ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಆನ್‌ಲೈನ್‌ ಖರೀದಿ ಹೇಗೆ?

Last Updated 25 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ರಾಜಿ ಮೆನನ್‌ ಸಾರ್ವಜನಿಕ ಸಂಪರ್ಕ ಏಜೆನ್ಸಿಯೊಂದರಲ್ಲಿ ಯುವ ಜಾಹೀರಾತು ಕಾರ್ಯನಿರ್ವಾಹಕಿ. ಆನ್‌ಲೈನ್‌ ಶಾಪಿಂಗ್‌ ಪರಿಕಲ್ಪನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತಂದುಕೊಂಡವರು. ಎರಡು ವರ್ಷಗಳಿಂದ ಅವರು ಬಟ್ಟೆ, ದಿನಸಿ, ಅಡುಗೆಮನೆ ಸಾಮಗ್ರಿ, ಪೀಠೋಪಕರಣಗಳನ್ನೆಲ್ಲ ಆನ್‌ಲೈನ್‌ನಲ್ಲಿ ಖರೀದಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಸಿಂಗಲ್ ಬೆಡ್‌ರೂಂ ಅಪಾರ್ಟ್‌ಮೆಂಟ್‌ ಅನ್ನೂ ಆನ್‌ಲೈನ್‌ನಲ್ಲೇ ಬುಕ್‌ ಮಾಡಿದ್ದಾರೆ.
 
ರಾಜಿ ಅವರು ಆನ್‌ಲೈನ್‌ ವ್ಯಾಪಾರದ ಬಹುದೊಡ್ಡ ಅಭಿಮಾನಿ. ಕ್ರೆಡಿಟ್‌ ಕಾರ್ಡ್‌ ಬಳಸಿ ಮನೆಯಿಂದಲೇ ವ್ಯಾಪಾರ ಕುದುರಿಸುವ, ಸ್ಪರ್ಧಾತ್ಮಕ ದರವನ್ನು ತುಲನಾತ್ಮಕವಾಗಿ ನೋಡಿಕೊಂಡು ಆಕರ್ಷಕ ರಿಯಾಯಿತಿಗಳನ್ನು ಪಡೆಯುವ ಚಾಕಚಕತ್ಯೆಯಲ್ಲೇ ಅವರಿಗೆ ಒಂದು ಬಗೆಯ ಖುಷಿ. 
 
ಆದರೆ ಈ ಖುಷಿಯನ್ನು ಕಸಿದುಕೊಳ್ಳುವಂತಹ ಪ್ರಸಂಗವೊಂದು ನಡೆದುಹೋಯಿತು. ಅವರ ಸ್ನೇಹಿತರೊಬ್ಬರ ಡೆಬಿಟ್‌ ಕಾರ್ಡ್‌ ಅನ್ನು ಒಂದು ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಹ್ಯಾಕ್‌ ಮಾಡಲಾಯಿತು. ಹ್ಯಾಕರ್‌, ಅವರ ₹ 50 ಸಾವಿರ ದುಡ್ಡನ್ನು ಲಪಟಾಯಿಸಿದ್ದ!. ರಾಜಿ ಅವರಿಗೆ ಈ ಘಟನೆ ಆಘಾತ ತಂದರೂ ವಂಚನೆಯ ಮೂಲವನ್ನು ಹುಡುಕುವ ಸಾಹಸಕ್ಕೆ ಅವರು ಮುಂದಾದರು.
 
ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ವಂಚನೆಗೆ ಒಳಗಾಗದಂತಹ ವ್ಯವಸ್ಥೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಆಳವಾಗಿ ಶೋಧನೆಗೆ ತೊಡಗಿದರು. ಆಳ ಚಿಂತನೆಯ ಬಳಿಕ ಅವರು ಕಂಡುಕೊಂಡ ಸತ್ಯವೇನೆಂದರೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ವಂಚನೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಯಾವುದೇ ದಾರಿ ಇಲ್ಲ ಎಂಬುದು. ಆದರೆ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಏಳು ಪ್ರಮುಖ ನಿಯಮಗಳನ್ನು ಪಾಲಿಸಿದ್ದೇ ಆದರೆ ವಂಚನೆಗೆ ಒಳಗಾಗುವ ಸಾಧ್ಯತೆಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಬಹುದು ಎಂಬುದನ್ನು ಅವರು ಕಂಡುಕೊಂಡರು.
 
1. ಸುರಕ್ಷಿತ ವೆಬ್‌ಸೈಟ್‌ ನೆಚ್ಚಿಕೊಳ್ಳಿ 
ವಿದ್ಯುನ್ಮಾನ ವಾಣಿಜ್ಯ ವಹಿವಾಟಿನಲ್ಲಿ ತೊಡಗಿರುವ ಎಲ್ಲ ಜಾಲತಾಣಗಳೂ ಸುರಕ್ಷಿತವಾಗಿಯೇ ಇರಬೇಕು. ಆದರೆ, ವೆಬ್‌ಸೈಟ್‌ ಸುರಕ್ಷಿತವೇ ಎಂಬುದು ಹೇಗೆ ತಿಳಿಯಬೇಕು? ನೀವು ಮೊದಲಾಗಿ ಅಡ್ರೆಸ್‌ ಬಾರ್‌ ಅನ್ನು ಗಮನಿಸಬೇಕು.
 
ಅದು HTTPS://   ರೀತಿಯಲ್ಲಿ ಆರಂಭವಾಗಿರಬೇಕೇ ಹೊರತು HTTP://  ರೀತಿಯಲ್ಲಿ ಅಲ್ಲ. ಜತೆಗೆ ವೆಬ್‌ಸೈಟ್‌ಗಳು ‘ವೆರಿಸೈನ್‌’ನಂತಹ ಭದ್ರತಾ ಏಜೆನ್ಸಿಗಳ ಭದ್ರತಾ ಪ್ರಮಾಣಪತ್ರ ಹೊಂದಿರಬೇಕು. ಯಾವುದೇ ವ್ಯವಹಾರಕ್ಕೆ ಇಳಿಯುವ ಮೊದಲು ಈ ಪ್ರಮಾಣಪತ್ರವನ್ನು ಗಮನಿಸಿ. 
 
2. ಸುರಕ್ಷಿತ ಕಂಪ್ಯೂಟರ್‌
ಹ್ಯಾಕರ್‌ಗಳು ಮೊದಲಾಗಿ ತಮ್ಮ ವಂಚನೆಯ ಜಾಲ ಬೀಸುವುದು ಮಾಲ್‌ವೇರ್‌ಗಳು ಮತ್ತು ವೈರಸ್‌ಗಳ ಮೂಲಕ. ಸೂಕ್ತ ವೈರಸ್‌ ನಿರೋಧಕವನ್ನು (ಆಂಟಿ ವೈರಸ್‌) ನಿಮ್ಮ ಕಂಪ್ಯೂಟರ್‌ಗೆ ಹಾಕಿಸಿಲ್ಲವೆಂದಾದರೆ ಅಥವಾ ಅದನ್ನು ಪರಿಷ್ಕರಿಸಲು ಮರೆತಿರಿ ಎಂದಾದರೆ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್‌ಗೇ ಮೊದಲಾಗಿ ದಾಳಿ ಮಾಡಿರುತ್ತಾರೆ. ಹೀಗಾಗಿ ಆಂಟಿ ವೈರಸ್‌ ಪ್ಯಾಕೇಜ್‌ ಅನ್ನು ಹಾಕಿಸಿಕೊಳ್ಳಿ.  
 
ಇದರಿಂದ ಕಂಪ್ಯೂಟರ್‌ ಮೂಲಕ ಬರುವ ಹಲವು ತೊಡಕುಗಳನ್ನು ನಿವಾರಿಸಿಕೊಳ್ಳಬಹುದು. ಸೈಬರ್‌ ಕೆಫೆಗಳಲ್ಲಿ ಯಾವುದೇ ರೀತಿಯ ಇ ಕಾಮರ್ಸ್‌ ವ್ಯವಹಾರ ಮಾಡಬಾರದು. ಸೈಬರ್‌ ಕೆಫೆಗಳಲ್ಲಿನ ಹೆಚ್ಚಾಗಿ ಅಸುರಕ್ಷಿತ ಜಾಲಗಳೇ ಇರುತ್ತವೆ. ನಿಮ್ಮ ಗೋಪ್ಯ ಮಾಹಿತಿಗಳನ್ನು ರಕ್ಷಿಸುವ ಅಗತ್ಯದ ರಕ್ಷಣಾ ಕವಚ (ಫೈರ್‌ವಾಲ್‌) ಅಲ್ಲಿರುವುದಿಲ್ಲ.
 
3. ವೆಬ್‌ನಲ್ಲಿ ಹಂಚುವ ಮಾಹಿತಿಯ ಬಗ್ಗೆ ಎಚ್ಚರ
ಎಲ್ಲಾ ಇ–ಕಾಮರ್ಸ್‌ ವ್ಯವಹಾರದಲ್ಲಿ ವೆಬ್‌ಸೈಟ್‌ನಲ್ಲಿ ಕೆಲವೊಂದು ಮೂಲ ಮಾಹಿತಿಗಳನ್ನು ಹಂಚಿಕೊಳ್ಳಲೇಬೇಕಾಗುತ್ತದೆ.  ಅದು ಸರಿಯೇ ಆದರೂ, ಕೆಲವೊಂದು ಮಹತ್ವದ, ತೀರಾ ಖಾಸಗಿ ವಿಷಯಗಳನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲೇಬಾರದು. ವೆಬ್‌ಸೈಟ್‌ನಲ್ಲಿ ‘ಪಿನ್‌’ ನಂಬರ್‌ ಅನ್ನು ಹಂಚಿಕೊಳ್ಳಬೇಡಿ. ನಿಮ್ಮ ಕಾರ್ಡ್‌ನ ಹಿಂಬದಿಯಲ್ಲಿರುವ 3 ಅಂಕಿಗಳ ಸಿವಿವಿ ಕೋಡ್‌ ಅನ್ನು ಸಹ ಯಾರೊಂದಿಗೂ ಹಂಚಿಕೊಳ್ಳಬಾರದು.
 
ಕೆಲವು ವೆಬ್‌ಸೈಟ್‌ಗಳಲ್ಲಿ ಭವಿಷ್ಯದ ವ್ಯವಹಾರಗಳು ಸುಲಭವಾಗಲು ನಿಮ್ಮ ಕಾರ್ಡ್‌ನ ಮಾಹಿತಿಯನ್ನು ಸಂಗ್ರಹಿಸಿ ಇಡುವ ಕೊಡುಗೆಯನ್ನು ಮುಂದಿಡುತ್ತವೆ. ಇಂತಹ ಕೊಡುಗೆಯನ್ನು ಸಾಧ್ಯವಿದ್ಟಷ್ಟು ಮಟ್ಟಿಗೆ ತಿರಸ್ಕರಿಸುವುದು ಲೇಸು.
 
4. ಪಾಸ್‌ವರ್ಡ್‌ ನಿರ್ವಹಣೆ 
ಇ –ಕಾಮರ್ಸ್‌ನಲ್ಲಿ ಖರೀದಿಸುವವರ ಮನೋಭಾವದ ಬಗ್ಗೆ ನಡೆಸಿದ ಅಧ್ಯಯನ ಪ್ರಕಾರ ಶೇ 40ಕ್ಕಿಂತ ಅಧಿಕ ವಂಚನೆಗಳು ನಡೆಯುವುದು ಸುರಕ್ಷಿತ ಪಾಸ್‌ವರ್ಡ್‌ಗಳನ್ನು ಜನರು ಹಾಕದೆ ಇರುವುದರಿಂದ. ನಿಮ್ಮ ಪಾಸ್‌ವರ್ಡ್ ಅನ್ನು ಎಲ್ಲೂ ಒಂದು ಕಾಗದದ ಚೂರಿನಲ್ಲೂ ಬರೆದಿಡಬೇಡಿ. ನಿಮ್ಮ ಹೆಸರು, ಜನ್ಮ ದಿನಾಂಕ, ಮದುವೆ ದಿನಾಂಕದಂತಹ ಸಂಖ್ಯೆಗಳನ್ನು ಪಾಸ್‌ವರ್ಡ್‌ ಆಗಿ ಮಾಡಬೇಡಿ.
 
ಪಾಸ್‌ವರ್ಡ್‌ ಹ್ಯಾಕ್‌ ಮಾಡುವವರು ಬಹಳ ಬುದ್ಧಿವಂತಿಕೆ ವಹಿಸಿ ಪಾಸ್‌ವರ್ಡ್‌ ಮಾಹಿತಿ ಪಡೆದುಕೊಳ್ಳಲು ಪ್ರಯತ್ನಿಸುತ್ತೇ ಇರುತ್ತಾರೆ. ಹೀಗಾಗಿ ವಿಶೇಷ ಕ್ಯಾರೆಕ್ಟರ್‌ಗಳು, ಕ್ಲಿಷ್ಟಕರ ಅಂಕಿಗಳನ್ನು ಪಾಸ್‌ವರ್ಡ್‌ ಆಗಿ ಬಳಸಬೇಕು. ಅದಕ್ಕಿಂತಲೂ ಮಿಗಿಲಾಗಿ 20–25 ದಿನಗಳಿಗೊಮ್ಮೆ ಪಾಸ್‌ವರ್ಡ್‌ ಬದಲಾಯಿಸುತ್ತಲೇ ಇರಬೇಕು. ಆನ್‌ಲೈನ್‌ ಶಾಪಿಂಗ್‌ನಲ್ಲಿ ನಡೆಯುವ ವಂಚನೆ ತಡೆಗಟ್ಟುವುದಕ್ಕೆ ಇದು ಬಹಳ ಮುಖ್ಯವಾದ ಕ್ರಮ.
 
5. ವ್ಯವಹಾರದ ಮೇಲೆ ನಿರಂತರ ನಿಗಾ ಇರಲಿ
ಜನರು ಹೆಚ್ಚು ಎಡವುದೇ ಇಲ್ಲಿ. ತಿಂಗಳಿಗೊಮ್ಮೆ ಬರುವ ಸ್ಟೇಟ್‌ಮೆಂಟ್‌ ನೋಡಿಕೊಂಡು ಹಲವರು ತೃಪ್ತರಾಗುತ್ತಾರೆ. ಒಂದು ಆನ್‌ಲೈನ್‌ ಶಾಪಿಂಗ್‌ ನಡೆದ ತಕ್ಷಣ ಅದರ ಲೆಕ್ಕಾಚಾರವನ್ನು ತಕ್ಷಣ ಗಮನಿಸುವ ಕೆಲಸವಾಗಬೇಕು. ಇಲ್ಲಿ ನಿಮಗೇನಾದರೂ ಅಕ್ರಮ ನಡೆದಿರುವುದು ಕಂಡುಬಂದರೆ ತಕ್ಷಣ ಕಾಲ್‌ಸೆಂಟರ್‌ಗೆ ಕರೆ ಮಾಡಬೇಕು.
 
ನಿಮ್ಮ ಕಾರ್ಡ್‌ ಕಳೆದುಹೋದರೆ, ತಕ್ಷಣ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಕಾರ್ಡ್‌ ಅನ್ನು ತಡೆಗಟ್ಟುವ (ಬ್ಲಾಕ್‌) ಕೆಲಸ ಮಾಡಬೇಕು. ಯಾವುದೇ ವ್ಯವಹಾರ ನಡೆದಾಗಲೂ ನಿಮ್ಮ ಮೊಬೈಲ್‌ನಲ್ಲಿ ಅದರ ಮಾಹಿತಿ ಬರುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಬ್ಯಾಂಕ್‌ಗಳು ಕಡಿಮೆ ವೆಚ್ಚದಲ್ಲಿ ಇಂತಹ ಸೇವೆ ಕೊಡುತ್ತವೆ. ನಿಜಕ್ಕೂ ಇದೊಂದು ಅತ್ಯುತ್ತಮ ಸೇವೆ. ಮಾಡುವ ವ್ಯವಹಾರದ ಬಗ್ಗೆ ನೀವು ಹೆಚ್ಚು ಎಚ್ಚರದಿಂದಿದ್ದಷ್ಟೂ ನೀವು ವಂಚನೆಗೆ ಒಳಗಾಗುವ ಅಪಾಯ ಕಡಿಮೆ.
 
6.ಡೆಬಿಟ್‌ ಕಾರ್ಡ್‌ಗಿಂತ ಕ್ರೆಡಿಟ್ ಕಾರ್ಡ್‌ ಒಳಿತು
ಭಾರತೀಯರು ಸಾಲ ಮಾಡಿಕೊಳ್ಳುವ ಮನೋಭಾವದವರಲ್ಲ. ಹೀಗಾಗಿ ಇಲ್ಲಿ ಕ್ರೆಡಿಟ್ ಕಾರ್ಡ್‌ಗಿಂತ ಡೆಬಿಟ್‌ ಕಾರ್ಡನ್ನೇ ಜನ ಹೆಚ್ಚು ಬಳಸುತ್ತಾರೆ. ಆದರೆ ಆನ್‌ಲೈನ್‌ ವ್ಯವಹಾರ ವಿಚಾರ ಬಂದಾಗ ಕ್ರೆಡಿಟ್‌ ಕಾರ್ಡ್‌ ಬಳಸುವುದೇ ಸೂಕ್ತ. ಡೆಬಿಟ್‌ ಕಾರ್ಡ್‌ ಬಳಸಿದ್ದೇ ಆದರೆ ನಿಮ್ಮ ಖಾತೆಯಿಂದ ತಕ್ಷಣ ಹಣ ಹೊರಟು ಹೋಗುತ್ತದೆ.
 
ಕ್ರೆಡಿಟ್‌ ಕಾರ್ಡ್‌ ಆದರೆ ಅಗತ್ಯ ಇದ್ದಾಗ ಹಣಕಾಸಿನ ವಹಿವಾಟನ್ನು ಪರಿಷ್ಕರಿಸಿಕೊಳ್ಳುವುದು ಸುಲಭ. ಹೆಚ್ಚಿನ ಕ್ರೆಡಿಟ್‌ ಕಾರ್ಡ್‌ಗಳಲ್ಲಿ ನಿಮ್ಮ ಹಣಕಾಸಿನ ವಹಿವಾಟಿಗೆ ಮಿತಿ ಹಾಕಲಾಗಿರುತ್ತದೆ. ಇದರಿಂದ ವಂಚನೆಗೊಳಗಾದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಕೈಜಾರುವುದು ತಪ್ಪುತ್ತದೆ.
 
7. ಬಳಸುವ ವೈಫೈ ಸೇವೆಯ ಗುಣಮಟ್ಟ
ಭಾರತೀಯರು ಹೆಚ್ಚಾಗಿ ಮೊಬೈಲ್‌ ಫೋನ್‌ಗಳಲ್ಲೇ ಇ–ಕಾಮರ್ಸ್‌ ವಹಿವಾಟು ಮಾಡುತ್ತಾರೆ. ಇದೊಂದು ಉತ್ತಮ ಬೆಳವಣಿಗೆಯಾದರೂ ಅಪಾಯವೂ ಇಲ್ಲಿ ಅಧಿಕ. ಹೆಚ್ಚಿನ ಜನ ಬಳಸುವುದು ವೈಫೈ ಜಾಲವನ್ನು. ಹೆಚ್ಚಿನ ಸಾಮರ್ಥ್ಯ ಇರುವುದು ಮತ್ತು ಮೊಬೈಲ್‌ ಫೋನ್‌ ನೆಟ್‌ವರ್ಕ್‌ನ ಇಂಟರ್‌ನೆಟ್‌ ಸೇವೆಗಿಂತ ಅಗ್ಗ ಎಂಬ ಕಾರಣಕ್ಕೇ ವೈಫೈಗೆ ಹೆಚ್ಚಿನ ಮಹತ್ವ ಇದೆ.
 
ಆದರೆ ಹೆಚ್ಚಿನ ವೈಫೈ ಜಾಲಗಳು ಸುರಕ್ಷಿತವಾಗಿರುವುದಿಲ್ಲ ಮತ್ತು ಹ್ಯಾಕರ್‌ಗಳಿಗೆ ಇದುವೇ ಹ್ಯಾಕ್‌ ಮಾಡುವುದಕ್ಕೆ ಮೂಲ ತಾಣವಾಗಿ ಬದಲಾಗಿರುತ್ತದೆ. ಖಾಸಗಿ ವೈಫೈ ಆಗಿದ್ದರೆ ಪರವಾಗಿಲ್ಲ, ಸಾರ್ವಜನಿಕ ವೈಫೈ ಅನ್ನು  ವಹಿವಾಟು ಮಾಡುವಾಗ ದೂರ ಇಡುವುದೇ ಲೇಸು. ದೀಪಾವಳಿ ಹಬ್ಬ ಬಂದಿದೆ.
 
ಆನ್‌ಲೈನ್‌ ಶಾಪಿಂಗ್‌ಗೆ ಹೊರಟಿರುವ ನೀವು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ವೈಫೈ ಬಳಸಬೇಡಿ, ನಿಮ್ಮ ಪಾಸ್‌ವರ್ಡ್ ಅನ್ನು ಇತರ ಮಂದಿ ಸುಲಭವಾಗಿ ಓದುವ ಸಾಧ್ಯತೆ ಇರುತ್ತದೆ. ಕ್ಲಿಷ್ಟಕರವಾದ ಪಾಸ್‌ವರ್ಡ್‌ ರೂಪಿಸಿಕೊಳ್ಳಿ ಮತ್ತು ಅದನ್ನು ನಿರಂತರ ಬದಲಾಯಿಸುತ್ತ ಇರಿ.
 
ಎಲ್ಲೂ ಪಾಸ್‌ವರ್ಡ್‌ ಬರೆದು ಇಟ್ಟುಕೊಳ್ಳಬೇಡಿ. ವೆಬ್‌ಸೈಟ್‌ನ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಿ ಮತ್ತು ಆಂಟಿ ವೈರಸ್ ಹಾಕಿಸಿಕೊಳ್ಳಿ. ನೀವು ಮಾಡಿದ ವಹಿವಾಟಿನ ಬಗ್ಗೆ ತಕ್ಷಣ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ.
 
*
-ಅನಿಲ್‌ ರೇಗೊ
ರೈಟ್‌ ಹಾರಿಝಾನ್‌ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT