ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಪೂರ್ಣ ಮದುವೆಯ ಕನಸು

Last Updated 24 ಅಕ್ಟೋಬರ್ 2016, 19:37 IST
ಅಕ್ಷರ ಗಾತ್ರ

ಬೆಂಗಳೂರು:  ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳ ಮದುವೆಯ ಆಮಂತ್ರಣ ಪತ್ರಿಕೆ ವಿವಾಹದ ಅದ್ದೂರಿತನವನ್ನು ಬಿಂಬಿಸಿತು.  ಆದರೆ ಮದುವೆ ಸಂಭ್ರಮವನ್ನು ಆಡಂಬರದ ಹೊರತಾಗಿ ಅರ್ಥಪೂರ್ಣವಾಗಿ ಮಾಡಬೇಕು ಎಂಬ ಕನಸಿನೊಂದಿಗೆ  ವಿವಾಹ ಜೀವನಕ್ಕೆ ಕಾಲಿಡಲು ಬೆಂಗಳೂರಿನ ಯುವತಿ ಸುರಭಿ ಎಚ್.ಆರ್. ನಿರ್ಧರಿಸಿದ್ದಾರೆ.

ಸಮಾಜದ ನಿರ್ಲಕ್ಷಿತ ಸಮುದಾಯದ ಮಕ್ಕಳನ್ನು ತಮ್ಮ ಮದುವೆಗೆ ಅತಿಥಿಗಳಾಗಿ ಆಹ್ವಾನಿಸಿ ಅವರನ್ನು  ಸಂಭ್ರಮದಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದಾರೆ. ಈ ವಿಭಿನ್ನ ಪರಿಕಲ್ಪನೆ ಹಂಚಿಕೊಳ್ಳಲು ಫೇಸ್‌ಬುಕ್‌ ಅನ್ನು ವೇದಿಕೆ ಮಾಡಿಕೊಂಡಿದ್ದು,#SevaSeShaadi ಎಂಬ ಹ್ಯಾಷ್‌ಟ್ಯಾಗ್ ಮೂಲಕ ಪ್ರತಿಕ್ರಿಯಿಸುವಂತೆ  ಸ್ನೇಹಿತರು, ಸಂಬಂಧಿಕರನ್ನು ಕೋರಿದ್ದಾರೆ ಎಂದು ‘ಏಷ್ಯಾನೆಟ್ ನ್ಯೂಸಬಲ್’ ವರದಿ ಮಾಡಿದೆ.

ಅತಿಥಿಗಳು ಇವರು: ಮದುವೆಗೆ ಹೋದವರು ಸ್ವಯಂಸೇವಕರಾಗಿ ತೊಡಗಿಸಿಕೊಳ್ಳಬೇಕು. ತಮ್ಮ ಜತೆ ಒಂದು ಮಗುವನ್ನು  ಕರೆದೊಯ್ಯಬೇಕು. ಸೂರಿಲ್ಲದೆ  ಬೀದಿ ಬದಿ ವಾಸಿಸುವ ಮಗುವೂ ಆಗಬಹುದು. ಈ ಮಗುವಿಗೆ ಏನಾದರೂ ಸಹಾಯ ಮಾಡಬೇಕು,  ಒಂದೊಳ್ಳೆ ಪಾರ್ಟಿ ಕೊಡಿಸಬೇಕು ಎಂದು ನಿಮಗೆ ಅನಿಸಿದ್ದರೆ ಅಂತಹ ಮಗುವನ್ನು ಕರೆತರಬಹುದು. ನಗರದ ವಿವಿಧ ವೃದ್ಧಾಶ್ರಮಗಳು, ಅನಾಥಾಶ್ರಮಗಳಲ್ಲಿ ಇರುವವರೂ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. 

ಮದುವೆ ಕಾರ್ಯಕ್ರಮಗಳು: ಎಂದೂ ಇಂತಹ ಕಾರ್ಯಕ್ರಮಗಳಿಗೆ ಆಹ್ವಾನಿತರಾಗದ ಮಕ್ಕಳನ್ನು ಅತಿಥಿಗಳಾಗಿ ಆಹ್ವಾನಿಸಿ ಅವರಿಗೆ ಮೆಹಂದಿ ಹಾಕುವುದು, ಮುಖಕ್ಕೆ ಬಣ್ಣ ಹಚ್ಚುವುದು ಮಾಡಲಾಗುತ್ತದೆ. ಅವರಿಗೆ ಪುಷ್ಕಳ ಊಟ ಬಡಿಸಲಾಗುತ್ತದೆ. ಈ ಕೆಲಸಗಳನ್ನು ಸ್ವಯಂಸೇವಕರು ಮಾಡಬೇಕು. ಮಕ್ಕಳನ್ನು ರಂಜಿಸಲು ಸಂಗೀತ, ನೃತ್ಯ ಕಾರ್ಯಕ್ರಮ ನೀಡಬಹುದು.

‘ಸ್ವಯಂಸೇವಕರು ಇದಕ್ಕೆ ಮೊದಲು ಫೇಸ್‌ಬುಕ್‌ನಲ್ಲಿ ನೋಂದಣಿ ಮಾಡಿಸಿ  ಕೊಳ್ಳಬೇಕು. ನಮ್ಮ ಸಮಾಜಕ್ಕೆ ಏನಾದರೂ ಕೊಡಬೇಕು ಎನಿಸುವವರು ಈ ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಳ್ಳಿ’ ಎಂದು ಸ್ವತಃ ಸುರಭಿ ಅವರು ಫೇಸ್‌ಬುಕ್‌ನಲ್ಲಿ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ. ನ.6ರಂದು ಸೌಂತ್ ಎಂಡ್ ಸರ್ಕಲ್ ಬಳಿಯ ಸಂಸ್ಕೃತಿ ಕನ್ವೆನ್‌ಷನ್ ಹಾಲ್‌ನಲ್ಲಿ ಸಂಜೆ 7ರಿಂದ 10 ಗಂಟೆವರೆಗೆ ಮದುವೆ ಆರತಕ್ಷತೆ ನಡೆಯಲಿದೆ.

ಸುರಭಿ ಅವರು ಕೈರೋಸ್ ಸೊಸೈಟಿ ಇಂಡಿಯಾದಲ್ಲಿ ಸಾರ್ವಜನಿಕ ವ್ಯವಹಾರ ನಿರ್ದೇಶಕರು ಮತ್ತು ಪೊಲಿಟಿಕಲ್ ಕೋಶಂಟ್ ಕನ್ಸಲ್ಟಂಟ್‌ನ ಸ್ಥಾಪಕರು. ಇವರನ್ನು ವರಿಸುತ್ತಿರುವ ಯುವಕ ಮುಂಬೈ ಮೂಲದ ಹೇಮಂತ್. ಇಂತಹ ವಿಭಿನ್ನ ಮದುವೆ ಆಯೋಜಿಸುವುದು ಇಬ್ಬರ ಕನಸಾಗಿತ್ತು ಎಂದು ಸುರಭಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT