ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲಿ ಸರ್, ಇದು ಪುಲಿಟ್ಸರ್!

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ವಿಶ್ವಮಾನ್ಯ ಪುಲಿಟ್ಸರ್ ಪ್ರಶಸ್ತಿಗಳಿಗೆ ಇದು ನೂರನೆಯ ವರ್ಷ. ಅಮೆರಿಕದ ಪ್ರಜೆಗಳಿಗೆ ಮಾತ್ರ ಸೀಮಿತವಾದ ಪ್ರಶಸ್ತಿ ಅದಾಗಿದ್ದರೂ ಕಳೆದ ನೂರು ವರ್ಷಗಳಲ್ಲಿ ಇಡೀ ಜಗತ್ತಿನ ಪತ್ರಿಕೋದ್ಯಮದ ಗುಣಮಟ್ಟಕ್ಕೆ ಮಾನದಂಡವನ್ನು ರೂಪಿಸಿದ ಶ್ರೇಯ ಅದರದ್ದಾಗಿದೆ. ಹಣದ ದೃಷ್ಟಿಯಲ್ಲಿ ತೀರ ನಗಣ್ಯವಾಗಿದ್ದರೂ ಪುಲಿಟ್ಸರ್ ಪದಕ ಸಿಕ್ಕಿತೆಂದರೆ ಬಾಳು ಬಂಗಾರ, ಜನ್ಮ ಪುನೀತ ಎಂಬಷ್ಟು ಪ್ರತಿಷ್ಠೆ ಅದಕ್ಕಂಟಿದೆ.

ಒಂದು ತನಿಖಾ ವರದಿಗೆಂದು 18 ತಿಂಗಳುಗಳ ಕಾಲ ಎಂಟು ಮಂದಿ ಪತ್ರಕರ್ತರು ಅರ್ಧ ಜಗತ್ತನ್ನೇ ಜಾಲಾಡಿದ್ದು ಗೊತ್ತೆ? ಕೊನೆಗೆ ಕಕ್ಷೆಯಲ್ಲಿನ ಉಪಗ್ರಹವನ್ನೆ ಅತ್ತ ತಿರುಗಿಸಿ ಶೋಧಕ್ಕೆ ಹಚ್ಚಿದ್ದು?

ಕಳೆದ ವರ್ಷದ ನೈಜ ಕತೆ ಇದು. ಮಯನ್ಮಾರ್, ಕಾಂಬೋಡಿಯಾ, ಥಾಯ್ಲೆಂಡ್‌ನಿಂದ ಹಿಡಿದು ಹಾಂಗ್‌ಕಾಂಗ್ ಆಚಿನ ಪಾಪುವಾ ನ್ಯೂಗಿನಿ ದ್ವೀಪದವರೆಗೆ ಒಂದು ಕರಾಳ ದಂಧೆ ವ್ಯಾಪಿಸಿತ್ತು. ಸಮುದ್ರ ದಡದಲ್ಲಿ ಸೀಗಡಿ ಮೀನುಗಳನ್ನು ಸಂಗ್ರಹಿಸಿ, ಅವುಗಳ ಕವಚ ಕಳಚಿ, ಚೊಕ್ಕಟಗೊಳಿಸಿ ಸುಂದರವಾಗಿ ಪ್ಯಾಕ್ ಮಾಡಿ ಅಮೆರಿಕದ ಹೊಟೆಲ್‌ಗಳಿಗೆ ಸರಬರಾಜು ಮಾಡುವ ಉದ್ಯಮದಲ್ಲಿ ಸಾವಿರಾರು ಕೂಲಿಗಳು, ಹೆಂಗಸರು, ಮಕ್ಕಳು ಜೀತದಾಳುಗಳಾಗಿ ದುಡಿಯುತ್ತಿದ್ದರು.

‘ಎಪಿ’ ವಾರ್ತಾಸಂಸ್ಥೆಯ ವರದಿಗಾರರು ಆ ಒಂದೊಂದು ದೇಶದಲ್ಲೂ ರಹಸ್ಯವಾಗಿ ನೌಕೆಗಳಲ್ಲಿ, ವಿಮಾನಗಳಲ್ಲಿ, ಲಾರಿಗಳಲ್ಲಿ ಸುತ್ತಾಡಿದರು. ಕೂಲಿಕಾರರನ್ನು ಹೊಡೆಯುವ, ಬಡಿಯುವ ಅಷ್ಟೇಕೆ ಪಂಜರದಲ್ಲಿ ಕೂಡಿಟ್ಟು ಕೆಲಸ ಮಾಡಿಸುವ ದಂಧೆಯ ಸಾಕ್ಷ್ಯಗಳನ್ನು ಸಂಗ್ರಹಿಸಲೆಂದು ಕೆಲವೊಮ್ಮೆ ವಾರಗಟ್ಟಲೆ ಕೂಲಿಗಳಂತೆ ದುಡಿದರು.

ನತದೃಷ್ಟ ಜೀತದಾಳುಗಳು ಪ್ಯಾಕ್ ಮಾಡಿದ ಸೀಗಡಿ (ಪ್ರಾನ್)ಗಳು ಶೀತಲ ಪೆಟ್ಟಿಗೆ ಸೇರಿ, ಆಕರ್ಷಕ ಲೇಬಲ್ ಅಂಟಿಸಿಕೊಂಡು ಯಾವ ಹಡಗಿನ ಮೂಲಕ ಅಮೆರಿಕದ ಯಾವ ಯಾವ ಬಂದರುಗಳಿಂದ ಯಾವ ಯಾವ ಮಾಲ್‌ಗಳಿಗೆ, ಹೊಟೆಲ್‌ಗಳಿಗೆ ಹೋಗುತ್ತಿವೆ ಎಂಬುದನ್ನು ದಾಖಲಿಸಿದರು.

ಆಗಲೇ  ವರದಿಯನ್ನು ಬಿಡುಗಡೆ ಮಾಡಬಹುದಿತ್ತು. ಮಾಡಲಿಲ್ಲ. ಏಕೆಂದರೆ ಜೀತಕ್ಕಿದ್ದ ಸಾವಿರಾರು ಕೂಲಿಗಳ ಜೀವಕ್ಕೆ ಅಪಾಯ ಬರುವ ಸಂಭವವಿತ್ತು. ಬದಲಿಗೆ ಆ ಎಲ್ಲ ದೇಶಗಳ (ವಿಶೇಷವಾಗಿ ಥಾಯ್ಲೆಂಡ್) ಸರಕಾರಕ್ಕೆ ರಹಸ್ಯ ವರದಿ ಸಲ್ಲಿಸಿ, ಅಂಥ ಜೀತದಾಳುಗಳ ಬಿಡುಗಡೆಯನ್ನು ಖಾತ್ರಿಗೊಳಿಸಿತು; ಅಷ್ಟೇ ಅಲ್ಲ ಬಿಡುಗಡೆ ಪಡೆದ ತಂಡಗಳ ಘರ್‌ವಾಪಸಿ ಸಂಭ್ರಮನ್ನೂ ದಾಖಲಿಸಿತು.

ಅಷ್ಟು ಹೊತ್ತಿಗೆ ಇಡೀ ವ್ಯೂಹದ ಖದೀಮರು ಎಚ್ಚೆತ್ತಿದ್ದರು. ತಮ್ಮ ಸೆರೆಯಲ್ಲಿದ್ದ ಏಳೆಂಟು ನೂರು ಕೂಲಿಗಳನ್ನು ಅವಸರದಲ್ಲಿ 33 ನೌಕೆಗಳಿಗೆ ತುಂಬಿಸಿ ಸಾಗಿಸಿ, ಅಲ್ಲಿಂದ ದೊಡ್ಡ ಹಡಗಿನಲ್ಲಿ ಅವರನ್ನೆಲ್ಲ ತುರುಕಿ ವಿಶಾಲ ಸಾಗರದಲ್ಲಿ ನಾಪತ್ತೆ. ಕೊನೇ ಕ್ಷಣದ ಈ ವೈಫಲ್ಯದಿಂದ ‘ಎಪಿ’ ವಾರ್ತಾಸಂಸ್ಥೆ ನಿರಾಸೆಯಿಂದ ಕೈಚೆಲ್ಲಿ ಕೂರಲಿಲ್ಲ. ಬಾಹ್ಯಾಕಾಶದ ಒಂದು ಖಾಸಗಿ ಉಪಗ್ರಹವನ್ನೇ ಗುತ್ತಿಗೆಗೆ ಪಡೆಯಿತು.

ಅದನ್ನು ಶಾಂತ ಸಾಗರದತ್ತ ತಿರುಗಿಸಲು ಕೋರಿತು. ಸಮುದ್ರದ ನಡುವಣ ನೂರಾರು ಹಡಗುಗಳ ಮಧ್ಯೆ ಖದೀಮರ ಹಡಗನ್ನು ಪತ್ತೆ ಹಚ್ಚಲೆಂದು ತಜ್ಞರ ನೆರವು ಕೋರಿತು. ಉಪಗ್ರಹ ಚಿತ್ರವನ್ನು ವಿಶ್ಲೇಷಿಸಿದ ಮೇಲೆ ಹಡಗು ನಿಖರವಾಗಿ ಕಣ್ಣಿಗೆ ಬಿತ್ತು. ಅಲ್ಲಿದ್ದ ಖೂಳರ ಬಂಧನಕ್ಕೆ ಹಾಗೂ ಜೀತದಾಳುಗಳ ಬಿಡುಗಡೆಗೆ ವ್ಯವಸ್ಥೆ ಮಾಡುವವರೆಗೆ ವರದಿಗಾರರು ವಿರಮಿಸಲಿಲ್ಲ.

‘ಎಪಿ’ (ಅಸೋಸಿಯೇಟೆಡ್ ಪ್ರೆಸ್) ವಾರ್ತಾಸಂಸ್ಥೆಯ ಈ ವರದಿ, ಅಂಕಿಸಂಖ್ಯೆ, ಛಾಯಾಚಿತ್ರ ಹಾಗೂ ವಿಡಿಯೊ ದಾಖಲೆಗಳ ಸಮೇತ ಅಮೆರಿಕ ಖಂಡದ ಅನೇಕ ಪತ್ರಿಕೆಗಳಲ್ಲಿ, ವಾರ್ತಾ ವಾಹಿನಿಗಳಲ್ಲಿ ಏಕಕಾಲಕ್ಕೆ ಕಂತು ಕಂತುಗಳಲ್ಲಿ ಪ್ರಕಟವಾಯಿತು. ಸೀಗಡಿ, ಸಮುದ್ರ ಏಡಿ ಮತ್ತಿತರ ರುಚಿಕರ ಸಮುದ್ರಖಾದ್ಯಗಳನ್ನು ಖುಷಿಪಟ್ಟು ತಿನ್ನುವವರೆಲ್ಲ ಈ ಪಾಪಕೃತ್ಯದಲ್ಲಿ ಪರೋಕ್ಷ ಪಾಲುದಾರರು ಎಂಬ ಸಂದೇಶ ಢಾಳಾಗಿ ಬಿಂಬಿತವಾಯಿತು.

ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಅನೇಕ ಸಂಘಟನೆಗಳು ಆಕ್ರೋಶ ಹೊಮ್ಮಿಸಿದವು. ‘ಜೀತದಾಳುಗಳ ಶ್ರಮದಿಂದ ಸಿದ್ಧವಾದ ಸರಕುಗಳನ್ನು ಖರೀದಿ ಮಾಡಕೂಡದು’ ಎಂಬ ಕಾನೂನಿಗೆ ಒಬಾಮಾ ಸಹಿ ಹಾಕಿದರು. ನೆಸ್ಲೆ ಕಂಪನಿ ತನಗೆ ಸೀಫುಡ್ ಸರಬರಾಜು ಮಾಡುತ್ತಿದ್ದ ಗುತ್ತಿಗೆದಾರರು ಬಡದೇಶಗಳ ಕೂಲಿಕಾರರ ಶೋಷಣೆ ಮಾಡುತ್ತಿದ್ದುದು ನಿಜವೆಂದು ಒಪ್ಪಿಕೊಂಡಿತು.

‘ಎಪಿ’ ಸಂಸ್ಥೆಯ ಈ ಸಾಹಸಕ್ಕೆ 2016ರ ಪುಲಿಟ್ಸರ್ ಚಿನ್ನದ ಪದಕ ಲಭಿಸಿತು. 1917ರಲ್ಲಿ ಜೋಸೆಫ್ ಪುಲಿಟ್ಸರ್ ಎಂಬ ಪತ್ರಕರ್ತನ ದತ್ತಿನಿಧಿಯಿಂದ ಆರಂಭವಾದ ಈ ಪ್ರಶಸ್ತಿ ಸರಣಿ ತನ್ನ ನೂರನೇ ವರ್ಷಕ್ಕೆ ಹೆಜ್ಜೆಯಿಡುತ್ತಲೇ ಮತ್ತೊಂದು ಪ್ರತಿಷ್ಠೆಯನ್ನು ಕೀರ್ತಿಕಿರೀಟಕ್ಕೆ ಏರಿಸಿಕೊಂಡಿತು. 

ಇಂಥ ಸಾರ್ಥಕ ಸಾಧನೆಗೆ ಪ್ರಶಸ್ತಿ ಬಂದಾಗ ಪ್ರಶಸ್ತಿಗೇ ಘನತೆ ಬಂತು ಎಂದು ನಾವು ವಾಡಿಕೆಯಂತೆ ಹೇಳುತ್ತೇವೆ. ಪುಲಿಟ್ಸರ್ ಪ್ರಶಸ್ತಿ ವಿಷಯ ಹಾಗಲ್ಲ. ನೊಬೆಲ್ ಪ್ರಶಸ್ತಿಯ ಹಾಗೆ ಎಲ್ಲೋ ನೂರರಲ್ಲೊಂದು ತುಸು ಎಡವಟ್ಟಾಗಿದ್ದು ಬಿಟ್ಟರೆ, ಅದಕ್ಕಿರುವ ಘನತೆ ಪತ್ರಿಕೋದ್ಯಮದ ಬೇರೆ ಯಾವ ಪ್ರಶಸ್ತಿಗೂ ಇಲ್ಲ.

ವರ್ಷದ ಯಾವುದೇ ದಿನವಾದರೂ ಅಪರೂಪದ ಆಘಾತಕಾರಿ ವರದಿಯೊಂದು ಅಮೆರಿಕದ ಯಾವುದೇ ಪತ್ರಿಕೆಯಲ್ಲಿ ಬಂದರೂ ‘ಇದಕ್ಕೆ ಪುಲಿಟ್ಸರ್ ಪ್ರಶಸ್ತಿ ಬಂದೇ ಬರುತ್ತದೆ ನೋಡಿ’ ಎಂದು ಬೆಟ್ ಕಟ್ಟುವ ಮಟ್ಟಿಗೆ ಅದು ತನ್ನ ಘನತೆಯನ್ನು ಕಾಯ್ದುಕೊಂಡಿದೆ. ಅಮೆರಿಕದ ಪ್ರಜೆಗಳಿಗೆ ಮಾತ್ರ ಸೀಮಿತವಾದ ಪ್ರಶಸ್ತಿ ಅದಾಗಿದ್ದರೂ ಕಳೆದ ನೂರು ವರ್ಷಗಳಲ್ಲಿ ಇಡೀ ಜಗತ್ತಿನ ಪತ್ರಿಕೋದ್ಯಮದ ಗುಣಮಟ್ಟ ಹೇಗಿರಬೇಕೆಂದು ಮೇಲ್ಪಂಕ್ತಿ ಹಾಕಿದ ಶ್ರೇಯ ಅದರದ್ದಾಗಿದೆ. ಪುಲಿಟ್ಸರ್ ಪ್ರಶಸ್ತಿ ಎಂದರೆ ಸಿನಿಮಾಕ್ಕೆ ‘ಆಸ್ಕರ್’ ಇದ್ದ ಹಾಗೆ, ಕಾದಂಬರಿಗೆ ‘ಬೂಕರ್’ ಪ್ರಶಸ್ತಿ ಇದ್ದ ಹಾಗೆ. ಎಲ್ಲ ದೇಶಗಳ ಪತ್ರಿಕೋದ್ಯಮದ ವಿದ್ಯಾರ್ಥಿಗಳೆಲ್ಲ ಮನನ ಮಾಡಬೇಕಾದ ವಿಷಯ ಅದು.

ಪುಲಿಟ್ಸರ್ ಪ್ರಶಸ್ತಿ ಕೇವಲ ಪತ್ರಿಕೋದ್ಯಮಕ್ಕಷ್ಟೇ ಸೀಮಿತವಾಗಿಲ್ಲ. ಒಟ್ಟೂ ಪ್ರತಿವರ್ಷ ನೀಡಲಾಗುವ 21 ಪ್ರಶಸ್ತಿಗಳಲ್ಲಿ ಕಥೆ/ಕವನದಂಥ ಸೃಜನಶೀಲ ಸಾಹಿತ್ಯಕ್ಕೆ 5 ಹಾಗೂ ನಾಟಕಕ್ಕೆ ಮತ್ತು ಸಂಗೀತಕ್ಕೆ ತಲಾ ಒಂದೊಂದು ಪ್ರಶಸ್ತಿ ಇದೆ. ಪತ್ರಿಕೋದ್ಯಮದ ವಿವಿಧ ಅಂಗಗಳಿಗೆ ಅಂದರೆ ಛಾಯಾಚಿತ್ರ, ವ್ಯಂಗ್ಯಚಿತ್ರ, ತನಿಖಾ ವರದಿ, ಸಂಪಾದಕೀಯ, ಸಂಪಾದಕೀಯ ವಿಶ್ಲೇಷಣೆ, ಸಂಪಾದಕೀಯ ವ್ಯಂಗ್ಯಚಿತ್ರ ಹೀಗೆ 14 ಪ್ರಶಸ್ತಿಗಳಿವೆ.

ಅವುಗಳಲ್ಲಿ ಎಲ್ಲಕ್ಕಿಂತ ಪ್ರತಿಷ್ಠಿತವೆನಿಸುವುದು ‘ಸಾಮಾಜಿಕ ಪರಿಣಾಮ’ ಬೀರಬಲ್ಲ ವರದಿಗೆ ಕೊಡುವ ಪುಲಿಟ್ಸರ್. ಈ ವರ್ಷ ‘ಎಪಿ’ ವಾರ್ತಾಸಂಸ್ಥೆಗೆ ಸಿಕ್ಕಿದ್ದು ಅದೇ.

ಅದು (ಎಪಿ) ಇದುವರೆಗೆ ಪತ್ರಿಕೋದ್ಯಮದ ವಿವಿಧ ವಿಭಾಗಗಳಲ್ಲಿ 52 ಪುಲಿಟ್ಸರ್ ಪ್ರಶಸ್ತಿಗಳನ್ನು ಪಡೆದಿದ್ದರೂ ಇದೇ ಮೊದಲ ಬಾರಿಗೆ ‘ಸಾಮಾಜಿಕ ಪರಿಣಾಮ’ಗಳ ವಿಭಾಗದ ಪದಕವನ್ನು ಪಡೆದಂತಾಯಿತು. 

ಈ ಪ್ರಶಸ್ತಿಗಳಿಗೆ ಹೇಳಿಕೊಳ್ಳುವಂಥ ನಗದು ಬಹುಮಾನ ಏನೂ ಇಲ್ಲ. ಕೆಲವು ವಿಭಾಗಗಳಲ್ಲಿ ಸಾವಿರ ಡಾಲರ್‌ಗಳ ಚಿಕ್ಕ ನಗದು ಬಹುಮಾನ. ಈಗ ಅದನ್ನು 10 ಸಾವಿರಕ್ಕೆ ಏರಿಸಲಾಗಿದೆ. ಸಾಮಾಜಿಕ ಪರಿಣಾಮಗಳ ವಿಭಾಗದಲ್ಲಿ ಮಾತ್ರ ಚಿನ್ನದ ಪದಕವನ್ನು ಮಾಧ್ಯಮ ಸಂಸ್ಥೆಗೆ (ವ್ಯಕ್ತಿಗಲ್ಲ) ನೀಡಲಾಗುತ್ತದೆ. ನಗದು ಮೊತ್ತ ಹೆಚ್ಚಿಲ್ಲದಿದ್ದರೂ ಪುಲಿಟ್ಸರ್ ಪ್ರಶಸ್ತಿ ಸಿಕ್ಕಿತೆಂದರೆ ಬಾಳು ಬಂಗಾರ, ಜನ್ಮ ಪುನೀತ ಎಂಬಂತೆ ಪ್ರತಿಯೊಬ್ಬ ಅಮೆರಿಕದ ಜರ್ನಲಿಸ್ಟೂ ಅದರ ಕನಸು ಕಾಣುತ್ತಾನೆ.ಪ್ರಶಸ್ತಿಗೆ ಪ್ರತಿಷ್ಠೆಯ ಮೆರುಗು ಕೊಡುತ್ತಾನೆ. 

ಪುಲಿಟ್ಸರ್ ಚಿನ್ನದ ಪದಕದ ಒಂದು ಮಗ್ಗುಲಲ್ಲಿ ಬೆಂಝಮಿನ್ ಫ್ರಾಂಕ್ಲಿನ್ ಮುಖ ಇದೆ. ಆತ ವಿಜ್ಞಾನಿ, ಪತ್ರಕರ್ತ, ಮುದ್ರಕ ಏನೆಲ್ಲ ಆಗಿ, ಅಮೆರಿಕದ ಅಧ್ಯಕ್ಷನೂ ಆಗಿ ರಾಷ್ಟ್ರಪಿತರ ಸಾಲಿಗೆ ಸೇರಿದವ. ಪದಕದ ಇನ್ನೊಂದು ಮಗ್ಗುಲಲ್ಲಿ ಬೆವರಿಳಿಸುವ ಮುದ್ರಕನ ಚಿತ್ರವಿದೆ. ಅದರ ಸುತ್ತ ಸಾರ್ವಜನಿಕ ಸೇವೆಗೆಂದೇ ನಿಸ್ವಾರ್ಥದ ಮತ್ತು ಪ್ರತಿಭಾನ್ವಿತ ಕೆಲಸ ಮಾಡಿದ ಅಮೆರಿಕದ... ಸುದ್ದಿಸಂಸ್ಥೆಗೆ ಇಸವಿ... ಯಲ್ಲಿ ನೀಡಲಾದ ಪದಕ ಎಂದು ಬರೆಯಲಾಗುತ್ತದೆ. ಅದು 24 ಕ್ಯಾರೆಟ್ ಚಿನ್ನದ ಲೇಪ ಮಾಡಿದ ಬೆಳ್ಳಿ ಪದಕ.

ಪ್ರಶಸ್ತಿ ಅಮೆರಿಕದ್ದಾದರೂ ಪುಲಿಟ್ಸರ್ ಮುದ್ರೆ ಬಿದ್ದಿದ್ದರಿಂದಾಗಿಯೇ ಬಹಳಷ್ಟು ಛಾಯಾಚಿತ್ರಗಳು, ವರದಿಗಳು ಜಗತ್ತಿನೆಲ್ಲೆಡೆ ಜನಮಾನಸದಲ್ಲಿ ಆಳವಾದ ಮುದ್ರೆ ಒತ್ತಿವೆ. ಕೆವಿನ್ ಕಾರ್ಟರ್ ಎಂಬ ಛಾಯಾಗ್ರಾಹಕ ತೆಗೆದ ಚಿತ್ರ ನೆನಪಿದೆ ತಾನೆ? 1992ರಲ್ಲಿ ಸುಡಾನ್ ದೇಶದ ಭೀಕರ ಕ್ಷಾಮದಲ್ಲಿ ಗಂಜಿಕೇಂದ್ರದ ಸಮೀಪ ಒಂದು ಪುಟ್ಟ ಹುಡುಗಿ ತೆವಳಲೂ ಆಗದ ಸ್ಥಿತಿಯಲ್ಲಿ ನೆಲಕ್ಕೆ ತಲೆಯೂರಿ ಕೂತಿದ್ದು? ಅವಳ ಸಾವನ್ನೇ ಪ್ರತೀಕ್ಷೆ ಮಾಡುವಂತೆ ರಣಹದ್ದೊಂದು ಅಲ್ಲೇ ಕೂತಿದ್ದು? ಅದಕ್ಕೆ ಪುಲಿಟ್ಸರ್ ಪ್ರಶಸ್ತಿ ಬಂತು. ಆದರೆ ಪ್ರಶಸ್ತಿ ಪಡೆದ ಕಾರ್ಟರ್‌ನ ಬದುಕು ಬಂಗಾರವಾಗಲಿಲ್ಲ, ಆ ವಿಷಯ ಬೇರೆ. ಕ್ಷಾಮದ ದಾರುಣ ನೆನಪುಗಳನ್ನು ಕಳಚಿಕೊಳ್ಳಲಾಗದ ಆತ ಅದೇ ವರ್ಷ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ.

ಖಿನ್ನತೆ ನಮ್ಮನ್ನೂ ಆವರಿಸುವಷ್ಟು ಹತ್ಯೆ, ದಾರುಣ ಸಾವು, ಕಗ್ಗೊಲೆ, ಭೀಕರ ಹಿಂಸೆಗಳ ಜಾಗತಿಕ ಸರಮಾಲೆಯೇ ಪುಲಿಟ್ಸರ್ ಪ್ರಶಸ್ತಿ ಪಡೆದ ಫೋಟೊಗಳ ಆಲ್ಬಮ್‌ನಲ್ಲಿದೆ. 20ನೇ ಶತಮಾನವೆಂದರೆ ಎರಡು ಮಹಾ ಯುದ್ಧಗಳ, ಮಹಾಕ್ರೌರ್ಯಗಳ ಮೆರವಣಿಗೆ ತಾನೆ? ಅಂಥ ಚಿತ್ರಗಳಿಗೆ ಪ್ರಶಸ್ತಿ ಸಿಕ್ಕಿದ್ದೇ ಕಾರಣವಾಗಿ ಚರಿತ್ರೆಯ ದಿಕ್ಕು ಬದಲಾಗಿದ್ದೂ ಇದೆ. 1972ರಲ್ಲಿ ವಿಯೆಟ್ನಾಮಿ ಯೋಧರು ಸಿಡಿಸಿದ ನೇಪಾಮ್ ಬಾಂಬಿನ ಜ್ವಾಲೆಗೆ ಸಿಕ್ಕು 9 ವರ್ಷದ ಹುಡುಗಿಯೊಬ್ಬಳ ಮೈಯೆಲ್ಲ ಬೆಂದು, ಆಕೆ ಕೂಗುತ್ತ ನಗ್ನವಾಗಿ ಧಾವಿಸಿ ಬರುತ್ತಿರುವ ಚಿತ್ರವನ್ನು ನೆನಪಿಸಿಕೊಳ್ಳಿ.

ನಡುರಸ್ತೆಯಲ್ಲಿ ನಿಂತು ಆ ಚಿತ್ರವನ್ನು ಸೆರೆಹಿಡಿದ ನಿಕ್ ಉಟ್ ಎಂಬಾತ ಜಾಗತಿಕ ಪ್ರಸಿದ್ಧಿ ಪಡೆದಿದ್ದಂತೂ ಆಯಿತು. ಆ ಚಿತ್ರವೇ ಯುದ್ಧಕ್ಕೆ ಪೂರ್ಣವಿರಾಮ ಹಾಕಲು ಕೂಡ ನೆರವಾಯಿತು. ಕಳೆದ 40 ವರ್ಷಗಳಿಂದ ಆ ಚಿತ್ರ ನಿರಂತರ ಸುದ್ದಿಯಲ್ಲೇ ಇದೆ. ಈಚೆಗೆ ನಿಕ್ಕ್ ಉಟ್‌ನ ಖಾತೆಯಲ್ಲಿದ್ದ ಆ ಚಿತ್ರವನ್ನು ‘ಫೇಸ್‌ಬುಕ್’ ತೆಗೆದು ಹಾಕಿತು. ಝಕರ್‌ಬರ್ಗ್‌ಗೆ ಸಖತ್ ಛೀಮಾರಿ ಬಿತ್ತು. ನಾರ್ವೆ ಪ್ರಧಾನಿಯೇ ಆ ಫೊಟೊವನ್ನು ತನ್ನ ಪುಟದಲ್ಲಿ ಹಾಕಿ ಪ್ರತಿಭಟಿಸಿದ ನಂತರ ಆ ಚಿತ್ರವನ್ನು ‘ಫೇಸ್‌ಬುಕ್’ ಸ್ವಸ್ಥಾನಕ್ಕೆ ಮರಳಿಸಿದ್ದೂ ಆಯಿತು.

‘ಸುದ್ದಿ ಫೊಟೊಗ್ರಫಿ’ ಎಂದರೆ ಸಮಯ ಪ್ರಜ್ಞೆ, ಅದೃಷ್ಟ, ಜೀವದ ಹಂಗು ತೊರೆದು ಅಪಾಯಕ್ಕೆ ಮೈಯೊಡ್ಡುವುದು ಎಂದೆಲ್ಲ ನಾವು ಹೇಳುತ್ತೇವೆ. ಅದಕ್ಕೆ ಕಲ್ಲು ಹೃದಯವೂ ಬೇಕು, ಕುಸುಮಕೋಮಲ ಮನಸ್ಸೂ ಬೇಕು. ಮೇಲಾಗಿ ಕ್ಯಾಮರಾದ ಶಟರ್ ಬಟನ್ ಬೆರಳ ತುದಿಯಲ್ಲೇ ಇದ್ದರೂ ದೃಶ್ಯವನ್ನು ಸೆರೆಹಿಡಿಯುವ ಕೋನದಲ್ಲಿ ಕಲಾತ್ಮಕತೆ ಇರಬೇಕು.

ನೆವಾಡೊದಲ್ಲಿ ಜ್ವಾಲಾಮುಖಿಗೆ ಸಿಕ್ಕಿ ಸತ್ತವನ ಚಿತ್ರ ಹೇಗಿತ್ತೆಂದರೆ, ಕೆಂಡದ ಧಾರೆಯಲ್ಲಿ ಆತ ಈಜುತ್ತಿರುವಂತೆ ಕೈ ಮಾತ್ರ ಕಾಣುತ್ತಿತ್ತು. ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಅಡ್ಲಾಯ್ ಸ್ಟೀವನ್ಸನ್ ಎಂಬಾತ ವೇದಿಕೆಯಲ್ಲಿ ಕಾಲಮೇಲೆ ಕಾಲು ಹಾಕಿ ಕೂತಿದ್ದಾಗ ಆತನ ಬೂಟಿನಲ್ಲಿ ರಂಧ್ರವಿದ್ದುದು ಛಾಯಾಗ್ರಾಹಕನಿಗೆ ಕಂಡಿತು.

ಇತರ ಫೊಟೊಗ್ರಾಫರ್‌ಗೆ ಗೊತ್ತಾಗದ ಹಾಗೆ ಆತ ಬೇರೆಲ್ಲೋ ನೋಡುತ್ತ ಕ್ಯಾಮರಾವನ್ನು ಇತ್ತ ತಿರುಗಿಸಿ ಕ್ಲಿಕ್ ಮಾಡಿದ್ದು ಪುಲಿಟ್ಸರ್ ಪ್ರಶಸ್ತಿಯನ್ನೇ ತಂದುಕೊಟ್ಟಿತು. 1963ರಲ್ಲಿ ಜಾನ್ ಕೆನ್ನಡಿಯನ್ನು ಕೊಂದ ಓಸ್ವಾಲ್ಡ್ ಎಂಬಾತನ ಕೈಗೆ ಬೇಡಿ ಹಾಕಿ ಒಯ್ಯುತ್ತಿದ್ದಾಗ, ಹೊಟೆಲ್ ಮಾಲಿಕ ಜಾಕ್ ರೂಬಿ ಎಂಬಾತ ಗುಂಡಿಡುವಾಗ ಕೇವಲ ಐದಡಿ ದೂರದಲ್ಲಿದ್ದ ಛಾಯಾಗ್ರಾಹಕ ಅದನ್ನು ಸೆರೆಹಿಡಿದ ಪರಿಯನ್ನು ನೋಡಬೇಕು.

ಇನ್ನು ಬೆಂಕಿ ಬಿದ್ದ ಮಹಡಿಮನೆಯ ಎತ್ತರದ ಬಾಲ್ಕನಿ ಕುಸಿದಾಗ ಬೀಳುತ್ತಿರುವ ತಾಯಿ ಮಗಳ ಚಿತ್ರವಂತೂ... ಬಿಡಿ, ಗಾಳಿಯನ್ನೇ ಹೆಪ್ಪುಗಟ್ಟಿಸಿ ಕಾಲಯಂತ್ರದಲ್ಲಿ ಇಟ್ಟಂತೆ. 

ಜೋಸೆಫ್ ಪುಲಿಟ್ಸರ್ ಸ್ವತಃ ಏನೂ ಮಹಾ ಸಂಭಾವಿತನಾಗಿರಲಿಲ್ಲ. ಆಲ್‌ಫ್ರೆಡ್ ನೊಬೆಲ್ ‘ಸಾವಿನ ದಲ್ಲಾಳಿ’ ಎಂಬ ಕುಹಕಪದಕ ಪಡೆದ ಹಾಗೆ ಪುಲಿಟ್ಸರ್ ಕೂಡ ‘ಪೀತ ಪತ್ರಿಕೋದ್ಯಮದ ಪಿತಾಮಹ’ ಎಂದೇ ಚರಿತ್ರೆಯಲ್ಲಿ ದಾಖಲಾಗಿದ್ದಾನೆ. ಆದರೆ ಗುಣಮಟ್ಟದ ಪತ್ರಿಕೋದ್ಯಮ ಅದೆಷ್ಟು ಅಗತ್ಯ ಎಂಬುದರ ಅರಿವು ಆತನಿಗಿತ್ತು. ಅದಕ್ಕೆಂದೇ ತನ್ನ ಜೀವಿತದ ಉಳಿತಾಯದ ಎರಡೂವರೆ ಲಕ್ಷ ಡಾಲರ್‌ಗಳನ್ನು ಈ ಪ್ರಶಸ್ತಿಗಳಿಗೆ ಮೀಸಲಿಟ್ಟ.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ಆರಂಭಿಸಬೇಕೆಂದೂ ಅಲ್ಲೇ ಈ ಪ್ರಶಸ್ತಿಗಳನ್ನು ನಿರ್ಧರಿಸಬೇಕೆಂದೂ ಉಯಿಲು ಬರೆದಿಟ್ಟ.ನೊಬೆಲ್‌ನಂತೆ ಇಷ್ಟೇ ಹಣ, ಇಷ್ಟೇ ಪದಕ ಎಂಬ ಬಿಗಿ ನಿಬಂಧನೆ ಇದಕ್ಕಿಲ್ಲ. ಹಾಗಾಗಿ ಮೂಲ ಐದು ಪ್ರಶಸ್ತಿಗಳ ಸಂಖ್ಯೆ ಬೆಳೆಯುತ್ತ ಈಗ 21ಕ್ಕೆ ತಲುಪಿದೆ.

ಹಾಗೆಯೇ ಒಬ್ಬರಿಗೆ ಒಂದೇ ಪ್ರಶಸ್ತಿ ಎಂದೇನೂ ಇಲ್ಲ. ಎರಡು ಮೂರು ಬಾರಿ ಪ್ರಶಸ್ತಿ ಪಡೆದವರು ಹಲವರಿದ್ದಾರೆ. ಯೂಜಿನ್ ಓನೀಲ್ ಎಂಬಾತ ನಾಲ್ಕು ಬಾರಿ (ನಾಲ್ಕನೆಯದು ಮರಣೋತ್ತರ) ಪುಲಿಟ್ಸರ್ ನಾಟಕ ಪ್ರಶಸ್ತಿ ಪಡೆದಿದ್ದಾನೆ. 

ನೂರು ವರ್ಷಗಳ ಅವಧಿಯ ಸಾವಿರಾರು ಪ್ರಶಸ್ತಿಗಳಲ್ಲಿ ಅಲ್ಲೊಂದು ಇಲ್ಲೊಂದು ಅಪಸ್ವರ ಇರಲೇಬೇಕಲ್ಲ? ಕೂತಲ್ಲೇ ಕಾಲ್ಪನಿಕವಾಗಿ ಪ್ರಚಂಡ ತನಿಖಾವರದಿಯನ್ನು ಸಿದ್ಧಪಡಿಸಿದ ಲೇಖಕಿಗೆ ಪ್ರಶಸ್ತಿ ಸಿಕ್ಕಿದೆ. ಅಂಥ ಎರಡು ಸಂದರ್ಭಗಳಲ್ಲಿ ಪ್ರಶಸ್ತಿಯನ್ನು ಮರಳಿ ಪಡೆಯಲಾಗಿದೆ. ‘ಗ್ರಾವಿಟಿ ರೇನ್‌ಬೊ’ ಕಥೆ ಪ್ರಶಸ್ತಿ ಪಡೆಯುವ ಮುನ್ನವೇ ಢಮಾರಾಗಿದೆ.

ಅರ್ನೆಸ್ಟ್ ಹೆಮಿಂಗ್ವೇಯ ಶ್ರೇಷ್ಠ ಕೃತಿಯನ್ನು ಕಡೆಗಣಿಸಿ ‘ಓಲ್ಡ್ ಮ್ಯಾನ್ ಅಂಡ್ ದ ಸೀ’ಗೆ ಪುಲಿಟ್ಸರ್ ಸಿಕ್ಕು, ಕೊನೆಗೆ ಅದಕ್ಕೆ ನೊಬೆಲ್ ಕೂಡ ಸಿಕ್ಕು ಆತನ ಇನ್ನೊಂದು ಕೃತಿ ‘ಫಾರ್ ಹೂಮ್ ದಿ ಬೆಲ್ ಟೋಲ್ಸ್’ ಮೂಲೆಗೆ ಸೇರಿತೆಂದು ಹೇಳುವವರೂ ಇದ್ದಾರೆ. ಇನ್ನು, ಪ್ರಶಸ್ತಿ ಪಡೆದ ಆರು ಕೃತಿಗಳು ನಂತರ ಕೃತಿಚೌರ್ಯದ ಆಪಾದನೆಗೆ ತುತ್ತಾಗಿವೆ.

ಕೆಲವು ಪ್ರಶಸ್ತಿಗಳು ನ್ಯಾಯಾಲಯಕ್ಕೂ ಹೋಗಿವೆ. ಅವೆಲ್ಲ ಇರಲಿ, ಪುಲಿಟ್ಸರ್‌ಗೆ ಇರುವ ಪ್ರತಿಷ್ಠೆಯೇ ಅಂಥ ಪ್ರಶಸ್ತಿಗಾಗಿ ಎಂಥವರೂ ಹಪಹಪಿಸುವಂತೆ ಮಾಡುತ್ತದಲ್ಲ. ಅದೇ ಆ ಪ್ರಶಸ್ತಿಯ ಮಾನದಂಡ ಎಂತಲೂ ಹೇಳಬಹುದು. ಆದರೆ ಪ್ರಶಸ್ತಿಯ ಪರಿವೆ ಇಲ್ಲದೆ ಕೆಲಸ ಮಾಡಿದ ಸಾಹಸಿಗಳ ಸಂಖ್ಯೆ ಎಷ್ಟೊಂದಿದೆ, ಅದು ನೆನಪಿದ್ದರೆ ಸಾಕು.

ಒಂದು ವರದಿಗಾಗಿ 18 ತಿಂಗಳು ಶ್ರಮಿಸಿದವರ ಕತೆ ಗೊತ್ತಾಗಿದೆ. ಒಂದು ವರದಿಗಾಗಿ 15 ವರ್ಷ ಶ್ರಮಿಸಿದ ಒಬ್ಬಂಟಿ ಮಹಿಳೆಯ ಬಗ್ಗೆ ಗೊತ್ತೆ? ಅಲ್ಬುಕರ್ಕೀ ಟ್ರೈಬ್ಯೂನ್ ಎಂಬ ಚಿಕ್ಕ ಪತ್ರಿಕೆಯ ವರದಿಗಾರ್ತಿ ಐಲೀನ್ ವೆಲ್ಸಮ್ 1980ರಲ್ಲಿ ಪ್ಲುಟೋನಿಯಂ ಬಾಂಬ್ ಫ್ಯಾಕ್ಟರಿಯ ಹಿತ್ತಲಿಗೆ ಹೋಗಿ ಕಸದ ಗೋದಾಮಿನ ಹಳೇ ಫೈಲುಗಳನ್ನು ತಡಕಾಡುತ್ತಿದ್ದಳು.

ಒಂದು ಕಡತದ ಮೂಲೆಯಲ್ಲಿ ಕಂಡ ಒಂದು ಸಣ್ಣಬರಹದ ಎಳೆ ಹಿಡಿದು ಶೋಧಕ್ಕೆ ಹೊರಟಳು. ಪ್ಲುಟೊನಿಯಂ ಎಂಬ ವಿಕಿರಣ ವಸ್ತು ಮನುಷ್ಯರ ಆರೋಗ್ಯಕ್ಕೆ ಎಷ್ಟರಮಟ್ಟಿಗೆ ಮಾರಕವೆಂದು ನೋಡಲೆಂದು ವಿಜ್ಞಾನಿಗಳು, ವೈದ್ಯರು ರಹಸ್ಯವಾಗಿ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಅದರ ಚುಚ್ಚುಮದ್ದು ನೀಡುವ ದಾಖಲೆಗಳೆಲ್ಲ ಒಂದೊಂದಾಗಿ, ನಿಧಾನವಾಗಿ ಸಿಗುತ್ತ ಹೋದವು. ಎಲ್ಲ ದಾಖಲೆಗಳನ್ನು ಸಂಗ್ರಹಿಸಿ 1995ರಲ್ಲಿ ಆಕೆ ನೀಡಿದ ವರದಿಗೆ ಇಡೀ ಅಮೆರಿಕವೇ ದಂಗಾಯಿತು. ಮಾರನೆ ವರ್ಷ ಆಕೆಗೆ ಪುಲಿಟ್ಸರ್ ಪ್ರಶಸ್ತಿ ಬಂತು. ನಂತರ ಇತರ ಪ್ರಶಸ್ತಿಗಳ ಸರಮಾಲೆಗಳೇ ಐಲೀನ್ ಕೊರಳಿಗೆ ಬಂದವು.

ಭಾರತೀಯ ಮೂಲದ ಐದು–ಆರು ಜನರಿಗೆ ಇದುವರೆಗೆ ಪುಲಿಟ್ಸರ್ ಪ್ರಶಸ್ತಿಗಳು ಬಂದಿವೆ. 1937ರಲ್ಲೇ ಗೋಬಿಂದ ಬೆಹಾರಿ ಲಾಲ್ ಎಂಬುವರ ವೈದ್ಯಕೀಯ ಲೇಖನಕ್ಕೆ ಪ್ರಶಸ್ತಿ ಸಿಕ್ಕಿದೆ. ಈಚಿನ ವರ್ಷಗಳಲ್ಲಿ ಝುಂಪಾ ಲಾಹಿರಿ (‘ಇಂಟರ್‌ಪ್ರಿಟರ್ ಆಫ್ ಮ್ಯಾಲಡೀಸ್’), ಗೀತಾ ಆನಂದ್ (‘ದಿ ಕ್ಯೂರ್’), ಸಿದ್ಧಾರ್ಥ ಮುಖರ್ಜಿ (‘ಎಂಪರರ್ ಆಫ್ ಮ್ಯಾಲಡೀಸ್’),  ಬೆಂಗಳೂರು ಮೂಲದ ವಿಜಯ್ ಶೇಷಾದ್ರಿ (‘ಥ್ರೀ ಸೆಕ್ಷನ್ಸ್’) ಪುಲಿಟ್ಸರ್ ಪಡೆದಿದ್ದಾರೆ.

ಅಸ್ಸಾಮಿ ಮೂಲದ ಸಂಘಮಿತ್ರ ಕಾಲಿತಾ (‘ಲಾಸ್ ಏಂಜಲೀಸ್ ಟೈಮ್ಸ್’ ಪತ್ರಿಕೆ ತನಿಖಾ ವರದಿ ತಯಾರಿಸಿದ ತಂಡದಲ್ಲಿದ್ದವರು) ಪ್ರಶಸ್ತಿಯಲ್ಲಿ ಪಾಲು ಪಡೆದಿದ್ದಾರೆ. ಸ್ವಾರಸ್ಯದ ಸಂಗತಿ ಎಂದರೆ ಜುಂಪಾ ಮತ್ತು ಮುಖರ್ಜಿ ಇಬ್ಬರ ಕೃತಿಯಲ್ಲೂ ವ್ಯಾಧಿಯೇ (ಮ್ಯಾಲಡೀಸ್) ಮೂಲವಸ್ತುವಾಗಿದೆ.

ಪುಲಿಟ್ಸರ್ ಪ್ರಶಸ್ತಿಗೆ ಅರ್ಹತೆ ಪಡೆಯಬಲ್ಲ ತನಿಖಾ ವರದಿಗಳು, ಕಾರ್ಟೂನುಗಳು, ಛಾಯಾಚಿತ್ರಗಳು, ಕಥೆ/ಕವನ/ ನಾಟಕಗಳು ನಮ್ಮಲ್ಲೂ ಸೃಷ್ಟಿಯಾಗುತ್ತಿರುತ್ತವೆ.

2008ರ ಚುನಾವಣೆ ಸಂದರ್ಭದಲ್ಲಿ ಉಡುಪಿಯ ಬಸ್ ಒಂದರಲ್ಲಿ ಒಂದು ಕಡೆ ಚಿಂದಿಬಟ್ಟೆಯವನೊಬ್ಬ ಭಿಕ್ಷೆಗೆ ಅಂಗಲಾಚುತ್ತ, ಅಲ್ಲೇ ಪಕ್ಕದಲ್ಲಿ ಸದಾನಂದ ಗೌಡರು ಮತಕ್ಕಾಗಿ ಅಂಗಲಾಚುವ ದೃಶ್ಯವನ್ನು ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಸೆರೆ ಹಿಡಿದಿದ್ದು, ಅಮೆರಿಕದ ಸಂದರ್ಭದಲ್ಲಾಗಿದ್ದರೆ ಪುಲಿಟ್ಸರ್ ಪ್ರಶಸ್ತಿ ಪಡೆಯುತ್ತಿತ್ತು (ಈ ಚಿತ್ರಕ್ಕೆ ದಿಲ್ಲಿಯ ಸಂಸ್ಥೆಯೊಂದು ಪ್ರಶಸ್ತಿ ನೀಡಿದೆ ಬಿಡಿ).

ಹಾಗೇ ಈಚೆಗೆ ಅಸ್ಸಾಂನ 31 ಬಡ ಆದಿವಾಸಿ ಎಳೆ ಹುಡುಗಿಯರನ್ನು ಪಾಲಕರಿಂದ ಬೇರ್ಪಡಿಸಿ ದೂರದ ಗುಜರಾತಿಗೆ ಒಯ್ದು ಅವರದಲ್ಲದ ಆಹಾರ, ಭಾಷೆ, ಸಂಸ್ಕೃತಿಯನ್ನು ಅವರಲ್ಲಿ ರೂಢಿಸುವ ವ್ಯೂಹವೊಂದನ್ನು ಭೇದಿಸಿದ ‘ಔಟ್‌ಲುಕ್’ ಪತ್ರಿಕೆಯ ವರದಿಗಾರ್ತಿ ನೇಹಾ ದೀಕ್ಷಿತ್‌ಗೆ ಪುಲಿಟ್ಸರ್‌ಗೆ ಸಮನಾದ ಪ್ರಶಸ್ತಿ ಸಿಗಬೇಕಿತ್ತು. ಆದರೆ ನಮ್ಮ ಪತ್ರಿಕೋದ್ಯಮದ ದೌರ್ಭಾಗ್ಯ ನೋಡಿ: ಆ ವರದಿಯನ್ನು ಪ್ರಕಟಿಸಿದ ಪತ್ರಿಕೆಯ ಸಂಪಾದಕ (ಕನ್ನಡಿಗ) ಕೃಷ್ಣ ಪ್ರಸಾದ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಪುಲಿಟ್ಸರ್‌ ಪ್ರಶಸ್ತಿಯ ಮಾನದಂಡ ಅಮೆರಿಕಕ್ಕಷ್ಟೇ ಅನ್ವಯವಾದರೆ ಸಾಕೆ?

***
ಸಂಕ್ಷಿಪ್ತವಾಗಿ ಬರೆಯಿರಿ – ಜನರಿಗೆ ಅದನ್ನು  ಓದಬೇಕೆನಿಸಬೇಕು
ಸರಳ ಭಾಷೆಯಲ್ಲಿ ಬರೆಯಿರಿ – ಓದಿದ್ದು ಜನರಿಗೆ ಅರ್ಥವಾಗಬೇಕು
ಕಣ್ಣಿಗೆ ಕಟ್ಟುವಂತೆ ಬರೆಯಿರಿ – ಓದಿದ್ದು ಮರೆಯದಂತಿರಬೇಕು
ಎಲ್ಲಕ್ಕಿಂತ ಮುಖ್ಯವೆಂದರೆ – ಸತ್ಯನಿಷ್ಠುರವಾಗಿ ಬರೆಯಿರಿ
ಅದರ ಪ್ರಭೆಯಿಂದಲೇ ಜನರಿಗೆ ಮಾರ್ಗದರ್ಶನ ಸಿಗಬೇಕು
 –ಜೋಸೆಫ್ ಪುಲ್ಲಿಟ್ಸರ್, 1916
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT