ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕುಗಳಿಗೂ ಜಾಗ ಕೊಡಿ

Last Updated 23 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
-ಆರ್. ಬಿ. ಗುರುಬಸವರಾಜ ಹೊಳಗುಂದಿ
*
ಬಹುತೇಕ ಮಕ್ಕಳು ಸಂಕಷ್ಟದಲ್ಲಿರುವುದನ್ನು ಪ್ರತಿನಿತ್ಯ ಕಾಣುತ್ತಿರುತ್ತೇವೆ. ಶಾಲೆಗೆ ದಾಖಲಾಗದ ಮಕ್ಕಳ ಸಮಸ್ಯೆಗಳು ಒಂದು ರೀತಿಯಾದರೆ  ಶಾಲೆಗೆ ದಾಖಲಾದ ಮಕ್ಕಳ ಸಮಸ್ಯೆಗಳು ಮತ್ತೊಂದು ರೀತಿಯವು.
 
ಕೆಲವು ಮಕ್ಕಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಮಕ್ಕಳ ಮೂಲಭೂತ ಅವಶ್ಯಕತೆಗಳ ಕೊರತೆ ಹಾಗೂ ಸಮುದಾಯದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಉಂಟಾಗುವ ಅಡೆತಡೆಗಳೇ ಅವರ ಕಾನೂನು ಬಾಹಿರ ಚಟುವಟಿಕೆಗಳೇ ಕಾರಣವಾಗಿವೆ. ಮಕ್ಕಳಿಗೆ ಎಲ್ಲ ಹಕ್ಕುಗಳು ದೊರಕಬೇಕಾದರೆ ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಉನ್ನತೀಕರಿಸುವ ವಾತಾವರಣವನ್ನು ನಿರ್ಮಿಸಬೇಕಾಗುತ್ತದೆ.  
 
ಕ್ಲಬ್‌ನ ಅವಶ್ಯಕತೆ
ಕುಟುಂಬ, ಶಾಲೆ ಮತ್ತು ಸಮುದಾಯಗಳ ಒಳಗೆ ಮತ್ತು ಹೊರಗೆ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಅವಕಾಶಗಳು ದೊರೆಯುತ್ತಿಲ್ಲ. ಗಂಡು-ಹೆಣ್ಣು, ಬಡವ-ಶ್ರೀಮಂತ, ಜಾತಿ–ಧರ್ಮ, ಆಹಾರ–ಬಣ್ಣ,  ಉಡಿಗೆ–ತೊಡಿಗೆ ಮುಂತಾದ ವಿಷಯಗಳ ಕಾರಣಗಳಿಂದಾಗಿ ಮಕ್ಕಳು ಅವರ ಹಕ್ಕುಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಇಂತಹ ತಾರತಮ್ಯಗಳನ್ನು ಹೋಗಲಾಡಿಸಲು ಪ್ರತಿ ಶಾಲೆಯಲ್ಲೂ ಮಕ್ಕಳ ಹಕ್ಕುಗಳ ಕ್ಲಬ್ ರಚನೆಯಾಗಬೇಕಿದೆ.
 
ಕ್ಲಬ್‌ನ ಹಿನ್ನಲೆ: 1989ರ ನವೆಂಬರ್ 20ರಂದು ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಅಂಗೀಕರಿಸಿದೆ. ಈ ಒಡಂಬಡಿಕೆ ಪ್ರಕಾರ ಮಕ್ಕಳೆಲ್ಲರೂ ಬದುಕಿ ಬಾಳುವ, ರಕ್ಷಣೆ ಪಡೆದು ಸರ್ವಾಂಗೀಣ ಅಭಿವೃದ್ದಿ ಹೊಂದುವ ಹಾಗೂ ಮಾನಸಿಕ ವಿಕಾಸ ಹೊಂದುವ, ಸಂಘಟಿತರಾಗಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳನ್ನು ಹೊಂದಿದ್ದಾರೆ. 1992ರ ಡಿಸೆಂಬರ್ 11ರಂದು ಭಾರತವೂ ಈ ಒಡಂಬಡಿಕೆಯನ್ನು ಒಪ್ಪಿಕೊಂಡಿದೆ. ಈ ಒಡಂಬಡಿಕೆಯಲ್ಲಿ 54 ಪರಿಚ್ಛೇಧಗಳಿವೆ.
 
ಅದರಲ್ಲಿ 40 ಪರಿಚ್ಛೇಧಗಳು ನೇರವಾಗಿ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ದಿ ಮತ್ತು ಭಾಗವಹಿಸುವಿಕೆಗೆ ಸಂಬಂಧಿಸಿವೆ. 2009ರಿಂದ ಭಾರತದೇಶದಲ್ಲಿ  6–14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣವು ಮೂಲಭೂತ ಹಕ್ಕು ಆಗಿದೆ. ಆ ಮೂಲಕ ಮಕ್ಕಳೂ ಸಹ ದೇಶದ ಒಂದು ಸಂಪತ್ತು ಎಂಬುದನ್ನು ನಿರ್ಧರಿಸಿದೆ. 
 
ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್‌ನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು ಎಂದು ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಆದರೆ ಇದಕ್ಕೂ ಮುಂಚೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಅಂದರೆ  2005ರಲ್ಲೇ ದಾವಣಗೆರೆ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ಅಸ್ತಿತ್ವಕ್ಕೆ ತರುವ ಪ್ರಯತ್ನಗಳು ನಡೆದಿದ್ದವು. 
 
ಮಕ್ಕಳ ಹಕ್ಕುಗಳ ಕ್ಲಬ್‌ನ ಉದ್ದೇಶಗಳು
* ಮಕ್ಕಳ ಹಕ್ಕುಗಳನ್ನು ಮತ್ತು ಮಕ್ಕಳಿಗಾಗಿ ಇರುವ ಕಾನೂನುಗಳನ್ನು ಎತ್ತಿ ಹಿಡಿಯುವುದು.
* ಪ್ರತಿ ಶಾಲೆಯಲ್ಲೂ ಮಕ್ಕಳ ಹಕ್ಕುಗಳನ್ನು ಕಾರ್ಯಗತ ಮಾಡುವಂತಹ ವಾತಾವರಣವನ್ನು ನಿರ್ಮಿಸುವುದು.  
* ಶಾಲೆಗೆ ದಾಖಲಾದ ಯಾವುದೇ ಮಗು ಶಾಲೆ ಬಿಡದಂತೆ ವಿಶೇಷ ಕಾರ್ಯಚಟುವಟಿಕೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು.  
* ಶಾಲೆ ಬಿಟ್ಟ ಮಕ್ಕಳನ್ನು ಹಾಗೂ ಬಾಲಕಾರ್ಮಿಕ ಮಕ್ಕಳನ್ನು ಮುಖ್ಯವಾಹಿನಿಗೆ ಬರುವಂತೆ ಮಾಡುವುದು.  
* ಜೀತಪದ್ಧತಿಗೆ ಒಳಗಾದ ಮಕ್ಕಳನ್ನು ಬಂಧಮುಕ್ತಗೊಳಸಿ ಮುಖ್ಯವಾಹಿನಿಗೆ ಕರೆತರುವುದು.
* ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯಗಳನ್ನು ಖಂಡಿಸುವುದು. 
 
ಮಕ್ಕಳ ಹಕ್ಕುಗಳ ಕ್ಲಬ್ ಅಂದರೆ:  ಮಕ್ಕಳು ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಮಾಡಿಕೊಂಡ ಒಂದು ಸಂಘವೇ ಮಕ್ಕಳ ಹಕ್ಕುಗಳ ಕ್ಲಬ್. ಮಕ್ಕಳ ಹಕ್ಕುಗಳ ಕ್ಲಬ್‌ನಲ್ಲಿ ಯಾರಿರಬೇಕು?: ಮಕ್ಕಳ ಹಕ್ಕುಗಳ ಕ್ಲಬ್‌ಗೆ ತರಗತಿಯಿಂದ ಕನಿಷ್ಠ ಆರು ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಶೇ. 50ರಷ್ಟು ಬಾಲಕಿಯರಿಗೆ ಅವಕಾಶ ನೀಡಬೇಕು. ಹಿರಿಯ ಪ್ರಾಥಮಿಕ ಶಾಲೆಗಳಾದರೆ 5ರಿಂದ  7/8ನೇ ತರಗತಿವರೆಗಿನ ಮಕ್ಕಳನ್ನು ಹಾಗೂ ಪ್ರೌಢಶಾಲೆಗಳಲ್ಲಿ 8–10ನೇ ತರಗತಿ ಮಕ್ಕಳನ್ನು ಆಯ್ಕೆ ಮಾಡಬಹುದು. 
 
ಅಂತಿಮವಾಗಿ 18ರಿಂದ 24 ಮಕ್ಕಳು ಇರುವ ಕ್ಲಬ್ ರಚಿಸಬೇಕು. ಎಸ್.ಡಿ.ಎಂ.ಸಿ ಅಧ್ಯಕ್ಷರು, ಇಬ್ಬರು ಮಕ್ಕಳಸ್ನೇಹಿ ಶಿಕ್ಷಕರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಈ ಕ್ಲಬ್‌ನಲ್ಲಿ ಪದನಿಮಿತ್ತ ಸದಸ್ಯರಾಗಿ ಮತ್ತು ಕೇವಲ ಮಾರ್ಗದರ್ಶಕರಾಗಿ ಇರುತ್ತಾರೆ. ಕ್ಲಬ್‌ನ ಕಾರ್ಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಕ್ಕಳೇ ನಿರ್ವಹಿಸುತ್ತಾರೆ ಮತ್ತು ಎಲ್ಲ ತೀರ್ಮಾನಗಳನ್ನು ಮಕ್ಕಳೇ ತೆಗೆದುಕೊಳ್ಳುತ್ತಾರೆ.
 
ಮಕ್ಕಳ ಗುಣಲಕ್ಷಣ ಹೀಗಿರಲಿ
ಪ್ರತಿದಿನವೂ ಶಾಲೆಗೆ ಹಾಜರಾಗುತ್ತಿರಬೇಕು. ತರಗತಿ/ಶಾಲೆಯ ಎಲ್ಲ ಮಕ್ಕಳ ಜೊತೆ ಸಮಾನತೆಯಿಂದ ಬೆರೆಯಬೇಕು. ವಿವಿಧ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮತ್ತು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುವ ಕ್ರೀಯಾಶೀಲತೆ ಇರಬೇಕು. ಅನ್ಯಾಯಗಳನ್ನು ಖಂಡಿಸುವ ಮನೋಭಾವ ಇರಬೇಕು. 
 
ಕಾರ್ಯಚಟುವಟಿಕೆ
ಕ್ಲಬ್‌ನ ಸದಸ್ಯರು ಪ್ರತಿ ತಿಂಗಳಿಗೊಮ್ಮೆ ನಿಗದಿತ ದಿನಾಂಕದಂದು ಸಭೆ ಸೇರಿ ನಡೆದ ಚಟುವಟಿಕೆಗಳ ಬಗ್ಗೆ ಪರಾಮರ್ಶಿಸಬೇಕು; ಮುಂದಿನ ತಿಂಗಳ ಯೋಜನೆ ತಯಾರಿಸಬೇಕು. ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುವ ಬೀದಿನಾಟಕಗಳು, ಗೋಷ್ಠಿಗಳು, ಪತ್ರಚಳವಳಿ, ಹೋರಾಟ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.
 
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು. ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ಅಥವಾ ವಿಳಂಬವಾದಾಗ, ಮಕ್ಕಳ ಹಕ್ಕುಗಳ ಉಲ್ಲಂಘನೆ ಆದಾಗ, ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ, ಕಿರುಕುಳಗಳು ಎದುರಾದಾಗ ಕ್ಲಬ್‌ ವಿರೋಧಿಸಬೇಕು.
 
ಕ್ಲಬ್‌ನ ಸಭೆಯ ನಡವಳಿಕೆಗಳನ್ನು ಪ್ರತ್ಯೇಕ ಪುಸ್ತಕದಲ್ಲಿ ದಾಖಲಿಸಿ ಹಾಜರಿದ್ದವರ ಸಹಿ ಪಡೆಯಬೇಕು. ವರ್ಷಕ್ಕೆ ಕನಿಷ್ಠ ಮೂರು ಸಾಮಾನ್ಯ ಸಭೆಗಳನ್ನು ನಡೆಸಬೇಕು. ಸಾಮಾನ್ಯ ಸಭೆಯಲ್ಲಿ ಎಲ್ಲ ಮಕ್ಕಳು ಮತ್ತು ಪೋಷಕರು ತಪ್ಪದೇ ಪಾಲ್ಗೊಳ್ಳುವಂತೆ ಮಾಡಬೇಕು.
 
ಹೀಗೆ ಕ್ಲಬ್ ಮಕ್ಕಳ ಪರವಾದ ಕಾರ್ಯತಂತ್ರಗಳನ್ನು ಆಯೋಜಿಸುವ ಮೂಲಕ ವರ್ಷವಿಡೀ ಚಲನಶೀಲವಾಗಿರಬೇಕು. ಇದಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನ ಸಲಹೆಗಳನ್ನು ಪಾಲಕರು ಶಿಕ್ಷಕರು ನೀಡುಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT