ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾಂತದ ‘ಭಕ್ತ’ರಿವರು, ಕೈಗೊಂಬೆಗಳು

Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬಡತನ, ರೋಗಗಳು, ನಿರುದ್ಯೋಗ, ರೈತರು- ವಿದ್ಯಾರ್ಥಿಗಳು- ಮಹಿಳೆಯರ ಆತ್ಮಹತ್ಯೆಯ ಪ್ರಮಾಣ ಹೆಚ್ಚುತ್ತಿರುವುದು ದೇಶದ ಶತ್ರುವಿನ ಸ್ಥಾನದಲ್ಲಿ ಇಲ್ಲ. ಪಾಕಿಸ್ತಾನ ಅಥವಾ ಚೀನಾ ಕೂಡ ಶತ್ರುಗಳಲ್ಲ. ಇಂದಿನ ಶತ್ರು ವಿಶ್ವವಿದ್ಯಾಲಯಗಳು, ವಿದ್ಯಾರ್ಥಿ ಸಮುದಾಯ. ಬಿಜೆಪಿಯು ಕೇಂದ್ರದಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಹಿಂದುತ್ವ ಪ್ರತಿಪಾದಿಸುವ ಗುಂಪುಗಳು ವಿದ್ಯಾರ್ಥಿ ಸಮುದಾಯ ಹಾಗೂ ವಿಶ್ವವಿದ್ಯಾಲಯಗಳನ್ನು ಗುರಿಯಾಗಿಸಿಕೊಂಡಿವೆ. ಅದರಲ್ಲೂ ಪ್ರಮುಖವಾಗಿ, ಹಿಂದುತ್ವ ಪರಿವಾರದ ಯುವ ಕಾಲಾಳುಗಳಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನವರು ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳನ್ನು ಹೆಚ್ಚು ಗುರಿಯಾಗಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಕಂಡುಕೊಳ್ಳುವುದು ಕಷ್ಟವಲ್ಲ.

ವಿಶ್ವವಿದ್ಯಾಲಯಗಳು ಮೊದಲಿನಿಂದಲೂ ಬಂಡಾಯದ ನೆಲಗಳು, ಅಕಾಡೆಮಿಕ್ ಸ್ವಾತಂತ್ರ್ಯದ ನೆಲೆಗಳು. ಅಂದರೆ ವಿಶ್ವವಿದ್ಯಾಲಯಗಳಲ್ಲಿ ಚಿಂತನೆ ಮತ್ತು ಕ್ರಿಯೆಗೆ ಸಂಬಂಧಿಸಿದಂತೆ ಸ್ವಾತಂತ್ರ್ಯ ಇದೆ. ಯುವ ಮನಸ್ಸುಗಳಿಗೆ ಬೌದ್ಧಿಕ ಬಲ ಸಿಗುವುದು ವಿಶ್ವವಿದ್ಯಾಲಯಗಳಲ್ಲಿ. ಪ್ರಶ್ನಿಸುವ, ವಿರೋಧಿಸುವ, ತಮ್ಮ ನಂಬಿಕೆಗಳನ್ನು ಪ್ರತಿಪಾದಿಸುವ ಗುಣ ಬೆಳೆಸಿಕೊಳ್ಳಲು ಇಲ್ಲಿ ಬೆಂಬಲ ಸಿಗುತ್ತದೆ. ಮುಕ್ತವಾಗಿ, ವೈಯಕ್ತಿಕ ನೆಲೆಯಲ್ಲಿ ಆಲೋಚಿಸಲು ವಿಶ್ವವಿದ್ಯಾಲಯಗಳು ಪ್ರೋತ್ಸಾಹ ನೀಡುತ್ತವೆ. ತಮ್ಮತನ ಕಂಡುಕೊಳ್ಳಲು ಇಂಬು ಕೊಡುತ್ತವೆ. ತರ್ಕಹೀನ ಸಂಗತಿಗಳನ್ನು ವಿರೋಧಿಸಲು, ಸಂಪ್ರದಾಯಗಳನ್ನು ಪ್ರಶ್ನಿಸಲು, ಪರ್ಯಾಯಗಳನ್ನು ಕಂಡುಕೊಳ್ಳಲು ಇಲ್ಲಿ ಅವಕಾಶ ಇದೆ. ಕ್ರಿಯಾಶೀಲತೆಗೆ ಇದು ಹೇಳಿ ಮಾಡಿಸಿದ ಜಾಗ. ಯುವ ವಿದ್ಯಾರ್ಥಿಗಳ ಕಲ್ಪನಾಶಕ್ತಿಗೆ ರೆಕ್ಕೆ ಬರುವುದು ಇಲ್ಲಿಯೆ. ಗಟ್ಟಿಯಾದ ಮನಸ್ಸಿನಿಂದ ಇನ್ನೊಂದು ಜಗತ್ತು ಪ್ರವೇಶಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಜಾಗ ಇದು. ಚಿಕ್ಕದಾಗಿ ಹೇಳಬೇಕೆಂದರೆ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಶಕ್ತಗೊಳಿಸುತ್ತವೆ. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಯು, ವಿಶ್ವವಿದ್ಯಾಲಯ ಪ್ರತಿಪಾದಿಸುವ ಮೌಲ್ಯಗಳ ಪ್ರತಿನಿಧಿಯಾಗಿ ಬೆಳೆದುನಿಲ್ಲುತ್ತಾನೆ.

ಸರ್ವಾಧಿಕಾರದಲ್ಲಿ ನಂಬಿಕೆ ಇರುವ ರಾಜಕೀಯ ಸಿದ್ಧಾಂತದ ಪಾಲಿಗೆ ಇಂಥ ವಿಶ್ವವಿದ್ಯಾಲಯಗಳು ಮತ್ತು ಅಲ್ಲಿನ ವಿದ್ಯಾರ್ಥಿಗಳು ವಿರೋಧಿಗಳಂತೆ ಕಾಣುತ್ತಾರೆ. ಹಾಗಾಗಿ ಬಿಜೆಪಿ ಸರ್ಕಾರ ಇವರನ್ನು ತನ್ನ ಮೊದಲ ಗುರಿಯಾಗಿಸಿಕೊಂಡಿತು. ಬಿಜೆಪಿಯ ಮೊದಲ ಗುರಿಯಾಗಿದ್ದು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯ. ಅದು ಅಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ಸಂಘವನ್ನು ಗುರಿಯಾಗಿಸಿಕೊಂಡಿತು, ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ನಂತರ ಬಿಜೆಪಿಯು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಅಲ್ಲಿನ ಎಡಪಂಥೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿತು. ವಿದ್ಯಾರ್ಥಿಗಳು ‘ದೇಶ ವಿರೋಧಿ’ ಘೋಷಣೆ ಕೂಗಿದ್ದಾರೆ ಎಂದು ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಯಿತು.

ಹರಿಯಾಣದ ಮಹೇಂದ್ರಗಡದ ಕೇಂದ್ರೀಯ ವಿಶ್ವವಿದ್ಯಾಲಯ ಕೂಡ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಯಿತು. ಪ್ರಭುತ್ವದ ಕೈಗೆ ಸಿಲುಕಿ, ಜಾತಿ ದೌರ್ಜನ್ಯಕ್ಕೆ ಗುರಿಯಾಗುವ, ಹೆಣ್ಣೆಂಬ ಕಾರಣಕ್ಕೆ ದೌರ್ಜನ್ಯಕ್ಕೆ ಈಡಾಗುವ ಆದಿವಾಸಿ ಮಹಿಳೆಯೊಬ್ಬಳ ಕತೆ ಇರುವ, ದಿವಂಗತ ಮಹಾಶ್ವೇತಾ ದೇವಿ ಅವರ ‘ದ್ರೌಪದಿ’ ನಾಟಕವನ್ನು ಪ್ರದರ್ಶಿಸದಂತೆ ಎಬಿವಿಪಿ ಪ್ರತಿಭಟನೆ ನಡೆಸಿತು. ತನ್ನ ಪ್ರತಿಭಟನೆಗೆ ನಿವೃತ್ತ ಯೋಧರು, ಸ್ಥಳೀಯ ರಾಜಕಾರಣಿಗಳ ಬೆಂಬಲವನ್ನೂ ಪಡೆದುಕೊಂಡಿತು. ಈ ನಾಟಕದಲ್ಲಿ ಸೈನಿಕರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ, ಹಾಗಾಗಿ ನಾಟಕ ಪ್ರದರ್ಶನಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆದರೆ ಇಲ್ಲಿ, ‘ದ್ರೌಪದಿ’ ನಾಟಕವು ಇಂಗ್ಲಿಷ್ ವಿಭಾಗದ ಪಠ್ಯಕ್ರಮದ ಒಂದು ಭಾಗ.

ಎಬಿವಿಪಿ ಮತ್ತು ಅದರ ರಕ್ಷಕ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ವೇಚ್ಛಾಚಾರದಲ್ಲಿ ತೊಡಗಿರುವುದನ್ನು ಜೆಎನ್‌ಯು ವಿದ್ಯಾರ್ಥಿ ನಜೀಬ್ ಪ್ರಕರಣದಲ್ಲಿ ಕಾಣಬಹುದು. ನಜೀಬ್ ತನ್ನ ವಿದ್ಯಾರ್ಥಿ ನಿಲಯದಲ್ಲಿ ಎಬಿವಿಪಿ ಸದಸ್ಯರ ಜೊತೆ ಜಗಳ ಮಾಡಿಕೊಂಡಿದ್ದ. ಅದಾದ ನಂತರ ಆತ ನಾಪತ್ತೆಯಾಗಿದ್ದಾನೆ. ಇದಾಗಿ ಎರಡು ವಾರ ಕಳೆದಿದ್ದರೂ ಪೊಲೀಸರು ಆತನನ್ನು ಪತ್ತೆ ಮಾಡಿಲ್ಲ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಮೊದಲು ಹೇಳಿದ ಘಟನೆಗಳಲ್ಲಿ ಇವರು ಲಗುಬಗೆಯಿಂದ ಕ್ರಮ ಕೈಗೊಂಡಿದ್ದರು. ವಿಚಾರಣಾ ಆಯೋಗ ರಚನೆ, ಕ್ರಮ ಕೈಗೊಳ್ಳಲು ಸಮಿತಿ ರಚನೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಬಿಜೆಪಿಯು ವಿಶ್ವವಿದ್ಯಾಲಯಗಳನ್ನು ಇನ್ನೊಂದು ಬಗೆಯಲ್ಲಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಹಿಂದುತ್ವವಾದಿ ಸರ್ಕಾರದ ಮಾತು ಕೇಳುವವರನ್ನು ಅಥವಾ ತನ್ನ ಸಿದ್ಧಾಂತದ ‘ಭಕ್ತ’ರನ್ನು ಸರ್ಕಾರ ವಿಶ್ವವಿದ್ಯಾಲಯಗಳ ಮುಖ್ಯಸ್ಥ ಸ್ಥಾನಕ್ಕೆ ನೇಮಿಸುತ್ತಿದೆ. ಚಿಂತಕರನ್ನು, ಅಕಾಡೆಮಿಕ್ ವಲಯದಲ್ಲಿ ಪ್ರತಿಷ್ಠೆ ಹೊಂದಿರುವವರನ್ನು ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನಕ್ಕೆ ಈಗ ನೇಮಿಸುತ್ತಿಲ್ಲ. ಸರ್ಕಾರ ಹೇಳಿದ ಯಾವುದೇ ಕೆಲಸ ಮಾಡಲು ಸಿದ್ಧರಿರುತ್ತಾರೆ ಎಂಬ ಕಾರಣಕ್ಕೆ ಅಷ್ಟೇನೂ ಉತ್ತಮರಲ್ಲದವರನ್ನು ಈ ಸ್ಥಾನಕ್ಕೆ ನೇಮಿಸಲಾಗುತ್ತಿದೆ. ಹೀಗೆ ನೇಮಕಗೊಂಡವರು ತಾವಾಗಿಯೇ ತಮ್ಮ ಪ್ರಭುಗಳ ಕೈಗೊಂಬೆಗಳಾಗುತ್ತಾರೆ, ಅಕ್ರಮಗಳನ್ನು ಎಸಗಲೂ ಸಿದ್ಧರಿರುತ್ತಾರೆ.

ಹೇಳಿದ ಕೆಲಸ ಮಾಡಿಕೊಂಡಿರುವಷ್ಟು ದಿನ ಇಂಥವರಿಗೆ ಸರ್ಕಾರದಿಂದ ಯಾವ ತೊಂದರೆಯೂ ಇರುವುದಿಲ್ಲ. ಮಾಡಿದ ಕೆಲಸಕ್ಕೆ ಬಹುಮಾನವೂ ಸಿಗುತ್ತದೆ. ಪ್ರಭುತ್ವದ ದಬ್ಬಾಳಿಕೆಯು ಈಗ ಪೂರ್ಣ ಪ್ರಮಾಣದಲ್ಲಿ, ಜನರ ಕಣ್ಣೆದುರೇ ನಡೆಯುತ್ತಿದೆ.  ಲೋಕಸಭೆಯಲ್ಲಿ ತಾನು ಹೊಂದಿರುವ ಬಹುಮತವು ಬಿಜೆಪಿಗೆ ಉತ್ತೇಜನ ನೀಡಿದೆ. ಸಂವಿಧಾನದಲ್ಲಿ ಹೇಳಿರುವ ಜಾತ್ಯತೀತತೆ, ಭ್ರಾತೃತ್ವ, ಎಲ್ಲರನ್ನೂ ಒಳಗೊಳ್ಳುವಿಕೆ, ಸಮಾನತೆಯನ್ನು ತಿರಸ್ಕರಿಸುವ ‘ಬಹುಸಂಖ್ಯಾತವಾದ’ದ ಮುನ್ನಡೆಯನ್ನು ಜನರ ಪ್ರತಿರೋಧದಿಂದ ಮಾತ್ರ ತಡೆಗಟ್ಟಬಹುದು. ಜನರಿಗೆ ಹತ್ತಿರವಾಗುವ ಚಳವಳಿಗಳನ್ನು ಕಟ್ಟುವ ಶಕ್ತಿಶಾಲಿ ಗುಂಪು ವಿದ್ಯಾರ್ಥಿ ಸಮೂಹ.

ವಿದ್ಯಾರ್ಥಿಗಳ ಶಕ್ತಿ ಏನು ಎಂಬುದು ಭಾರತದಲ್ಲಿನ, ಜಗತ್ತಿನ ಬೇರೆಡೆಗಳಲ್ಲಿನ ಕೆಲವು ಘಟನೆಗಳ ಮೂಲಕ ಗೊತ್ತಾಗಿದೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಯು ಭಾರತದಲ್ಲಿ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅಚ್ಚಳಿಯದ ಬದಲಾವಣೆಗಳನ್ನು ತಂದಿದೆ. ವಿದ್ಯಾರ್ಥಿ ಚಳವಳಿಗಳನ್ನು ಅಡಗಿಸಲು ಪ್ರಭುತ್ವಗಳು ಹಿಂಸಾ ಮಾರ್ಗ ಅನುಸರಿಸಿದರೂ, ಈ ಚಳವಳಿಗಳು ಜನರಲ್ಲಿ ಎಚ್ಚರ ಮೂಡಿಸಿ, ಸರ್ವಾಧಿಕಾರಿ ಹಾಗೂ ಪ್ರಜಾತಂತ್ರ ವಿರೋಧಿ ಸರ್ಕಾರಗಳು ಮಂಡಿಯೂರುವಂತೆ ಮಾಡಿವೆ.

ಇಂದಿನ ಯುವಕರು ನಾಳಿನ ಪ್ರಜೆಗಳು, ಅಂದರೆ ಅವರು ನಮ್ಮ ದೇಶದ ಭವಿಷ್ಯ ಎಂದು ನಾವು ಆಗಾಗ ಹೇಳುತ್ತಿರುತ್ತೇವೆ. ವಿವಿಧ ಧರ್ಮ, ಜಾತಿ, ಜನಾಂಗ, ಭಾಷೆಗಳ ಜನರ ನಡುವೆ ಭ್ರಾತೃತ್ವ, ಸಹಿಷ್ಣುತೆ ಬೆಳೆಸುವ ಪ್ರಜಾತಂತ್ರವಾಗಿ ಭಾರತ ಉಳಿಯುತ್ತದೆಯೇ ಇಲ್ಲವೇ ಎಂಬುದನ್ನು ಯುವಕರೇ ತೀರ್ಮಾನಿಸುತ್ತಾರೆ. ಸರ್ವಾಧಿಕಾರದ, ಬಹುಸಂಖ್ಯಾತವಾದದ ಹಿಂದುತ್ವದ ಆಳ್ವಿಕೆ ಅಲ್ಪಕಾಲದ್ದು ಎಂಬ ಭರವಸೆಯನ್ನು ವಿದ್ಯಾರ್ಥಿ ಸಮುದಾಯ ದೇಶಕ್ಕೆ ನೀಡುತ್ತಿದೆ.
*
ಜೆಎನ್‌ಯು ವಿದ್ಯಾರ್ಥಿಗಳು ‘ದೇಶ ವಿರೋಧಿ’ ಘೋಷಣೆ ಕೂಗಿದ್ದಾರೆ ಎಂದು ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಯಿತು. ವಿದ್ಯಾರ್ಥಿಗಳು ದೇಶ ವಿರೋಧಿ ಹೇಳಿಕೆ ಕೂಗಿದ್ದಾರೆ ಎಂಬುದಕ್ಕೆ ಇದ್ದ ಸಾಕ್ಷ್ಯಗಳು ತಿರುಚಿದವು ಎನ್ನುವುದು ನಂತರ ಗೊತ್ತಾಯಿತು. ಬೇರೆ ಕೆಲವು ವಿಶ್ವವಿದ್ಯಾಲಯಗಳಲ್ಲೂ ಇಂಥ ವಿದ್ಯಮಾನಗಳು ಸಂಭವಿಸಿವೆ.

ಕೋಲ್ಕತ್ತದ ಜಾಧವಪುರ ವಿಶ್ವವಿದ್ಯಾಲಯ, ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯಗಳಲ್ಲಿ ಎಬಿವಿಪಿಯ ಬೆಂಬಲದೊಂದಿಗೆ ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು, ವಿದ್ಯಾರ್ಥಿಗಳಲ್ಲಿದ್ದ ಪ್ರತಿಭಟನೆಯ ದನಿಯನ್ನು ಇಲ್ಲವಾಗಿಸಿದರು. ‘ನಮ್ಮನ್ನು ಒಪ್ಪಿಕೊಳ್ಳಿ ಅಥವಾ ಬಾಯಿ ಮುಚ್ಚಿಕೊಂಡಿರಿ’ ಎಂದು ವಿದ್ಯಾರ್ಥಿಗಳಲ್ಲಿ, ಬೋಧಕರಲ್ಲಿ ಭಯ ಬಿತ್ತಲು ಎಬಿವಿಪಿಯನ್ನು ಪ್ರಮುಖವಾಗಿ ಬಳಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT