ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಮಣಿಯಲ್ಲಿ ಮಾದರಿ ಕೃಷಿ

ಹೊಸ ಹೆಜ್ಜೆ -26
Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

-ಹರೀಶ ಬಿ.ಎಸ್.

*
ಕೃಷಿಯಲ್ಲಿ ಬಹುತೇಕ ರೈತರು ಹೊಸತನಕ್ಕೆ ಹೊಂದಿಕೊಳ್ಳಲ್ಲ. ಕಡಿಮೆಯಾದರೂ ಪರವಾಗಿಲ್ಲ, ಆದಾಯ ನಿಶ್ಚಿತವಾಗಿರುವ ಬೆಳೆಗೆ ಜೋತು ಬೀಳುತ್ತಾರೆ. ಆದರೆ ಇದಕ್ಕೆ ವಿರುದ್ಧ ಎಂಬಂತೆ, ಒಂದೇ ಎಕರೆಯಲ್ಲಿ ಕಾರಾಮಣಿ ಎಂಬ ಬೆಳೆ ಬೆಳೆದು, ನಾಲ್ಕು ತಿಂಗಳಲ್ಲಿ ಆದಾಯ ಗಳಿಸಿದ್ದಾರೆ ಮೈಸೂರಿನ ಆಯರಹಳ್ಳಿ ರೈತ ಮಾದಪ್ಪ.

ಕೃಷಿಯಲ್ಲಿ ಹೊಸತನ ಹಾಗೂ ಆಧುನಿಕತೆ ಅಳವಡಿಸಿಕೊಂಡು ಸಾಹಸ ಮಾಡುವುದರಲ್ಲಿ ಎತ್ತಿದ ಕೈ ಇವರದ್ದು. ತಲಕಾಡಿನಲ್ಲಿ ಒಮ್ಮೆ ಯಾರೋ ಕಾರಾಮಣಿ ಬೆಳೆದು ಚೆನ್ನಾಗಿ ಆದಾಯ ಪಡೆದಿರುವುದನ್ನು  ಕೇಳಿ, ತಾವೂ ಅದನ್ನು ಬೆಳೆಯಲು ನಿರ್ಧರಿಸಿದರು. ಇಂಗ್ಲಿಷಿನಲ್ಲಿ ಯಾರ್ಡ್ ಲಾಂಗ್ ಬೀನ್ ಎಂದು ಕರೆಯುವ ಇದನ್ನು ಕಾರಾಮಣಿ, ಮೀಟರ್ ಅಲಸಂದೆ, ಚೊಟ್ಟು, ಪೈರು ಎಂದೂ ಹೇಳುತ್ತಾರೆ.

ಬಿತ್ತನೆ ಕ್ರಮ: ಮಾದಪ್ಪನವರು ಬಬ್ಲೀ ಎಂಬ ತಳಿಯ ಬೀಜ ತರಿಸಿ ಸಾಕಷ್ಟು ಕೊಟ್ಟಿಗೆ ಗೊಬ್ಬರ ಮತ್ತು ಜೈವಿಕ ಗೊಬ್ಬರವನ್ನು ಭೂಮಿಗೆ ಸೇರಿಸಿ ಆರು ಅಡಿಗೊಂದರಂತೆ ಸಾಲು ಮಾಡಿ ಎರಡು ಅಡಿಗೊಂದರಂತೆ ಒಂದು ಎಕರೆ ಜಮೀನಿನಲ್ಲಿ ಬೀಜ ಹಾಕಿಸಿದರು. ನೀರು ಹಾಗೂ ಕಳೆಗಳ ಸಮಗ್ರ ನಿರ್ವಹಣೆಗೆ ಹನಿ ನೀರಾವರಿ ಮತ್ತು ಮಲ್ಚಿಂಗ್ (ಹೊದಿಕೆ) ಪದ್ಧತಿ ಬಳಸಿದರು.

ಇದು ಹಬ್ಬುವ ಬೆಳೆಯಾದ್ದರಿಂದ, ಬೆಳೆ ಸಾಲಿನಲ್ಲಿ ಹತ್ತು ಅಡಿಗೊಂದರಂತೆ ಆಧಾರಕ್ಕೆ ಆರಡಿ ಕಡ್ಡಿ ನೆಟ್ಟು ಅವಕ್ಕೆ ಅಡ್ಡಲಾಗಿ ಒಂದೂವರೆ ಅಡಿಗೊಂದರಂತೆ ಜಿಐ ತಂತಿ ಕಟ್ಟಿ ಬಳ್ಳಿಯ ಕುಡಿಯನ್ನು ಸುತ್ತಲಿ ದಾರ ಬಳಸಿ ಹಬ್ಬಿಸಿದರು. ಡ್ರಿಪ್ ಮುಖಾಂತರ (ರಸಾವರಿ) ಪೋಷಕಾಂಶ ಕೊಟ್ಟರು. ಬೆಳೆ 60 ದಿನಕ್ಕೆ ಮೊದಲ ಕಟಾವಿಗೆ ಬರುತ್ತದೆ. ನಂತರ 120 ದಿನಗಳವರೆಗೆ ದಿನ ಬಿಟ್ಟು ದಿನ ಕಟಾವಿಗೆ ಸಿಗುತ್ತದೆ. ಕೊಯ್ಲು ಮಾಡದಿದ್ದರೆ ಕಾರಾಮಣಿ ಹೆಚ್ಚು ಬಲಿತು ಬೆಲೆ ಸಿಗಲ್ಲ.

ಖರ್ಚಿನ ಲೆಕ್ಕಾಚಾರ: ಪ್ರತಿ ಎಕರೆಗೆ ಪ್ರತಿ ಬಾರಿ ಕಟಾವು ಮಾಡಲು ಎಂಟರಿಂದ ಹತ್ತು ಜನ ಕೂಲಿಯಾಳುಗಳು ಬೇಕು. ಒಟ್ಟು ಮೂವತ್ತು ಬಾರಿ ಕಟಾವು ಮಾಡಲು ಮುನ್ನೂರು ಜನರ ಅವಶ್ಯಕತೆಯಿದ್ದು, ನಾಲ್ಕು ಗಂಟೆ ಕಟಾವು ಮಾಡಲು ಒಬ್ಬೊಬ್ಬರಿಗೆ ಅವರು ಕೊಡುವುದು ನೂರು ರೂಪಾಯಿ, ಆದ್ದರಿಂದ ಕಟಾವಿಗೆಂದೇ 30 ಸಾವಿರ ಖರ್ಚಾಗುವುದು. ಉಳಿದಂತೆ ಬೀಜ, ಭೂಮಿ ತಯಾರಿ, ಪೋಷಕಾಂಶ ನಿರ್ವಹಣೆ ಹಾಗೂ ಕೀಟ-ರೋಗಗಳ ನಿರ್ವಹಣೆಗೆ 30 ಸಾವಿರ ಒಟ್ಟಾರೆ ಎಕರೆಗೆ 60 ಸಾವಿರ ಖರ್ಚಾಗುತ್ತದೆ. ಒಂದು ಎಕರೆಯಲ್ಲಿ 10 ಟನ್ ಕಟಾವು ಮಾಡಿ,   1.5 ಲಕ್ಷ ಲಾಭ ಗಳಿಸಿದ್ದಾರೆ.

‘ಯಾವತ್ತೂ ರೈತರು ಹೊಸತನದತ್ತ ತುಡಿಯಬೇಕು. ಪ್ರಯೋಗಕ್ಕೆ ಮುಂದಾಗಬೇಕು. ಅದಕ್ಕೆ ಮೈಸೂರಿನ ಇಳವಾಲದ ಬಳಿಯಿರುವ ತೋಟಗಾರಿಕೆ ವಿಜ್ಞಾನಿಗಳ ವಿವಿಯ ವಿಸ್ತರಣಾ ಶಿಕ್ಷಣದ ತಜ್ಞರಂಥವರ ಮಾರ್ಗದರ್ಶನವೂ ಬೇಕು. ಚಿಕ್ಕದಾಗಿ- ಚೊಕ್ಕದಾಗಿ ಮತ್ತು ಬೇಡಿಕೆ ಇರುವ ಬೆಳೆ ನನ್ನ ಗುರಿ’ ಎನ್ನುತ್ತಾರೆ 2015–16ನೇ ಸಾಲಿನ ಶ್ರೇಷ್ಠ ತೋಟಗಾರಿಕೆ ಕೃಷಿಕ ಪ್ರಶಸ್ತಿ ವಿಜೇತ ಸಾಧಕ ರೈತ ಮಾದಪ್ಪನವರು.

ಸಂಪರ್ಕ ಸಂಖ್ಯೆ- 9902417976
ಲೇಖಕರು ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕಾ ಮಹಾವಿದ್ಯಾಲಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT