ಹಟಮಾರಿ ಸರ್ಕಾರ ಮತ್ತು ಉಕ್ಕಿನ ಸೇತುವೆ ಎಂಬ ವಿಕೃತಿ

ಇದು ಸಂಘರ್ಷ. ಸರ್ಕಾರದ ಜೊತೆಗೆ ಜನ  ಸಂಘರ್ಷಕ್ಕೆ ಇಳಿದಿದ್ದಾರೆ. ‘ಜನ ಹಿತ’ದ ಹೆಸರಿನಲ್ಲಿ ಸರ್ಕಾರ ಹಾಕಿಕೊಂಡಿರುವ ಯೋಜನೆಯನ್ನು ಜನರು ವಿರೋಧಿಸುತ್ತಿದ್ದಾರೆ. ‘ಅದು ನಮಗೆ ಬೇಡ. ಅದರಿಂದ ನಮಗೆ ಒಳಿತಿಗಿಂತ ಕೆಡುಕೇ ಹೆಚ್ಚು’ ಎಂದು ಅವರು ಬೀದಿಗೆ ಇಳಿದಿದ್ದಾರೆ. ಮಾನವ ಸರಪಣಿ ಮಾಡಿದ್ದಾರೆ. ಅದರಲ್ಲಿ ನಾಡಿನ ಹಿರಿಯ ಚಿಂತಕರು, ಕಲಾವಿದರು, ಲೇಖಕರು, ಬೌದ್ಧಿಕರು, ಸೂಕ್ಷ್ಮಜ್ಞರೆಲ್ಲ ಭಾಗವಹಿಸಿದ್ದಾರೆ. ಸಾಹಿತಿಗಳು ಕೊಂಚ ದ್ವಂದ್ವದಲ್ಲಿ ಇದ್ದಂತೆ ಇತ್ತು! ಅದು ಯಾವಾಗಲೂ ಅವರ ಸಮಸ್ಯೆ! ಆದರೆ, ಸರ್ಕಾರಕ್ಕೆ ಯಾವ ದ್ವಂದ್ವವೂ ಇದ್ದಂತೆ  ಇಲ್ಲ. ಅದು ದೃಢ ನಿರ್ಧಾರ ಮಾಡಿ ಬಿಟ್ಟಿದೆ ಮತ್ತು ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲು ಸೇತುವೆ ಆಚಿನವರೆಗೆ ಉಕ್ಕಿನ ಮೇಲು ಸೇತುವೆ ಮಾಡಿಯೇ ಸಿದ್ಧ ಎಂದು ತೀರ್ಮಾನಿಸಿ ಬಿಟ್ಟಿದೆ.

ಹಟಮಾರಿ ಸರ್ಕಾರ ಮತ್ತು ಉಕ್ಕಿನ ಸೇತುವೆ ಎಂಬ ವಿಕೃತಿ

ಇದು ಸಂಘರ್ಷ. ಸರ್ಕಾರದ ಜೊತೆಗೆ ಜನ  ಸಂಘರ್ಷಕ್ಕೆ ಇಳಿದಿದ್ದಾರೆ. ‘ಜನ ಹಿತ’ದ ಹೆಸರಿನಲ್ಲಿ ಸರ್ಕಾರ ಹಾಕಿಕೊಂಡಿರುವ ಯೋಜನೆಯನ್ನು ಜನರು ವಿರೋಧಿಸುತ್ತಿದ್ದಾರೆ. ‘ಅದು ನಮಗೆ ಬೇಡ. ಅದರಿಂದ ನಮಗೆ ಒಳಿತಿಗಿಂತ ಕೆಡುಕೇ ಹೆಚ್ಚು’ ಎಂದು ಅವರು ಬೀದಿಗೆ ಇಳಿದಿದ್ದಾರೆ. ಮಾನವ ಸರಪಣಿ ಮಾಡಿದ್ದಾರೆ. ಅದರಲ್ಲಿ ನಾಡಿನ ಹಿರಿಯ ಚಿಂತಕರು, ಕಲಾವಿದರು, ಲೇಖಕರು, ಬೌದ್ಧಿಕರು, ಸೂಕ್ಷ್ಮಜ್ಞರೆಲ್ಲ ಭಾಗವಹಿಸಿದ್ದಾರೆ. ಸಾಹಿತಿಗಳು ಕೊಂಚ ದ್ವಂದ್ವದಲ್ಲಿ ಇದ್ದಂತೆ ಇತ್ತು! ಅದು ಯಾವಾಗಲೂ ಅವರ ಸಮಸ್ಯೆ! ಆದರೆ, ಸರ್ಕಾರಕ್ಕೆ ಯಾವ ದ್ವಂದ್ವವೂ ಇದ್ದಂತೆ  ಇಲ್ಲ. ಅದು ದೃಢ ನಿರ್ಧಾರ ಮಾಡಿ ಬಿಟ್ಟಿದೆ ಮತ್ತು ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲು ಸೇತುವೆ ಆಚಿನವರೆಗೆ ಉಕ್ಕಿನ ಮೇಲು ಸೇತುವೆ ಮಾಡಿಯೇ ಸಿದ್ಧ ಎಂದು ತೀರ್ಮಾನಿಸಿ ಬಿಟ್ಟಿದೆ.

ಇಲ್ಲಿ ಅನೇಕ ಪ್ರಶ್ನೆಗಳು ಎದ್ದಿವೆ. ಸರ್ಕಾರ ಕೇವಲ ವಿಮಾನ ನಿಲ್ದಾಣಕ್ಕೆ ಹೋಗುವ ಜನರ ಬಗ್ಗೆ ಮಾತ್ರ ಏಕೆ ತಲೆ ಕೆಡಿಸಿಕೊಳ್ಳುತ್ತದೆ? ವಿಮಾನ ನಿಲ್ದಾಣಕ್ಕೆ ಹೋಗುವವರೇನು ದೇವತೆಗಳೇ? ಉಳಿದ ಬೆಂಗಳೂರಿನ ನರಮನುಷ್ಯರು ಒಂದು ಸರಿಯಾದ ಪಾದಚಾರಿ ಮಾರ್ಗವಿಲ್ಲದೇ, ತಗ್ಗು ದಿನ್ನೆಗಳಿಲ್ಲದ ಒಂದು ರಸ್ತೆಯಿಲ್ಲದೇ, ನಿತ್ಯವೂ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಅತ್ತ ಸಾಯಲೂ ಇತ್ತ ಬದುಕಲೂ ಇಲ್ಲ ಎಂದು ಹೀಗೆಯೇ ನರಳುತ್ತ ಇರಬೇಕೇ? ಹೆಬ್ಬಾಳ ಮೇಲು ಸೇತುವೆ ದಾಟಿದ ಕೂಡಲೇ ಯಾವ ಅಡೆತಡೆಯೂ ಇಲ್ಲದೇ ಗಂಟೆಗೆ 80 ಕಿಲೋ ಮೀಟರ್‌ ವೇಗದಲ್ಲಿ ವಿಮಾನ ನಿಲ್ದಾಣ ತಲುಪಲು ಈಗಾಗಲೇ ಉತ್ತಮ ರಾಷ್ಟ್ರೀಯ ಹೆದ್ದಾರಿಯೇ ನಿರ್ಮಾಣವಾಗಿದೆ. ಈಗ ಮತ್ತೆ ₹1780 ಕೋಟಿ ವೆಚ್ಚದ ಉಕ್ಕಿನ ಮೇಲುಸೇತುವೆ ಯೋಜನೆಯನ್ನು ಸರ್ಕಾರ ಗುಟ್ಟು ಗುಟ್ಟಾಗಿ ಮಾಡಬೇಕಾದ ಅಗತ್ಯ ಇರಲಿಲ್ಲ. ‘ಜನಹಿತ ಉದ್ದೇಶ’ದ ಯೋಜನೆಯ ವಿವರಗಳು ಜನರಿಗೆ ಮೊದಲೇ ಗೊತ್ತಿರಬೇಕಿತ್ತು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂಥ ಕೆಲಸ ಮಾಡಬೇಕಿತ್ತು. ಸರ್ಕಾರಕ್ಕೆ ಮುಚ್ಚಿಡುವುದು ಇದರಲ್ಲಿ ಏನೋ ಇದೆ ಎಂದು ಈಗ ಎಲ್ಲರಿಗೂ ಅನಿಸತೊಡಗಿದೆ. ‘ಇದು ಬಿಜೆಪಿ ಸರ್ಕಾರದ ಕೂಸು. ನಾವು ಅದನ್ನು ಬೆಳೆಸುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಮರ್ಥನೆ ಕೊಟ್ಟಿದ್ದಾರೆ. ಬಿಜೆಪಿಯವರ (ಪಾಪದ) ಕೂಸನ್ನು ಈಗಿನ ಕಾಂಗ್ರೆಸ್‌ ಸರ್ಕಾರ ಏಕೆ ಪೋಷಿಸಬೇಕು? ಮುಖ್ಯಮಂತ್ರಿಗಳ ಸಮರ್ಥನೆಯಿಂದ ಒಂದು ಮಾತು ಸ್ಪಷ್ಟವಾಗುತ್ತದೆ: ಎರಡೂ ಸರ್ಕಾರಗಳನ್ನು ಯಾವುದೋ ಹಿತಾಸಕ್ತಿ ಪ್ರಭಾವಿಸಿದೆ ಎಂದು.

ಕಳೆದ ಭಾನುವಾರ ಅಂತರರಾಷ್ಟ್ರೀಯ ಇತಿಹಾಸತಜ್ಞ ರಾಮಚಂದ್ರ ಗುಹಾ, ಅಷ್ಟೇ ಪ್ರಸಿದ್ಧ ಕಲಾವಿದ ಎಸ್‌.ಜಿ.ವಾಸುದೇವ್‌, ಪ್ರಖ್ಯಾತ ಪರಿಸರ ತಜ್ಞ ಸುರೇಶ್‌ ಹೆಬ್ಳೀಕರ್‌, ರಂಗಕರ್ಮಿ ನಟಿ ಅರುಂಧತಿ ನಾಗ್‌, ಮಾಧ್ಯಮ ಕ್ಷೇತ್ರದ ಅಮ್ಮೂ ಜೋಸೆಫ್‌, ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಇಂಥವರೆಲ್ಲ ಈಚಿನ ದಿನಗಳಲ್ಲಿ ಬೆಂಗಳೂರು ಕಂಡ ಅತಿ ದೊಡ್ಡ ಮಾನವ ಸರಪಣಿಯಲ್ಲಿ  ಪಾಲುಗೊಂಡಿದ್ದರು. ಸರ್ಕಾರ ಎಷ್ಟು ಸೂಕ್ಷ್ಮವಾಗಿರಬೇಕು ಎಂದರೆ ಒಬ್ಬ ಗುಹಾ, ಒಬ್ಬ ವಾಸುದೇವ್‌ ಬೀದಿಗೆ ಬಂದರೂ ತನ್ನ ತಪ್ಪನ್ನು ತಕ್ಷಣ ತಿದ್ದಿಕೊಳ್ಳಬೇಕು. ಆದರೆ, ಅದಕ್ಕೆ ಅಂಥ ಯಾವ ಸೂಕ್ಷ್ಮತೆಯೂ ಇದ್ದಂತೆ ಕಾಣುವುದಿಲ್ಲ. ಬೆಂಗಳೂರು ನಗರಾಭಿವೃದ್ಧಿ ಸಚಿವರಿಗಂತೂ ಮಾಧ್ಯಮದವರು ಪ್ರಶ್ನೆ ಕೇಳಿದರೆ ಸಾಕು ಸಿಟ್ಟು ಬರುತ್ತದೆ. ಸರಿಯಾದ ಸಮರ್ಥನೆ ಇಲ್ಲದೇ ಇದ್ದರೆ, ಏನೋ ವಿವರಿಸಲಾಗದ ಹಿತಾಸಕ್ತಿ ಇದ್ದರೆ ಮಾತ್ರ ಸಿಟ್ಟು ಬರುತ್ತದೆ. ಚಳವಳಿ ರೂಪದಲ್ಲಿ ಸ್ವಯಂ ಸ್ಫೂರ್ತಿಯಿಂದ ನಿರ್ಮಾಣಗೊಂಡ ಮಾನವಸರಪಣಿಗೆ ಸರ್ಕಾರಿ ಪ್ರಾಯೋಜಿತ ‘ಉತ್ತರ’ವೂ ನಿನ್ನೆ ಸಿಕ್ಕಿದೆ. ಈಗ ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹೊರಟಿರುವ ರೀತಿ ನೋಡಿದರೆ ಬೆಂಗಳೂರು ನಗರದಲ್ಲಿ ಅತ್ಯಂತ ವಿಕಾರವಾದ, ಕುರೂಪಿಯಾದ ಉಕ್ಕಿನ ಮೇಲು ಸೇತುವೆ ಆಗಿಯೇ ಆಗುತ್ತದೆ. ಅದಕ್ಕೆ 800ಕ್ಕಿಂತ ಹೆಚ್ಚು ಮರಗಳು ನಾಶವಾಗುತ್ತವೆ. ಕೆಲವು ಪಾರಂಪರಿಕ ಕಟ್ಟಡಗಳೂ ನಾಶವಾಗುತ್ತವೆ, ಒಂದಿಷ್ಟು ಆಟದ ಮೈದಾನಗಳು, ಬಯಲುಗಳು ಮತ್ತು ಕೆರೆಗಳು ಬಲಿಯಾಗುತ್ತವೆ.

‘ಏನು ಮಾಡಲು ಆಗುತ್ತದೆ? ಅಭಿವೃದ್ಧಿಗೆ ಹೀಗೆಲ್ಲ ಮಾಡುವುದು ಅನಿವಾರ್ಯ ಮತ್ತು ಇಲ್ಲಿ ಕಡಿದ ಮರಗಳಿಗೆ ಬದಲಿಯಾಗಿ ಇನ್ನೆಲ್ಲೊ ಗಿಡ ನೆಡುತ್ತೇವೆ’ ಎಂದು ಅವರಿಬ್ಬರೂ ಒಂದೇ ಧ್ವನಿಯಲ್ಲಿ ಸಮಜಾಯಿಷಿ ನೀಡುತ್ತಿದ್ದಾರೆ.

‘ಪಿಂಚಣಿಗರ ಸ್ವರ್ಗ ಮತ್ತು ಉದ್ಯಾನಗಳ ನಗರಿ’ ಎಂಬ ಬಿಂಬವನ್ನು ಬೆಂಗಳೂರು ಕಳೆದುಕೊಂಡು ಎಷ್ಟೋ ವರ್ಷಗಳಾಗಿವೆ. ಇದು ಈ ಸರ್ಕಾರದಲ್ಲಿ ಮಾತ್ರ ಆದುದಲ್ಲ. ಎಲ್ಲರೂ ತಮ್ಮ ತಮ್ಮ ಕಾಲದಲ್ಲಿ ಒಂದಿಷ್ಟು ಮೇಲು ಸೇತುವೆ ಕಟ್ಟಿದ್ದಾರೆ, ಒಂದಿಷ್ಟು ಅಂಡರ್‌ಪಾಸ್‌ ಕಟ್ಟಿದ್ದಾರೆ. ಉದ್ಯಾನಗಳ ಗೋಡೆಗಳ ಮೇಲೆ ಬಿಡಿಸಿದ ಚಿತ್ರ ವಿಚಿತ್ರ ಚಿತ್ರಗಳು ಈಗ ಏನಾಗಿವೆ? ಬೆಂಗಳೂರಿನ ಮೇಲೆ ತಮ್ಮ ವಿಕೃತಿಯ ಪ್ರಯೋಗಗಳನ್ನು ಯಾರೆಲ್ಲ ಮಾಡಿಲ್ಲ ಹೇಳಿ?

ಒಂದು ಕಾಲದಲ್ಲಿ ಎಲಿಮೆಂಟ್‌ಗಳ ಬಳಕೆಯಾಯಿತು. ಜನರ ಸಂಚಾರಕ್ಕೆ ಭೂಮಿಯ ಒಳಗೆ ಸುರಂಗ ಮಾರ್ಗ ನಿರ್ಮಿಸಲಾಯಿತು. ಉಕ್ಕಿನ ಸೇತುವೆ ಆರಂಭವಾಗುವ ಅದೇ ಬಸವೇಶ್ವರ ವೃತ್ತದಲ್ಲಿ ಈಗಲೂ ಎರಡೂ ಕಡೆ ಬೀಗ ಜಡಿದ ಸುರಂಗ ಮಾರ್ಗ ನಮ್ಮ ನಗರ ಯೋಜನಾ ತಜ್ಞರ ಅವಿವೇಕತನಕ್ಕೆ ಸಾಕ್ಷಿ ಎನ್ನುವಂತೆ ನಿಂತಿವೆ. ಯಾರ ಹಣದಲ್ಲಿ ಇದನ್ನೆಲ್ಲ ಅವರು ಮಾಡಿದರು? ಸ್ವಲ್ಪ ಮುಂದೆ ಬಂದರೆ ನೃಪತುಂಗ ರಸ್ತೆಯಲ್ಲಿ ಅಂಥ ಇನ್ನೂ ಎರಡು ಸುರಂಗ ಮಾರ್ಗಗಳು ಇವೆ. ಅಲ್ಲಿಯೂ ಅವುಗಳಿಗೆ ಬೀಗ ಜಡಿಯಲಾಗಿದೆ. ವಿಧಾನಸೌಧಕ್ಕೆ ತೀರಾ ಹತ್ತಿರ ಎಂದು ಇವನ್ನು ಹೆಸರಿಸಿದೆ. ಇಡೀ ನಗರದಲ್ಲಿ ಇನ್ನೂ ಎಲ್ಲೆಲ್ಲಿಯೋ ಅವು ಬೇಕಾದಷ್ಟು ಇವೆ ಮತ್ತು ಅವುಗಳಿಗೆಲ್ಲ ಬೀಗ ಜಡಿಯಲಾಗಿದೆ. ಒಂದೋ ಅದನ್ನು ಮಾಡಿದವರು ನಮ್ಮ ಕಾಲಕ್ಕಿಂತ ಬಹಳ ಮುಂದುವರಿದ ನಗರ ಯೋಜನಾ ತಜ್ಞರು ಆಗಿರಬಹುದು. ಏಕೆಂದರೆ ಅವುಗಳನ್ನು ಬಳಸಲು ಬೆಂಗಳೂರಿನ ಜನರು ಇನ್ನೂ ಬಹಳ ಪ್ರಬುದ್ಧರಾಗಬೇಕು ಎಂದು ಅವರು ಹೇಳುತ್ತಿರಬಹುದು. ಅಥವಾ ಅವರು ಸಾರ್ವಜನಿಕ ಹಣವನ್ನು ಹೇಗೆ ಖರ್ಚು ಮಾಡಬಾರದು ಎಂಬುದಕ್ಕೆ ಸಾಕ್ಷಿಯಂತಿರುವ ಒಬ್ಬ ಹೊಣೆಗೇಡಿಯಾಗಿರಬಹುದು. ಮೇಖ್ರಿ ವೃತ್ತಕ್ಕೆ  ಹೋಗುವಾಗ ನಾವು ಇದ್ದಕ್ಕಿದ್ದಂತೆ ದಾರಿ ತಪ್ಪಿ ಎಡಕ್ಕೆ ಹೋಗಿ ಮತ್ತೆ ಬಲಕ್ಕೆ ತಿರುಗಿಸಿಕೊಂಡು ಬಂದು ಹೋಗುವುದೂ ಈ ಸುರಂಗ ಮಾರ್ಗದ ಕಾಲದಲ್ಲಿ ಆದ ಅವಿವೇಕದ ಕಾರಣವಾಗಿಯೇ ಅಲ್ಲವೇ? ಅಂದರೆ ಯಾರ ಕಾಲದಲ್ಲಿಯೋ ಆದ ಒಂದು ಅವಿವೇಕವನ್ನು ಅನೇಕ ವರ್ಷಗಳ ಕಾಲ ಜನರು ಅನುಭವಿಸುತ್ತ ಇರಬೇಕಾಗುತ್ತದೆ. ಅದಕ್ಕೆ ಪರಿಹಾರ ಹುಡುಕಲು ಸಾಧ್ಯವೇ ಆಗುವುದಿಲ್ಲ. ಉಕ್ಕಿನ ಮೇಲು ಸೇತುವೆ ಅಂಥದೇ ಇನ್ನೊಂದು ಅವಿವೇಕ ಆಗಿರಲಾರದು ಎಂದು ಹೇಗೆ ನಂಬುವುದು?

ಸುರಂಗ ಮಾರ್ಗ ಮಾಡಿದವರ ಹಾಗೆ ಈಗಿನ ಸರ್ಕಾರವೂ ಮುಂದೆ ಆಗುವ ಅನಾಹುತಕ್ಕೆ ಹೊಣೆ ಹೊರುವುದಿಲ್ಲ. ತನ್ನ ಅಧಿಕಾರದ ಅವಧಿಯಲ್ಲಿ ಏನೋ ಒಂದನ್ನು ಮಾಡಿ ಹೊರಟು ಬಿಟ್ಟರೆ ಅದರ ಪರಿಣಾಮಗಳನ್ನು ತಲೆಮಾರುಗಳ ಕಾಲ ಬೆಂಗಳೂರಿನ ಭೂಮಿ, ಆಕಾಶ ಮತ್ತು ಪರಿಸರ ಅನುಭವಿಸುತ್ತ ಇರಬೇಕಾಗುತ್ತದೆ. ಉಕ್ಕಿನ ಸೇತುವೆಗಾಗಿ ಎಂಟು ನೂರು ಮರಗಳನ್ನು ಕ್ಷಣಾರ್ಧದಲ್ಲಿ ಕತ್ತರಿಸಿ ಹಾಕಿ ಬಿಡಬಹುದು. ಸರ್ಕಾರದ ಗರಗಸಗಳ ಮುಂದೆ ಯಾವ ಬುಡ ಗಟ್ಟಿಯಾಗಿ ನಿಂತೀತು? ಅದೇನು ದೊಡ್ಡ ಕೆಲಸವಲ್ಲ. ಆದರೆ, ಒಂದು ಗಿಡ ಮರವಾಗಿ ಬೆಳೆಯುವುದು ಎಷ್ಟು ಕಷ್ಟ ಅಲ್ಲವೇ? ನನ್ನ ಮನೆ ಇರುವ ಪುಟ್ಟ  ಬೀದಿಯಲ್ಲಿ ಈಚೆಗೆ ಪಾಲಿಕೆಯ ಸಿಬ್ಬಂದಿ ಬಂದು ಒಂದಿಷ್ಟು ಗಿಡಗಳನ್ನು ನೆಟ್ಟು ಹೋಗಿದ್ದಾರೆ. ಒಂದೊಂದು ಗಿಡಕ್ಕೆ ಮೂರು ಮೂರು ಬಿದಿರಿನ ಗಳಗಳನ್ನು ರಕ್ಷಣೆಯಾಗಿ ನೆಟ್ಟಿದ್ದಾರೆ. ಅವು ಕ್ಷಣಕ್ಕೆ ಒಮ್ಮೆ ಕೆಳಕ್ಕೆ ಬೀಳುತ್ತವೆ. ದನಗಳು ಬಂದೋ, ಆಡುವ ಮಕ್ಕಳು ಚಿವುಟುತ್ತಾರೆ ಎಂದೋ ಗಿಡಗಳು ಮೇಲೆ ಏಳಲು ಹಟ ಮಾಡುತ್ತಿವೆ. ಗಿಡಗಳನ್ನು ಮರವಾಗಿ ಬೆಳೆಸುವುದು ನಿಜವಾಗಿಯೂ ಎಷ್ಟು ಕಷ್ಟ ಅಲ್ಲವೇ? ಪಾಲಿಕೆಯ ಅಧಿಕಾರಿಗಳು ನಮ್ಮ ಮನೆಯ ಮುಂದಿನ ಗಿಡಗಳಿಗೆ ಎಂಥ ಉಕ್ಕಿನ ಕವಚಗಳ ರಕ್ಷಣೆ ಕೊಟ್ಟಿದ್ದೇವೆ ಎಂದು ಬಿಲ್ಲು ಹಾಕಿದ್ದಾರೋ ಯಾರಿಗೆ ಗೊತ್ತು? ಅವರಿಗೆ ಗಿಡ ಬೆಳೆಸುವುದು ಎಷ್ಟು ಸುಲಭ ಅಲ್ಲವೇ? ಏಕೆಂದರೆ ಕಾಗದದಲ್ಲಿ ತಾನೇ ಅವರು ಗಿಡ ಬೆಳೆಸುವುದು? ‘ಎಲ್ಲಿ ಗಿಡ ನೆಟ್ಟಿದ್ದೀರಿ, ಎಲ್ಲಿ ಅವು ಬೆಳೆದಿವೆ’ ಎಂದು ಯಾರು ಹೋಗಿ ಅವರನ್ನು ಕೇಳುತ್ತಾರೆ? ಆದರೆ, ಮುಖ್ಯಮಂತ್ರಿ ಮತ್ತು ಬೆಂಗಳೂರಿನ ಸಚಿವರಿಗೆ ಮಾತ್ರ ಅವರ ಮೇಲೆ ಅಪಾರ ನಂಬಿಕೆ. ‘ಎಲ್ಲಿಯಾದರೂ ಬೇರೆ ಕಡೆ ಗಿಡ ಬೆಳೆಸುತ್ತೇವೆ ಬಿಡಿ’ ಎಂದು ಇಬ್ಬರೂ ಹಾರಿಕೆಯ ಉತ್ತರ ಕೊಡುತ್ತಿದ್ದಾರೆ.

ಬೆಂಗಳೂರಿನ ಮರಗಳಿಗೆ ಒಂದು ದೊಡ್ಡ ಇತಿಹಾಸ ಇದೆ. ಮುಖ್ಯಮಂತ್ರಿಗಳಿಗೆ ನೆನಪಿಸಬಹುದಾದರೆ ಅವರು  ರಾಜಕೀಯಕ್ಕೆ ಕಾಲಿಟ್ಟ ಎಂಬತ್ತರ ದಶಕದ ಉದಾಹರಣೆಯನ್ನೇ ಕೊಡಬಹುದು. ಅವರ ರಾಜಕೀಯ ಪ್ರವೇಶದ ಜನತಾ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ರಾಜ್ಯದಲ್ಲಿ ಗುಂಡೂರಾವ್‌ ಸರ್ಕಾರ ಇತ್ತು. ಆ ಸರ್ಕಾರದ ವಿರುದ್ಧದ ಅನೇಕ ಅಸಮಾಧಾನಗಳಲ್ಲಿ ಕೊಡಗಿನಲ್ಲಿ ನಡೆದ ಮರಗಳ ಮಾರಣಹೋಮವೂ ಒಂದಾಗಿತ್ತು. ಅಲ್ಲಿ ಯಾರೋ ಒಬ್ಬರು ಇಬ್ರಾಹಿಂ ಎಂಬುವರು (ಮುಖ್ಯಮಂತ್ರಿಗಳ ಹಿತೈಷಿಗಳೂ, ಪರಮ ಆಪ್ತರೂ ಆದ (ಈಗ ಹಾಗೆ ಇಲ್ಲವೇ? ಏನೋ ಹರಿದುಕೊಂಡಂತೆ ಕಾಣುತ್ತದೆ!) ಸಿ.ಎಂ.ಇಬ್ರಾಹಿಂ ಅಲ್ಲ) ನಾಟಾಗಳ ಕಳ್ಳ ಸಾಗಣೆ ದಂಧೆಯಲ್ಲಿ ತೊಡಗಿದ್ದರು ಎಂದು ಎ.ಕೆ.ಸುಬ್ಬಯ್ಯ ಆರೋಪ ಮಾಡಿದ್ದರು. 1983ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಡೀ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಗಿಡ ನೆಡುವ ಬಹು ದೊಡ್ಡ ಆಂದೋಲನ ನಡೆಯಿತು. ಆಗ ನೆಟ್ಟ ಗಿಡಗಳು ಆಲಂಕಾರಿಕ ಗಿಡಗಳಾಗಿದ್ದುವು. ಒಂದೇ ಸಾಲಿನಲ್ಲಿ ಅನೇಕ ಬಗೆಯ ಹೂ ಬಿಡುವ ಗಿಡಗಳನ್ನು ನೆಟ್ಟರು. ಅವು ಎಲ್ಲ ಋತುಗಳಲ್ಲಿ ಬಗೆ ಬಗೆಯ ಹೂ ಬಿಡುವ ಗಿಡಗಳಾಗಿದ್ದುವು. ಮೈ ತುಂಬ ಹೂ ತುಂಬಿಕೊಂಡು ನಿಲ್ಲುತ್ತಿದ್ದ ಆ ಗಿಡಗಳು ಜನರಿಗೆ ತಂಪು ಮಾತ್ರ ಕೊಡುತ್ತಿರಲಿಲ್ಲ ನಿಸರ್ಗದ ಬಗೆಗೆ ಪ್ರೀತಿಯನ್ನೂ ಹುಟ್ಟಿಸುತ್ತಿದ್ದುವು. ಈಗ ಆ ಒಂದೊಂದೇ ಮರಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಅದರ ಬದಲು ಮೇಲು ಸೇತುವೆಗಳು, ಅಂಡರ್‌ಪಾಸ್‌ಗಳು, ಟೆಂಡರ್‌ ಶ್ಯೂರ್‌ ರಸ್ತೆಗಳು, ಸುರಂಗ ಮಾರ್ಗಗಳು, ಸ್ಕೈ ವಾಕ್‌ಗಳು ಮತ್ತು ಈಗಿನ ಉಕ್ಕಿನ ಸೇತುವೆಗಳು ನಿರ್ಮಾಣವಾಗುತ್ತಿವೆ. ಒಂದು ಕಾಲದ ಪಿಂಚಣಿಗರ ಸ್ವರ್ಗ ಎನಿಸಿದ್ದ ಬೆಂಗಳೂರು ಈಗ ಏಕೆ ಅಗ್ನಿ ಕುಂಡವಾಗಿದೆ ಎಂದು ಅರ್ಥವಾಯಿತಲ್ಲ?

ತೀರಾ ಮೊನ್ನೆ ಮೊನ್ನೆ ಕೆರಿಬಿಯನ್‌ ದೇಶ ಹೈಟಿಯಲ್ಲಿ ಏನಾಯಿತು ಎಂದು ಸರ್ಕಾರಕ್ಕೆ ಗೊತ್ತಿರಬೇಕು. ಚಂಡಮಾರುತಗಳು ಅಪ್ಪಳಿಸಿ ಇಡೀ ದೇಶ ತತ್ತರಿಸಿ ಹೋಯಿತು. ಅಲ್ಲಿಯೂ ಅದೇ ಹಾಡು. ದೇಶದಾದ್ಯಂತ ಬೆಳೆದು ನಿಂತಿದ್ದ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ನಿರ್ದಯವಾಗಿ ಕತ್ತರಿಸಿ ಹಾಕಿತು. ಯಾವುದೋ ಒಂದು ಮರ ಧರ್ಮವಿರೋಧಿ ಎಂದು ಅದರ ಮಾರಣಹೋಮವೂ ಧರ್ಮಗುರುಗಳ ನೇತೃತ್ವದಲ್ಲಿ ನಡೆಯಿತು! ಇದೆಲ್ಲ ಒಂದು ಎರಡು ದಿನದಲ್ಲಿ ನಡೆದುದು ಅಲ್ಲ. ದಶಕಗಳ ಕಾಲ ಹೀಗೆಯೇ ಮರಗಳನ್ನು ಕತ್ತರಿಸಿ ಹಾಕಿದರು. ಈಗ ಹೈಟಿ ದೇಶ ನಾಶದ ಅಂಚಿಗೆ ಬಂದು ನಿಂತಿದೆ. ಎಲ್ಲಿಯೋ ಹೈಟಿಯಲ್ಲಿ ಆದುದು ನಮಗೂ ಪಾಠ ಹೇಳುತ್ತಿರಬಹುದು ಎಂದು ನಾವು ಏಕೆ ತಿಳಿದುಕೊಳ್ಳುವುದಿಲ್ಲ?

ಅಭಿವೃದ್ಧಿ ಬೇಡ ಎಂದು ಅಲ್ಲ. ಬೇಕು. ಈ ಎಲ್ಲ ಬಗೆಬಗೆಯ ಸೇತುವೆಗಳು ಅದಕ್ಕೆ ಉತ್ತರವೂ ಆಗಿರಬಹುದು. ಅಥವಾ ಸರ್ಕಾರದಲ್ಲಿ ಇದ್ದವರು, ನಗರ ಯೋಜನಾ ತಜ್ಞರು ಎಂದುಕೊಂಡವರು ಹಾಗೆ ಭಾವಿಸಿರಬಹುದು. ಆದರೆ, ಆದ್ಯತೆಯಲ್ಲಿ ಎಲ್ಲಿಯೋ ಸಮಸ್ಯೆ ಇದ್ದಂತೆ  ಕಾಣುತ್ತದೆ. ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ವಿಮಾನ ನಿಲ್ದಾಣಕ್ಕೆ ಹೋಗುವವರ ಸಲುವಾಗಿಯೇ ಅತಿ ವೇಗದ ಒಂದು ರಸ್ತೆಯನ್ನು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ತರಾತುರಿಯ ತಯಾರಿ ನಡೆದಿತ್ತು. ಸಾರ್ವಜನಿಕರ ತೀವ್ರ ವಿರೋಧದ ನಂತರ ಆ ಯೋಜನೆ ಕಪಾಟು ಸೇರಿತು. ಈಗ ಉಕ್ಕಿನ ಸೇತುವೆಯ ತರಾತುರಿ ಪ್ರಸ್ತಾಪ. ಎಲ್ಲವೂ ಏನೋ ನಿಗೂಢ, ಹುನ್ನಾರ.

ಬೆಂಗಳೂರಿನ ಜನರಿಗೆ ಏನೋ ವಾಸನೆ ಹೊಡೆದಿದೆ. ಸಾಮಾನ್ಯವಾಗಿ ಗಾಢನಿದ್ದೆಯಲ್ಲಿ ಇರುವ ಮತ್ತು ಎಲ್ಲ ಆಗು ಹೋಗುಗಳ ಬಗೆಗೆ ದಿವ್ಯ ನಿರ್ಲಕ್ಷ್ಯದಿಂದ ಇರುವ ಬೆಂಗಳೂರಿನ ಮಂದಿ ಈಗ ಎಚ್ಚೆತ್ತುಕೊಂಡಿದ್ದಾರೆ. ಉಕ್ಕಿನ ಸೇತುವೆಯ ‘ಕಾರಣ’ ಕೇಳುತ್ತಿದ್ದಾರೆ. ಪ್ರಜಾಪ್ರಭುತ್ವ ಎಂದರೆ ಇದೇ. ಅದು ಒಳಗೊಳ್ಳುವಿಕೆ. ಉಕ್ಕಿನ ಸೇತುವೆ ಬೇಡ ಎನ್ನುವವರು ಇಡೀ ಬೆಂಗಳೂರಿನ ಜನರನ್ನು ಪ್ರತಿನಿಧಿಸುತ್ತಾರೆಯೇ ಎಂದು ಸರ್ಕಾರದಲ್ಲಿ ಇದ್ದವರು ಕೇಳಬಹುದು. ಹಾಗಾದರೆ ಬೇಡ ಎನ್ನುವಷ್ಟು ಸಂಖ್ಯೆಯಲ್ಲಿಯಾದರೂ ಜನರನ್ನು ಸೇರಿಸಿ ಉಕ್ಕಿನ ಸೇತುವೆ ಬೇಕು ಎಂದು ಸರ್ಕಾರ ಹೇಳಿಸುತ್ತದೆಯೇ?
ಈ ಸರ್ಕಾರ ನಿರಂಕುಶವಾಗುತ್ತಿದೆ. ಸಾರ್ವಜನಿಕ ಅಭಿಪ್ರಾಯದ ಬಗೆಗೆ ಅದಕ್ಕೆ ಕಿಂಚಿತ್ತೂ ಗೌರವವಿಲ್ಲ. ಕೆಪಿಎಸ್‌ಸಿ ನೇಮಕದಲ್ಲಿ ಹಟ ಸಾಧಿಸಿದ ಸರ್ಕಾರ ಲೋಕಾಯುಕ್ತರ ನೇಮಕದಲ್ಲಿ ಈಗಲೂ ಅದೇ ಮೊಂಡು ಹಟವನ್ನೇ ಮಾಡುತ್ತಿದೆ. ಆ ಸಂಸ್ಥೆಗೆ ಮುಖ್ಯಸ್ಥರ ನೇಮಕ ಆಗದೇ ಎಷ್ಟು ದಿನವಾಯಿತು ಎಂದು ಅದಕ್ಕೆ ನೆನಪು ಇರಲಿಕ್ಕಿಲ್ಲ. ಉಕ್ಕಿನ ಸೇತುವೆ ವಿಚಾರದಲ್ಲಿಯೂ ಸರ್ಕಾರಕ್ಕೆ ಅದೇ ಮುಂದುವರಿದ ಹಟ. ಉಪಾಯವಿಲ್ಲ. ಬೆಂಗಳೂರು ಅತ್ಯಂತ ವಿಕಾರವಾದ, ಭಯಾನಕವಾದ ಮತ್ತು ಕುರೂಪಿಯಾದ ಒಂದು ಯೋಜನೆಗೆ ತನ್ನನ್ನು ಒಡ್ಡಿಕೊಳ್ಳಬೇಕಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಗುರುಗಳಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರನ್ನು ಗಾಢವಾಗಿ ಪ್ರಭಾವಿಸಿದ್ದ  ರಾಮಮನೋಹರ ಲೋಹಿಯಾ ಅವರ ಒಂದು ಮಾತನ್ನು ಇಲ್ಲಿ ಹೇಳಬಹುದು ಎಂದುಕೊಂಡೆ. ಬೆಂಗಳೂರಿನ ಮಾತು ಬಂದಾಗಲೆಲ್ಲ ನನಗೆ ಇದು ನೆನಪಾಗುತ್ತದೆ: ‘ಪ್ರಪಂಚದ ರಾಜಧಾನಿಗಳಲ್ಲೆಲ್ಲ ಅತ್ಯಂತ ಮೋಹಕಳೂ ಅತ್ಯಂತ ಭ್ರಷ್ಟಳೂ ಆದ  ನಾಯಕಸಾನಿ ಡೆಲ್ಲಿ... ಅನಾಗರಿಕ ಕ್ರೂರಿಗಳಿಂದ ಆಕೆ ಹೆಚ್ಚೂ ಕಡಿಮೆ ಸತತವಾಗಿ ದಮನಕ್ಕೆ ಒಳಗಾಗಿದ್ದಾಳೆ.’

ಸುಕೋಮಲವಾದ, ದೆಹಲಿಗಿಂತ ಮೋಹಕವಾದ ಬೆಂಗಳೂರಿನ ಮೇಲೆ ಈ ಸರ್ಕಾರ ಈಗ ಮಾಡಲು ಹೊರಟಿರುವುದು ಏನು ಕಡಿಮೆ ದೌರ್ಜನ್ಯವೇ?...

Comments
ಈ ವಿಭಾಗದಿಂದ ಇನ್ನಷ್ಟು
ಈಗ ದಾರಿಗಳು ಅಗಲುವ ಸಮಯ...

ನಾಲ್ಕನೇ ಆಯಾಮ
ಈಗ ದಾರಿಗಳು ಅಗಲುವ ಸಮಯ...

27 Aug, 2017
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

ನಾಲ್ಕನೇ ಆಯಾಮ
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

20 Aug, 2017
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

ನಾಲ್ಕನೇ ಆಯಾಮ
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

13 Aug, 2017
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

ನಾಲ್ಕನೇ ಆಯಾಮ
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

6 Aug, 2017
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

ನಾಲ್ಕನೇ ಆಯಾಮ
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

30 Jul, 2017