ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಚನಾ ಹೊಳಪು...

ಟೇಬಲ್‌ ಟೆನಿಸ್‌
Last Updated 30 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಟೇಬಲ್‌ ಟೆನಿಸ್‌ ಲೋಕದಲ್ಲಿ ‘ಪ್ರಿನ್ಸಸ್‌ ಆಫ್‌ ದಿ ಪ್ಯಾಡಲ್‌’ ಎಂದೇ ಪರಿಚಿತರಾಗಿರುವ ಅರ್ಚನಾ ಗಿರೀಶ್‌ ಕಾಮತ್‌ ಈ ಕ್ರೀಡೆಯಲ್ಲಿ ಹಲವು ಮೊದಲುಗಳನ್ನು ನಿರ್ಮಿಸಿದ್ದಾರೆ.

ಒಂಬತ್ತನೇ ವಯಸ್ಸಿನಲ್ಲಿ ಟೇಬಲ್‌ ಟೆನಿಸ್‌ ರಂಗಕ್ಕೆ ಅಡಿ ಇಟ್ಟ ಅರ್ಚನಾ ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ಸತತ ಪರಿಶ್ರಮ, ಶ್ರದ್ಧೆ ಮತ್ತು ಅರ್ಪಣಾ ಭಾವದಿಂದ ಈ ಆಟದಲ್ಲಿ ನೈಪುಣ್ಯ ಸಾಧಿಸಿರುವ  ಅವರು ಬೆಂಗಳೂರಿನಿಂದ ವಿಶ್ವದ ಎತ್ತರಕ್ಕೆ ಬೆಳೆದು ನಿಂತಿದ್ದಾರೆ.

ತಮ್ಮ ಮೆಚ್ಚಿನ ಟಾಪ್‌ ಸ್ಪಿನ್‌ ಹೊಡೆತದ ಮೂಲಕ ಎದುರಾಳಿಗಳ ಸದ್ದಡಗಿಸಬಲ್ಲ ಸಾಮರ್ಥ್ಯ ಹೊಂದಿರುವ ಅರ್ಚನಾ ಟೇಬಲ್‌ ಟೆನಿಸ್‌ನ ಚರಿತ್ರೆಯಲ್ಲಿ ಹೊಸ ಅಧ್ಯಾಯಗಳನ್ನು ಬರೆದಿದ್ದಾರೆ.

2011ರಲ್ಲಿ 12 ಮತ್ತು 18 ವರ್ಷದೊಳಗಿನವರ ರಾಜ್ಯ ರ್‍ಯಾಂಕಿಂಗ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದ ಅವರು ಮರು ವರ್ಷವೇ ರಾಜ್ಯ ಸಬ್‌ ಜೂನಿಯರ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟಕ್ಕೇರಿದ ಸಾಧನೆ ಮಾಡಿದ್ದರು.

13ನೇ ವಯಸ್ಸಿನಲ್ಲೇ 15ವರ್ಷ ದೊಳಗಿನವರ ಸಬ್‌ ಜೂನಿಯರ್‌, 18 ವರ್ಷದೊಳಗಿನವರ ಜೂನಿಯರ್‌, 21 ವರ್ಷದೊಳಗಿನವರ ಯೂತ್‌ ಬಾಲಕಿಯರು ಹಾಗೂ ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದ ಅರ್ಚನಾ ಈ ನಾಲ್ಕೂ ವಿಭಾಗಗಳಲ್ಲೂ ವರ್ಷಾಂತ್ಯದವರೆಗೂ (2013) ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಂಡು ಹೊಸ ಭಾಷ್ಯ ಬರೆದಿದ್ದರು. ಕರ್ನಾಟಕದ ಮಟ್ಟಿಗೆ  ಈ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.

2013 ಅರ್ಚನಾ ಅವರ ಕ್ರೀಡಾ ಬದುಕಿಗೆ ಹೊಸ ತಿರುವು ನೀಡಿತು. ಆ ವರ್ಷ ಅವರು ವಿವಿಧ ವಯೋಮಾನದ ಟೂರ್ನಿಗಳಲ್ಲಿ 30 ಪ್ರಶಸ್ತಿ ಎತ್ತಿಹಿಡಿದರು. ಅಷ್ಟೇ ಅಲ್ಲದೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿ ಟೇಬಲ್‌ ಟೆನಿಸ್‌ ಪಂಡಿತರ ಹುಬ್ಬೇರುವಂತೆ ಮಾಡಿದ್ದರು.

ಆ ನಂತರವೂ ಆಟದಲ್ಲಿ ಸ್ಥಿರತೆ ಕಾಯ್ದುಕೊಂಡು  ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ಅವರು ಐಟಿಟಿಎಫ್‌ ವಿಶ್ವ ಜೂನಿಯರ್‌ ಸರ್ಕ್ಯೂಟ್‌ ಫೈನಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

*ಹೋದ ವಾರ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಟೂರ್ನಿಯಲ್ಲಿ ಪ್ರಶಸ್ತಿ ಡಬಲ್‌ ಸಾಧನೆ ಮಾಡಿದ್ದೀರಿ. ಹೇಗನಿಸುತ್ತಿದೆ?
ತುಂಬಾ ಖುಷಿಯಾಗುತ್ತಿದೆ. ವಿಶಾಖಪಟ್ಟಣದಲ್ಲಿ  ಟೂರ್ನಿ ನಡೆದಿತ್ತು. ಟೂರ್ನಿಯಲ್ಲಿ  ಭಾಗವಹಿಸಿದ್ದವರೆಲ್ಲಾ ಬಲಿಷ್ಠರಾಗಿದ್ದರು. ಅವರ ಸವಾಲು ಮೀರಿ ನಿಂತು  ಯೂತ್‌  ಮತ್ತು ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. 2014ರಲ್ಲೂ ನಾನು ಇದೇ ರೀತಿಯ ಸಾಧನೆ ಮಾಡಿದ್ದೆ. ಆಗ್ರಾದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ ಯೂತ್‌ ಮತ್ತು 15 ವರ್ಷದೊಳಗಿನವರ ಸಬ್‌ ಜೂನಿಯರ್‌ ಸಿಂಗಲ್ಸ್‌ನಲ್ಲಿ ಟ್ರೋಫಿ ಎತ್ತಿಹಿಡಿದಿದ್ದೆ.

*ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ನೀವು ಸತತವಾಗಿ ಪ್ರಶಸ್ತಿ ಗೆಲ್ಲುತ್ತಿದ್ದೀರಿ. ನಿಮ್ಮ ಯಶಸ್ಸಿನ ಗುಟ್ಟೇನು?
ಪಂದ್ಯದ ದಿನ  ಶ್ರೇಷ್ಠ ಸಾಮರ್ಥ್ಯ ತೋರಿದರೆ ಗೆಲುವು ತಾನಾಗಿಯೇ ಒಲಿಯುತ್ತೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಹೀಗಾಗಿ ಪಂದ್ಯದ ವೇಳೆ ಎದುರಾಳಿ ಯಾರು ಆಕೆಯ ದಾಖಲೆ ಏನು ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದೆ ದಿಟ್ಟ ಆಟ ಆಡುವತ್ತ ಚಿತ್ತ ಹರಿಸುತ್ತೇನೆ. ಇದರ ಜೊತೆಯಲ್ಲೇ ಫಿಟ್‌ನೆಸ್‌ ಕಾಪಾಡಿಕೊಳ್ಳುವತ್ತಲೂ ಗಮನ ನೀಡುತ್ತೇನೆ.

*ಯೂತ್‌ ಬಾಲಕಿಯರ ಹಾಗೂ ಮಹಿಳಾ ವಿಭಾಗದಲ್ಲಿ ನಿಮಗಿಂತಲೂ ವಯಸ್ಸಿನಲ್ಲಿ ದೊಡ್ಡವರ ಜೊತೆ ಆಡುತ್ತೀರಿ. ಎದುರಾಳಿಗಳು ಸಾಕಷ್ಟು ಅನುಭವಿಗಳೂ ಆಗಿದ್ದಾಗ ನಿಮ್ಮ ಮೇಲೆ ಹೆಚ್ಚು ಒತ್ತಡ ಇರುವುದಿಲ್ಲವೇ?
ಖಂಡಿತವಾಗಿಯೂ ಇಲ್ಲ. ನಾನು ಪಂದ್ಯದಲ್ಲಿ ಸೋತರೆ ಕಳೆದುಕೊಳ್ಳು ವಂತಹದ್ದು ಏನು ಇರುವುದಿಲ್ಲ. ಆದರೆ ನನ್ನ ಎದುರಾಳಿಗಳ ಮನಸ್ಥಿತಿ ಹಾಗಿರುವುದಿಲ್ಲ. ಅವರು ತಮಗಿಂತಲೂ ಚಿಕ್ಕವಳ ವಿರುದ್ಧ ಆಡುವುದರಿಂದ ಅವರ ಮೇಲೆ ಅಧಿಕ ಒತ್ತಡ ಇರುತ್ತದೆ. ನಾನಂತೂ ಯಾವಾಗಲೂ ನಿರಾಳವಾಗಿಯೇ ಆಡುತ್ತೇನೆ.

* ಕೆಡೆಟ್‌, ಯೂತ್‌, ಜೂನಿಯರ್‌, ಮಹಿಳೆಯರು ಹೀಗೆ ಎಲ್ಲಾ ವಿಭಾಗಗಳಲ್ಲೂ ಆಡುತ್ತೀರಿ. ನಾಲ್ಕು ವಿಭಾಗಗಳಲ್ಲಿ ಆಡುವುದು ಕಷ್ಟ ಅನಿಸುವುದಿಲ್ಲವೇ?.
ಕಷ್ಟ ಅಂದುಕೊಂಡರೆ ಏನನ್ನೂ ಸಾಧಿಸಲು ಆಗುವುದಿಲ್ಲ. ಇಷ್ಟ ಪಟ್ಟು ಆಡಿದರೆ ಬೆಟ್ಟದಂತಹ ಸವಾಲನ್ನು ಸರಾಗವಾಗಿ ಮೀರಿ ನಿಲ್ಲಬಹುದು. ನಾನು ಮೊದಲಿನಿಂದಲೂ ಈ ತತ್ವ ಪಾಲಿಸಿಕೊಂಡು ಬರುತ್ತಿದ್ದೇನೆ.

*ಡಬಲ್ಸ್‌, ಮಿಶ್ರ ಡಬಲ್ಸ್‌ ಮತ್ತು ತಂಡ ವಿಭಾಗಗಳಲ್ಲಿ ಆಡುವಾಗ ಸಹ ಆಟಗಾರರ ಜೊತೆ ಹೊಂದಿಕೊಳ್ಳುವುದು ಕಷ್ಟವಾಗುವುದಿಲ್ಲವೇ?
ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡುವಾಗ ಸ್ವಲ್ಪ ಕಷ್ಟವಾಗುತ್ತದೆ.  ಏಕೆಂದರೆ ಟೂರ್ನಿ ಆರಂಭವಾಗಲು ಒಂದು ವಾರ ಮುಂಚೆ ನಮ್ಮ ಸಹ ಆಟಗಾರ್ತಿ ಅಥವಾ ಆಟಗಾರ ಯಾರು ಎಂಬುದು ಗೊತ್ತಾಗುತ್ತದೆ. ಈ ಅವಧಿಯಲ್ಲಿ ಕೆಲವೊಮ್ಮೆ ಅವರೊಂದಿಗೆ ಅಭ್ಯಾಸ ನಡೆಸುವುದಕ್ಕೂ ಆಗುವುದಿಲ್ಲ. ಈವರೆಗೆ ನನಗೆ ಸಿಕ್ಕವರೆಲ್ಲಾ ಒಳ್ಳೆಯ ಆಟಗಾರರೇ ಆಗಿದ್ದರು. ಹೀಗಾಗಿ ಇದು ಅಂತಹ ದೊಡ್ಡ ಸಮಸ್ಯೆ ಅಂತಾ ಅನಿಸಿಲ್ಲ.

*ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ವಿದೇಶಿ ಆಟಗಾರರ ಜೊತೆ ಆಡುವಾಗ ಭಾಷೆಯ ಸಮಸ್ಯೆ ಎದುರಾಗುವುದಿಲ್ಲವೇ?
ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡುವ ಬಹುತೇಕ ಆಟಗಾರರು ತಕ್ಕಮಟ್ಟಿಗೆ ಇಂಗ್ಲಿಷ್‌  ಮಾತನಾಡುತ್ತಾರೆ. ಹೀಗಾಗಿ ಸಂವಹನದ ತೊಂದರೆಯಾಗುವುದಿಲ್ಲ.

*ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡುವಾಗ ಯಾವ ರಾಷ್ಟ್ರದ ಸ್ಪರ್ಧಿಗಳಿಂದ ನಿಮಗೆ ಕಠಿಣ ಸವಾಲು ಎದುರಾಗುತ್ತದೆ?
ಚೀನಾ, ಜಪಾನ್‌, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ದೇಶಗಳ ಆಟಗಾರ್ತಿಯರು ತುಂಬಾ ಬಲಿಷ್ಠರಾಗಿರುತ್ತಾರೆ. ಅವರ ಸವಾಲು ಮೀರಿ ನಿಲ್ಲುವುದು ಬಹಳ ಕಷ್ಟ.

*ಭಾರತದಲ್ಲಿ ಟೇಬಲ್‌ ಟೆನಿಸ್‌ ಬೆಳವಣಿಗೆಗೆ ಯಾವ ಬಗೆಯ ವಾತಾವರಣ ಇದೆ?
ವಿದೇಶಗಳಿಗೆ ಹೋಲಿಸಿದರೆ ಈ ಕ್ರೀಡೆಗೆ ನಮ್ಮಲ್ಲಿ ಸಿಗುತ್ತಿರುವ ಬೆಂಬಲ ತುಸು ಕಡಿಮೆಯೇ. ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಇನ್ನಷ್ಟು ಅತ್ಯಾಧುನಿಕ ಸೌಕರ್ಯಗಳು ಸಿಕ್ಕರೆ ನಾವು ಕೂಡಾ ಈ ಕ್ರೀಡೆಯಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಬಹುದು.

*ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ?
ಸಾಕಷ್ಟು ಮಂದಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೀಗಾಗಿ ಪ್ರತಿ ಟೂರ್ನಿಯ ಆರಂಭಿಕ ಸುತ್ತಿನಿಂದಲೇ ಪೈಪೋಟಿ ಎದುರಾಗುತ್ತಿದೆ. ಇದು ಉತ್ತಮ ಬೆಳವಣಿಗೆ.

*ನಿಮ್ಮ ಇಷ್ಟದ ಹೊಡೆತ ಯಾವುದು?
ಫೋರ್‌ಹ್ಯಾಂಡ್‌ ಟಾಪ್‌ ಸ್ಪಿನ್‌ ಹೊಡೆತ ನನ್ನ ಅಚ್ಚುಮೆಚ್ಚು. ಪಂದ್ಯದ ವೇಳೆ ಹೆಚ್ಚಾಗಿ ಈ ಹೊಡೆತವನ್ನು ಪ್ರಯೋಗಿಸುತ್ತೇನೆ. ಇದರಿಂದ ಎದುರಾಳಿಗಳ ಮೇಲೆ ಒತ್ತಡ ಹೇರಲು ಸುಲಭವಾಗುತ್ತದೆ.

*ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಟಿ.ಟಿ. ಆಟಗಾರರ ಸಾಮರ್ಥ್ಯ ಹೇಳಿಕೊಳ್ಳುವಂತಿರಲಿಲ್ಲವಲ್ಲ?
ಒಲಿಂಪಿಕ್ಸ್‌ನಂತಹ ಮಹಾಕೂಟದಲ್ಲಿ ಪದಕ ಗೆಲ್ಲಬೇಕೆಂಬ ಹೆಬ್ಬಯಕೆ ಪ್ರತಿಯೊಬ್ಬ ಕ್ರೀಡಾಪಟುವಿನಲ್ಲೂ ಇರುತ್ತದೆ. ಅದಕ್ಕಾಗಿ ಅವರು ವರ್ಷಗಳ ಮುಂಚಿನಿಂದಲೇ ಸಿದ್ಧತೆ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ಯಾರಾದರೂ ಉದ್ದೇಶಪೂರ್ವಕವಾಗಿಯೇ ಸೋಲುತ್ತಾರೆಯೇ.  ಕೆಲವೊಮ್ಮೆ ಆಯಾ ರಾಷ್ಟ್ರದ ಪರಿಸ್ಥಿತಿಗೆ ಬೇಗನೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಅದು ಅವರ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

*ಅಪ್ಪ– ಅಮ್ಮನ ಸಹಕಾರದ ಬಗ್ಗೆ ಹೇಳಿ?
ನಾನು ಇವತ್ತು ಈ ಸ್ಥಾನದಲ್ಲಿದ್ದೇನೆ ಎಂದರೆ ಅದಕ್ಕೆ ಅಪ್ಪ ಅಮ್ಮನೇ ಕಾರಣ. ಅವರು ಪ್ರತಿ ಹಂತದಲ್ಲೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ನಾನು ಎಲ್ಲೇ ಹೋದರೂ ಅಮ್ಮ ಜೊತೆಗೆ ಇರುತ್ತಾರೆ. ಪ್ರತಿ ಸಂದರ್ಭದಲ್ಲೂ ಅವರು ನನ್ನಲ್ಲಿ ಆತ್ಮ ಸ್ಥೈರ್ಯ ತುಂಬುತ್ತಾರೆ. ಅವರ ಪ್ರೀತಿಯೇ ನನಗೆ ಸ್ಫೂರ್ತಿ.

*ನಿಮ್ಮ ನೆಚ್ಚಿನ ಕ್ರೀಡಾಪಟುಗಳು ಯಾರು?
ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ಎಂದರೆ ನನಗೆ ಬಲು ಪ್ರೀತಿ. ಅವರು ಅಂಗಳದಲ್ಲಿ ಮಾತ್ರವಲ್ಲ ಅಂಗಳದ ಹೊರಗೂ ತುಂಬಾ ಸರಳವಾಗಿ ಜನರ ನಡುವೆ ಬೆರೆಯುತ್ತಾರೆ. ಅವರ ಆ ಗುಣ ನನಗೆ ತುಂಬಾ ಇಷ್ಟ.

*ಮುಂದಿನ ಯೋಜನೆ ಬಗ್ಗೆ ಹೇಳಿ?
ಸದ್ಯ ತರಬೇತಿಗಾಗಿ ಜರ್ಮನಿಗೆ ಹೋಗುತ್ತಿದ್ದೇನೆ.  ಅಲ್ಲಿ ನವೆಂಬರ್‌ 30ರಿಂದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ ನಡೆಯಲಿದ್ದು ಅದರಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಇದೆ. ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದೇನೆ.

ಅರ್ಚನಾ ಪ್ರಸ್ತುತ ರಾಷ್ಟ್ರೀಯ ರ‍್ಯಾಂಕಿಂಗ್‌
*21 ವರ್ಷದೊಳಗಿನ ಯೂತ್‌ ಬಾಲಕಿಯರ ವಿಭಾಗ: 1
*18 ವರ್ಷದೊಳಗಿನ ಜೂನಿಯರ್‌ ಬಾಲಕಿಯರ ವಿಭಾಗ: 2
*ಐಟಿಟಿಎಫ್‌ ವಿಶ್ವ ರ‍್ಯಾಂಕಿಂಗ್‌
*15 ವರ್ಷದೊಳಗಿನವರ ವಿಭಾಗ: 12 (2015)
*18 ವರ್ಷದೊಳಗಿನವರ ವಿಭಾಗ: 47
*21 ವರ್ಷದೊಳಗಿನ ವಿಭಾಗ: 100
*ಮಹಿಳಾ ವಿಭಾಗ: 254

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT