ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಹಲವು ‘ಆಯ್ಕೆ’

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
‘ನನಗೂ ಲವ್‌ ಫೇಲ್ಯೂರ್ ಆಗಿತ್ತು. ಸರಿಯಾಗಿ ಓದದೆ ಕಾಲೇಜಿನಲ್ಲಿ ಬೈಸಿಕೊಳ್ಳುತ್ತಿದ್ದೆ. ತಂದೆ–ತಾಯಿ ನನ್ನ ಮೇಲೆ ಭರವಸೆ ಕಳೆದುಕೊಂಡಿದ್ದರು. ಜೀವನದ ಪ್ರತಿ ಹಂತದಲ್ಲೂ ಬರೀ ಸೋಲನ್ನೇ ಕಂಡು ಸಾಯಬೇಕು ಎನಿಸಿತು ಹೋರಟೆ ಆಗ...’ ಎಂದು ಕಥೆ ಹೇಳಲು ಆರಂಭಿಸುತ್ತಾರೆ ರೋಹಿತ್‌ ಜಿ.ಎ.
 
ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ‘ಫ್ಲಾಶ್‌ ಭಯಂಕರ ಫ್ಯೂಚರ್‌?’ ಎಂಬ 14 ನಿಮಿಷದ ಕಿರುಚಿತ್ರ ನಿರ್ಮಿಸಿದ್ದಾರೆ. ಒಟ್ಟು 15 ನಿಮಿಷದ ಈ ಕಿರುಚಿತ್ರದಲ್ಲಿ ವಿದ್ಯಾರ್ಥಿಯೊಬ್ಬ ಎಲ್ಲರಿಂದ ಗೇಲಿಗೆ ಒಳಗಾಗುತ್ತಾನೆ. ಸ್ನೇಹಿತರನ್ನು ಕಳೆದುಕೊಂಡಿರುತ್ತಾನೆ, ಪ್ರೀತಿಸಿದ ಹುಡುಗಿ ಬಿಟ್ಟು ಹೋಗುತ್ತಾಳೆ, ಫೇಲಾಗಿ ಶಿಕ್ಷಕರಿಂದಲೂ ಛೀಮಾರಿ ಹಾಕಿಸಿಕೊಳ್ಳುತ್ತಾನೆ. ಬರೀ ಸೋಲನ್ನೇ ಕಂಡು ಜೀವನದ ಮೇಲೆ ಜುಗುಪ್ಸೆಗೊಂಡು ಇನ್ನು ಬದುಕಿ ಪ್ರಯೋಜನವಿಲ್ಲ ಎಂದುಕೊಂಡು ಆತ್ಮಹತ್ಯೆಗೆ ನಿರ್ಧರಿಸುತ್ತಾನೆ.
 
ಅವನು ಹೋಗುವ ದಾರಿಯಲ್ಲಿ ಗೆಳತಿಯೊಬ್ಬಳು ಸಿಕ್ಕಿ ತನಗೂ ಲಿಫ್ಟ್‌ ಕೊಡುವಂತೆ ಕೇಳಿಕೊಳ್ಳುತ್ತಾಳೆ. ದಾರಿ ಮಧ್ಯೆ ಹೋಟೆಲ್‌ ಒಂದರಲ್ಲಿ ತಿಂಡಿ ತಿನ್ನಲು ಇಳಿಯುತ್ತಾರೆ. ಹೋಟೆಲ್‌ನಲ್ಲಿ ತಿಂಡಿಗೆ ಏನೇನು ಇದೆ ಎಂದು ಕೇಳುತ್ತಾರೆ.
 
‘ದೋಸೆ, ಇಡ್ಲಿ...’ ಎಂದು ಮಾಣಿ ಹೋಟೆಲ್‌ನ ಸಂಪೂರ್ಣ ತಿಂಡಿ ಪಟ್ಟಿಯನ್ನು ಹೇಳಲು ಶುರು ಮಾಡುತ್ತಾನೆ. ಸಾಯಲು ಹೋರಟವ ‘ಸಾಲು ಸಾಲು ಆಯ್ಕೆ’ ಕೇಳಿ ಗೊಂದಲಕ್ಕೊಳಗಾಗುತ್ತಾನೆ. 
 
ಒಂದು ಹೊತ್ತಿನ ಊಟಕ್ಕೇ ಇಷ್ಟು ಆಯ್ಕೆ, ಅವಕಾಶಗಳು ಇರಬೇಕಾದರೆ ಇಡೀ ಬದುಕಿಗೆ ಎಷ್ಟು ಆಯ್ಕೆ ಇರಬಹುದು ಎಂದು ಯೋಚಿಸುತ್ತಾನೆ. ಸಕಾರಾತ್ಮಕ ಆಲೋಚನೆಯಿಂದ ಆತ್ಮಹತ್ಯೆ ಆಲೋಚನೆ ಬಿಟ್ಟು ಮುಂದೇನು ಮಾಡಬಹುದು ಎಂದು ಯೋಚಿಸುವಲ್ಲಿಗೆ ಕಿರುಚಿತ್ರ ಮುಗಿಯುತ್ತದೆ.
 
ಆದರೆ ಕಿರುಚಿತ್ರದ ಟೈಟಲ್‌ ಮತ್ತೆ ಬಳಸಿಕೊಂಡು, ‘ಫ್ಲಾಶ್‌ ಭಯಂಕರ ಫ್ಯೂಚರ್‌ ನಿರಂತರ’ ಎಂದು ‘?’ ತೆಗೆದು ‘ನಿರಂತರ’ ಸೇರಿಸಿದ್ದಾರೆ. ಈ ಟೈಟಲ್‌ ಬದಲಾವಣೆ ಕಿರುಚಿತ್ರದ ಎರಡನೇ ಭಾಗಕ್ಕೆ  ಮುನ್ನುಡಿಯಂತೆ ಇದೆ.
 
ಯೂಟ್ಯೂಬ್‌ನಲ್ಲಿ ಒಂದನೇ ಭಾಗ ಮಾತ್ರ ಬಿಡುಗಡೆಗೊಂಡಿದೆ. ಮತ್ತೊಂದು ಭಾಗ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಕಿರುಚಿತ್ರ ಬಿಡುಗಡೆಗೂ ಮುನ್ನ ಕೆ.ಎಸ್.ಎಸ್.ಇ.ಎಂ. ಕಾಲೇಜು, ಎಸ್.ಜೆ.ಬಿ.ಐ.ಟಿ. ಕಾಲೇಜು, ದಯಾನಂದ ಸಾಗರ ಕಾಲೇಜುಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಳೆದ ವಾರ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.
 
ಈ ಕಿರುಚಿತ್ರದ ಛಾಯಾಗ್ರಹಣ ಮತ್ತು ಸಂಕಲನ ವಿವನ್‌ ಆಕಾಶ್‌ ಅವರದು. 19 ವರ್ಷದ ಈ ಹುಡುಗ ಸಂಕಲನ ಮಾಡುವುದನ್ನು ಯೂಟ್ಯೂಬ್‌ನಿಂದಲೇ ಕಲಿತನಂತೆ. ಸಂಗೀತ ಸಂಯೋಜನೆಗೆ ಹಣ ಖರ್ಚು ಮಾಡಿರುವುದು ಬಿಟ್ಟರೆ ಸಂಪೂರ್ಣ ವಿದ್ಯಾರ್ಥಿ ತಂಡವೇ ಕಿರುಚಿತ್ರವನ್ನು ನಿರ್ವಹಿಸಿದೆ. ವೃತ್ತಿಪರತೆಯ ಕೊರತೆ ಇದ್ದರೂ ಕಿರುಚಿತ್ರದುದ್ದಕ್ಕೂ ಉತ್ಸಾಹ ಎದ್ದು ಕಾಣುತ್ತದೆ.
 
ಸಂಭಾಷಣೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿದ್ದಾರೆ.  ನಿರೂಪಣೆಗೆ ಮೊರೆ ಹೋಗಿದ್ದಾರೆ. ಶಾಲಾ ಮಕ್ಕಳು ಮೇಷ್ಟ್ರ ಆಜ್ಞೆಗೆ ಕಾದು ಕುಳಿತಂತೆ, ಅಂಜ್ಞೆ ಸಿಕ್ಕ ತಕ್ಷಣ ತೋಚಿದಂತೆ ನಟಿಸಿದ್ದಾರೆ.
 
ನಿರ್ದೇಶಕ ರೋಹಿತ್‌ ತನ್ನ ಜೀವನದಲ್ಲೇ ನಡೆದ ಘಟನೆಯನ್ನು ಇಟ್ಟುಕೊಂಡು ಚಿತ್ರ ಮಾಡಿರುವುದರಿಂದ ನಾಟಕೀಯತೆ ಇಲ್ಲ. ರೋಚಕತೆಯೂ ಇಲ್ಲ. ಯಾವುದೇ ಕುತೂಹಲ, ಕೌತುಕಗಳನ್ನು ಇಟ್ಟುಕೊಳ್ಳದೆ  ದಿನಚರಿಯಂತೆ ಕಿರುಚಿತ್ರ ಮುಗಿದು ಹೋಗುತ್ತದೆ. 
 
‘ಆತ್ಮಹತ್ಯೆ’ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವಾಗ ಆಗುವ ತಳಮಳಗಳನ್ನು ಪುನೀತ್ ತಮ್ಮ ಮಿತಿಯಲ್ಲೇ ಅಭಿನಯಿಸಿದ್ದಾರೆ. ಕೊನೆಯಲ್ಲಿ ಕಿರುಚಿತ್ರದ ಮೇಕಿಂಗ್‌ ವಿಡಿಯೊ ಕೂಡ ಇದ್ದು ಗಮನ ಸೆಳೆಯುತ್ತದೆ.
ಕಿರುಚಿತ್ರ ವೀಕ್ಷಿಸಲು ಕೊಂಡಿ
https://goo.gl/ZjDYBS
 
**
ಮಿಂಚಿ ಮರೆಯಾಗುವ ಹಾಡು
ಈ ಕಿರುಚಿತ್ರದಲ್ಲಿ ಒಂದು ಪುಟ್ಟ ಗೀತೆಯೂ ಇದ್ದು ಲವಲವಿಕೆಯಿಂದ ಕೂಡಿದೆ. ಸಾಹಿತ್ಯವನ್ನು ‘ಗೆಳೆಯ’ ಸುಮೇಶ್, ಸಂಗೀತ ನಿರ್ದೇಶನವನ್ನು ವಿವೇಕ್‌ ಚಕ್ರವರ್ತಿ ಮಾಡಿದ್ದಾರೆ. ಸಾಹಿತ್ಯ ಮತ್ತು ಸಂಗೀತ ವೃತ್ತಿಪರತೆಯಿಂದ ಕೂಡಿದೆ. ಯುವ ಪ್ರೇಮಿಗಳ ವಿರಹ, ಮೋಹವನ್ನು ಸಣ್ಣ ಝಲಕ್‌ನಲ್ಲಿ ಹಿಡಿದಿಟ್ಟಿದ್ದಾರೆ ನಿರ್ದೇಶಕ ರೋಹಿತ್‌. ಮೂವಿಂಗ್‌ ಶಾಟ್ಸ್‌ನಲ್ಲಿ ವಿಡಿಯೊ ಗುಣಮಟ್ಟ ಉತ್ತಮವಾಗಿದ್ದು, ಸಂಕಲನ ಕೂಡ ಅಚ್ಚುಕಟ್ಟಾಗಿ ಮೂಡಿಬಂದಿದೆ.
 
**
ಇತ್ತೀಚಿನ ದಿನಗಳಲ್ಲಿ ಸಣ್ಣಸಣ್ಣ ವಿಷಯಗಳಿಗೆ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಮ್ಮ ಮುಂದಿನ ಭವಿಷ್ಯದ ಬಗ್ಗೆ, ತಂದೆತಾಯಿ ಬಗ್ಗೆ ಯೋಚಿಸುವುದೇ ಇಲ್ಲ. ಬದುಕಿನ ಅವಕಾಶಗಳ ಬಗ್ಗೆ ತಿಳಿ ಹೇಳುವ ಪ್ರಯತ್ನವನ್ನು ಈ ಕಿರುಚಿತ್ರದ ಮೂಲಕ ಮಾಡಿದ್ದಾನೆ
–ರೋಹಿತ್‌ ಜಿ.ಎ,
ಕಿರುಚಿತ್ರ ನಿರ್ದೇಶಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT