ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಅನುದಾನ ಸದ್ಬಳಕೆಗೆ ತಾಕೀತು

Last Updated 25 ಅಕ್ಟೋಬರ್ 2016, 11:18 IST
ಅಕ್ಷರ ಗಾತ್ರ

ರಾಮನಗರ: ವಿವಿಧ ಇಲಾಖೆಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ 3 ರಷ್ಟನ್ನು ಕಡ್ಡಾಯವಾಗಿ ಅಂಗವಿಕಲರಿಗೆ ಮೀಸಲಿಡಬೇಕು. ತಮ್ಮ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಂಡು ಕ್ರಿಯಾ ಯೋಜನೆ ಮೂಲಕ ಅನುದಾನ ಸದ್ಬಳಕೆ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ ಸೂಚಿಸಿದರು.

ನಗರದ ಕಂದಾಯ ಭವನದ ಸಭಾಂಗಣದಲ್ಲಿ ಸೋಮವಾರ ನಡೆದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಅಂಗವಿಕಲರ ಅಧಿನಿಯಮ 1995ರ ಕಾಯ್ದೆಯಲ್ಲಿ ಅವರಿಗೆ ನೀಡಬೇಕಾದ ಸೌಲಭ್ಯಗಳು, ಅನುದಾನ ಮೀಸಲು, ಬಳಕೆ, ಅವರ ಸಬಲೀಕರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟವಾಗಿ ವಿವರಿಸಲಾಗಿದೆ. ಆದರೆ ಕಾಯ್ದೆ ಕುರಿತು ಬಹುತೇಕ ಅಧಿಕಾರಿಗಳಿಗೆ ತಿಳಿದಿಲ್ಲದಿರುವುದು ಕಂಡು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಂಗವಿಕಲರ ವಿಶೇಷ ಅಧಿನಿಯಮ 1995ರ ಕಾಯ್ದೆಯ ಅರಿವು ಮೂಡಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರ ಆಯೋಜಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನವೆಂಬರ್ ತಿಂಗಳ ಒಳಗೆ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಆಯೋಜಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸೇರಿದಂತೆ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಬೇಕು ಎಂದು ತಿಳಿಸಿದರು.

ಮಾಸಾಶನ: ಉಪ ವಿಭಾಗಾಧಿಕಾರಿ ಡಾ.ಎಂ.ಎನ್‌. ರಾಜೇಂದ್ರ ಪ್ರಸಾದ್ ಮಾತನಾಡಿ ಶೇ 40 ರಷ್ಟು ಅಂಗವಿಕಲತೆ ಹೊಂದಿರುವ 16,248 ಹಾಗೂ ಶೇ 75 ರಷ್ಟು ಅಂಗವಿಕಲತೆ ಹೊಂದಿರುವ 7,531 ಮಂದಿ ಸೇರಿದಂತೆ ಒಟ್ಟು 23,779 ಮಂದಿಗೆ ಜಿಲ್ಲೆಯಲ್ಲಿ ಮಾಸಾಶನ ನೀಡಲಾಗುತ್ತಿದೆ. ೪ ಅರ್ಜಿಗಳು ಮಾತ್ರ ಬಾಕಿ ಇತ್ಯರ್ಥವಾಗಿಲ್ಲ. ಅಂಗವಿಕಲರ ಬಾಕಿ ಇರುವ ಅರ್ಜಿಗಳನ್ನು ಒಂದು ವಾರದಲ್ಲಿ ಇತ್ಯರ್ಥ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇತ್ಯರ್ಥವಾಗದ ಅರ್ಜಿಗಳ ಪರಿಶೀಲನೆ ನಡೆಸಿ ಮೂರು ದಿನದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಮಸ್ಯೆ : ತಾಲ್ಲೂಕು ಕೇಂದ್ರಗಳಲ್ಲಿ ಅಂಗವಿಕಲರು ಆರ್‌ಟಿಸಿ ಪಡೆಯಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸುತ್ತಿದ್ದಾರೆ. ಪತ್ಯೇಕ ಪಹಣಿ ವಿತರಣೆ ಕೇಂದ್ರವನ್ನು ತೆರೆಯುವಂತೆ ಸಭೆಯಲ್ಲಿ ಅಂಗವಿಕಲರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ರಾಜೇಂದ್ರ ಪ್ರಸಾದ್ ‘ಇಂದಿನಿಂದಲೇ ಪ್ರತ್ಯೇಕ ಆರ್‌ಟಿಸಿ ವಿತರಣೆ ಕೇಂದ್ರ ತೆರಯಲು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಹಿರಿಯ ನಾಗರಿಕರ ಮತ್ತು ಅಂಗವಿಕಲರ ಸಬಲೀಕರಣ ಕಲ್ಯಾಣಾಧಿಕಾರಿ ನಾಗವೇಣಿ, ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಡಾ. ಶಿವರಾಜ ಹೆಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT