ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡ್ತಾ ಹಾಡ್ತಾ ಆಯುಷ್ಯ

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘‘ಈಗ ಹಾಡಲಿಕ್ಕೆ ಶುರು ಹುಡುಗರು ರೆಕಾರ್ಡಿಂಗ್ ಮಾಡಿಕೋತಾರ. ನಲವತೈದು ವರ್ಷಗಳ ಹಿಂದೆ ನಾವು ಕಲಿಯುವಾಗ ನಮಗೆ ಇಂಥ ಅನುಕೂಲ ಇರಲಿಲ್ಲ.ಸಂಗೀತ ಕಲಿಯುವುದೆಂದರೆ ಗುರುಮುಖೇನ ಕಲಿಕೆ ಮಾತ್ರ. ಗುರುಗಳು ಹಾಡುತ್ತಿದ್ದರು.

ನಾವು ಹಾಡಿನ ಬೆನ್ನು ಹತ್ತುತ್ತಾ ಹೋಗಿ ಸಿಕ್ಕಷ್ಟನ್ನು ತಲೆಯೊಳಗಿಳಿಸಿ, ಕಂಠದಲ್ಲಿ ಹೊರಹೊಮ್ಮಿಸಿ ಮನದಲ್ಲಿ ತುಂಬಿಕೊಂಡು ಮನೆಗೆ ಬಂದು ಅವನ್ನೆಲ್ಲ ಮನನ ಮಾಡಿಕೊಳ್ಳುತ್ತಿದ್ದೆವು. ಮುಂದೆ ರಿಯಾಜ್ ರಿಯಾಜ್ ರಿಯಾಜ್.

ನಾಲ್ಕಾರು ತಾಸುಗಳು ಸತತವಾಗಿ ಅಭ್ಯಾಸ ಮಾಡುವುದು. ಮರುದಿನ ಯಾವಾಗ ಗುರುಗಳ ಮುಂದೆ ಹಾಡೇನಿ ಅನ್ನುವ ತಹತಹವಿರುತ್ತಿತ್ತು. ಸೂರ್ ಹಿಡಿದು ಲಯದ ಜೋಡಿ ಕಸರತ್ತು ಮಾಡುತ್ತಾ ಕಲಿತಿದ್ದನ್ನೆಲ್ಲ ಗುರುಗಳಿಗೊಪ್ಪಿಸಿ ಅವರಿಂದ ಶಹಭಾಸ್‌ಗಿರಿ ಸಿಕ್ಕರೆ ಸ್ವರ್ಗವೇ ಸಿಕ್ಕಂತೆನಿಸುತ್ತಿತ್ತು’’.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಕಂಪ್ಲಿ ನಮ್ಮೂರು. ಮಂಚಿಕೆರೆಯಲ್ಲಿ ಎಂಟನೇ ತರಗತಿ ಓದುತ್ತಿದ್ದೆ. ಹಾಸಣಗಿ ಗಣಪತಿ ಭಟ್ಟರ ಗಾಯನವನ್ನು ಒಮ್ಮೆ ಕೇಳಿದೆ. ಅಲ್ಲಿಯವರೆಗೆ ಹವ್ಯಕ ಹಾಡು–ಯಕ್ಷಗಾನದ ಹಾಡುಗಳನ್ನಷ್ಟೇ ಕೇಳಿದ ನನಗೆ ಹಿಂದೂಸ್ತಾನಿ ಸಂಗೀತ ಹೊಸದೆನಿಸಿತು ಅದೆಂಥ ಗುಂಗು ಹಿಡಿಯಿತೆಂದರೆ ನಾನೂ ಹೀಗೆ ಸಂಗೀತಗಾರನಾಗಬೇಕು ಎಂದು ನಿರ್ಣಯಿಸಿ ಶಾಲೆಗೆ ಹೋಗುವುದನ್ನು ಬಿಟ್ಟು ಗಣಪತಿ ಭಟ್ಟರ ಶಿಷ್ಯನಾದೆ! ಅವರು ಬಹಳ ಪ್ರೀತಿಯಿಂದ ಕಲಿಸಿದರು. ಎರಡು ವರ್ಷಗಳಲ್ಲಿ ಆಕಾಶವಾಣಿಯ ಧ್ವನಿಪರೀಕ್ಷಗೆ ಕುಳಿತು ಅನುಮೋದಿತ ಕಲಾವಿದನಾದೆ. 

ಧಾರವಾಡಕ್ಕೆ ಬರಲಾರಂಭಿಸಿದ ಮೇಲೆ ರಾಜಗುರುಗಳಲ್ಲಿ ಕಲಿಯಲಾರಂಭಿಸಿದೆ. ಅವರ ಮನೆ ಮಗನೇ ಆಗಿಹೋದೆ. ‘ಸುರ್ ಕಾ ಬಾದ್‌ಷಾ’ ಎಂದೇ ಪ್ರಸಿದ್ಧರಾದ ಅವರು ಹಾಡೋ ಶೈಲಿ ಅಗದೀ ಚೆಂದ. ಕಲಿಸುವ ವಿಷಯದಲ್ಲೂ ಅಷ್ಟೇ ಸಹೃದಯಿ. ಅಪಾರವಾದ ಶಾಸ್ತ್ರಜ್ಞಾನ, ಚೀಸುಗಳ ಸಂಗ್ರಹ ಅವರ ಬಳಿ ಇತ್ತು. ಎಷ್ಟು ಕಲಿಯುತ್ತೇನೆಂದರೂ ಕಲಿಸುವಷ್ಟು ಗೊತ್ತಿತ್ತು. ಒಂದೊಂದು ದಿನದ ಪಾಠವು ಒಂದೊಂದು ಅನುಭವ. ಅವರ ಜೊತೆಗೆ ಸಹಗಾಯನ ಮಾಡುತ್ತಿದ್ದೆ.

ಕಾರ್ಯಕ್ರಮಕ್ಕಿಂತ ಮೊದಲು ರಿಯಾಜ್ ಮಾಡುತ್ತಿದ್ದರು. ಆದರೆ ವೇದಿಕೆಯ ಮೇಲೇರಿದವರು ಪ್ರೇಕ್ಷಕರನ್ನು ನೋಡಿದ ಸ್ಫೂರ್ತಿಯಿಂದ ಬೇರೆಯೇ ಹುರುಪಿನಿಂದ ಹಾಡುತ್ತಿದ್ದರು. ಸಮಯೋಚಿತವಾಗಿ ಹಾಡುವುದು, ಪ್ರೇಕ್ಷಕರನ್ನು ರಂಜಿಸುವುದು... ಹೀಗೆ ಹಲವಾರು ವಿಷಯಗಳು ಅವರ ಜೋಡಿ ಹಾಡ್ತಾ ಹಾಡ್ತಾ ಅರ್ಥ ಆಗತಿದ್ವು.

ನನ್ನ ಜೀವನದ ಭಾಗ್ಯವೆಂದರೆ ಅವರ ಶಿಷ್ಯತ್ವ. 1986ನೇ ಇಸವಿ ಒಳಗ ಆಕಾಶವಾಣಿ ‘ನಿಲಯದ ಕಲಾವಿದ’ನಾಗಿ ಕೆಲಸ ಮಾಡೋ ಅವಕಾಶ ಸಿಕ್ಕಿತು.ಧಾರವಾಡದೊಳಗ ಮನೀ ಮಾಡಿದೆ. ಕಲಿಯುವುದರೊಂದಿಗೆ ಕಲಿಸಲೂ ಶುರು ಮಾಡಿದೆ. ನಮ್ಮೂರ ಕಡೆಯ ಎಷ್ಟೋ ಹುಡುಗರು ನಮ್ಮ ಮನೆಯಲ್ಲೇ ಇದ್ದು ಕ್ಲಾಸು ಹೇಳಿಸಿಕೊಂಡು ಹೋಗುತ್ತಿದ್ದರು.

ಶಿಷ್ಯರ ಬಳಗವೂ ಬೆಳೆಯಿತು. ಪ್ರವೃತ್ತಿಯಾದ ಸಂಗೀತ ವೃತ್ತಿಯೂ ಆಗಿದ್ದರಿಂದ ಇಡೀ ದಿನ ಸಂಗೀತದೊಂದಿಗೇ ಇರಲು ಸಾಧ್ಯವಾಯಿತು. ಸಂಗೀತದ ವಿಸ್ತಾರದರಿವೂ ಆಗಲಾರಂಭಿಸಿತು. ಸಾಹಿತ್ಯ–ಸಂಗೀತದ ಪುಸ್ತಕಗಳನ್ನು ಓದುತ್ತಿದ್ದೆ. ನಿರಂತರವಾದ ಸಂಗೀತದ ಅಧ್ಯಯನ ಅಧ್ಯಾಪನ ಬದುಕಾಗಿತ್ತು.

ಕಲಾರಸಿಕರು ನನ್ನನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಎಂದು ಗುರುತಿಸುವ ಹಾಗೆಯೇ ಸುಗಮಸಂಗೀತ ಕಲಾವಿದನೆಂದು, ಸಂಗೀತ ಸಂಯೋಜಕನೆಂದೂ ಗುರುತಿಸಲು ಕಾರಣವಾಗಿದ್ದು ಆಕಾಶವಾಣಿಯಿಂದಾಗಿ. ಹಲವಾರು ಸಂಗೀತ ಸಂಯೋಜಕರು ಕೂಡಿಸಿದ ಹಾಡುಗಳನ್ನು ರೇಡಿಯೋಕ್ಕಾಗಿ ಹಾಡಿದೆ. ಕ್ರಮೇಣ ನಾನೂ ಎಷ್ಟೋ ಹಾಡುಗಳ ಸಂಗೀತ ಸಂಯೋಜನೆ ಮಾಡಿದೆ, ಶಿಷ್ಯರು ಕಲಿತು ಹಾಡಿದ್ರು.

ಆಕಾಶವಾಣಿಯಲ್ಲಿ ಸಂಗೀತ ಸಂಯೋಜನೆ ಮಾಡಿದ ರೂಪಕಗಳಿಗೆ ರಾಷ್ಟ್ರಮಟ್ಟದ, ರಾಜ್ಯಮಟ್ಟದ ಪುರಸ್ಕಾರವೂ ಸಿಕ್ಕಿತು. ಸಂಗೀತಾಭಿಮಾನಿಗಳು ನಾನು ಸಂಗೀತ ಸಂಯೋಜನೆ ಮಾಡಿದ ‘ಶ್ರುತಿ ಸಂಜೀವಿನಿ’, ‘ದಿವ್ಯ ಸನ್ನಿಧಿ’, ‘ಪ್ರೇಮ ಸಂಗಮ’, ‘ವಚನ ವೈಭವ’ ಎಂಬ ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ.

ಏನನ್ನೇ ಹಾಡಿದರೂ ತಿಳಿದು ಹಾಡಬೇಕು. ಅದು ನಮಗೆ ಅರ್ಥವಾದರೆ ಮಾತ್ರ ನಾವು ಕೇಳುವವರಿಗೆ ಅರ್ಥ ಮಾಡಿಸಲು ಸಾಧ್ಯವಾಗುತ್ತದೆ ಕಾರ್ಯಕ್ರಮದಲ್ಲಿ ಹಾಡಲು ಅವಕಾಶ ಕೊಡಿ ಎಂದು ನಾನ್ಯಾರನ್ನೂ ಯಾವತ್ತೂ ಕೇಳಿದವನಲ್ಲ. ಆದರೆ ನನ್ನ ಹಾಡುಗಳನ್ನು ಕೇಳಿದವರು ಪ್ರೀತಿಯಿಂದ ಕರೆಸಿ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿಸಿದ್ದಾರೆ.

ಅದರಲ್ಲಿ ಗೋವಾದ ದೀನಾನಾಥ ಮಂಗೇಷ್ಕರ್ ಪುಣ್ಯತಿಥಿ, ಕುಂದಗೋಳದ ಸವಾಯಿ ಗಂಧರ್ವ ಪುಣ್ಯತಿಥಿ, ದಸರಾಉತ್ಸವ... ಹೀಗೆ ಲೆಕ್ಕವಿಲ್ಲದಷ್ಟು ಕಾರ್ಯಕ್ರಮದಲ್ಲಿ ಹಾಡಿರುವೆ. ಎಲ್ಲಿಯೂ ನನಗೊಂದು ಪ್ರಶಸ್ತಿ ಸಿಗಲಿ ಎಂದು ಅರ್ಜಿ ಹಾಕಲಿಲ್ಲ. ಆದರೂ ಅನೇಕ ಪ್ರಶಸ್ತಿಗಳು ಬಂದವು. ಬಾರದ ಪ್ರಶಸ್ತಿಗೆ ಹಂಬಲಿಸಿ ಕುಗ್ಗಲಿಲ್ಲ, ಬಂದ ಪ್ರಶಸ್ತಿಗೆ ಹಿಗ್ಗಲಿಲ್ಲ. ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಹಾಡುವುದನ್ನು ಬಿಡಲಿಲ್ಲ.

ಪತ್ನಿ ನಾಗವೇಣಿ ವಸಂತ ಕನಕಾಪುರರಲ್ಲಿ ಕಲಿತು ನನಗೆ ಹಾರ್ಮೋನಿಯಂ ಸಾಥ್ ನೀಡುತ್ತಾಳೆ. ಪುಟ್ಟ ಮನೆಯಲ್ಲಿ ಬಾಡಿಗೆಗೆ ಇರತಿದ್ವಿ. ಇಡೀ ದಿನ ಸಂಗೀತ ಕ್ಲಾಸುಗಳು ನಡೆಯುತ್ತಿದ್ದರೂ ನಮಗ ಓದಲು ಕಷ್ಟವಾಗುತ್ತದೆ ಎಂಬ ಯಾವ ರೀತಿಯ ತಕರಾರು ಹೇಳದೆ, ಮಕ್ಕಳಿಬ್ಬರೂ ಎಂಜಿನಿಯರಿಂಗ್ ಪದವಿ ಮುಗಿಸಿದರು.

ಎರಡನೆಯ ಮಗ ವಿಶಾಲ್ ವೃತ್ತಿಯಲ್ಲಿ ಎಂಜಿನಿಯರ್ ಆದರೂ ಭರವಸೆಯ ಕಲಾವಿದನಾಗಿ ಬೆಳೆಯುತ್ತಿದ್ದಾನೆ. ಮನೆ ತುಂಬಿದ ಸೊಸೆಯರಿಬ್ಬರೂ ಹಾಡುತ್ತಾರೆ.ಪುಟ್ಟ ಮೊಮ್ಮಗನೂ ಹಾಡುತ್ತಾನೆ. ಸಂಗೀತಮಯ ಸಂಸಾರ ನಮ್ಮದು. ನನಗೀಗ ಅರವತ್ತು ವರ್ಷ. ಸಂಗೀತಪ್ರೀತಿಯಲ್ಲಿ ದಿನಕಳೆದಿದ್ದೇ ಗೊತ್ತಾಗಲಿಲ್ಲ ಎಂದುಕೊಳ್ಳುತ್ತೇನೆ. ಬೇಂದ್ರೆಯವರ ಹಾಡು ಗುನುಗ ಬೇಕೆನಿಸುತ್ತದೆ – ‘ಕೊಡುವುದೇನು ಕೊಂಬುದೇನು ಒಲವು ಸ್ನೇಹ ಪ್ರೇಮಾ...’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT