ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಾಮಿ ನಂತರದ ಸೂತಕದ ಚಿತ್ರಗಳು

ಕೆ. ವೆಂಕಟೇಶ್‌
Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನಾನು ಛಾಯಾಗ್ರಹಣ ಆರಂಭಿಸಿ 32 ವರ್ಷಗಳು ಕಳೆದವು. ಆದರೆ 2004ರಲ್ಲಿ ಭಾರತದ ಪೂರ್ವ ಕರಾವಳಿಗೆ ಸುನಾಮಿ ಅಪ್ಪಳಿಸಿದಾಗ, ದುರಂತ ಸಂಭವಿಸಿದ ನಂತರದ ಸನ್ನಿವೇಶಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ನನಗಂತೂ ಅತ್ಯಪೂರ್ವ ಅನುಭವ. ಅದು ನನ್ನ ಛಾಯಾಗ್ರಹಣದ ದೃಷ್ಟಿಕೋನವನ್ನಷ್ಟೇ ಅಲ್ಲ – ಬದುಕಿನ ದೃಷ್ಟಿಕೋನವನ್ನೂ ಬದಲಿಸಿತು.

ಸುನಾಮಿ ಅಪ್ಪಳಿಸಿದ್ದು 2004ರ ಡಿಸೆಂಬರ್‌ 26ರಂದು. 27ರ ಬೆಳಿಗ್ಗೆ ನಾನು  ತಮಿಳುನಾಡಿನ ಕಡಲೂರಿನಲ್ಲಿದ್ದೆ.  ಅಲ್ಲಿಂದ ನಾಗಪಟ್ಣಂ, ಚಿದಂಬರಂ, ವೇಲಾಂಗಣಿ, ಪಾಂಡಿಚೇರಿಗೆ ಹೋಗಿ ಅಲ್ಲಿಂದ ಮದ್ರಾಸ್‌ಗೆ ಬಂದೆ.

ಒಟ್ಟು ಏಳು ದಿನಗಳ ಕಾಲ ನಾನು ಸುನಾಮಿ ಅಪ್ಪಳಿಸಿದ ವಿವಿಧ ಸ್ಥಳಗಳಲ್ಲಿ ಸಂಚರಿಸುತ್ತಾ ಕಾಲ ಕಳೆದೆ. ಅಲ್ಲಿ ಹೋಗಿ ಫೋಟೊ ತೆಗೆಯಬೇಕು, ನಂತರ ಇಲ್ಲಿ ಬಂದು ಅದರ ಪ್ರದರ್ಶನ ಏರ್ಪಡಿಸಬೇಕು ಎಂಬೆಲ್ಲ ಯಾವ ಆಲೋಚನೆಯೂ ನನಗಿರಲಿಲ್ಲ. ಆ ದುರಂತ ಸಂಭವಿಸಿದಾಗ ನಾನು ಅಲ್ಲಿರಬೇಕು ಅನ್ನಿಸಿತ್ತು ಅಷ್ಟೆ.ಅದೊಂದು ಮಾನವೀಯತೆಯ ಹಂಬಲ.

ಅಮೆರಿಕ–ಯುರೋಪ್‌ಗಳಲ್ಲಿ ಯಾವುದೇ ದುರಂತ ಸಂಭವಿಸಿದಾಗ ಅಲ್ಲಿನ ಛಾಯಾಗ್ರಾಹಕರು ಮೃತದೇಹಗಳ ಫೋಟೊ ತೆಗೆಯುವುದಿಲ್ಲ. ಅದು ಅಲ್ಲಿನ ಛಾಯಾಗ್ರಹಣ ತತ್ವ. ಆದರೆ ನಮ್ಮಲ್ಲಿ ಹಾಗಿಲ್ಲ. ನಾವು ಮೃತದೇಹಗಳನ್ನು ವೈಭವೀಕರಿಸುತ್ತೇವೆ, ರಕ್ತ ತೋರಿಸುತ್ತೇವೆ. ದೇಹಗಳು ಯಾವ ಯಾವುದೋ ಸ್ಥಿತಿಯಲ್ಲಿ ಬಿದ್ದಿರುವುದನ್ನು ತೋರಿಸುತ್ತೇವೆ.

ಭಯೋತ್ಪಾದಕ ದಾಳಿಯಾದಾಗ ಮೃತದೇಹವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ತೋರಿಸುತ್ತೇವೆ. ಇವೆಲ್ಲ ಒಂದು ರೀತಿಯಲ್ಲಿ ಜನರನ್ನು ಪ್ರಚೋದಿಸುತ್ತವೆ.ಸಾವನ್ನು ವೈಭವೀಕರಿಸಿದಂತೆನಿಸುತ್ತದೆ. ಇದು ಸರಿಯಲ್ಲ ಎಂದು ನನ್ನ ಅನಿಸಿಕೆ.

ನಾನು ಯಾವಾಗ ಕಡಲೂರಿಗೆ ತಲುಪಿ ಅಲ್ಲಿನ ದುರಂತಕ್ಕೆ ಸಾಕ್ಷಿಯಾದೆನೋ ಅದೇ ಕ್ಷಣದಲ್ಲಿಯೇ ನಾನು ನಿರ್ಧರಿಸಿದೆ – ‘ನಾನು ಮೃತದೇಹದ ಚಿತ್ರಗಳನ್ನು ತೆಗೆಯುವುದಿಲ್ಲ’ ಎಂದು. ಅದರ ಬದಲಿಗೆ ಅದರ ಭಿನ್ನ ಭಿನ್ನ ಪರಿಣಾಮಗಳ ಚಿತ್ರಗಳನ್ನು ಸೆರೆಹಿಡಿದು ಅವುಗಳ ಮೂಲಕವೇ ಪರೋಕ್ಷವಾಗಿ ಸುನಾಮಿಯ ಭೀಕರತೆಯನ್ನು ಚಿತ್ರಿಸಿದೆ.

ಒಂದು ಪುಟಾಣಿ ಮಗು ಅಳುತ್ತಿತ್ತು. ಆ ಮಗುವಿನ ಚಿತ್ರ ತೆಗೆದೆ. ಆ ಪುಟ್ಟ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತಲ್ಲ, ಅದೇ ಸುನಾಮಿಯ ದುರಂತ ಪರಿಣಾಮವನ್ನು ಸಶಕ್ತವಾಗಿ ಬಿಂಬಿಸಬಲ್ಲದು ಎಂದು ನನಗನ್ನಿಸಿತು.

ಸುನಾಮಿ ಸಂಭವಿಸಿದ ಜಾಗಗಳಲ್ಲಿ ಮೃತದೇಹಗಳನ್ನು ಲೆಕ್ಕ ಹಾಕಲಿಕ್ಕೇ ಸಾಧ್ಯವಿರಲಿಲ್ಲ. ನಾನು ಎಷ್ಟೋ ಕಡೆ ಹೂತುಹೋಗಿರುವ ಮೃತದೇಹಗಳ ಮೇಲೆಲ್ಲಾ ನಡೆದುಕೊಂಡು ಹೋಗಿದ್ದಿದೆ. ನಮಗೆ ಅವೆಲ್ಲ ಗೊತ್ತೇ ಆಗುತ್ತಿರಲಿಲ್ಲ. ಅಲ್ಲಿನ ಜನರು ಅನ್ನ–ಸಾರಿನ ಊಟ ಹೋಗಲಿ, ಒಂದೆರಡು ಬಿಸ್ಕತ್‌ಗಾಗಿ ಒದ್ದಾಡುತ್ತಿದ್ದರು.ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು.

ನಾನು ವೇಲಾಂಗಣಿಯಲ್ಲಿ ಅಡ್ಡಾಡುತ್ತಿದ್ದಾಗ ಅಲ್ಲಿನ ಚರ್ಚ್‌ ಸಮೀಪ ಒಬ್ಬರು ವಯೋವೃದ್ಧರು ಕೂತಿದ್ದರು. ನಾನು ಅವರನ್ನು ಮಾತಿಗೆಳೆದು ‘ಏನಜ್ಜಾ, ಹೀಗಾಗಿದೆ ಪರಿಸ್ಥಿತಿ?’ ಎಂದು ಕೇಳಿದೆ. ಅವರು ‘ಏನ್‌ ಹೇಳೋದು ಸ್ವಾಮಿ, ಸುತ್ತೆಲ್ಲ ಕಡಲೇ ಇದೆ. ಕುಡಿಯಲಿಕ್ಕೆ ಮಾತ್ರ ಹನಿ ನೀರಿಲ್ಲ’ ಎಂದು ವಿಷಾದದಿಂದ ನಕ್ಕರು. ಆ ನಗುವಿನಲ್ಲಿನ ನೋವಿನಲ್ಲಿ ಸುನಾಮಿಯ ಪರಿಣಾಮ ಕಂಡಿತ್ತು. ಇಂಥ ಸಣ್ಣ ಸಣ್ಣ ಘಟನೆಗಳು ನನ್ನನ್ನು ಆಳವಾಗಿ ಕಲಕಿದವು. ಅಲ್ಲಿನ ಇಡೀ ಜಗತ್ತೇ ಸ್ಮಶಾನ ಸದೃಶವಾಗಿತ್ತು.

ಅಲ್ಲಿ ಕಳೆದುಕೊಂಡವರ ನೋವಿಗಿಂತಲೂ ಜೀವಸಹಿತ ಉಳಿದವರ ಅದೃಷ್ಟವೇ ಹೆಚ್ಚು ಎನ್ನುವಂತಾಗಿತ್ತು. ತಮ್ಮವರ ಮರಣಕ್ಕೆ ರೋದಿಸುವ ಪರಿಸ್ಥಿತಿಯನ್ನೂ ಮೀರಿ ಸ್ತಬ್ಧರಾಗಿಬಿಟ್ಟಿದ್ದರು. ಅವರ ಮನಸ್ಸು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ನಾವು ಊಹಿಸುವುದೂ ಸಾಧ್ಯವಿರಲಿಲ್ಲ. ಅಲ್ಲಿನ ದೃಶ್ಯಗಳನ್ನು ನೋಡಿದಾಗ ನನಗನಿಸಿತು. ಫಿಲಾಸಫಿ ಗಿಲಾಸಫಿಗಳೆಲ್ಲ ಏನೂ ಇಲ್ಲ, ಮನುಷ್ಯನ ಬದುಕಿನ ಮುಂದೆ ಯಾವುದೂ ಇಲ್ಲ.

ದಿನನಿತ್ಯದ ಬದುಕಿನಲ್ಲಿ ಸಣ್ಣ ಸಣ್ಣ ವಿಷಯಕ್ಕೆಲ್ಲ ಕಿತ್ತಾಡುತ್ತಿರುತ್ತೇವೆ. ಅವುಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದೂ ಹೇಳುತ್ತಿರುತ್ತೇವೆ.ಆದರೆ ಮೃತ್ಯುವನ್ನು ಯಾವ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು? ಸಾವಿನ ಎದುರು ಧರ್ಮ–ಜಾತಿ ಯಾವುದೂ ನಿಲ್ಲುವುದಿಲ್ಲ.

ಕುಡಿಯುವ ನೀರು, ಬಿಸ್ಕತ್‌, ಉಟ್ಟುಕೊಳ್ಳಲು ಬಟ್ಟೆ ಯಾರು ತಂದುಕೊಡುತ್ತಾರೋ ಅವರೇ ನಮ್ಮವರು ಎಂಬಂತಾಗಿತ್ತು ಅಲ್ಲಿನ ಸ್ಥಿತಿ. ಅಲ್ಲಿ ಕೂತುಕೋಬೇಡ, ಅದನ್ನು ತಿನ್ನಬೇಡ. ಇದು ಆರೋಗ್ಯಕ್ಕೆ ಹಾಳು ಎಂಬೆಲ್ಲ ಯಾವುದೂ ಅಲ್ಲಿ ಇರುವುದಿಲ್ಲ. ಏನು ಕೊಟ್ಟರೂ ತಿಂತಾರೆ. ಯಾರು ಬಟ್ಟೆ ಕೊಟ್ಟರೂ ಹಾಕಿಕೊಳ್ಳುತ್ತಾರೆ. 

ನಮ್ಮ ನಡುವೆ ಏನೇ ಕಿತ್ತಾಟ ಇದ್ದರೂ, ಭಿನ್ನಾಭಿಪ್ರಾಯ ಇದ್ದರೂ ಸಂಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಗೊತ್ತಿಲ್ಲದೆಯೇ ಒಂದಾಗುತ್ತೇವೆ ಎಂಬುದಕ್ಕೆ ಸುನಾಮಿ ನನಗೊಂದು ನಿದರ್ಶನವಾಗಿ ಕಂಡಿತ್ತು. ಅಲ್ಲಿ ಎಲ್ಲ ರಾಜ್ಯದ ಜನರೂ ಇದ್ದರು. ಅವರು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಇಡೀ ದೇಶವೇ ಜನರ ಸಹಾಯಕ್ಕೆ ನಿಂತಿತ್ತು.

ಇಂಥ ಸಂದರ್ಭದಲ್ಲಿ ರಾಜಕೀಯ ನಾಯಕರು, ಪಕ್ಷ, ಪ್ರಭುತ್ವದ ಸಹಾಯ ಅಂತೆಲ್ಲ ಜನರು ಯೋಚಿಸುವುದೂ ಇಲ್ಲ. ಅವರು ಅಂಥ ಸ್ಥಳಗಳಿಗೆ ಬರುವುದೂ ಇಲ್ಲ. ಏಳು ದಿನಗಳಲ್ಲಿ ನಾನು ಒಬ್ಬನೇ ಒಬ್ಬ ರಾಜಕೀಯ ನಾಯಕನನ್ನು ಸುನಾಮಿ ಅಪ್ಪಳಿಸಿದ ಸ್ಥಳಗಳಲ್ಲಿ ನೋಡಿಲ್ಲ.

ಅಂಥ ದೊಡ್ಡ ದುರಂತದ ಸಂದರ್ಭದಲ್ಲಿ ನಾವು ಎಲ್ಲದಕ್ಕೂ ಸಾಕ್ಷಿಯಾಗಿದ್ದೇವೆಯೇ ಹೊರತು ಏನನ್ನೂ ಮಾಡಲಾಗದ ಅಸಹಾಯಕತೆಯಲ್ಲಿರುತ್ತೇವೆ. ನಾವು ನಮ್ಮ ಕಾರಿನಲ್ಲಿ ಸಾಧ್ಯವಿದ್ದಷ್ಟೂ ನೀರು, ಬಿಸ್ಕತ್‌ಗಳನ್ನು ತೆಗೆದುಕೊಂಡು ಹೋಗಿ ಜನರಿಗೆ ಕೊಡುತ್ತಿದ್ದೆವು. ಆದರೆ ಎಷ್ಟು ಜನರಿಗೆ ಕೊಡಲು ಸಾಧ್ಯ? ಆ ಅಸಹಾಯಕತೆ ನಮ್ಮನ್ನು ಇನ್ನಷ್ಟು ಹಿಂಡುತ್ತದೆ.

ಆ ನೋವು, ನೀರವತೆ, ಮೃತ್ಯುವಿನ ಅನಂತ ಮುಖಗಳನ್ನು ವರ್ಣಗಳಲ್ಲಿ ತೋರಿಸುವುದು ನನಗೆ ಸರಿ ಅನಿಸಲಿಲ್ಲ. ಆದ್ದರಿಂದ ಎಲ್ಲ ಚಿತ್ರಗಳನ್ನೂ ಕಪ್ಪು–ಬಿಳುಪು ಆಗಿಸಿದೆ.

ಈ ಅನುಭವ ನನ್ನ ಛಾಯಾಚಿತ್ರದ ನೋಟವನ್ನಲ್ಲ, ಬದುಕಿನ ಮೇಲೂ ಆಳವಾಗಿ ಪರಿಣಾಮ ಬೀರಿತು. ಇದರ ನಂತರ ನಾನು ಮಾಡಿದ ‘ವೃದ್ಧಾಶ್ರಮ ಸರಣಿ’, ‘ಮಂಗಳಮುಖಿಯರ ಚಿತ್ರಸರಣಿ’, ‘ಅನಾಥ ಮೃತದೇಹಗಳು’ – ಇಂಥ ಅನೇಕ ಸರಣಿಚಿತ್ರಗಳನ್ನು ಮಾಡುವ ಮನಸ್ಥಿತಿ ರೂಪುಗೊಂಡಿದ್ದು ಸುನಾಮಿ ಚಿತ್ರಸರಣಿಯ ಅನುಭವದಿಂದಲೇ. ನಂತರದ ಒಂದೊಂದು ಚಿತ್ರಸರಣಿಗಳೂ ನನ್ನ ವ್ಯಕ್ತಿತ್ವವನ್ನು ವಿಸ್ತರಿಸುತ್ತಲೇ ಬಂದಿವೆ.

ಕೆ. ವೆಂಕಟೇಶ್‌
ಬೆಂಗಳೂರು ಮೂಲದ ಛಾಯಾಗ್ರಾಹಕ ಕೆ. ವೆಂಕಟೇಶ್‌, ಕಳೆದ ಮೂವತ್ತೆರಡು ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿದ್ದಾರೆ. ‘ಈ ನಾಡು’, ‘ಬಿಬಿಸಿ’, ‘ಔಟ್‌ಲುಕ್‌’, ‘ಇಂಡಿಯಾ ಟುಡೆ’ ಸೇರಿದಂತೆ ಹಲವು ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ.

ಛಾಯಾಚಿತ್ರ ಪತ್ರಿಕೋದ್ಯಮ ಕ್ಷೇತ್ರದಲ್ಲಿದ್ದರೂ ಸಂವೇದನೆ ಜಡಗೊಳಿಸಿಕೊಳ್ಳದ ವೆಂಕಟೇಶ್‌ ಕ್ಯಾಮೆರಾ ಸದಾ ಮಾನವೀಯತೆಯ ಆ್ಯಂಗಲ್‌ನಲ್ಲಿಯೇ ಫೋಕಸ್‌ ಆಗಿರುತ್ತದೆ. ಅವರು ತೆಗೆದಿರುವ ಹಲವು ಚಿತ್ರಸರಣಿಗಳನ್ನು beyondfocus.in ಜಾಲತಾಣದಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT