ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಸರಕಿಗೆ ಹೊಸ ಬಣ್ಣ

Last Updated 28 ಅಕ್ಟೋಬರ್ 2016, 11:38 IST
ಅಕ್ಷರ ಗಾತ್ರ

ಚಿತ್ರ: ಏ ದಿಲ್ ಹೈ ಮುಷ್ಕಿಲ್
ನಿರ್ಮಾಪಕರು: ಅಪೂರ್ವ ಮೆಹ್ತಾ, ಹಿರೂ ಯಶ್ ಜೋಹರ್, ಕರಣ್ ಜೋಹರ್
ನಿರ್ದೇಶಕ: ಕರಣ್ ಜೋಹರ್‌
ತಾರಾಗಣ: ರಣಬೀರ್ ಕಪೂರ್, ಅನುಷ್ಕಾ ಶರ್ಮಾ, ಐಶ್ವರ್ಯಾ ರೈ, ಫವಾದ್‌ ಖಾನ್‌


ಐಷಾರಾಮಿ ಬದುಕಿನೊಳಗಿನ ಪ್ರೇಮಕಥೆಗಳನ್ನು ಕಟ್ಟಿಕೊಡುವುದರಲ್ಲಿ ನಿರ್ದೇಶಕ ಕರಣ್ ಜೋಹರ್ ಸಿದ್ಧಹಸ್ತರು. ಸಿರಿವಂತ ಕುಟುಂಬದ ವ್ಯಕ್ತಿಗಳು, ಪಬ್ಬು, ಹಾಡು–ಕುಣಿತಗಳೇ ಉದ್ಯೋಗ, ಸುಲಭವಾಗಿ ಪಲ್ಲಟವಾಗುವ ಪ್ರೇಮ, ಆತ್ಮೀಯತೆ ಎಂದರೆ ಕಾಮ ಎಂಬ ವ್ಯಾಖ್ಯಾನ – ಇವು ಅವರ ಸಿನಿಮಾಗಳಲ್ಲಿನ ಸಾಮಾನ್ಯ ಸಂಗತಿಗಳು. ‘ಏ ದಿಲ್‌ ಹೈ ಮುಷ್ಕಿಲ್‌’ ಚಿತ್ರವನ್ನೂ ಈ ಪುನರಾವರ್ತಿತ ಅಂಶಗಳಿಂದ ಹೊರತಾಗಿಸುವ ಪ್ರಯತ್ನ ಕಾಣಿಸುವುದಿಲ್ಲ. ಆದರೆ ಅವರ ಹಿಂದಿನ ಕೆಲವು ಸಿನಿಮಾಗಳಂತೆ ಇಲ್ಲಿ ಕೌಟುಂಬಿಕ ಬಂಧಗಳಿಲ್ಲ. ‘ಸ್ಟಾರ್’ ಕಲಾವಿದರಿದ್ದರೆ ಹಳೆಯ ಸವಕಲು ಸರಕಿಗೆ ಹೊಸ ಬಣ್ಣ ಕೊಡುವುದು ಸುಲಭ ಎಂಬ ನೀತಿಯನ್ನು ಕರಣ್‌ ಇಲ್ಲಿಯೂ ಮುಂದುವರಿಸಿದ್ದಾರೆ.

ಸಂಬಂಧಗಳಲ್ಲಿನ ಸಂಕೀರ್ಣತೆ, ಗೋಜಲುಗಳು, ಗೊಂದಲಗಳನ್ನು ತೀರಾ ಲಘುವಾಗಿ ಚಿತ್ರಿಸಿರುವ ಸಿನಿಮಾ, ಪ್ರೇಮ ವೈಫಲ್ಯ ಮತ್ತು ಹೊಸ ಪ್ರೇಮದ ಹುಟ್ಟನ್ನು ವಾಂಛೆಯಾಚೆಗಿನ ತೆಳು ಪರದೆಯಂತೆ ತೋರಿಸಿದ್ದಾರೆ. ಗೆಳೆತನದ ಕಣ್ಣಿನಿಂದ ಸಂಬಂಧವನ್ನು ಕಟ್ಟಿಕೊಳ್ಳುವ ಪ್ರಯತ್ನವೂ ಪರಿಣಾಮಕಾರಿಯಾಗಿಲ್ಲ. ಹಿನ್ನೆಲೆಯೇ ಇಲ್ಲದೆ ಹುಟ್ಟಿಕೊಂಡಿರುವ ಪಾತ್ರಗಳಿಗೆ ದಿಕ್ಕು ದೆಸೆಗಳೂ ಇಲ್ಲ.

ಅಪ್ಪನ ಬಿಜಿನೆಸ್‌ನಿಂದ ವಿಮುಖನಾದ ನಾಯಕ (ರಣಬೀರ್ ಕಪೂರ್‌) ಹಾಡುಗಾರನಾಗಬೇಕೆಂಬ ಬಯಕೆ ಹೊತ್ತವನು. ಪ್ರೀತಿಯಲ್ಲಿ ಬೀಳುವುದು ಮತ್ತು ಅದರಲ್ಲಿ ಸೋತಾಗ ಮಗುವಿನಂತೆ ಅಳುವುದು ಆತನ ಜಾಯಮಾನ. ಹೀಗೆ ಮುಗ್ಧನಂತೆ ಕಾಣಿಸುವ ನಾಯಕ, ಪ್ರೀತಿಯ ತೀವ್ರತೆಯೇ ಕಾಮವೆಂದು ಭಾವಿಸುತ್ತಾನೆ. ಈತನಿಗೆ ಜತೆಯಾಗುವ ನಾಯಕಿ (ಅನುಷ್ಕಾ ಶರ್ಮಾ) ಕೂಡ ಪ್ರೇಮವಿರಾಗಿ.

ತನ್ನ ಪ್ರೇಮ ವೈಫಲ್ಯವನ್ನು ಮರೆಯಲು ಖುಷಿಯ ಮೂಲಗಳನ್ನು ಹುಡುಕುವ ಆಕೆ, ನಾಯಕನೊಂದಿಗೆ ಪ್ರೀತಿಯಲ್ಲಿ ಬೀಳುವ ಅವಕಾಶಗಳನ್ನು ನಿರಾಕರಿಸುತ್ತಾಳೆ. ಹಳೆಯ ಪ್ರಿಯಕರ (ಫವಾದ್‌ ಖಾನ್‌) ಪುನಃ ಬದುಕಿನಲ್ಲಿ ಬಂದರೂ ಆತನೊಟ್ಟಿಗೆ ಇರಲು ಸಾಧ್ಯವಿಲ್ಲ ಎಂಬುದಕ್ಕೆ ತೀರಾ ನಾಟಕೀಯ ಕಾರಣವನ್ನು ನೀಡಿದ್ದಾರೆ. ಗೆಳೆತನವೇ ಚೆಂದ ಎನ್ನುವ ಕರಣ್‌ ಹಳೆಯ ಸಿನಿಮಾ ಸಿದ್ಧಾಂತ ಇಲ್ಲಿ ನೆನಪಿಗೆ ಬರುತ್ತದೆ. ಮತ್ತೆ ಮತ್ತೆ ಪ್ರೀತಿಯಲ್ಲಿ ಸೋತರೂ ನಾಯಕ ದೇವದಾಸನಲ್ಲ. ಆತನಿಗೆ ಬದುಕನ್ನು ಕಾವ್ಯಾತ್ಮಕವಾಗಿ ನೋಡುವ ಕವಯತ್ರಿ (ಐಶ್ವರ್ಯಾ ರೈ) ಸಿಗುತ್ತಾಳೆ. ಆಕೆ ಗಂಡನಿಂದ ದೂರವಿದ್ದೂ ಆತನನ್ನು ಪ್ರೀತಿಸುವವಳು. ಹೀಗೆ ಸಂಬಂಧಗಳ ಗಾಢತೆಯನ್ನು ಒಪ್ಪಿಕೊಳ್ಳದೆಯೇ, ಅವುಗಳನ್ನು ಅನುಭವಿಸಲು ಬಯಸುವ ನಾಲ್ಕೂ ಪಾತ್ರಗಳು ಯಾವ ಭಾವ ತೀವ್ರತೆಯನ್ನೂ ಉಳಿಸದೆ ಮರೆಯಾಗುತ್ತವೆ.

ರಣಬೀರ್‌, ಅನುಷ್ಕಾ ಮತ್ತು ಐಶ್ವರ್ಯಾ ಸತ್ವಹೀನ ಪಾತ್ರಗಳಲ್ಲಿಯೂ ಮನಸಿನಲ್ಲಿ ಉಳಿಯುವ ಅಭಿನಯ ನೀಡಿದ್ದಾರೆ. ಪ್ರೀತಂ ಸಂಗೀತ ತಾಜಾ ಎನಿಸುವುದಿಲ್ಲ. ಸಿನಿಮಾದ ಬಹುತೇಕ ಭಾಗ ಲಂಡನ್‌ನ ಹಿನ್ನೆಲೆಯಲ್ಲಿಯೇ ಇರುವುದರಿಂದ ಮತ್ತು ದೂರದ ಕಣ್ಣಿನಿಂದಲೇ ಪ್ರೇಮ ಕಥೆಗಳನ್ನು ಹಿಡಿದಿಡಲು ಹೋಗಿರುವುದರಿಂದ ಸಿನಿಮಾ ಕಾಡುವ ಗುಣವನ್ನೂ ಪಡೆದುಕೊಂಡಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT