ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿನಲ್ಲಿ ಪತ್ತೆಯಾಗಿರುವುದು ರಿಯಲ್‌ ಎಸ್ಟೇಟ್‌ ಉದ್ಯಮಿ ನೀಡಿದ ಹಣ

ಸಚಿವರಿಗಾಗಿ ಕೋಟಿ ಹಣ: ಆರೋಪ
Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧ  ಆವರಣದೊಳಗೆ ಹೋಗುತ್ತಿದ್ದ ವಕೀಲ ಸಿದ್ದಾರ್ಥ್‌ ಹಿರೇಮಠ ಅವರ ಕಾರಿನಲ್ಲಿ ಪತ್ತೆಯಾದ ₹1.97 ಕೋಟಿ ನಗದನ್ನು ಪೊಲೀಸರು, 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಶನಿವಾರ ಒಪ್ಪಿಸಿದರು.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮೂಲದ ಸಿದ್ದಾರ್ಥ, ತಮ್ಮ ಫೋಕ್ಸ್‌ ವ್ಯಾಗನ್‌ ಕಾರಿನಲ್ಲಿ ಹಣವಿಟ್ಟುಕೊಂಡು ಮಧ್ಯಾಹ್ನ 1.35ಕ್ಕೆ ಗೇಟ್‌ ನಂಬರ್‌ 1ರ ಮೂಲಕ ವಿಧಾನಸೌಧದ ಆವರಣದೊಳಗೆ ಹೋಗುತ್ತಿದ್ದರು. ಈ ವೇಳೆ ಕಾರಿನ ತಪಾಸಣೆ ನಡೆಸಿದ ಭದ್ರತಾ ಸಿಬ್ಬಂದಿ, ₹1.97 ಕೋಟಿ ನಗದು ಜಪ್ತಿ ಮಾಡಿದ್ದರು.

ಕಾರಿನಲ್ಲಿದ್ದ ಬ್ಯಾಗ್‌ನಲ್ಲಿದ್ದ ಹಣವನ್ನು ಎಣಿಕೆ ಮಾಡಿದಾಗ ಅದರಲ್ಲಿ ₹1.97 ಕೋಟಿ ಇರುವುದು ಖಾತ್ರಿಯಾಗಿತ್ತು. ಅದೇ ಹಣವನ್ನು ಪೊಲೀಸರು, ನ್ಯಾಯಾಲಯದ ಸುಪರ್ದಿಗೆ ನೀಡಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ 8ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು,  ದಾಖಲೆ ನೀಡಿ ನಗದನ್ನು ವಾಪಸ್‌ ಪಡೆಯುವಂತೆ ಸಿದ್ದಾರ್ಥ್‌ ಅವರಿಗೆ ನೋಟಿಸ್‌ ನೀಡಿದರು. ಜತೆಗೆ ಆದಾಯ ತೆರಿಗೆ ಅಧಿಕಾರಿಗಳು ಸಹ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಹಣವನ್ನು ತಮ್ಮ ಸುಪರ್ದಿಗೆ ನೀಡುವಂತೆ ಕೋರಿದ್ದಾರೆ.

‘ಪತ್ತೆಯಾದ ಹಣಕ್ಕೆ ದಾಖಲೆಗಳಿಲ್ಲ.  ತೆರಿಗೆ ವಂಚಿಸಿದ ಹಣ ಇದಾಗಿದೆ ಎಂಬ ಅನುಮಾನವಿದೆ. ಹೀಗಾಗಿ ಹಣವನ್ನು ನಮಗೆ ನೀಡಬೇಕು. ಹಣದ ಮೂಲದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

‘ಹಣದ ಬಗ್ಗೆ ಹೇಳಿಕೆ ನೀಡಿರುವ ಸಿದ್ದಾರ್ಥ್‌, ಚಾಲುಕ್ಯ ವೃತ್ತದಲ್ಲಿ ಹೊಸ ಕಚೇರಿ ಖರೀದಿಸುವ ಉದ್ದೇಶದಿಂದ ಹಣವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದೆ ಎಂದಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ರಿಯಲ್‌ ಎಸ್ಟೇಟ್‌ ಉದ್ಯಮಿ ಗಫಾರ್‌ ಎಂಬುವರು ತಮ್ಮ ಕಕ್ಷಿದಾರರಾಗಿದ್ದು, ಅವರಿಂದ ₹1.25 ಕೋಟಿ ನಗದು ಹಾಗೂ ಸ್ನೇಹಿತ ರಾಜಣ್ಣ ಅವರಿಂದ ₹20 ಲಕ್ಷ ನಗದು ಪಡೆದುಕೊಂಡಿದ್ದೆ. ಮನೆಯಲ್ಲಿದ್ದ ಆಭರಣ ಮಾರಾಟ ಮಾಡಿ ಉಳಿದ ಹಣವನ್ನು ಹೊಂದಿಸಿದ್ದೆ. ಅದೇ ಹಣವನ್ನು ಕಾರಿನಲ್ಲಿಟ್ಟುಕೊಂಡು ಕಚೇರಿ ಇರುವ ಕಟ್ಟಡದ ಮಾಲೀಕರಿಗೆ ಕೊಡಲು ಹೋಗುತ್ತಿದೆ ಎಂದು ಸಿದ್ದಾರ್ಥ್‌ ಹೇಳಿಕೊಂಡಿದ್ದಾರೆ’.

‘ಹೈ–ಪಾಯಿಂಟ್‌ನಲ್ಲಿ ಕಚೇರಿಯೊಂದರ ಖರೀದಿ ಬಗ್ಗೆ ಸಿದ್ದಾರ್ಥ್‌, ಆ ಕಟ್ಟಡದ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದರು. ಹಣ ನೀಡುವುದೊಂದೇ ಬಾಕಿ ಇತ್ತು. ಈ ಬಗ್ಗೆ ಕಟ್ಟಡದ ಮಾಲೀಕರ ಹೇಳಿಕೆ ಪಡೆಯಲಾಗಿದೆ. ಜತೆಗೆ ಹಣದ ಮೂಲದ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ’ ಎಂದು ಹಿರಿಯ ಅಧಿಕಾರಿ ವಿವರಿಸಿದರು.

ಸಚಿವರಿಗಾಗಿ ಕೋಟಿ ಹಣ: ಆರೋಪ

ರಾಯಚೂರು: ‘ವಿಧಾನಸೌಧದ ಆವರಣದಲ್ಲಿ ಕಾರಿನಲ್ಲಿ ಪತ್ತೆಯಾದ ₹ 2 ಕೋಟಿ ಹಣವನ್ನು ಮೂರನೇ ಮಹಡಿಯಲ್ಲಿನ ಸಚಿವರಿಗೆ ಕೊಡಲು ತಂದಿದ್ದು. ಆ ಸಚಿವ ಯಾರು ಎನ್ನುವುದನ್ನು ಬಾಯಿ ಬಿಡದಂತೆ ನೋಡಿಕೊಳ್ಳಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯ ಸರ್ಕಾರ ದಿವಾಳಿಯಾಗುತ್ತಿದೆ. ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚಾಗಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ಇಂತಹ ಸಂದರ್ಭ ಟಿಪ್ಪು ಜಯಂತಿ ಆಚರಣೆಯು ಸಮಾಜದಲ್ಲಿ ಇನ್ನಷ್ಟು ಗೊಂದಲ ಉಂಟು ಮಾಡುತ್ತದೆ. ಆದ್ದರಿಂದ ಜಯಂತಿ ಆಚರಣೆಯನ್ನುಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ವಿ.ಶ್ರೀನಿವಾಸ ಪ್ರಸಾದ್‌ ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ. ಸಿ.ಎಂ.ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್‌ನ ಅನೇಕ ಶಾಸಕರು ಮತ್ತು ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ನ. 27ಕ್ಕೆ ನಡೆಯುವ ಹಿಂದುಳಿದ ವರ್ಗಗಳ ಮೋರ್ಚಾದ ಸಮಾವೇಶ|
ದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಸಮ್ಮುಖದಲ್ಲಿ ಅನೇಕ ಮುಖಂಡರು ಬಿಜೆಪಿ ಸೇರಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT