ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ದೀಪಾವಳಿಗೆ ಬಂಗಾಳಿ ಸಿಹಿ

ಸವಿರುಚಿ
Last Updated 27 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
‘ಬಂಗಾಳಿ ಸಿಹಿ ತಿನಿಸುಗಳು...’ ಈ ಶಬ್ದ ಕಿವಿಗೆ ಬಿದ್ದಾಕ್ಷಣ ಬಾಯಲ್ಲಿನ ರುಚಿ ಮೊಗ್ಗುಗಳು ಅರಳಿ,  ನೀರೂರುತ್ತದೆಯಲ್ಲವೇ?
 
ಬಂಗಾಳಿಗಳು ಮೂಲತಃ ಸಿಹಿ ಪ್ರಿಯರು. ಅವರ ನಿತ್ಯದ ಬದುಕಿನಲ್ಲಿ ಒಂದಾದರೂ ಸಿಹಿ ತಿನಿಸು ಇರಲೇಬೇಕು. ಕೆಲವರು ಬೆಳ್ಳಂಬೆಳಗ್ಗೆಯೇ ನಾಷ್ಟದೊಂದಿಗೆ ಸಿಹಿ ತಿನ್ನಲು ಬಯಸಿದರೆ, ಮತ್ತೆ ಕೆಲವರು ಹಬ್ಬ–ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಸಿಹಿ ಬಯಸುವವರು.
 
ಬಂಗಾಳಿ ಸಿಹಿ ಎಂದಾಕ್ಷಣ ಮನದಲ್ಲಿ ಮೂಡುವ ಚಿತ್ರ ರಸಗುಲ್ಲಾದ್ದು. ದುಂಡಗೆ, ಹಾಲು ಬಿಳುಪಿನ ಈ ಸಣ್ಣ ಸಿಹಿ ಉಂಡೆ ಬಾಯಲ್ಲಿ ಇಟ್ಟಾಕ್ಷಣ ಕರಗುವ ಅನುಭೂತಿ ಅನನ್ಯ. ಅಂಥ ರಸಗುಲ್ಲಾವನ್ನು ಮಾಡುವ ಸರಳ ವಿಧಾನ ಇಲ್ಲಿದೆ.
 
ರಸಗುಲ್ಲಾ
ಬೇಕಾಗುವ ಸಾಮಗ್ರಿಗಳು: ಕೊಬ್ಬುಭರಿತ ಹಾಲು –1 ಲೀಟರ್, ನಿಂಬೆಹಣ್ಣಿನ ರಸ –3 ಟೀ ಸ್ಪೂನ್, ಸಕ್ಕರೆ–1 ಅಥವಾ ಒಂದೂವರೆ ಕಪ್, ನೀರು– 3ಕಪ್, ಗುಲಾಬಿ ಎಸೆನ್ಸ್‌ –2 ಹನಿ, ಏಲಕ್ಕಿ ಪುಡಿ–ಅರ್ಧ ಟೀ ಸ್ಪೂನ್
 
ಅಲಂಕಾರಕ್ಕೆ: ಕೇಸರಿ ದಳಗಳು, ತುಂಡರಿಸಿದ ಬಾದಾಮಿ
ವಿಧಾನ: ದಪ್ಪ ತಳವುಳ್ಳ ಪಾತ್ರೆಯಲ್ಲಿ ಕೆನೆಭರಿತ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಬೇಕು. ಹಾಲು ಕುದಿಯತೊಡಗಿದಂತೆ ಅದಕ್ಕೆ ಮೂರು ಟೀ ಸ್ಪೂನ್ ನಿಂಬೆ ರಸ ಬೆರೆಸಬೇಕು.
 
ಆಗ ಹಾಲು ಒಡೆದು ನೀರಿನಂಶ ಮತ್ತು ಕೊಬ್ಬಿನ ಅಂಶ ಬೇರ್ಪಡುತ್ತದೆ. ಬೇರ್ಪಟ್ಟ ಕೊಬ್ಬಿನ ಅಂಶವೇ ಪನ್ನೀರ್. ಕೊಬ್ಬಿನ ಅಂಶ ಬೇರ್ಪಡುವ ತನಕ ಸಣ್ಣ ಉರಿಯಿಡಿ. ಆದರೆ, ತಳ ಹತ್ತದಂತೆ ನೋಡಿಕೊಳ್ಳಿ.
 
ಇದನ್ನು ಒಂದು ಕಾಟನ್ ಬಟ್ಟೆಯಲ್ಲಿ ಹಾಕಿ, ನೀರನ್ನು ಸೋಸಿ. ನಂತರ ಮೊಸರಿನಂಶವನ್ನು ತಣ್ಣನೆಯ ನೀರಿನಲ್ಲಿ ಅದ್ದಿ ತೆಗೆಯಿರಿ, ನೀರಿನಂಶ ಇಂಗುವ ತನಕ ಬಟ್ಟೆಯನ್ನು ಕಟ್ಟಿ ತೂಗುಬಿಡಿ, ಆಗ ನೀರು ಇಳಿದುಕೊಳ್ಳುತ್ತದೆ. ನಂತರ ಪನ್ನೀರ್‌ಅನ್ನು ಹಿಟ್ಟಿನಂತೆ ಮೃದುವಾಗುವ ತನಕ ನಾದಬೇಕು. ನಂತರ ಅದನ್ನು ಸಣ್ಣ ಸಣ್ಣ ಜಾಮೂನು ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. 
 
ನೀರು ಮತ್ತು ಸಕ್ಕರೆ ಮಿಶ್ರಣವನ್ನು ಕುದಿಯಲು ಇಡಿ, ಪಾಕದ ಹದಕ್ಕೆ ಬಂದ ಮೇಲೆ  ರಸಗುಲ್ಲಾದ ಉಂಡೆಗಳನ್ನು ಮಿಶ್ರಣದಲ್ಲಿ ಹಾಕಿ, ಏಲಕ್ಕಿ ಪುಡಿಯನ್ನು ಸೇರಿಸಿ, ತಕ್ಷಣವೇ ಪಾತ್ರೆ ಮೇಲೆ ಮುಚ್ಚಳ ಮುಚ್ಚಿ, ಹತ್ತು ನಿಮಿಷಗಳ ತನಕ ಮುಚ್ಚಳ ತೆರೆಯದೇ ಸಣ್ಣ ಉರಿಯಲ್ಲಿಡಿ. 
 
ನಂತರ ಮುಚ್ಚಳ ತೆರೆದು,  ರಸಗುಲ್ಲಾದ ಉಂಡೆಯೊಂದ ನ್ನು ಪಾಕದಲ್ಲಿ ಹಾಕಿ, ಉಂಡೆ ತೇಲುತ್ತಿದ್ದರೆ ಬೆಂದಿಲ್ಲ ಎಂದು ಅರ್ಥ. ಮುಳುಗಿದರೆ ಬೆಂದಿದೆ ಎಂದರ್ಥ.
ಬೆಂದಿರುವ ರಸಗುಲ್ಲಾಗಳನ್ನು ಬೇರೆಡೆ ತೆಗೆದಿಡಿ. ತಣ್ಣಗಾದ ನಂತರ ಒಂದೆರೆಡು ಹನಿ ಗುಲಾಬಿ ಎಸೆನ್ಸ್‌ ಹಾಕಿ.  ಅಲಂಕಾರಕ್ಕಾಗಿ ಕೇಸರಿ ಎಸಳು ಮತ್ತು ಬಾದಾಮಿ ಉದುರಿಸಿ. ಈಗ ರುಚಿಯಾದ ಬಂಗಾಳಿ ರಸಗುಲ್ಲಾ ತಿನ್ನಲು ರೆಡಿ.
 
ಚಮ್‌ಚಮ್‌
ರಸಗುಲ್ಲಾದಂತೆಯೇ ಇರುವ ಚಮ್‌ಚಮ್‌ ಬಂಗಾಳಿಗಳ ಮತ್ತೊಂದು ಜನಪ್ರಿಯ ಸಿಹಿತಿನಿಸು. ತಯಾರಿಸುವ  ವಿಧಾನದಲ್ಲಿ ರಸಗುಲ್ಲಾದಂತೆಯೇ ಇರುವ ಚಮ್‌ಚಮ್‌ ತನ್ನ ವಿಶಿಷ್ಟ ಸ್ವಾದ, ಬಣ್ಣದ ಕಾರಣಕ್ಕಾಗಿ ಪ್ರಸಿದ್ಧಿ.
 
ಬೇಕಾಗುವ ಸಾಮಗ್ರಿಗಳು: ಕೊಬ್ಬುಭರಿತ ಹಾಲು 1 ಲೀಟರ್, ನಿಂಬೆ ಹಣ್ಣಿನ ರಸ 3 ಟೇಬಲ್ ಸ್ಪೂನ್, ಹಳದಿ ಪುಡ್ ಕಲರ್–3 ಚಿಟಿಕೆ, ಗುಲಾಬಿ ಎಸೆನ್ಸ್‌– 2 ಹನಿಗಳು, ಏಲಕ್ಕಿ ಪುಡಿ–ಕಾಲು ಚಮಚ, ಪಿಸ್ತಾ–2 ಟೇಬಲ್ ಸ್ಪೂನ್, ಮೃದು ಖೋವಾ– 4ಟೇಬಲ್ ಸ್ಪೂನ್, ಸಕ್ಕರೆ– 2 ಟೇಬಲ್ ಸ್ಪೂನ್, ಸಕ್ಕರೆ ಪಾಕಕ್ಕೆ: 3 ಕಪ್‌ ನೀರು, ಒಂದೂವರೆ ಕಪ್‌ ಸಕ್ಕರೆ.
 
ವಿಧಾನ: ದಪ್ಪ ತಳವುಳ್ಳ ಪಾತ್ರೆಯಲ್ಲಿ ಕೊಬ್ಬಿನಂಶವುಳ್ಳ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಬೇಕು. ಹಾಲು ಕುದಿಯತೊಡಗಿದಂತೆ ಅದಕ್ಕೆ ಮೂರು ಟೀ ಸ್ಪೂನ್ ನಿಂಬೆಹಣ್ಣಿನ ರಸವನ್ನು ಬೆರೆಸಬೇಕು. 
 
ಹಾಲು ಒಡೆದು ನೀರಿನಂಶ ಮತ್ತು ಮೊಸರಿನಂಶ ಬೇರ್ಪಡುತ್ತದೆ. ಬೇರ್ಪಟ್ಟ ಮೊಸರಿನಂಶವೇ ಪನ್ನೀರ್. ಮೊಸರಿನಂಶ ಬೇರ್ಪಡುವ ತನಕ ಸಣ್ಣ ಉರಿಯಿಡಿ. ಆದರೆ, ತಳ ಹತ್ತದಂತೆ ನೋಡಿಕೊಳ್ಳಿ. ನೀರಿನಂಶ  ಇಂಗಿದಾಗ, ಮೊಸರಿನಂಶವನ್ನು ಒಂದು ಕಾಟನ್ ಬಟ್ಟೆಯಲ್ಲಿ ಹಾಕಿ,  ನೀರನ್ನು ಸೋಸಿ.
 
ನಂತರ ಮೊಸರಿನಂಶವನ್ನು ತಣ್ಣನೆಯ ನೀರಿನಲ್ಲಿ ಅದ್ದಿ ತೆಗೆಯಿರಿ, ಮೊಸರಿನಲ್ಲಿನ ನೀರಿನಂಶ ಇಂಗುವ ತನಕ ಬಟ್ಟೆಯನ್ನು ಕಟ್ಟಿ ತೂಗಿಬಿಡಿ, ಆಗ ನೀರು ಇಳಿದುಕೊಳ್ಳುತ್ತದೆ. ನಂತರ ಮೊಸರಿನಂಶದ ಪನ್ನೀರ್‌ಗೆ ಹಳದಿ ಫುಡ್‌ ಕಲರ್ ಸೇರಿಸಿ ಹಿಟ್ಟಿನಂತೆ ಮೃದುವಾಗುವ ತನಕ ನಾದಬೇಕು. ನಂತರ ಅದನ್ನು ಸಣ್ಣ ಸಣ್ಣ ಶಂಖಾಕೃತಿಯ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. 
 
ನೀರು ಮತ್ತು ಸಕ್ಕರೆ ಮಿಶ್ರಣವನ್ನು ಕುದಿಯಲು ಇಡಿ, ಪಾಕದ ಹದಕ್ಕೆ ಬಂದಮೇಲೆ  ಉಂಡೆಗಳನ್ನು ಮಿಶ್ರಣದಲ್ಲಿ ಹಾಕಿ, ಏಲಕ್ಕಿ ಪುಡಿಯನ್ನು ಸೇರಿಸಿ, ತಕ್ಷಣವೇ ಪಾತ್ರೆ ಮೇಲೆ ಮುಚ್ಚಳ ಮುಚ್ಚಿ, ಹತ್ತು ನಿಮಿಷಗಳ ತನಕ ಮುಚ್ಚಳ ತೆರೆಯದೇ ಸಣ್ಣ ಉರಿಯಲ್ಲಿಡಿ. 
 
ಹತ್ತು ನಿಮಿಷದ ನಂತರ ಉರಿ ಆರಿಸಿ, ಶಂಖಾಕೃತಿಯ  ಚಮ್‌ ಚಮ್‌ ಉಂಡೆಗಳನ್ನು ತಣ್ಣಗಾಗಲು ಬಿಡಿ.
 
**
ಸಂದೇಶ್
ಬೇಕಾಗುವ ಸಾಮಗ್ರಿಗಳು: ಅರ್ಧ ಕಪ್ ಪನ್ನೀರ್, ಕಾಲು ಕಪ್ ಸಕ್ಕರೆ, 5 ಏಲಕ್ಕಿ, 4  ಕತ್ತರಿಸಿದ ಪೀಸ್ತಾ ಬೀಜಗಳು, 1 ಚಮಚ (ಟೀಸ್ಪೂನ್‌) ಗುಲಾಬಿ ಎಸೆನ್ಸ್
ವಿಧಾನ: ಸಕ್ಕರೆ ಮತ್ತು ಏಲಕ್ಕಿಯನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಟ್ಟಲಿನಲ್ಲಿ ಪುಡಿ ಮಾಡಿದ ಪನ್ನೀರ್ ಅನ್ನು ಹಾಕಿಕೊಂಡು ಏಲಕ್ಕಿ–ಸಕ್ಕರೆ ಪುಡಿಯನ್ನು ಬೆರೆಸಬೇಕು. 
 
ನಂತರ ಎಲ್ಲವನ್ನೂ ಚೆನ್ನಾಗಿ ಕಲಸಬೇಕು. ನಂತರ ಈ ಪನ್ನೀರ್ ಮಿಶ್ರಣವನ್ನು ಸಣ್ಣ ಉಂಡೆಯ ಆಕಾರಕ್ಕೆ ಮಾಡಿಕೊಳ್ಳಬೇಕು. ನಂತರ ಮಫಿನ್ ಲೈನರ್ ಪೇಪರ್‌ನಲ್ಲಿ ಈ ಉಂಡೆಗಳನ್ನಿಟ್ಟು ರೆಫ್ರಿಜರೇಟರ್‌ನಲ್ಲಿ ಅರ್ಧಗಂಟೆ ಕಾಲ ತಣ್ಣಗಾಗಲು ಬಿಡಿ. 
 
ಅರ್ಧಗಂಟೆಯ ನಂತರ ಪನ್ನೀರ್ ಉಂಡೆಗಳನ್ನು ಹೊರಗೆ ತೆಗೆದು ಅದರ ಮೇಲೆ ಅಲಂಕಾರಿಕವಾಗಿ ಕೇಸರಿ ಎಸಳು, ಸ್ಲೈಸ್‌ ಮಾಡಿದ ಬಾದಾಮಿ ಚೂರುಗಳನ್ನು ಇಡಿ. ಈಗ ಸಿಹಿ ಸಂದೇಶ್‌ ತಿನ್ನಲು ರೆಡಿ. ಇದನ್ನು ಆದಷ್ಟು ಬೇಗ ಫ್ರೆಶ್ ಇದ್ದಾಗಲೇ ತಿಂದರೆ ರುಚಿ ಹೆಚ್ಚು.
 
**
ಸ್ಟಫಿಂಗ್
ಮೃದು ಖೋವಾವನ್ನು  ತುಸು ಬಿಸಿ ಮಾಡಿ, ಸಕ್ಕರೆ ಪುಡಿಯೊಂದಿಗೆ ಮಿಶ್ರಣಮಾಡಿ ಚೆನ್ನಾಗಿ ಮೃದು ಪೇಸ್ಟ್  ಹದಕ್ಕೆ ಕಲಸಬೇಕು.  ನಂತರ ಇದಕ್ಕೆ ಪಿಸ್ತಾ ಸೇರಿಸಬೇಕು.
 
ಸಕ್ಕರೆ ಪಾಕವನ್ನು ಹೀರಿಕೊಂಡ ಚಮ್‌ಚಮ್ ಉಂಡೆಗಳನ್ನು ಮಫಿನ್ ಲೈನರ್ ಪೇಪರ್‌ನಲ್ಲಿ ಒಂದೊಂದಾಗಿ ಜೋಡಿಸಿಕೊಂಡು, ಉಂಡೆಗಳ ಮಧ್ಯಭಾಗವನ್ನು ಚಾಕುವಿನಿಂದ ಸ್ವಲ್ಪ ತೆರೆದು ಅದರೊಳಗೆ ಖೋವಾವನ್ನು ತುಂಬಬೇಕು. ನಂತರ ಚಮ್‌ಚಮ್‌ ಅನ್ನು ಸ್ವಲ್ಪಹೊತ್ತು ರೆಫ್ರಿಜರೇಟರ್‌ನಲ್ಲಿಡಿ.
ತಣ್ಣಗಿರುವಾಗಲೇ ಚಮ್‌ ಚಮ್ಅನ್ನು ತಿನ್ನಲು ಕೊಡಿ.

-ಸಮಿತಾ ರಾಯ್
(ನಿರೂಪಣೆ: ಮಂಜುಶ್ರೀ ಎಂ.ಕಡಕೋಳ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT