ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕಹಳೆ

Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಚೌಕಟ್ಟಿನಾಚೆಗಿನ ಕನ್ನಡದ ಒಲವು
ನಾನು ಕರ್ನಾಟಕದವಳು ಎಂದಾಕ್ಷಣ ಕರ್ನಾಟಕದಲ್ಲೇನಿದೆ ಎಂದು ಕುತೂಹಲಕ್ಕೆ ಕೆಲವರು ಕೇಳುತ್ತಾರೆ. ಏನೆಲ್ಲಾ ಹೇಳಬೇಕೆಂದು ನಾನು ಒಂದು ಕ್ಷಣ ಯೋಚಿಸುತ್ತೇನೆ. ಮತ್ತೆ ಜೋಗ ಜಲಪಾತದ ಚಿತ್ರವನ್ನು ತೋರಿಸಿ ಇದು ಭಾರತದ ಅತಿ ಎತ್ತರದ ಸುಂದರ ಜಲಪಾತವೆಂದೂ, ನನ್ನ ಹುಟ್ಟೂರು ಈ ಜಲಪಾತದಿಂದ ಕೆಲವೇ ಮೈಲಿಗಳ ದೂರದಲ್ಲಿದೆಯೆಂದೂ ಶುರು ಮಾಡಿ ಕಲಸಿ, ನಂತರ ಪಶ್ಚಿಮ ಘಟ್ಟಗಳ ವೈಶಿಷ್ಟ್ಯ, ದಕ್ಷಿಣ ಕನ್ನಡದ ಸೊಬಗು, ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು, ಕೊಡಗು, ಚಿಕ್ಕಮಗಳೂರಿನ ಗುಡ್ಡ ಬೆಟ್ಟಗಳು, ಆಹಾರ, ವೇಷ ಭೂಷಣಗಳು ಹಾಗೂ ಸಾಂಸ್ಕೃತಿಕ ಭಿನ್ನತೆ ಮತ್ತು ಕನ್ನಡ ಭಾಷಾ ಬಳಕೆಯಲ್ಲಿನ ವೈವಿಧ್ಯದ ಬಗ್ಗೆ ವಿವರಿಸಿ ಕರ್ನಾಟಕದ ಬಗ್ಗೆ ಆಸಕ್ತಿ ಹುಟ್ಟಿಸಲು ಪ್ರಯತ್ನಿಸುತ್ತೇನೆ. ಮಾತು ಒಮ್ಮೊಮ್ಮೆ ಕನ್ನಡ ಸಿನಿಮಾಗಳ ಬಗ್ಗೆಯೂ, ನಾಟಕ, ಯಕ್ಷಗಾನ, ಸಂಗೀತದ ಬಗ್ಗೆಯೂ ಹೊರಳುವುದಿದೆ. ನನ್ನ ರೊಮೇನಿಯನ್ ಗೆಳೆಯನೊಬ್ಬ ಸಂಗೀತಗಾರ. ಆತನಿಗೆ ಎಲ್ಲಾ ದೇಶಗಳ ಜಾನಪದ ಸಂಗೀತದಲ್ಲಿ ಆಸಕ್ತಿ. ಕನ್ನಡ ಜಾನಪದ ಗೀತೆಗಳ ಜೊತೆಗೆ ಜನರು ಬಳಸುವ ಬಿದಿರಿನ ವಾದ್ಯಗಳ ಬಗ್ಗೆ ಹೆಚ್ಚು ಆಸ್ಥೆ ತೋರಿದ. ಇರಾನಿ ಗೆಳತಿಯೊಬ್ಬಳು ನಾನು ಅಡುಗೆಗೆ ಬಳಸುವ ಮಸಾಲೆಗಳನ್ನು ಕೇಳಿ ತಿಳಿದು ಅವುಗಳ ಆರೋಗ್ಯ ಪ್ರಾಮುಖ್ಯಗಳ ಬಗ್ಗೆ ಓದಿ ನನಗೆ ವಿವರಿಸುತ್ತಾಳೆ. ನನ್ನ ಅನ್ಯ ಭಾಷೀಯ ಸ್ನೇಹಿತ ಬಳಗಕ್ಕೆ ಗುಲಾಬಿ ಟಾಕೀಸು ಸಿನಿಮಾ ತೋರಿಸುವುದು, ಕನ್ನಡ ಸಿನಿಮಾಗಳ ಬಗ್ಗೆ ಹಗುರವಾಗಿ ಮಾತಾಡುವವರು ಇಂಥದ್ದೊಂದು ಸಿನಿಮಾವನ್ನು ಹೊಗಳುವುದು ನನಗೆ ಖುಷಿ. ನನ್ನ ಅಮೆರಿಕನ್ ಗೆಳೆಯನೊಬ್ಬನನ್ನು ಪುರಾಣ ಕಥೆ ಆಧಾರಿತ ಭರತನಾಟ್ಯ ನೃತ್ಯ ಪ್ರದರ್ಶನಕ್ಕೆ ಕರೆದೊಯ್ದಿದ್ದೆ. ಭಾಷಾ ಚೌಕಟ್ಟಿನಾಚೆ ಆತ ಪ್ರತೀ ಕಥೆಗಳನ್ನೂ ಆಸಕ್ತಿಯಿಂದ ನೃತ್ಯದ ನಂತರ ನನ್ನಲ್ಲಿ ವಿವರಿಸಿ ತಾನು ಅರ್ಥೈಸಿಕೊಂಡಿದ್ದು ಸರಿ ಇದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದ. ಇವೆಲ್ಲ ಅನುಭವಗಳೊಂದಿಗೆ ನಾನು ಕರ್ನಾಟಕದ ಬಗ್ಗೆ ತಿಳಿದುಕೊಂಡಿದ್ದಕ್ಕಿಂತ ತಿಳಿದುಕೊಳ್ಳಬೇಕಿರುವುದೇ ಬಹುಪಾಲು ಬಾಕಿ ಇದೆ.
-ಕಾಂತಿ ಹೆಗಡೆ, ಅಮೆರಿಕದಲ್ಲಿರುವ ಕನ್ನಡತಿ

*
ಒಡೆದ ಕನ್ನಡಿಯ ರೂಪಕ 
ಕರ್ನಾಟಕ ಏಕೀಕರಣಗೊಂಡ ನಂತರದ 25 ವರ್ಷಗಳ ಕಥನದಲ್ಲಿ ನಾವು ಭಾವಿಸಿಕೊಂಡಂತೆ ಮನಸ್ಥಿತಿ ರೂಪುಗೊಂಡಿದ್ದರೂ 80ರ ದಶಕದಿಂದ ಅದು ಮತ್ತೊಂದು ಮಗ್ಗಲಿಗೆ ಹೊರಳಿದೆ. ‘ಕಚ್ಚಾಡುವವರನು ಕೂಡಿಸಿ ಒಲಿಸು’ ಎನ್ನುವ ಕುವೆಂಪು ಅವರ ಮನವಿ ಇಂದಿಗೂ ಅನ್ವಯಿಸಿದೆ. ಛಿದ್ರಗೊಂಡ ಮನಸ್ಸುಗಳು ಆತಂಕ-ತಲ್ಲಣಗಳಿಂದ ಬೇರೊಂದು ಭೌಗೋಳಿಕ ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ನೆಲವೇ ಕರ್ನಾಟಕವೆನ್ನಿಸುತ್ತಿದೆ. ಕುವೆಂಪು ಅವರು ಎರಡು ನೆಲೆಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕವನ್ನು ಗ್ರಹಿಸಿದ್ದರು. ಒಂದು ಭಾವಾವೇಶದ ನೆಲೆಯಾದರೆ, ಇನ್ನೊಂದು ವಿಷಾದದ ನೆಲೆ. ಎರಡನೆಯ ನೆಲೆಯೇ ನಿಜವಾಗಿ ಉಳಿದುಬಿಟ್ಟಿದೆ. ಕನ್ನಡದ ನೆಲ, ಜಲ, ನುಡಿ ಉಳಿಸಲು ಹೆಣಗಾಡುತ್ತಿರುವ, ಆದರೆ ಯಾರಿಂದಲೂ ನೆಲೆಕಂಡುಕೊಳ್ಳಲಾಗದೇ ದಿನವೂ ನರಳಾಡುತ್ತಿರುವ ನಾಡಾಗಿ ಉಳಿದಿದೆ. ಕನ್ನಡ ಬೆಳೆಸುವ ಹುಸಿ ಯೋಜನೆಗಳು, ರಕ್ಷಣಾ ವೇದಿಕೆಗಳು ಎಷ್ಟೆಲ್ಲ ಹುಟ್ಟಿಕೊಂಡು ಕನ್ನಡದ ಪಾಲಿಗೆ ಮಂದವಾಗಿವೆ. ಆದರೂ ಕನ್ನಡ ಮಾಯವಾಗುತ್ತಿದೆ. ಆಳುವ ಶಕ್ತಿಗಳ ಕೈಗೊಂಬೆಯಾಗಿ ಕನ್ನಡ ಕುಣಿದಾಡುತ್ತಿದೆ. 
­–ಡಾ.ಲೋಕೇಶ ಅಗಸನಕಟ್ಟೆ ಸಾಹಿತಿ, ಚಿತ್ರದುರ್ಗ

*
ಶಿಸ್ತುಬದ್ಧ ಧರ್ಮಛತ್ರ
ಯಕ್ಷಗಾನ ಸಹಿತ ಹಲವಾರು ಕಲೆಗಳ ಸಂಗಮವಾಗಿರುವ ಕರ್ನಾಟಕ ನನ್ನಂತಹ ಅದೆಷ್ಟೋ ಅನ್ಯಭಾಷಿಗ ಕಲಾವಿದರನ್ನು ಪೋಷಿಸಿದೆ. ಭಾಷೆ, ಆಹಾರ, ಉಡುಗೆ, ಸಂಸ್ಕೃತಿ ಸಹಿತ ಯಾವುದೇ ಅನ್ಯ ಪರಂಪರೆಯನ್ನೂ ದ್ವೇಷಿಸದೆ ತನ್ನಲ್ಲಿ ಎಲ್ಲವನ್ನೂ ಅಂತರ್ಗತ ಮಾಡುವ ಕನ್ನಡ ನಾಡನ್ನು ಶಿಸ್ತುಬದ್ಧ ಧರ್ಮಛತ್ರ ಎನ್ನಬಹುದೇನೋ. ಅನ್ಯ ಪ್ರದೇಶಗಳಲ್ಲಿರುವ ಅನೇಕ ಕಲಾಪ್ರಕಾರಗಳನ್ನು ಒಂದೆಡೆ ನೋಡಬೇಕಾದರೂ ಕನ್ನಡ ನೆಲಕ್ಕೇ ಬರಬೇಕು. ಇಂತಹ ಹಲವಾರು ಕಲಾಪ್ರಕಾರಗಳ ಸಂಯುಕ್ತ ಎಂಬಂತೆ ಯಕ್ಷಗಾನ ಇಲ್ಲಿದೆ. ಯಕ್ಷಗಾನದ ಹಿನ್ನೆಲೆಯಲ್ಲೇ ಕನ್ನಡವನ್ನು ಕಂಡಾಗ, ಹಲವು ಕಲೆಗಳು ಒಂದೆಡೆ ಕಲೆತು ಬೆರೆತಿರುವುದನ್ನು ನೋಡಿದಾಗ ಈ ನೆಲದಲ್ಲಿ ಹುಟ್ಟಿ, ಅಂತಹ ವಿಶಿಷ್ಟ ಕಲೆಯನ್ನು ಪೋಷಿಸುವುದಕ್ಕೆ ನನಗೂ ಒಂದಿಷ್ಟು ಅವಕಾಶ ಸಿಕ್ಕಿತಲ್ಲ ಎಂಬ ಭಾವ ಮೂಡುತ್ತದೆ. ಕರ್ನಾಟಕ ಎಂಬುದು ಒಂದು ಭಾಷಿಕ ಚೌಕಟ್ಟಲ್ಲ, ಅದೊಂದು ಮನಸ್ಥಿತಿಯೂ ಅಲ್ಲ. ಈ ನಾಡು ಎಲ್ಲರನ್ನೂ, ಎಲ್ಲವನ್ನೂ ಸಹಿಸಿ ಬೆಳೆದಿದೆ. ಶ್ರದ್ಧೆಯಿಂದ ದುಡಿಯುವ ಮಂದಿಗೆ ಈ ನೆಲ ಯಾವ ಅನ್ಯಾಯವನ್ನೂ ಮಾಡಿಲ್ಲ ಎಂಬುದನ್ನು ಒಬ್ಬ ಮಲಯಾಳಿ ಭಾಷಿಗನಾಗಿ ನಾನು ಹೇಳುತ್ತೇನೆ.
–ಕುಂಬ್ಳೆ ಸುಂದರ ರಾವ್ ಯಕ್ಷಗಾನ ಕಲಾವಿದ, ದಕ್ಷಿಣ ಕನ್ನಡ

*

ಭಾಷೆ ಮತ್ತು ಭಾವನೆಯೇ ಕರ್ನಾಟಕ
ಅಮ್ಮನೆಂದರೆ ದೇಹಕ್ಕೆ ರಕ್ಷಣೆ ನೀಡುವವಳು ಮಾತ್ರವಲ್ಲ, ಒಳಗೂ ಹರಿಯುವ ಕಾವ್ಯ ತಾನೆ. ಎಲೆಗಳನ್ನು ತೀಡುವ ಗಾಳಿ ನಮ್ಮೊಳಗಿನ ಉಸಿರಾಗಿ ಅನುಭವಕ್ಕೆ ದಕ್ಕುವುದಿಲ್ಲವೇ. ಕರ್ನಾಟಕ ಎಂದರೆ ಅಮ್ಮ. ಕನ್ನಡ ಎಂಬುದು ಆಕೆಯ ಹೃದಯ. ಅದನ್ನು ನೆಲ ಜಲ ಭಾವ ಭಾಷೆ ಎಂದು ಬಿಡಿಬಿಡಿಯಾಗಿ ಹುಡುಕ ಹೊರಟರೆ ಕುರುಡ, ಆನೆಯನ್ನು ತಡಕಾಡಿ ಅದರ ಬಾಲವನ್ನಷ್ಟೇ ಮುಟ್ಟಿ ಆನೆ ಎಂದ ಹಾಗೆ. ಆದ್ದರಿಂದ ಎಲ್ಲವನ್ನೂ ಸಮಗ್ರವಾಗಿ ನೋಡಿದಾಗ ಕಾಣುವುದೇ ಕರ್ನಾಟಕ.

ಒಂದು ಶಿಲ್ಪವನ್ನು ನೇರವಾಗಿ ಸೂರ್ಯನ ಬೆಳಕಲ್ಲಿ ನೋಡುವುದಕ್ಕೂ ಅದನ್ನು ಬೇರೆ ಬೇರೆ ಮಗ್ಗಲುಗಳಿಂದ ಕಲಾತ್ಮಕವಾಗಿ ಸೆರೆಹಿಡಿಯುವುದಕ್ಕೂ ವ್ಯತ್ಯಾಸ ಇರುತ್ತದೆ. ಬೆಳದಿಂಗಳ ರಾತ್ರಿಯಲ್ಲಿ ಕಂಡಾಗ ಒಂದು ರೀತಿ, ಅಭಿಷೇಕಕ್ಕಿಂತ ಮೊದಲು ಕಂಡಾಗ ಬೋಳು ಬೋಳಾಗಿ ಕಂಡಾಗ ಇನ್ನೊಂದು ರೀತಿ. ನೀರಲ್ಲಿ ಮುಳುಗಿಸಿ ತೆಗೆದಾಗ ಮತ್ತೊಂದು ರೀತಿ ಕಾಣುತ್ತದೆ. ಕರ್ನಾಟಕವೂ ಹಾಗೆಯೇ. ಜಗತ್ತಿನ ಎಲ್ಲ ಭಾಷೆಗಳಲ್ಲಿ ಜೋಗುಳವಿದೆ. ಮಗು ಉಸಿರಾಡುವುದೇ ಜೋಗುಳದಿಂದ. ಆದ್ದರಿಂದ ಭಾಷೆ ಮತ್ತು ಭಾವನೆಯೇ ಕರ್ನಾಟಕ.

ಅಮ್ಮ ಕನ್ನಡದ ಎಣ್ಣೆ ತಿಕ್ಕಿ ಅಭ್ಯಂಜನ ಮಾಡಿಸಿ ಜೋಗುಳ ಹಾಡಿ ತೊಟ್ಟಿಲು ತೂಗಿ ಮಗುವಿನ ಹೊರ ರೂಪದೊಂದಿಗೆ ಒಳ ರೂಪವನ್ನೂ ತೀಡುತ್ತಾಳೆ. ಆಗ ಕನ್ನಡದ ಮನಸ್ಸು ರೂಪುಗೊಳ್ಳುತ್ತದೆ. ಆದರೆ ಏಕರೂಪತೆ ಇಲ್ಲದ ಶಿಕ್ಷಣ, ಬಗೆ ಬಗೆಯ ಪಠ್ಯಕ್ರಮದ ಭೇದಭಾವದಲ್ಲಿ ಕನ್ನಡದ ಸಮಗ್ರ ಮನಸ್ಸು ರೂಪುಗೊಳ್ಳಲು ಸಾಧ್ಯವಿಲ್ಲ. ಭಾಷಾಭಿಮಾನವನ್ನು ಬಿತ್ತದಿದ್ದರೆ ಕನ್ನಡಕ್ಕೆ ಅಸ್ಮಿತೆಯೇ ಇರುವುದಿಲ್ಲ. ಕರ್ನಾಟಕ ಎಂಬುದು ಭಾಷೆ, ಭಾವನೆ, ಸಂಸ್ಕೃತಿ, ಅಸ್ಮಿತೆ, ಸಹಬಾಳ್ವೆಯ ಸಮಗ್ರತೆಯೇ ಆಗಿದೆ.
-ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಸಾಹಿತಿ, ಉಡುಪಿ

*
ವೈಖರಿಯೇ ಚೆಂದ
ಕರ್ನಾಟಕ ಎಂದೊಡನೆ ಥಟ್ಟನೆ ಕಣ್ಮುಂದೆ ಬರುವುದು ವೈವಿಧ್ಯ. ನದಿ ಅಥವಾ ಜಿಲ್ಲೆಯ ಗಡಿ ದಾಟುತ್ತಿದ್ದಂತೆ ಭಾಷೆಯ ವೈಖರಿ ಬದಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಶೈಲಿಯಲ್ಲಿ ಕನ್ನಡ ಮಾತನಾಡುವುದನ್ನು ಕಾಣಬಹುದು. ಕನ್ನಡದ ಈ ಎಲ್ಲ ಶೈಲಿಗಳಲ್ಲೂ ಒಂದು ರೀತಿಯ ಸೊಗಡಿದೆ. ಕೃಷಿ ಕ್ಷೇತ್ರದ ಅಧ್ಯಯನಕ್ಕಾಗಿ ಕಳೆದ ಮೂರು ವರ್ಷಗಳಿಂದ ಸತತವಾಗಿ ರಾಜ್ಯದ ನಾನಾ ಜಿಲ್ಲೆಗಳನ್ನು ಸುತ್ತಾಡುತ್ತಿದ್ದೇನೆ. ಹಳ್ಳಿಗಳಲ್ಲಿನ ಪರಿಸರ ಹಾಗೂ ಅಲ್ಲಿನ ಜನರ ಭಾಷಾ ಸಂಪತ್ತನ್ನು ಕಂಡು ಸಂತಸಪಟ್ಟಿದ್ದೇನೆ. ಒಂದು ಗೋಲಿ ಹುಳುವಿನ ಹೆಸರನ್ನು ತಿಳಿಯಲು ಹೊರಟಾಗ ಕನ್ನಡದಲ್ಲಿ ಅದಕ್ಕೆ ಹತ್ತಾರು ಹೆಸರುಗಳು ದೊರೆತವು. ಆಯಾ ಪ್ರದೇಶದ ಜನರು ಆ ಹುಳುವನ್ನು ಬೇರೆ ಬೇರೆ ಹೆಸರಿನಲ್ಲಿ ಗುರುತಿಸುವುದನ್ನು ತಿಳಿದೆ. ತೆಂಗಿನ ಮರವನ್ನು ಇಂಗ್ಲಿಷ್‌ನಲ್ಲಿ ಒಂದೇ ಹೆಸರಿನಿಂದ ಕರೆದರೆ, ಅದಕ್ಕೆ ಕನ್ನಡದಲ್ಲಿ ಸುಮಾರು 32 ಪದಗಳಿಂದ ಕರೆಯಬಹುದು. ಹೀಗೆ ಕನ್ನಡ ಭಾಷೆಯ ವೈವಿಧ್ಯ ಅಗಾಧ.
ಕನ್ನಡ ನಿಘಂಟಿನಲ್ಲಿ ಪದಗಳು ಕಡಿಮೆಯೇ. ಅದರ ಹೊರತಾಗಿ ಪದಗಳ ದೊಡ್ಡ ಗಂಟು ನಮ್ಮ ನೆಲಮೂಲದಲ್ಲಿದೆ. ಕೃಷಿಕರು, ವನವಾಸಿಗರಿಂದ ಕಲಿಯೋದು ಬಹಳಷ್ಟಿದೆ. ಅವರೇ ಕನ್ನಡ ಕಲಿಕೆಯ ದೊಡ್ಡ ಮೇಷ್ಟ್ರು.
–ಶಿವಾನಂದ ಕಳವೆ ಪರಿಸರವಾದಿ, ಉತ್ತರ ಕನ್ನಡ

*
ಭೌಗೋಳಿಕ ಎಂಬುದು ನೆಪ ಅಷ್ಟೆ
ಕರ್ನಾಟಕ ನನ್ನ ತವರೂರು ಎಂಬ ಅಭಿಮಾನ ತುಂಬಿದೆ. ಆದರೆ, ಕೆಲವರು ಇಲ್ಲೇ ಆಶ್ರಯ ಪಡೆದು ರಾಜ್ಯವನ್ನು ಒಡೆಯುವ ಮಾತನಾಡಿದಾಗ ಬೇಸರ ಉಂಟಾಗುತ್ತದೆ. ಏಕೀಕರಣದ ಉದ್ದೇಶವನ್ನೇ ಮರೆತು ವಿಭಜನೆ ದನಿ ಎತ್ತಿದಾಗ ಸಿಟ್ಟು ಬರುತ್ತದೆ. ಏಕೀಕರಣವಾಗಿ 60 ವರ್ಷ ಗತಿಸಿದರೂ ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಎಂಬ ಮಾತು ಕೇಳಿಬರುತ್ತಿದೆ. ಇದು ಮನಸ್ಸಿಗೆ ನೋವುಂಟು ಮಾಡುವ ಸಂಗತಿ. ಕರ್ನಾಟಕದ ಏಕೀಕರಣದ ಕೂಗು ಎದ್ದಿದ್ದೇ ಭಾಷೆಯಿಂದ. ನಾವು ಒಂದುಗೂಡಿದ್ದೂ ಭಾಷೆಯಿಂದ. ಭೌಗೋಳಿಕ ಎಂಬುದು ನೆಪ ಅಷ್ಟೆ. ರಾಜ್ಯೋತ್ಸವ ಎಂದರೆ ಈಗ ಪ್ರಶಸ್ತಿ, ರಜೆ, ಹಣ ವಸೂಲಿ ಎಂಬಂತಾಗಿದೆ. ನಾವೆಲ್ಲಾ ಭಾಷೆ ಉದ್ಧಾರ ಮಾಡಬೇಕೆಂಬ ಉದ್ದೇಶವನ್ನೇ ಮರೆಯುತ್ತಿದ್ದೇವೆ.
–ರಾಜಾಚಂದ್ರ ರಾಜವಂಶಸ್ಥ, ಮೈಸೂರು

*
ಸುರಕ್ಷಿತ ಭಾವ ತರುವ ನಾಡು
ಕರ್ನಾಟಕ ಎಂದಾಕ್ಷಣ ಸುರಕ್ಷಿತ ಭಾವವೊಂದು ಮನದಾಳದಲ್ಲಿ ಮೂಡುತ್ತದೆ. ನಮ್ಮ ವಾತಾವರಣವೂ ಅದೇ ರೀತಿ ಇದೆ. ಕರ್ನಾಟಕ ಎಂಬುದು ನಮ್ಮೊಳಗಿನ ಮನಸ್ಥಿತಿಯೇ ಹೊರತು ಬೇರೇನೂ ಅಲ್ಲ. ಇದು ಭೌಗೋಳಿಕ ಪಾತ್ರವನ್ನು ಮೀರಿದೆ. ಕರ್ನಾಟಕವನ್ನು ಸೀಮಿತವಾಗಿ ನೋಡಲು ಸಾಧ್ಯವೇ ಇಲ್ಲ. ಒಂದೊಂದು ಪ್ರದೇಶಕ್ಕೂ ಆಚಾರ, ವಿಚಾರಗಳು ಬೇರೆ ಬೇರೆಯಾಗಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುವ ಹಿಂದೆ ಕರ್ನಾಟಕ ಎಂಬುದು ಮನಸ್ಸಿನಲ್ಲಿರುವುದೇ ಕಾರಣ.
–ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠಾಧ್ಯಕ್ಷರು, ತುಮಕೂರು

*
ಎಲ್ಲೆ ಮೀರಿ ಬೆಳೆದ ಕನ್ನಡ
ಕರ್ನಾಟಕವನ್ನು ಒಂದು ಭಾಷೆಯ ಚೌಕಟ್ಟಿನೊಳಗೆ ನಿಲ್ಲಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಸ್ವೀಕರಿಸುವ, ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಧಾರಣಶಕ್ತಿ ಇರುವುದು ನಮ್ಮ ಕರ್ನಾಟಕಕ್ಕೆ ಮಾತ್ರ. 
ಯಾವುದೇ ರಾಜ್ಯ, ಹೊರ ದೇಶಗಳಿಗೆ ಹೋದಾಗ ನನ್ನ ಮನಸು ತುಡಿಯುವುದು ನಾನೊಬ್ಬ ಕನ್ನಡಿಗ ಎಂದೇ. ಇಂತಹ ಮನಸ್ಥಿತಿ ಪ್ರತಿಯೊಬ್ಬ ಕನ್ನಡಿಗನಿಗೂ ತಾಯಿ ಗರ್ಭದಿಂದಲೇ ಬಂದಿರುತ್ತದೆ. ಕರ್ನಾಟಕವೆಂದರೆ ವರನಟ ಡಾ.ರಾಜ್‌ಕುಮಾರ್‌ ಹಾಡಿರುವ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣು ಮೆಟ್ಟಬೇಕು...’ ಹಾಡು ಥಟ್ಟನೆ ನೆನಪಾಗುತ್ತದೆ. 
–ಸಂಚಾರಿ ವಿಜಯ್‌ ನಟ, ಚಿಕ್ಕಮಗಳೂರು

*
ಭಿನ್ನ ಭಿನ್ನವೀ ಕನ್ನಡ ನಾಡು
ಕರ್ನಾಟಕ ಎಂದಾಕ್ಷಣ ಕಣ್ಣ ಮುಂದೆ ಬರುವುದು ಸುಂದರ ತಾಣಗಳು, ಬಗೆಬಗೆ ತಿನಿಸುಗಳು. ಇದು ವಿವಿಧ ಸಂಸ್ಕೃತಿಗಳ ಕೇಂದ್ರ. ನಾನು ಸಾಕಷ್ಟು ಕಡೆ ಸುತ್ತಾಡಿದ್ದೇನೆ. ಆದರೆ ಕರ್ನಾಟಕದ ಕಬ್ಬಿನ ಗದ್ದೆ, ಇಲ್ಲಿಯ ರಾಗಿಮುದ್ದೆ, ಚನ್ನಪಟ್ಟಣದ ಗೊಂಬೆ, ಮಲೆನಾಡಿನ ಸೌಂದರ್ಯ, ಸಹ್ಯಾದ್ರಿ ಬೆಟ್ಟಗಳ ಶ್ರೇಣಿಯ ಸುಂದರ ತಾಣ, ಯಕ್ಷಗಾನದಂಥ ಜನಪದ ನೃತ್ಯ... ಇಂಥ  ದೃಶ್ಯಗಳು ಒಂದೇ ಕಡೆ ಸಿಗುವುದು ತೀರಾ ವಿರಳ ಎಂದೇ ಹೇಳಬೇಕು.
–ಹೆಂದ್ರಿಕ್ ಹರದಮನ್ ಕನ್ನಡ ಪ್ರೇಮಿ, ಡೆನ್ಮಾರ್ಕ್‌ ನಿವಾಸಿ

*
ಹೆಸರಿಗೆ ಮಾತ್ರ ನಮ್ಮ ನಾಡು
ಕರ್ನಾಟಕ, ಹೆಸರಿಗೆ ಮಾತ್ರ ಕನ್ನಡ ನಾಡಾಗಿ ಉಳಿದಿದೆ. ಇಂದು ಎಲ್ಲ ಕಡೆಯಿಂದಲೂ ಕನ್ನಡ ನೆಲ, ಭಾಷೆ, ಜಲದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ವಿಜಯಪುರ, ಬೆಳಗಾವಿಯಲ್ಲಿ ನಾವಾಡುವ ನುಡಿಯೇ ಮರಾಠಿ ಮಿಶ್ರಿತ ನುಡಿ, ಬೀದರ್‌್, ಕಲಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ನಾವಾಡುವ ನುಡಿಯೇ ತೆಲುಗು ಹಾಗೂ ಹಿಂದಿ ಮಿಶ್ರಿತ ನುಡಿ, ಕೋಲಾರ, ತುಮಕೂರು ಭಾಗದಲ್ಲಿ ನಾವಾಡುವ ನುಡಿ ತಮಿಳು ತೆಲುಗು ನುಡಿ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾವಾಡುವ ನುಡಿಯೇ ಮಲೆಯಾಳಿ ನುಡಿ ಎನ್ನುವಂತಾಗಿದೆ. ಅಚ್ಚ ಕನ್ನಡವನ್ನು ಹುಡುಕಬೇಕಿದೆ.  ಕನ್ನಡಪರ ಹೋರಾಟಗಾರರು ಬೆಂಗಳೂರಿನಲ್ಲಿ ಅಬ್ಬರಿಸಿದರೆ ಪ್ರಯೋಜನವಿಲ್ಲ. ಈ ನಾಡಿನ ಆತ್ಮಗೌರವ ಹೆಚ್ಚಿಸುವ ನಿಜ ಕೆಲಸಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಭೂಪಟದಲ್ಲಿ ಮಾತ್ರ ‘ಕನ್ನಡ ನಾಡು’ ಉಳಿಯಲಿದೆ.
ಬಿ.ಎ.ನಂಜಪ್ಪ ನಿವೃತ್ತ ಮೇಜರ್, ಕೊಡಗು

*
ಸಂಪೂರ್ಣತೆಯ ಪ್ರತಿರೂಪ
ಕರ್ನಾಟಕವೆಂದರೆ ಕೇವಲ ಭೌಗೋಳಿಕ ಪ್ರದೇಶದ ಸಿರಿತನವೊಂದೇ ಅಲ್ಲ, ಕನ್ನಡ ಭಾಷೆ ಎಲ್ಲೆಯಲ್ಲ, ಅದು ಇವೆಲ್ಲದರ ಸಮ್ಮಿಲನ. ಕರ್ನಾಟಕ ಎಂದಾಕ್ಷಣ ನನ್ನ ಮನಸ್ಸಿಗೆ  ಬರುವ  ಒಂದೇ ಶಬ್ದವೆಂದರೆ ‘ಸಂಪೂರ್ಣತೆ’. ವಿವಿಧ ಸಾಂಸ್ಕೃತಿಕ ಪರಂಪರೆ ಹೊಂದಿರುವ ಈ ನಾಡಿನಲ್ಲಿ, ಪ್ರತಿಯೊಂದು ಜನಾಂಗದವರೂ ತಮ್ಮ ತಮ್ಮ ಧಾರ್ಮಿಕ ಆಚರಣೆ, ಸಂಸ್ಕೃತಿ, ಸಾಹಿತ್ಯ ಉಳಿಸಿ ಬೆಳೆಸಿಕೊಳ್ಳುವಲ್ಲಿ ಸಾಧ್ಯವಾಗಿದೆ. ಸಾಮಾಜಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ಕರ್ನಾಟಕದ ಹೆಸರು ಮುಂಚೂಣಿಯಲ್ಲಿದೆ. ಹೀಗೆ ಪ್ರತಿಯೊಂದು ವಿಷಯದಲ್ಲೂ ಪರಿಪೂರ್ಣತೆ ಹೊಂದಿರುವ ನಮ್ಮ ಈ ಪವಿತ್ರವಾದ ಸ್ಥಳದಲ್ಲಿ ಹುಟ್ಟಿದ ನಾವೇ ಪುಣ್ಯವಂತರೆನಿಸುತ್ತದೆ.
–ಸೌಮ್ಯಾ ಬೀನಾ ಸಾಫ್ಟ್‌ವೇರ್‌ ಉದ್ಯೋಗಿ, ಬೆಂಗಳೂರು

*
ಕನ್ನಡಿಗರ ಸಹಿಷ್ಣುತೆ ಅನನ್ಯ
ಕರ್ನಾಟಕದಲ್ಲಿ ಸಹಿಷ್ಣುತೆಯು ಕನ್ನಡಿಗರ ಮನಸ್ಸಿಗೆ ಒಗ್ಗಿಕೊಂಡಿದೆ. ಕರ್ನಾಟಕ ಎಲ್ಲ ರಂಗದಲ್ಲೂ ಪ್ರಗತಿ ಸಾಧಿಸಿದೆ. ಆದರೆ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಕನ್ನಡಿಗರ ಹಕ್ಕುಗಳನ್ನು ಪ್ರತಿಪಾದಿಸುವ ಧೀಮಂತ ನಾಯಕರು ಬರಲಿಲ್ಲ ಎನ್ನುವುದು ದುರಂತ. ರಾಜ್ಯದಲ್ಲಿ ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಕಳೆದ ಒಂದು ದಶಕದಿಂದ ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್‌ನ ನೀತಿಗಳ ಮುಂದೆ ಕರ್ನಾಟಕದ ಸಾಧನೆಗಳು ಗೌಣವಾಗಿವೆ. ಉತ್ತಮ ಸಾಧನೆ ಮಾಡಿದ್ದರೂ ಆಂಗ್ಲ ವ್ಯಾಮೋಹದ ಪರಿಣಾಮ ಕನ್ನಡಕ್ಕೆ ಸೂಕ್ತ ಪ್ರಾಶಸ್ತ್ಯ ಸಿಗುತ್ತಿಲ್ಲ. ಇದು ಕನ್ನಡದ ಮಟ್ಟಿಗೆ ದೊಡ್ಡ ಹಿನ್ನಡೆ.
–ಕೆ. ವೆಂಕಟರಾಜು ರಂಗಕರ್ಮಿ, ಚಾಮರಾಜನಗರ

*
ಬೀಸಬೇಕಿದೆ ಬದಲಾವಣೆಯ ಗಾಳಿ

ನಮ್ಮ ಮುತ್ತಾತಂದಿರು ಚಿನ್ನ, ಮುತ್ತು, ರತ್ನಗಳನ್ನು ಸೇರಿನಲ್ಲಿ ಅಳೆದು ತೂಗುತ್ತಿದ್ದರು ಎಂದು ಕೇಳುವುದಕ್ಕೇ ರೋಮಾಂಚನವಾಗುತ್ತದೆ. ತಾತಂದಿರ ಕಾಲಕ್ಕೆ ಇದೆಲ್ಲ ಹೋಗಿ, ಹಾಲು, ಮೊಸರು, ತುಪ್ಪವನ್ನು ಸೇರಿನಲ್ಲಿ ಅಳೆದು ತೂಗುವ ಕಾಲ ಬಂತು. ನಮ್ಮ ಕಾಲಕ್ಕೆ ಅದನ್ನೂ ಕಾಣುವುದು ಅಪರೂಪವಾಗುತ್ತಿದೆ. ಇನ್ನು ಮುಂದಿನ ತಲೆಮಾರಿಗೆ ಉಳಿಯುವುದಾದರೂ ಏನು ಎಂಬ ಆತಂಕ ಕಾಡುತ್ತಿದೆ.
ರಾಜ್ಯದಲ್ಲಿನ ಕೈಗಾರಿಕಾಮುಖಿಯಾದ ಬೆಳವಣಿಗೆ ಇಡೀ ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡಹೊರಟಿರುವುದು ಆತಂಕದ ಸಂಗತಿ. ರಾಜ್ಯದಲ್ಲಿ ಕುಡಿಯುವ ನೀರು, ವಿದ್ಯೆ ಸಹಿತ ಎಲ್ಲವೂ ಮಾರುವ–ಕೊಳ್ಳುವ ಸರಕಾಗಿ ಹೋಗಿದೆ. ನಾವೆಲ್ಲ ಸಮಾಜದಲ್ಲಿನ ಅವ್ಯವಸ್ಥೆ ಕಂಡು ಬೇಸತ್ತು ಚಳವಳಿಗೆ ಧುಮುಕಿದವರು. ಇವತ್ತಿನ ಸಂದರ್ಭಕ್ಕೆ ಮತ್ತೆ ಅಂಥದ್ದೊಂದು ಹೋರಾಟವು ರಾಜ್ಯದಲ್ಲಿ ರೂಪುಗೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಯುವ ಜನರನ್ನು ಸಂಘಟಿಸಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. 
–ಬಿ. ಅನಸೂಯಮ್ಮ ರೈತ ಪರ ಹೋರಾಟಗಾರ್ತಿ, ರಾಮನಗರ

*
ಭಾವನಾತ್ಮಕ ಬೆಸುಗೆ ‘ಕನ್ನಡ’
ಕರ್ನಾಟಕ ಎನ್ನುವುದು ನನಗೆ ಭಾವನಾತ್ಮಕ ಬೆಸುಗೆ. ದೆಹಲಿ, ಪುಣೆ, ಕೋಲ್ಕತ್ತ ಇತ್ಯಾದಿ ನಗರಗಳಿಗೆ ಹಾಡಲು ಹೋದಾಗ ಕಾರ್ಯಕ್ರಮದಲ್ಲಿ ಕೆಲವರಾದರೂ ಕನ್ನಡಿಗರು ಇರುತ್ತಾರೆ. ಅವರು ಕನ್ನಡದ ಹಾಡುಗಳನ್ನು ಅಪೇಕ್ಷೆ ಪಟ್ಟು ಕೇಳುತ್ತಾರೆ. ಅದು ಭಾಷೆಯ ಮೇಲಿನ ಪ್ರೀತಿ. ಕೆಲವು ಮಂದಿ ಸಾಹಿತ್ಯದ ಅರ್ಥವನ್ನು ಹೇಳುವಂತೆ ಕೇಳಿ ಸಂತೋಷ ಪಡುವುದನ್ನು ನಾನು ಕಂಡಿದ್ದೇನೆ. ಪ್ರಸ್ತುತ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆ ಅನಿವಾರ್ಯವಾದರೂ, ಕನ್ನಡ ಕಲಿಸುವ, ಬಳಸುವ ಮತ್ತು ಉಳಿಸುವ ಪ್ರಯತ್ನ ನಡೆಯಬೇಕಿದೆ.
– ಪಂಡಿತ್ ಡಾ. ಎಂ.ವೆಂಕಟೇಶ ಕುಮಾರ ಹಿಂದೂಸ್ತಾನಿ ಗಾಯಕ, ಧಾರವಾಡ

*
ವಚನಗಳ ಅನುಸರಿಸಿದರೆ ಸಾಕು...
ಕರ್ನಾಟಕ ವಿವಿಧ ಭಾಷಿಕರನ್ನು ತಮ್ಮವರೆಂದು ಒಪ್ಪಿಕೊಂಡು ಅಪ್ಪಿಕೊಂಡಿದೆ. ಕಾವೇರಿ, ಮಹಾದಾಯಿ ವಿಷಯಗಳಲ್ಲಿ ಎಷ್ಟೇ ಸಂಘರ್ಷ ತಲೆದೋರಿದರೂ ಭಾಷಾ ಸಂಘರ್ಷ ನಡೆದಿಲ್ಲ. ಕನ್ನಡ ಸಾಹಿತ್ಯದ ಮೂಲಕ ರಾಜ್ಯವು ಇಡೀ ವಿಶ್ವಕ್ಕೆ ಕೊಡುಗೆ ನೀಡಿದೆ. ಬಸವಣ್ಣ, ಕನಕದಾಸರು, ಪುರಂದದಾಸರು ಲೋಕಕಲ್ಯಾಣ ಬಯಸಿ, ಬರೆದವರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದಲ್ಲಿರುವ ಸೂತ್ರಗಳನ್ನು ಪಾಲಿಸಿದರೆ ದೇಶಕ್ಕೆ ಕಾನೂನಿನ ಅಗತ್ಯವೇ ಇರುವುದಿಲ್ಲ. ಈ ಮಣ್ಣಿನ ಗುಣವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಷ್ಟೆ.
– ಸುಧೀರ್‌ಸಿಂಹ ಘೋರ್ಪಡೆ ಹಿರಿಯ ವಕೀಲ, ಗದಗ

*
ಕರುನಾಡು ನೆಮ್ಮದಿಯ ಬೀಡು
ಕನ್ನಡ ನಾಡು ಕನ್ನಡಿಗರಿಗೆ ಮಾತ್ರವಲ್ಲ, ಎಲ್ಲ ಜಾತಿ, ಧರ್ಮ, ಭಾಷೆಗಳ ಜನರಿಗೆ ನೆಮ್ಮದಿ ಕೊಟ್ಟಿರುವ ಭೂಮಿ. ಆದರೆ, ಸ್ವಾರ್ಥಕ್ಕಾಗಿ ನಾಡನ್ನು ಬಲಿ ಕೊಡುವಂತಹ ಕೆಲವು ರಾಜಕಾರಣಿಗಳೂ ಇದ್ದಾರೆ. ಜಾತಿ, ಮತ, ಸಂಕುಚಿತ ಮನೋಭಾವವನ್ನು ಜನರಲ್ಲಿ ಬಿತ್ತಿ ತಮ್ಮ ಸ್ವಾರ್ಥ ಸಾಧನೆಗೆ ಕನ್ನಡಿಗರನ್ನು ಮತ್ತು ನಾಡನ್ನು ದುರುಪಯೋಗ ಮಾಡುತ್ತಿದ್ದಾರೆ.
ಕನ್ನಡ ಮತ್ತು ಕರ್ನಾಟಕದ ಹೆಸರಿನಲ್ಲಿ ರೂಪುಗೊಂಡಿರುವ ಸಂಘಟನೆಗಳು ಬಹುಮಟ್ಟಿಗೆ ಭಾಷಾ, ಪ್ರಾಂತದ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ಆದರೆ, ಕೆಲವರು ಸಂಘಟನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂತಹದ್ದು ಆಗಬಾರದು. ನಮ್ಮ ಕರ್ನಾಟಕ ನೆಮ್ಮದಿಯ ನೆಲೆಯಾಗಬೇಕು.
–ಎನ್‌.ಶಂಕ್ರಪ್ಪ ರಾಜಕಾರಣಿ, ರಾಯಚೂರು

*
ಇನ್ನಷ್ಟು ಮುಂದುವರೆಯಬೇಕು
ರಾಜ್ಯ ಪುನರ್‌ವಿಂಗಣೆಯ ನಂತರದ 60 ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಸಾಹಿತ್ಯ, ಕೈಗಾರಿಕೆ, ಕೃಷಿ, ಆರ್ಥಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದೆ. ಬಹುಭಾಷಿಕರು ಹಾಗೂ ಬಹುಸಂಸ್ಕೃತಿಯ ಜನರ ನೆಲೆಯಾಗಿ ರೂಪುಗೊಂಡಿದೆ. ಆದರೆ ಈ ನೆಲದ ಮೂಲ ಭಾಷೆಯಾಗಿರುವ ಕನ್ನಡವನ್ನು ಬಲಪಡಿಸುವ ಕೆಲಸ ಆಗಬೇಕಾಗಿದೆ. ಅನ್ನ ನೀಡುವ ಭಾಷೆಯನ್ನಾಗಿ ರೂಪಿಸಬೇಕಾಗಿದೆ. ಉದ್ಯೋಗ ಅವಕಾಶ ಸೃಷ್ಟಿಯಾದರೆ ಸಹಜವಾಗಿ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅನ್ಯಭಾಷಿಕರು ಕೂಡ ಕನ್ನಡ ಬಳಸುವಂತಹ ವಾತಾವರಣ ಸೃಷ್ಟಿಸಬೇಕಾಗಿದೆ. ಬೆಂಗಳೂರು ಸುತ್ತಮುತ್ತ ಮಾತ್ರ ಗಮನ ಹರಿಸದೇ ಉತ್ತರ ಕರ್ನಾಟಕದ ಕಡೆಗೂ ಸರ್ಕಾರ ಗಮನ ಹರಿಸಬೇಕಾಗಿದೆ. 
– ಸರಜೂ ಕಾಟ್ಕರ್‌ ಪತ್ರಕರ್ತ, ಬೆಳಗಾವಿ

*
ಶಿಲ್ಪ ಸಾಮ್ರಾಜ್ಯ

ಸಾಮ್ರಾಜ್ಯಶಾಹಿ ಆಳಿದರೂ ಶಿಲ್ಪ ಸಾಮ್ರಾಜ್ಯ ಅಮರವಾಗಿರುವ ರಾಜ್ಯ ಕರ್ನಾಟಕ. ಎಲ್ಲಾ ಸಂಪತ್ತು ಹೊಂದಿದ್ದರೂ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡರೂ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಹೊರ ರಾಜ್ಯದ ಪ್ರವಾಸಿಗರಿಗೆ ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಆಹಾರ ಪದ್ಧತಿ ಪರಿಚಯಿಸಿದರೆ ಕರ್ನಾಟಕದ ಮಹತ್ವದ ಅರಿವು ಮೂಡಿಸಲು ನೆರವಾಗುತ್ತದೆ. ಅತಿಥಿದೇವೋಭವ ಕಲ್ಪನೆ ಅಳವಡಿಸಿಕೊಂಡು, ರಾಜ್ಯದ ಇತರೆ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಿದರೆ ನಮ್ಮ ಕರ್ನಾಟಕ ನಕ್ಷೆಗೂ ಮೀರಿ ಬೆಳೆಯುತ್ತದೆ.
–ತಮ್ಮಣ್ಣಗೌಡ ಜಿಲ್ಲಾ ಪ್ರವಾಸಿ ವಿಶೇಷ  ಸಲಹೆಗಾರ, ಹಾಸನ

*
ಏಕತೆಗೆ ಇನ್ನೊಂದು ಹೆಸರು
ಅಣುವಿನಲ್ಲಿ ಮಹಾಶಕ್ತಿ ಇರುವ ರೀತಿ ಕರ್ನಾಟಕ ಶಬ್ದ ಕೂಡ ಇಡೀ ಕನ್ನಡ ಭಾಷಿಕರನ್ನು ಪ್ರತಿನಿಧಿಸುವ ಶಕ್ತಿಯದ್ದಾಗಿದೆ. ಆದರೆ ಕನ್ನಡದ ಮೂಲವಾದ ಇತಿಹಾಸ ಪರಂಪರೆಯ ಸಂರಕ್ಷಣೆಯಲ್ಲಿ ನಾವು ಸೋತಿದ್ದೇವೆ ಅನ್ನಿಸುತ್ತದೆ. ಯಾದಗಿರಿ, ಕಲಬುರ್ಗಿ, ಬೀದರ್‌ ಸೇರಿದಂತೆ ಪ್ರತಿಯೊಂದು ಜಿಲ್ಲೆಗಳಲ್ಲಿ ವೈವಿಧ್ಯಮಯ ಕೋಟೆಗಳಿವೆ. ಆದರೆ ಅವುಗಳನ್ನು ಸಂರಕ್ಷಿಸುವ ಕೆಲಸವಾಗುತ್ತಿಲ್ಲ. ದೇಶ, ವಿದೇಶಗಳನ್ನು ಸುತ್ತಿದ ಅನುಭವ ನನಗಿದೆ. ಕರ್ನಾಟಕದಲ್ಲಿ ಕಾಣುವ ವೈವಿಧ್ಯತೆ ಬೇರೆ ಕಡೆಗಳಲ್ಲಿ ಇಲ್ಲ. ಪುರಾತನ ದೇವಸ್ಥಾನಗಳು ವಾಸ್ತುಶಿಲ್ಪ ಎಂಜಿನಿಯರುಗಳಿಗೆ ಅಧ್ಯಯನಕ್ಕೆ ನೆರವಾಗಿವೆ. ಶ್ರೀಮಂತ ಇತಿಹಾಸ ಹೊಂದಿರುವ ಕರ್ನಾಟಕದಲ್ಲಿ ಇರುವುದು ನನಗೆ ಸದಾ ಹೆಮ್ಮೆ ಇದೆ. ನಾಡಿನ ಕೀರ್ತಿ ಅಜರಾಮರವಾಗಿ ಉಳಿಸಲು ಕಾರಣವಾಗಿರುವ ಕರ್ನಾಟಕದ ಐತಿಹಾಸಿಕ ಕೋಟೆ, ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕಿದೆ. ನಮ್ಮ ಭಾಷೆ ಭಿನ್ನಭಿನ್ನ ಎನಿಸಿದರೂ ನಾವೆಲ್ಲ ಒಂದೇ ಎನ್ನುವ ಮನೋಭಾವ ಹಿಡಿದಿಟ್ಟಿರುವ ಒಂದು ಶಬ್ದ ಕರ್ನಾಟಕ.
–ಬಸವರಾಜ ಖಂಡೇರಾವ್‌ ವಾಸ್ತುಶಿಲ್ಪ ಎಂಜಿನಿಯರ್‌, ಕಲಬುರ್ಗಿ

*
ನಮ್ಮ ನಾಡೇ ನಮಗೆ ಚೆಂದ
ಬೇರೆ ಪ್ರದೇಶಗಳಿಗೆ ಹೋಲಿಸಿದರೆ ನಮ್ಮ ನಾಡು ತುಂಬಾ ಚೆನ್ನಾಗಿದೆ. ಮಣ್ಣು, ಹವಾಗುಣ ಎಲ್ಲವೂ ಇಲ್ಲಿ ಉತ್ತಮ. ಹಾಗಿದ್ದೂ ನಾವು ಗಡಿ ಭಾಷೆಯ ವಿಚಾರದಲ್ಲಿ ಏಕೆ ಹೊಡೆದಾಡುತ್ತೇವೋ ಗೊತ್ತಿಲ್ಲ. ನನ್ನ ಜತೆ ಬೇರೆ ರಾಜ್ಯ, ಭಾಷೆಯವರೂ ದುಡಿಯುತ್ತಿದ್ದಾರೆ. ಎಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತೇವೆ. ಇರುವ ನಾಲ್ಕು ದಿನದ ಬಾಳಿನಲ್ಲಿ ಏಕೆ ಜಗಳ?. ಈ ವಿಷಯದಲ್ಲಿ ನಾಡಿನ ಜನರ ಬದುಕು ಇನ್ನಷ್ಟು ಸುಧಾರಣೆ ಆಗಬೇಕು. ಆಗ ನಾವು ಇನ್ನಷ್ಟು ಮುಂದುವರಿಯಲು ಸಾಧ್ಯ.
– ಪ್ರಭು ಪೂಜಾರ್‌ ಮುದ್ದಾಬಳ್ಳಿ ಕಾರ್ಮಿಕ, ಕೊಪ್ಪಳ

*
ಕನ್ನಡದ ಶಾಲೆಗಳು ಉಳಿಯಲಿ
ಕರ್ನಾಟಕವು ದೇಶದಲ್ಲೇ ಅತ್ಯಂತ ಪ್ರಜಾಪ್ರಭುತ್ವವಾದಿ ನೆಲ. ಹಲವು ಸಮಸ್ಯೆಗಳ ನಡುವೆಯೂ ಏಕತೆ ಉಳಿಸಿಕೊಂಡ ನಾಡು. ಹೀಗಾಗಿಯೇ ‘ಕಟ್ಟುತ್ತೇವಾ ನಾವು ಕಟ್ಟುತ್ತೇವಾ’ ಎಂದು ನಾನು ಹಾಡು ಬರೆದೆ. ಕೆಲವೊಮ್ಮೆ ನಮ್ಮ ಭಾವನಾತ್ಮಕ ಕರ್ನಾಟಕಕ್ಕೆ ಇಂದಿನ ಕೆಲವು ಬೆಳವಣಿಗೆಗಳು ವ್ಯತಿರಿಕ್ತದಂತೆ ತೋರುತ್ತದೆ. ಆದರೆ, ಅದನ್ನು ಮೀರಿ ಕರ್ನಾಟಕವನ್ನು ಕಟ್ಟಬೇಕು.  ಭಾವನಾತ್ಮಕ ಬಂಧನ ಇಲ್ಲದಿದ್ದರೆ ನಾಡು ಕಟ್ಟಲು ಸಾಧ್ಯವಿಲ್ಲ. ಈಗ ಕನ್ನಡದ ಉಳಿವಿಗಾಗಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ. ಆ ನಿಟ್ಟಿನ ಕಾರ್ಯಕ್ರಮಗಳು ಇಂದಿನ ತುರ್ತು. ಈ ಬಗ್ಗೆ ನಾಗರಿಕರು ಚಿಂತನೆ ನಡೆಸಬೇಕಾಗಿದೆ. ‘ಹಚ್ಚೇವು ಕನ್ನಡದ ದೀಪ...’ ಎಂಬ ಹಾಡು ಕೇಳಿದಾಗ ಮನಸ್ಸಿನಲ್ಲಿದ್ದ ಸಾವಿರಾರು ಜಂಜಾಟಗಳು, ನೋವು– ನಲಿವುಗಳು, ಕೆಜೆಪಿ– ಬ್ರಿಗೇಡ್, ಕಾಂಗ್ರೆಸ್–ಬಿಜೆಪಿ, ಬುರ್ಖಾ–ಶಾಲು, ಜಲ ವಿವಾದ ಇತ್ಯಾದಿಗಳೆಲ್ಲ ಮರೆತು ಹೋಗಿ ಒಂದು ‘ಜ್ಯೋತಿ’ ಕಾಣುತ್ತದೆ. ಅದೇ ಕರ್ನಾಟಕ.
-ಸತೀಶ ಕುಲಕರ್ಣಿ ಹಿರಿಯ ಕವಿ, ಹಾವೇರಿ

*
ಹಬ್ಬಲಿ ಪ್ರೀತಿಯ ಬಳ್ಳಿ
ಏಕೀಕರಣದ ನಂತರ ಭೌಗೋಳಿಕವಾಗಿ ರಾಜ್ಯದ ಎಲ್ಲೆ ಗುರುತಿಸಿದರೂ, ಕನ್ನಡಿಗರು ಮಾತ್ರ ಈಗಲೂ ಬೇರೆ ಬೇರೆ ರಾಜ್ಯಗಳ ನಡುವೆ ಹಂಚಿಹೋಗಿದ್ದಾರೆ. ಹಾಗಾಗಿಯೇ ಇಂದಿಗೂ ಪರಿಪೂರ್ಣ ಕರ್ನಾಟಕ ರಚನೆ ಸಾಧ್ಯವಾಗಿಲ್ಲ. 

ಭಾಷೆಯ ಚೌಕಟ್ಟಿಗೆ ಭೂಗೋಳ ಬೆಸೆದರೆ ಮಾತ್ರ ಪರಿಪೂರ್ಣವಾಗುವುದಿಲ್ಲ. ಅದರ ಉಳಿವಿಗೆ ತುಡಿತವೂ ಇರಬೇಕು. ಉದಾಹರಣೆಗೆ, ಅಮೆರಿಕದಲ್ಲಿ ನೆಲೆಸಿದ ಕನ್ನಡಿಗರ ಗುಂಪು ಅಲ್ಲೇ ಹೊಸ ಕರ್ನಾಟಕ ಸೃಷ್ಟಿಸುತ್ತದೆ. ಅವರು  ಕನ್ನಡ ಸಮ್ಮೇಳನ ನಡೆಸುತ್ತಾ ಭೌಗೋಳಿಕ ಚೌಕಟ್ಟನ್ನು ವಿಶ್ವಕ್ಕೇ ವಿಸ್ತರಿಸುತ್ತಿದ್ದಾರೆ.
  –ಎಚ್‌.ಬಿ.ಪದ್ಮಾವತಿ ಶಿವಾನಂದ ಗೃಹಿಣಿ, ಶಿವಮೊಗ್ಗ

*
ಆಳುವವರಿಗೆ ಬೇಕು ಮನಸ್ಸು
ಆಡಳಿತಾತ್ಮಕ ಹಾಗೂ ರಾಜಕೀಯ ಕಾರಣದ ನೆಪವೊಡ್ಡಿ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಹಳೇ ಮೈಸೂರು ಪ್ರಾಂತ್ಯಗಳೆಂದು ಕರೆದು ನಾಡು ಏಕೀಕರಣಗೊಂಡ ದಿನದಿಂದಲೇ ಭಿನ್ನತೆಯ ಬೀಜ ಬಿತ್ತಲಾಯಿತು. ಅದೀಗ ಹೆಮ್ಮರವಾಗಿ ಪ್ರತ್ಯೇಕ ರಾಜ್ಯದ ಕೂಗಿಗೆ ಬಲ ನೀಡುತ್ತಿದೆ. ಮೊದಲು ಆ ಭಾವನೆ ಹೋಗಲಾಡಿಸಬೇಕಿದೆ. ಆಳುವವರಿಗೆ ಅಮ್ಮನ ಹೃದಯ ಬೇಕಿದೆ. 70ರ ದಶಕದಲ್ಲಿ ಹಳೆಯ ಬಾಗಲಕೋಟೆಯ ದರ್ಬಾರ್‌ಹಾಲ್‌ ಬಳಿಯ ನಾಟಕ ಕಂಪೆನಿಗಳಿಗೆ ಬರುತ್ತಿದ್ದ ವರನಟ ಡಾ.ರಾಜಕುಮಾರ, ನರಸಿಂಹರಾಜು, ಪಂಡರೀಬಾಯಿ, ರಮಾದೇವಿ, ಲೀಲಾವತಿ ಮೊದಲಾದವರು ರಾಜ್ಯೋತ್ಸವ ಆಚರಣೆಯಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದರು. ಆಗೆಲ್ಲಾ ರಾಜ್ಯೋತ್ಸವ ಎಂದರೆ ಮನೆ ಮನೆಯ ಉತ್ಸವ ಆಗಿತ್ತು. ಓಣಿ–ರಸ್ತೆಗಳಲ್ಲಾ ತಳಿರು–ತೋರಣಗಳಿಂದ ಸಿಂಗಾರಗೊಂಡು ಊರ ಹಬ್ಬದ ರೀತಿ ಕಾಣುತ್ತಿತ್ತು. ಎಲ್ಲರನ್ನು, ಎಲ್ಲವನ್ನೂ ಒಳಗೊಳ್ಳುವುದು ಸಮಗ್ರತೆ ಆ ದಿಕ್ಕಿನಲ್ಲಿ ರಾಜ್ಯೋತ್ಸವ ಮತ್ತೆ ಊರ ಹಬ್ಬವಾಗಬೇಕಿದೆ.
–ಅನಂತರಾವ್ ಬರಗಿ ಛಾಯಾಚಿತ್ರಗಾರ, ಬಾಗಲಕೋಟೆ

*
ತಾರತಮ್ಯ ಬಿಟ್ಟರೆ ಎಲ್ಲವೂ ಸುಗಮ

ಜನರ ಭಾವನೆಗಳ ಏಕತೆ ದೃಷ್ಟಿಯಿಂದ ರಾಜ್ಯ ಇನ್ನಷ್ಟು ಗಟ್ಟಿಯಾಗಬೇಕು. ಆಡಳಿತ ನಡೆಸುವವರು ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ, ಹಳೇ ಮೈಸೂರಿನ ಅಭಿವೃದ್ಧಿ ವಿಷಯದಲ್ಲಿ ಕೆಲವು ತಾರತಮ್ಯ ಮಾಡುತ್ತಿದ್ದಾರೆ. ಇದು ಜನರಲ್ಲಿಯೂ ಆಯಾ ಪ್ರಾದೇಶಿಕತೆ ಆಧಾರದ ಮೇಲೆ ಪ್ರತ್ಯೇಕತೆಯ ಭಾವ ಮೂಡಿಸುತ್ತಿದೆ. ರಾಜ್ಯ ಉದಯವಾದಾಗ ಎಲ್ಲರಲ್ಲಿಯೂ ಒಂದೇ ಎಂಬ ಭಾವನೆ ಇತ್ತು. ಅಭಿವೃದ್ಧಿ ತಾರತಮ್ಯದಿಂದಾಗಿ ಅಪಸ್ವರಗಳು ಹೆಚ್ಚಾಗ ತೊಡಗಿವೆ. ಎಲ್ಲ ಭಾಗವನ್ನೂ ಸಮಾನವಾಗಿ ಕಾಣಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಿದರೆ ನಮ್ಮ ನಾಡು ಏಳಿಗೆ ಪಡೆಯುವುದರಲ್ಲಿ ಸಂದೇಹವೇ ಇಲ್ಲ.
–ಶಂಭೂನಹಳ್ಳಿ ಸುರೇಶ್‌ ರೈತ ಮುಖಂಡ, ಮಂಡ್ಯ

*
ಸಮೃದ್ಧಿಯ ತವರೂರು
ಕರುನಾಡು, ಕರ್ನಾಟಕ ಎಂಬ ಶಬ್ಧ ಕಿವಿಗೆ ಬೀಳುತ್ತಿದ್ದಂತೆ ಮೈಮನ ರೋಮಾಂಚನಗೊಳ್ಳುತ್ತದೆ. ಸಂಗೀತ ಕಲಿಕೆಯ ಅದರಲ್ಲೂ ಗಾಯನ ವಿದ್ಯೆ ಕಲಿಕೆಯ ಆರಂಭದಲ್ಲೇ ‘ವಾತಾಪಿ ಪುರ ಗಣಪತೆ ನಮಸ್ತುತೆ...’ ಎಂಬ ಸ್ತೋತ್ರವನ್ನು ಸಂಗೀತದ ಎಲ್ಲ ವಿದ್ಯಾರ್ಥಿಗಳು ಪಠಿಸುವ ಮೂಲಕ ಕನ್ನಡದ ನೆಲವನ್ನು ಸ್ಮರಿಸುವುದನ್ನು ಕೇಳಿದ್ದೇವೆ. ಅಷ್ಟೇ ಸಾಕು ಕರ್ನಾಟಕದ ವೈಭವವನ್ನು  ತಿಳಿಸಲು. ನೈಸರ್ಗಿಕ ಸಿರಿವಂತಿಕೆಯ ನಾಡಿದು. ಶರಣರು–ಸಂತರು–ದಾಸರು ಜನ್ಮವೆತ್ತ ಬೀಡಿದು. ಧಾರ್ಮಿಕ ಕ್ಷೇತ್ರಗಳ ಪುಣ್ಯಭೂಮಿಯಿದು. ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ವೈಶಿಷ್ಟ್ಯತೆ ಒಳಗೊಂಡಿರುವ ಸಮೃದ್ಧಿಯ ತವರೂರಿದು. 
-ಶರಣಪ್ಪ ಕಂಚ್ಯಾಣಿ ಮಕ್ಕಳ ಸಾಹಿತಿ, ವಿಜಯಪುರ

*
ಕ್ಷೀಣಿಸುತ್ತಿದೆ ಭಿನ್ನತೆ
ಕೆಲವು ವರ್ಷಗಳ ಹಿಂದಿನವರೆಗೂ ಕನ್ನಡದಲ್ಲಿ ಧಾರವಾಡ ಕನ್ನಡ, ಮಂಗಳೂರು ಕನ್ನಡ, ಮೈಸೂರು ಕನ್ನಡ ಎಂಬ ಪ್ರಾದೇಶಿಕ ಭಿನ್ನತೆಗಳಿದ್ದವು. ಆದರೆ ವಿಜ್ಞಾನದ  ಸಂಪರ್ಕ, ಸಾರಿಗೆ ಸಂಪರ್ಕ, ಸುದ್ದಿ ಮಾಧ್ಯಮ ಸಂಪರ್ಕಗಳಿಂದ ಮೊದಲಿದ್ದ ತೀವ್ರ ಭಿನ್ನತೆಗಳು ಇಂದು ಮಾಯವಾಗುತ್ತಿರುವುದನ್ನು ಕಾಣುತ್ತೇವೆ. ಕಾಲಕ್ರಮೇಣ ಈ ಭಿನ್ನತೆ ಸಂಪೂರ್ಣವಾಗಿ ಮಾಯವಾದರೂ ಆಶ್ಚರ್ಯಪಡಬೇಕಾಗಿಲ್ಲ. ಇದು ಒಳ್ಳೆಯ ಬೆಳವಣಿಗೆಯೇ ಹೌದಲ್ಲವೇ?
–ಎಂ.ನಂಜುಡಸ್ವಾಮಿ ಐಜಿಪಿ, ದಾವಣಗೆರೆ

*
ಹೊಸ ದಾರಿಗೆ ಹೊರಳಿಕೊಳ್ಳಲಿ
ತಮಿಳು, ತೆಲುಗು, ಮರಾಠಿ ಸೇರಿದಂತೆ ಹಲವು ಭಾಷಿಕ ಜನರೊಡನೆ ಜೀವಿಸುತ್ತಿರುವ ನಾವೆಲ್ಲರೂ ನಮ್ಮ ರಾಜ್ಯವನ್ನು ಕನ್ನಡಾಭಿಮಾನದ ಸೀಮಿತ ಆಲೋಚನೆಗೆ ತಕ್ಕಂತೆ ಗ್ರಹಿಸದೇ, ಸಮಗ್ರವಾಗಿ, ಅದು ಇರುವ ರೀತಿಯಲ್ಲೇ, ಬಹುಸಾಂಸ್ಕೃತಿಕ ನೆಲೆಗಳಲ್ಲಿ ಗ್ರಹಿಸಬೇಕು.
ಕರ್ನಾಟಕದ ಏಳಿಗೆಗೆ ಇರುವ ಅಡೆ ತಡೆಗಳು ಹಾಗೂ ವಿವಾದಗಳ ಆಚೆಗೆ ಕರ್ನಾಟಕ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಹೊಸ ದಾರಿಗಳಿಗೆ ಹೊರಳಿಕೊಳ್ಳುವುದು ಅವಶ್ಯ. ರಾಜ್ಯೋತ್ಸವದ ಸಂಭ್ರಮವು ಅದಕ್ಕೆ ಅವಕಾಶ ನೀಡುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು.
–ಡಾ.ಡಿ.ಎಲ್‌.ರಮೇಶ್‌ ಗೋಪಾಲ್‌
ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆ ಅಧ್ಯಕ್ಷ, ಬಳ್ಳಾರಿ

*
ನಾ ಕಂಡಂತೆ...
ಪ್ರಾಗೈತಿಹಾಸಿಕವಾಗಿ ಸಮೃದ್ಧತೆಯನ್ನು ಹೊಂದಿದ ರಾಜ್ಯ ನಮ್ಮದು. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಸಮಾಜೋ-ಧಾರ್ಮಿಕ ಕ್ರಾಂತಿಗೆ ಕಾರಣವಾಗಿದ್ದು ಅನುಭವ ಮಂಟಪದಲ್ಲಿದ್ದ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ. ಇವು ಇಂದಿಗೂ ಹೆಚ್ಚು ಅಗತ್ಯವೆನಿಸಿದೆ. ಕಂದಾಚಾರ, ಮೌಢ್ಯಕ್ಕೆ ತಕ್ಕ ಚಿಕಿತ್ಸೆ ವಚನ ಸಾಹಿತ್ಯ. ಇಂಥ ಕೊಡುಗೆ ನೀಡಿರುವುದು ನಮ್ಮ ಕರ್ನಾಟಕ ಎನ್ನುವುದು ಹೆಮ್ಮೆಯ ವಿಷಯ.
ಪಾಟೀಲ ಬಸನಗೌಡ ಹುಣಸಗಿ, ವ್ಯಾಪಾರಿ, ಯಾದಗಿರಿ

*
ರಕ್ಷಣೆಗೆ ಬದ್ಧತೆ ಬೇಕು
ಪರಭಾಷೆಗಳ ದಾಳಿಯಿಂದ ಕನ್ನಡಿಗರು ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿ ಮೈಗೂಡಿಸಿಕೊಂಡು ಸ್ವಂತಿಕೆ ಮರೆಯುತ್ತಿದ್ದಾರೆ. ಇದರಿಂದ ನಾಡಿನ ಸಂಸ್ಕೃತಿ ನಶಿಸುತ್ತಿದೆ. ಇಂಗ್ಲಿಷ್‌ನ ಪ್ರಭಾವದಿಂದ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ.
ನ್ಯಾಯಾಲಯಗಳು ಸಹ ಜಾಗತೀಕರಣದ ಹೆಸರಿನಲ್ಲಿ ಇಂಗ್ಲಿಷ್‌ನ ಪರವಾಗಿ ಮಾತನಾಡುತ್ತಿವೆ. ಸರ್ಕಾರ ಹಾದಿ ಬೀದಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅನುಮತಿ ನೀಡುತ್ತಿದೆ. ಸರ್ಕಾರದ ಕನ್ನಡ ವಿರೋಧಿ ಧೋರಣೆಯಿಂದ ಕನ್ನಡದ ಶಾಲೆಗಳು ಮುಚ್ಚುತ್ತಿವೆ. ಭವಿಷ್ಯದಲ್ಲಿ ಬಡವರು ಮತ್ತು ದಲಿತರಿಗೆ ಶಿಕ್ಷಣ ಗಗನ ಕುಸುಮವಾಗಲಿದೆ. ಕನ್ನಡ ಭಾಷಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸಲಿದೆ. ಕರ್ನಾಟಕ ಎಂಬ ಹೆಸರೇ ನೇಪಥ್ಯಕ್ಕೆ ಸರಿಯುವ ಅಪಾಯವಿದೆ. ನೆಲ, ಜಲ, ನುಡಿಯ ರಕ್ಷಣೆ ವಿಷಯದಲ್ಲಿ ಎಲ್ಲರೂ ಬದ್ಧತೆ ಪ್ರದರ್ಶಿಸಬೇಕು.
–ಜೆ.ಜಿ.ನಾಗರಾಜ್‌ ಕನ್ನಡ ಉಪನ್ಯಾಸಕರು, ಕೋಲಾರ

*
‘ಕನ್ನಡ’ ಮುಜುಗರವೇಕೆ?
ಕರ್ನಾಟಕ ಬಹು ಭಾಷಿಕರಿಗೆ ನೆಲೆ ನೀಡಿರುವ ಜಾಗ. ಇದು ಹೆಮ್ಮೆ ಪಡುವ ವಿಷಯವೇ. ಆದರೆ ಬೇರೆ ಭಾಷಿಕರು ತಮ್ಮ ಭಾಷೆಯಲ್ಲಿಯೇ ಮಾತನಾಡುವಾಗ ಕನ್ನಡಿಗರು ಮಾತ್ರ ಅದೇಕೋ ಕನ್ನಡ ಮಾತನಾಡಲು ಮುಜುಗರ ಪಟ್ಟುಕೊಳ್ಳುವಂತೆ ಕಾಣುತ್ತಿದೆ. ಹೊರ ದೇಶಗಳಲ್ಲಿರುವ ಕನ್ನಡಿಗರು ಅಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಮಾಡಿದರೂ, ಇಲ್ಲಿಗೆ ಬಂದಾಗ ಮಾತ್ರ ಇಂಗ್ಲಿಷ್‌ ವ್ಯಾಮೋಹದಿಂದ ಹೊರಕ್ಕೆ ಬರುವ ಮನಸ್ಥಿತಿ ಹೊಂದದವರಾಗುತ್ತಾರೆ. 
– ಸವಿತಾ ಎನ್‌ ವಿದ್ಯಾರ್ಥಿನಿ,ಬೆಂಗಳೂರು ಗ್ರಾಮಾಂತರ

*
ಸಹನೆಯ ಪ್ರತೀಕ ಕರ್ನಾಟಕ
ನಾನು ದೇಶದ ಹತ್ತು ರಾಜ್ಯಗಳಲ್ಲಿ  ಸುತ್ತಾಡಿರುವ  ಕಾರಣ ಪ್ರತಿ ರಾಜ್ಯದ ಸಂಸ್ಕೃತಿ ಕುರಿತು ತಿಳಿದುಕೊಂಡಿದ್ದೇನೆ. ಆದರೆ ಅವೆಲ್ಲದರ ಹೊರತಾಗೂ ಕಂಡುಕೊಂಡಿದ್ದು, ನಮ್ಮ ಜನರಲ್ಲಿ ಮಣ್ಣಿನ ಗುಣವಿದೆ ಎಂಬುದನ್ನು. ನಾವು ಪ್ರಯೋಗಶೀಲರು. ಕರ್ನಾಟಕದಲ್ಲಿ ವೈಜ್ಞಾನಿಕ ಮನೋಸ್ಥಿತಿಯಿಂದ   ಪ್ರಯೋಗಶೀಲತೆ ಸಾಧ್ಯವಾಗುತ್ತಿದೆ. ಈ ಅಂಶಗಳೇ ನೆಲದ ಶಕ್ತಿಯನ್ನು ಗಟ್ಟಿಗೊಳಿಸಿವೆ.
–ಡಾ.ಬಿ.ವಿ. ಶಿವಪ್ರಕಾಶ
ಪಶು ವೈದ್ಯ ಮಹಾವಿದ್ಯಾಲಯದ ಡೀನ್‌, ಬೀದರ್

*
ಶಾಂತಿಪ್ರಿಯರ ಸುಂದರ ತಾಣ
‘ಕರ್ನಾಟಕ’ ಎಂಬ ವ್ಯುತ್ಪತ್ತಿ ಪಡೆದಿರುವ ಈ ನಮ್ಮ ಕರುನಾಡು, ಭೌಗೋಳಿಕ ಎಲ್ಲೆಗಳ ಸಿಕ್ಕು ಮೀರಿದ ನದಿಗಳು, ವಿಶ್ವ ಪರಂಪರೆಯ ತಾಣಗಳು, ಶಿಲ್ಪಕಲೆಗಳ ಸಮೂಹದಿಂದ ಕೂಡಿದ ಸುಂದರ ಪ್ರಾಂತ್ಯ. ಕರ್ನಾಟಕವೆಂದರೆ ಬರೀ ನಕಾಶೆಯಲ್ಲ. ಆದಿಕವಿ ಪಂಪ, ಪುರಂದರ ದಾಸರು, ಕುವೆಂಪು ಅವರಂತಹ ಮೇರು ಪುರುಷರು ಬಾಳಿದ ನೆಲವಿದು. ಆ ನೆಲದಲ್ಲಿ ಜೀವಿಸುತ್ತಿರುವ ನಮ್ಮ ಬಾಳು ಪುಣ್ಯದ್ದು.
– ಕೆ.ಗೋಪಾಲಕೃಷ್ಣ,
ಮುಖ್ಯ ಶಿಕ್ಷಕ ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT