ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಪದ್ಧತಿಯಲಿ ಮೇವು

Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೀದರ್‌ ಜಿಲ್ಲೆ ಹುಮನಾಬಾದ್‌ ತಾಲ್ಲೂಕಿನ ಮುಸ್ತರಿ ಗ್ರಾಮದ ಕಲ್ಲಪ್ಪ ಜಕ್ಕಾ ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸಿ ಒಂದು ವರ್ಷದಲ್ಲೇ ₹ 2.51 ಲಕ್ಷ ನಿವ್ವಳ ಲಾಭ ಗಳಿಸಿ ರೈತರ ಗಮನ ಸೆಳೆದಿದ್ದಾರೆ.

10 ಎಕರೆ ನೀರಾವರಿ ಜಮೀನು ಹಾಗೂ 18 ಎಕರೆ ಒಣಭೂಮಿ ಹೊಂದಿರುವ 61 ವರ್ಷದ ಕಲ್ಲಪ್ಪ 20 ವರ್ಷಗಳಿಂದ ಪಶುಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕುಟುಂಬದ ಅನುಕೂಲಕ್ಕಾಗಿ ಹೊಲದಲ್ಲಿ ಕಬ್ಬು, ತೊಗರಿ, ಉದ್ದು, ಹೆಸರು, ಸೋಯಾ ಬೆಳೆದರೆ, ಜಾನುವಾರುಗಳ ಮೇವಿಗಾಗಿಯೇ ಪ್ರತ್ಯೇಕವಾಗಿ ಮೆಕ್ಕೆಜೋಳ ಮತ್ತು ಜೋಳ ಬೆಳೆದು ಹೈನುಗಾರಿಕೆಯಲ್ಲಿ  ಪ್ರಗತಿ ಸಾಧಿಸಿದ್ದಾರೆ.

ದೇಸಿ ಜಾನುವಾರುಗಳಿಗೆ ಹಸಿರು ಮೇವು ಕೊಡುತ್ತಿರುವ ಕಾರಣ ಹಾಲಿನ ಉತ್ಪಾದನೆ ಹೆಚ್ಚಿದೆ. ಕೊಬ್ಬಿನ ಅಂಶ ಹಾಗೂ ಎಸ್‌ಎನ್‌ಎಫ್‌ನಲ್ಲೂ ಪ್ರಗತಿ ಕಂಡು ಬಂದು ಕ್ಷೀರ ಕ್ರಾಂತಿಗೆ ನಾಂದಿ ಹಾಡಿದೆ.

ಕಲ್ಲಪ್ಪ ಜಕ್ಕಾ ಅವರು 1996ರಲ್ಲಿ ಕಡಿಮೆ ಖರ್ಚಿನಲ್ಲಿ ಕೊಟ್ಟಿಗೆಯನ್ನು ನಿರ್ಮಿಸಿ ಪಶುಪಾಲನೆ ಆರಂಭಿಸಿದ್ದರು. ಆರಂಭದಲ್ಲಿ ಆದಾಯ ಅಷ್ಟಕ್ಕಷ್ಟೇ ಇತ್ತು. 2014–15ರಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಪಶು ವೈದ್ಯಕೀಯ ಮಹಾವಿದ್ಯಾಲಯ, ವಿಶ್ವಬ್ಯಾಂಕ್ ಅನುದಾನಿತ ಸುಜಲಾ-3 ಯೋಜನೆಯಡಿ ಜಾನುವಾರು ಆಧಾರಿತ ವಿಸ್ತರಣಾ ಚಟುವಟಿಕೆಗಳ ಮೂಲಕ ವೈಜ್ಞಾನಿಕ ಹೈನುಗಾರಿಕೆಯ ಮಾಹಿತಿ ಪಡೆದರು.

ಜಿಲ್ಲೆಯ ಹೈನುಗಾರಿಕೆ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಚರ್ಚಿಸಿ ಹೈನುಗಾರಿಕೆಯ ವಿವಿಧ ಅಂಶಗಳನ್ನು ಅರಿತುಕೊಂಡು ಚಿಕ್ಕ ಡೇರಿಯನ್ನೂ ಆರಂಭಿಸಿದರು. ವಿಶ್ವಬ್ಯಾಂಕ್ ಅನುದಾನಿತ ಸುಜಲಾ-3 ಯೋಜನೆಯ ತಂಡವು ಕಲ್ಲಪ್ಪ ಅವರಿಗೆ ಹಸಿರು ಮೇವುಗಳಾದ ಮೆಕ್ಕೆ ಜೋಳ, ಜೋಳ, ನೇಪಿಯರ್ ಹುಲ್ಲು, ಕುದುರೆಮೆಂತೆ, ರೋಡ್ಸ್ ಹುಲ್ಲು, ಗಿನಿ ಹುಲ್ಲು, ಸ್ಟೈಲೊ ಮತ್ತು ಚೊಗಚೆಯಂತಹ ಮೇವುಗಳ ಮಾಹಿತಿ ಒದಗಿಸಿತ್ತು. ಎಲ್ಲ ಮಾಹಿತಿಯನ್ನು ಕ್ರೋಡೀಕರಿಸಿದ ಕಲ್ಲಪ್ಪ ಅವುಗಳನ್ನು ಅನುಷ್ಠಾನಗೊಳಿಸುವ ಮೂಲಕ ಹೈನುಗಾರಿಕೆಯಲ್ಲಿ  ಛಾಪು ಮೂಡಿಸಿದ್ದಾರೆ.

ಒಣಮೇವು ಪೌಷ್ಟೀಕರಣ, ಕೆಚ್ಚಲು ಬೇನೆ, ದನ ಕರುಗಳ ರೋಗ ನಿರ್ವಹಣೆ ಮತ್ತು ನಿಯಂತ್ರಣ, ಶುದ್ಧ ಹಾಲು ಉತ್ಪಾದನೆ, ಬೇಸಿಗೆಯಲ್ಲಿ ಹೈನುರಾಸುಗಳ ನಿರ್ವಹಣೆಯಂತಹ ವಿವಿಧ ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ.

ಹಾಲಿನ ಉತ್ಪಾದನೆ ಹೆಚ್ಚಳ: 1996ರಲ್ಲಿ  ಕಲ್ಲಪ್ಪ ಜಕ್ಕಾ  ಬಳಿ 15 ಜಾನುವಾರುಗಳಿದ್ದವು. ಪ್ರಸ್ತುತ 10 ದೇಸಿ ಎಮ್ಮೆಗಳು ಹಾಗೂ ಮನೆ ಬಳಕೆಗೆ ಎರಡು ಹಸುಗಳನ್ನೂ ಇಟ್ಟಿದ್ದಾರೆ. ಜಾನುವಾರು ಸಂಖ್ಯೆಯನ್ನು ಕಡಿಮೆ  ಮಾಡಿಕೊಂಡರೂ ಹಾಲಿನ ಉತ್ಪಾದನೆ ಕಡಿಮೆಯಾಗಿಲ್ಲ. ವೈಜ್ಞಾನಿಕ ಪದ್ಧತಿಯಲ್ಲಿ ಮೇವು ಬೆಳೆದು ಹಾಲು ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಮೊದಲು ಆರು ಎಮ್ಮೆಗಳು 12 ರಿಂದ 18 ಲೀಟರ್‌ ಹಾಲು ಕೊಡುತ್ತಿದ್ದವು. ಈಗ 24ರಿಂದ 30 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ.

ಕಲ್ಲಪ್ಪ ಅವರು 10 ಗುಂಟೆಯಲ್ಲಿ ಏಳು ತಳಿಯ ಮೇವುಗಳನ್ನು ಬೆಳೆದಿದ್ದಾರೆ. ಪ್ರತಿದಿನ ಸರಾಸರಿ 24ರಿಂದ 30 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಬೀದರ್-ಕಲಬುರ್ಗಿ ಹಾಲು ಒಕ್ಕೂಟಕ್ಕೆ ಪ್ರತಿ ಲೀಟರ್‌ಗೆ  ₹32ರಂತೆ ಮಾರಾಟ ಮಾಡುತ್ತಿದ್ದಾರೆ. 10 ಎಮ್ಮೆಗಳಿಂದ ವರ್ಷಕ್ಕೆ ಅಂದಾಜು 50 ಟನ್‌ ಗೊಬ್ಬರ ಸಂಗ್ರಹವಾಗುತ್ತಿದೆ. ಇದನ್ನು ತಮ್ಮ ಐದು ಎಕರೆ ಜಮೀನಿಗೆ ಬಳಸಿ ಸಮೃದ್ಧವಾದ ಮೇವು ಬೆಳೆಯುತ್ತಿದ್ದಾರೆ. ಸಾವಯವ  ಕೃಷಿ ಪದ್ಧತಿ ಅನುಸರಿಸಿ ಬೇರೆ ರೈತರಿಗೂ ನೆರವಾಗುತ್ತಿದ್ದಾರೆ.

ಹೈನುಗಾರಿಕೆ ಕೊಟ್ಟಿಗೆ, ಸಂಗ್ರಹ ಕೊಠಡಿ, ಕೂಲಿಕಾರ್ಮಿಕರ ಕೊಠಡಿ, ಮೇವು ಕತ್ತರಿಸುವ ಯಂತ್ರ, ಎಮ್ಮೆಗಳ ಖರೀದಿ, ಹಸಿರು ಮೇವು ಉತ್ಪಾದನೆ, ಪೌಷ್ಟಿಕ ಆಹಾರ ತಯಾರಿಕೆ, ರಾಸುಗಳಿಗೆ ಔಷಧ, ಕಾರ್ಮಿಕರಿಗೆ ಸಂಬಳ ಹೀಗೆ ವರ್ಷದಲ್ಲಿ ಒಟ್ಟು ₹ 4.65 ಲಕ್ಷ ಖರ್ಚು ಮಾಡಿದ್ದೇನೆ. ಆದರೆ ಮೊದಲ ವರ್ಷದಲ್ಲೇ ₹ 2.51 ಲಕ್ಷ  ನಿವ್ವಳ ಆದಾಯ ಬಂದಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಹಾಲು, ಗೊಬ್ಬರ ಮಾರಾಟದಿಂದ ಮಾತ್ರವಲ್ಲದೆ ಖಾಲಿ ಗೋಣಿ ಚೀಲಗಳ ಮಾರಾಟದಿಂದ  ಆದಾಯ ಬಂದಿದೆ. ಒಟ್ಟು ಲಾಭದಲ್ಲಿ ಖರೀದಿ ಖರ್ಚು, ನಿರ್ವಹಣೆ ಹಾಗೂ ಸವಕಳಿಯ ವೆಚ್ಚವನ್ನು ಕಳೆದಾಗ ₹ 2.51 ಲಕ್ಷ ನಮ್ಮ ಕೈಸೇರಿದೆ ಎಂದು ಖುಷಿಯಿಂದ ಲೆಕ್ಕ ವಿವರಿಸುತ್ತಾರೆ ಅವರು.
ಮೇವಿನ ನರ್ಸರಿ

ಹುಮನಾಬಾದ್‌ ತಾಲ್ಲೂಕಿನ ಮುಸ್ತರಿ ಗ್ರಾಮದಲ್ಲಿ ಸುಜಲಾ-3 ಯೋಜನೆಯಡಿಯಲ್ಲಿ ಮೇವಿನ ತಳಿಗಳ ಬೀಜ ಹಾಗೂ ಕಡ್ಡಿ/ತುಂಡುಗಳನ್ನು ನೀಡಿ ಹಸಿರು ಮೇವಿನ ನರ್ಸರಿ ಘಟಕವನ್ನು ಸ್ಥಾಪಿಸಲಾಗಿದೆ.

ಜೋಳ-ಕೊ.ಎಫ್.ಎಸ್-29, ನೇಪಿಯರ್, ರೋಡ್ಸ್, ಕುದುರೆ ಮೆಂತೆಯಂತಹ ವಿವಿಧ ಮೇವಿನ ತಳಿಗಳ ಬಗೆಗೆ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. 

*
ಪಶುಪಾಲನೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿದರೆ ಹೆಚ್ಚು ಆದಾಯ ಗಳಿಸಬಹುದಾಗಿದೆ. ಕಲ್ಲಪ್ಪ ಜಕ್ಕಾ ಜಾನುವಾರು ಪಾಲನೆಯಿಂದಲೇ ಹೆಚ್ಚು ಆದಾಯ ಪಡೆದು ರೈತರಿಗೆ  ಮಾದರಿಯಾಗಿದ್ದಾರೆ.
–ಡಾ. ಪ್ರಕಾಶಕುಮಾರ ರಾಠೋಡ ಪಶುವೈದ್ಯಕೀಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT