ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆಯ ಸಹಾಯ ಹಸ್ತದ ಸ್ಟಾರ್ಟ್‌ಅಪ್‌

Last Updated 1 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರಿನಂತಹ ಮಹಾ ನಗರಕ್ಕೆ  ಕೆಲಸ ಅರಸಿ ಬಂದವರು, ವಿದೇಶದಲ್ಲಿ ಇರುವ ಮಕ್ಕಳ ವೃದ್ಧ ಪಾಲಕರೂ  ಸೇರಿದಂತೆ ಅನೇಕರಿಗೆ ಹಲವಾರು ಸಂದರ್ಭಗಳಲ್ಲಿ ತುರ್ತಾಗಿ ನೆರವು ಬೇಕಾಗುತ್ತದೆ. ಹತ್ತಿರದಲ್ಲಿ ಪರಿಚಯಸ್ಥರು, ಸಂಬಂಧಿಕರು ಇರದೆ ಇದ್ದಾಗ ಸಹಾಯಕ್ಕಾಗಿ ಯಾರನ್ನು ನೆಚ್ಚಿಕೊಳ್ಳಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಅಪರಿಚಿತ ಊರಿನಲ್ಲಿ ಯಾರ ಹತ್ತಿರ ಸಹಾಯ ಕೋರಬೇಕು, ಯಾರನ್ನು ನಂಬಬೇಕು,  ಮನೆಯ ಒಳಗೆ ಅಥವಾ ಹೊರಗಿನ ಕೆಲಸಗಳಿಗೆ ಯಾರ ನೆರವು ಪಡೆಯಬೇಕು  ಎನ್ನುವ ಸಂದೇಹಗಳಿಗೆ ಉತ್ತರ ರೂಪವಾಗಿ ‘ಒನ್‌ ಟೈಮ್‌ ಜಾಬ್‌’ (OTJ247)   ಸ್ಟಾರ್ಟ್‌ಅಪ್‌ ಅಸ್ತಿತ್ವಕ್ಕೆ ಬಂದಿದೆ.

ನಿವೃತ್ತ ಸೇನಾ ಅಧಿಕಾರಿಯಾಗಿರುವ  ಪ್ರಶಾಂತ್ ರೈ ಅವರು ಸ್ಥಾಪಿಸಿರುವ ಈ ನವೋದ್ಯಮವು, ಈಗ  ಒಂದು ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ದಶಕದ ಹಿಂದೆ ನಗರದಲ್ಲಿ ಭದ್ರತಾ ಸಿಬ್ಬಂದಿ ಒದಗಿಸುವ ಸಂಸ್ಥೆ ‘ಬಲರಾಂ ಕಾರ್ಪೊರೇಟ್‌ ಸರ್ವಿಸಸ್‌’ ಸ್ಥಾಪಿಸಿದ್ದ  ಪ್ರಶಾಂತ್‌  ಅವರು ಅಲ್ಲಿ ಪಡೆದ  ಅನುಭವ ಆಧರಿಸಿ ಈ ವಿಶಿಷ್ಟ ಸ್ಟಾರ್ಟ್‌ಅಪ್‌ ಆರಂಭಿಸಿ ಯಶಸ್ಸಿನ ದೃಢ ಹೆಜ್ಜೆ ಇರಿಸುತ್ತಿದ್ದಾರೆ. ತಕ್ಷಣಕ್ಕೆ ಸಹಾಯ ಹಸ್ತ ಚಾಚಲು ಸಂಸ್ಥೆಯು ಮೊಬೈಲ್‌ ಆ್ಯಪ್  (OTJ247) ಅಭಿವೃದ್ಧಿಪಡಿಸಿದೆ.

ಸಿವಿಲ್‌ ಎಂಜಿನಿಯರಿಂಗ್‌, ಸ್ವಚ್ಛತೆ, ಪ್ಲಂಬಿಂಗ್‌, ವಿದ್ಯುತ್‌, ಕೀಟ ನಿಯಂತ್ರಣ, ಕಾನೂನು ಸಲಹೆ, ಅಗ್ನಿ ಅವಘಡ ತಡೆ,  ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕಾರ್ಯಕ್ರಮ ಆಯೋಜನೆ, ಬೆಂಗಾವಲು ಸಿಬ್ಬಂದಿ, –ಹೀಗೆ ನಾಗರಿಕ ಸಮಾಜಕ್ಕೆ ಬೇಕಾಗುವ ಎಲ್ಲ ಬಗೆಯ ಸೇವೆಗಳಿಗೆ ಪರಿಣತ ಸಿಬ್ಬಂದಿಯ ಸೇವೆಗಳು  ಒಂದೇ ತಾಣದಲ್ಲಿ ದೊರೆಯುವುದೇ ಈ ಸ್ಟಾರ್ಟ್‌ಅಪ್‌ನ ವಿಶೇಷತೆಯಾಗಿದೆ. ಮಸಾಜ್‌, ಸೌಂದರ್ಯ ಪ್ರಸಾಧನ ಹೊರತುಪಡಿಸಿ ಬಹುತೇಕ ಉಳಿದೆಲ್ಲ ಬಗೆಯ ಸೇವೆಗಳು ಇಲ್ಲಿ ದೊರೆಯುತ್ತವೆ.

ಪೇಂಟಿಂಗ್‌, ಪ್ಲಂಬಿಂಗ್‌, ಆಸ್ತಿ ನೋಂದಣಿ, ಎಫ್‌ಐಆರ್‌ ದಾಖಲಿಸಲು ನೆರವು ಹೀಗೆ ಸಂಸ್ಥೆ ಒದಗಿಸುವ ಸೇವೆಗಳ ಪಟ್ಟಿ ದೀರ್ಘವಾಗಿರುವುದರ ಜತೆಗೆ ವೈವಿಧ್ಯಮಯವೂ ಆಗಿದೆ. ಸಭೆ ಸಮಾರಂಭ ಆಯೋಜಿಸುವ, ಒಳಾಂಗಣ ವಿನ್ಯಾಸ, ಸಿವಿಲ್ ಎಂಜಿನಿಯರಿಂಗ್‌ ಕೆಲಸ, ಸೋರಿಕೆ ತಡೆ, ಕಟ್ಟಡ ನಿರ್ವಹಣೆ ಮತ್ತಿತರ ವಲಯಗಳಲ್ಲಿನ  ಅಸಂಘಟಿತ ಸ್ವರೂಪದ ವಹಿವಾಟಿಗೆ  ಪ್ರಶಾಂತ್‌ ಅವರು ಈ ಸ್ಟಾರ್ಟ್ಅಪ್‌ ಮೂಲಕ ಸಂಘಟಿತ ರೂಪ ಕೊಟ್ಟಿದ್ದಾರೆ. ಸೇವೆ ಪಡೆಯುವ ನಾಗರಿಕರ ಪಾಲಿಗೆ ಆಪತ್ಬಾಂಧವನಂತೆ  ನೆರವಾಗುವ ಬಗೆಯಲ್ಲಿ ಈ ಸಂಸ್ಥೆಯ ಸೇವೆಯನ್ನು ರೂಪಿಸಲಾಗಿದೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಯು, ದೆಹಲಿ, ಗುಡಗಾಂವ್‌, ಪುಣೆ, ಮುಂಬೈಗಳಲ್ಲೂ ಸೇವೆ ಒದಗಿಸುತ್ತಿದೆ. ಬಳಕೆದಾರರಿಂದ ವಸೂಲಾಗುವ ಸೇವಾ ಶುಲ್ಕದಲ್ಲಿ  ಶೇ 10 ರಷ್ಟು ಸಂಸ್ಥೆಗೆ ಪಾವತಿಯಾಗುತ್ತದೆ.

‘ಯಾರೇ ಆಗಲಿ ನಮ್ಮನ್ನು ಯಾವುದೇ ಸಂದರ್ಭದಲ್ಲಿ ನೆರವು ಕೇಳಿದರೂ ಸಹಾಯ ಒದಗಿಸಲು ನಮ್ಮ ತಂಡ ಸಿದ್ಧವಾಗಿರುತ್ತದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಒಂದು ಗಂಟೆಯ ಒಳಗೆ ನೆರವು ಸಿಬ್ಬಂದಿ ಮನೆ ಬಾಗಿಲಿನಲ್ಲಿ ಹಾಜರಿರುತ್ತಾರೆ. ಇ–ಮೇಲ್‌ ಮೂಲಕ – 2 ಗಂಟೆ ಒಳಗೆ ಸೇವೆ ದೊರೆಯುತ್ತದೆ.  ರಾತ್ರಿ ವೇಳೆ ಮಾತ್ರ ಸೇವೆ ಇರುವುದಿಲ್ಲ’ ಎಂದು ಪ್ರಶಾಂತ್‌ ಮಾಹಿತಿ ನೀಡುತ್ತಾರೆ.

‘​ನಗರಕ್ಕೆ ಬರುವ ಗಣ್ಯರಿಗೆ ಬೆಂಗಾವಲು ಸಿಬ್ಬಂದಿ, ಹೋಟೆಲ್‌ ಕೋಣೆ ಕಾಯ್ದಿರಿಸುವಿಕೆ ಸೇವೆಯನ್ನೂ ಒದಗಿಸಲಾಗುವುದು. ಲೇಡಿ ಬಾಡಿಗಾರ್ಡ್‌ ಸೇವೆ ಮಾತ್ರ ಒದಗಿಸುವುದಿಲ್ಲ.  ಕೆಲಸದ ನಿಮಿತ್ಯ ನಗರಕ್ಕೆ ಬರುವ ಉದ್ದಿಮೆ ಸಂಸ್ಥೆಗಳ ಉನ್ನತ ಹುದ್ದೆಗಳ ಮಹಿಳೆಯರಿಗೆ ಇಬ್ಬರು ಪುರುಷರ ಭದ್ರತೆ ಒದಗಿಸಲಾಗುವುದು.

‘ಸಂಸ್ಥೆಯು ಒದಗಿಸುವ ಸೇವೆಯಲ್ಲಿ  ತೊಡಗಿರುವ ಸಿಬ್ಬಂದಿಯ ಪೂರ್ವಾಪರದ  ಬಗ್ಗೆ  ಪೊಲೀಸ್‌ರ ದೃಢೀಕರಣ ಪಡೆದಿರುವುದರಿಂದ ಸೇವೆ ಪಡೆಯುವವರು ನಿಶ್ಚಿಂತೆಯಿಂದ ಇರಬಹುದು’ ಎಂದು ಪ್ರಶಾಂತ್‌   ಭರವಸೆ ನೀಡುತ್ತಾರೆ.

‘​ಮನೆಯಲ್ಲಿನ ಕೊಳಾಯಿ, ವಿದ್ಯುತ್‌ ಸಮಸ್ಯೆಗಳ ದುರಸ್ತಿ ಮತ್ತಿತರ ಸಮಸ್ಯೆಗಳನ್ನು ಸರಿಪಡಿಸಲು ಬರುವ ಸಿಬ್ಬಂದಿ ಬಗ್ಗೆ ಮುಂಚಿತವಾಗಿಯೇ ದೂರವಾಣಿ ಕರೆ, ಇ–ಮೇಲ್‌ ಅಥವಾ ಎಸ್‌ಎಂಎಸ್‌ ಮೂಲಕ ಸಿಬ್ಬಂದಿಯ ವಿವರ ನೀಡಲಾಗಿರುತ್ತದೆ. ಸಮವಸ್ತ್ರ ಮತ್ತು ಗುರುತಿನ ಚೀಟಿ ಹೊಂದಿರುವ ಸಿಬ್ಬಂದಿಯನ್ನು ಸುಲಭವಾಗಿ ಗುರುತಿಸಬಹುದು. ಉತ್ತಮ ನಡವಳಿಕೆಯ ಇರುವವರನ್ನೇ ಕೆಲಸಕ್ಕೆ ನೇಮಿಸಿಕೊಂಡಿರುವುದು, ಪೊಲೀಸ್‌ ಮಾಹಿತಿ ಪಡೆದಿರುವುದು  ಮತ್ತು ಸಂಸ್ಥೆಯ ಕಟ್ಟುನಿಟ್ಟಿನ ನಿಯಮಗಳನ್ನು ಸಂಸ್ಥೆಯ ಸಿಬ್ಬಂದಿ ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ಯಾವುದೇ ಹೆದರಿಕೆ ಇಲ್ಲದೇ ನಾಗರಿಕರು ಸೇವೆ ಪಡೆಯಬಹುದಾಗಿದೆ. ಮನೆಯಲ್ಲಿ ಒಂಟಿ ಮಹಿಳೆಯರು ಇದ್ದರೂ ಯಾವುದೇ ಸಮಸ್ಯೆ ಎದುರಾಗದು’ ಎಂದೂ  ಪ್ರಶಾಂತ್‌ ಅವರು ವಾಗ್ದಾನ ನೀಡುತ್ತಾರೆ.

‘ಸಂಸ್ಥೆಯನ್ನು ಲಾಭದಾಯಕವನ್ನಾಗಿ ಕಟ್ಟಿ ಬೆಳೆಸಿದ ನಂತರವೇ ವಿಸ್ತರಣೆಯ ಆಲೋಚನೆ ಇದೆ’ ಎನ್ನುತ್ತಾರೆ ಅವರು. ಸಂಸ್ಥೆಯಲ್ಲಿ ದುಡಿಯುವ   ಸಿಬ್ಬಂದಿಗೆ  ಇಂಗ್ಲಿಷ್‌, ಹಿಂದಿ ಭಾಷೆಯ ಕನಿಷ್ಠ ತಿಳಿವಳಿಕೆ ಇರುವಂತೆ ಸಂಸ್ಥೆ  ಅಗತ್ಯವಾದ ತರಬೇತಿ ನೀಡಿದೆ.

ಬಂಡವಾಳ ಹೂಡಿಕೆ
ವೈವಿಧ್ಯಮಯ ಸೇವೆಗಳನ್ನು ಒದಗಿಸುವ ಉದ್ದೇಶದ ಈ ವಿಶಿಷ್ಟ ನವೋದ್ಯಮ ಕಟ್ಟಿ ಬೆಳೆಸಲು ಈಗಾಗಲೇ ರೂ 3.50 ಕೋಟಿ ಹೂಡಿಕೆ ಮಾಡಲಾಗಿದೆ.  ​​ಬೆಂಗಳೂರಿನಲ್ಲಿ ಯಶಸ್ವಿಯಾದರೆ ದೇಶದ ಉಳಿದ ಭಾಗದಲ್ಲಿಯೂ ಸಜವಾಗಿಯೇ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸದಿಂದ ಪ್ರಶಾಂತ್‌ ಅವರು ಈ  ನವೋದ್ಯಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಒಂದು ವರ್ಷದಲ್ಲಿ ಮೈಸೂರು, ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲಿಯೂ  ಸೇವೆ ವಿಸ್ತರಿಸಲೂ ನಿರ್ಧರಿಸಿದ್ದಾರೆ.

‘ಮುಂದಿನ ಮೂರು  ವರ್ಷಗಳಲ್ಲಿ ನಾವು ಈ ಉದ್ದಿಮೆಯ ಮುಂಚೂಣಿಯಲ್ಲಿ ಇರಲಿದ್ದೇವೆ’ ಎಂದೂ ಪ್ರಶಾಂತ್‌  ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ​ಬೆಂಗಳೂರಿನಲ್ಲಿ ‘​ಪೆಟ್ರೊಲಿಂಗ್‌ ವೆಹಿಕಲ್‌’ ಪರಿಕಲ್ಪನೆಯನ್ನೂ ಜಾರಿಗೆ ತರಲು ಸಂಸ್ಥೆ ಮುಂದಾಗಿದೆ. ​‘ಪೊಲೀಸರ ಜತೆ ಸಮನ್ವಯತೆಯಿಂದ ಕೆಲಸ ನಿರ್ವಹಿಸುವುದಷ್ಟೇ ನಮ್ಮ ಉದ್ದೇಶ’ ಎಂದೂ ಪ್ರಶಾಂತ್‌ ಅವರು ಸ್ಪಷ್ಟಪಡಿಸುತ್ತಾರೆ. ಸದ್ಯಕ್ಕೆ 5 ನಗರಗಳಲ್ಲಿ ಮಾತ್ರ ಸೇವೆ  ಲಭ್ಯ ಇದೆ. ಮೂರು ವರ್ಷಗಳಲ್ಲಿ ರೂ 1,000 ಕೋಟಿಗಳಷ್ಟು ವಹಿವಾಟು ನಡೆಸುವ ಗುರಿ ಹಾಕಿಕೊಳ್ಳಲಾಗಿದೆ.

‘ಮೂರು ಮುಖ್ಯ ಸಂಗತಿಗಳು ಯಾವುದೇ ವ್ಯಕ್ತಿಯ ವರ್ತನೆಯನ್ನು ನಿಯಂತ್ರಿಸುತ್ತವೆ. ದಂಡ,  ಹಣಕಾಸು ನಷ್ಟ ಮತ್ತು ವೈಯಕ್ತಿಕ ವರ್ಚಸ್ಸಿಗೆ ಆಗುವ ನಷ್ಟ. ಈ ಎಲ್ಲ ಸಾಮೋಪಾಯ ಮತ್ತು ಭೇದೊಪಾಯಗಳು ನಮ್ಮಲ್ಲಿ    ಬಳಕೆಯಲ್ಲಿ ಇರುವುದರಿಂದ ಇದುವರೆಗೆ ನಮ್ಮ ಸಿಬ್ಬಂದಿಯಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ’ ಎಂದು ಪ್ರಶಾಂತ್‌   ವಿಶ್ವಾಸದಿಂದ ಹೇಳುತ್ತಾರೆ.ಇಂತಹ ಸಮಗ್ರ ಸ್ವರೂಪದ ಸೇವೆ ಒದಗಿಸುತ್ತಿರುವ ​​ದೇಶದ  ಏಕೈಕ ಸಂಸ್ಥೆ  ಎನ್ನುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

ಸೇನಾ ಹಿನ್ನೆಲೆಯ ಶಿಸ್ತು
ಪಂಜಾಬ್‌ ರೆಜಿಮೆಂಟ್‌ನ ಇನ್‌ಫಂಟ್ರಿಯಲ್ಲಿ ಸೇವೆಯಲ್ಲಿದ್ದ  ಪ್ರಶಾಂತ್‌ ರೈ  ಅವರು ​2005ರಲ್ಲಿ ನಿವೃತ್ತಿಯಾಗಿದ್ದಾರೆ.  2006ರಲ್ಲಿ ಭದ್ರತಾ  ಸಿಬ್ಬಂದಿಯ ಸೇವೆ ಒದಗಿಸುವ ‘ಬಲರಾಂ ಕಾರ್ಪೊರೇಟ್‌ ಸರ್ವಿಸಸ್‌’ ಆರಂಭಿಸಿದ್ದರು.  ದಶಕದ ಕಾಲ  ಭದ್ರತಾ ಸಿಬ್ಬಂದಿ ಸೇವಾ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದ  ಪ್ರಶಾಂತ್‌, ಈ ಸೇವಾ  ಉದ್ದಿಮೆಯನ್ನು ವ್ಯಾಪಕವಾಗಿ ವಿಸ್ತರಿಸಲು 2015ರಲ್ಲಿ ಹೊಸ ಸ್ಟಾರ್ಟ್‌ಅಪ್‌ ‘ಒನ್‌ ಟೈಮ್‌ ಜಾಬ್ಸ್‌’  ಆರಂಭಿಸಿದ್ದರು.ದಿನನಿತ್ಯದ ಬದುಕಿನಲ್ಲಿ ಎದುರಾಗುವ ಎಲ್ಲ ಬಗೆಯ ಸಮಸ್ಯೆಗಳನ್ನು ಪರಿಹರಿಸುವ   ಸೇವೆಗಳನ್ನು ಒದಗಿಸುವ ವಿಶಿಷ್ಟ  ನವೋದ್ಯಮ ಇದಾಗಿದೆ.

ಇದುವರೆಗೆ 70 ವಿಭಿನ್ನ ಬಗೆಯ ಸೇವೆಗಳನ್ನು  ಒದಗಿಸಲಾಗುತ್ತಿದೆ. ಇನ್ನಷ್ಟು ಸೇವೆಗಳನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ.  ಗುಣಮಟ್ಟ, ಸಕಾಲಿಕ, ನಂಬಿಕೆಯ ಮತ್ತು ಸಮಗ್ರತೆಯ ಸೇವೆಗೆ ಸಂಸ್ಥೆ ಒತ್ತು ಕೊಡುತ್ತಿದೆ. ನಗರವಾಸಿಗಳು ದಿನನಿತ್ಯ ಎದುರಿಸುವ ಅನೇಕ ತೊಂದರೆಗಳನ್ನು  ಬಗೆಹರಿಸಲು ನೆರವಾಗುವ, ಅವರ ನೆಮ್ಮದಿ ಹೆಚ್ಚಿಸುವ ವಿಶಿಷ್ಟ ಸೇವಾ ಉದ್ದಿಮೆ  ಇದಾಗಿದೆ. 
ಮಾಹಿತಿಗೆ: https://www.otj247.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT