ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಕಬಡ್ಡಿ ವಿಶ್ವಕಪ್‌ನ ಹ್ಯಾಟ್ರಿಕ್‌

ಆತಿಥೇಯರ ಅತ್ಯುತ್ತಮ ಚೇತರಿಕೆಯ ಆಟ: ಮಿಂಚಿದ ಅಜಯ್‌ ಠಾಕೂರ್‌
Last Updated 22 ಅಕ್ಟೋಬರ್ 2016, 19:54 IST
ಅಕ್ಷರ ಗಾತ್ರ

ಅಹಮದಾಬಾದ್: ಭಾರತ ಸತತ ಮೂರನೇ ಸಲ ಕಬಡ್ಡಿ ವಿಶ್ವಕಪ್‌ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಟ್ರಾನ್ಸ್‌ ಸ್ಟೇಡಿಯಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತದ ಆಟಗಾರರು ಇರಾನ್‌ ತಂಡವನ್ನು 38–29ರಿಂದ ಸೋಲಿಸಿದರು.

ಆರಂಭದ ಕ್ಷಣದಿಂದಲೂ ಉಭಯ ತಂಡಗಳ ನಡುವೆ ಪೈಪೋಟಿ ಮೂಡಿ ಬಂದಿತು. ರೈಡಿಂಗ್‌ ಹೋದ ಸಂದೀಪ್‌ ನರ್ವಾಲ್‌ ಸುಮಾರು 15 ಸೆಕೆಂಡುಗಳ ಕಾಲ ಎದುರಾಳಿ ಆಂಗಣದಲ್ಲಿ ಪಾಯಿಂಟ್ ಗಳಿಕೆಗೆ ಯತ್ನ ನಡೆಸಿ ವಾಪಸು ಮಧ್ಯಗೆರೆಯತ್ತ ಹೆಜ್ಜೆಗಳನ್ನು ಇಡುವಂತೆ ನಟಿಸಿ ಏಕಾಏಕಿ ಹಿಂದಡಿ ಇಟ್ಟು ಫಜಲ್‌ ಅಟ್ರಾಚಲಿಯನ್ನು ಮುಟ್ಟಿ ಭಾರತದ ಪಾಯಿಂಟ್ಸ್‌ ಖಾತೆ ತೆರೆದರು.

ಆ ನಂತರ ದಾಳಿಗೆ ಬಂದ ಅಜಯ್‌ ಠಾಕೂರ್‌ ಮಿಂಚಿನ ವೇಗದಲ್ಲಿ ಅಬೊ ಜರ್‌ ಮಿಘಾನಿಯ ಹೆಗಲನ್ನು ತಟ್ಟಿ ಎರಡನೇ ಪಾಯಿಂಟ್ ಗಳಿಸಿದರು. ಆದರೆ 3ನೇ ನಿಮಿಷದಲ್ಲಿ ನಾಯಕ ಮೆರಾಜ್‌ ಷೇಕ್‌ ದಾಳಿಗಿಳಿದು ಬಲಅಂಚಿನಲ್ಲಿದ್ದ ಸಂದೀಪ್‌ ನರ್ವಾಲ್‌ ಗೆ ತಮ್ಮ ಕಾಲು ತಾಗಿಸಿ ಇರಾನ್‌ ಪರ ಮೊದಲ ಪಾಯಿಂಟ್‌ ಗಳಿಸಿದರು. ಆದರೆ 4ನೇ ನಿಮಿಷದಲ್ಲಿ ಪಾಯಿಂಟ್‌ ಗಳ ಅಂತರ 2–2ರಿಂದ ಸಮಗೊಂಡಿತು. ಮತ್ತೆ 5ನೇ ನಿಮಿಷದಲ್ಲಿ ಮಹಮ್ಮದ್‌ ಇಸ್ಮಾಯಿಲ್‌ ಮತ್ತು ಅಜಯ ಠಾಕೂರ್‌ ಯಶಸ್ವಿ ರೈಡಿಂಗ್‌ಗಳಿಂದ ಅಂತರ 3–3 ರಿಂದ ಸಮಗೊಂಡಿತು.

ನಂತರದ ಕ್ಷಣಗಳಲ್ಲಿ ರೈಡಿಂಗ್‌ ಹೋದ ಪ್ರದೀಫ್‌ ನರ್ವಾಲ್‌ನನ್ನು ಅಬೊಜರ್‌ ಮತ್ತು ಅಟ್ರಾಚಲಿ ಅತ್ಯುತ್ತಮವಾಗಿ ಬಲೆಗೆ ಕೆಡವಿದರೆ, ಅಜಯ್‌ ಠಾಕೂರ್‌ನನ್ನು ಹಿಡಿದರು. ಅದೇ ರೀತಿ ರೈಡರ್‌ ಮಹಮ್ಮದ್‌ ಇಸ್ಮಾಯಿಲ್‌ ಭಾರತದ ರಕ್ಷಣಾ ವ್ಯೂಹದೊಳಗೆ ಸಿಲುಕಿದರು. ಆಟ ಹೆಜ್ಜೆ ಹೆಜ್ಜೆಗೂ ರೋಚಕ ತಿರುವು ಪಡೆದುಕೊಂಡಿತು. 5ರಲ್ಲಿ, 6ರಲ್ಲಿ ಸ್ಕೋರು ಸಮಗೊಂಡಿತ್ತು.12ನೇ ನಿಮಿಷದಲ್ಲಿ ಅಂತರ 7–7ರಿಂದ ಸಮಗೊಂಡಿತು.

ಆದರೆ 13ನೇ ನಿಮಿಷದಲ್ಲಿ  ರೈಡಿಂಗ್‌ ಬಂದ ಮೆರಾಜ್‌ ಷೇಕ್‌ನನ್ನು ಹಿಡಿಯಲು ಉಪನಾಯಕ ಮಂಜಿತ್‌ ಚಿಲಾರ್‌ ಮತ್ತು ಸಂದೀಪ್‌ ನರ್ವಾಲ್‌ ಪಟ್ಟುಗಳನ್ನು ಹಾಕಲೆತ್ನಿಸುತ್ತಿದ್ದಂತೆಯೇ, ಮೆರಾಜ್‌ ಅವರ ಮೇಲಿಂದ ಜಿಗಿದು ಮಧ್ಯಗೆರೆ ತಲುಪಿ 2 ಪಾಯಿಂಟ್‌ಗಳನ್ನು ಇರಾನ್‌ ಖಾತೆಗೆ ಸೇರಿಸಿದರು. ಇರಾನ್‌ 9–7ರ ಮುನ್ನಡೆ ಗಳಿಸಿತು.

14ನೇ ನಿಮಿಷದಲ್ಲಿ ಅಜಯ್‌ ಠಾಕೂರ್‌ ಬದಲಿಗೆ ಮೋಹಿತ್‌ ಚಿಲಾರ್‌ ಆಡಲಿಳಿದರು. ಅದೇ ನಿಮಿಷದಲ್ಲಿ ರೈಡಿಂಗ್‌ ಬಂದ ಗೊಲಂಬಾಸ್‌ ಕರೌಕಿ ಯನ್ನು ಹಿಡಿದು ಹಾಕಿ ಭಾರತವನ್ನು ಆಲ್ಔಟ್‌ ಅಪಾಯದಿಂದ ಪಾರು ಮಾಡಿದರು. ಭಾರತ ಅಂತರವನ್ನು 9–10ಕ್ಕೆ ಇಳಿಸಿಕೊಂಡಿತು. ಆದರೆ ಮರು ನಿಮಿಷದಲ್ಲಿಯೇ ಮೆರಾಜ್‌ ಷೇಕ್‌ ರೈಡಿಂಗ್‌ನಲ್ಲಿ ಸುರೇಂದ್ರ ನಡ ಹೊರಗೆ ನಡೆದರು. ಇಂತಹ ಸಂದಿಗ್ಧದಲ್ಲಿ ‘ಏಕಾಂಗಿ’ ನಿತಿನ್‌ ತೋಮಾರ್‌ ರೈಡಿಂಗ್‌ ನಲ್ಲಿ ಸುಲೆಮಾನ್‌ ಪೆಹಲ್ವಿ ಹೊರ ಹೋದರು.

ಅಂತರ ಮತ್ತೆ 11–12ಕ್ಕೆ ಇಳಿಯಿತು. ಆದರೆ 18ನೇ ನಿಮಿಷದಲ್ಲಿ ಏಕಾಂಗಿ ನಿತಿನ್‌ ತೋಮಾರ್‌ ಇರಾನ್‌ ಚಕ್ರವ್ಯೂಹದೊಳಗೆ ಸಿಲುಕಿದ್ದರಿಂದ ಆ ತಂಡಕ್ಕೆ ಆಲ್‌ಔಟ್‌ ಪಾಯಿಂಟ್‌ ಸಿಕ್ಕಿ 16–12ರ ಮುನ್ನಡೆ ಗಳಿಸಿತು. ವಿರಾಮದ ವೇಳಗೆ ಇರಾನ್‌ 18–13ರ ಮುನ್ನಡೆ ಸಾಧಿಸಿ ಆತ್ಮವಿಶ್ವಾಸದಿಂದ ವಿಜೃಂಭಿಸಿತು. ಉತ್ತರಾರ್ಧದ ಆರಂ ಭದ ಕ್ಷಣಗಳಲ್ಲಿಯೂ ಮೆರಾಜ್‌ ದಾಳಿ ಯಲ್ಲಿ ಮಂಜಿತ್‌ ಚಿಲಾರ್‌ ಅಂಗಣದಿಂದ ಹೊರ ನಡೆದರು. ಇರಾನ್‌ 19–13ರ ಸುರಕ್ಷಿತ ಮುನ್ನಡೆಯಲ್ಲಿತ್ತು.

ಆಗ ಅಜಯ್‌ ಠಾಕೂರ್‌, ನಿತಿನ್‌ ಸೇರಿದಂತೆ ಆತಿಥೇಯ ತಂಡದ ರೈಡರ್‌ ಗಳ ಪರಿಣಾಮಕಾರಿ ದಾಳಿ ಮತ್ತು ಮಂಜಿತ್‌ ಸೇರಿದಂತೆ ರಕ್ಷಣಾ ಆಟಗಾ ರರ ಅತ್ಯುತ್ತಮ ರಕ್ಷಣಾ ಆಟವನ್ನು ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. 22ನೇ ನಿಮಿಷದಲ್ಲಿ 13–19 ರಿಂದ ಹಿಂದಿದ್ದ ಭಾರತ 29ನೇ ನಿಮಿಷದಲ್ಲಿ ಅಂತರವನ್ನು 20–20ರಿಂದ ಸಮ ಮಾಡಿಕೊಂಡಿತು. ಆ ನಂತರ ಭಾರತದ ಆಟಗಾರರು ಮೇಲುಗೈ ಸಾಧಿಸತೊಡಗಿದರು.

29ನೇ ನಿಮಿಷದಲ್ಲಿ ರೈಡಿಂಗ್‌ ಬಂದ ಫರಾದ್‌ನನ್ನು ಹಿಡಿದು ಹೊರ ಕಳಿಸುವ ಮೂಲಕ ಸ್ಕೊರು ಸಮ ಗೊಂಡಿತು. ಮತ್ತೆ ಅಜಯ್‌ ಠಾಕೂರ್‌ ದಾಳಿಯಲ್ಲಿ ಮೆರಾಜ್‌ ಹೊರ ಹೋಗ ಬೇಕಾಯಿತು.

30ನೇ ನಿಮಿಷದಲ್ಲಿ ‘ಏಕಾಂಗಿ’ ಅಬೊಲ್‌ ಫಜಲ್‌ ಹೋರಾಟ ವ್ಯರ್ಥಗೊಂಡಿತು. ಭಾರತಕ್ಕೆ ಆಲ್‌ಔಟ್‌ ಪಾಯಿಂಟ್‌ ಸಿಕ್ಕಿದ್ದರಿಂದ 24–21ರ ಮುನ್ನಡೆ ಪಡೆಯಿತು. ನಂತರ ಇರಾನ್‌ ಕಳಾಹೀನಗೊಂಡಿತು. ರಕ್ಷಣಾ ವ್ಯೂಹ ದುರ್ಬಲಗೊಂಡಿತು. ಮೆರಾಜ್‌ ಮಾತ್ರ ರೈಡಿಂಗ್‌ನಲ್ಲಿ ಗಮನ ಸೆಳೆಯ ತೊಡಗಿದ ರಷ್ಟೆ. ಕೊನೆಯ ಕ್ಷಣಗಳಲ್ಲಿ ದಾಳಿ ಗಿಳಿದ ಮೆರಾಜ್‌ನ ಬಲಗಾಲನ್ನು ಬಲವಾಗಿ ತಬ್ಬಿ ಹಿಡಿದ ಸುರ್ಜಿತ್‌ ಮುನ್ನಡೆಯನ್ನು 37–27ಕ್ಕೆ ಏರಿಸಿದರು.

ಭಾರತ 22ನೇ ನಿಮಿಷದಿಂದ ತೋರಿದ ಶ್ರೇಷ್ಠ ಮಟ್ಟದ ಚೇತರಿಕೆಯ ಆಟದಿಂದಾಗಿ ಕಬಡ್ಡಿ ಲೊಕದಲ್ಲಿ ತಾನಿ ನ್ನೂ ಪ್ರಬಲ ಶಕ್ತಿ ಎಂಬುದನ್ನು ಸಾಬೀತು ಪಡಿಸಿತು.

ಭಾರತದ ಅನುಭವಿಗಳ ಎದುರು ಇರಾನ್‌ ತತ್ತರ
‘ಭಾರತ ಅದ್ಭುತವಾದ ದೇಶ. ಕಬಡ್ಡಿಯ ತವರು. ಈ ದೇಶದ ಬಗ್ಗೆ ನನಗೆ ತುಂಬಾ ಪ್ರೀತಿ ಇದೆ.  ಪ್ರೊ ಕಬಡ್ಡಿಯಲ್ಲಿ ನನ್ನ ಅಭಿಮಾನಿಗಳು ತುಂಬಾ ಇದ್ದಾರೆ. ಭಾರತ ಅನುಭವಿ ಆಟಗಾರರ ಕಣಜ’ ಎಂದು ಇರಾನ್‌ ನಾಯಕ ಮೆರಾಜ್‌ ಷೇಕ್‌ ಪಂದ್ಯಕ್ಕೆ ಮೊದಲು ಹೇಳಿದ್ದರು. ಅದೇ ರೀತಿ ಉತ್ತರಾರ್ಧದಲ್ಲಿ ಭಾರತದ ಅನುಭವಿಗಳ ಎದುರು ಇರಾನ್‌ ಇನ್ನಿಲ್ಲದಂತೆ ಪರದಾಡಿತು.

‘ಥಾಯ್ಲೆಂಡ್‌ನಂತಹ ತಂಡವನ್ನು ಭಾರೀ ಅಂತರದಲ್ಲಿ ಸೋಲಿಸಿದ್ದೇವೆಂದು ನಾವು ಆತೀವ ಆತ್ಮವಿಶ್ವಾಸದಿಂದೇನಿಲ್ಲ. ಅವರಿಗೆ ಅನುಭವದ ಕೊರತೆ ಇತ್ತು. ಆದರೆ ಇರಾನ್‌ ತಂಡದಲ್ಲಿ ಪ್ರೊ ಕಬಡ್ಡಿ ಅನುಭವಿಗಳಿದ್ದಾರೆ. ಅವರ ಬಲಿಷ್ಠ ರಕ್ಷಣಾವ್ಯೂಹವನ್ನು ನಾವು ಹಿಂದಿಕ್ಕಿದರೆ ಗೆಲುವು ಸುಲಭ’ ಎಂದು ಭಾರತ ತಂಡದ ನಾಯಕ ಅನೂಪ್‌ ಕುಮಾರ್‌ ನುಡಿದಿದ್ದರು. ಇದೀಗ ಭಾರತದ ರೈಡರ್‌ಗಳು ಇರಾನ್‌ನ ಪ್ರಬಲ ರಕ್ಷಣಾ ಕೋಟೆಯನ್ನು ಒಡೆದು ವಿಶ್ವಕಪ್‌ ಎತ್ತಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT