ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 25 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
-ದೇವರಾಜ್‌, ಬೆಂಗಳೂರು
*ಖಾಸಗಿ ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತೇನೆ. ಎಲ್ಲಾ ಕಡಿತದ ನಂತರ ₹ 17,300 ಬರುತ್ತದೆ. ನನಗೆ ಬೆಸ್ಕಾಂನಲ್ಲಿ ಜೂನಿಯರ್ ಲೈನ್‌ ಮೆನ್‌ ಆಗಿ ಕೆಲಸ ಸಿಕ್ಕಿದೆ. ತರಬೇತಿ ಅವಧಿಯಲ್ಲಿ ಕ್ರಮವಾಗಿ ₹ 10000, 11,000, 12,000 ಮೂರು ವರ್ಷ ದೊರೆ ಯುತ್ತದೆ. ನಂತರ ರೆಗ್ಯುಲರ್‌ ಪೇ ಸ್ಕೇಲ್‌ ಕೊಡುತ್ತಾರೆ. ಬಿ.ಎಸ್‌ಸಿ (ಪಿ.ಸಿ.ಎಂ.) ಮಾಡಿರುತ್ತೇನೆ. ಈ ಕೆಲಸಕ್ಕೆ ಸೇರಲೇ?
ಉತ್ತರ:  ಬೆಸ್‌್ಕಾಂ ಕರ್ನಾಟಕ ಸರ್ಕಾರದ ಒಂದು ಉತ್ತಮ ಸಂಸ್ಥೆ. ಇಲ್ಲಿ ಕೆಲಸದ ಗ್ಯಾರಂಟಿ ಇರುತ್ತದೆ. ಜೊತೆಗೆ ಉತ್ತಮ ಭವಿಷ್ಯವಿದೆ. ನೀವು ಈಗ ಇರುವ ಉದ್ಯೋಗದಲ್ಲಿ ಯಾವ ಭವಿಷ್ಯವೂ ಇರುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ನೀವು ಬಿ.ಎಸ್ಸಿ ಪದವೀಧರರಾಗಿರುವುದರಿಂದ ಬೆಸ್ಕಾಂನವರು ನಡೆಸಿದ ಪರೀಕ್ಷೆಯನ್ನು ನಿರೀಕ್ಷಿಸಿ ಪ್ರಯತ್ನಪಟ್ಟು ಉತ್ತೀರ್ಣರಾದಲ್ಲಿ ಅವರ ಆಫೀಸಿನಲ್ಲಿ ಉನ್ನತ ಹುದ್ದೆ ಪಡೆಯಬಹುದು.
 
ನೀವು ವಿಜ್ಞಾನ ಪದವೀಧರರಾಗಿದ್ದು, ಸಂಜೆ ಕಾಲೇಜಿನಲ್ಲಿ ಎಎಂಐಇ ಅಥವಾ ಬಿ.ಇ. ಮಾಡಬಹುದು. ನೀವು ಮುಂದೊಮ್ಮೆ BESCOM ನ Engineer  ಆಗಲು ಸಾಧ್ಯವಿದೆ. ಸಣ್ಣ ವಯಸ್ಸಿನಲ್ಲಿ ಏನನ್ನೂ ಸಾಧಿಸಬಹುದು. BE ಅಥವಾ AMIE ಸಂಜೆ ಕಾಲೇಜಿನಲ್ಲಿ ಓದಲು ಬೆಂಗಳೂರಿನಲ್ಲಿ ಅವಕಾಶವಿದೆ. ತಕ್ಷಣ  ಕಾರ್ಯೋನ್ಮುಖರಾಗಿರಿ.  
 
**
-ಉಮಾಪತಿ ನಾಯ್ಕರ್‌, ದಾವಣಗೆರೆ
*ನನ್ನ ತಂದೆ ತಾಯಿ ವ್ಯವಸಾಯಗಾರರು. ನಾವು ಪರಿಶಿಷ್ಟ ಜಾತಿಗೆ ಸೇರಿದವರು. ನಾವು 3 ಜನ ಗಂಡು ಮಕ್ಕಳು. ನಮಗೆ 17 ಎಕರೆ ಜಮೀನು ಇದೆ.  ಆಸ್ತಿ ಸ್ವಯಾರ್ಜಿತ. ನಾನು ಅಂಗವಿಕಲ. ತಂದೆಯೊಡನಿದ್ದೇನೆ. ನಾನು ತಂದೆಯೊಡನಿರುವುದರಿಂದ ಹೊಸದಾಗಿ ಆಸ್ತಿ ಖರೀದಿಸಲು ಕಾನೂನಿನ ತೊಡಕೇನಾದರೂ ಇದೆಯೇ? ಕೃಷಿ ಆದಾಯ ವಾರ್ಷಿಕ ₹ 5–8 ಲಕ್ಷವಿದೆ. ಇದರಿಂದ ತಂದೆಯವರು ತೆರಿಗೆ ಕೊಡಬೇಕಾಗುತ್ತದೆಯೇ ರಿಟರ್ನ್‌ ತುಂಬಬೇಕೇ ತಿಳಿಸಿರಿ. ಕೃಷಿ ಆದಾಯದ ಪುರಾವೆ ಕೊಡಬೇಕೇ ತಿಳಿಸಿ.
ಉತ್ತರ: ನೀವು ತಂದೆಯೊಡನಿರುವುದರಿಂದ ನಿಮ್ಮ ತಂದೆಯವರು ಕೃಷಿ ಜಮೀನು ಕೊಳ್ಳಲು ಕಾನೂನಿನ ಅಥವಾ ಸರ್ಕಾರದ ಅಭ್ಯಂತರವಿರುವುದಿಲ್ಲ. ಅವರು ಕೃಷಿಕರಾಗಿದ್ದು, ಕೃಷಿ ಜಮೀನು ಕೊಳ್ಳಬಹುದು. ಕೃಷಿ ಆಧಾರಿತ ಆದಾಯ ಅಥವಾ ಉತ್ಪನ್ನಕ್ಕೆ ಆದಾಯ ತೆರಿಗೆ ಸೆಕ್ಷನ್‌ 10 (1) ಆಧಾರದ ಮೇಲೆ ಆದಾಯ ತೆರಿಗೆ ಸಂಪೂರ್ಣ ವಿನಾಯಿತಿ ಇದೆ. ಆದರೆ ಕೃಷಿಕರು ಕೃಷಿ ಅಥವಾ ಇನ್ನಿತರ ಆದಾಯದಿಂದ ಬರುವ ಹಣ ಬ್ಯಾಂಕಿನಲ್ಲಿ ಇರಿಸಿ, ವಾರ್ಷಿಕವಾಗಿ  ₹ 10000ಕ್ಕೂ ಹೆಚ್ಚಿನ ಬಡ್ಡಿ ಪಡೆಯುವಲ್ಲಿ ಶೇ 10 ಟಿ.ಡಿ.ಎಸ್‌. ಬ್ಯಾಂಕಿನಲ್ಲಿ ಮುರಿಯುತ್ತಾರೆ.
 
ಟಿ.ಡಿ.ಎಸ್‌. ಮುರಿಯದಿರಲು ವಾರ್ಷಿಕ ವ್ಯಕ್ತಿಯ ಬಡ್ಡಿ ಆದಾಯ ₹ 2.50 ಲಕ್ಷ ಒಳಗಿದ್ದಲ್ಲಿ (ಹಿರಿಯ ನಾಗರೀಕರಾದಲ್ಲಿ ವಾರ್ಷಿಕ  ₹ 3 ಲಕ್ಷ) ಕ್ರಮವಾಗಿ  15 ಜಿ – 15 ಎಚ್‌ ನಮೂನೆ ಫಾರಂ ಬ್ಯಾಂಕಿಗೆ ಸಲ್ಲಿಸಬೇಕು. ಹೀಗೆ ಮಾಡಿದಲ್ಲಿ ತೆರಿಗೆ ಉಳಿಸಬಹುದು. ಕೃಷಿ ಜಮೀನು 17 ಎಕರೆ ಇರುವುದರಿಂದ ಬೇರೆ ಪುರಾವೆ ಕೊಡುವ ಅಗತ್ಯವಿಲ್ಲ. ಹಾಗೂ ಸದ್ಯಕ್ಕೆ ರಿಟರ್ನ್‌ ತುಂಬುವ ಅವಶ್ಯವಿಲ್ಲ. 
 
**
-ಆರ್‌. ಲಕ್ಷ್ಮಯ್ಯ, ಕೋರಮಂಗಲ
*ನಾನು ನಿವೃತ್ತ ಸರ್ಕಾರಿ ನೌಕರ. ನನಗೆ ಪಿಂಚಣಿಯಿಂದ ₹ 28000,  ಖಾಸಗಿ ಉದ್ಯೋಗದಿಂದ ₹ 29000  (ಟಿ.ಡಿ.ಎಸ್‌. ಕಳೆದು), ಮನೆ ಬಾಡಿಗೆಯಿಂದ ₹ 15000. ಈ ರೀತಿಯಿಂದ ವಾರ್ಷಿಕವಾಗಿ ₹ 7.20 ಲಕ್ಷ ಬರುತ್ತದೆ. ಈ ವರಮಾನದಲ್ಲಿ ತೆರಿಗೆ ವಿನಾಯಿತಿ ಪಡೆಯಲು ಯಾವ ರೀತಿಯ ಹೂಡಿಕೆ ಮಾಡುವುದು ಸೂಕ್ತ. ಸದ್ಯ  ಯಾವುದೇ ಕಡಿತ ಅಥವಾ ಉಳಿತಾಯವಿಲ್ಲ.
ಉತ್ತರ: ನೀವು ಹಿರಿಯ ನಾಗರಿಕರಾಗಿರುವುದರಿಂದ, ವಾರ್ಷಿಕವಾಗಿ ₹ 3 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಜೊತೆಗೆ ₹ 1.50 ಲಕ್ಷ ವಾರ್ಷಿಕವಾಗಿ, 5 ವರ್ಷಗಳ, ತೆರಿಗೆ ಉಳಿಸಲು ಠೇವಣಿ ಬ್ಯಾಂಕಿನಲ್ಲಿ ಮಾಡಿ.
 
ಇದರಿಂದ ₹ 4.50 ಲಕ್ಷಗಳ ತನಕ ವಾರ್ಷಿಕ ಆದಾಯಕ್ಕೆ ತೆರಿಗೆ ಕೊಡುವ ಅವಶ್ಯವಿಲ್ಲ. ಈ  ಮಾರ್ಗಕ್ಕೆ ಮಿಗಿಲಾದ ಮಾರ್ಗ ಬೇರೊಂದಿಲ್ಲ. ನಿಮಗೆ ಬರುವ ಮನೆ ಬಾಡಿಗೆಯಲ್ಲಿ ಶೇ 30. ಆದಾಯ ತೆರಿಗೆ ಸೆಕ್ಷನ್‌  24 (ಬಿ) ಆಧಾರದ ಮೇಲೆ ಕಳೆದು ಉಳಿದ ಮೊತ್ತಕ್ಕೆ ಮಾತ್ರ ತೆರಿಗೆ ಸಲ್ಲಿಸಿ. ನೀವು ಉಳಿತಾಯ, ಬ್ಯಾಂಕಿನ ಹೊರತಾಗಿ ಬೇರೆ ಕಡೆ ಮಾಡದಿರಿ. ಎಲ್ಲಾ ಠೇವಣಿಗೂ ನಾಮನಿರ್ದೇಶನ ತಪ್ಪದೇ ಮಾಡಲು ಮರೆಯಬೇಡಿ.
 
**
-ಷಡಾಕ್ಷರಿ, ದಾವಣಗೆರೆ
*ನಾನು ಕೆ.ಇ.ಬಿ.ಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತನಾಗಿದ್ದೇನೆ, ನನ್ನ ಮಾಸಿಕ ಪಿಂಚಣಿ 
₹ 32000. ನಿವೃತ್ತಿಯಿಂದ ₹ 25 ಲಕ್ಷ ಹಣ ಬಂದಿದೆ. ಈ ಹಣ ಹೇಗೆ ವಿನಿಯೋಗಿಸಲಿ. ನನಗೆ ಒಬ್ಬ ಮಗನಿದ್ದು ಅವನಿಗೆ ನೌಕರಿ ಇರುವುದಿಲ್ಲ. ಸ್ವಂತ ಮನೆ ಕೂಡಾ ಇಲ್ಲ. ದಯಮಾಡಿ ನಿಮ್ಮ ಅಮೂಲ್ಯ ಸಲಹೆ ನೀಡಿರಿ.
ಉತ್ತರ: ನಿಮ್ಮೊಡನಿರುವ ₹ 25 ಲಕ್ಷದಿಂದ, ನಿವೇಶನ ಮನೆ ಖರೀದಿಸುವುದು ಸಾಧ್ಯವಾಗಲಾರದು. ಸದ್ಯದ ಪರಿಸ್ಥಿತಿಯಲ್ಲಿ ₹ 4–5 ಲಕ್ಷಗಳೊಳಗೆ ಒಂದು ಮನೆ ಭೋಗ್ಯಕ್ಕೆ ಪಡೆದು ವಾಸಿಸಿ. ಇದರಿಂದ ಪ್ರತೀ ತಿಂಗಳು ಬಾಡಿಗೆ ಕೊಡುವ ಪ್ರಮೇಯವಿರುವುದಿಲ್ಲ. ಉಳಿದ ₹ 20 ಲಕ್ಷ ₹ 5 ಲಕ್ಷದಂತೆ ಮಾಡಿಸಿ, ನೀವು ಪಿಂಚಣಿ ಪಡೆಯುವ ಬ್ಯಾಂಕಿನಲ್ಲಿ 5 ವರ್ಷಗಳ ಠೇವಣಿ ಮಾಡಿರಿ.
 
₹ 32000 ಪಿಂಚಣಿ ಬರುವ ನಿಮಗೆ, ಠೇವಣಿಯ ಬಡ್ಡಿ ಖರ್ಚಿಗೆ ಅಗತ್ಯವಿರಲಿಕ್ಕಿಲ್ಲ. ಎಲ್ಲಾ ಠೇವಣಿ ನಿಮ್ಮ ಹೆಂಡತಿಯ ಹೆಸರಿನಲ್ಲಿ ಜಂಟಿಯಾಗಿ ಇರಿಸಿ. ಮಗನ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿರಿ. ಎಲ್ಲಾ ಠೇವಣಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ ಹಣ ಬೆಳೆಸಿಕೊಳ್ಳಿ. ಸಾಧ್ಯವಾದರೆ ₹ 1 ಅಥವಾ 2 ಲಕ್ಷ  ಹಣ ಹೂಡುವ ಸಣ್ಣ ವ್ಯಾಪಾರ ವ್ಯವಹಾರ ಮಗನಿಗೆ ಮಾಡಿಕೊಡಿ. ಇದರಿಂದ ನಿಮ್ಮ ಮಗನಿಗೆ ಸ್ವಂತ ಉದ್ಯೋಗ ಆಗಿ ಅದರಿಂದ ಜವಾಬ್ದಾರಿ ಬರುತ್ತದೆ.
 
**
-ಯೋಗೀಶ, ಕಾರ್ಕಳ
*ನಾನು ಗೋಡಂಬಿ ಕಾರ್ಖಾನೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತೇನೆ. ನನ್ನ ಸಂಬಳ ₹ 9500 (ಪಿ.ಎಫ್‌., ಇ.ಎಸ್‌.ಐ. ಕಳೆದು) ನನಗೆ ಮನೆ ಕಟ್ಟಲು ಅಥವಾ ಖರೀದಿಸಲು ಸಾಲ ಸೌಲಭ್ಯ ಸಿಗಬಹುದೇ? ದಯವಿಟ್ಟು ತಿಳಿಸುವಿರಾ?
ಉತ್ತರ: ಒಂದು ಸಣ್ಣ ನಿವೇಶನ ಹಾಗೂ ಅದರಲ್ಲಿರುವ ಮನೆ ಖರೀದಿಸಲು ಕಾರ್ಕಳದಲ್ಲಿ ಕನಿಷ್ಠ ₹ 30 ಲಕ್ಷ ಹಣವಾದರೂ ಬೇಕಾದೀತು. 
₹ 30 ಲಕ್ಷ ಗೃಹ ಸಾಲಕ್ಕೆ ಮಾಸಿಕ ಇ.ಎಂ.ಐ. ₹ 30000 ಬ್ಯಾಂಕಿಗೆ ತೆರಬೇಕಾಗುತ್ತದೆ. ಗೃಹಸಾಲ ಅಥವಾ ಇನ್ನಿತರ ಸಾಲ ನೀಡುವ ಮುನ್ನ ವ್ಯಕ್ತಿಯ ಸಾಲ ಮರು ಪಾವತಿಸುವ ಸಾಮರ್ಥ್ಯ ಬ್ಯಾಂಕಿನವರು ಪರಿಗಣಿಸುತ್ತಾರೆ. ನಿಮ್ಮ ಸಂಬಳದಲ್ಲಿ ನಿಮ್ಮ ಖರ್ಚು ಕಳೆದು ಗರಿಷ್ಠ ₹ 5000 ಉಳಿಸಬಹುದು. ಈ ಎಲ್ಲಾ ವಿವರಣೆಯಂತೆ ನಿಮಗೆ ಸಧ್ಯಕ್ಕೆ ಗೃಹಸಾಲ ದೊರೆಯಲಾರದು.  
 
‘ಹನಿ ಕೂಡಿ ಹಳ್ಳ, ತೆನೆ ಕೂಡಿ ಬಳ್ಳ’ ಎನ್ನುವ ಗಾದೆ ಮಾತಿನಂತೆ ಈಗಿನಿಂದಲೇ ₹ 5000 ಆರ್‌.ಡಿ. ಮಾಡಿ ಉಳಿತಾಯಕ್ಕೆ ನಾಂದಿ ಹಾಕಿರಿ. ಮುಂದೆ ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗಿ ಸಂಬಳ ಕೂಡಾ ಹೆಚ್ಚಿದಾಗ ನಿಮ್ಮ ಬಯಕೆಯಂತೆ ಗೃಹಸಾಲ ಪಡೆದು ಮನೆ ಕಟ್ಟಿಸಬಹುದು.
**
-ರಾಜು, ಕೊಪ್ಪಳ
*ನಿಮ್ಮ ಲೇಖನದಿಂದ ಪ್ರಭಾವಿತನಾಗಿದ್ದು ವಿದ್ಯಾರ್ಥಿಯಾಗಿದ್ದ ನಾನು ₹ 500 ಆರ್‌.ಡಿ. ಮಾಡಿರುತ್ತೇನೆ. ನನ್ನ ತಂದೆಯವರು ರಾಜ್ಯ ಸರ್ಕಾರಿ ನೌಕರರು. ಅವರು ಹುಟ್ಟಿದ ದಿನಾಂಕ 5–5–1968. ಕೆಲಸಕ್ಕೆ ಸೇರಿದ ದಿನಾಂಕ 18–2–1987 ಅವರ ನಿವೃತ್ತಿ ದಿನಾಂಕ ಯಾವುದು ತಿಳಿಸಿರಿ. ಅವರ ಸಂಬಳ ₹ 4000 ಕಡಿತದ ನಂತರ ₹ 22000 ಇರುತ್ತದೆ. ಅವರಿಗೆ ನಿವೃತ್ತಿಯಿಂದ ಬರುವ ಪಿಂಚಣಿ ಮೊತ್ತ ಎಷ್ಟು ತಿಳಿಸುವಿರಾ. ನಾವು ಜಾಗ ತೆಗೆದುಕೊಂಡು ಮನೆ ಕಟ್ಟಲು ಎಸ್‌.ಬಿ.ಐ. ನಿಂದ ಎಷ್ಟು ಸಾಲ ದೊರೆಯಬಹುದು. ಕಂತು–ಬಡ್ಡಿ ವಿಚಾರದಲ್ಲಿಯೂ ತಿಳಿಸಿ. ನಮ್ಮ ತಂದೆ ಇದುವರೆಗೆ, ಹಣ ಒಡವೆ ಆಸ್ತಿ ಹೊಂದಿಲ್ಲ.  
ಉತ್ತರ: ಓರ್ವ ನೌಕರ ಯಾವ ದಿವಸವಾದರೂ ಕೆಲಸಕ್ಕೆ ಸೇರಿರಬಹುದು ಆದರೆ, ನಿವೃತ್ತಿ ವಯಸ್ಸು ನಿಗದಿಪಡಿಸುವುದು ಆತ ಹುಟ್ಟಿದ ತಾರೀಕಿನ ಮೇಲೆ ಇರುತ್ತದೆ. ನಿಮ್ಮ ತಂದೆಯವರ ಜನನ ತಾರೀಖು 5–5–1968 ಇದ್ದು ಅವರು 31–5–2028ಕ್ಕೆ ನಿವೃತ್ತಿಯಾಗುತ್ತಾರೆ.
 
ಅವರಿಗೆ ಇನ್ನೂ ಬಹಳ ವರ್ಷ ಸೇವಾವಧಿ ಇದ್ದು, ಅವರ ಪಿಂಚಣಿ ಈಗಲೇ ನಿರ್ಧರಿಸಲು ಬರುವುದಿಲ್ಲ. ನಿಮ್ಮ ತಂದೆಯವರ ಇಂದಿನ ಸಂಬಳ ಆಧಾರದ ಮೇಲೆ ಗರಿಷ್ಠ ₹ 15 ಲಕ್ಷ ಗೃಹಸಾಲ ದೊರೆಯಬಹುದು. ಈ ಮೊತ್ತ ನಿವೇಶನ ಮನೆ ಕಟ್ಟಲು ಸಾಕಾಗಲಾರದು. ಈ ವಿಚಾರ ಸ್ವಲ್ಪ ಸಮಯ ಮುಂದಕ್ಕೆ ಹಾಕಿರಿ ಹಾಗೂ ತಕ್ಷಣ ₹ 10000 ಆರ್‌.ಡಿ. 5 ವರ್ಷಗಳಿಗೆ ಪ್ರಾರಂಭಿಸಲು ಹೇಳಿರಿ. ನನ್ನ ಲೇಖನದಿಂದ ಪ್ರಭಾವಿತರಾಗಿ, ಇನ್ನೂ ವಿದ್ಯಾರ್ಥಿಯಾಗಿರುವ ನೀವು, ₹ 500 ಆರ್‌.ಡಿ. ಮಾಡಿರುವುದಕ್ಕೆ ಧನ್ಯವಾದಗಳು.
 
**
-ನಾಗರಾಜ, ವಿಜಯಪುರ
*ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದು ಸದ್ಯಕ್ಕೆ ನಿವೃತ್ತನಾಗುತ್ತಿದ್ದೇನೆ. ನಿವೃತ್ತಿಯಿಂದ ಸುಮಾರು ₹ 26 ಲಕ್ಷ ಬರಬಹುದು. ನನಗೆ ನಂ. 234 ರಾಷ್ಟ್ರೀಯ ಹೆದ್ದಾರಿಯಲ್ಲಿ 9 ಎಕರೆ ಭೂಮಿ ಇದೆ. ಇಲ್ಲಿ ಪೆಟ್ರೋಲ್‌ ಬಂಕ್‌, ಜಮೀನಿನಲ್ಲಿ ಮನೆ ಅಥವಾ ನಗರದಲ್ಲಿರುವ ನಿವೇಶನದಲ್ಲಿ ಬಾಡಿಗೆ ಉದ್ದೇಶದಿಂದ ಮನೆ ಕಟ್ಟಿಸುವುದು. ಈ ವಿಚಾರದ ಬಗ್ಗೆ ಸಲಹೆ ನೀಡಿರಿ. ನನ್ನ ಮಗ ಎಂ.ಬಿ.ಎ. ಮಾಡುತ್ತಿದ್ದು, ಅವನ ಭವಿಷ್ಯದ ಬಗ್ಗೆ ಕೂಡಾ ಏನು ಮಾಡಬಹುದು ಎನ್ನುವುದನ್ನು ತಿಳಿಸಿ.
ಉತ್ತರ: ಪೆಟ್ರೋಲ್‌ ಬಂಕ್‌ ಸ್ಥಾಪಿಸಲು, ಕೇಂದ್ರ ಸರ್ಕಾರದಿಂದ ಪರವಾನಗಿ ಬೇಕಾಗುತ್ತದೆ. ಈ ವ್ಯವಹಾರ ಬೆಳಿಗ್ಗೆ 7.00 ರಿಂದ ರಾತ್ರಿ 10.00 ತನಕ ನಡೆಸಬೇಕಾಗುತ್ತದೆ. ನೀವು ನಿವೃತ್ತರಾಗುತ್ತಿದ್ದು, ನಿಮ್ಮ ಎಂ.ಬಿ.ಎ. ಪದವಿ ಪಡೆಯುವ ಮಗ ಈ ವ್ಯವಹಾರಕ್ಕೆ ಬರುವ ನಿರೀಕ್ಷೆ ಕೂಡಾ ಕಡಿಮೆ ಇದ್ದು, ಇಲ್ಲಿ ದೊಡ್ಡ ಮೊತ್ತ ತೊಡಗಿಸುವುದು ಸರಿ ಇರುವುದಿಲ್ಲ.
 
9 ಎಕರೆ ಜಮೀನು ನೀವೇ ಸ್ವತಃ ಬೇಸಾಯ ಮಾಡುವುದಾದಲ್ಲಿ ಅಲ್ಲಿ ಮನೆ ಕಟ್ಟಿಸಿ, ಉಳಿದು ಜಮೀನು ನೋಡಿಕೊಳ್ಳಬಹುದು. ಇದು ನಿಮಗೆ, ನಿಮ್ಮ ಹೆಂಡತಿ ಮಕ್ಕಳಿಗೆ ಒಪ್ಪಿಗೆಯೇ ಎನ್ನುವುದನ್ನು ಪರಿಶೀಲಿಸಿ. ಮನೆ ಕಟ್ಟಿಸಿದ ನಂತರ ಅಲ್ಲಿ ವಾಸವಾಗಿರಲು ಸಾಧ್ಯವಾಗದಲ್ಲಿ ಇಲ್ಲಿ ಮನೆ ಮೇಲೆ ಹೂಡಿದ ಹಣ ಜೀವರಹಿತ ಹೂಡಿಕೆ ಆಗುತ್ತದೆ. ನಗರದಲ್ಲಿ ನಿವೇಶನವಿದ್ದರೆ ಸಣ್ಣ ಸಣ್ಣ 3–4 ಮನೆ ಕಟ್ಟಿಸಿ ಅಥವಾ ಒಂದೇ ಉತ್ತಮ ಮನೆ ಕಟ್ಟಿಸಿ ಬಾಡಿಗೆಗೆ ಕೊಡುವುದೇ ಲೇಸು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT