ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಗೆಲುವಿನ ಛಲದಲ್ಲಿ ದೋನಿ ಬಳಗ

ಐದನೇ ಏಕದಿನ ಪಂದ್ಯ; ಇತಿಹಾಸ ರಚಿಸುವ ತವಕದಲ್ಲಿ ಕಿವೀಸ್; ಮಳೆಯ ಆಟ ನಡೆದರೆ ಸರಣಿ ಸಮ
Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ನಾಯಕ  ಮಹೇಂದ್ರ ಸಿಂಗ್ ದೋನಿ ತವರೂರಿನ ಅಂಗಳದಲ್ಲಿ ಭರ್ಜರಿ ಜಯ ಸಾಧಿಸಿರುವ  ನ್ಯೂಜಿ ಲೆಂಡ್ ಇದೇ ಮೊದಲ ಬಾರಿಗೆ ಭಾರತ ದಲ್ಲಿ ಏಕದಿನ ಸರಣಿ ಗೆದ್ದು ಇತಿಹಾಸ ರಚಿಸುವ ಕನಸು ಕಾಣುತ್ತಿದೆ.

ಐದು ಏಕದಿನ ಪಂದ್ಯಗಳ ಸರಣಿ ಯಲ್ಲಿ 2–2ರಿಂದ ಸಮಬಲ ಸಾಧಿಸಿರುವ ಕಿವೀಸ್ ಹಿಂದೆಂದೂ ಭಾರತದಲ್ಲಿ ಆತಿಥೇಯ ತಂಡವನ್ನು ಸೋಲಿಸಿಲ್ಲ.  ಕಿವೀಸ್ ಎದುರು ಸರಣಿ ಗೆಲುವಿನ ದಾಖಲೆಯನ್ನು  ಉಳಿಸಿಕೊಳ್ಳುವ ಛಲದಲ್ಲಿ ದೋನಿ ಬಳಗವಿದೆ. ಆದರೆ, ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆಯೇ ನಿಜವಾಗಿ ಚಂಡಮಾರುತ ಮತ್ತು ಮಳೆಯ ಆಟ ನಡೆದರೆ ಸರಣಿ ಸಮವಾಗಲಿದೆ.

12 ವರ್ಷಗಳ ಇತಿಹಾಸವಿರುವ ವಿಶಾಖಪಟ್ಟಣದ ಡಾ.ವೈ.ಎಸ್. ರಾಜ ಶೇಖರ ರೆಡ್ಡಿ ಎಸಿಎ–ವಿಡಿಸಿಎ ಕ್ರೀಡಾಂ ಗಣದಲ್ಲಿ ಶನಿವಾರ ದಿನ ನಡೆಯಲಿರುವ ಏಕದಿನ ಪಂದ್ಯ ಈಗ ರೋಚಕತೆ ಕಣಜವಾಗಿದೆ. ಈ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಆಯೋಜನೆಯಾಗಿರುವ ಆರು ಪಂದ್ಯಗಳಲ್ಲಿ ಭಾರತ ನಾಲ್ಕರಲ್ಲಿ ಗೆದ್ದಿದೆ.

2013ರಲ್ಲಿ ವೆಸ್ಟ್ ಇಂಡೀಸ್ ಎದುರು ಸೋತಿತ್ತು. 2014ರಲ್ಲಿ  ಭಾರತ ಮತ್ತು ವಿಂಡೀಸ್ ನಡುವಣ ಪಂದ್ಯ ವನ್ನು  ಚಂಡಮಾರುತ ಬೀಸಿದ್ದರಿಂದ ರದ್ದುಗೊಳಿಸಲಾಗಿತ್ತು. ಅದೇ ವರ್ಷ ಇಲ್ಲಿ ಭಾರತ–ಕಿವೀಸ್ ನಡುವಣ ಟ್ವೆಂಟಿ–20 ಪಂದ್ಯವೂ ಮಳೆಗೆ ಆಹುತಿಯಾಗಿತ್ತು. ಆಂಧ್ರ ಕರಾವಳಿ ತೀರದ ಬಂದರು ನಗರಿಯಲ್ಲಿ  ನರಕ ಚತುರ್ದಶಿಯ ದಿನ ಯಾವ ರೀತಿಯ ಫಲಿತಾಂಶ ಸಿಗಲಿದೆ ಎನ್ನುವ ಕುತೂಹಲವೂ ಮೂಡಿದೆ.

ಟೆಸ್ಟ್ ಸರಣಿಯಲ್ಲಿ 0–3 ರಿಂದ ಸೋತಿದ್ದ ಕಿವೀಸ್ ತಂಡವು ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು ಭರ್ತಿ ಆತ್ಮವಿಶ್ವಾಸದಲ್ಲಿದೆ. ಇಷ್ಟು ದಿನ ವೈಫಲ್ಯ ಅನುಭವಿಸಿದ್ದ ಪ್ರವಾಸಿ ಬಳಗದ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ರಾಂಚಿಯಲ್ಲಿ ಲಯಕ್ಕೆ ಮರಳಿದ್ದರು. ಇನ್ನೊಬ್ಬ ಆರಂಭಿಕ ಟಾಮ್ ಲಥಾಮ್ ಮೊದಲಿನಿಂದಲೂ ಉತ್ತಮವಾಗಿ ಆಡುತ್ತಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಕೂಡ ಸರಣಿಯಲ್ಲಿ ಒಂದು ಶತಕ ಬಾರಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರಾಸ್ ಟೇಲರ್ ಕೂಡ ವೈಫಲ್ಯದಿಂದ ಹೊರಬಂದಿದ್ದಾರೆ.

ಜಾನ್ ವಾಟ್ಲಿಂಗ್, ಮಿಷೆಲ್ ಸ್ಯಾಂಟನರ್, ಜೇಮ್ಸ್ ನಿಶಾಮ್ ಮತ್ತು ಟಿಮ್ ಸೌಧಿ ಕೂಡ ಬ್ಯಾಟಿಂಗ್‌ನಲ್ಲಿ ಉತ್ತಮ ಕಾಣಿಕೆ ನೀಡುತ್ತಿರುವುದು ಬಲ ಹೆಚ್ಚಿಸಿದೆ. ಟ್ರೆಂಟ್ ಬೌಲ್ಟ್, ಟಿಮ್ ಸೌಧಿ, ನಿಶಾಮ್ ಬೌಲಿಂಗ್‌ನಲ್ಲಿ ಚುರುಕಾಗಿದ್ದಾರೆ. ಇಡೀ ತಂಡದ ಆಟಗಾರರು ಬಿಗಿ ಕ್ಷೇತ್ರರಕ್ಷಣೆಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವ ಅಮೋಘ ಸಾಮರ್ಥ್ಯ ಹೊಂದಿದ್ದಾರೆ. ರಾಂಚಿಯಲ್ಲಿ ಭಾರತಕ್ಕೆ 260 ರನ್‌ ಗುರಿ ನೀಡಿ 19 ರನ್‌ಗಳಿಂದ ಕಿವೀಸ್ ತಂಡವು ಗೆಲ್ಲಲು ಫೀಲ್ಡರ್‌ಗಳ ಕಾಣಿಕೆಯೂ ಮಹತ್ವ ದ್ದಾಗಿತ್ತು.  ಆದರೆ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಆತಿಥೇಯ ಬಳಗಕ್ಕೆ ಕೆಲವು ಸವಾಲುಗಳು ಕಾಡುತ್ತಿವೆ.

ಕೊಹ್ಲಿ ಮೇಲೆ ಅವಲಂಬನೆ: ಧರ್ಮಶಾಲಾದಲ್ಲಿ ಅಜೇಯ ಅರ್ಧಶತಕ ಮತ್ತು ಮೊಹಾಲಿಯಲ್ಲಿ ಶತಕ ಹೊಡೆದಿದ್ದ ವಿರಾಟ್ ಕೊಹ್ಲಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದರೆ, ಅವರು ದೆಹಲಿ ಮತ್ತು ರಾಂಚಿಯಲ್ಲಿ ಬೇಗನೆ ಪೆವಿಲಿಯನ್ ಸೇರಿದಾಗ ತಂಡ ಸೋತಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಸತತ ವೈಫಲ್ಯದಿಂದಾಗಿ ಕೊಹ್ಲಿ ಮೇಲಿನ ಅವಲಂಬನೆಯು ಹೆಚ್ಚಾಗಿದೆ. ವಿಶಾಖಪಟ್ಟಣದಲ್ಲಿ ಕೊಹ್ಲಿ ದಾಖಲೆಯು ಚೆನ್ನಾಗಿದೆ. 2013ರಲ್ಲಿ ಅವರು 99 ರನ್‌ಗಳಿಗೆ ಔಟಾಗಿದ್ದರು. 2010ರಲ್ಲಿ ಆಸ್ಟ್ರೇಲಿಯಾ ಎದುರು ಭರ್ಜರಿ ಶತಕ (118) ಬಾರಿಸಿದ್ದರು. ಇದರಿಂದಾಗಿ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಪಂದ್ಯದಲ್ಲಿ ರೋಹಿತ್ ಬದಲಿಗೆ ಮನದೀಪ್ ಸಿಂಗ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. 

ಅಜಿಂಕ್ಯ ರಹಾನೆ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಫಾರ್ಮ್‌ ಕಂಡು ಕೊಂಡಿದ್ದು ಆಶಾದಾಯಕ. ಮೊಹಾಲಿ ಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದಿದ್ದ ದೋನಿ ಮಿಂಚಿದ್ದರು. ಆದರೆ, ತಮ್ಮ ತವರಿನ ಅಂಗಳದಲ್ಲಿ 31 ಎಸೆತಗಳಲ್ಲಿ 11 ರನ್ ಗಳಿಸಿ ಔಟಾಗಿದ್ದರು. ಇದರಿಂದಾಗಿ ತಂಡವು ಹಿನ್ನಡೆ ಅನುಭವಿಸಿತ್ತು. ಕೇದಾರ್ ಜಾಧವ್ ಕೂಡ ವೈಫಲ್ಯ ಅನುಭವಿಸಿ ದ್ದರು. ಮನೀಶ್ ಪಾಂಡೆ ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರಲಿಲ್ಲ. ಸುರೇಶ್ ರೈನಾ ಅನುಪಸ್ಥಿತಿಯಲ್ಲಿ ಅವರು ತಂಡದಲ್ಲಿದ್ದಾರೆ. ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್, ಅಮಿತ್ ಮಿಶ್ರಾ ಅವರು ಕೆಳಕ್ರಮಾಂಕದಲ್ಲಿ ಒಂದಿಷ್ಟು ಹೋರಾಟ ತೋರಿದ್ದರು. ಆದರೆ ಅವರಲ್ಲಿ ಯಾರೂ ಫಿನಿಷರ್ ಪಟ್ಟಕ್ಕೆ ಏರಲು ಸಾಧ್ಯವಾಗಿಲ್ಲ.

ಬೌಲಿಂಗ್‌ನಲ್ಲಿಯೂ ಸಮಸ್ಯೆಗಳಿವೆ. ಉಮೇಶ್ ಯಾದವ್ ನಿರಂತರವಾಗಿ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠರಾಗಿದ್ದ ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿಲ್ಲ. ರಾಂಚಿಯಲ್ಲಿ ಅವಕಾಶ ಪಡೆದಿದ್ದ ಧವಳ್ ಕುಲಕರ್ಣಿ ತುಟ್ಟಿಯಾಗಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದ ಜಸ್‌ಪ್ರೀತ್ ಬೂಮ್ರಾ ಈ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಖಚಿತ. ಒಟ್ಟು ಹತ್ತು ವಿಕೆಟ್ ಕಬಳಿಸಿರುವ ಅಮಿತ್ ಮಿಶ್ರಾ, ಅಕ್ಷರ್ ಪಟೇಲ್ ಮತ್ತು ಕೇದಾರ್ ಜಾಧವ್ ಅವರು ಸ್ಪಿನ್ ಬೌಲಿಂಗ್ ವಿಭಾಗದ ಹೊಣೆಯನ್ನು ನಿಭಾಯಿಸಲಿದ್ದಾರೆ.

ಆದರೆ, ಕ್ಯಾಚ್‌ಗಳನ್ನು ಕೈಚೆಲ್ಲುವ ಚಾಳಿಯು ಭಾರತದ ಕೈಯಿಂದ ಜಯವನ್ನೂ ಕಸಿದುಕೊಂಡು ಹೋಗುತ್ತಿದೆ. ದೆಹಲಿಯಲ್ಲಿ ಎರಡು ಜೀವದಾನ ಪಡೆದಿದ್ದ ಕೇನ್ ವಿಲಿಯಮ್ಸನ್ ಶತಕ ಬಾರಿಸಿದ್ದರು. ರಾಂಚಿಯಲ್ಲಿ ಅಮಿತ್ ಮಿಶ್ರಾ ಅವರಿಂದ ಎರಡು ಬಾರಿ ಜೀವದಾನ ಗಳಿಸಿದ್ದ ಗಪ್ಟಿಲ್  ಸ್ಫೋಟಕ ಬ್ಯಾಟಿಂಗ್‌ನಿಂದ ದೋನಿ ಬಳಗಕ್ಕೆ ಸೋಲಿನ ಹಾದಿ ತೋರಿಸಿದ್ದರು. ಫೀಲ್ಡಿಂಗ್‌ನಲ್ಲಿ ಚುರುಕುತನ ಹೆಚ್ಚಿದರೆ ಮಾತ್ರ ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಿದೆ.  ವಿಶಾಖಪಟ್ಟಣದ ಪಿಚ್ ಈ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಸ್ನೇಹಿಯಾಗಿತ್ತು.  ಈ ಬಾರಿಯೂ ಅದೇ ರೀತಿಯ ಪಿಚ್ ಇರುವ ಸಾಧ್ಯತೆ ಹೆಚ್ಚಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT