ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ ಪೋಷಕತ್ವ ಎಂಬ ಹೊಸ ಬಗೆ ಕುಟುಂಬ

ಕಾನೂನಿನ ಸುಧಾರಣೆಯು ಕುಟುಂಬ ಎಂಬ ಸಾಮಾಜಿಕ ಸಂಸ್ಥೆಯ ಪುನರ್‌ ನಿರ್ವಚನಕ್ಕೆ ದಾರಿ ಮಾಡಿಕೊಡುತ್ತಿದೆ
Last Updated 31 ಅಕ್ಟೋಬರ್ 2016, 20:16 IST
ಅಕ್ಷರ ಗಾತ್ರ
-ಸೋನಾಲಿ ಕುಸುಮ್‌
 
**
ಮಹಿಳೆ  ಅಥವಾ ಪುರುಷ ಒಂಟಿಯಾಗಿ ಮಗುವನ್ನು ಸಾಕಿ, ಬೆಳೆಸುವ (ಏಕ ಪೋಷಕತ್ವ) ಗಮನಾರ್ಹ ಪ್ರವೃತ್ತಿ ಸಮಾಜದಲ್ಲಿ ಕಂಡುಬರುತ್ತಿದೆ. ಈ ಪ್ರವೃತ್ತಿಗೆ ಪೂರಕವಾಗಿ ಚಲನಶೀಲವಾದ ಸಾಮಾಜಿಕ ಹಾಗೂ ಕಾನೂನು ಬದಲಾವಣೆಗಳು ಆಗುತ್ತಿವೆ.
 
ಏಕ ಪೋಷಕತ್ವ ವ್ಯವಸ್ಥೆಯಲ್ಲಿ ಇರುವವರಿಗೆ ಅನುಕೂಲ ಆಗುವಂತೆ ಕಾನೂನುಗಳಿಗೆ ತಿದ್ದುಪಡಿ ತರಲಾಗುತ್ತಿದೆ, ಸಚಿವಾಲಯಗಳು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ, ನ್ಯಾಯಾಲಯಗಳು ಆದೇಶ ನೀಡುತ್ತಿವೆ. ಈ ಎಲ್ಲ ಬದಲಾವಣೆಗಳ ಹಿನ್ನೆಲೆಯಲ್ಲಿ, ಏಕ ಪೋಷಕತ್ವಕ್ಕೆ ಸಂಬಂಧಿಸಿದಂತೆ ಮೈಲಿಗಲ್ಲು ಎನ್ನಬಹುದಾದ ಕಾನೂನು ಪಲ್ಲಟಗಳನ್ನು ಪುನಃ ನೆನಪಿಸಿಕೊಳ್ಳಬೇಕಿದೆ.
 
ಮಕ್ಕಳನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದ ‘ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆಯ ನಿಯಮಾವಳಿ– 2015’ರ ಅನ್ವಯ ಏಕ ಪೋಷಕರು (ಅಂದರೆ, ಮಹಿಳೆಯೊಬ್ಬಳೇ ಅಥವಾ ಪುರುಷನೊಬ್ಬನೇ) ಗಂಡು ಅಥವಾ ಹೆಣ್ಣು ಮಕ್ಕಳನ್ನು ದತ್ತು ಪಡೆಯಬಹುದು. ಪುರಷರಿಗೆ, ಗಂಡು ಮಕ್ಕಳನ್ನು ಮಾತ್ರ ದತ್ತು ಪಡೆಯಲು ಹಕ್ಕಿದೆ. ಏಕಪೋಷಕರು ದತ್ತು ಪಡೆಯಲು ಮೂವತ್ತು ವರ್ಷ ವಯಸ್ಸಾಗಿರಬೇಕು ಎಂಬುದನ್ನು ಬದಲಾಯಿಸಿ, ಇಪ್ಪತ್ತೈದು  ವರ್ಷ ವಯಸ್ಸಾಗಿದ್ದರೆ ಸಾಕು ಎಂಬ ನಿಯಮ ತರಲಾಗಿದೆ.
 
ಈ ನಡುವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪಾಸ್‌ಪೋರ್ಟ್‌ ನಿಯಮಗಳಲ್ಲಿ ಬದಲಾವಣೆ ತರಲು ಪ್ರಸ್ತಾವ ಮಂಡಿಸಿದೆ. ಪಾಸ್‌ಪೋರ್ಟ್‌ ಅರ್ಜಿಗಳಲ್ಲಿ ತಂದೆಯ ಹೆಸರನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕು ಎಂಬ ನಿಯಮದ ಬದಲು, ತಾಯಿಯ ಹೆಸರು ಮಾತ್ರ ಉಲ್ಲೇಖಿಸಿದರೂ ಸಾಕು ಎಂಬುದು ಸಚಿವಾಲಯ ಮಂಡಿಸಿರುವ ಪ್ರಸ್ತಾವ. ವಿವಾಹ ವಿಚ್ಛೇದನ ಸೇರಿದಂತೆ ಹಲವು ಕಾರಣಗಳಿಂದ ಏಕ ಪೋಷಕ ಕುಟುಂಬಗಳ ಸಂಖ್ಯೆ ಈಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಾಗಾಗಿ, ನಿಯಮಗಳಲ್ಲಿ ಬದಲಾವಣೆ ಆಗಬೇಕು ಎಂಬ ಕಾರಣವನ್ನು ಸಚಿವಾಲಯ ಮುಂದಿಟ್ಟಿದೆ.
 
ನ್ಯಾಯಾಂಗದ ಪ್ರಗತಿಪರ ಆದೇಶಗಳು: ಗುರುತಿನ ಚೀಟಿಗಳು, ಪಾಸ್‌ಪೋರ್ಟ್‌, ಜನ್ಮದಾಖಲೆಗಳಲ್ಲಿ ಒಬ್ಬ ಪೋಷಕರ ಹೆಸರು ಇದ್ದರೆ ಸಾಕು ಎಂದು ಹಲವಾರು ಪ್ರಕರಣಗಳ ಆದೇಶಗಳಲ್ಲಿ ನ್ಯಾಯಾಲಯಗಳು ಹೇಳಿವೆ. ‘ಪತಿ–ಪತ್ನಿ ಸ್ವಇಚ್ಛೆಯಿಂದ ವಿಚ್ಛೇದನ ಪಡೆದಿರುವ ಕಾರಣ, ಮಹಿಳೆಗೆ ತನ್ನ ಮಗಳ ಜನ್ಮದಾಖಲೆಯಲ್ಲಿ ತನ್ನದೇ (ಅಂದರೆ, ಮಗುವಿನ ತಾಯಿಯ) ಅಡ್ಡಹೆಸರು ಸೇರಿಸಲು ಅವಕಾಶ ಇದೆ’ ಎಂದು ರಶಿ ಯೋಗೇಶ್‌ ಸದರಿಯಾ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್‌ ಹೇಳಿದೆ. ಇಂಥದ್ದೊಂದು ಸಂದರ್ಭದಲ್ಲಿ, ಮಹಿಳೆಯು ಹದಿನೆಂಟು ವರ್ಷ ತುಂಬದ ತನ್ನ ಹೆಣ್ಣು ಮಗುವಿನ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳನ್ನು ತಾನೇ ಹೊತ್ತಂತೆ ಆಗಿದೆ.
 
ಶಾಲು ನಿಗಮ್‌ ಮತ್ತು ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ನಡುವಣ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಈಚೆಗೆ ಒಂದು ಆದೇಶ ನೀಡಿದೆ. ಈ ಪ್ರಕರಣದ ಅರ್ಜಿದಾರರು ವಿಚ್ಛೇದನ ಪಡೆದಿರುವ ಮಹಿಳೆ. ಅರ್ಜಿಯಲ್ಲಿ ತಂದೆಯ ಹೆಸರು ಬರೆಸಿಕೊಳ್ಳದೆಯೇ ತನ್ನ ಮಗಳಿಗೆ ಪಾಸ್‌ಪೋರ್ಟ್‌ ಮಂಜೂರು ಮಾಡಿಕೊಡಬೇಕು ಎಂದು ಶಾಲು ಅವರು ಕೋರಿದ್ದರು. ‘ಏಕ ಪೋಷಕ ಪ್ರಕರಣಗಳಲ್ಲಿ ತಾಯಿಯ ಹೆಸರು ಮಾತ್ರ ಉಲ್ಲೇಖಿಸಿದರೂ, ಪಾಸ್‌ಪೋರ್ಟ್‌ ಕೊಡಬಹುದು. ತಂದೆಯ ಹೆಸರು ಉಲ್ಲೇಖಿಸಬೇಕು ಎಂಬ ನಿಯಮ ಎಲ್ಲ ಪ್ರಕರಣಗಳಿಗೂ ಅನ್ವಯ ಆಗುವುದಿಲ್ಲ’ ಎಂದು ಹೈಕೋರ್ಟ್‌ ಆದೇಶಿಸಿತು.
 
ಈ ಆದೇಶದ ಮೂಲಕ ಹೈಕೋರ್ಟ್‌, ಮಹಿಳೆಯೊಬ್ಬಳೇ ಮಗುವಿನ ಪಾಲಕಿ–ಪೋಷಕಿ ಆಗಬಲ್ಲಳು, ತಂದೆ–ತಾಯಿಗಳಿಬ್ಬರ ಪಾತ್ರವನ್ನೂ ನಿಭಾಯಿಸಬಲ್ಲಳು ಎಂದು ಹೇಳಿತು. ಅಲ್ಲದೆ, ಹೈಕೋರ್ಟ್‌ ಈ ಆದೇಶದ ಮೂಲಕ ಏಕ ಪೋಷಕ ಕುಟುಂಬಗಳಿಗೆ ಕಾನೂನಿನ ಮಾನ್ಯತೆ ನೀಡಿತು. ಹಲವು ಕಾರಣಗಳಿಂದಾಗಿ ಏಕ ಪೋಷಕ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೋರ್ಟ್‌ ಹೇಳಿತು.
 
ಅಲ್ಲದೆ, ‘ಮದುವೆ ಆಗದೆಯೇ ತಾಯಿ ಆದವರು, ಲೈಂಗಿಕ ಕಾರ್ಯಕರ್ತೆಯರು, ಬಾಡಿಗೆ ತಾಯಂದಿರು, ಅತ್ಯಾಚಾರ ಸಂತ್ರಸ್ತರು, ತಂದೆಯಿಂದ ದೂರವಾದ ಮಕ್ಕಳು, ಪ್ರನಾಳ ಶಿಶು ತಂತ್ರಜ್ಞಾನದ ಮೂಲಕ ಜನಿಸಿದವರನ್ನು ಏಕ ಪೋಷಕ ಕುಟುಂಬದವರು ಎಂದು ಗುರುತಿಸಬಹುದು’ ಎಂಬ ಮಾತನ್ನೂ ಕೋರ್ಟ್‌ ಹೇಳಿದೆ.
 
ಈ ವಿದ್ಯಮಾನಗಳ ನಡುವೆಯೇ, ಏಕ ಪೋಷಕ ವ್ಯವಸ್ಥೆ ಬಗ್ಗೆ ಸಮಾಜದ ನೋಟ ಕೂಡ ಬದಲಾಗುತ್ತಿದೆ ಎಂಬುದನ್ನು ಗುರುತಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನ ಏಕ ಪೋಷಕರಾಗಲು ಮುಂದೆ ಬರುತ್ತಿದ್ದಾರೆ. ದತ್ತು, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುತ್ತಿದ್ದಾರೆ. ಹಿಂದಿಯ ಜನಪ್ರಿಯ ನಟ ತುಷಾರ್ ಕಪೂರ್ ಅವರು ಕೆಲವು ತಿಂಗಳ ಹಿಂದೆ ಬಾಡಿಗೆ ತಾಯಿಯ ಮೂಲಕ ಗಂಡು ಮಗುವೊಂದನ್ನು ಪಡೆದರು.
 
ಆ ಮಗುವಿಗೆ ಲಕ್ಷ್ಯ ಎಂದು ಹೆಸರಿಡಲಾಗಿದೆ. ಸಮಾಜದಲ್ಲಿ ಅಭಿಪ್ರಾಯ ರೂಪಿಸುವ ವಿಚಾರದಲ್ಲಿ ಬ್ರಹ್ಮಚಾರಿಗಳಿಗೆ ಹೆಚ್ಚಿನ ಬಲ ಇರುವ ಕಾರಣ, ಪುರುಷರು ಏಕ ಪೋಷಕ ವ್ಯವಸ್ಥೆ ನೆಚ್ಚಿಕೊಂಡು, ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವುದು ಈಗ ಬಹಳ ಜನಪ್ರಿಯವಾಗುತ್ತಿದೆ. ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಕಾಯ್ದೆ ಇಲ್ಲ. ಆದರೆ, ಇಂಥ ಮಹತ್ವದ ವಿಚಾರದ ಬಗ್ಗೆ ನಮ್ಮಲ್ಲಿ ಪ್ರತ್ಯೇಕ ಕಾಯ್ದೆ ಇಲ್ಲ ಎಂಬುದನ್ನು ಪರಿಗಣಿಸಿ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಬಾಡಿಗೆ ತಾಯ್ತನ ಕುರಿತು ರಾಷ್ಟ್ರೀಯ ನಿಯಮಾವಳಿಯನ್ನು ರೂಪಿಸಿದೆ. 
 
ಆದಿತ್ಯ ತಿವಾರಿ ಎನ್ನುವ ಇಪ್ಪತ್ತೆಂಟು  ವರ್ಷ ವಯಸ್ಸಿನ ಸಾಫ್ಟ್‌ವೇರ್‌ ತಜ್ಞರೊಬ್ಬರು ಅಂಗವೈಕಲ್ಯಕ್ಕೆ ತುತ್ತಾದ ಒಂದೂವರೆ ವರ್ಷದ ಬಿನ್ನಿ ಎಂಬ ಮಗುವೊಂದನ್ನು ಈಚೆಗೆ ದತ್ತು ಪಡೆದರು. ಆ ಮೂಲಕ ಏಕ ಪೋಷಕ ವ್ಯವಸ್ಥೆಗೆ ಕಾಲಿಟ್ಟರು. ಇದು ಕೂಡ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಈ ಮಗುವಿನ ಹೃದಯದಲ್ಲಿ ರಂಧ್ರ ಇದೆ. ದತ್ತು ಪಡೆದ ನಂತರ ತಿವಾರಿ ಅವರು ಮಗುವಿಗೆ ಅವನೀಶ್ ಎಂಬ ಹೊಸ ಹೆಸರು ನೀಡಿದರು.
 
ಇವರು ಭಾರತದಲ್ಲಿ ಅಂಗವೈಕಲ್ಯ ಇರುವ ಮಗುವನ್ನು ದತ್ತು ಪಡೆದ ಅತ್ಯಂತ ಕಿರಿಯ ವಯಸ್ಸಿನ ಏಕ ಪೋಷಕ ಎಂದು ವರದಿಯಾಗಿದೆ.
ಕಾನೂನಿನ ಪರಿಭಾಷೆಯಲ್ಲಿ ಹೇಳುವುದಾದರೆ, ಏಕ ಪೋಷಕ ವ್ಯವಸ್ಥೆಗೆ ಆಧಾರ ಇರುವುದು ವ್ಯಕ್ತಿಯ ಖಾಸಗಿತನದ ಹಕ್ಕಿನಲ್ಲಿ. ಕುಟುಂಬ ಕಟ್ಟಿಕೊಳ್ಳುವುದು ಹಾಗೂ ಅದರ ಜೊತೆಯಲ್ಲೇ ಇರುವ ಸಂತಾನಾಭಿವೃದ್ಧಿಯ ಆಯ್ಕೆ ಹಕ್ಕುಗಳ ಮೂಲಕ ಇದು ಪ್ರಾಪ್ತಿಯಾಗಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾಗಿರುವ ಮಾನವ ಹಕ್ಕುಗಳಲ್ಲಿ ಒಂದು.
 
ಮಾನವ ಹಕ್ಕುಗಳ ಕುರಿತ 1948ರ ಅಂತರರಾಷ್ಟ್ರೀಯ ಘೋಷಣೆ, 1966ರ ನಾಗರಿಕ ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದ, 1966ರಲ್ಲೇ ಆದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಈ ಅಂಶ ಇದೆ.
 
ಕೈರೊದಲ್ಲಿ 1994ರಲ್ಲಿ ನಡೆದ ಜನಸಂಖ್ಯೆ ಮತ್ತು ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವು ವಂಶಾಭಿವೃದ್ಧಿಯ ಹಕ್ಕು ಮಾನವ ಹಕ್ಕುಗಳಲ್ಲಿ ಒಂದು ಎಂದು ಹೇಳಿತು. ಇದು ಪ್ರತಿ ವ್ಯಕ್ತಿಗೂ ಇದೆ. ಕುಟುಂಬ ಕಟ್ಟಿಕೊಳ್ಳುವುದು, ಗರ್ಭಧಾರಣೆ ಮಾಡುವುದು ಈ ಹಕ್ಕಿನಲ್ಲಿ ಸೇರಿವೆ. ಈ ಹಕ್ಕು ನಮ್ಮ ಸಂವಿಧಾನದ 21ನೇ ವಿಧಿಯಲ್ಲೂ ಇದೆ.
 
ವ್ಯಕ್ತಿಯ ಖಾಸಗಿತನದ ಹಕ್ಕಿನ ಜೊತೆಯಲ್ಲೇ ಇದು ಸೇರಿಕೊಂಡಿದೆ. ಇದನ್ನು ಖರಕ್ ಸಿಂಗ್ ಮತ್ತು ಬಿಹಾರ ರಾಜ್ಯ ಸರ್ಕಾರ, ಗೋವಿಂದ್ ವಿ. ಮತ್ತು ಮಧ್ಯಪ್ರದೇಶ ಸರ್ಕಾರ, ಬಿ.ಕೆ. ಪಾರ್ಥಸಾರಥಿ ಮತ್ತು ಆಂಧ್ರ ಪ್ರದೇಶ ಸರ್ಕಾರ ನಡುವಣ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌, ‘ವಂಶಾಭಿವೃದ್ಧಿಯ ಹಕ್ಕು ವ್ಯಕ್ತಿಯ ಖಾಸಗಿತನದ ಹಕ್ಕುಗಳ ಒಂದು ಮುಖ’ ಎಂದು ಹೇಳಿದೆ.
 
ಕಾನೂನಿನಲ್ಲಿ ಆಗುತ್ತಿರುವ ಸುಧಾರಣೆಗಳು, ಕೋರ್ಟ್‌ಗಳು ನೀಡುತ್ತಿರುವ ಆದೇಶಗಳು ಕುಟುಂಬ ಎಂಬ ಸಾಮಾಜಿಕ ಸಂಸ್ಥೆಯ ಪುನರ್‌ ನಿರ್ವಚನಕ್ಕೆ ದಾರಿ ಮಾಡಿಕೊಡುತ್ತಿವೆ. ಕುಟುಂಬ ಎಂದರೆ, ಗಂಡು–ಹೆಣ್ಣು ಒಟ್ಟಾಗಿರುವುದು ಎಂಬ ವ್ಯಾಖ್ಯಾನವನ್ನೂ ಮೀರಿ, ಕುಟುಂಬದಲ್ಲಿ ಹೆಣ್ಣು–ಹೆಣ್ಣು, ಗಂಡು–ಗಂಡು ಇರಬಹುದು, ಅಥವಾ ಕುಟುಂಬವೆಂದರೆ ಏಕ ಪೋಷಕ ವ್ಯವಸ್ಥೆಯೂ ಆಗಿರಬಹುದು ಎಂಬ ವ್ಯಾಖ್ಯಾನಗಳು ಬರುತ್ತಿವೆ.
 
ಸಮಾಜ ವಿಜ್ಞಾನ, ಕೌಟುಂಬಿಕ ಕಾನೂನುಗಳು, ಜನಾಂಗೀಯ ಅಧ್ಯಯನಗಳ ಬಗ್ಗೆ ಈ ಬೆಳವಣಿಗೆಗಳು ಹೊಸ ಆಸಕ್ತಿಯನ್ನು ಹುಟ್ಟುಹಾಕುತ್ತಿವೆ. ಈ ಬೆಳವಣಿಗೆಯಲ್ಲಿ, ತಾಯ್ತನದ ಪಾತ್ರ, ಮಗುವಿನ ಲಾಲನೆ–ಪಾಲನೆ, ಕುಟುಂಬದೊಳಗಿನ ವ್ಯಕ್ತಿಗಳ ಸಂಬಂಧ ಸೇರಿದಂತೆ ಕೆಲವು ತೊಡಕುಗಳು ಇರುವುದನ್ನೂ ಗಮನಿಸಬೇಕು. ಇವೇನೇ ಇದ್ದರೂ, ಈಗ ಕಂಡುಬಂದಿರುವ ಬದಲಾವಣೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಲಿವೆ ಎಂಬುದನ್ನು ಅಲ್ಲಗಳೆಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT