯರ ಹೆಂಡತಿ ದೈವ–ಧರ್ಮದ ಶ್ರದ್ಧಾವಂತಿಕೆಯ ಮನೆತನದಲ್ಲಿ ಬೆಳೆದುಬಂದವಳು. ಅಪ್ಪ ವ್ಯಾಪಾರಸ್ಥನಾದರೂ ಎಂದೂ ಯಾರಿಗೂ ದ್ರೋಹ ಮಾಡಬಾರದೆಂಬ ತತ್ವವನ್ನು ಇರಿಸಿಕೊಂಡವರು. ಬೆಳಿಗ್ಗೆ ಎದ್ದು ಸಂಧ್ಯಾವಂದನೆಯಾಗಿ ದೇವರ ಕೋಣೆಯಲ್ಲಿ ಗಂಟೆಗಟ್ಟಲೇ ಪೂಜೆಯನ್ನು ಮುಗಿಸಿ ಹೊರಬಂದ ಮೇಲೆಯೇ ಉಳಿದವರದ್ದೆಲ್ಲರದೂ ತಿಂಡಿ–ತೀರ್ಥ. ಹಬ್ಬಹರಿದಿನಗಳಲ್ಲಿ ಇದು ಇನ್ನು ತಾರಕಕ್ಕೇರಿದ್ದನ್ನು ಆಚಾರ್ಯರು ಮದುವೆಯಾದ ಹೊಸದರಲ್ಲಿ ಕಂಡಿದ್ದರು.

ಹೊಟ್ಟೆ ಹಸಿವು ತಾಳದೆ ಆಚಾರ್ಯರು ಎಲ್ಲರ ಕಣ್ಣು ತಪ್ಪಿಸಿ ಹೋಟೆಲ್‌ನಲ್ಲಿ ತಿಂಡಿ ತಿಂದು ಬರುತ್ತಿದ್ದುದೂ ಉಂಟು. ಮನೆಯವರಿಗೆಲ್ಲ ಇದು ತಿಳಿದದ್ದೆ. ಬಾಗಿಲ ಮರೆಯಲ್ಲಿ ನಿಂತು ಭಯಗ್ರಸ್ತ ನೋಟಗಳನ್ನು ಬೀರುವುದನ್ನು ಬಿಟ್ಟು ಅವರಿನ್ನೇನೂ ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲೇ ಹುಟ್ಟಿ ಬೆಳೆದ ಈ ಮಗನಿಗೆ ತಾತನದೇ ಮಾರ್ಗದರ್ಶನ. ಮುಂಜಾನೆ ಎದ್ದು ಹೂ ಹರಿಯಲು ಮೊಮ್ಮಗನನ್ನು ಎತ್ತಿಕೊಂಡು ಹೊರಟರೆಂದರೆ ಪೂಜೆ ಮುಗಿಯುವವರೆಗೂ ಬಿಡರು.

ಸ್ನಾನ ಸಂಧ್ಯಾವಂದನೆ, ಹಣೆಯಲ್ಲಿ ಗಂಧ, ನೆತ್ತಿಯಲ್ಲಿ ಅಕ್ಷತೆ, ಮಂತ್ರ ಪಠನ, ನಿತ್ಯತಪ್ಪಿದ್ದಲ್ಲ. ಪ್ರೈಮರಿ ತರಗತಿ ಓದಲು ಅವನನ್ನು ಸೇರಿಸಿದ್ದೂ ಅವರ ಶ್ರೀಮಠದ ಶಾಲೆಯಲ್ಲಿಯೇ. ಶ್ಲೋಕ, ಭಗವದ್ಗೀತೆ. ಅಮರಶತಕ – ‘ಅಯ್ಯಯ್ಯೋ, ಇದು ಯಾವ ಕಾಲದ ಓದು’ ಎಂದು ಗೊಣಗಿಕೊಳ್ಳುವುದಷ್ಟೇ ಆಚಾರ್ಯರ ಪಾಲಿಗೆ. ಇದನ್ನು ದಾಟಬೇಕೆನ್ನುವ ಅವರ ಹಂಬಲ ದಿನದಿನಕ್ಕೂ ತೀವ್ರವಾಗಿ ಬೆಳೆಯತೊಡಗಿದ್ದೂ ಅಲ್ಲಿಯೇ.

ಇವಳ ಅಪ್ಪನ ಮನೆ ವೃಂದಾವನದಂತೆ ಇದ್ದದ್ದು ಕೊಳಗೇರಿಯ ನಡುವೆ. ಸುತ್ತಮುತ್ತಲೆಲ್ಲ ಸ್ಲಂ. ಹೆಚ್ಚಾಗಿ ಸಾಬರೇ ತುಂಬಿಕೊಂಡಿದ್ದ ಅಲ್ಲಿ ಹರಿಜನರೂ, ಗೊಲ್ಲರೂ, ಕುರುಬರೂ, ಕೋಮಟಿಗರೂ, ದರ್ಜಿಯವರೂ ಇದ್ದರು. ರಾತ್ರಿಯಾಯಿತೆಂದರೆ ಅಲ್ಲೊಂದು ಹೊಸದೇ ಲೋಕ ತೆರೆದುಕೊಳ್ಳುತ್ತಿತ್ತು. ಕುಡಿದು ತೂರಾಡಿ ಬರುವ ಗಂಡಸರು ತಮ್ಮ ಮನೆಯ ಮಕ್ಕಳುಮರಿಗಳು ಹೆಂಡತಿಯನ್ನು ಹೀನಾಮಾನ ಬಯ್ಯುವುದು, ಹೊಡೆಯುವುದು ಹಾಗೂ ಅವರ ಕಿರುಚಾಟ, ನರಳಾಟ ಸರಿರಾತ್ರಿಯವರೆಗೂ ಸಾಗುತ್ತಿತ್ತು. ಆಚಾರ್ಯರು ಇದ್ದ ರಾತ್ರಿ ಮನೆಯವರೆಲ್ಲ ಈ ಅಸಹ್ಯ ವಾತಾವರಣದಿಂದ ಅವಮಾನಿತರಾಗಿ ಕುಗ್ಗಿ ಹೋಗಿಬಿಡುತ್ತಿದ್ದರು.

ಕೇಳಬಾರದ ಕೊಳಕು ಅಶ್ಲೀಲ ಶಬ್ದಗಳ ಜಗತ್ತು ಅಲ್ಲಿ ನಿರಾತಂಕವಾಗಿ ನಿರ್ಮಾಣಗೊಂಡು ಬಿಡುತ್ತಿತ್ತು. ಇವಳ ಅಪ್ಪ, ಅಮ್ಮ ‘ನಮ್ಮ ಅಳಿಯ ಬಂದಿದ್ದಾರೆ.ದಯವಿಟ್ಟು ಸುಮ್ಮನಿರಿ’ ಎಂಬ ಮಾತಿಗೆ ಕವಡೆ ಕಾಸು ಕಿಮ್ಮತ್ತು ಕೊಡದೆ ಇನ್ನಷ್ಟು ತಾರಕದಲ್ಲಿ ದನಿಯೆತ್ತಿ ಕಿರುಚಾಡುತ್ತಿದ್ದರು. ಇಂಥದ್ದನ್ನೆಲ್ಲಾ ನೋಡಿದ್ದ ಆಚಾರ್ಯರಿಗೆ ಇದೇನು ವಿಚಿತ್ರವೆನಿಸುತ್ತಿರಲಿಲ್ಲ. ಅವರಿಗೆ ವಿಚಿತ್ರವೆನಿಸಿದ್ದು ಇಂಥ ಶ್ರದ್ಧಾವಂತ ಧರ್ಮದ ಕಟ್ಟಾಳು ಈ ಸ್ಲಂಮ್ಮಿನಲ್ಲೇಕೆ ಮನೆಕಟ್ಟಿದರು ಎಂಬುದು.

ಬಿಸಿನೆಸ್‌ಗೆ ಬರುವ ಮುನ್ನ ಅವರಪ್ಪ ಒಂದು ಬಸ್ಸಿನಲ್ಲಿ ಕಂಡಕ್ಟರ್ ಆಗಿದ್ದರಂತೆ. ಅಲ್ಲೂ ಅದೇ ನಿಷ್ಠೆ. ಮಾಲಿಕರಿಗೆ ನಿಷ್ಠೆಯಿಂದ ಇರುವುದು. ಆ ಬಸ್ಸಿನ ಡ್ರೈವರ್ ಒಬ್ಬ ಮುಸ್ಲಿಂ – ಸತ್ತಾರ್ ಸಾಬ್ ಎಂದು. ಇವಳ ಮನೆಯ ಮಂದಿಯೆಲ್ಲ ಆತನನ್ನು ‘ಸತ್ತಾರಣ’ ಎಂದೇ ಕರೆಯುತ್ತಿದ್ದರು. ಎರಡು ಮನೆಯ ಒಡನಾಟ ಅದ್ಭುತವಾಗಿತ್ತು.

ಇವರ ಹಬ್ಬಕ್ಕೆ ಅವರು ಇವರ ಮನೆಗೆ ಬರುವುದು. ಅವರ ಹಬ್ಬಕ್ಕೆ ಇವರುಗಳು ಹೋಗುವುದು ನಡೆದಿತ್ತು. ಕಾಲಾನುಸಾರವಾಗಿ ಸತ್ತಾರಣ್ಣನಿಗೆ ಮನೆ ತುಂಬ ಮಕ್ಕಳಾಗುವ ಹೊತ್ತಿಗೆ ಇವಳಪ್ಪ ಕಂಡಕ್ಟರ್‌ಗಿರಿ ಬಿಟ್ಟು ವ್ಯಾಪಾರಕ್ಕೆ ಇಳಿದು ಅನುಕೂಲಸ್ಥರಾಗಿದ್ದರು. ಸಂಸಾರ ನಿಭಾಯಿಸಲಾರದೆ, ಏಳೆಂಟು ಹೆಣ್ಣು ಮಕ್ಕಳ ಮದುವೆ ಮಾಡಲೆಂದು ಸತ್ತಾರಣ್ಣ ಅಲ್ಲಿ ಇಲ್ಲಿ ಸೇರಿದಂತೆ ಇವರಪ್ಪನ ಬಳಿಯೂ ಸಾಲ ಮಾಡಿದ್ದನಂತೆ.

ಆ ಸಾಲವನ್ನು ತೀರಿಸಲಾಗದ ಸ್ಥಿತಿ ತಲುಪಿದ ಆತ ಒಂದು ದಿನ – ‘ನನ್ನ ಬಳಿ ಸೈಟಿದೆ, ನಿಮ್ಮ ಸಾಲಕ್ಕೆ ಅದನ್ನು ರಿಜಿಸ್ಟರ್ ಮಾಡಿಸಿಕೊಳ್ಳಿ’ ಎಂದನಂತೆ. ಕುತೂಹಲದಿಂದ ಇವಳೂ ಅವಳಪ್ಪ ಅಮ್ಮ ತಂಗಿಯರೆಲ್ಲ ಸೈಟು ನೋಡಿ ಬರಲು ಹೋದರೆ ಅದು ಇದ್ದದ್ದೇ ಈ ಸ್ಲಂನಲ್ಲಿ.

ಪಕ್ಕದ ಮನೆಯೇ ಸತ್ತಾರಣ್ಣನದು. ಈ ಸೈಟು ಬಿಟ್ಟರೆ ಸಾಲ ವಾಪಾಸ್ಸು ಬರೋಲ್ಲ ಅಂತ ಅದನ್ನು ರಿಜಿಸ್ಟರ್ ಮಾಡಿಸಿಕೊಂಡು, ಬೇರೆಯವರಿಗೆ ಮಾರಲು ಹೋದರೆ ಕೊಳ್ಳುವವರೇ ಇಲ್ಲ. ಹಾಗೆಯೇ ಬಿಟ್ಟರೆ ಕಣ್ಮುಚ್ಚುವುದರೊಳಗೆ ಗುಡಿಸಲೆದ್ದು ಬಿಡುತ್ತವೆ. ನಿರ್ವಾಹವಿಲ್ಲದೆ ಇವರ ಮನೆ ‘ವೃಂದಾವನ’ ತಲೆ ಎತ್ತಿತು.ಹಾದಿಬೀದಿಯವರೆಲ್ಲ ‘ವೃಂದಾವನ’ವನ್ನು ಕಂಡು ಕನಿಕರಿಸುವವರೆ.

ಈ ವಿಷಾದಕ್ಕೂ ಕಾರಣವಿತ್ತು. ಅಷ್ಟೊತ್ತಿಗಾಗಲೇ ರಾಮನ ರಥ ಇಟ್ಟಿಗೆಯನ್ನು ಹೊತ್ತು ದೇಶವನ್ನೇ ಸುತ್ತುತಿತ್ತು. ಯಾವಾಗ ಏನೋ ಎನ್ನುವ ಸ್ಥಿತಿಯೊಳಗೆ ಈ ಅನುಕಂಪದ ನುಡಿಗೆ ಅರ್ಥವಿತ್ತು. ಆದರೆ, ಇವಳೂ ಇವರಪ್ಪನೂ ಮನೆಯವರೂ ಏನೂ ಆಗದವರಂತೆ ಇದ್ದರೂ ಸತ್ತಾರಣ್ಣನ ಮನೆಯವರೊಂದಿಗಿನ ಒಡನಾಟ ಮೊದಲಿನ ಹಾಗೆ ಇರಲಿಲ್ಲ ಎಂಬುದನ್ನು ಆಚಾರ್ಯರು ಸೂಕ್ಷ್ಮವಾಗಿ ಗಮನಿಸಿದ್ದರು.

ಪ್ರತಿರಾತ್ರಿ ದೂರದರ್ಶನದ ರಾಮಾಯಣದ ಕಾಯಂ ವೀಕ್ಷಕರೆಂದರೆ ಸತ್ತಾರಣ್ಣನ ಮನೆಯವರೇ. ಇಡೀ ಏರಿಯಾದಲ್ಲಿ ಇದ್ದುದು ಕೆಲವೇ ಕೆಲವು ಟೀವಿಗಳು. ಅದರಲ್ಲಿ ಇವಳಪ್ಪನದ್ದೂ ಒಂದು. ರಾಮಸೀತೆಯನ್ನು ಗೆದ್ದಾಗ, ಕಾಡಿಗಟ್ಟಿದಾಗ, ಅಗ್ನಿಪರೀಕ್ಷೆ ಮಾಡಿದಾಗಲೆಲ್ಲ ಸತ್ತಾರಣ್ಣನ ಅಪ್ಪನಾದಿಯಾಗಿ ಹೆಂಡತಿ ಮಕ್ಕಳೂ ‘ಯಾ ಅಲ್ಲಾ!’ ಎಂದು ನಿಟ್ಟುಸಿರುಬಿಟ್ಟಿದ್ದನ್ನೂ ಆಚಾರ್ಯರು ಕೇಳಿಸಿಕೊಂಡಿದ್ದಾರೆ. ‘ಎಲ್ಲಾ ಹೆಣ್ಣು ಒಂದೇ ಅಲ್ಲವೆ, ಅಲ್ಲಿ ಮತಧರ್ಮದ್ದೇನು ಬಂತು’ ಎಂಬ ಮಾತನ್ನು ಶಕೀಲಮ್ಮ ಆಡಿದ್ದನ್ನು ಕೇಳಿ ಇವರೆಲ್ಲ ತಲೆ ಆಡಿಸಿದ್ದಾರೆ. ಶಕುನಿಯ ತಂತ್ರ ಕುತಂತ್ರಗಳಿಗೂ, ಕುಂತಿಯ ನರಳಾಟಕ್ಕೂ, ಕೃಷ್ಣನ ಜಾಣ್ಮೆಗೂ ತಲೆದೂಗಿದ್ದಾರೆ.

ಅಷ್ಟೊಂದು ಶ್ರದ್ಧೆಯಿಂದ ಅವರು ಟೀವಿ ನೋಡುವಾಗ ತನ್ನ ಮಗ ಶಕೀಲಮ್ಮನ ತೊಡೆಯ ಮೇಲೆಯೇ ಕೂತಿರುತ್ತಿದ್ದುದೂ, ಅದೇನೂ ಇದೇನೂ ಎಂದೂ ಕೇಳುತ್ತಿದ್ದುದು ಆಚಾರ್ಯರಿಗೆ ಸಖೇದಾಶ್ಚರ್ಯವೂ ಸಂತೋಷದ ಸಂಗತಿಯೂ ಆಗಿದೆ. ಆದರೆ, ಉಳಿದವರಿಗೆ ಇದು ಮುಜುಗರದ ಸಂಗತಿ.

ಬಡತನವನ್ನೇ ಹಾಸಿ ಹೊದ್ದ ಸತ್ತಾರಣ್ಣನ ಬಾಳ್ವೆ ದಿನದಿನಕ್ಕೂ ಹಳಸತೊಡಗಿತು. ಮದುವೆಯಾದ ಗಂಡುಮಕ್ಕಳು ಹೆಂಡತಿಯರೊಂದಿಗೆ ಮನೆಯಿಂದ ಹೊರಬಿದ್ದದ್ದೇ ಸತ್ತಾರಣ್ಣ ನೆಲ ಹಿಡಿದುಬಿಟ್ಟ. ಗಂಜಿಗೂ ಕಷ್ಟಬಂದಂತೆ ಇವಳೂ, ಅವಳಪ್ಪ ಅಮ್ಮರೂ ಮೊದ ಮೊದಲು ದುಡ್ಡು ಕೊಟ್ಟು ನೋಡಿದರೂ ಆ ಮೇಲೆ ಆ ಕಡೆ ತಿರುಗಿ ಕೂಡ ನೋಡುವುದನ್ನು ಬಿಟ್ಟರು. ಶಕೀಲಮ್ಮ ಮಗುವನ್ನು ಕರೆದೊಯ್ಯಲು ಬಂದರೆ ಇವಳು ಏನೇನೋ ನೆಪಹೇಳಿ ಕಳಿಸದಂತೆ ನೋಡಿಕೊಳ್ಳತೊಡಗಿದಳು. ‘ಅವರ ಮನೆಗೆ ನಾವು ಹೋಗಬಾರದು.

ಅವರೇ ಬೇರೆ ನಾವೇ ಬೇರೆ. ಅವರು ಕೊಟ್ಟಿದ್ದನ್ನು ತಿನ್ನಬಾರದು...’ – ಏನೇನೋ ಹೇಳಿ ಈ ಹುಡುಗ ಆ ಕಡೆ ತಲೆಹಾಕದಂತಾಗಿ ಬಿಟ್ಟ. ಮೊಹರಂ, ರಂಜಾನ್‌ನ ತಿಂಡಿ–ಸಿಹಿಯನ್ನು ಮೊದ ಮೊದಲು ತಿನ್ನುತ್ತಿದ್ದ. ಇವರು ಅದನ್ನು ಮುಟ್ಟದಾದರು. ಪಾಪ! ಅವರಾದರೋ ಇವರುಗಳು ಸಸ್ಯಹಾರಿಗಳೆಂದು ಗೊತ್ತಿದ್ದರಿಂದ ಚೋಂಗಿಗೆ ಕೋಳಿಮೊಟ್ಟೆಯನ್ನು ಹಾಕುತ್ತಿರಲಿಲ್ಲ. ಚೋಂಗಿಯೆಂದರೆ ಮಗನಿಗೆ ಪಂಚಪ್ರಾಣ. ಆದರೆ, ಒಂದು ಚೂರೂ ನೀಡದಂತೆ ಕಸದ ಬುಟ್ಟಿಗೆ ಹಾಕುತ್ತಿದ್ದರು.

ಇದು ಹೇಗೋ ಶಕೀಲಮ್ಮನಿಗೆ ಗೊತ್ತಾಗಿ ಕಣ್ಣೀರು ಹಾಕಿದರು. ಮುಂದಿನ ಸಲ ಹಬ್ಬ ಬಂದಾಗ ತಿಂಡಿಯನ್ನು ಕೊಡದೆ ಶ್ಯಾವಿಗೆ ಹಾಗೂ ಸಕ್ಕರೆ ಕೊಟ್ಟು ‘ನೀವೇ ಮಾಡಿಕೊಳ್ಳಿ’ ಎಂದರು. ವಿನಾಕಾರಣದ ನಿರಾಕರಣೆಯ ಹೊತ್ತಿನಲ್ಲೇ ಮತೀಯ ವಿದ್ವೇಷದ ಜ್ವಾಲೆಗಳು ಜ್ವಲಿಸತೊಡಗಿ ಇಡೀ ದೇಶವೇ ತತ್ತರಿಸುವಾಗ ಈ ನಗರವೂ ತಲ್ಲಣಗೊಂಡಿತು.

‘ಸ್ಲಂಗಳ ಮೇಲೆ ದಾಳಿ ನಡೀತಿದೆ’ ಎಂದು ಗಾಳಿಸುದ್ದಿ ಹಬ್ಬಿದಾಗ ಸತ್ತಾರಣ್ಣ ಬಂದು ಇವರ ಮನೆಯ ಬಾಗಿಲು ಹಿಡಿದು ‘ರಕ್ಷಣೆ ಕೊಡಿ’ ಎಂದು ಕೋರಿದ ದಿನ ಆಚಾರ್ಯರೂ ಮನೆಯಲ್ಲಿದ್ದರು. ಬಾಗಿಲ ತೆಗೆದು ಎಲ್ಲರನ್ನೂ ಮನೆಯೊಳಕ್ಕೆ ಸೇರಿಸಿದರು. ಬಾಗಿಲು ಹಾಕಿ ಅವರಿಗೆ ರಕ್ಷಣೆಯನ್ನೇನೋ ಕೊಟ್ಟರು. ಆದರೆ, ಒಂದು ಮಾತೂ ಇಲ್ಲ. ಬಾಗಿಲ ಮರೆಯಿಂದ ಇಣುಕಿ ನೋಡುತ್ತಿದ್ದ ಮಗನನ್ನು ಶಕೀಲಮ್ಮ ಎಷ್ಟು ಕರೆದರೂ ಅವನು ಹತ್ತಿರ ಸುಳಿಯಲಿಲ್ಲ.

ಅವರ ಬಗೆಗೆ ಅವನಲ್ಲಿ ದ್ವೇಷವಿತ್ತೋ ಭಯವಿತ್ತೋ ಆಚಾರ್ಯರು ಈಗ ಹೇಳಲಾರರು. ಅವನ ಭಾವದ ಮೇಲೆ ಯಾರ್ಯಾರೋ ಸವಾರಿ ಮಾಡಿದ್ದರು. ಅಂದು ರಾತ್ರಿ ಸಾಬರ ಹುಡುಗರು ಇನ್ಯಾರೋ ನಾಕು ಮಂದಿಯನ್ನು ಬಡಿದರೆಂಬ ಸುದ್ದಿ ಕೇಳಿ ರಾತ್ರೋರಾತ್ರಿ ಇವರಪ್ಪ ಸತ್ತಾರಣ್ಣನ ಕುಟುಂಬವನ್ನು ಮನೆಯಿಂದ ಹೊರಹಾಕಿದರು. ಆಚಾರ್ಯರ ಯಾವ ಮಾತನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇರದ ದಿನ ಅದು.

ಬೆಳಗಾಗುವುದರೊಳಗಾಗಿ ಅರೆ ಸೇನಾಪಡೆ ನಗರಕ್ಕೆ ಕಾಲಿಕ್ಕಿ ಪಥಸಂಚಲನ ಆರಂಭಿಸಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿ ಬದುಕು ಮೂರಾಬಟ್ಟೆಯಾದಾಗ ಸತ್ತಾರಣ್ಣ–ಶಕೀಲಮ್ಮ ಮತ್ತು ಇಡೀ ಸ್ಲಂ ಹಾಹಾಕಾರದಿಂದ ತುಂಬಿಹೋಯಿತು. ಅಲ್ಲಲ್ಲಿ ಮನೆಗಳಿಗೆ ಬೆಂಕಿ ಹಚ್ಚುವ, ಕೈಗೆ ಸಿಕ್ಕವರನ್ನು ಬಡಿದು ಹಾಕುವ ಕೆಲಸಗಳು ಟೀವಿಯಲ್ಲಿ ನಿರಂತರವಾಗಿ ಬರತೊಡಗಿದವು. ಮನೆಯವರೊಂದಿಗೆ ಮಗನೂ ಬೆರಗುಗಣ್ಣುಗಳಿಂದ ಉರಿವ ಜ್ವಾಲೆಯನ್ನು ನೋಡಿ ನೋಡಿ ಅವನ ಕಣ್ಣು ಅಗ್ನಿಕುಂಡಗಳಾದವು.

ನಖಶಿಖಾಂತ ಹರಿದಾಡುವ ಈ ಜ್ವಾಲೆಯಿಂದ ಮಗನನ್ನು ಉಳಿಸಬೇಕೆಂದರೆ ಅವನಿರುವ ಜಾಗವನ್ನು ಬಿಡಿಸಬೇಕು. ಆಗಲೇ ಈ ಮೇನಿಯಾದಿಂದ ಅವನು ಮತ್ತು ಇವಳೂ ಹೊರಬರಲು ಸಾಧ್ಯವೆಂದು ಭಾವಿಸಿದ ಆಚಾರ್ಯರು, ಊರ ಹೊರಗಿನ ತನ್ನ ಹೊಸಮನೆಗೆ ಕುಟುಂಬವನ್ನು ಸ್ಥಳಾಂತರಗೊಳಿಸಿದರು. ಇಡೀ ಮನೆಯ ಮಂದಿ ‘ಪರಿಸ್ಥಿತಿ ಸರಿ ಇಲ್ಲ... ಬೇಡ’ ಎಂದು ಕಣ್ಣೀರಿಟ್ಟರು. ಸತ್ತಾರಣ್ಣ–ಶಕೀಲಮ್ಮ ಕೂಡ ಆಚಾರ್ಯರು ಹೊರಡುವಾಗ ಹೊರಗೆ ಬಂದು ನಿಂತು ವಿದಾಯ ಹೇಳಿದ್ದರು.

ಆಚಾರ್ಯರ ವಿದ್ಯಾರ್ಥಿಯೊಬ್ಬ ‘ಏಷ್ಯಾವಲ್ಲದೆ ಇತರೆ ಖಂಡಗಳಲ್ಲಿರುವ ಮುಸ್ಲಿಂ ರಾಷ್ಟ್ರಗಳ ಬಡವಿದ್ಯಾರ್ಥಿಗಳಿಗೆ ಇಂಗ್ಲಿಷನ್ನು ಕಲಿಸುತ್ತಿರುವೆ, ಯಾರಾದರೂ ಆಸಕ್ತರಿದ್ದರೆ ನನ್ನನ್ನು ಸಂಪರ್ಕಿಸಿ’ ಎನ್ನುವ ಇ–ಮೇಲ್ ಒಂದನ್ನು ತೇಲಿಬಿಟ್ಟಿದ್ದನು. ಆಚಾರ್ಯರಿಗೆ ತಮ್ಮ ಮಗನನ್ನು ಕಳಿಸುವ ಆಪೇಕ್ಷೆ ಉಂಟಾದುದು ಆಗಲೇ. ಈ ಮಾತು ಕೇಳಿ ಮಗನೂ ಇವಳೂ ನಡುಗಿಹೋದರು. ‘ಹೋಗಿ ಹೋಗಿ ಸಾಬರ ದೇಶಕ್ಕೆ ಇವನನ್ನು ಕಳಿಸಿ ಕಳೆದುಕೊಳ್ಳಬೇಕೆಂದುಕೊಂಡಿದ್ದೀರಾ’ ಎಂದು ಕನಲಿದಳು.

ಮಗ ನಡುಗಿಹೋದ. ಅವನ ಬಾಲ್ಯದ ಎಲ್ಲ ಅನುಭವಗಳೂ ಅವನನ್ನು ಅಧೀರನ್ನಾಗಿಸಿತು. ಮೇಲ್‌ಗಳು, ಫೇಸ್‌ಬುಕ್‌ಗಳೆಲ್ಲವನ್ನೂ ತಡಕಿದ. ಆಚಾರ್ಯರ ವಿದ್ಯಾರ್ಥಿಯ ಫೇಸ್‌ಬುಕ್ ಅನ್ನು ಜಾಲಾಡಿ – ‘ಪಪ್ಪಾ. ಮಮ್ಮಿ ನೋಡಿಲ್ಲಿ’ ಎಂದ. ಉದ್ದನೆಯ ಬಿಳಿ ನಿಲುವಂಗಿ ಧರಿಸಿದ, ತಲೆಯನ್ನು ಬಿಳಿ ವಸ್ತ್ರದಲ್ಲಿ ಮುಚ್ಚಿದ್ದ, ಗಡ್ಡ ಬಿಟ್ಟು ಮುಸ್ಲಿಂ ವಿದ್ಯಾರ್ಥಿಗಳ ತರಗತಿಯಲ್ಲಿ ಪಾಠ ಮಾಡುವ, ಅವನೊಂದಿಗೆ ಕುಳಿತಿರುವ ವಿವಿಧ ಭಂಗಿಗಳ ಪೋಟೋ ತೋರಿಸಿದ.

‘ನಾನು ಹೋಗಲ್ಲಪ್ಪಾ...’ ಎಂದ. ಮತ್ತೊಂದು ದಿನ ಅಲ್ಲಿನ ರೀತಿರಿವಾಜುಗಳ ವರದಿ ಒಪ್ಪಿಸಿದ. ‘ಯಾವುದೇ ಧರ್ಮದ ಹೆಂಗಸರಾದರೂ ಬುರ್ಕಾ ಹಾಕಲೇಬೇಕಂತೆ’ ಎಂದ. ‘ಅವರ ಹಬ್ಬಗಳಲ್ಲಿ... ಪ್ರಾರ್ಥನೆ ಟೈಂನಲ್ಲಿ ನಾವು ಅವರಂತೆಯೇ ನಡೆದುಕೊಳ್ಳಬೇಕಂತೆ. ಮೀಸೆ ಬಿಡಂಗಿಲ್ಲ... ಇಲ್ಲಪ್ಪ... ನಾನು ಹೋಗಲ್ಲ’ ಎಂದು ಹಟಮಾಡಿದ. ಅವರಮ್ಮ ಅದಕ್ಕೆ ಅನುಮೋದನೆ ನೀಡಿದಾಗ, ಆಚಾರ್ಯರು ಮೌನ ವಹಿಸಿದರು.

ಮಗನ ಮುಂದೆ ಕೆಲವು ಪುಸ್ತಕಗಳನ್ನು ಓದುವಂತೆಯೂ ಇರಿಸಿದರು. ಸಮಯ ಸಿಕ್ಕಾಗಲೆಲ್ಲ ‘ನಮ್ಮ ಲೋಕದೃಷ್ಟಿಯನ್ನು ನಿರೂಪಿಸಿರುವವರು ಯಾರು’ ಎಂಬುದನ್ನು ಬಿಡಿಸಿ ಹೇಳಿದರು. ನಾವು ಹಿಂದೂಗಳಾಗಿ ಮುಸ್ಲಿಮರನ್ನು ಹಾಗೆ ನೋಡುವಂತೆ ಮಾಡಿರುವ ಕ್ರಿಶ್ಚಿಯಾನಿಟಿಯನ್ನು ವಿವರಿಸಿದರು. When u are in Rom be a Roman ಎನ್ನುವುದನ್ನು ಒಪ್ಪಿಕೊಳ್ಳುವ ನಾವು ಯಾಕೆ ಇದನ್ನೇ ಮುಸ್ಲಿಂ ರಾಷ್ಟ್ರಗಳಿಗೂ ಅನ್ವಯಿಸುವುದಿಲ್ಲಾ ಎಂದು ಪ್ರಶ್ನೆ ಕೇಳಿ ನೋಡಿದರು.

‘ದ್ವೇಷ ಮಾಡಲು ಕಾರಣಗಳು ಬೇಕಿಲ್ಲ ಮಗನೇ, ಪ್ರೀತಿಸಲು ಕೂಡ. ಹೊರಡು! ವಿಶಾಲವಾದ ಈ ಪ್ರಪಂಚ ಪ್ರೀತಿಯೊಂದನ್ನು ಮಾತ್ರ ಬಯಸುತ್ತದೆ. ಗೋ ಕಿಸ್‌ ದ ವರ್ಲ್ಡ್’ ಅಂತ ಭಾವುಕರಾಗಿ, ಸಿನಿಮೀಯವಾಗಿ, ಕವಿಯಂತೆ ಮಗನ ಮುಂದೆ ಆಚಾರ್ಯರು ಹೇಳಿದರು. ಮಗನಿಗೆ ಕೊಂಚ ಕೊಂಚ ಅರ್ಥವಾಗತೊಡಗಿತು. ಅಂದು ರಾತ್ರಿ ಚಾಮ್‌ಸ್ಕಿಯ ಪುಸ್ತಕವನ್ನು ಬಿಟ್ಟು ಬಿಡದೆ ಓದಿದ.

ಅಂದು ಮುಂಜಾನೆ ಅವಳು ಅಳುತ್ತಲೇ ಆಚಾರ್ಯರ ಪಾದಗಳನ್ನು ಹಿಡಿದಳು. ‘ಯಾವುದೇ ಕಾರಣಕ್ಕೂ ಅವನನ್ನು ನಾನು ಕಳಿಸೊಲ್ಲ’ ಅಂದಳು. ‘ಪ್ರಾಣ ಕಳ್ಕೋತಿನಿ’ ಎಂದಳು. ಆಚಾರ್ಯರು ಅದಕ್ಕೆ ಮೌನವನ್ನೇ ವಹಿಸಿದರು. ಮುಂದಿನದೆಲ್ಲವನ್ನೂ ಮಗನೇ ಮಾಡುತ್ತಾನೆಂದು ಅವರು ನಂಬಿದ್ದರು.

ಅವರ ನಂಬಿಕೆ ಹುಸಿಯಾಗಲಿಲ್ಲ. ರಿಯಾದ್‌ನಲ್ಲಿನ ಆಚಾರ್ಯರ ವಿದ್ಯಾರ್ಥಿಯನ್ನು ಮೇಲ್‌ನಲ್ಲಿ ಸಂಪರ್ಕಿಸಿ ತನ್ನ ಒಪ್ಪಿಗೆ ನೀಡಿ ಹೊರಡುವ ಎಲ್ಲ ಸಿದ್ಧತೆಗಳನ್ನು ಮಗ ಮಾಡತೊಡಗಿದ. ಅವಳು ನಾಲ್ಕಾರು ದಿನ ಅತ್ತು, ಮಗನ ತಯಾರಿಗೆ ನೆರವಾಗಿ ನಿಂತಳು. ಅವಳಿಗೆ ಮಗನ ಈ ನಿರ್ಧಾರ ಸರಿ ಇದ್ದರೂ ಇರಬಹುದೆಂಬ ಒಂದು ಅಂದಾಜಿತ್ತು.

ಸರಿಯಾದ ವೇಳೆಗೆ ಅರಬ್ ಏರ್‌ಲೈನ್ಸ್ ಆಕಾಶಕ್ಕೆ ಚಿಮ್ಮಿತ್ತು. ಒಳ ಹೋಗುವ ಮುನ್ನ ಮಗ ಮಾಡಿದ್ದ ಮೆಸೇಜ್ ಅನ್ನು ಆಚಾರ್ಯರು ನೋಡಿಕೊಂಡರು.‘ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು.... ಗುಡ್ ಬೈ’. ಅವನಿಗೆ ಇನ್ನೂ ಭಯವಿದ್ದಂತೆ ತೋರುತ್ತಿರಬಹುದೆಂದುಕೊಂಡ ಆಚಾರ್ಯರು ಅವಳ ಕೈ ಹಿಡಿದು ನಿಲ್ದಾಣದಿಂದ ಟ್ಯಾಕ್ಸಿ ಹತ್ತಿ ತಮ್ಮ ಊರಿಗೆ ಬಂದರು. ಮನೆಯ ಬಾಗಿಲು ತೆರೆದ ತಕ್ಷಣ ಅವರು ತಮ್ಮ ಕಂಪ್ಯೂಟರ್ ಆನ್ ಮಾಡಿ ತಮ್ಮ ಮೈಲ್ ಚೆಕ್ ಮಾಡಿದರು.

ರಿಯಾದ್‌ನ ವಿಮಾನನಿಲ್ದಾಣದಲ್ಲಿ ಆಚಾರ್ಯರ ವಿದ್ಯಾರ್ಥಿ ಮತ್ತು ಅವನ ವಿದ್ಯಾರ್ಥಿಗಳು ಹೂಗುಚ್ಛ ನೀಡಿ ಭಾವಿ ಅಧ್ಯಾಪಕನನ್ನು ಸ್ವಾಗತಿಸುತ್ತಿರುವ, ಪರಸ್ಪರರು ಆಲಂಗಿಸಿಕೊಂಡಿರುವ, ಮನಸಾರೆ ನಗುತ್ತಿರುವ, ಇವನ ಲಗೇಜ್‌ಗಳನ್ನು ಹೊತ್ತು ಸಾಗುತ್ತಿರುವ ನಾಲ್ಕಾರು ಪೋಟೋಗಳ ಕೆಳಗೆ – ‘ನಾನು ಸುಖವಾಗಿ ತಲುಪಿರುವೆ. ಕಲ್ಪನೆಯ ಜಗತ್ತಿಗಿಂತ ಈ ಜಗತ್ತು ಬೇರೆಯೇ ಇದೆ. ಅಮ್ಮನಿಗೂ ಈ ಜಗತ್ತನ್ನು ತೋರಿಸಬೇಕು ಪಪ್ಪಾ... ಸಂಪರ್ಕದಲ್ಲಿರುವೆ...’ ಎಂದಿತ್ತು.

ತದೇಕ ದೃಷ್ಟಿಯಿಂದ ಪೋಟೋಗಳನ್ನು ನೋಡುತ್ತಿದ್ದ ಅವಳಿಗೆ ಆಚಾರ್ಯರು ಅವನ ಮೇಲ್ ಅನ್ನು ಓದಿ ಹೇಳಿದರು. ಅದನ್ನು ಕೇಳಿದ ಅವಳು – ‘ನಾವೂ ಹೋಗೋಣವೇ ಅಲ್ಲಿಗೆ’ ಎಂದಳು. ಆಚಾರ್ಯರು ಅವಳ ಕೈ ಹಿಡಿದು ‘ನೀನು ಬುರ್ಕಾ ಹಾಕಲು ತಯಾರಿದ್ದರೆ ಹೋಗೋಣ’ ಎಂದರು. ಅವಳು ತಲೆಯಲ್ಲಾಡಿಸಿ ತನ್ನ ಒಪ್ಪಿಗೆ ನೀಡಿದ್ದನ್ನು ಆಚಾರ್ಯರು ಹೆಮ್ಮೆಯಿಂದ ನೋಡುತ್ತಲೇ ಕಂಪ್ಯೂಟರ್ ಪರದೆಯ ಮೇಲಿನ ಚಿತ್ರಗಳನ್ನು ಕಣ್ಣು ತುಂಬಿಸಿಕೊಳ್ಳತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT