ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸದಿದ್ದರೆ ಹೊಡೆತ ನಿಶ್ಚಿತ’

Last Updated 27 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಬಿಜೆಪಿ ಆರಂಭಿಸಿರುವ ಪ್ರಚಾರ ಕಾರ್ಯತಂತ್ರಕ್ಕೆ ಪ್ರತಿತಂತ್ರ ರೂಪಿಸದಿದ್ದರೆ ಪಕ್ಷ ಭಾರಿ ಬೆಲೆ ತೆರಬೇಕಾಗಬಹುದು ಎಂದು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಜಿ. ಪರಮೇಶ್ವರ್‌ ಆರು ವರ್ಷ ಪೂರೈಸಿದ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಲು ನಗರದ ಅರಮನೆ ಮೈದಾನದಲ್ಲಿ  ಗುರುವಾರ ಹಮ್ಮಿಕೊಂಡಿದ್ದ ‘ಸುರಾಜ್ಯ ಸಮಾವೇಶ’ ಉದ್ದೇಶಿಸಿ ಮಾತನಾಡಿದರು.

‘ವಿಧಾನಸಭೆ ಚುನಾವಣೆ ಬಳಿಕವೂ ಅಧಿಕಾರ ಉಳಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಖರ್ಗೆ ಸಲಹೆ ನೀಡಿದರು.
‘ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೆನ್ನುವುದು ಜನರ ಅಪೇಕ್ಷೆ. ಅಧಿಕಾರದಲ್ಲಿ ಇರುವಂತೆ ನೋಡಿಕೊಳ್ಳುವುದು ಎಲ್ಲ ನಾಯಕರ ಕರ್ತವ್ಯ. ಈ ಕಾರಣಕ್ಕೆ ಭಿನ್ನಾಭಿಪ್ರಾಯ ಮರೆಯಬೇಕು’ ಎಂದರು.

ಅನೇಕರು ಪಕ್ಷದ ವೇದಿಕೆ ಬಿಟ್ಟು ಮಾಧ್ಯಮಗಳಲ್ಲಿ ಮಾತನಾಡುತ್ತಾರೆ. ಪಕ್ಷಕ್ಕಾಗಿ ದುಡಿದವರು ತಾವು ಮಾಡಿದ ಕೆಲಸವನ್ನು ಮುಖಂಡರ ಮುಂದೆ ಧೈರ್ಯವಾಗಿ ಹೇಳಿಕೊಂಡು, ಸಮರ್ಥಿಸಿಕೊಳ್ಳಬೇಕು. ಆಗ ಪಕ್ಷದಲ್ಲಿ ಅಶಿಸ್ತು ಇರುವುದಿಲ್ಲ. ಪಕ್ಷದ ಮುಖಂಡರ ವಿರುದ್ಧ ಪ್ರತಿಭಟನೆಗಳು ನಡೆದಾಗ, ಪ್ರತಿಕೃತಿ ದಹಿಸಿದಾಗ ಸುಮ್ಮನಿರುವುದರಲ್ಲಿ ಅರ್ಥ ಇಲ್ಲ. ಮುಖಂಡರಾದವರು ಮಾತನಾಡದಿದ್ದರೆ ಪಕ್ಷಕ್ಕೆ ದ್ರೋಹ ಬಗೆದಂತೆ ಎಂದೂ ಅವರು ಅಭಿಪ್ರಾಯಪಟ್ಟರು.

ಸಮಾವೇಶ ಉದ್ಘಾಟಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ  ದಿಗ್ವಿಜಯ್‌ ಸಿಂಗ್, ‘ ಹಿಂದೂ– ಮುಸ್ಲಿಮರ ನಡುವೆ ಕೋಮು ಸಾಮರಸ್ಯ ಕದಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಅದಕ್ಕೆ  ಪ್ರತ್ಯುತ್ತರ ನೀಡಬೇಕಾಗಿದೆ’ ಎಂದರು.

ಪರಮೇಶ್ವರ್‌ ಮಾತನಾಡಿ, ‘ನಾನು  ಜನರ ಮಧ್ಯದಿಂದ ಬಂದು ಅಧ್ಯಕ್ಷ ಆಗಿದ್ದೇನೆಯೇ ಹೊರತು, ಅದೃಷ್ಟದಿಂದ ಅಲ್ಲ. ಸೋನಿಯಾ ಗಾಂಧಿ ನನಗೆ ಪಕ್ಷದ ಅಧ್ಯಕ್ಷ ಪಟ್ಟ ನೀಡಿದಾಗ, ಆ ಸ್ಥಾನಕ್ಕೆ ಅರ್ಹನೇ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಎದ್ದಿತ್ತು. ಆದರೆ, ಪಕ್ಷದ ನಾಯಕರು ನನ್ನ ಮೇಲೆ ಇಟ್ಟ ಭರವಸೆ ಈಡೇರಿಸಿದ ತೃಪ್ತಿ ಇದೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಕಳೆದ ಮೂರೂವರೆ ವರ್ಷದಲ್ಲಿ ಸರ್ಕಾರ ಮತ್ತು ಸಚಿವರ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ಸಾಮರಸ್ಯ ಕಾಪಾಡಿಕೊಂಡು, ಸಾಮಾಜಿಕ ನ್ಯಾಯ ಮತ್ತು ಬದ್ಧತೆಯಿಂದ ಕೆಲಸ ಮಾಡಿದ್ದೇವೆ. ಆದರೆ, ವಿರೋಧ ಪಕ್ಷಗಳು ರಾಜಕೀಯ ದುರುದ್ದೇಶದಿಂದ ಆರೋಪ ಮಾಡುತ್ತಿವೆ’ ಎಂದರು.

‘ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಿರ್ನಾಮವೇ ನನ್ನ ಗುರಿ ಎಂದು ಯಡಿಯೂರಪ್ಪ ಹೇಳಿದ್ದರು. ಜನ ಅದನ್ನೆಲ್ಲ ಮರೆತು ಬಿಡ್ತಾರ’ ಎಂದು ಅವರು ಪ್ರಶ್ನಿಸಿದರು.
*
ಗದೆ ಕಂಡು ಬೆಚ್ಚಿದ ಸಿದ್ದರಾಮಯ್ಯ!

‘ಯಾರಾದರೂ ಉಡುಗೊರೆ ಕೊಡಲು ಬಂದರೆ ಭಯವಾಗುತ್ತದೆ!’
ಹೀಗೆಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ.

‘ನನ್ನ ಸ್ನೇಹಿತನೊಬ್ಬ ವಾಚ್‌ ಉಡುಗೊರೆಯಾಗಿ ಕೊಟ್ಟಿದ್ದ. ಅದು ಎಷ್ಟೆಲ್ಲಾ ಅವಾಂತರ ಸೃಷ್ಟಿಸಿತು. ಆಗಿನಿಂದ ಉಡುಗೊರೆ ಕಂಡರೆ ಭಯವಾಗುತ್ತಿದೆ’ ಎಂದು ನಕ್ಕರು.

‘ಪಕ್ಷದ ಕಾರ್ಯಕರ್ತರು ಬೆಳ್ಳಿ ಗದೆ ಮತ್ತು ಕಿರೀಟ ನೀಡಿದ್ದಾರೆ. ಅವರನ್ನು ನೋಯಿಸಬಾರದು ಎಂಬ ಕಾರಣಕ್ಕೆ ಸ್ವೀಕರಿಸಿದ್ದೇನೆ. ಇವೆರಡನ್ನೂ ಕೆಪಿಸಿಸಿ ಕಚೇರಿಗೆ ನೀಡುತ್ತೇನೆ. ಅದನ್ನು ಅಲ್ಲಿ ಇಟ್ಟುಕೊಳ್ಳಲು ಪರಮೇಶ್ವರ್‌ ಒಪ್ಪಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್‌ ಅವರಿಗೆ ಪಕ್ಷದ  ಮುಖಂಡ ಬೈರತಿ ಬಸವರಾಜ್ ಬೆಳ್ಳಿ ಗದೆ ಮತ್ತು ಕಿರೀಟ ತೊಡಿಸಿದರು. ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಮತ್ತು ಕೆಪಿಸಿಸಿ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್‌  ಅವರೂ ಸೇರಿ ಈ ಗದೆ ಕೊಟ್ಟಿದ್ದಾರೆ.

ಜನ ಜಂಗಳಿ: ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಸಮಾವೇಶ 12.15ರ ಸುಮಾರಿಗೆ ಆರಂಭವಾಯಿತು.

ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಹೊರ ಭಾಗದಲ್ಲಿ ಅಳವಡಿಸಿದ್ದ ಡಿಜಿಟಲ್ ಸ್ಕ್ರೀನ್‌ಗಳ ಎದುರು ಕುಳಿತು ಜನ ಭಾಷಣ ಕೇಳಿದರು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಜನರಲ್ಲಿ ತುಮಕೂರಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
*
ಸೆಲ್ಫಿಗೊಂದು ವೇದಿಕೆ
ಸಭಾಂಗಣದ ಎದುರಿನ ತೆರೆದ ವೇದಿಕೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೆಲ್ಫಿ ತೆಗೆದುಕೊಳ್ಳುವ ತಾಣವಾಗಿತ್ತು. ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಭಾವಚಿತ್ರ ಒಳಗೊಂಡ ಬ್ಯಾನರ್ ಅಳವಡಿಸಲಾಗಿತ್ತು. ಅದರ ಮುಂದೆ ನಿಂತು ಕಾರ್ಯಕರ್ತರು ನಾಮುಂದು ತಾಮುಂದು ಎಂದು  ಸೆಲ್ಫಿ ತೆಗೆದುಕೊಂಡರು.

ಕಳ್ಳರ ಕೈ ಚಳಕ: ಸಮಾವೇಶ ಮುಗಿಸಿ ಗಣ್ಯರು ಸಭಾಂಗಣದಿಂದ ಹೊರಬರುತ್ತಿದ್ದ ಜಾಗದಲ್ಲಿ ನೂಕುನುಗ್ಗಲು ಏರ್ಪಟ್ಟಿತು. ಈ ಸಂದರ್ಭದಲ್ಲಿ ಮೊಬೈಲ್‌ ಕದ್ದ ಯುವಕನೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದ. ಚಿಕ್ಕನಾಯಕನಹಳ್ಳಿ ಶಿವಣ್ಣ ಎಂಬುವವರ ಜೇಬಿಗೆ ಕತ್ತರಿ ಬಿದ್ದಿತ್ತು. ಕೂಡಲೇ ಎಚ್ಚೆತ್ತು ಕೊಂಡಿದ್ದರಿಂದ  ಜೇಬಿನಲ್ಲಿದ್ದ ₹ 5 ಸಾವಿರ ಸುರಕ್ಷಿತವಾಗಿ ಉಳಿಯಿತು.
*
ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ; ಭಿನ್ನಾಭಿಪ್ರಾಯ ಇದೆ ಎನ್ನುವುದು ಮಾಧ್ಯಮಗಳ ಊಹೆ.
ಸಿದ್ದರಾಮಯ್ಯ,
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT