ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸಾಮ್ರಾಜ್ಯದಲ್ಲಿ ವಿಪ್ಲವ

Last Updated 1 ನವೆಂಬರ್ 2016, 19:30 IST
ಅಕ್ಷರ ಗಾತ್ರ

148 ವರ್ಷಗಳ ಇತಿಹಾಸ ಇರುವ, ದೇಶದ ಅತ್ಯಂತ ವಿಶ್ವಾಸಾರ್ಹ ಉದ್ದಿಮೆ ಸಮೂಹಗಳಲ್ಲಿ ಒಂದಾಗಿರುವ, ದೇಶಿ ಬಹುರಾಷ್ಟ್ರೀಯ ಸಂಸ್ಥೆಯಾಗಿರುವ ಟಾಟಾ ಸಮೂಹದ ಬೋರ್ಡ್‌ರೂಂನಲ್ಲಿ ದೀಪಾವಳಿಗೆ ಮುನ್ನವೇ ಸದ್ದಿಲ್ಲದೇ ಕ್ರಾಂತಿಯೊಂದು ನಡೆದು ಹೋಗಿದೆ. ಸಮೂಹದ ಅಧ್ಯಕ್ಷರನ್ನು ಹಠಾತ್ತಾಗಿ ಪದಚ್ಯುತಗೊಳಿಸಲಾಗಿದೆ. ಅಂಬಾನಿ ಸೋದರರ ಮಧ್ಯೆ ನಡೆದಿದ್ದ ಕಲಹದ ನಂತರ ದೇಶಿ ಕಾರ್ಪೊರೇಟ್‌ ಜಗತ್ತಿನಲ್ಲಿ ಈ ವಿದ್ಯಮಾನ ಹೆಚ್ಚು ಗಮನ ಸೆಳೆದಿದೆ.

ಇದೊಂದು ಹಠಾತ್‌ ಬೆಳವಣಿಗೆಯಲ್ಲ. ಹಲವಾರು ತಿಂಗಳುಗಳಿಂದ ಇಂತಹ ಒಂದು ಆಲೋಚನೆ ಬೋರ್ಡ್‌ರೂಂನಲ್ಲಿ ಗಿರಕಿ ಹೊಡೆಯುತ್ತಿತ್ತು.  ಮಿಸ್ತ್ರಿ ಅವರೇ ರಾಜೀನಾಮೆ ನೀಡಿ ಗೌರವದಿಂದಲೇ ಹೊರ ನಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕೆ ಸಮ್ಮತಿ ಸೂಚಿಸದ ಮಿಸ್ತ್ರಿ ಬೋರ್ಡ್‌ರೂಂ ಸದಸ್ಯರನ್ನು ಎದುರು ಹಾಕಿಕೊಂಡಿದ್ದರು ಎಂದೂ ಹೇಳಲಾಗುತ್ತಿದೆ. ಈಗ ಮಿಸ್ತ್ರಿ ಅವರು, ರತನ್‌ ಟಾಟಾ ವಿರುದ್ಧ ತಮ್ಮೆಲ್ಲ ಅಸಮಾಧಾನವನ್ನು ಹೊರಹಾಕಿದ್ದಾರೆ.

ನಾಯಕತ್ವ ಬದಲಾವಣೆಯು ಒಂದೊಂದು ಬಾರಿ ಯಾವ ಬಗೆಯಲ್ಲಿ ಹಠಾತ್ತಾಗಿ ತಿರುವು ಪಡೆಯುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ. ಕುಟುಂಬದ ನಿರ್ವಹಣೆಯಲ್ಲಿರುವ ಉದ್ದಿಮೆ ಸಂಸ್ಥೆಗೆ ಅಧ್ಯಕ್ಷರಾಗಿ ನೇಮಕಗೊಳ್ಳುವ ಹೊರಗಿನವರು  ಪ್ರವರ್ತಕ ಸಂಸ್ಥೆಯ ವಿಶ್ವಾಸಕ್ಕೆ ಎರವಾದರೆ ಏನಾದೀತು ಎನ್ನುವುದಕ್ಕೂ ಇದೊಂದು ಪಾಠವಾಗಿದೆ.

ಮಿಸ್ತ್ರಿ ಅವರನ್ನು ಹೊರ ಹಾಕಿರುವುದಕ್ಕೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದೆ. ಟಾಟಾ ಸಮೂಹದ ಪ್ರವರ್ತಕ ಸಂಸ್ಥೆಯಾಗಿರುವ ಟಾಟಾ ಸನ್ಸ್‌ನ ನಿರ್ದೇಶಕ ಮಂಡಳಿಯು ಮಿಸ್ತ್ರಿ ಅವರನ್ನು ವಜಾ ಮಾಡಿದ್ದರೂ, ವಾಸ್ತವದಲ್ಲಿ ರತನ್‌ ಟಾಟಾ ಅವರೇ ಈ ಬೋರ್ಡ್‌ರೂಂ ಕ್ಷಿಪ್ರಕ್ರಾಂತಿಯ ಹಿಂದಿರುವ ಪ್ರಮುಖ ವ್ಯಕ್ತಿ ಎಂದೇ ನಂಬಲಾಗಿದೆ.

ದೀಪಾವಳಿಗೆ ಒಂದು ವಾರದ ಮುಂಚೆಯೇ ಈ ಸ್ಫೋಟಕ ವಿದ್ಯಮಾನ ನಡೆದಿದ್ದರೂ, ಅದರ ಕಂಪನಗಳು ಇನ್ನೂ  ನಿಂತಿಲ್ಲ. ತಕ್ಷಣಕ್ಕೆ ನಿಲ್ಲುವ ಸೂಚನೆಗಳೂ ಕಾಣುತ್ತಿಲ್ಲ. ಒಟ್ಟಾರೆ ಬೆಳವಣಿಗೆಯು ದಿನಕ್ಕೊಂದು ತಿರುವು ಪಡೆಯುತ್ತಿದೆ.

ಮಿಸ್ತ್ರಿ ವಜಾಕ್ಕೆ ಕೆಲವು ಕಾರಣಗಳನ್ನು ನೀಡಲಾಗುತ್ತಿದ್ದರೂ ಇಡೀ ವಿದ್ಯಮಾನವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಮತ್ತು ಅದರ ಪರಿಣಾಮಗಳ ಅಂದಾಜು ಮಾಡಲು ಇನ್ನೂ ಕೆಲ ಸಮಯ ಬೇಕಾಗಲಿದೆ.

ಈ ನಿರ್ಧಾರ ಉಂಟು ಮಾಡಿದ ಗೊಂದಲದಿಂದಾಗಿ ಷೇರುಪೇಟೆಯಲ್ಲಿ ಸತತ ಮೂರು ದಿನಗಳ ಕಾಲ ಟಾಟಾ ಸಮೂಹದ ವಿವಿಧ ಉದ್ದಿಮೆಗಳ ಷೇರುಗಳು ಕುಸಿತ ಕಂಡಿದ್ದವು. ಷೇರು ಮಾರುಕಟ್ಟೆ ಮೌಲ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ನಷ್ಟಕ್ಕೆ ಗುರಿಯಾಗಿದ್ದವು. ಇದರಿಂದ ಷೇರುದಾರರು ವಿಚಲಿತಗೊಂಡಿದ್ದರು.

ಮಿಸ್ತ್ರಿ ವಜಾ ವಿದ್ಯಮಾನವು ಹಳೆಯ ಮತ್ತು ಹೊಸ ತಲೆಮಾರುಗಳ ನಡುವಣ ಸಂಘರ್ಘದ ಪ್ರತೀಕವೂ ಹೌದು. ಹಿಂದಿನ ತಲೆಮಾರಿನವರು ಸ್ಥಾಪಿಸಿ, ಬೆಳೆಸಿ, ಪೋಷಿಸಿದ ಉದ್ದಿಮೆ ವಹಿವಾಟನ್ನು ಇನ್ನಷ್ಟು ಮುತುವರ್ಜಿಯಿಂದ ಬೆಳೆಸಿಕೊಂಡು ಹೋಗುವುದೇ ಹೆಚ್ಚು ಜಾಣತನದ್ದು ಎಂಬುದು ರತನ್‌ ಟಾಟಾ ಅವರ ನಂಬಿಕೆಯಾಗಿದೆ.

ಹೂಡಿಕೆದಾರರ ವಿಶ್ವಾಸಕ್ಕೆ ಎರವಾಗದೆ, ವಹಿವಾಟಿನಲ್ಲಿ ಹೆಚ್ಚೆಚ್ಚು ಲಾಭ ಗಳಿಸುವ ಕಾರ್ಯತಂತ್ರದಲ್ಲಿ ವಿಶ್ವಾಸ ಇರಿಸಿರುವುದು ಮಿಸ್ತ್ರಿ ಅವರ ವಿಚಾರಧಾರೆಯಾಗಿದೆ. ಈ ಎರಡು ವಿಭಿನ್ನ ವ್ಯವಹಾರಿಕ ದೃಷ್ಟಿಕೋನವೂ ಉದ್ದಿಮೆ ಸಾಮ್ರಾಜ್ಯ ವಿಸ್ತರಣೆಯಲ್ಲಿಯೂ ಪ್ರತಿಫಲನಗೊಂಡು ಸಂಘರ್ಘಕ್ಕೆ ಎಡೆ ಮಾಡಿಕೊಟ್ಟಿದ್ದರಿಂದಲೇ ಮಿಸ್ತ್ರಿ ಅವರು ಹೊರಬರಬೇಕಾಯಿತು.

ಟಾಟಾ ಕುಟುಂಬಕ್ಕೆ ಸೇರದ ಮೊದಲ ಅಧ್ಯಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಿಸ್ತ್ರಿ, ವಜಾಗೊಂಡ ಮೊದಲ ಅಧ್ಯಕ್ಷ ಎನ್ನುವ ಕುಖ್ಯಾತಿಯನ್ನೂ ತಮ್ಮ ಹೆಸರಿಗೆ ಅಂಟಿಸಿಕೊಂಡು ಹೊರ ನಡೆದಿದ್ದಾರೆ.

ಉದ್ದಿಮೆ ವಹಿವಾಟು ವಿಸ್ತಾರಗೊಳ್ಳಬೇಕು ಎನ್ನುವುದು ರತನ್‌ ಅವರ ಆಶಯವಾಗಿತ್ತು. ಆದರೆ, ಮಿಸ್ತ್ರಿ ಅಧಿಕಾರಾವಧಿಯಲ್ಲಿ  ಸಮೂಹದ ಬೆಳವಣಿಗೆ ಸ್ಥಗಿತಗೊಂಡಿತ್ತು. ಮಿಸ್ತ್ರಿ ಅವರು ರತನ್‌ ಟಾಟಾ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.  ಮಿಸ್ತ್ರಿ ಅವರ ಕಾರ್ಯವೈಖರಿ ಮತ್ತು ನಿರ್ಧಾರಗಳು  ಬಹುಶಃ ರತನ್‌ ಅವರಿಗೂ ಪಥ್ಯವಾಗಿರಲಿಲ್ಲ.

ಮುಂಬೈನಲ್ಲಿ ಇರುವ ಸಮೂಹದ ಪ್ರಧಾನ ಕಚೇರಿ ಬಾಂಬೆ ಹೌಸ್‌ನಿಂದ ಹೊರ ಬಿದ್ದಿರುವ ವರದಿಗಳ ಪ್ರಕಾರ, ರತನ್‌ ಟಾಟಾ ಅವರಿಂದ ಬಳುವಳಿಯಾಗಿ ಬಂದ ಹಲವಾರು ಉದ್ದಿಮೆಗಳು ನಷ್ಟಪೀಡಿತ ವಾಗಿದ್ದವು ಎಂದು ಸೈರಸ್‌ ಮಿಸ್ತ್ರಿ  ನೇರ ಆರೋಪ ಮಾಡಿದ್ದಾರೆ.

ಸೈರಸ್‌ ಅವರೂ ಹಲವು ಉದ್ದಿಮೆಗಳನ್ನು ಮಾರಾಟ ಮಾಡಿದ್ದರೂ, ಯಾವುದೇ ಹೊಸ ಉದ್ದಿಮೆ ಆರಂಭಿಸಿರಲಿಲ್ಲ. ಮಿಸ್ತ್ರಿ ಅವರ ಜತೆಗಿದ್ದ ತಂಡವು, ಉದ್ಯಮ ಲೋಕದ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಷ್ಟು ಸಮರ್ಥವಾಗಿರಲಿಲ್ಲ. ಟಾಟಾ ಮತ್ತು ಜಪಾನಿನ ಟೊಕೊಮೊ ಸಂಸ್ಥೆ ಜತೆಗಿನ ಒಡಕನ್ನು ನಿರ್ವಹಿಸಿದ ರೀತಿ ರತನ್‌ ಅವರಲ್ಲಿ ಅಸಮಾಧಾನ ಮೂಡಿಸಿತ್ತು.

ನಿವೃತ್ತಿ ನಂತರವೂ ರತನ್‌ ಅವರು ಸಮೂಹದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದರು. ದಿನನಿತ್ಯದ ವ್ಯವಹಾರಗಳ ಲ್ಲಿ ಮುಳುಗಿದ್ದ ಮಿಸ್ತ್ರಿ, ಈ ನಿಟ್ಟಿನಲ್ಲಿ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ.

ಸಂಸ್ಥೆಯ ದೀರ್ಘಾವಧಿ ಹಿತಾಸಕ್ತಿ ರಕ್ಷಣೆಯ ಉದ್ದೇಶಕ್ಕೆ ಮಿಸ್ತ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ಹೊರಗೆ ಹಾಕಲಾಗಿದೆ ಎಂದು ಟಾಟಾ ಸನ್ಸ್‌ , ಕಾರಣ ನೀಡಿರುವುದು ಈ ಮಾತನ್ನು ಪುಷ್ಟೀಕರಿಸುತ್ತದೆ.

ಮಿಸ್ತ್ರಿ ವಜಾ ನಿರ್ಧಾರದಿಂದ ಆಗಿರುವ ನಷ್ಟವನ್ನು ತುರ್ತಾಗಿ ಭರ್ತಿ ಮಾಡಲು ಟಾಟಾ ಸನ್ಸ್‌ ನಿರ್ಧರಿಸಿದೆ. ನಾಲ್ಕು ತಿಂಗಳಲ್ಲಿ ಹೊಸ ಅಧ್ಯಕ್ಷನನ್ನು ಆಯ್ಕೆ ಮಾಡಲು ಕಾಲ ಮಿತಿ ವಿಧಿಸಿರುವುದು ಟಾಟಾ ಸನ್ಸ್‌ನ ಆತಂಕಕ್ಕೆ ನಿದರ್ಶನವಾಗಿದೆ. ಮಿಸ್ತ್ರಿ ಅವರು, ನಿರ್ದೇಶಕ ಮಂಡಳಿ ಸದಸ್ಯರಿಗೆ ಬರೆದ ಇ–ಮೇಲ್‌ನಲ್ಲಿ  ರತನ್‌ ಟಾಟಾ ಅವರ ವಿರುದ್ಧವೇ ಹಲವಾರು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿರುವುದು, ಟಾಟಾ ಸಮೂಹದ  ಯಜಮಾನನ ವ್ಯಕ್ತಿತ್ವವನ್ನೇ ಪರೀಕ್ಷೆಗೆ ಒಡ್ಡಿದೆ.

ಮಿಸ್ತ್ರಿ ಅವರು ಮಾಡಿರುವ ಆರೋಪಗಳಿಗೆ ಎದಿರೇಟು ನೀಡಿರುವ ಟಾಟಾ ಸಮೂಹವು, ಕೆಲ ಪ್ರಶ್ನೆಗಳಿಗೆ ಸೂಕ್ತ ವೇದಿಕೆಯಲ್ಲಿ ಉತ್ತರ ನೀಡುವುದಾಗಿ ಹೇಳಿದೆ.  ಸಂಸ್ಥೆಯ ಲಕ್ಷಾಂತರ ಷೇರುದಾರರಲ್ಲಿ ಮೂಡಿರುವ ಹಲವಾರು ಸಂದೇಹಗಳಿಗೆ ಉತ್ತರ ನೀಡುವ ಜವಾಬ್ದಾರಿ ರತನ್‌ ಟಾಟಾ ಅವರ ಮೇಲೆ ಇದೆ.

ಮಿಸ್ತ್ರಿ ವಜಾಗೊಳಿಸಿದ ನಂತರದ ದಿನಗಳಲ್ಲಿ ಈ ಪ್ರಕರಣ ದಿನಕ್ಕೊಂದು ಹೊಸ ರೂಪ ಪಡೆಯುತ್ತಿದೆ.  ಮಿಸ್ತ್ರಿ ಮತ್ತು ರತನ್‌ ಟಾಟಾ ಅವರ ಪರವಾಗಿ ಆರೋಪ, ಪ್ರತ್ಯಾರೋಪಗಳ ದೂಷಣೆ ನಿರಂತರವಾಗಿ ನಡೆದಿದೆ.

ಮಿಸ್ತ್ರಿ ಅವರು ತಮ್ಮ ವಜಾ ಆದೇಶದ ವಿರುದ್ಧ ಕೋರ್ಟ್‌ನಿಂದ ತಡೆಯಾಜ್ಞೆ ತರಬಹುದು ಎಂಬ ನಿರೀಕ್ಷೆಯಲ್ಲಿ, ಟಾಟಾ ಸಮೂಹವು ಮುಂಜಾಗ್ರತಾ ಕ್ರಮವಾಗಿ ಕೋರ್ಟ್‌ಗಳಲ್ಲಿ ಕೇವಿಯಟ್‌ ಸಲ್ಲಿಸಿದೆ. ಈ ಬೆಳವಣಿಗೆಗಳು ಟಾಟಾ ಸಮೂಹದ ವಿಶ್ವಾಸಾರ್ಹತೆಯ ಬ್ರ್ಯಾಂಡ್‌ಗೆ ಕೆಲಮಟ್ಟಿಗೆ ಧಕ್ಕೆ ತಂದಿರುವುದನ್ನು ಅಲ್ಲಗಳೆಯಲಿಕ್ಕಾಗದು.

ಈ ಅನಿರೀಕ್ಷಿತ ವಿದ್ಯಮಾನವು ಕಾರ್ಪೊರೇಟ್‌ ಜಗತ್ತಿನಲ್ಲಿ ಸಂಚಲನ ಮೂಡಿಸಿ   ಸಂಸ್ಥೆಯ ಲಕ್ಷಾಂತರ ಷೇರುದಾರರಲ್ಲಿ ಆತಂಕಕ್ಕೆ  ಕಾರಣವಾಗಿದೆ.  ಸಮೂಹದ ವಿವಿಧ ಸಂಸ್ಥೆಗಳ ಕಳಪೆ ಹಣಕಾಸು ಸಾಧನೆ ಬಗ್ಗೆ ಸಾಕಷ್ಟು ಚರ್ಚೆಗೂ ಎಡೆಮಾಡಿಕೊಟ್ಟಿದೆ.

ಒಂದು ದಶಕದ ಅವಧಿಯಲ್ಲಿ ಸಮೂಹದ ಬಂಡವಾಳ ಹೂಡಿಕೆ ಮತ್ತು ಸ್ವಾಧೀನ ಪ್ರಕ್ರಿಯೆಗಳ  ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿದ್ದವು. 
ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಮತ್ತು ಟಾಟಾ ಮೋಟಾರ್ಸ್‌ಗಳು ಮಾತ್ರ ಗರಿಷ್ಠ ಮಟ್ಟದಲ್ಲಿ ಲಾಭದಾಯಕವಾಗಿ ಮುನ್ನಡೆದಿವೆ. ಏಳು ವರ್ಷಗಳಲ್ಲಿ   ಟಾಟಾ ಸನ್ಸ್‌ ಗಳಿಸಿದ ಲಾಭಾಂಶದಲ್ಲಿ ಈ ಎರಡೂ ಉದ್ದಿಮೆ ಸಂಸ್ಥೆಗಳ ಪಾಲು ಶೇ 70ರಷ್ಟಿದೆ.

ಟಾಟಾ ಸಮೂಹದಲ್ಲಿ ಬಿರುಗಾಳಿ ಏಳುವುದು ವಿರಳ ವಿದ್ಯಮಾನವೇನೂ ಅಲ್ಲ.  ರತನ್‌ ಟಾಟಾ ಅವರು  ಅಧ್ಯಕ್ಷರಾದ ಹೊಸದರಲ್ಲಿಯೂ ಬೋರ್ಡ್‌ರೂಂನಲ್ಲಿ ಬಿರುಗಾಳಿ ಕಂಡು ಬಂದಿತ್ತು. ಮಿಸ್ತ್ರಿ ಅವರನ್ನು ಹೊರಹಾಕಿದ ಬೆನ್ನಲ್ಲೇ ಕೇಳಿ ಬಂದಿರುವ ಹಲವಾರು ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡುವ ಹೊಣೆಗಾರಿಕೆಯು ರತನ್‌ ಟಾಟಾ ಅವರ ಮೇಲೆ ಇದೆ.

ಮಿಸ್ತ್ರಿ ಅವರು, ಈಗಲೂ ಟಾಟಾ ಮೋಟಾರ್ಸ್‌, ಟಾಟಾ ಸ್ಟೀಲ್‌, ಟಿಸಿಎಸ್‌ ಮತ್ತು ಟಾಟಾ ಪವರ್‌ ಸಂಸ್ಥೆಗಳ ಅಧ್ಯಕ್ಷ ಹುದ್ದೆ ತೊರೆಯದಿರುವುದು ಅವರಲ್ಲಿನ ಸಂಘರ್ಷ ಭಾವಕ್ಕೆ ನಿದರ್ಶನವಾಗಿದೆ. ಮುಂಬರುವ ದಿನಗಳಲ್ಲಿ ಈ ಸಂಘರ್ಷ ಇನ್ನಷ್ಟು ತಾರಕಕ್ಕೆ ಏರುವ ಸ್ಪಷ್ಟ ಸೂಚನೆಯೂ ಇದಾಗಿದೆ.

ಹೊಸ ಅಧ್ಯಕ್ಷರ ಆಯ್ಕೆ ವಿಷಯವು ಕಗ್ಗಂಟ್ಟಾಗುವುದೇ ಅಥವಾ ಸುಲಲಿತವಾಗಿ ಬಗೆಹರಿಯುವುದೇ ಕಾದು ನೋಡಬೇಕು. ಒಳಗಿನವರು ಇಲ್ಲವೆ ಹೊರಗಿನವರನ್ನು ಆಯ್ಕೆ ಮಾಡಲಾಗುವುದೇ ಎನ್ನುವುದೂ ಸಾಕಷ್ಟು ಕುತೂಹಲ ಮೂಡಿಸಿದೆ. ಟಾಟಾ ಸಮೂಹವು ಈ ಬಿಕ್ಕಟ್ಟಿನಿಂದ ಹೊರ ಬಂದು ಸಮಕಾಲೀನ ಸವಾಲುಗಳನ್ನು ಹೇಗೆ ಎದುರಿಸಲಿದೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಲಿದೆ.

ಪ್ರಮುಖ ಉದ್ದಿಮೆಗಳು
ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌, ಟಾಟಾ ಪವರ್‌, ಟಾಟಾ ಕೆಮಿಕಲ್ಸ್‌, ಟಾಟಾ ಗ್ಲೋಬಲ್‌ ಬಿವರೀಜ್‌, ಟಾಟಾ ಟೆಲೆಸರ್ವಿಸಸ್‌, ಟೈಟಾನ್‌, ಟಾಟಾ ಕಮ್ಯುನಿಕೇಷನ್ಸ್‌ ಮತ್ತು ಇಂಡಿಯನ್‌ ಹೋಟೆಲ್ಸ್‌

ಉದ್ದಿಮೆಗಳು
ಉಪ್ಪು, ಉಕ್ಕು, ಚರ್ಮದ ಉತ್‍ಪನ್ನ, ಟ್ರಕ್‌, ಬಸ್‌, ಸಾಫ್ಟ್‌ವೇರ್‌ ಸೇರಿ ವೈವಿಧ್ಯಮಯ ಉದ್ದಿಮೆಗಳು

*
ನಿರ್ದೇಶಕ ಮಂಡಳಿಯಲ್ಲಿ ನನ್ನನ್ನು  ಅದಕ್ಷನಂತೆ ಬಿಂಬಿಸಲಾಗಿತ್ತು. ನನ್ನ ಕೈ ಕಟ್ಟಿ ಹಾಕಲಾಗಿತ್ತು. ಮಹತ್ವದ ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ  ಪರ್ಯಾಯ ಶಕ್ತಿ ಕೇಂದ್ರ ಸೃಷ್ಟಿಸಲಾಗಿತ್ತು.
–ಸೈರಸ್‌ ಮಿಸ್ತ್ರಿ, ಟಾಟಾ ಸಮೂಹದ ಪದಚ್ಯುತ ಅಧ್ಯಕ್ಷ

*
ಮಿಸ್ತ್ರಿ ಅವರಿಗೆ ಸಂಪೂರ್ಣ ಸ್ವಾಯತ್ತತೆ ನೀಡಿದ್ದರೂ, ಮಂಡಳಿಯ ವಿಶ್ವಾಸಕ್ಕೆ ಎರವಾಗಿದ್ದರು. ಸಮೂಹದ ವರ್ಚಸ್ಸಿಗೆ  ಮಸಿ ಬಳಿಯಲು ಯತ್ನಿಸಿರುವುದು ಅಕ್ಷಮ್ಯ
ಟಾಟಾ ಸನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT