ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಬಾಲೆಯರಲ್ಲಿ ವಿಜ್ಞಾನಿಗಳಾಗುವ ಕನಸು

ಐಐಎಸ್‌ಸಿಯಲ್ಲಿ ವಿಶಿಷ್ಟ ವಿಜ್ಞಾನ ಶಿಬಿರ
Last Updated 24 ಅಕ್ಟೋಬರ್ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು: ಒಬ್ಬ ಬಾಲಕಿಗೆ  ಜೀವ ವಿಜ್ಞಾನಿ ಆಗುವ ಆಸೆ, ಮತ್ತೊಬ್ಬಳಿಗೆ ಖಗೋಳ ಭೌತಶಾಸ್ತ್ರಜ್ಞೆ ಆಗುವ ಬಯಕೆ. ಹೀಗೆ ಇಲ್ಲಿದ್ದ 30 ಕ್ಕೂ ಹೆಚ್ಚು ಬಾಲಕಿಯರಿಗೆ ವಿಜ್ಞಾನಿಗಳಾಗುವ ಅದಮ್ಯ ಉತ್ಸಾಹ.

ಭಾರತೀಯ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಪುಟ್ಟ ಸಭಾಂಗಣದಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ ಅದರಲ್ಲೂ ಗ್ರಾಮಾಂತರ ಪ್ರದೇಶದ ಬಾಲಕಿಯರೇ ಸೇರಿದ್ದರು. ಅವರೆಲ್ಲರ ಮನಸ್ಸಿನಲ್ಲೂ ವಿಜ್ಞಾನಿಗಳಾಗಬೇಕೆಂಬ ಕನಸಿತ್ತು. ಬ್ಲಾಕ್‌ ಹೋಲ್‌, ಇಂಟರ್‌ಸ್ಟೆಲ್ಲರ್‌, ಗುರುತ್ವ ಅಲೆಯ ಬಗ್ಗೆ ವಿಜ್ಞಾನಿಗಳಲ್ಲಿ ತಮ್ಮ ಸಂದೇಹ ಮುಂದಿಟ್ಟು, ಉತ್ತರಗಳನ್ನು ಪಡೆದುಕೊಳ್ಳುತ್ತಿದ್ದರು.

ರಾಜ್ಯ ಸರ್ಕಾರ ಆರಂಭಿಸಿರುವ ‘ಚೇತನ– ಸ್ಕಾಲರ್‌’ ಕಾರ್ಯಕ್ರಮದಡಿ ಆಯ್ಕೆಯಾದ ಪ್ರತಿಭಾವಂತ ಬಾಲಕಿಯರನ್ನು ವಿಜ್ಞಾನದತ್ತ  ಸೆಳೆಯುವ ವಿಜ್ಞಾನ ಶಿಬಿರದಲ್ಲಿ ಕಂಡ ದೃಶ್ಯವಿದು.

ಮೊದಲ ವಿಜ್ಞಾನ ಕ್ಯಾಂಪ್‌ ಮೈಸೂರಿನ ಇನ್‌ಫೋಸಿಸ್‌ನಲ್ಲಿ 5 ದಿನಗಳ ಕಾಲ ನಡೆದಿತ್ತು. ಇದೀಗ ಎರಡನೇ ಕ್ಯಾಂಪ್‌ ನಗರದ ಬೇರೆ ಬೇರೆ ವಿಜ್ಞಾನ ಸಂಸ್ಥೆಗಳಲ್ಲಿ ನಡೆಯುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳ 354 ಬಾಲಕಿಯರು ನಗರದ  ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ವಿಜ್ಞಾನ ಸಂಸ್ಥೆಗಳಲ್ಲಿ  ಪ್ರಯೋಗಾಲಯಗಳ ಭೇಟಿ, ವಿಜ್ಞಾನಿಗಳಿಂದ ಉಪನ್ಯಾಸ ಮತ್ತು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಭಾರತೀಯ  ವಿಜ್ಞಾನ ಸಂಸ್ಥೆಯಲ್ಲಿ 10 ದಿನಗಳ ವಿಜ್ಞಾನದ ಕಾರ್ಯಕ್ರಮದಲ್ಲಿ (ರೆಸಿಡೆನ್ಷಿಯಲ್‌ ಸೈನ್ಸ್‌ ಕ್ಯಾಂಪ್‌) ಪಾಲ್ಗೊಂಡಿದ್ದ ಬಾಲಕಿಯರು ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಈ  ವಿಜ್ಞಾನ ಶಿಬಿರ ಆಯ್ಕೆ ಆಗಿ ಬಂದುದರಿಂದ ವಿಜ್ಞಾನ ಕ್ಷೇತ್ರವನ್ನೇ ವೃತ್ತಿ ಜೀವನವನ್ನಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ಮೂಡಿದೆ. ವಿಶ್ವ ದರ್ಜೆಯ ಪ್ರಯೋಗಾಲಯಗಳಿಗೆ ಬಂದು ವಿಶಿಷ್ಟ ಅನುಭವ ಪಡೆಯಲು ಸಾಧ್ಯವಾಗಿರುವುದು ನಮ್ಮ ಜೀವನದ ಅತ್ಯುತ್ತಮ ಅವಕಾಶ. ಜೀವ ವಿಜ್ಞಾನದ ಬಗ್ಗೆ ಆಸಕ್ತಿ ಇರುವ ನನಗೆ ಇಲ್ಲಿನ ಪ್ರಯೋಗಾಲಯ ನೋಡಿ ಅಚ್ಚರಿ ಆಯಿತು’ ಎಂದು ಮೈಸೂರಿನ ಆದರ್ಶ ಸರ್ಕಾರಿ ವಿದ್ಯಾಲಯದ ವಿದ್ಯಾರ್ಥಿನಿ ರಚಿತಾ ಹೇಳಿದರು.

ಕೊಳ್ಳೆಗಾಲ ತಾಲ್ಲೂಕಿನ ಅಶ್ವಿನಿ ಮಾತನಾಡಿ, ‘ನನಗೆ ಖಭೌತಶಾಸ್ತ್ರ ವಿಷಯದಲ್ಲಿ ಆಸಕ್ತಿ ಇದೆ. ಶಾಲೆಯಲ್ಲಿ ಗೊತ್ತಿಲ್ಲದ ಬಹುತೇಕ ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳಲು ಸಾಧ್ಯವಾಯಿತು. ವಿಜ್ಞಾನಿಗಳೇ ಬಂದು ಪಾಠ ಮಾಡುತ್ತಾರೆ. ನಮ್ಮ ವೃತ್ತಿ ಜೀವನಕ್ಕೆ ಅನುಕೂಲ ಆಗುವ ಸಾಕಷ್ಟು ಅಂಶಗಳನ್ನು ಹೇಳಿಕೊಡುತ್ತಿದ್ದಾರೆ ’ಎಂದರು.

ಬೆಳಗಾವಿ ಜಿಲ್ಲೆ  ರಾಮದುರ್ಗದ ರಾಣಿ ಚೆನ್ನಮ್ಮ ಶಾಲೆಯಲ್ಲಿ ಓದಿದ್ದ ವಾಣಿಶ್ರೀ ಅವರ ಪ್ರಕಾರ, ‘ಶಾಲಾ ಪಾಠದಲ್ಲಿ ಕೇವಲ ಥಿಯೆರಿ ಮಾತ್ರ ಓದಿಕೊಂಡಿದ್ದೆವು. ಲ್ಯಾಬ್‌ಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಇಲ್ಲಿ ಹೊಸ ಅನುಭವಕ್ಕೆ ನಾವು ತೆರೆದುಕೊಳ್ಳಲು ಸಾಧ್ಯವಾಗಲಿಲ್ಲ. ಸೂಪರ್‌ ಕಂಪ್ಯೂಟರ್‌, ಏರೋಪ್ಲೇನ್‌ ಮಾಡೆಲಿಂಗ್ ನೋಡಲು ಸಾದ್ಯವಾಯಿತು’ ಎಂದರು.

‘ಇಲ್ಲಿಯವರೆಗೆ ಪ್ರತಿಭಾವಂತರು ವೈದ್ಯ ಅಥವಾ ಎಂಜಿನಿಯರಿಂಗ್‌ ಕೋರ್ಸ್‌ಗಳತ್ತಲೇ ಗಮನ ಹರಿಸು ತ್ತಿದ್ದರು. ಮೂಲ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಇದ್ದು, ಆ ದಿಕ್ಕಿನತ್ತ ವಿದ್ಯಾರ್ಥಿಗಳ ಗಮನ ಸೆಳೆಯುವ ಈ ಶಿಬಿರ ಉಪಯುಕ್ತ ವಾದುದು’ ಎಂದು ಯೋಜನಾ ಸಮನ್ವಯಕರಾಗಿರುವ  ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ವೈದ್ಯರಾಣಿ  ಹೇಳಿದರು.

ಗ್ರಾಮೀಣ ಪ್ರದೇಶದ ವಿಜ್ಞಾನಾಸಕ್ತ ವಿದ್ಯಾರ್ಥಿಗಳು ಐಐಎಸ್‌ಸಿಯಂತಹ ಸಂಸ್ಥೆಗಳಲ್ಲಿ ಬಿಎಸ್ಸಿಯಂತಹ ಪದವಿಗೆ ಸೇರಲು , ಆ ಬಳಿಕ ಸಂಶೋಧನೆಯಲ್ಲಿ ತೊಡಗಲು ಇಂತಹ ಶಿಬಿರ ಪ್ರಯೋಜನಕಾರಿ ಆಗುತ್ತದೆ ಎಂದು ಚಾಮರಾಜ ನಗರ ಜಿಲ್ಲೆ ಬಂಡಳ್ಳಿಯ ಅಧ್ಯಾಪಕಿ ಶೀಲಾ ಹೇಳಿದರು.
*
ಸಬಲೀಕರಣಕ್ಕೆ ‘ಚೇತನ’
ಬಾಲಕಿಯರ ಸಬಲೀಕರಣಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ  10 ನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಅತ್ಯಧಿಕ ಅಂಕಗಳಿಸಿದ (ಟಾಪರ್ಸ್‌) ಪ್ರತಿಭಾವಂತ ಬಾಲಕಿಯರನ್ನು ಮೂಲ ವಿಜ್ಞಾನದತ್ತ ಸೆಳೆಯುವ ಕಾರ್ಯಕ್ರಮ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT