ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೋದ್ಯಮಗಳಿಗೆ ನಷ್ಟ ನಿರ್ವಹಣೆ ಹೊಣೆ

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ : ನಷ್ಟದಲ್ಲಿರುವ ಸಂಸ್ಥೆಗಳ ಸಾಲದ ಪ್ರಮಾಣ (ಎನ್‌ಪಿಎ)  ತಗ್ಗಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಉಕ್ಕು, ಕಲ್ಲಿದ್ದಲು ಮತ್ತು ಬಂದರು ಉದ್ದಿಮೆಗೆ ಸಂಬಂಧಿಸಿದ ಕೆಲ ಸಂಸ್ಥೆಗಳ  ನಷ್ಟ ನಿರ್ವಹಣೆ ಹೊಣೆಗಾರಿಕೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ.

‘ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್‌ಟಿಪಿಸಿ)  ಮತ್ತು ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್‌)ನಂತಹ ಸರ್ಕಾರಿ ಸ್ವಾಮ್ಯದ  ಸಂಸ್ಥೆಗಳು ನಷ್ಟ ನಿರ್ವಹಣೆ ಜವಾಬ್ದಾರಿ ಹೊರಲಿವೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದರು.

ನಷ್ಟದಲ್ಲಿರುವ ಉಕ್ಕು, ವಿದ್ಯುತ್‌ ಮತ್ತು ಬಂದರು ವಲಯಗಳ ಪುನಃಶ್ಚೇತನಕ್ಕೆ ಸಂಬಂಧಿಸಿದಂತೆ ಸಚಿವ  ಜೇಟ್ಲಿ  ಸೋಮವಾರ ಇಲ್ಲಿ ಸಭೆ ನಡೆಸಿದರು.  ಹಣಕಾಸು ಸೇವೆಗಳ ಇಲಾಖೆ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳು ಮತ್ತು ಉಕ್ಕು, ಕಲ್ಲಿದ್ದಲು ಮತ್ತು ಬಂದರು ವಲಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

‘ಸಾಲ ತಗ್ಗಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕೆಲವು ಕಡೆಗಳಲ್ಲಿ ಕೇಂದ್ರ ಸರ್ಕಾರವೇ ಸಮಸ್ಯೆ ಬಗೆಹರಿಸಲಿದೆ. ಇನ್ನೂ ಕೆಲವೆಡೆಗಳಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಷ್ಟದಲ್ಲಿರುವ ಉದ್ದಿಮೆಗಳ ನಿರ್ವಹಣೆ ಮಾಡಲಿವೆ’ ಎಂದರು.

‘ಸುಸ್ತಿದಾರ ಸಂಸ್ಥೆಗಳ ಆಸ್ತಿಯನ್ನು ಯಾರೂ ಖರೀದಿಸಲು ಮುಂದಾಗದಿದ್ದರೆ ಅಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಅವುಗಳ ಸಾಲವನ್ನು ಷೇರುಗಳಾಗಿ ಪರಿವರ್ತಿಸಬೇಕು. ಆಗ ಕೆಲವು ಸಂಸ್ಥೆಗಳು ಅದನ್ನು ಖರೀದಿಸಲು ಮುಂದಾಗುತ್ತವೆ ’ ಎಂದು ಬ್ಯಾಂಕ್‌ಗಳಿಗೆ ಸಲಹೆ ನೀಡಿದರು.

ಈ ಕುರಿತು ಸಂಬಂಧಪಟ್ಟ ವಲಯದ ಕಾರ್ಯದರ್ಶಿಗಳು ಬ್ಯಾಂಕ್‌ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮಧ್ಯೆ ಹೊಂದಾಣಿಕೆ ಮೂಡಿಸುವ ಕೆಲಸ ಮಾಡುವಂತೆ ಸೂಚನೆ ನೀಡಿದರು. ಮೂರೂ ವಲಯಗಳ ವಸೂಲಿಯಾಗದ ಸಾಲದ ಪ್ರಮಾಣವು 2015–16ರಲ್ಲಿ ₹4.76 ಲಕ್ಷ ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT