ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಬದುಕಿನ ಕತ್ತಲಿಗೆ ಬೆಳಕಿನ ಹಬ್ಬ

Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ದೀಪಾವಳಿ ಎಂದರೆ ದೀಪಗಳ ಸಾಲು. ದೀಪ ಎಂದರೆ ಬೆಳಕು. ಬೆಳಕು ಇಲ್ಲದಿದ್ದರೆ ನಾವು ಜಗತ್ತಿನಲ್ಲಿ ಏನನ್ನೂ ಕಾಣಲಾರೆವು. ಜಗತ್ತು ನಮಗೆ ಕಾಣಬೇಕಾದರೆ ಬೆಳಕು ಬೇಕು.
 
ಬೆಳಕಿನ ಹಬ್ಬವೇ ‘ದೀಪಾವಳಿ’. ಜೀವನದುದ್ದಕ್ಕೂ ಬೆಳಕು ನಮ್ಮ ಜೊತೆಯಲ್ಲಿರಲಿ ಎನ್ನುವುದರ ಸಾಂಕೇತಿಕತೆಯೇ ದೀಪಾವಳಿ. ಬೆಳಕು ಎಂದರೆ ಜ್ಞಾನ, ಅರಿವು, ತಿಳಿವಳಿಕೆ.
 
ಯಾವುದರಿಂದ ನಾವು ಜೀವನವನ್ನು ನೋಡಬಲ್ಲೆವೋ, ನಮ್ಮನ್ನು ನಾವು ಕಾಣಬಲ್ಲೆವೋ, ನಮ್ಮ ಹಿತಾಹಿತಗಳನ್ನು ಕಂಡುಕೊಳ್ಳಬಲ್ಲೆವೋ – ಅವೆಲ್ಲವೂ ಜ್ಞಾನವೇ ಹೌದು; ಅವೆಲ್ಲವೂ ಬದುಕಿನ ಹಾದಿಯಲ್ಲಿ ಒದಗಿದ ಬೆಳಕೇ ಹೌದು. ಬೆಳಕನ್ನು ದೇವರಿಗೂ ಸಮೀಕರಿಸಲಾಗಿದೆ; ‘ಪರಂಜ್ಯೋತಿ’ ಎಂದು ಆರಾಧಿಸಲಾಗಿದೆ.
 
ಹೀಗೆ ನಮ್ಮ ಜೀವನಕ್ಕೂ ಬೆಳಕಿಗೂ ದೀಪಾವಳಿಗೂ ನೇರ ನಂಟಿದೆ. 
 
ದೀಪಾವಳಿ ಹಬ್ಬವು ಒಂದು ದಿನದ ಹಬ್ಬವಲ್ಲ; ನಾಲ್ಕೈದು ದಿನಗಳ ಕಾಲ ಹಬ್ಬಿಕೊಂಡಿರುವ ಪರ್ವವಿದು. ಈ ದಿನಗಳಲ್ಲಿ ನಡೆಸುವ ವಿವಿಧ ಕಲಾಪಗಳಿಗೆ ಅನುಗುಣವಾಗಿ ದೀಪಾವಳಿಯನ್ನು ಹಲವು ಹೆಸರುಗಳಿಂದ ಕರೆಯುವುದುಂಟು: ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ನರಕಚತುರ್ದಶೀ, ಬಲಿಪಾಡ್ಯಮೀ, ವೀರಪ್ರತಿಪದಾ, ಭಗಿನೀದ್ವತೀಯಾ, ಸೋದರಬಿದಿಗೆ – ಹೀಗೆ ಹಲವು ಹೆಸರುಗಳು ದೀಪಾವಳಿಗೆ.
 
ದೀಪವಾಳಿಯನ್ನು ಬೇರೆ ಬೇರೆ ಪ್ರಾಂತಗಳಲ್ಲಿ ಆಚರಿಸುವ ವಿಧಾನದಲ್ಲಿ ವ್ಯತ್ಯಾಸಗಳಿದ್ದರೂ ದೀಪೋತ್ಸವ, ದೀಪದ ಆರಾಧನೆ ಮಾತ್ರ ಎಲ್ಲೆಡೆ ಕಂಡುಬರುವ ಸಮಾನ ಆಚರಣೆಯಾಗಿದೆ.
 
ಮನೆ, ಮಠ, ನದೀತೀರಗಳು, ಊರಿನ ರಸ್ತೆಗಳಲ್ಲಿ ದೀಪಗಳನ್ನು ಬೆಳಗುವುದು ಬಹಳ ಹಿಂದಿನ ಕಾಲದಿಂದಲೂ ನಡೆದುಬಂದ ಆಚರಣೆಯಾಗಿದೆ.
 
ದೀಪಾವಳಿಯ ಆರಂಭವಾಗುವುದು ನೀರು ತುಂಬುವ ಹಬ್ಬದೊಂದಿಗೆ; ಇದು ನರಕಚತುರ್ದಶಿಯ ಹಿಂದಿನ ದಿನ. ಸ್ನಾನದ ಪಾತ್ರೆಗಳನ್ನೂ ನೀರನ್ನು ಕಾಯಿಸುವ ಹಂಡೆಯನ್ನೂ ಶುದ್ಧವಾಗಿ ತೊಳೆದು, ಬಳಿಕ ಹಂಡೆಗೆ ನೀರನ್ನು ತುಂಬಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು.  
 
ಅಂದು ಮನೆಯ ಹೊರಗೆ ದೀಪವನ್ನು ಬೆಳಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅಪಮೃತ್ಯವಿನಿಂದ ಪಾರಾಗುತ್ತೇವೆ ಎನ್ನುವುದು ನಂಬಿಕೆ. ಮರುದಿನ, ಅಂದರೆ ನರಕಚತುರ್ದಶಿಯಂದು ಬ್ರಾಹ್ಮಮುಹೂರ್ತದಲ್ಲಿಯೇ ಎದ್ದು ಅಭ್ಯಂಗಸ್ನಾನವನ್ನು ಮಾಡಬೇಕು.
 
ಈ ದಿನ ಬೆಳಗ್ಗೆ ಎಣ್ಣೆಯಲ್ಲಿ ಲಕ್ಷ್ಮಿಯೂ ನೀರಿನಲ್ಲಿ ಗಂಗೆಯೂ ನೆಲಸಿರುತ್ತಾರೆ; ಅವುಗಳನ್ನು ಬಳಸಿ ಸ್ನಾನ ಮಾಡುವವರು ಯಮಲೋಕದಿಂದ ಪಾರಾಗುತ್ತಾರೆ ಎಂದು ಪುರಾಣದ ಮಾತಿದೆ:
 
ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಶ್ಚತುರ್ದಶೀಂ l 
ಪ್ರಾತಃಕಾಲೇ ತು ಯಃ ಕುರ್ಯಾತ್‌ ಯಮಲೋಕಂ ನ ಪಶ್ಯತಿ ll
 
ಮರುದಿನ ಅಮಾವಾಸ್ಯೆ; ಅಂದು ಬೆಳಗ್ಗೆ ಎಣ್ಣೆಸ್ನಾನವನ್ನು ಮಾಡಿ ಲಕ್ಷ್ಮೀಪೂಜೆಯನ್ನು ಮಾಡಲಾಗುತ್ತದೆ. ಲಕ್ಷ್ಮಿ ಎಂದರೆ ನಮ್ಮ ಅಂತರಂಗದ ಮತ್ತು ಬಹಿರಂಗದ ಸಿರಿವಂತಿಕೆಗೆ ಸಂಕೇತ.
 
ಲಕ್ಷ್ಮೀ ಸದಾ ನಮ್ಮ ಜೊತೆಯಲ್ಲಿದ್ದು ಬದುಕು ಶ್ರೀಮಂತವಾಗಿರಲಿ ಎಂಬ ಆಶಯದೊಂದಿಗೆ ಲಕ್ಷ್ಮೀಪೂಜೆಯನ್ನು ನೆರವೇರಿಸಬೇಕು. ವ್ಯಾಪಾರಿಗಳು ಅಂಗಡಿಗಳಲ್ಲಿ ಲಕ್ಷ್ಮೀಪೂಜೆ ಮಾಡುತ್ತಾರೆ.
 
ಅಮಾವಾಸ್ಯೆಯ ಮರುದಿನವೇ ಬಲಿಪಾಡ್ಯಮಿ. ಅಂದು ಕೂಡ ಅಭ್ಯಂಗಸ್ನಾನವನ್ನು ಮಾಡಿ ಬಲೀಂದ್ರನನ್ನು ಪೂಜಿಸಲಾಗುತ್ತದೆ. ಬಲೀಂದ್ರನನ್ನು ಪ್ರತಿಷ್ಠಾಪಿಸಿ, ಅವನ ಪರಿವಾರದೊಂದಿಗೆ ಪೂಜಿಸಲಾಗುವುದು.
 
ಸೆಗಣಿಯಲ್ಲಿ ಕೋಟೆಯನ್ನು ನಿರ್ಮಿಸಿ, ಆ ಮೂಲಕ ಒಟ್ಟು ಬಲೀಂದ್ರನ ಸಾಮ್ರಾಜ್ಯವನ್ನೇ ಮತ್ತೆ ಸ್ಥಾಪಿಸಿ, ಅವನನ್ನು ಅರ್ಚಿಸುವ ಸಂಪ್ರದಾಯ ದೇಶದ ಕೆಲವು ಪ್ರಾಂತ್ಯಗಳಲ್ಲಿದೆ. ರಾತ್ರಿ ಹೂಗಳನ್ನು ಎರಚುತ್ತ ಬಲೀಂದ್ರನಿಗೆ ಜೈಕಾರ ಹಾಕಲಾಗುತ್ತದೆ.
 
ದೀಪಾವಳಿಯ ಎಲ್ಲ ದಿನಗಳ ಆಚರಣೆಯ ಹಿನ್ನೆಲೆಯಲ್ಲೂ ಪೌರಾಣಿಕ ಪ್ರಸಂಗಗಳ ತಾತ್ವಿಕತೆಯಿದೆ.  ‘ನರಕಚತುರ್ದಶಿ’ಯಲ್ಲಿ ನರಕ ಎನ್ನುವುದು ನಮ್ಮ ಬದುಕಿನ ಎಲ್ಲ ಕಷ್ಟಗಳ ಸಾಂಕೇತಿಕತೆಯನ್ನು ನೋಡಬಹುದು.
 
ಅಷ್ಟೇ ಅಲ್ಲದೆ, ಅದು ನರಕ ಎನ್ನುವ ರಾಕ್ಷಸನ್ನು ಶ್ರೀಕೃಷ್ಣನು ಸಂಹರಿಸಿದ ದಿನದ ಸಂಭ್ರಮಾಚರಣೆಯೂ ಹೌದು. ಸೆರೆಯಲ್ಲಿದ್ದ ಸಾವಿರಾರು ಸ್ತ್ರೀಯರನ್ನು ಶ್ರೀಕೃಷ್ಣ ಕಾಪಾಡಿ, ಜೀವನವನ್ನು ಕೊಟ್ಟ ದಿನವೇ ನರಕಚತುರ್ದಶೀ. ಅಂದು –
 
ನಮೋ ನರಕಸಂತ್ರಾಸರಕ್ಷಾಮಂಗಳಕಾರಿಣೇ l
ವಾಸುದೇವಾಯ ಶಾಂತಾಯ ಕೃಷ್ಣಾಯ ಪರಮಾತ್ಮನೇ ll – ಎಂದು ಶ್ರೀಕೃಷ್ಣನನ್ನು ಸ್ತುತಿಸಲಾಗುತ್ತದೆ.
 
ಇನ್ನು ‘ಅಮಾವಾಸ್ಯೆ’. ಕತ್ತಲೆಗೆ ಸಂಕೇತವೇ ಅಮಾವಾಸ್ಯೆ. ನಮಗೆ ಏನನ್ನೂ ನೋಡಲಾಗದ ಸ್ಥಿತಿಯೇ ‘ಕತ್ತಲು’. ನಮ್ಮ ಜೀವನವನ್ನೇ ನಾವು ನೋಡಲಾಗದ ಸ್ಥಿತಿಯನ್ನು ಒಡ್ಡುವುದು ಯಾವುದೆಂದರೆ ಅದು ಬಡತನವೇ ಹೌದು.
 
ಆದರೆ ಬಡತನ ಎಂದರೆ ಕೇವಲ ಆಸ್ತಿ–ಅಂತಸ್ತು, ಹಣ–ಒಡವೆಗಳು ಇಲ್ಲದಿರುವುದಷ್ಟೆ ಅಲ್ಲ; ವಿದ್ಯೆ, ಬುದ್ಧಿ, ಶಾಂತಿ, ಸಮಾಧಾನ, ತೃಪ್ತಿಗಳು ಇಲ್ಲದಿರುವುದೂ ಬಡತನವೇ ಸರಿ.
 
ಈ ಎಲ್ಲ ಬಡತನಗಳಿಂದಲೂ ನಮ್ಮ ಮುಕ್ತಗೊಳಿಸಬಲ್ಲ ಶಕ್ತಿಯೇ ‘ಶ್ರೀಲಕ್ಷ್ಮೀ.’ ಹೀಗೆ ಕತ್ತಲಿನಲ್ಲಿ ಬೆಳಕನ್ನು ಕಾಣಬೇಕೆಂಬ ಮನೋಧರ್ಮವೇ ಜೀವನವನ್ನು ಕಟ್ಟಿಕೊಳ್ಳುವುದರ ಮೊದಲ ಹಂತ.
 
ನಿರಂತರವಾಗಿ ನಮ್ಮ ಬದುಕನ್ನು ನೆಮ್ಮದಿ, ತೃಪ್ತಿ, ವಿವೇಕದ ಕಡೆಗೆ ನಡೆಸುವ ಸಂಕಲ್ಪಶಕ್ತಿಯನ್ನು ಕ್ರಿಯಾಶೀಲಗೊಳಿಸುವುದೇ ಅಮಾವಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುವುದರ ತಾತ್ಪರ್ಯ. 
 
‘ಬಲಿಪಾಡ್ಯಮಿ’ಯಂದು ಬಲಿ ಚಕ್ರವರ್ತಿಯನ್ನು ಪೂಜಿಸಲಾಗುತ್ತದೆ. ಏಳು ಚಿರಂಜೀವಿಗಳಲ್ಲಿ ಒಬ್ಬನಾಗಿ ಬಲೀಂದ್ರನನ್ನು ಎಣಿಸಲಾಗಿದೆ:
 
ಅಶ್ವತ್ಥಾಮಾ ಬಲಿರ್ವ್ಯಾಸಃ ಹನುಮಾಂಶ್ಚ ವಿಭೀಷಣಃ l
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ll
 
ವಿಷ್ಣು ವಾಮನಾವತಾರದಲ್ಲಿ ಬಲಿಯನ್ನು ಪಾತಾಳಕ್ಕೆ ಅಟ್ಟಿದ ಕಥೆ ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ಈ ಕಥೆಗೆ ಹಲವು ನೆಲೆಗಳ ಅರ್ಥಗಳಿವೆ. ನಮ್ಮ ಅಹಂಕಾರವನ್ನು ಮೆಟ್ಟಿ, ಜೀವನವನ್ನು ರೂಪಿಸಿಕೊಳ್ಳುವ ಆಶಯವೂ ಈ ಕಥೆಯಲ್ಲಿದೆ.
 
ಬದುಕು ಸರ್ವಕಾಲಕ್ಕೂ ಸಲ್ಲುವ ನೆಮ್ಮದಿಯ ನೆಲೆಯಾಗಲು, ಸೌಂದರ್ಯದ ಖನಿಯಾಗಲು ಅಹಂಕಾರತ್ಯಾಗ ಮುಖ್ಯ ಎಂಬ ಸಂದೇಶವನ್ನೂ ಈ ಕಥೆಯಲ್ಲಿ ಕಾಣಬಹುದಾಗಿದೆ.
 
ಹೀಗೆ ದೀಪಾವಳಿ ಎನ್ನುವುದು ನಮ್ಮ ಬದುಕನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ದೀಪಗಳ ಹಬ್ಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT