ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತ ಸಮುದಾಯ ಒಗ್ಗೂಡಲು ಸಲಹೆ

ಅಂಬೇಡ್ಕರ್‌ 125ನೇ ಜನ್ಮದಿನ, ಪೌರಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಸಚಿವ ಮಹದೇವಪ್ಪ
Last Updated 25 ಅಕ್ಟೋಬರ್ 2016, 9:43 IST
ಅಕ್ಷರ ಗಾತ್ರ

ಮೈಸೂರು: ‘ಶೋಷಿತ ಸಮುದಾಯಗಳು ಸಂಘಟಿತರಾಗಿ ರಾಜಕೀಯವನ್ನು ನಿಯಂತ್ರಿಸಬೇಕು’ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಲಹೆ ನೀಡಿದರು.

ಮಹಾನಗರ ಪಾಲಿಕೆ  ನಗರದ ಕಲಾ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ 125ನೇ ಜನ್ಮದಿನಾಚರಣೆ ಹಾಗೂ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅಧಿಕಾರವಿಲ್ಲದಾಗ ಹೋರಾಟ ಮಾಡುವುದು ಹಾಗೂ ಅಧಿಕಾರಕ್ಕಾಗಿ ಹೋರಾಟ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಇದರ ಬದಲು ಶೋಷಿತ ಸಮುದಾಯಗಳು ರಾಜಕೀಯ ನಿರ್ಣಾಯಕ ಶಕ್ತಿಯಾಗಲು ಹೋರಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಶೋಷಿತ ಸಮುದಾಯಗಳನ್ನು ಕೋಮುಶಕ್ತಿಗಳು ನಿಯಂತ್ರಿಸುತ್ತಿವೆ. ಇಂಥದ್ದೇ ತಿನ್ನಬೇಕು, ಇಂಥದ್ದೇ ಬಟ್ಟೆ ಹಾಕಿಕೊಳ್ಳಬೇಕು ಎಂದು ವಾದ ಮಂಡಿಸುತ್ತಿವೆ. ಇದು ಅಂಬೇಡ್ಕರ್‌ ತತ್ವಗಳಿಂದ ಹೊರತಾದುದು. ಇದಕ್ಕಾಗಿ ಶೂದ್ರ ಶಕ್ತಿಗಳು ಒಂದಾಗಬೇಕು’ ಎಂದು ತಿಳಿಸಿದರು.
‘ವಿಶ್ವಸಂಸ್ಥೆಯು ಅಂಬೇಡ್ಕರ್‌ ಜನ್ಮದಿನವನ್ನು ಆಚರಿಸಿತು. ಜತೆಗೆ, ಅಸಮಾನತೆ ತೊರೆದು, ಸ್ಥಿರ ಅಭಿವೃದ್ಧಿ ಕಡೆ ಶ್ರಮಿಸಬೇಕೆಂದು ವಿಶ್ವಸಂಸ್ಥೆ ಹೇಳಿದೆ. ಹೀಗೆ ಹೇಳಲು ಸಾಧ್ಯವಾಗಿದ್ದು ಅಂಬೇಡ್ಕರ್‌ ಅವರ ಸಂವಿಧಾನ. ಆದರೆ, ಕೋಮುಶಕ್ತಿಗಳು ಸಂವಿಧಾನವನ್ನು ದುರ್ಬಲಗೊಳಿಸಲು ಯತ್ನಿಸುತ್ತಿವೆ. ಸಂವಿಧಾನದ ಆಶಯಗಳನ್ನು ಜಾರಿ ಮಾಡಲು ವಿಳಂಬ ಮಾಡಿದರೆ ಪ್ರಜಾಪ್ರಭುತ್ವ ನಾಶವಾದಂತೆ’ ಎಂದು ಎಚ್ಚರಿಸಿದರು.

‘ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇದು ಸಂವಿಧಾನದ ಆಶಯಕ್ಕೆ ಮಸಿ ಬಳಿದಂತೆ. ಇದರೊಂದಿಗೆ ಮೂಢನಂಬಿಕೆ, ವ್ಯಕ್ತಿ ಆರಾಧನೆಯಲ್ಲಿ ದಲಿತರು ತೊಡಗಿದ್ದಾರೆ. ಜತೆಗೆ, ಅಂಬೇಡ್ಕರ್‌ ವಾದವನ್ನೂ ಮಂಡಿಸುವವರಿದ್ದಾರೆ. ಅಂಬೇಡ್ಕರ್‌ವಾದವೆಂದರೆ ಮಾನವತಾವಾದ. ಮಾನವ ಹಕ್ಕುಗಳೆಂದರೆ ದಲಿತರ ಹಕ್ಕುಗಳು. ದಲಿತರ ಹಕ್ಕುಗಳೆಂದರೆ ಮಾನವರ ಹಕ್ಕುಗಳಾಗಬೇಕು ಎಂದು ಅಂಬೇಡ್ಕರ್‌ ಪ್ರತಿಪಾದಿಸಿದ್ದರು’ ಎಂದು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಪುರುಷೋತ್ತಮ, ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಪೌರಕಾರ್ಮಿಕರಿದ್ದಾರೆ. ದೇಶದಲ್ಲಿ 40 ಲಕ್ಷ ಪೌರಕಾರ್ಮಿಕರಿದ್ದಾರೆ. ಆದರೆ, ಅವರ ಸಮಸ್ಯೆಗಳು ಬಗೆಹರಿಯಬೇಕು ಎಂದು ಆಗ್ರಹಿಸಿದರು.
‘ಭಾರತೀಯರೆಲ್ಲರ ಮಹಾಬೆಳಕು ಬಾಬಾಸಾಹೇಬ್‌ ಅಂಬೇಡ್ಕರ್’ ಕೃತಿಯನ್ನು ಮೇಯರ್‌ ಬಿ.ಎಲ್‌.ಭೈರಪ್ಪ ಬಿಡುಗಡೆಗೊಳಿಸಿದರು. ಶಾಸಕರಾದ ಎಂ.ಕೆ.ಸೋಮಶೇಖರ್, ಮಂಜುನಾಥ್, ಉಪ ಮೇಯರ್ ಜಿ.ಎಚ್‌.ವನಿತಾ, ಪಾಲಿಕೆ ಆಡಳಿತ ಪಕ್ಷದ ನಾಯಕ ಜೆ.ಎಸ್‌.ಜಗದೀಶ್ ಇತರರು ಭಾಗವಹಿಸಿದ್ದರು. ಪಾಲಿಕೆ ಆಯುಕ್ತ ಜಿ.ಜಗದೀಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT