ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾವನೆ’ಗಳಿಗೆ ಬಾಗಿದ ಬಾಲಿವುಡ್

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ, ಆತಂಕ?
Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದ ಜತೆಗೆ ಎಷ್ಟೇ ಭಿನ್ನಾಭಿಪ್ರಾಯ ಇರಲಿ, ಎರಡೂ ದೇಶಗಳ ಜನರ ನಡುವಣ ಸಂಪರ್ಕಕ್ಕೆ ಯಾವುದೇ ತೊಂದರೆ ತಟ್ಟಬಾರದು ಎಂಬ ನಿಲುವನ್ನು ಹಲವು ವರ್ಷಗಳಿಂದ ಭಾರತ ಕಾಪಾಡಿಕೊಂಡು ಬಂದಿದೆ. ಈ ಎಲ್ಲ ವರ್ಷಗಳಲ್ಲಿ ಪಾಕಿಸ್ತಾನದ ಸಂಗೀತಗಾರರು, ನಟರು ಅಥವಾ ಪರಿಣತ ಕ್ರಿಕೆಟ್ ವಿಶ್ಲೇಷಕರನ್ನು ಭಾರತ ಮುಕ್ತವಾಗಿ ಸ್ವಾಗತಿಸಿದೆ. ಆದರೆ ಈಗ ಎಲ್ಲವೂ ಬದಲಾಗಿದೆ. ಬಾಲಿವುಡ್ ಎಂದು ಕರೆಯಲಾಗುವ ಹಿಂದಿ ಸಿನಿಮಾ ಉದ್ಯಮ, ಜನರ ನಡುವಣ ಸಂಬಂಧವನ್ನು ಬಲವಾಗಿ ಪ್ರತಿಪಾದಿಸುವ ಒಂದು ಕಾಲ ಇತ್ತು. ಜನರು, ಅವರ ಆಹಾರ ಪದ್ಧತಿ, ಸಂಸ್ಕೃತಿ ಇತ್ಯಾದಿ ಬಗ್ಗೆ ರೀಮುಗಟ್ಟಲೆ ಬರೆಯಲಾಗಿದೆ. ಕನಿಷ್ಠ ಪಕ್ಷ ಈ ಹೊತ್ತಿಗಾದರೂ, ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾ ಎಲ್ಲವನ್ನೂ ಬದಲಾಯಿಸಿದೆ. ಇಡೀ ವಿವಾದ ಹಣ ಮತ್ತು ನೈತಿಕತೆ ಸದಾ ಜತೆಗೆ ಸಾಗುವುದಿಲ್ಲ ಎಂಬ ಮತ್ತೊಂದು ವಿಚಾರವನ್ನೂ ಸಾಬೀತುಪಡಿಸಿದೆ.

ಕರಣ್ ಜೋಹರ್ ಅವರ ನಿರ್ಮಾಣ ಮತ್ತು ನಿರ್ದೇಶನದ ಸಿನಿಮಾಕ್ಕೆ ಬೆದರಿಕೆ ಒಡ್ಡಲಾಯಿತು; ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‍ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರ ಕುಮ್ಮಕ್ಕಿನಲ್ಲಿ ಸಿನಿಮಾ ಬಿಡುಗಡೆಗೆ ತೊಡಕು ಉಂಟಾಯಿತು. ಈ ಬೆಳವಣಿಗೆ ಬಳಿಕ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಒಪ್ಪಂದದ ನಂತರ ಪರಿಸ್ಥಿತಿ ಬದಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಫಡಣವೀಸ್ ಜತೆ ಹಲವು ಸುತ್ತಿನ ಮಾತುಕತೆ ನಂತರ ಪಾಕಿಸ್ತಾನದ ನಟರಿಗೆ ಸಿನಿಮಾ ಉದ್ಯಮವು ಸಂಪೂರ್ಣ ನಿಷೇಧ ಹೇರಿದೆ.

ಎಂಎನ್‍ಎಸ್ ನಿಷೇಧ ಹೇರುವ ಹೊತ್ತಿಗೆ ಎರಡು ಸಿನಿಮಾಗಳ ಬಿಡುಗಡೆ ಮೇಲೆ ಅದು ಪರಿಣಾಮ ಬೀರುತ್ತಿತ್ತು. ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿರುವ  ‘ಏ ದಿಲ್ ಹೈ ಮುಷ್ಕಿಲ್’ ಮತ್ತು ಶಾರುಕ್ ಖಾನ್ ಅವರ, ಪಾಕಿಸ್ತಾನದ ನಟಿ ಮಹಿರಾ ಖಾನ್ ನಟಿಸಿರುವ ‘ರಯೀಸ್’ ಈ ಎರಡು ಸಿನಿಮಾಗಳು. ಶಾರುಕ್ ಸಿನಿಮಾವನ್ನು ಬರುವ ಜನವರಿ 26ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಪಾಕಿಸ್ತಾನದ ನಟರು, ಹಾಡುಗಾರರು, ಸಂಗೀತಗಾರರು ಮತ್ತು ತಂತ್ರಜ್ಞರಿಗೆ ಬಾಲಿವುಡ್‌ನಲ್ಲಿ ಅವಕಾಶ ನೀಡುವುದಿಲ್ಲ ಎಂದು ಮುಕೇಶ್ ಭಟ್ ಅಧ್ಯಕ್ಷತೆಯ ಭಾರತೀಯ ಸಿನಿಮಾ ಮತ್ತು ಟಿ.ವಿ. ಕಾರ್ಯಕ್ರಮಗಳ ನಿರ್ಮಾಪಕರ ಸಂಘ ನಿರ್ಧರಿಸಿದೆ. ಇದು ದೇಶದಲ್ಲಿನ ಸಿನಿಮಾ ನಿರ್ಮಾಪಕರ ಅತ್ಯಂತ ದೊಡ್ಡ, ಪ್ರಬಲ ಮತ್ತು ಪ್ರಭಾವಿ  ಸಂಘಟನೆ. ಪಾಕಿಸ್ತಾನದ ನಟರ ಜತೆ ಕೆಲಸ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಳ್ಳಲು ಸಂಘಟನೆ ಸಭೆ ಕರೆದಿದೆ. ನಿರ್ಣಯದ ಪ್ರತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಮುಖ್ಯಮಂತ್ರಿಗೆ ಕಳುಹಿಸುವುದಾಗಿ ಮುಕೇಶ್ ಭಟ್ ಹೇಳಿದ್ದಾರೆ. ದೇಶದ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂಧಾನ ನಡೆಸಿದ್ದಕ್ಕೆ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿದೆ. ಸಿನಿಮಾ ನಿರ್ಮಾಪಕರು ದಂಡದ ರೀತಿಯಲ್ಲಿ 5 ಕೋಟಿ ರೂಪಾಯಿಯನ್ನು ಸೈನಿಕ ಕಲ್ಯಾಣ ನಿಧಿಗೆ ನೀಡಬೇಕೆಂಬ ನಿರ್ಧಾರವನ್ನು ಕೆಲವರು ‘ದಲ್ಲಾಳಿ’ ಕೆಲಸ ಎಂದು ಜರೆದರೆ ಮತ್ತೆ ಕೆಲವರು ‘ಸುಲಿಗೆ’ ಎಂದಿದ್ದಾರೆ. ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ಮುಂಗಾಣದೆ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ನಂತರ ಸ್ಪಷ್ಟಪಡಿಸಲಾಗಿದೆ.

ವಿವಾದದಿಂದ ಸುಲಭದಲ್ಲಿ ಹೊರಗೆ ಬರುವ ದಾರಿಯೊಂದು ರಾಜ್ ಠಾಕ್ರೆ ಅವರಿಗೆ ಬೇಕಿತ್ತು. ಆದರೆ ಇದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿಯ ಅತ್ಯಂತ ಹಳೆಯ ಮಿತ್ರ ಪಕ್ಷ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಈ ಸಂಧಾನಕ್ಕೆ ವಿರೋಧ ವ್ಯಕ್ತಪಡಿಸಿದೆ. ‘ಎಂತಹ ದುರಂತ ಸ್ಥಿತಿ! ಸಿನಿಮಾ ಬಿಡುಗಡೆಗೆ ಯಾವ ಸಮಸ್ಯೆಯೂ ಆಗದು ಎಂದು ಗೃಹ ಸಚಿವರು ಭರವಸೆ ನೀಡಿದ ನಂತರ, ಮುಖ್ಯಮಂತ್ರಿ ಸಂಧಾನ ನಡೆಸಿ ಐದು ಕೋಟಿ ರೂಪಾಯಿಗೆ ದೇಶಪ್ರೇಮವನ್ನು ಖರೀದಿಸಿ ಕೊಡುತ್ತಾರೆ!’ ಎಂದು ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಶಬಾನಾ ಅಜ್ಮಿ ಟ್ವೀಟ್ ಮಾಡಿದ್ದಾರೆ. ‘ಸಂಘ ಪರಿವಾರ ಭಿನ್ನ ಧ್ವನಿಗಳಲ್ಲಿ ಮಾತನಾಡುತ್ತದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಸಿನಿಮಾ ಬಿಡುಗಡೆ ಸಾಧ್ಯವಾಗುವ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಬದಲಿಗೆ, ಎಂಎನ್‍ಎಸ್ ಜತೆ ದಲ್ಲಾಳಿಯಂತೆ ಕಾರ್ಯ ನಿರ್ವಹಿಸುತ್ತಾರೆ’ ಎಂದಿದ್ದಾರೆ.

ನಿರ್ಮಾಪಕರ ಸಂಘವು ಭಾರತೀಯ ಮನರಂಜನಾ ಉದ್ಯಮದಲ್ಲಿ ಮಹತ್ವದ ಹಲವು ಪಾತ್ರಗಳನ್ನು ವಹಿಸುತ್ತಿದೆ ಎಂಬುದನ್ನು ಇಲ್ಲಿ ಹೇಳಬೇಕು. ಹಲವು ಪ್ರಮುಖ ವಿಚಾರಗಳಲ್ಲಿ ಸರ್ಕಾರದ ಜತೆ ಮುಖ್ಯ ಸಂಧಾನಕಾರನ ಪಾತ್ರ ವಹಿಸುತ್ತದೆ, ಉದ್ಯಮಕ್ಕೆ ಸಂಬಂಧಿಸಿದ ಆಂತರಿಕ ಮತ್ತು ಬಾಹ್ಯ ವಿವಾದಗಳನ್ನು ಪರಿಹರಿಸುತ್ತದೆ, ವಿದೇಶಿ ನಿಯೋಗಗಳ ಜತೆ ಸಂವಹನ ನಡೆಸುತ್ತದೆ, ಸದಸ್ಯರಿಗಾಗಿ ಸಮಾವೇಶಗಳನ್ನು ನಡೆಸುತ್ತದೆ. ಇಂಥ ಬಲಶಾಲಿ ಸಂಘವು ರಾಜಕೀಯ ಒತ್ತಡಕ್ಕೆ ಮಣಿದಾಗ ಅದು ಸಿನಿಮಾ ಉದ್ಯಮಕ್ಕೆ ದೊಡ್ಡ ಆಶ್ಚರ್ಯ ಉಂಟು ಮಾಡಿತ್ತು. ಹಾಗೆ ನೋಡಿದರೆ, ಜೋಹರ್ ಬಹಳ ಸುಲಭದಲ್ಲೇ ಮಣಿದುಬಿಟ್ಟರು. ಅದು ಅವರ ವಿಡಿಯೊ ಹೇಳಿಕೆಯಲ್ಲಿ ಅತ್ಯಂತ ಸ್ಪಷ್ಟ. ಕಳೆದ ಡಿಸೆಂಬರ್‌ನಲ್ಲಿ ಈ ಸಿನಿಮಾ ಚಿತ್ರೀಕರಣದ ವೇಳೆ ಪರಿಸ್ಥಿತಿ ಪೂರ್ಣ ಭಿನ್ನವಾಗಿತ್ತು ಎಂಬುದರತ್ತ ಅವರು ಗಮನ ಸೆಳೆಯುತ್ತಾರೆ.

‘ನೆರೆಯ ದೇಶಗಳ ಜತೆಗೆ ಶಾಂತಿಯುತ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನವನ್ನು ನಮ್ಮ ದೇಶ ಮಾಡುತ್ತಿತ್ತು. ಆ ಪ್ರಯತ್ನಗಳ ಬಗ್ಗೆ ಆಗ ನನಗೆ ಗೌರವ ಇತ್ತು. ಆಗಿನ ಆ ಪ್ರಯತ್ನ ಮತ್ತು ಈಗಿನ ಭಾವನೆಗಳನ್ನು ನಾನು ಗೌರವಿಸುತ್ತೇನೆ. ನನ್ನಲ್ಲೂ ಇದೇ ಭಾವನೆಗಳು ಇರುವುದರಿಂದ ನನಗೆ ಅವು ಅರ್ಥವಾಗುತ್ತವೆ. ಈಗಿನ ಸನ್ನಿವೇಶದಲ್ಲಿ ನಾನು ನೆರೆ ದೇಶದ ಕಲಾವಿದರನ್ನು ಬಳಸಿಕೊಳ್ಳುವುದಿಲ್ಲ ಎಂದು ಹೇಳಲು ಬಯಸುತ್ತೇನೆ’ ಎಂದು ಜೋಹರ್ ಹೇಳಿದ್ದಾರೆ. ಆದರೆ ಎಂಎನ್‍ಎಸ್ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ವಿವಾದಗಳ ಸಂದರ್ಭದಲ್ಲಿ ಸುಲಭದ ಗುರಿಯಾಗಿರುವ ಸಿನಿಮಾ ಉದ್ಯಮ ಸುರಕ್ಷಿತವಾಗಿರಲು ಬಯಸಿತು,  ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮಹಾರಾಷ್ಟ್ರ ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಫಡಣವೀಸ್ ಭದ್ರತೆ ಭರವಸೆ ಕೊಟ್ಟ ನಂತರವೂ ಒತ್ತಡಕ್ಕೆ ಮಣಿಯಿತು.

ವಿವಾದದಿಂದಾದ ಒಂದು ಸಂಗತಿ ಎಂದರೆ, ಬಿಡುಗಡೆಗೆ ಮುನ್ನ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾಕ್ಕೆ ಭಾರಿ ಪ್ರಚಾರ ದೊರೆಯಿತು. ಐಶ್ವರ್ಯಾ ರೈ, ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಟಿ.ವಿ. ರಿಯಾಲಿಟಿ ಕಾರ್ಯಕ್ರಮಗಳ ಸೆಟ್‌ಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರದ ಕೆಲಸ ಮಾಡಿದ್ದಾರೆ. ಆದರೆ ಆ ಎಲ್ಲದಕ್ಕಿಂತ ಹೆಚ್ಚಿನ ಪರಿಣಾಮ ವಿವಾದದಿಂದಾಗಿ ಆಗಿದೆ. ಈ ವಿವಾದ ಇತರ ವಿವಾದಗಳ ಹಾಗಲ್ಲ. ಇದು ಉರಿ ದಾಳಿ ನಂತರ, ರಾಷ್ಟ್ರೀಯತೆಯ ಕಾರಣಕ್ಕೆ ಉಂಟಾದ ಸ್ವಲ್ಪ ಭಿನ್ನವಾದ ವಿವಾದ. ವಿಷಯ ಎಷ್ಟು ಭಾವನಾತ್ಮಕ ಮತ್ತು ಸೂಕ್ಷ್ಮ ಎಂದರೆ, ಹಲವು ಜನರು ಈ ಬಗ್ಗೆ ಮಾತೇ ಆಡಲಿಲ್ಲ ಮತ್ತು ಹಲವರು ತಮ್ಮ  ಹೇಳಿಕೆಗಳನ್ನು ಹಿಂದಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT