ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿನೆರಳ ತೆರೆಯಡಿಯ ಕ್ರೌರ್ಯಚಿತ್ರಗಳು

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ನೆತ್ತರಲಿ ಕತ್ತಲಲಿ ಇನ್ನೆತ್ತ ಸಾಗಲಿ
ಪಾತಾಳ ಇದಿರಿನಲಿ ಹೆಬ್ಬುಲಿಯು ಬೆನ್ನಿನಲಿ
ವಿಷಕಂಠನ ಕೊರಳುಬ್ಬಿ ಕಟ್ಟಿತೇನ
ಅಗ್ನಿನೇತ್ರವು ಕಣ್ಣೀರಲಿ ನಂದಿತೇನ’

ಇವು ಹೈಸ್ನಾಮ್‌ ತೋಂಬಾ ರಚಿಸಿ ನಿರ್ದೇಶಿಸಿರುವ ಈ ವರ್ಷದ ‘ನೀನಾಸಮ್‌’ ತಿರುಗಾಟದ ನಾಟಕ ‘ಅತ್ತ ದರಿ ಇತ್ತ ಪುಲಿ’ಯಲ್ಲಿ ಬರುವ ಸಾಲುಗಳು. ಈಶಾನ್ಯ ಭಾರತದಲ್ಲಿರುವ ಮಣಿಪುರ ದಶಕಗಳಿಂದ ಹಿಂಸೆಯ ಕುಲುಮೆಯಲ್ಲಿ ನಿರಂತರ ಬೇಯುತ್ತಿದೆ. ಆ ಹಿಂಸೆಗೆ ಎರಡು ಅಲಗುಗಳಿವೆ.

ಒಂದು ಕಡೆಯಿಂದ ಅಲ್ಲಿನ ಬಂಡುಕೋರರು ನಡೆಸುತ್ತಿರುವ ಅಮಾನುಷ ದಾಳಿಯ ಭೀಕರತೆ, ಇನ್ನೊಂದು ಬಂಡುಕೋರರನ್ನು ಹತ್ತಿಕ್ಕಲೆಂದೇ ಆ ಜಾಗಕ್ಕೆ ವಿಶೇಷಾಧಿಕಾರ ಪಡೆದುಕೊಂಡು ನೆಲೆಸಿರುವ ಭಾರತೀಯ ಸೇನಾಪಡೆಗಳು. ಒಂದು ಆಳದ ಪಾತಾಳವಾದರೆ, ಇನ್ನೊಂದು ಪಂಜನ್ನೆತ್ತಿ ಬೀಸುವ ಕ್ರೂರ ಹುಲಿ. ಇವೆರಡರ ಸಂಘರ್ಷದಲ್ಲಿ ಇದುವರೆಗೆ ಜೀವ ತೆತ್ತವರ ಸಂಖ್ಯೆ ಹಲವು ಸಾವಿರಗಳ ಗಡಿ ದಾಟಿದೆ.

ಎಂದೆಂದೂ ಮಾಗದ ಮನುಷ್ಯತ್ವದ ಮೇಲಿನ ಅಮಾನವೀಯ ದಾಳಿಗಳ ದಾರುಣ ಚಿತ್ರಣಗಳನ್ನೇ ಇಟ್ಟುಕೊಂಡು ‘ಅತ್ತ ದರಿ ಇತ್ತ ಪುಲಿ’ ನಾಟಕ ಕಟ್ಟಿದ್ದಾರೆ ಹೈಸ್ನಾಮ್‌ ತೋಂಬಾ. ಯಾವಾಗ, ಯಾವ ದಿಕ್ಕಿನಿಂದ ಮೃತ್ಯುರೂಪಿ ಬುಲೆಟ್‌ಗಳು ತೂರಿ ಬರುವವೋ ಯಾವಾಗ ತಮ್ಮ ಮನೆಯ ಹೆಣ್ಣು ಜೀವಗಳು ಕಾಮಾಂಧರ ತೆವಲಿಗೆ ಬಲಿಯಾಗುವರೋ ಎಂಬ ಭಯದಲ್ಲಿಯೇ ಅನುಕ್ಷಣವೂ ಬದುಕಬೇಕಾದ ಅಲ್ಲಿನ ಜನರ ಅನುದಿನದ ಜೀವ ಸಂಕಟವನ್ನು ಈ ನಾಟಕ ಸಮರ್ಥವಾಗಿ ನೋಡುಗರಿಗೆ ದಾಟಿಸುತ್ತದೆ.

ಮಣಿಪುರದ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹಲವು ಮುಖಗಳನ್ನು ಜನರಿಗೆ ತಲುಪಿಸುವುದನ್ನೇ ಮುಖ್ಯ ಉದ್ದೇಶವಾಗಿಸಿಕೊಂಡಿರುವ ಈ ನಾಟಕವು, ‘ವಾರ್ತಾ ವಾಚನ’ದ ಮಟ್ಟದಿಂದ ಮೇಲೇರುವುದು ರಂಗವಿನ್ಯಾಸ ಮತ್ತು ಅಭಿನಯ ವಿನ್ಯಾಸಗಳಿಂದ. ಕನಿಷ್ಠ ಮಾತುಗಳನ್ನು ಬಳಸಿಕೊಂಡು ಆಂಗಿಕಭಾಷೆ ಮತ್ತು ಇತರ ರಂಗಪರಿಕರಗಳ ಮೂಲಕವೇ ಮಾತಿಗೆ ಮೀರಿದ ಅನುಭವಗಳ ಜೊತೆ ಅನುಸಂಧಾನ ನಡೆಸುವ ಪ್ರಯತ್ನ ಈ ನಾಟಕದಲ್ಲಿ ಕಾಣುತ್ತದೆ.

ಕಲಾವಿದರ ಅಭಿನಯ ವಿನ್ಯಾಸವು ರಂಗವಿನ್ಯಾಸದ ಭಾಗವಾಗಿಯೇ ಅಥವಾ ರಂಗವಿನ್ಯಾಸವು ಅಭಿನಯದ ಭಾಗವಾಗಿಯೇ – ಅವರೆಡೂ ಪರಸ್ಪರ ವಿಭಾಗಿಸಿ ನೋಡಲಾಗಷ್ಟು ಬಿಗಿಯಾಗಿ ಹೆಣೆದಿರುವ ಬಗೆಯೇ ಹೈಸ್ನಾಮ್‌ ತೋಂಬಾ ಪ್ರತಿಭೆ ಮತ್ತು ಹೊಸತನದ ಶೋಧನೆಗೆ ನಿದರ್ಶನವಾಗಿದೆ.

ಸ್ವಾತಂತ್ರ್ಯದ ಅರ್ಥ, ದೇಶಭಕ್ತಿಯ ಹುಸಿತನ, ಪ್ರಭುತ್ವದ ಕಿವುಡುತನ, ಅಧಿಕಾರಶಾಹಿಯ ಕ್ರೌರ್ಯ, ಬಂಡುಕೋರರ ಅಟ್ಟಹಾಸ, ಎಲ್ಲವನ್ನೂ ಪ್ರಶ್ನಿಸುತ್ತಲೇ ಈ ನಾಟಕ ಅವುಗಳಿಗೆ ಬಲಿಯಾಗುವ ಜನಸಾಮಾನ್ಯರ ಬದುಕಿನ ದುರಂತಗಳನ್ನು ಮನಕಲುಕುವಂತೆ ಕಾಣಿಸುತ್ತದೆ. ನಿರ್ದೇಶಕರಿಗೆ ಒಮ್ಮೆ ಆಡಿ ಮುಗಿದು ಹೋಗುವ ಮಾತಿಗಿಂತ, ಕಂಡ ಕ್ಷಣ ಮನಸಲ್ಲಿ ಅಚ್ಚೊತ್ತಿ ಸದಾ ನೆನಪಲ್ಲುಳಿಯುವ ‘ಇಮೇಜ್‌’ಗಳ ಮೇಲೆ ಹೆಚ್ಚು ನಂಬಿಕೆ ಇರುವುದಕ್ಕೆ ನಾಟಕದುದ್ದಕ್ಕೂ ಪುರಾವೆಗಳು ಸಿಗುತ್ತವೆ.

ಬ್ರಿಟೀಶ್‌ ಧ್ವಜದ ಜಾಗದಲ್ಲಿ ತಿರಂಗಾ ಹಾರುವುದು, ನಂತರ ಆ ಸ್ಥಳವನ್ನು ಸೈನಿಕ ಸಮವಸ್ತ್ರದ ಬಟ್ಟೆ ಆಕ್ರಮಿಸುವುದು, ಅದರ ಮೇಲೆ ತೇಪೆಯಂತೆ ಹಚ್ಚಿರುವ ಹೆಣ್ಣೊಬ್ಬಳ ಬಟ್ಟೆ, ಪ್ರಭುತ್ವಗಳ ಕೈ ಬದಲಾಗದಂತೆ ಅವುಗಳೊಟ್ಟಿಗೇ ಹೊಂದಿಕೊಂಡಿರುವ ಕ್ರೌರ್ಯವೂ ಬದಲಾಗುವ ದುರಂತ, ಅಸಹಾಯಕನಾಗಿ ನಿಂತಿರುವ ಗಾಂಧಿಯ ಕೋಲನ್ನೇ ತೆಗೆದುಕೊಂಡು ಹೆಣ್ಣೊಬ್ಬಳನ್ನು ಬಂಧಿಸುವ ಚಿತ್ರ, ಸಂವಿಧಾನವೆಂಬ ದೀಪ ಆರಿಹೋಗಿ ಹೊತ್ತಿಕೊಳ್ಳುವ ಕ್ರಾಂತಿಯ ಬೆಂಕಿ – ಎಲ್ಲವನ್ನೂ ನಾಟಕ ‘ಇಮೇಜ್‌’ಗಳ ಮೂಲಕವೇ ದಾಟಿಸುತ್ತದೆ. ಹಾಗೆ ನೋಡಿದರೆ ಇಡೀ ನಾಟಕವೇ ಇಂಥ ಹಲವು ಪರಿಣಾಮಕಾರಿ ಇಮೇಜ್‌ಗಳ ಆಲ್ಬಂನಂತೆ ವಿನ್ಯಾಸಗೊಂಡಿದೆ.

ಅಭಿನಯ, ರಂಗವಿನ್ಯಾಸ, ಸಂಗೀತ ಎಲ್ಲದರಲ್ಲಿಯೂ ಇಷ್ಟು ಸಶಕ್ತವಾಗಿರುವ ‘ಅತ್ತ ದರಿ ಇತ್ತ ಪುಲಿ’ ನಾಟಕದ ದೌರ್ಬಲ್ಯ ಇರುವುದು ಕಥನದ ನಿರೂಪಣೆಯಲ್ಲಿ. ಈ ನಾಟಕವನ್ನು ರಚಿಸಿದವರೂ ಹೈಸ್ನಂ ತೋಂಬಾ ಅವರೇ. ಸ್ವತಃ ಅವರೇ ಮಣಿಪುರದವರಾಗಿರುವುದರಿಂದಲೋ ಏನೋ ಇಡೀ ಕಥನ ಸಾರ್ವಜನಿಕರ ಕಣ್ಣಿನಲ್ಲಿಯೇ ನಿರೂಪಿತಗೊಳ್ಳುತ್ತದೆ.

ಆದರೆ ಯಾವುದೇ ಸಮಸ್ಯೆಯಾಗಲಿ ಹಾಗೆ ಕಪ್ಪು–ಬಿಳುಪು ಎಂಬಷ್ಟು ಸ್ಪಷ್ಟವಾಗಿ ಇರುವುದಿಲ್ಲ. ಆದರೆ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಅತ್ಯಂತ ಮನಕಲುಕುವ ಹಲವು ಘಟನೆಗಳ ಮೂಲಕ ಚಿತ್ರಿಸುವುದರಲ್ಲಿಯೇ ಮಗ್ನವಾಗುವ ಈ ರಂಗಕೃತಿ ಅದೇ ಸಮಸ್ಯೆಯ ಇನ್ನೊಂದು ಮುಖವಾದ ಬಂಡುಕೋರರ ಸಮಸ್ಯೆಯನ್ನು ಪರಿಗಣನೆಗೇ ತೆಗೆದುಕೊಳ್ಳುವುದಿಲ್ಲ.

ಹೀಗೆ ಏಕಮುಖ ನಿರೂಪಣೆಯ ಕಾರಣದಿಂದಲೇ ಈ ನಾಟಕ ಆ ಕ್ಷಣದ ಭಾವುಕತೆಯನ್ನು ಮೀರಿ ನಮ್ಮೊಳಗೆ ಬೆಳೆಯುವಲ್ಲಿ ದಣಿಯುತ್ತದೆ. ಒಂದು ಸತ್ಯದ ಹಲವು ಆಯಾಮಗಳನ್ನು ತೋರಿಸುವುದರಲ್ಲಿಯೇ ಕಲೆಯ ಗೆಲುವು ಇರುವುದು. ಆದರೆ ಈ ರೀತಿಯ ಗೆಲುವು ‘ಅತ್ತ ದರಿ..’ಗೆ ತೃಪ್ತಿಕರವೆನ್ನುವಷ್ಟು ದಕ್ಕಿಲ್ಲ.

ಕಾರಣಗಳು ಏನೇ ಇದ್ದರೂ ಪ್ರಭುತ್ವ ಮತ್ತು ಅದರ ವಿರೋಧಿಗಳ ನಡುವಿನ ಸಂಘರ್ಷದಲ್ಲಿ ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸಮರ್ಥನೆ ಮಾಡಲಾಗದು. ಇದರ ವಿರುದ್ಧ ಧ್ವನಿಯೆತ್ತುವ ಕಾರಣಕ್ಕಾಗಿ ಮತ್ತು ಹಾಗೆ ಮಾಡುವಾಗಲೂ ರಂಗಭೂಮಿ ಮಾಧ್ಯಮದ ಕಲಾತ್ಮಕ ಸಾಧ್ಯತೆಯನ್ನು ಮರೆಯದೇ ತೀವ್ರವಾಗಿ ಬಳಸಿಕೊಂಡಿರುವ ಕಾರಣಕ್ಕಾಗಿ ಈ ನಾಟಕ ಮಹತ್ವದ ರಂಗಕೃತಿಯಾಗಿದೆ.

ನಾಟಕದುದ್ದಕ್ಕೂ ಬರುವ ಹಾಡೊಂದರ ಈ ಸಾಲುಗಳು ಮಣಿಪುರದ ಜನರ ಆರ್ತನಾದ ಮತ್ತು ಆಶಾವಾದ ಎರಡನ್ನೂ ಒಟ್ಟೊಟ್ಟಿಗೇ ಹೇಳುವಂತಿವೆ: ‘ನಮ್ಮ ನೆತ್ತಿಯ ಮ್ಯಾಲೆ ತೂಗೈತೆ ಕತ್ತಿ ಅಲಗು ಹಗಲೇ ಕೇಳಿದೆ ನೋಡು ಮರದಾಗಿನ ಗೂಗೆ ಕೂಗು ಮುಗಿಲು ಮುಟ್ಟಿದ ಗೋಳು ಕೇಳದೇನ ಕರಿ ನೆರಳ ತೆರೆ ಹರಿದು ಹೋಗದೇನಾ...’ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT