ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶವಾದಿ ಮುಲಾಯಂ ಮತ್ತು ಸಮಾಜವಾದ

ಅಧಿಕಾರ ರಾಜಕಾರಣದ ದೀರ್ಘದಾರಿಯಲ್ಲಿ ಲೋಹಿಯಾ ಶಿಷ್ಯ ಮುಲಾಯಂ ಕಳೆದುಹೋಗಿ ಬಹು ಕಾಲವಾಯಿತು
Last Updated 31 ಅಕ್ಟೋಬರ್ 2016, 17:03 IST
ಅಕ್ಷರ ಗಾತ್ರ
ದಿಲ್ಲಿಯ  ಅಧಿಕಾರ ಗದ್ದುಗೆ ನಿರ್ಣಾಯಕ ಹಾವುಗಳು ಮತ್ತು ಏಣಿಗಳು ಕಾಲ ಕಾಲಕ್ಕೆ ರೂಪ ತಳೆಯುವುದು ಈ ಪ್ರದೇಶದಲ್ಲೇ. ಕಮಂಡಲ, ಮಂಡಲ ಹಿಡಿಯುವವರು ಉತ್ತರ ಪ್ರದೇಶದ ಹಾದಿಯನ್ನು ತುಳಿಯದೆ ವಿಧಿಯಿಲ್ಲ. ಅಧಿಕಾರದ ಹಾವು-ಏಣಿಯಾಟದ ಸೋಲು ಗೆಲುವುಗಳನ್ನು ನಿರ್ಧರಿಸುವ ಹಾಗೂ ದಲಿತ ಅಸ್ಮಿತೆಯ ರಾಜಕಾರಣ ಸ್ಫುಟಗೊಂಡು ಪಸರಿಸಿದ್ದು ಇಲ್ಲಿಂದಲೇ.
 
ಎಂಬತ್ತು ಲೋಕಸಭಾ ಕ್ಷೇತ್ರಗಳ ಭಾರೀ ದೊಡ್ಡ ರಾಜ್ಯ ಉತ್ತರ ಪ್ರದೇಶ. ಈ ಪ್ರದೇಶವನ್ನು ಗೆದ್ದವರು ದೇಶವನ್ನು ಆಳುತ್ತಾರೆ ಎಂಬ ಪ್ರತೀತಿ ನಿರಾಧಾರವೇನೂ ಅಲ್ಲ. ಬ್ರಾಹ್ಮಣರು, ದಲಿತರು ಹಾಗೂ ಮುಸ್ಲಿಂ ಮತದಾರರನ್ನು ಒಲಿಸಿಕೊಂಡಿದ್ದ ಕಾಂಗ್ರೆಸ್ ತನಗೆ ಸಮಾನರಾರಿಹರು ಎಂದು 1989ರ ತನಕ ಮೆರೆದಿತ್ತು.
 
ರೈತಾಪಿ ಹಿನ್ನೆಲೆಯಿಂದ ಬಂದ ಮುಲಾಯಂ ಬೇರುಮಟ್ಟದ ರಾಜಕಾರಣದಿಂದ ರಾಜಕಾರಣದ ಏಣಿಯ ಮೇಲ್ತುದಿ ಮುಟ್ಟಿದವರು. 1967ರಲ್ಲಿ ಮೊದಲ ಸಲ ಶಾಸಕನಾಗಿ ಆಯ್ಕೆ ಹೊಂದಿದ ನಂತರ 40 ವರ್ಷಗಳಿಗೂ ಹೆಚ್ಚಿನ ಕಾಲ ಸಂಸದ, ಮುಖ್ಯಮಂತ್ರಿ, ಕೇಂದ್ರ ಮಂತ್ರಿ, ಪಕ್ಷದ ಮುಖ್ಯಸ್ಥ, ಹನ್ನೊಂದು ಮಂದಿ ಕುಟುಂಬದ ಪಿತಾಮಹ. ಉತ್ತರ ಪ್ರದೇಶದಲ್ಲಿ ಮುಲಾಯಂ ಕಟ್ಟಿ ನಿಲ್ಲಿಸಿರುವ ಅನೈತಿಕ ಕುಟುಂಬ ರಾಜಕಾರಣ ಇದೀಗ ಒಳಗೊಳಗಿನಿಂದಲೇ ಸಿಡಿಯತೊಡಗಿದೆ.
 
ಮುಲಾಯಂ ಸಿಂಗ್ ವಿದ್ಯಾರ್ಥಿ ದೆಸೆಯಲ್ಲೇ ಲೋಹಿಯಾ ಆರಾಧಕರಾಗಿದ್ದರು. ಲೋಹಿಯಾ ಸಂಪಾದಿಸುತ್ತಿದ್ದ ‘ಜನ’ ಪತ್ರಿಕೆ ಎಳೆಯ ಮುಲಾಯಂ ಮೇಲೆ ತೀವ್ರ ಪ್ರಭಾವ ಬೀರಿತ್ತು. ಅಂದಿನ ಗೋವಿಂದ ವಲ್ಲಭ ಪಂತ್ ನೇತೃತ್ವದ ಉತ್ತರ ಪ್ರದೇಶ ಕಾಂಗ್ರೆಸ್ ಸರ್ಕಾರ ನೀರಾವರಿ ದರಗಳನ್ನು ಏರಿಸಿರುತ್ತದೆ. ವಿರೋಧಿಸಿ ಆಂದೋಲನ ನಡೆಸುವಂತೆ ಲೋಹಿಯಾ ಕರೆ ನೀಡಿರುತ್ತಾರೆ.
 
ಈ ಆಂದೋಲನದಲ್ಲಿ ಭಾಗವಹಿಸಿ ಬಂಧನಕ್ಕೆ ಈಡಾದಾಗ ಮುಲಾಯಂ ಕೇವಲ 14 ವಯಸ್ಸಿನ ಪೋರ. ಬಂದೀಖಾನೆಯೊಳಗೆ ತಳ್ಳಲು ಜೇಲರ್ ಒಪ್ಪುವುದಿಲ್ಲ. ‘ವಯಸ್ಕನಲ್ಲದಿರಬಹುದು, ಆದರೆ ಈ ದೇಶದ ನಾಗರಿಕ ನಾನು. ನೀರಾವರಿ ದರ ಏರಿಕೆಯನ್ನು ಮನಸಾರೆ ವಿರೋಧಿಸಿದ್ದೇನೆ. ಬಂಧಿಸಿಯೇ ತೀರಬೇಕು’ ಎಂಬ ಮುಲಾಯಂ ಹಟಕ್ಕೆ ಜೇಲರ್ ಮಣಿಯುತ್ತಾನೆ. ಅಂದೇ ಸಂಜೆ ಬಿಡುಗಡೆಯೂ ಆಗುತ್ತದೆ.
 
1962ರಲ್ಲಿ ಫೂಲ್‌ಪುರದಲ್ಲಿ ನೆಹರೂ ವಿರುದ್ಧ ಸೋತ ಲೋಹಿಯಾ ಮರುವರ್ಷ ಫರೂಕಾಬಾದ್ ಉಪಚುನಾವಣೆಯಲ್ಲಿ ಲೋಕಸಭೆಗೆ ಆರಿಸಿಬರುತ್ತಾರೆ. ಮುಲಾಯಂ ಸಂಗಾತಿಗಳು ಹಳ್ಳಿ ಹಳ್ಳಿಗೆ ಹೋಗಿ ಸಿಹಿ ಹಂಚುತ್ತಾರೆ. ಪರಿವರ್ತನೆಯ ದಿನಗಳು ಆರಂಭ ಆದವೆಂದು ಸಂಭ್ರಮಿಸುತ್ತಾರೆ.
 
ಬಾಲ್ಯವಿವಾಹ ವಿರೋಧಿಸಿ, ದಲಿತರು ನೀಡುವ ಬೆಲ್ಲ ನೀರು ಸೇವಿಸಿ ತಮ್ಮದೇ ಯಾದವ ಬಂಧುಗಳ ಆಗ್ರಹಕ್ಕೆ ತುತ್ತಾಗುತ್ತಾರೆ. ಕಾಂಗ್ರೆಸ್ ವಿರೋಧಿ ರಕ್ತ ಮುಲಾಯಂ ಧಮನಿಗಳಲ್ಲಿ ಬಾಲ್ಯದಿಂದಲೇ ಹರಿದದ್ದು ಹೌದು. ಕುಸ್ತಿ ಮಲ್ಲನಾದ ಮುಲಾಯಂ ಅಖಾಡದಲ್ಲಿ ಎದುರಾಳಿಯನ್ನು ಚಿತ್ತು ಮಾಡಿದ ಹೊತ್ತಿನಲ್ಲೇ ಲೋಹಿಯಾ ಪಕ್ಷದ ಟಿಕೆಟ್ ಒಲಿದು ಬರುತ್ತದೆ.
 
1967ರಲ್ಲಿ ಜಸ್ವಂತನಗರ ಕ್ಷೇತ್ರದಿಂದ ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದ ಅತಿ ಕಿರಿಯ ವಯಸ್ಸಿನ ಶಾಸಕ ಮುಲಾಯಂ. ಲೋಹಿಯಾ ನಿಧನದ ನಂತರ ಮುಲಾಯಂ ಅವರು ಭಾರತೀಯ ಲೋಕದಳದ ಚೌಧರಿ ಚರಣಸಿಂಗ್ ನೆರಳಿಗೆ ಸರಿಯುತ್ತಾರೆ. ಆ ಹೊತ್ತಿಗೆ ಚರಣಸಿಂಗ್ ಅವರು ಹಸಿರು ಕ್ರಾಂತಿಯ ಲಾಭ ಪಡೆದಿದ್ದ ಮಧ್ಯಮವರ್ಗದ ರೈತಾಪಿಗಳನ್ನು MAJGAR ಎಂಬ ಸಾಮಾಜಿಕ ಮೈತ್ರಿಕೂಟದಡಿ (ಮುಸ್ಲಿಮ್, ಆಹಿರ್ (ಯಾದವ್), ಜಾಟ್, ಗುಜ್ಜರ್ ಹಾಗೂ ರಜಪೂತ) ಸಂಘಟಿಸಿರುತ್ತಾರೆ. 
 
1987ರಲ್ಲಿ ಚರಣಸಿಂಗ್ ನಿಧನದ ತರುವಾಯ ರೈತಾಪಿ ಜಾಟರ ಬೆಂಬಲ ಗಳಿಸಲು ಅಜಿತ್ ಸಿಂಗ್ ಜೊತೆ ನಡೆವ ಪೈಪೋಟಿಯಲ್ಲಿ ಮುಲಾಯಂ ಅವರದೇ ಮೇಲುಗೈ ಆಗುತ್ತದೆ. ತಂದೆ ಚರಣಸಿಂಗ್ ನಿಧನದ ನಂತರ ಅವರ ರಾಜಕೀಯ ವಾರಸುದಾರಿಕೆ ವಾಸ್ತವವಾಗಿ ಮಗ ಅಜಿತ್ ಸಿಂಗ್ ಮಡಿಲಿಗೆ ಜಾರಿರುತ್ತದೆ. ಆದರೆ 15 ವರ್ಷಗಳ ವಿದೇಶವಾಸ ಅಜಿತ್ ಸಿಂಗ್ ಅವರನ್ನು ಜಾಟ ನೆಲದ ಮಣ್ಣಿನ ವಾಸನೆಗೆ ಪರಕೀಯರನ್ನಾಗಿ ಮಾಡಿರುತ್ತದೆ.
 
ಒಮ್ಮೆ ಬಿಜೆಪಿ, ಮತ್ತೊಮ್ಮೆ ಸಮಾಜವಾದಿ ಪಾರ್ಟಿ, ಕಾಂಗ್ರೆಸ್ಸಿನ ಜೊತೆಗೆ ಅವರು ಕಾಲ ಕಾಲಕ್ಕೆ ಮಾಡಿಕೊಂಡ ಅವಕಾಶವಾದಿ ಚುನಾವಣಾ ಮೈತ್ರಿ MAJGAR ಸಾಮಾಜಿಕ ಮೈತ್ರಿಕೂಟದ ಅಡಿಗಲ್ಲುಗಳನ್ನು ಎಲ್ಲ ಕಾಲಕ್ಕೂ ಕದಲಿಸಿ ಬಿಟ್ಟಿರುತ್ತದೆ.
 
ರಾಜಕೀಯ ಪಕ್ಷಗಳು, ಪೊಲೀಸರು, ಪಾತಕಿಗಳು, ಅಧಿಕಾರಶಾಹಿ ಒಂದರ ಜೊತೆಗೆ ಮತ್ತೊಂದು ಉಂಡು ಮಲಗುವ ಅನೈತಿಕ ಗೆಣೆತನ. ದಬ್ಬಾಳಿಕೆ, ಕೊಲೆ, ಸುಲಿಗೆ, ಅಪಹರಣ, ಜಾತಿವಾದ, ದುಂಡಾವರ್ತನೆ, ಭ್ರಷ್ಟಾಚಾರಗಳು ಇಲ್ಲಿ ಬೀಡುಬೀಸು.
 
ಬಿಹಾರದ ಸಿವಾನದಿಂದ ಉತ್ತರ ಪ್ರದೇಶದ ಅಲಹಾಬಾದ್ ನಡುವಣ ಪೂರ್ವಾಂಚಲ ಸೀಮೆಯಿಡೀ ಮಾಫಿಯಾ ಕಾರಿಡಾರ್ ಎಂದು ಜನಜನಿತ. ಈ ದುಃಸ್ಥಿತಿಯ ಮಹಾಪೋಷಕರು ಹಲವರಿರಬಹುದು. ಈ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ಮುಲಾಯಂ ಅವರದು.
 
ಜಾತಿ ಪದ್ಧತಿ ಮತ್ತು ಮೇಲ್ಜಾತಿಗಳ ಪ್ರಾಬಲ್ಯದ ವಿರುದ್ಧ ಗಟ್ಟಿ ದನಿ ಎತ್ತಿದ್ದವರು ಸಮಾಜವಾದಿ ನೇತಾರ ರಾಮಮನೋಹರ ಲೋಹಿಯಾ. ವಂಶಪರಂಪರೆಯ ಆಡಳಿತ ಮತ್ತು ಸ್ವಜನಪಕ್ಷಪಾತದ ಕಡುವಿರೋಧಿಯಾಗಿದ್ದರು.
 
ಅಧಿಕಾರ ರಾಜಕಾರಣದ ಸುದೀರ್ಘ ಯಾತ್ರೆಯಲ್ಲಿ ಲೋಹಿಯಾ ಅನುಯಾಯಿ ಮುಲಾಯಂ ಕಳೆದೇ ಹೋದರು. ಜನೇಶ್ವರ ಮಿಶ್ರ, ರಾಮಸುಂದರ ದಾಸ್, ಬೇಣಿಪ್ರಸಾದ್ ವರ್ಮ ಅವರಂತಹ ಸಮಾಜವಾದಿಗಳು ಮೂಲೆಗುಂಪಾದರು.
 
ಜಯಪ್ರಕಾಶ್ ನಾರಾಯಣ್, ಮಧುಲಿಮಯೆ, ಸುರೇಂದ್ರ ಮೋಹನ್ ಮುಂತಾದ ದಿಗ್ಗಜರು ಇದೀಗ ಮುಲಾಯಂ ಕಚೇರಿಯ ಗೋಡೆಗಳ ಮೇಲೆ ತೂಗುವ ಭಾವಚಿತ್ರಗಳು ಅಷ್ಟೆ. ಆಂತರಿಕ ಜನತಂತ್ರದ ಕತ್ತು ಹಿಸುಕುವ ಇತರೆ ಪಕ್ಷಗಳ ಸಾಲಿಗೆ ಸೇರಿಹೋಯಿತು ಮುಲಾಯಂ ಪಕ್ಷ. ಮಹಾನ್ ಸಮಾಜವಾದಿ ಪರಂಪರೆಗೆ ಸೇರಬೇಕಿದ್ದ ಈ ಪಕ್ಷ ಜಾತಿ ವಿನಾಶದ ಗುರಿಯಿಂದ ಬಹುದೂರ ಸಾಗಿ ಬಂದಿದೆ.
 
2003-2007ರ ನಡುವೆ ಮುಲಾಯಂ ನೇತೃತ್ವದ  ಸರ್ಕಾರ ಅಕ್ಷರಶಃ ಗೂಂಡಾರಾಜ್ಯವಾಗಿ ಪರಿಣಮಿಸಿತ್ತು. ಕೊಲೆ, ಸುಲಿಗೆ, ದರೋಡೆ, ಪುಂಡಾಟಗಳಿಗೆ ಮೇರೆಯೇ ಇರಲಿಲ್ಲ. ಲೋಹಿಯಾ ವಾಹಿನಿಗೆ ಸೇರಿದ್ದ ಐವರು ಗೂಂಡಾ ಸೋದರರು ಪೊಲೀಸ್ ಅಧಿಕಾರಿಯೊಬ್ಬನನ್ನು ತಮ್ಮ ವಾಹನದ ಬಾನೆಟ್ಟಿಗೆ ನೇತಾಡಿಸಿ ಲಖನೌದಲ್ಲೆಲ್ಲ ‘ಮೆರವಣಿಗೆ’ ಮಾಡಿಸಿದ್ದರು.
 
ಡ್ರೈವಿಂಗ್ ಲೈಸೆನ್ಸ್ ಕೇಳಿದ್ದೇ ಆ ಅಧಿಕಾರಿಯ ಅಪರಾಧವಾಗಿತ್ತು. ‘ಗಾಡೀ ಪರ್ ಸ.ಪಾ. ಕಾ ಝಂಡಾ ತೋ ಸಮಝೋ ಅಂದರ್  ಬೈಠಾ ಹೈ ಗೂಂಡಾ’ ಎಂಬ ಘೋಷಣೆ ಚಾಲ್ತಿಗೆ ಬಂದಿದ್ದು ಆನಂತರವೇ.
 
2007ರಲ್ಲಿ ಎಡಪಕ್ಷಗಳು, ಎನ್.ಸಿ.ಪಿ., ಲೋಕಜನಶಕ್ತಿ ಹಾಗೂ ಸಂಯುಕ್ತ ಜನತಾದಳ ಸೇರಿದ ಜನಮೋರ್ಚಾ ಮುಲಾಯಂ ಅವರ ಸಮಾಜವಾದಕ್ಕೆ ಸಡ್ಡು ಹೊಡೆಯುತ್ತದೆ. ಮುಲಾಯಂ ನೇತೃತ್ವದ ಸರ್ಕಾರದ ಎಲ್ಲ ಅಭಿವೃದ್ಧಿ ಚಟುವಟಿಕೆಯು ಸಿರಿವಂತರು ಮತ್ತು ಕಾರ್ಪೊರೇಟರುಗಳ ಹಿತಸಾಧನೆಯ ಸುತ್ತಮುತ್ತ ಗಿರಕಿ ಹೊಡೆಯುತ್ತಿದೆ ಎಂದು ಆಪಾದಿಸುತ್ತದೆ.
 
ಬಾಬ್ರಿ ಮಸೀದಿಯನ್ನು ರಕ್ಷಿಸುವುದಾಗಿ ಸುಪ್ರೀಂ ಕೋರ್ಟಿಗೆ ಮುಚ್ಚಳಿಕೆ ಬರೆದುಕೊಟ್ಟು ಆನಂತರ ಕರಸೇವಕರಿಗೆ ಮುಕ್ತಹಸ್ತ ನೀಡಿದ್ದ ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಸಮಾಜವಾದಿ ಪಾರ್ಟಿಗೆ ಸೇರಿಸಿಕೊಂಡವರು ಮುಲಾಯಂ.
 
ಬಾಬ್ರಿ ನೆಲಸಮದ ನಂತರ ಅಲ್ಲಿ ಬಿದ್ದಿದ್ದ ಇಟ್ಟಿಗೆ ಗಾರೆ ಮಣ್ಣನ್ನು ಮನೆಯ ಅಂಗಳಕ್ಕೆ ಹಾಕಿ ಸಮ ಮಾಡಿಕೊಳ್ಳಿ ಎಂದಿದ್ದ ಬಿಜೆಪಿ ಮುಂದಾಳು ಸಾಕ್ಷಿ ಮಹಾರಾಜರಿಗೂ ಸಮಾಜ ವಾದಿ ಪಕ್ಷದ ಬಾಗಿಲು ತೆರೆದವರು.
 
ಹಾಗೇಕೆ ಹೀಗೇಕೆ ಎಂಬ ಮಾತು ಮುಲಾಯಂ  ಅವರಿಗೆ ಅನ್ವಯಿಸುವುದೇ ಇಲ್ಲ. ಈ ಒರಟು ಸಮಾಜವಾದಿಗೆ ರಾಜನೀತಿಯ ಗಣಿತ ರಕ್ತಗತ.
ಮೈನ್ಪುರಿ- ಇಟಾವಾ ಉತ್ತರ ಪ್ರದೇಶದ ಹಿಂದುಳಿದ ಸೀಮೆ. ಕಟ್ಟಾ ಹೆಸರಿನ ಅಗ್ಗದ ಪಿಸ್ತೂಲುಗಳ ಹೇರಳ ತಯಾರಿಕೆ ಮೈನ್ಪುರಿಯ ಗೋಪ್ಯ ಗುಡಿ ಕೈಗಾರಿಕೆ.
 
ಅಂದಿನಿಂದ 1992ರ ತನಕ ಪಕ್ಷದಿಂದ ಪಕ್ಷಕ್ಕೆ ಜಿಗಿದ ಮುಲಾಯಂ ಮುಖ್ಯಮಂತ್ರಿಯಾಗಲು ಬಿಜೆಪಿಯಿಂದ ಹಿಡಿದು ಬಿಎಸ್‌ಪಿಯ ತನಕ ಹಲವು ಪಕ್ಷಗಳ ನೆರವು ಪಡೆದಿದ್ದಾರೆ. ಕಾಂಗ್ರೆಸ್ಸಿನ ಊರುಗೋಲು ಹಿಡಿದದ್ದು ಎರಡು ಬಾರಿ. ಬಿಜೆಪಿಯ ಬೆಂಬಲ ಪಡೆದದ್ದು ಒಮ್ಮೆ ಪ್ರತ್ಯಕ್ಷವಾಗಿ ಮತ್ತೊಮ್ಮೆ ಪರೋಕ್ಷವಾಗಿ. 1992ರಲ್ಲಿ ತಾವೇ ರಚಿಸಿದ ಸಮಾಜವಾದಿ ಪಾರ್ಟಿಯ ಸೂತ್ರ ಹಿಡಿದು ನೆಲೆಗೊಂಡಿದ್ದಾರೆ.
 
ಕೇಂದ್ರದ ತ್ರಿಶಂಕು ರಾಜಕಾರಣದ ಲಾಭದ ವಾಸನೆ ಹಿಡಿದು 2004ರಲ್ಲಿ ಲೋಕಸಭೆಗೆ ಗೆದ್ದು ಬಂದರು. ಆದರೆ ಯುಪಿಎ, ಎಡಪಕ್ಷಗಳ ಬಾಹ್ಯ ಬೆಂಬಲ ಪಡೆದು ಅಧಿಕಾರ ಹಿಡಿಯಿತು. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ರಾಜ್ಯ ರಾಜಕಾರಣಕ್ಕೆ ಮರಳಿ ಮುಖ್ಯಮಂತ್ರಿಯಾಗಿ ಮುಂದುವರೆದರು.
 
2007ರ ವಿಧಾನಸಭಾ ಚುನಾವಣೆಯಲ್ಲಿ ದಾಪುಗಾಲಿಟ್ಟ ಮಾಯಾವತಿ ಬಹುಜನ ಸಮಾಜ ಪಾರ್ಟಿಯ ಆನೆ ಮುಲಾಯಂ ಅವರನ್ನು ರಾಜಕೀಯವಾಗಿ ಮೆಟ್ಟಿ ನಜ್ಜುಗುಜ್ಜು ಮಾಡಿತ್ತು. ತಮ್ಮ ಬೆಂಬಲಿಗ ಮುಸ್ಲಿಂ ಮತದಾರರನ್ನು ಮಾಯಾವತಿಯವರ ಬಹುಜನ ಸಮಾಜ ಪಕ್ಷದಿಂದ ದೂರ ಇರಿಸಲು ಬೆಂಕಿಯೊಡನೆ ಸರಸ ಆಡಲೂ ಹಿಂಜರಿಯುವುದಿಲ್ಲ ಮುಲಾಯಂ. 
 
2014ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಪಶ್ಚಿಮ ಉತ್ತರ ಪ್ರದೇಶದಲ್ಲಿ ಭುಗಿಲೇಳುವ ಕೋಮು ದಂಗೆಗಳಿಗೆ ಮುಲಾಯಂ ಮಗ ಅಖಿಲೇಶ್ ನೇತೃತ್ವದ ಸರ್ಕಾರ ಮೂಕಪ್ರೇಕ್ಷಕನಾಗಿ ತಾಳ ಹಾಕುತ್ತದೆ. ಹಿಂದೂ– ಮುಸ್ಲಿಂ ಧ್ರುವೀಕರಣ ನಡೆದರೆ ಮುಸಲ್ಮಾನರು ತಮ್ಮನ್ನು ಬಿಟ್ಟು ಅಂಗುಲ ದೂರದಷ್ಟೂ ಕದಲುವುದಿಲ್ಲ ಎಂಬ ಲೆಕ್ಕಾಚಾರ ಅವರದು.
 
‘ವಾಸ್ತವವಾದಿ’ ಎಂಬ ಮುಸುಕಿನ ಮರೆಯಲ್ಲಿ ಅವಕಾಶವಾದಿ ರಾಜಕಾರಣಿಯಾಗಿ ರೂಪುಗೊಂಡವರು ಮುಲಾಯಂ. ರಾಮಮನೋಹರ ಲೋಹಿಯಾ, ರಾಜನಾರಾಯಣ್, ಚರಣಸಿಂಗ್ ರೂಪಿಸಿದ್ದ ವ್ಯಕ್ತಿತ್ವ ಕಾಲ ಕಾಲಕ್ಕೆ ಪೊರೆ ಕಳಚಿ ಬಂಡವಾಳವಾದಿಗಳು ಮತ್ತು ಭಾರೀ ಉದ್ಯಮ ಸದನಗಳ ಸಂಗದಲ್ಲಿ ಮಿಂದಿತ್ತು. ಸಮಾಜವಾದಿ ವಿಚಾರ ಪ್ರಣಾಲಿ ಪಕ್ಷದ ಹೆಸರಿಗಷ್ಟೇ ಸೀಮಿತ ಆಯಿತು.
 
ಬಂಡೆದ್ದು ನಿಂತಿರುವ ಅಖಿಲೇಶ್ ಯಾದವ್ ಅವರು ತಮ್ಮ ತಂದೆಯ ಮಿತ್ರ ಅಮರ್ ಸಿಂಗ್ ಅವರನ್ನು ದಲ್ಲಾಳಿ ಎಂದು ಜರೆದಿದ್ದಾರೆ. ಅಮರ್ ಸಿಂಗ್ ಅವರನ್ನು ತಮ್ಮ ನೆಚ್ಚಿನ ಬಂಟರನ್ನಾಗಿಸಿಕೊಂಡಿದ್ದರು ಮುಲಾಯಂ. ಬಾಲಿವುಡ್ ತಾರೆಗಳ ಬೆಡಗಿನ ಲೋಕ ಅವರ ಕಣ್ಣಾಲಿಗಳಿಗೆ ಇಳಿದಿತ್ತು ಕೂಡ.
 
1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಲೋಕಸಭೆಯಲ್ಲಿ ಬಹುಮತ ಸಾಬೀತು ಮಾಡಲಾಗದೆ 13 ದಿನಗಳ ಅಲ್ಪಾಯುಷ್ಯದ ನಂತರ ಅವಸಾನಗೊಂಡಿತ್ತು. ಎರಡನೆಯ ಅತಿದೊಡ್ಡ ಪಕ್ಷ ಕಾಂಗ್ರೆಸ್ಸನ್ನು ಸರ್ಕಾರ ರಚಿಸುವಂತೆ ರಾಷ್ಟ್ರಪತಿ ಆಹ್ವಾನಿಸಿದ್ದರು.
 
ಸರ್ಕಾರ ರಚನೆಗೆ ಅಗತ್ಯವಿರುವ 272 ಸದಸ್ಯರ ಬೆಂಬಲ ತಮಗೆ ಇರುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಾರಿದ್ದರು. ಈ 272ರ ಪೈಕಿ ಮುಲಾಯಂ  ಅವರ ಸಮಾಜವಾದಿ ಪಾರ್ಟಿಯ 20 ಸದಸ್ಯಬಲವೂ ಸೇರಿತ್ತು. ಆದರೆ ಮುಲಾಯಂ ಹಿಂದೆಗೆದಿದ್ದರು.
 
ಇನ್ನೊಂದು ಉದಾಹರಣೆ. 2008ರ ಜುಲೈ ತಿಂಗಳು. ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ನೀಡಿದ್ದ ಬಾಹ್ಯ ಬೆಂಬಲವನ್ನು ವಾಪಸು ಪಡೆದಿದ್ದವು. ಎಡಪಕ್ಷಗಳೊಂದಿಗೆ ನಿಂತಿದ್ದ  ಮುಲಾಯಂ ಅವರ ಸಮಾಜವಾದಿ ಪಾರ್ಟಿ ಏಕಾಏಕಿ ನಿಲುವು ಬದಲಿಸಿತ್ತು.  
 
ಮನಮೋಹನಸಿಂಗ್ ನೇತೃತ್ವದ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿತ್ತು. ಆನುವಂಶೀಯ ರಾಜಕಾರಣ ಎಂಬುದು ಜನತಾಂತ್ರಿಕ ಕ್ರಿಯೆಯ ಮೂಲತತ್ವದ ಉಲ್ಲಂಘನೆ ಎಂದಿದ್ದರು ಲೋಹಿಯಾ. ಮುಖ್ಯಮಂತ್ರಿ, ಮಂತ್ರಿ, ಸಂಸದರು, ಶಾಸಕರು ಮುಂತಾದ ಆಯಕಟ್ಟಿನ ಕೆನೆಪದರದ ಹುದ್ದೆಗಳನ್ನು ಹೊಂದಿರುವ ಮುಲಾಯಂ ಕುಟುಂಬದ ಸದಸ್ಯರ ಸಂಖ್ಯೆ ಇಪ್ಪತ್ತನ್ನು ಮೀರುತ್ತದೆ.
 
ಊಳಿಗಮಾನ್ಯ ವ್ಯವಸ್ಥೆಯ ಬಿಗಿ ಮುಷ್ಟಿಯಿಂದ ಪಕ್ಷವನ್ನು ತನ್ನದೇ ರೀತಿಯಲ್ಲಿ ಬಿಡಿಸಲು ಮುಂದಾಗಿರುವ ಮಗ ಅಖಿಲೇಶ್  ಕೈ ಕಾಲುಗಳನ್ನು ಕಟ್ಟಿ ಹಾಕಲು ಮುಂದಾಗಿದ್ದಾರೆ ಮುಲಾಯಂ. ದಾರಿ ತಪ್ಪಿದ ಸಮಾಜವಾದಿಯೊಬ್ಬನ ದುರಂತವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT