ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಣುಕು ಆಹಾರವಿಲ್ಲದಿದ್ದರೂ ಟಿ.ವಿ. ಮೂರಿವೆ

ಬೆಳೆಯುತ್ತಲೇ ಇದೆ ಅಮೆರಿಕದ ಬಡತನ ಮತ್ತು ಈ ಬಗ್ಗೆ ರಾಜಕಾರಣಿಗಳ ಅಸಡ್ಡೆ
ಅಕ್ಷರ ಗಾತ್ರ

ಪೈನ್ ಬ್ಲಫ್ (ಅರ್ಕನ್‍ಸಸ್): ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳು ಪ್ರಸ್ತಾಪವೇ ಮಾಡದ ರೀತಿಯ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ: ಒಳ್ಳೆಯ, ಮುಖದ ತುಂಬಾ ನಗುವಿನ ಆದರೆ ವಿನಾಶದ ಅಂಚಿನಲ್ಲಿರುವ 13 ವರ್ಷದ ಈ ಹುಡುಗನ ಹೆಸರು ಇಮ್ಯಾನುವೆಲ್ ಲಾಸ್ಟರ್. ಇಮ್ಯಾನುವೆಲ್‌ನ ಕೊಠಡಿಯಲ್ಲಿ ಮೂರು ಟಿ.ವಿ.ಗಳಿವೆ. ಅವುಗಳಲ್ಲಿ ಎರಡು ದೊಡ್ಡ ದೊಡ್ಡ ಟಿ.ವಿ.ಗಳು. ಆದರೆ ಮನೆಯಲ್ಲಿ ಒಂದು ತುಣುಕು ಆಹಾರವೂ ಇಲ್ಲ. ಟಿ.ವಿ.ಗಳ ವಿಷಯಕ್ಕೆ ಬಂದರೆ ಅವುಗಳಲ್ಲಿ ಒಂದು ಕೆಲಸ ಮಾಡುತ್ತಿಲ್ಲ; ವಿದ್ಯುತ್ ಶುಲ್ಕ ಪಾವತಿಸಿಲ್ಲ, ಹಾಗಾಗಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ ಎಂದು ಪೈನ್ ಬ್ಲಫ್‌ನಲ್ಲಿರುವ ಆತನ ಮನೆಗೆ ನಾನು ಹೋದಾಗ ಆತ ಹೇಳಿದ. ಇಮ್ಯಾನುವೆಲ್‌ನ ತಾಯಿ ತಮ್ಮ ಪಿಟ್ ಬುಲ್ ಟೆರಿಯರ್ ಜಾತಿಯ ನಾಯಿಯನ್ನು ಅಂಗಳದಲ್ಲಿ ಬಿಟ್ಟಿದ್ದಾರೆ. ವಿದ್ಯುತ್ ಕಡಿತ ಮಾಡಲು ಬರುವವನು ಹೆದರಿ ಹಿಂದೆ ಹೋಗಲಿ ಎಂಬುದು ಅವರ ಉದ್ದೇಶ (ಅವರ ಉದ್ದೇಶ ಈಡೇರುವಂತೆ ಕಾಣಿಸುತ್ತದೆ).

ಕೊಳಕಾಗಿ ಅಸ್ತವ್ಯಸ್ತವಾಗಿರುವ ಮನೆಯ ಹೊರ ಬಾಗಿಲು ಮುರಿದಿದೆ. ಮನೆಯೊಳಗೆ ಹೊಕ್ಕರೆ ಮರಿಜುವಾನಾದ ದಟ್ಟ ಘಾಟು ಮೂಗಿಗೆ ಅಡರುತ್ತದೆ. ಟಿ.ವಿ.ಗಳು ಮತ್ತು ಇಮ್ಯಾನುವೆಲ್‌ನ  ಹಾಸಿಗೆಯಿಂದಾಗಿ ಕೋಣೆಗೆ ಮಹತ್ವಾಕಾಂಕ್ಷಿ ಮಧ್ಯಮ ವರ್ಗದ ಸ್ಪರ್ಶ ಇದೆ. ಆದರೆ ಇವೆಲ್ಲವೂ ಕಂತಿನಲ್ಲಿ ತಂದವುಗಳು ಮತ್ತು ಶೀಘ್ರವೇ ಅವರು ಅದನ್ನು ಒಯ್ಯಲಿದ್ದಾರೆ. ಅಡುಗೆ ಮನೆಯಲ್ಲಿ ಕೊಳಕಾದ ಕೆಲವು ಪಾತ್ರೆಗಳು ಬಿಟ್ಟರೆ ಬೇರೇನೂ ಇಲ್ಲ.
‘ನನಗೆ ಹಸಿವಾಗುತ್ತಿದೆ’ ಎಂದು ಇಮ್ಯಾನುವೆಲ್ ಹೇಳಿದ.

ಒಂದು ವೇಳೆ ಇಮ್ಯಾನುವೆಲ್ ಸಿರಿಯಾದ ಅಲೆಪ್ಪೊದಲ್ಲಿದ್ದಿದ್ದರೆ ಅಧ್ಯಕ್ಷೀಯ ಚರ್ಚೆಯಲ್ಲಿ ಆತನ ಬಗ್ಗೆ ಚರ್ಚಿಸಬಹುದಾಗಿತ್ತು- ಸಂಕ್ಷಿಪ್ತವಾದ, ಯಾವ ಪರಿಣಾಮವೂ ಉಂಟು ಮಾಡದ ಈ ಚರ್ಚೆಯ ಸಂದರ್ಭದಲ್ಲಿ ಸ್ವಲ್ಪ ಉದ್ವೇಗಭರಿತರಾಗಬಹುದಿತ್ತು. ಆದರೆ ಬಡತನ, ಮಾದಕ ಪದಾರ್ಥ ವ್ಯಸನ, ಅಸಹಾಯಕತೆ ಎಲ್ಲದರ ಬಲಿಪಶುವಾಗಿರುವ ಇಮ್ಯಾನುವೆಲ್ ಯಾರಿಗೂ ಸಲ್ಲದಿದ್ದರೂ ಅಮೆರಿಕದವನು. ಹಾಗಾಗಿ ಇಲ್ಲಿ ಅವನು ಅಗೋಚರ ಕೂಡ.

‘ನನಗೆ ಶಾಲೆಗೆ ಹೋಗಬೇಕು ಎಂಬ ಆಸೆ ಇದೆ’ ಎಂದು ಇಮ್ಯಾನುವೆಲ್ ಹೇಳುತ್ತಾನೆ. ಹಿಂದೆ ಶಾಲೆಗೆ ಹೋಗುತ್ತಿದ್ದಾಗ ತರಗತಿಯಲ್ಲಿ ಆತನಿಗೆ ‘ಎ’ ಮತ್ತು ‘ಬಿ’ ಶ್ರೇಣಿಗಳು ಸಿಗುತ್ತಿದ್ದವು. ‘ನಮ್ಮ ಕುಟುಂಬದಲ್ಲಿ ಶಾಲೆಗೆ ಹೋದ ಮೊದಲಿಗ ನಾನು. ಪೊಲೀಸ್ ಅಧಿಕಾರಿ ಅಥವಾ ಅಗ್ನಿಶಾಮಕ ಸಿಬ್ಬಂದಿ ಅಥವಾ ನ್ಯಾಯಾಧೀಶ ಆಗಬೇಕು ಎಂದು ನನಗೆ ಆಸೆ ಇತ್ತು’ ಎಂಬುದು ಇಮ್ಯಾನುವೆಲ್‌ನ ಮಾತುಗಳು. ಆದರೆ ಮನೆಯೊಳಗೆ ಒಂದೇ ಒಂದು ಪುಸ್ತಕ ಇಲ್ಲ ಎಂಬುದನ್ನೂ ಆತನೇ ಹೇಳುತ್ತಾನೆ. ಇಮ್ಯಾನುವೆಲ್‌ನ ಆಕಾಂಕ್ಷೆಗಳು ಶ್ಲಾಘನೀಯ. ಆದರೆ ಬಡತನದಲ್ಲಿ ಬೆಳೆಯುವ ಮಕ್ಕಳು ಯಶಸ್ಸನ್ನು ಕಾಣುವುದಕ್ಕೆ ಇರುವ ಅಡ್ಡಿಗಳು ಅಸಂಖ್ಯ.

ಅಂಗಡಿಯಿಂದ ಕಳ್ಳತನ ಮಾಡುವಾಗ ಆತ ಸಿಕ್ಕಿ ಬಿದ್ದಿದ್ದಾನೆ- ‘ಈಗ ಆ ಕೆಲಸ ಮಾಡುತ್ತಿಲ್ಲ’ ಎಂದು ದೃಢವಾಗಿ ಹೇಳಿದ. ಆ ಧ್ವನಿಯಲ್ಲಿ ತಪ್ಪಿತಸ್ಥ ಭಾವನೆ, ಮುಜುಗರ ಎಲ್ಲವೂ ಇವೆ. ಆತನ ತಾಯಿ ಕ್ರಿಸ್ಟೀನಾ ಲಾಸ್ಟರ್‌ಗೆ ಮಗನ ಬಗ್ಗೆ ಚಿಂತೆಯಾಗಿದೆ. ಇಲ್ಲಿನ ಭೂಗತ ಗುಂಪುಗಳು 14ರ ವಯಸ್ಸಿಗೇ ಹುಡುಗರನ್ನು ನೇಮಕ ಮಾಡಿಕೊಳ್ಳುತ್ತವೆ. ಇಮ್ಯಾನುವೆಲ್‌ನ  ಹಲವು ಗೆಳೆಯರು ಕೈಯಲ್ಲಿ ಚಾಕು ಹಿಡಿದು ತಿರುಗಾಡುತ್ತಿದ್ದಾರೆ.

ಪ್ರತಿ ವರ್ಷವೂ ನಾನು ಆಫ್ರಿಕಾ ಅಥವಾ ಏಷ್ಯಾದ ದೇಶಗಳಲ್ಲಿನ ಬಡತನ, ಕಾಯಿಲೆ, ಹಸಿವಿನ ಬಗ್ಗೆ ವರದಿ ಮಾಡಲು ಹೋಗುತ್ತೇನೆ. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಯೊಬ್ಬರನ್ನು ಜತೆಗೆ ಕರೆದೊಯ್ಯುತ್ತೇನೆ. ಒಂದು ಸ್ಪರ್ಧೆಯ ಮೂಲಕ ವಿದ್ಯಾರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಅಧ್ಯಕ್ಷೀಯ ಅಭ್ಯರ್ಥಿಗಳು ಬಡತನವನ್ನು ನಿರ್ಲಕ್ಷಿಸಿದ್ದರಿಂದಾಗಿ ಅಮೆರಿಕದ ಬಡತನದ ಬಗ್ಗೆಯೇ ವರದಿ ಮಾಡಲು ನಿರ್ಧರಿಸಿದೆ. ಈ ಬಾರಿಯ ಸ್ಪರ್ಧೆಯ ವಿಜೇತೆ ನಾಟ್ರೆ ಡಾಮ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಕ್ಯಾಸಿಡಿ ಮೆಕ್‍ಡೊನಾಲ್ಡ್. ಅವರು ನನ್ನ ಜತೆ ಅಮೆರಿಕದ ಮತ್ತೊಂದು ಮುಖವನ್ನು ಕಾಣುವ ಪ್ರಯಾಸಕರ ಪ್ರವಾಸಕ್ಕೆ ಜತೆಯಾದರು. ಅದು ಪೈನ್ ಬ್ಲಫ್‌ನಿಂದ ಆರಂಭವಾಯಿತು.

ಅಮೆರಿಕದಲ್ಲಿ ಬಡತನ ಎಂಬುದು ಹಣದ ಕೊರತೆ ಅಲ್ಲ, ಬದಲಿಗೆ ಬಡತನದಿಂದ ಹೊರಗೆ ಬರಲು ದಾರಿಗಳೇ ಕಾಣದಾಗುವುದು. ಹಾಗಾಗಿ ಅಮೆರಿಕದ ಬಡತನ ಅಲ್ಲಿನ ಜನರಿಗೇ ಅರ್ಥವಾಗುವುದಿಲ್ಲ. ಅಮೆರಿಕದಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವಿಸುವ ಶೇ 80ಕ್ಕೂ ಹೆಚ್ಚು ಮನೆಗಳಿಗೆ ಹವಾನಿಯಂತ್ರಣ ವ್ಯವಸ್ಥೆ ಇದೆ. ಭೌತಿಕವಾಗಿ ಗಮನಿಸಿದರೆ ಭಾರತ ಅಥವಾ ಕಾಂಗೊದಲ್ಲಿನ ಬಡ ಕುಟುಂಬಗಳಿಗಿಂತ ಅಮೆರಿಕದ ಬಡವರು ಶ್ರೀಮಂತರು. ಆದರೆ ಬೇರೊಂದು ರೀತಿಯಲ್ಲಿ ನೋಡಿದರೆ ಅಮೆರಿಕದ ಬಡವರ ಬದುಕು ಇತರರಿಗಿಂತಲೂ ಶೋಚನೀಯ.

‘ಮುರಿದು ಬಿದ್ದ ವರ್ಗ’ದಲ್ಲಿ ಮಕ್ಕಳು ಜನಿಸಿದಾಗಲೇ ವೈಫಲ್ಯದೆಡೆಗಿನ ಅವರ ಪಯಣ ಆರಂಭವಾಗುತ್ತದೆ. ಹಿಂಸೆ, ಮಾನಸಿಕ ಅಸ್ವಾಸ್ಥ್ಯ, ಮಾದಕ ಪದಾರ್ಥ ಮತ್ತು ಲೈಂಗಿಕ ದೌರ್ಜನ್ಯ ಅವರ ಬಾಲ್ಯದಲ್ಲಿ ತುಂಬಿರುತ್ತವೆ. ಹೌದು, ಇಂತಹ ಹುಡುಗರು ಅವಿವೇಕದ ಕೆಲಸಗಳನ್ನು ಮಾಡುತ್ತಾರೆ, ಆದರೆ ಅವರು ಅವಿವೇಕಿಗಳಾದರು ಎಂದು ನಾವು ಭಾವಿಸುವುದಕ್ಕಿಂತಲೂ ಮೊದಲೇ ಆ ದಿಕ್ಕಿನಲ್ಲಿ ಅವರು ಸಾಗುವಂತೆ ನಾವೇ ಮಾಡಿರುತ್ತೇವೆ.

ಈ ಸಮಸ್ಯೆಗಳನ್ನು ನಿರ್ಮೂಲನ ಮಾಡಲು ಸರಳ ಸೂತ್ರವೇನೂ ಇಲ್ಲ. ಆದರೆ ಸರ್ಕಾರ ನೀತಿ ರೂಪಿಸುವ ಮೂಲಕ ಬದಲಾವಣೆ ತರುವುದಕ್ಕೆ ಸಾಧ್ಯ ಇದೆ. ಮಕ್ಕಳಿಗೆ ನೆರವು, ಕಡಿಮೆ ಆದಾಯದ ಕುಟುಂಬಗಳಿಗೆ ಸಹಾಯಧನ ನೀಡುವ ಮೂಲಕ ಉದ್ಯೋಗವನ್ನು ಪ್ರೋತ್ಸಾಹಿಸುವ   ಯೋಜನೆಗಳು ಉತ್ತಮ ಪರಿಣಾಮ ಉಂಟು ಮಾಡಿವೆ. ಹಣಕಾಸು ಸಾಕ್ಷರತೆ ಕಾರ್ಯಕ್ರಮಗಳು ಕುಟುಂಬಗಳಿಗೆ ಹಣದ ನಿರ್ವಹಣೆಯನ್ನು ಕಲಿಸಿವೆ. ಭಾರಿ ಟಿ.ವಿ. ಸೆಟ್ ಖರೀದಿಸದಂತೆ ಅವರನ್ನು ಈ ಕಾರ್ಯಕ್ರಮಗಳು ಮಾಡಿವೆ.

ಇತರ ದೇಶಗಳು ಬಡತನದ ಪ್ರಮಾಣವನ್ನು ಕಡಿತ ಮಾಡಿಕೊಂಡ ನಿದರ್ಶನಗಳು ನಮ್ಮ ಮುಂದಿವೆ. ಹಾಗಾಗಿ ಬಡತನ ನಿರ್ಮೂಲನೆಗೆ ಬೇಕಾದ ಜ್ಞಾನ ನಮ್ಮಲ್ಲಿದೆ ಎಂದು ಅರ್ಥ. 1999ರಲ್ಲಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್, ಮಕ್ಕಳು ಬಡತನದಿಂದ ನಲುಗುವುದರ ವಿರುದ್ಧ ಆಂದೋಲನವನ್ನೇ ನಡೆಸಿದರು. ಪರಿಣಾಮವಾಗಿ ಐದು ವರ್ಷಗಳ ಅವಧಿಯಲ್ಲಿ ಮಕ್ಕಳಲ್ಲಿನ ಬಡತನದ ಪ್ರಮಾಣ ಶೇ 26ರಿಂದ 14ಕ್ಕೆ ಇಳಿಯಿತು.

ಹದಿಹರೆಯದ ಬಾಲಕಿಯರು ಗರ್ಭ ಧರಿಸದಂತೆ ಜಾಗೃತಿ ಮೂಡಿಸುವುದು ಇಂತಹ ಒಂದು ಕ್ರಮ. ಟುಲ್ಸಾದಲ್ಲಿ ನಾವು ಭೇಟಿಯಾದ 17 ವರ್ಷದ ನತಾಲಿ ಲೆಡೆಸ್ಮಾಳನ್ನೇ ನೋಡಿ- ಆರನೇ ತರಗತಿ ಮುಗಿಸಿದ ನಂತರದ ಬೇಸಿಗೆ ರಜೆಯಲ್ಲಿ 13 ವರ್ಷದವಳಿದ್ದ ಆಕೆ 28ರ ಯುವಕನಿಂದ ಗರ್ಭ ಧರಿಸಿದಳು.

‘ಕಾಂಡೋಮ್ ಅಥವಾ ಜನನ ನಿಯಂತ್ರಣದ ಬಗ್ಗೆ ನನಗೇನೂ ತಿಳಿದೇ ಇರಲಿಲ್ಲ’ ಎಂದು ನತಾಲಿ ಹೇಳುತ್ತಾಳೆ. ‘ಒಂಬತ್ತನೇ ತರಗತಿಯಲ್ಲಿ ನಮಗೆ ಕೌಟುಂಬಿಕ ಆರೋಗ್ಯದ ಬಗ್ಗೆ ಪಾಠ ಇದೆ. ಆದರೆ ಆ ಹೊತ್ತಿಗೆ ನನ್ನ ಮಗುವಿಗೆ ಎರಡು ವರ್ಷವಾಗಿತ್ತು’ ಎಂದು ನತಾಲಿ ವಿವರಿಸುತ್ತಾಳೆ. ಒಂದು ವೇಳೆ ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಶಿಕ್ಷಣ ಮತ್ತು ಜನನ ನಿಯಂತ್ರಣ ಕ್ರಮಗಳ ಬಗ್ಗೆ ತಿಳಿದಿದ್ದರೆ ತಾನು ಗರ್ಭ ಧರಿಸುತ್ತಲೇ ಇರಲಿಲ್ಲವೇನೋ ಎಂದು ನತಾಲಿ ಹೇಳುತ್ತಾಳೆ.

ಒಟ್ಟಿನಲ್ಲಿ, ಬಡತನ ನಿರ್ಮೂಲನ ಹೇಗೆ ಮಾಡಬೇಕು ಎಂಬುದು ನಮಗೆ ತಿಳಿದಿದೆ, ಆದರೆ ಅದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಅಮೆರಿಕದ ಬಡತನಕ್ಕೆ ಸಂಬಂಧಿಸಿದಂತೆ ಇಲ್ಲಿ ಇರುವ ಪ್ರತಿಕ್ರಿಯೆ ಏನೆಂದರೆ, ಒಂದು ದೊಡ್ಡ ರಾಷ್ಟ್ರೀಯ ಅಸಡ್ಡೆ. ಹಾಗಾಗಿಯೇ ಅಭ್ಯರ್ಥಿಗಳು ಈ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಬೇಕು ಎಂದು ನಾನು ಬಯಸುತ್ತೇನೆ. ಆ ಕಾರಣಕ್ಕಾಗಿಯೇ ರಾಜಕಾರಣಿಗಳು ಈ ಬಗ್ಗೆ ಮಾತನಾಡಬೇಕು ಎಂದು ಜನರು ಮತ್ತು ಮಾಧ್ಯಮ ಒತ್ತಾಯಿಸಬೇಕು ಎಂದು ಬಯಸುತ್ತೇನೆ.

ಬಡತನ ಮತ್ತು ಸಂಕಷ್ಟದಲ್ಲಿರುವ ಜನರು ತಮ್ಮಿಷ್ಟದಂತೆ ಔಷಧ ಸೇವಿಸಿ ಅಥವಾ ಬೇಜವಾಬ್ದಾರಿ ವರ್ತನೆ ಅಥವಾ ಸ್ವನಾಶದ ವರ್ತನೆ ಮೂಲಕ ತಮ್ಮ ದುರದೃಷ್ಟವನ್ನು ಇನ್ನಷ್ಟು ಸಂಕೀರ್ಣಗೊಳಿಸಿಕೊಳ್ಳುತ್ತಾರೆ ಎಂಬುದನ್ನು ಉದಾರವಾದಿಗಳು ಸಾಮಾನ್ಯವಾಗಿ ಒಪ್ಪುವುದಿಲ್ಲ. ಸಂಪ್ರದಾಯವಾದಿಗಳು ಕೂಡ ಸಂಭಾಷಣೆಯನ್ನು ಅಲ್ಲಿಗೆ ನಿಲ್ಲಿಸುತ್ತಾರೆ. ದುರಂತದೆಡೆಗೆ ಸಾಗಲು ಸಜ್ಜುಗೊಂಡಿರುವ ಮಕ್ಕಳಿಗೆ ನೆರವು ನೀಡುವಲ್ಲಿ ಸಮಾಜದ ಬೇಜವಾಬ್ದಾರಿ, ಸ್ವವಿನಾಶಕಾರಿ ನಿರಾಕರಣೆಯನ್ನು ಅವರು ಒಪ್ಪುವುದಿಲ್ಲ.

ಮಕ್ಕಳ ಬಡತನ ಅಮೆರಿಕದ ರಾಜಕಾರಣದಲ್ಲಿ ಒಂದು ದೊಡ್ಡ ತೆರೆದ ಹುಣ್ಣು. ಅಮೆರಿಕದಲ್ಲಿರುವ ಐದನೇ ಒಂದು ಭಾಗದಷ್ಟು ಮಕ್ಕಳು ಬಡತನದಲ್ಲಿ ಜೀವಿಸುತ್ತಾರೆ ಎಂಬುದು ದೊಡ್ಡ ನೈತಿಕ ವೈಫಲ್ಯ. ಟುಲ್ಸಾದಲ್ಲಿ ನಾವು ಹೆಚ್ಚುಕಡಿಮೆ ಕ್ಯಾಸಿಡಿಯ ವಯಸ್ಸಿನ ಯುವತಿಯೊಬ್ಬರನ್ನು ಭೇಟಿಯಾದೆವು. 21 ವರ್ಷದ ಕ್ಯಾಸಿಡಿ ಚತುರೆ ಮತ್ತು ಬುದ್ಧಿವಂತ ಪತ್ರಕರ್ತೆಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾರೆ. ವಿಸ್ಕಾನ್ಸಿನ್‌ನ ಮ್ಯಾಡಿಸನ್ ನಗರದ ವೈದ್ಯ ಮತ್ತು ವಕೀಲ ದಂಪತಿಗೆ ಜನಿಸಿದಾಗಲೇ ತಾವು ಯಶಸ್ಸಿನತ್ತ ಸಾಗುವ ಲಾಟರಿ ಗೆದ್ದಾಗಿದೆ ಎಂಬುದು ಕ್ಯಾಸಿಡಿಗೆ ಗೊತ್ತು.

ಆದರೆ ಬೆಥನಿ ಅಂಡರ್‌ವುಡ್ (20) ಹುಟ್ಟಿನ ಲಾಟರಿಯಲ್ಲಿ ಸೋತಿದ್ದಾರೆ. ಆಕೆ ಹುಟ್ಟುವ ಮೊದಲೇ ತಂದೆಯನ್ನು ಮಾದಕ ಪದಾರ್ಥ ಸಂಬಂಧಿ ಅಪರಾಧದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಕೆಯ ತಾಯಿ ಗರ್ಭಿಣಿಯಾಗಿದ್ದಾಗಲೇ  ಮೆಟಾಂಫೆಟಮೈನ್ ಎಂಬ ಮಾದಕ ಪದಾರ್ಥ ಸೇವಿಸುತ್ತಿದ್ದರು. ಬೆಥನಿಗೆ ಮೂರು ವರ್ಷವಾಗುವ ಹೊತ್ತಿಗೆ ಅವರು ಜೈಲಿನೊಳಗೆ ಮರೆಯಾದರು. ಚಿಕ್ಕವಳಿದ್ದಾಗಲೇ ಕುಟುಂಬದ ಗೆಳೆಯನೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ. ನೋವು ತಡೆಯಲಾಗದೆ ಆಕೆ ತನಗೆ ತೋಚಿದ ಔಷಧ ಮಾಡಿಕೊಂಡಳು.

‘ಒಂಬತ್ತನೇ  ವರ್ಷದಲ್ಲಿ ಮರಿಜುವಾನಾ ಸೇವಿಸಲು ಆರಂಭಿಸಿದ್ದೆ’ ಎಂದು ಬೆಥನಿ ಹೇಳುತ್ತಾರೆ. 14ನೇ ವರ್ಷಕ್ಕೆಲ್ಲ ಮಾದಕ ಪದಾರ್ಥ ಸೇವನೆ ಚಟವಾಗಿ ಹೋಗಿತ್ತು. ‘ಮಾದಕ ಪದಾರ್ಥ ಹೊಂದಿಸಿಕೊಳ್ಳುವುದು ದೊಡ್ಡ ಕಷ್ಟವೇನೂ ಆಗಿರಲಿಲ್ಲ. ಯಾಕೆಂದರೆ, ನನ್ನ ಎಲ್ಲ ಗೆಳೆಯ/ ಗೆಳತಿಯರ ಹೆತ್ತವರು ಮಾದಕ ಪದಾರ್ಥ ಸೇವಿಸುವವರೇ ಆಗಿದ್ದರು. ನಾವು ಅವರಿಂದ ಕದಿಯುತ್ತಿದ್ದೆವು’ ಎಂದು ಬೆಥನಿ ಹೇಳುತ್ತಾರೆ. ಕ್ಯಾಸಿಡಿ ಖಾಸಗಿ ಶಾಲೆಯಲ್ಲಿ ಕಲಿಕೆಯಲ್ಲಿ ತೊಡಗಿದ್ದ ಹೊತ್ತಿಗೆ ಬೆಥನಿ ಶಾಲೆ ತಪ್ಪಿಸಿಕೊಂಡು ಓಡಾಡುತ್ತಿದ್ದಳು ಮತ್ತು ಕೊನೆಗೆ ಎಂಟನೇ ತರಗತಿಗೆ ಶಾಲೆ ಬಿಟ್ಟಳು. ‘ನನ್ನ ಓದಿನ ಸಾಮರ್ಥ್ಯ ಮೂರನೇ ತರಗತಿಗೆ ಸಮಾನವಾದುದಾಗಿದ್ದರೆ ಗಣಿತದ ಸಾಮರ್ಥ್ಯ ಎರಡನೇ ತರಗತಿಗೆ ಸಮಾನವಾದುದಾಗಿತ್ತು. ಯಾಕೆಂದರೆ ಮೂರನೇ ತರಗತಿಯವರು ಗಣಿತದಲ್ಲಿ ನಿಜಕ್ಕೂ ಹುಷಾರಿರುತ್ತಾರೆ’ ಎಂದು ಬೆಥನಿ ನೆನಪಿಸಿಕೊಳ್ಳುತ್ತಾರೆ.

14ನೇ ವರ್ಷಕ್ಕೆ ಬೆಥನಿ ಮನೆ ಬಿಟ್ಟು ಓಡಿ ಹೋಗಿ ಮಾದಕ ಪದಾರ್ಥ ಮಾರಾಟ ದಂಧೆಯಲ್ಲಿ ತೊಡಗಿದ್ದ ಯುವಕನೊಬ್ಬನ ಜತೆ ಬದುಕತೊಡಗಿದಳು. ಒಂದು ಬಾರಿ ಹೋಟೆಲ್‌ ಕೋಣೆಯಿಂದ ಕೂದಲನ್ನು ಹಿಡಿದು ಎಳೆದು ಹೊರಗೆ ಹಾಕಿದ್ದು ಬಿಟ್ಟರೆ ಉಳಿದಂತೆ ಆತ ಚೆನ್ನಾಗಿಯೇ ನೋಡಿಕೊಂಡಿದ್ದಾನೆ ಎಂದು ಬೆಥನಿ ಹೇಳುತ್ತಾರೆ. ಆತನ ಮಗುವಿಗೆ ಗರ್ಭಿಣಿಯಾಗಿದ್ದಾಗಲೇ ಮಾದಕ ಪದಾರ್ಥ ಸೇವಿಸಿದ್ದು ಇದಕ್ಕೆ ಕಾರಣವಂತೆ.

ಬೆಥನಿ ಎರಡು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಅವರು ಟುಲ್ಸಾದ ಮಹಿಳೆ ಮತ್ತು ಮಕ್ಕಳ ಆರೈಕೆ ಗೃಹದಲ್ಲಿ ಆಶ್ರಯ ಪಡೆದಿದ್ದಾರೆ. ಇದು ಮಾದಕ ಪದಾರ್ಥ ವ್ಯಸನದಿಂದ ಮುಕ್ತಿ ಪಡೆದು ಹೊಸ ಬದುಕು ಕಟ್ಟಿಕೊಳ್ಳಲು ಮಹಿಳೆಯರಿಗೆ ನೆರವಾಗುವ ಒಂದು ಒಳ್ಳೆಯ ಸಂಸ್ಥೆ.

ಬೆಥನಿಯ ಆಯ್ಕೆಗಳೆಲ್ಲವೂ ತಪ್ಪಾಗಿದ್ದವು ಎಂಬುದು ಖಚಿತ. ಆದರೆ ಆ ಪರಿಸರದಲ್ಲಿ ನಾವು ಇದ್ದಿದ್ದರೂ ಬಹುತೇಕ ಅದೇ ಬಗೆಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೆವು. ಬೆಥನಿಯಂಥವರು ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳಬೇಕು ಎಂದು ಆಗ್ರಹಿಸುವ ನಾವು, ನಮ್ಮ ರಾಜಕಾರಣಿಗಳ ಆಯ್ಕೆಗಳೂ ಸರಿಯಾಗಿರಬೇಕು ಎಂದು ಒತ್ತಾಯಿಸಬೇಕು. ಬಡತನ ಕಡಿಮೆ ಮಾಡಲು ಇವೆರಡೂ ಅಗತ್ಯ. ಹುರುಪು, ಉತ್ಸಾಹ, ಸ್ನೇಹಮಯ ವರ್ತನೆ, ಆಕರ್ಷಕ ವ್ಯಕ್ತಿತ್ವ ಮತ್ತು ವಿನೋದಪ್ರಿಯತೆಗಳೆಲ್ಲದರಲ್ಲಿಯೂ ಬೆಥನಿ ಮತ್ತು ಕ್ಯಾಸಿಡಿ ಇಬ್ಬರೂ ಒಂದೇ ರೀತಿ ಇದ್ದಾರೆ. ಆದರೆ ಅವರು ಭಿನ್ನ ಗ್ರಹಗಳಲ್ಲಿ ಬೆಳೆಯುತ್ತಿರುವವರು. ಬೆಥನಿಯ ಸಮಸ್ಯೆಗಳಿಗೆ ಆಕೆಯನ್ನು ದೂರುವವರಿಗೆ ಅಮೆರಿಕದ ಇಂದಿನ ಪರಿಸ್ಥಿತಿ ಅರ್ಥವಾಗುವುದಿಲ್ಲ: ಪ್ರತಿಭೆ ಸಾರ್ವತ್ರಿಕ, ಆದರೆ ಅವಕಾಶಗಳು ಅಲ್ಲ.

ಬಡತನದ ವಿಷ ವರ್ತುಲದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ ಮತ್ತು ನಮಗೆ ಅದರಲ್ಲಿ ಪರಿಪೂರ್ಣ ಯಶಸ್ಸು ಸಾಧ್ಯವೂ ಇಲ್ಲ.  ಆದರೆ ನಾವು ಪ್ರಯತ್ನವನ್ನೇ ಮಾಡುತ್ತಿಲ್ಲ, ನಾವು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ.
– ನಿಕೋಲಸ್ ಕ್ರಿಸ್ಟೋಫ್
ಲೇಖಕ ಅಮೆರಿಕದ ಪತ್ರಕರ್ತ, ಎರಡು ಬಾರಿ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ
ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT