ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ ಭೂಮಿಯಲ್ಲಿ ಸೆರೆಹಿಡಿದ ಕಥೆಗಳು!

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಕಾಶ್ಮೀರದ ಆ ಕಣಿವೆಯಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಬಿಳಿ ಕಂಬಳಿಯಂತೆ  ಹರಡಿಕೊಂಡಿತ್ತು ಹಿಮದ ರಾಶಿ. ಹತ್ತಿಯನ್ನು ಹಿಂಜಿ ಗಾಳಿಯಲ್ಲಿ ತೇಲಿ ಬಿಟ್ಟಂತೆ ಒಂದೇ ಸಮನೆ ಆಗುತ್ತಿದ್ದ ಹಿಮಪಾತ ಶಿಶಿರದ ಆಗಮನವನ್ನು ಸಾರುತ್ತಿತ್ತು. ಎಲೆಗಳನ್ನೆಲ್ಲ ಉದುರಿಸಿಕೊಂಡು ಬೆತ್ತಲಾಗಿದ್ದ ಚೀನಾರ್‌ ಮರಗಳು ಅಲ್ಲಿ ನಡೆದ ಯುದ್ಧಕ್ಕೆ ಮೂಕ ಸಾಕ್ಷಿಯಾಗಿ ನಿಂತಿದ್ದವು...’

ದೇಶದ ವಿರಳ ಯುದ್ಧ ಇತಿಹಾಸಕಾರರಲ್ಲಿ ಒಬ್ಬರಾದ ಏರ್‌ ವೈಸ್‌ ಮಾರ್ಷಲ್‌ ಅರ್ಜುನ್‌ ಸುಬ್ರಮಣಿಯಮ್‌ ತಮ್ಮ ಇಂತಹ ಅನನ್ಯ ಕಥನಶೈಲಿಯಿಂದ ಸೀದಾ ಯುದ್ಧಭೂಮಿಗೇ ಕರೆದೊಯ್ದುಬಿಡುತ್ತಾರೆ. ಭಾರತೀಯ ಯುದ್ಧೇತಿಹಾಸದ ಕುರಿತಂತೆ ನಮಗಿರುವ ಕುತೂಹಲವನ್ನು ಅವರ ‘ಇಂಡಿಯಾಸ್‌ ವಾರ್‌್ಸ: ಎ ಮಿಲಿಟರಿ ಹಿಸ್ಟರಿ 1947–1971’ (ಪ್ರಕಾಶಕರು: ಹಾರ್ಪರ್‌ ಕಾಲಿನ್ಸ್‌) ಕೃತಿ ಬಹುಮಟ್ಟಿಗೆ ತಣಿಸುತ್ತದೆ. ನೈಜ ಹೀರೊಗಳಾದ ವೀರ ಸೇನಾನಿಗಳ ಸಾಹಸದ ಕಥೆಗಳು ಮೈನವಿರೇಳಿಸುವಂತೆ ಮಾಡುತ್ತವೆ.

‘ಇಂಡಿಯಾಸ್‌ ವಾರ್‌್ಸ’ ಕೃತಿಯ ಬಿಡುಗಡೆ ಸಮಾರಂಭ ‘ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌’ ಸಹಯೋಗದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಆಗ ಅವರೊಂದಿಗೆ ಹರಟುವ ಅವಕಾಶವನ್ನು ಕಳೆದುಕೊಂಡ ಬೇಸರ ಕೆಲವೇ ಕ್ಷಣಗಳಲ್ಲಿ ಮಾಯವಾಯಿತು. ಏಕೆಂದರೆ, ಅವರು ಎದುರಿಗೆ ಕುಳಿತು ಹರಟೆ ಹೊಡೆಯುವಂತೆಯೇ ಮೊಬೈಲ್‌ನಲ್ಲಿ ಚರ್ಚೆಗೆ ಸಿಕ್ಕರು. ಇ–ಮೇಲ್‌ ಪ್ರಶ್ನೆಗಳಿಗೂ ಉತ್ತರ ಕಳುಹಿಸಿದರು.

ಸ್ವತಂತ್ರ ಭಾರತದ ಮೊದಲ ಯುದ್ಧದ ಕಥೆಯನ್ನು ಅವರ ಮಾತುಗಳಲ್ಲೇ ಕೇಳಬೇಕು: ‘ವಸಾಹತುಶಾಹಿ ಆಡಳಿತದ ಪೊರೆ ಕಳಚಿಕೊಂಡು ಆಗಷ್ಟೇ ಹೊರಬಂದಿದ್ದ ಭಾರತಕ್ಕೆ ಬಿಸಿರಕ್ತದ ತನ್ನ ಮಿಲಿಟರಿ ಶಕ್ತಿಯ ಅನಾವರಣ ಮಾಡಲು 1947–48ರಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸಮರವೇ ವೇದಿಕೆಯಾಯಿತು.

ಬಹು ಸಂಸ್ಕೃತಿಯ, ಬಹು ಜನಾಂಗೀಯ, ಬಹು ಭಾಷಿಕ ತೊರೆಗಳಿಂದ ತುಂಬಿಹೋಗಿದ್ದರೂ ನಮ್ಮ ಸೇನೆ ಸಾಗರದಂತೆ ಏಕತ್ರವಾಗಿತ್ತು. ಹೌದು, ಈ ಸೇನೆಯ ನಾಯಕತ್ವ ವಹಿಸಿದವರು ನಮ್ಮ ಕೊಡಗಿನ ಮಣ್ಣಿನ ಮಕ್ಕಳಾದ ಮೇಜರ್‌ ಜನರಲ್‌ ತಿಮ್ಮಯ್ಯ ಹಾಗೂ ಲೆಫ್ಟಿನೆಂಟ್‌ ಜನರಲ್‌ ಕಾರ್ಯಪ್ಪ!

‘ಮುಸ್ಲಿಂ ಜನಾಂಗವೇ ಹೆಚ್ಚಾಗಿದ್ದ ಈ ಪ್ರಾಂತ್ಯದಲ್ಲಿ ಮೊದಲು ಹೋರಾಟಕ್ಕೆ ಧುಮುಕಿದ್ದು ಸಿಖ್‌ ರೆಜಿಮೆಂಟ್‌. ಯುದ್ಧಭೂಮಿಯಲ್ಲಿ ಮುಂದೆ ನಿಂತು ಕಾದಾಡಿದ ಲೆಫ್ಟಿನೆಂಟ್‌ ಡೇವಿಡ್‌ ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದವರಾದರೆ, ಪೂಂಚ್‌ ವಿಭಾಗದಲ್ಲಿ ವೀರಾವೇಶದಿಂದ ಹೋರಾಡಿದ ಮೇಜರ್‌ ಮಾರಿಸ್‌ ಕೊಹನ್‌ ಒಬ್ಬ ಯೆಹೂದಿ. ಜಿನ್ನಾ ಅವರಿಂದ ನೇರ ಆಹ್ವಾನ ಬಂದರೂ ತಿರಸ್ಕರಿಸಿ ಭಾರತದ ಪರವಾಗಿ ಶಸ್ತ್ರ ಹಿಡಿದು ನಿಂತ ಬ್ರಿಗೇಡಿಯರ್‌ ಉಸ್ಮಾನ್‌, ಸ್ಕ್ವಾಡ್ರನ್‌ ಲೀಡರ್‌ ಜಾಫರ್‌ ಷಾ ಮುಸ್ಲಿಮರು. ಮೈಕ್‌ ಬ್ಲೇಕ್‌ ಅವರಂತಹ ಆಂಗ್ಲೊ–ಇಂಡಿಯನ್ನರು, ಮೀನೂ ಎಂಜಿನಿಯರ್‌ ಅವರಂತಹ ಪಾರ್ಸಿಗಳು ನಮ್ಮ ಸೇನೆಯಲ್ಲಿದ್ದರು.

‘ಸುರಿಯುವ ಹಿಮದಲ್ಲೂ ಜೋಜಿಲಾ ಟ್ರ್ಯಾಕ್‌ ನಿರ್ಮಾಣ ಮಾಡಿದವರು ಮೇಜರ್‌ ತಂಗರಾಜು ನೇತೃತ್ವದ ಮದ್ರಾಸ್‌ ಎಂಜಿನಿಯರಿಂಗ್‌ ರೆಜಿಮೆಂಟ್‌ನ ಸೇನಾನಿಗಳು. ಈ ‘ತಂಬಿ’ಗಳು (ತಂಬಿ=ಕಿರಿಯ ಸಹೋದರ; ದಕ್ಷಿಣ ಭಾರತದ ಸೈನಿಕರಿಗೆ ಸೇನೆಯಲ್ಲಿರುವ ಪ್ರೀತಿಯ ಹೆಸರು) ಅದುವರೆಗೆ ಜೀವನದಲ್ಲಿ ಒಮ್ಮೆಯೂ ಹಿಮಪಾತವನ್ನೇ ನೋಡಿರಲಿಲ್ಲ. ಈ ಯುದ್ಧದಲ್ಲಿ ಕುಮಾವೊ, ಗೂರ್ಖಾ, ಜಾಟ್‌, ದೋಗ್ರಾ, ಮರಾಠ, ರಜಪೂತ್‌, ಲಡಾಖ್‌, ಮಹರ್‌, ಗದ್ವಾಲ್‌ ಮತ್ತು ಕೊಡವ ಸೇನಾನಿಗಳು ಕೆಚ್ಚೆದೆಯಿಂದ ಹೋರಾಡಿದರು...’ – ಅರ್ಜುನ್‌ ಅವರ ಈ ವಿವರಣೆ ಕೇಳುತ್ತಾ ಹೋದಂತೆ ಕಾಲ ಸರ್ರನೆ ಆರೂವರೆ ದಶಕಗಳ ಹಿಂದೆ ಸರಿಯುತ್ತದೆ. ಹೃದಯ ಬೆಚ್ಚಗಾಗುತ್ತದೆ.

ಭಾರತೀಯ ಸೇನಾನಿಗಳ ಸಾಹಸದ ಕಥೆಗಳನ್ನು ಕಟ್ಟಿಕೊಡುತ್ತಲೇ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ಕದನವಿರಾಮ ಘೋಷಿಸಿ, ಕಾಶ್ಮೀರದ ಭೂಭಾಗ ಕಳೆದುಕೊಂಡ ವಿಷಾದದ ಸಂಗತಿಯನ್ನೂ ಅವರು ತೆರೆದಿಡುತ್ತಾರೆ. ‘ಪಾಕಿಸ್ತಾನದ ನುಸುಳುಕೋರರಿಗೆ ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆ ತಕ್ಕ ಉತ್ತರವನ್ನೇ ನೀಡಿತ್ತು. ಅಲ್ಲದೆ, ಪಾಕ್‌ ಸೇನೆಯನ್ನು ಹಿಮ್ಮೆಟ್ಟಿಸಿತ್ತು.

ಮೌಂಟ್‌ಬೆಟನ್‌ ಅವರು ಜವಾಹರಲಾಲ್‌ ನೆಹರೂ ಹಾಗೂ ಪಾಕಿಸ್ತಾನದ ರಾಜಕೀಯ ನಾಯಕರ ಮನವೊಲಿಸಿ 1948ರ ಡಿಸೆಂಬರ್‌ 31ರಂದು ಕದನವಿರಾಮ ಘೋಷಿಸುವಂತೆ ಮಾಡಿದರು. ಪಾಕ್‌ ಆಕ್ರಮಿತ ಕಾಶ್ಮೀರದಿಂದ ಅಲ್ಲಿನ ಸೇನೆ ಹಿಂದೆ ಸರಿಯುವ ಭರವಸೆಯನ್ನೂ ನೀಡಲಾಗಿತ್ತು. ಆದರೆ, ಕಾಶ್ಮೀರ ಕಣಿವೆ ಹಾಗೂ ಜಮ್ಮು ಪ್ರಾಂತ್ಯದ ಉತ್ತರದ ಬಹುಭಾಗ ಪಾಕ್‌ ಹಿಡಿತದಲ್ಲೇ ಉಳಿಯಿತು. ಈಗಲೂ ಆ ದೇಶದ ವಶದಲ್ಲೇ ಇರುವ ಈ ಭೂಭಾಗದಿಂದಲೇ ನಮ್ಮ ರಾಷ್ಟ್ರ ತಲೆನೋವು ಎದುರಿಸಬೇಕಾಗಿದೆ’ ಎಂದು ವಿವರಿಸುತ್ತಾರೆ.

‘ಕದನವಿರಾಮ ಘೋಷಿಸದೆ ಸೇನೆಗೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದಲ್ಲಿ ಇಂದಿನ ಜಮ್ಮು–ಕಾಶ್ಮೀರದ ನಕ್ಷೆಯೇ ಬೇರೆ ಆಗಿರುತ್ತಿತ್ತು ಎನ್ನುವುದು ಪಾಕ್‌ ವಿರುದ್ಧದ ಯುದ್ಧದಲ್ಲಿ ತೊಡಗಿದ್ದ ಬಹುತೇಕ ಹಿರಿಯ ಕಮಾಂಡರ್‌ಗಳ ಅಭಿಪ್ರಾಯವಾಗಿತ್ತು’ ಎನ್ನುತ್ತಾರೆ ಅರ್ಜುನ್‌.

‘1962ರಲ್ಲಿ ಚೀನಾ ಸಾರಿದ ಯುದ್ಧದಲ್ಲಿ ನಾವು ಪರಾಜಯ ಅನುಭವಿಸಿದೆವು. ಆ ಸೋಲಿನಲ್ಲಿ ನಮ್ಮ ಸೈನ್ಯಕ್ಕೆ ಹಲವು ಪಾಠಗಳಿದ್ದವು. ಆದರೆ, 1965ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧವು ಭಾರತೀಯ ಸಶಸ್ತ್ರ ಪಡೆಗಳ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲು. ಕಾಶ್ಮೀರವನ್ನು ವಶಕ್ಕೆ ಪಡೆಯಲು ಯತ್ನಿಸಿದ ಪಾಕಿಸ್ತಾನಕ್ಕೆ ನಾವು ತಕ್ಕ ಪಾಠವನ್ನೇ ಕಲಿಸಿದ್ದೆವು.

ಅದೇ ದೇಶದ ವಿರುದ್ಧ 1971ರಲ್ಲಿ ನಡೆದ ಯುದ್ಧವು ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಒಂದು ಸುವರ್ಣ ಅಧ್ಯಾಯ. ಏಕೆಂದರೆ, ಈ ಯುದ್ಧ ಪೂರ್ವ ಪಾಕಿಸ್ತಾನದಲ್ಲಿ ಶತ್ರುಸೇನೆಯನ್ನು ಬಗ್ಗುಬಡಿದ್ದರಿಂದ ಬಾಂಗ್ಲಾದೇಶದ ಉದಯವಾಯಿತು. ಪಾಕಿಸ್ತಾನದ 93 ಸಾವಿರ ಸೈನಿಕರನ್ನು ಯುದ್ಧ ಕೈದಿಗಳನ್ನಾಗಿ ಸೆರೆಹಿಡಿಯಲಾಗಿತ್ತು.

ಭೂಸೇನೆ, ವಾಯುಪಡೆ ಮತ್ತು ಜಲಪಡೆಗಳು ಒಟ್ಟಾಗಿ ಮಾಡಿದ ಯುದ್ಧ ಇದಾಗಿತ್ತು’ ಎಂದು ಚರಿತ್ರೆಯನ್ನು ಕಟ್ಟಿಕೊಡುತ್ತಾರೆ ಈ ಏರ್‌ ವೈಸ್‌ ಮಾರ್ಷಲ್‌.ಅರ್ಜುನ್‌ ಅವರು ಯುದ್ಧಚರಿತ್ರೆಯ ಪುಸ್ತಕಕ್ಕೆ ಆಯ್ದುಕೊಂಡ ಕಾಲಘಟ್ಟ 1947–1971. ಈ ಅವಧಿಯಲ್ಲಿ ಹೈದರಾಬಾದ್‌ ನಿಜಾಮರನ್ನು ಮಣಿಸಿ, ಆ ಪ್ರಾಂತ್ಯವನ್ನು ದೇಶದಲ್ಲಿ ಐಕ್ಯಗೊಳಿಸಿದ್ದು (1948) ಕೂಡ ಸೇನೆಯೇ. ಪೋರ್ಚುಗೀಸರ ವಿರುದ್ಧ ಮೂರೂ ಪಡೆಗಳು ಹೋರಾಡಿದ ಪರಿಣಾಮ ‘ಗೋವಾ ವಿಮೋಚನೆ’ (1961) ಸಾಧ್ಯವಾಯಿತು. ಎರಡೂವರೆ ದಶಕಗಳ ಯುದ್ಧ ಇತಿಹಾಸದ ದಾರಿಯಲ್ಲಿ ಈ ಘಟನಾವಳಿಗಳು ಸಹ ಹಾದುಹೋಗುತ್ತವೆ.

ಅಂದಹಾಗೆ, ಅರ್ಜುನ್‌ ಅವರು ನಮ್ಮವರು, ನಮ್ಮ ಬೆಂಗಳೂರಿನವರು. 1973ರಲ್ಲೇ ಅವರ ಕುಟುಂಬ ಇಲ್ಲಿಯೇ ನೆಲೆ ಕಂಡುಕೊಂಡಿದೆ. ಜಯನಗರದಲ್ಲಿ ಅವರ ಮನೆಯಿದೆ. ಆದರೆ, ಮಿಲಿಟರಿ ಶಾಲೆಗೆ ಸೇರಿದ್ದರಿಂದ ಅವರಿಗೆ ಬೆಂಗಳೂರಿನಲ್ಲಿ ಕಲಿಯುವ ಅವಕಾಶ ಸಿಗಲಿಲ್ಲ. ‘ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ’ಯಲ್ಲಿ ಉನ್ನತ ವ್ಯಾಸಂಗ ನಡೆಸಿದ ಅವರು, ಸೇನಾ ಕುಟುಂಬದ ಕಾಯಂ ಸದಸ್ಯರಾದರು. ರಕ್ಷಣಾ ಕ್ಷೇತ್ರದಲ್ಲಿ ಆಳವಾದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಅವರು, ಯುದ್ಧತಂತ್ರ ವಿಷಯದಲ್ಲಿ ಪಿಎಚ್‌.ಡಿ ಕೂಡ ಪಡೆದಿದ್ದಾರೆ. ಸದ್ಯ ನವದೆಹಲಿಯ ‘ನ್ಯಾಷನಲ್‌ ಡಿಫೆನ್ಸ್‌ ಕಾಲೇಜ್’ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಕನ್ನಡದ ತರಾಸು ಅವರಂತೆ ಯುದ್ಧದ ಕಥೆಗಳನ್ನು ಸೊಗಸಾಗಿ ಕಟ್ಟಿಕೊಡುವ ಅರ್ಜುನ್‌ ಅವರು, ತಮ್ಮ 35 ವರ್ಷಗಳ ವಾಯುಪಡೆ ಸೇವೆಯಲ್ಲಿ ಒಮ್ಮೆಯೂ ನೇರವಾಗಿ ಯುದ್ಧದಲ್ಲಿ ಧುಮುಕಿಲ್ಲವಂತೆ. ಯುದ್ಧ ವಿಮಾನದ ಪೈಲಟ್‌ ಆಗಿ ಕಾರ್ಯ ನಿರ್ವಹಿಸಿದರೂ ಸಮರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿಲ್ಲ ಎಂದು ಅವರು ಹೇಳುತ್ತಾರೆ. ‘ನಿಮ್ಮ ಕೌಟುಂಬಿಕ ಹಿನ್ನೆಲೆ ಕುರಿತು ಇನ್ನಷ್ಟು ಹೇಳಿ’ ಎಂದರೆ, ‘ಆ ವಿವರದಲ್ಲಿ ಅಂತಹ ಕುತೂಹಲ ಏನಿಲ್ಲ. ಕೇಳಿ, ಇನ್ನೊಂದು ಯುದ್ಧದ ಕಥೆಯನ್ನು’ ಎಂದು ಹೇಳಲು ಶುರು ಮಾಡುತ್ತಾರೆ.

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯುದ್ಧದ ನಿರ್ಧಾರ ಮಾಡುವುದು ರಾಜಕೀಯ ನಾಯಕತ್ವ. ನಮ್ಮ ದೇಶ ಸಾಮಾನ್ಯವಾಗಿ ಯುದ್ಧಕ್ಕೆ ಹಾತೊರೆಯದೆ ರಾಜತಾಂತ್ರಿಕ ಹಾಗೂ ಚರ್ಚೆಯ ಮಾರ್ಗಗಳತ್ತಲೇ ಹೆಚ್ಚು ವಾಲುತ್ತಾ ಬಂದಿದೆ. ತನ್ನ ಸೈನಿಕರನ್ನು ಕಳೆದುಕೊಳ್ಳಬೇಕಾದ ಕಹಿ ಅನುಭವಿಸಿದರೂ ರಾಜಕೀಯ ತಂತ್ರಗಾರಿಕೆಯನ್ನು ಗೌರವಿಸುತ್ತಾ ಬಂದಿರುವುದು ಭಾರತೀಯ ಸೈನ್ಯದ ಹೆಚ್ಚುಗಾರಿಕೆಯಾಗಿದೆ ಎಂದು ಸೂಚ್ಯವಾಗಿ ಹೇಳುತ್ತಾರೆ.

‘ನಾನು ಯುದ್ಧ ಚರಿತ್ರೆಯನ್ನು ದಾಖಲಿಸುವುದು ಸಂಭ್ರಮಿಸಲಿಕ್ಕಲ್ಲ. ದೇಶದ ಪ್ರೀತಿಗೆ ಪಾತ್ರವಾದ ವಿಷಯವನ್ನು ಜತನದಿಂದ ಕಾಪಾಡುವುದಕ್ಕಾಗಿ’ ಎಂದು ಅರ್ಜುನ್‌ ಹೇಳುತ್ತಾರೆ. ‘ಗಡಿ ನಿಯಂತ್ರಣ ರೇಖೆ ದಾಟಿ ನಡೆಸಲಾದ ನಿರ್ದಿಷ್ಟ ದಾಳಿ ಮತ್ತು ಫ್ರಾನ್ಸ್‌–ರಷ್ಯಾ ಜತೆಗೆ ಇತ್ತೀಚೆಗೆ ಮಾಡಿಕೊಂಡ ರಕ್ಷಣಾ ಒಪ್ಪಂದದ ಕುರಿತು ನಿಮ್ಮ ಪ್ರತಿಕ್ರಿಯೆ ಏನು’ ಎಂಬ ಪ್ರಶ್ನೆಯನ್ನು ಕೇಳಿದರೆ, ಈ ಮಿಲಿಟರಿ ಇತಿಹಾಸಕಾರ ಬಲು ಜಾಣ್ಮೆಯ ಉತ್ತರ ನೀಡುತ್ತಾರೆ.

‘ನಿರ್ದಿಷ್ಟ ದಾಳಿ ನಡೆಸಿದ ಯೋಧರು ಹಾಗೂ ಅಧಿಕಾರಿಗಳ ಕುರಿತು ನನಗೆ ಹೆಮ್ಮೆ ಎನಿಸುತ್ತದೆ. ನಾನು ಮಿಲಿಟರಿ ಮನುಷ್ಯನಾಗಿದ್ದರಿಂದ ನನ್ನ ಪ್ರತಿಕ್ರಿಯೆ ಇಷ್ಟಕ್ಕೇ ಸೀಮಿತ’ ಎನ್ನುತ್ತಾರೆ. 

‘ನಾನು ಒಂದಿಂಚೂ ಕದಲುವುದಿಲ್ಲ. ಕೊನೆಯ ಸುತ್ತಿನವರೆಗೆ, ಕೊನೆಯ ವ್ಯಕ್ತಿಯವರೆಗೆ ಹೋರಾಡುತ್ತೇನೆ’ ಎಂಬುದು ಮೇಜರ್‌ ಸೋಮನಾಥ್‌ ಶರ್ಮಾ ಅವರ ವೀರ ನುಡಿಯಾಗಿದೆ. ಆ ಮಾತು ಸೋಮನಾಥ್‌ ಒಬ್ಬರದಷ್ಟೇ ಅಲ್ಲ, ದೇಶದ ಪ್ರತಿಯೊಬ್ಬ ಸೈನಿಕನ ಹೃದಯದ ಮಾತೂ ಆಗಿದೆ ಎಂದು ಚರ್ಚೆಗೆ ಪೂರ್ಣವಿರಾಮ ಹಾಕಿದರು ಏರ್‌ ವೈಸ್‌ ಮಾರ್ಷಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT