ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಅವಾಂತರ

Last Updated 2 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಅರ್ಥ ತಿಳಿಯದೆ ಬಿದ್ದು ಬಿದ್ದು ನಕ್ಕಿದ್ದೆ...
ಸಾಮಾನ್ಯವಾಗಿ ಯಾವುದೇ ಪ್ರದೇಶಕ್ಕೆ ಹೋದರೂ ನಾನು ಅಲ್ಲಿನ ಭಾಷೆ ಕಲಿಯಲು ಪ್ರಯತ್ನಿಸುತ್ತೇನೆ. ನಾನು ಮೊದಲ ಬಾರಿಗೆ ನಟಿಸಿದ ಮಲಯಾಳ ಸಿನಿಮಾ ‘ಯಕ್ಷಿಯಂ ಞಾನುಂ’ ಚಿತ್ರೀಕರಣದ ವೇಳೆ ಒಂದೊಳ್ಳೆ ತಮಾಷೆ ಆಗಿತ್ತು. ಆಗ ನನಗೆ ಮಲಯಾಳ ಭಾಷೆಯ ಜ್ಞಾನ ಎಳ್ಳಷ್ಟೂ ಇರಲಿಲ್ಲ. ಮಲಯಾಳದಲ್ಲಿ ಮಧ್ಯಾಹ್ನಕ್ಕೆ ಉಚ್ಚೆ ಎನ್ನುತ್ತಾರೆ.

ಯಾವುದೋ ಶಾಟ್‌ ಬಗ್ಗೆ ಚರ್ಚೆ ಮಾಡುವಾಗ ನಿರ್ದೇಶಕರು ಅದನ್ನು ‘ಉಚ್ಚೆ ಕಿ ಚೆಯಾಂ’ ಎಂದರು. ನಿಮಗೆ ಗೊತ್ತಲ್ವಾ ಕನ್ನಡದಲ್ಲಿ ಹಾಗೆಂದರೆ ಏನು ಎಂದು. ನಾನು ಮೊದಲ ಬಾರಿ ಆ ಪದ ಕೇಳಿದ್ದರಿಂದ ಜೋರಾಗಿ ನಗಲು ಪ್ರಾರಂಭಿಸಿದೆ. ಉಚ್ಚೆ ಮಾಡಿ ಶಾಟ್‌ ಮುಗಿಸೋಣ ಎನ್ನುತ್ತಿದ್ದಾರೆ ಎಂದೇ ನಾನು ಅಂದುಕೊಂಡಿದ್ದೆ.

ಅವರು, ನಾನು ಇಷ್ಟು ಗಂಭೀರವಾಗಿ ಮಾತನಾಡುವಾಗ ಇವಳು ಯಾಕೆ ಹೀಗೆ ನಗುತ್ತಾಳೆ ಎಂದು ನನ್ನನ್ನೇ ನೋಡಲು ಪ್ರಾರಂಭಿಸಿದರು. ಆಮೇಲೆ ನಾನು ಅವರಿಗೆ ಕನ್ನಡದಲ್ಲಿ ಹಾಗೆಂದರೆ ಏನು ಎಂದು ವಿವರಿಸಿ, ಮಲಯಾಳದಲ್ಲಿ ಹೀಗೆಂದರೆ ಏನು ಎಂಬುದು ಗೊತ್ತಿಲ್ಲ ಎಂದೆ. ಆಗ ಅವರು ಆ ಪದದ ವಿವರಣೆ ನೀಡಿದರು. ನನ್ನ ಜೊತೆ ಅವರೂ ನಕ್ಕರು.
–ಮೇಘನಾ ರಾಜ್ ನಟಿ

***
ಸಾಸುವೆ ತಂದ ಫಜೀತಿ

ಕೆನರಾ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಹುದ್ದೆಯಿಂದ ಅಧಿಕಾರಿ ಹುದ್ದೆಗೆ ಪದೋನ್ನತಿ ಪಡೆದು ಪಂಜಾಬಿನ ಪಟಿಯಾಲಾನಗರಕ್ಕೆ ವರ್ಗವಾಗಿ ಹೋದಾಗಿನ ಘಟನೆ ಇದು. ನಮ್ಮ ಆಹಾರಕ್ಕೂ ಪಂಜಾಬಿನ ಆಹಾರಕ್ಕೂ ತುಂಬಾ ವ್ಯತ್ಯಾಸವಿದೆ. ಹೊಸದರಲ್ಲಿ ಇಲ್ಲಿಂದ ಹೋಗುವಾಗ ಅಡುಗೆಗೆ ಬೇಕಾದ ಕಿರಾಣಿ/ಮಸಾಲೆ ಪದಾರ್ಥಗಳನ್ನು ಸ್ವಲ್ಪ ತೆಗೆದುಕೊಂಡು ಹೋಗಿದ್ದರೂ ಒಂದು ದಿನ ಸಾರಿಗೆ ಒಗ್ಗರಣೆಗೆ ಅವಶ್ಯಕವಾಗಿ ಬೇಕಿದ್ದ ‘ಸಾಸುವೆ’ ಖಾಲಿ ಆಗಿತ್ತು.

ಬ್ಯಾಂಕಿನ ಕೆಲಸ ಮುಗಿಸಿ ಮನೆಗೆ ಬರುವಾಗ ಕಿರಾಣಿ ಅಂಗಡಿಯಿಂದ ತರಲು ಹೋದಾಗ, ಅಷ್ಟೊಂದು ಹಿಂದಿ/ ಪಂಜಾಬಿ ಬರದ ನಾನು ಆಂಗ್ಲ ಭಾಷೆಯಲ್ಲಿ ಮಸ್ಟರ್‍ಡ್‌  ಕೊಡಲು ಹೇಳಿದರೆ... ಓ ಕ್ಯಾ ಹೋತಾಹೈ? ಎಂದು ನನ್ನನ್ನೇ ಪ್ರಶ್ನಿಸಿದ. ಸಾಸುವೆಗೆ ಹಿಂದಿಯಲ್ಲಿ ಹೇಳಲು ಬರದ ನಾನು, ಸಾಸುವೆ ಹೇಗಿರುತ್ತೆ ಎಂದು ವರ್ಣನೆ ಮಾಡಲು ಆರಂಭಿಸಿದೆ.

ಮಸ್ಟರ್‍ಡ್‌ ಸ್ಮಾಲ್‌... ಸ್ಮಾಲ್‌... ಬ್ಲಾಕ್‌ ಕಲರ್‌್ಸ ಹೋತೆಹೈ. ರಸಂ/ದಾಲ್‌ ಬನಾನೇ ಕಾ ಬಾದ್‌ ಅಂತ್‌ ಮೆ ಒಗ್ಗರಣೆ– ಅದು ಹಿಂದಿಯಲ್ಲಿ ಹೇಳಲು ಬಾರದೇ, ಸ್ಟೌವ್‌ ಕಾ ಉಪರ್‌ ಕಡಾಯಿಮೆ ತೋಡಾ ತೇಲ್‌ ದಾಲ್‌ಕೆ, ಗರಂ ಹೋನೇಕಾ ಬಾದ್‌ ಮಸ್ಟರ್‍ಡ್‌ ತೇಲ್‌ ಮೆ ದಾಲ್‌ನೇಕೆ ಬಾದ್‌ ಚಟ್‌ ಪಟ್‌ ಆವಾಜ್‌ ಆತಾಹೈ ಎಂದೆಲ್ಲಾ ಹೇಳಿದ್ರೂ, ಆತನಿಗೆ ಅರ್ಥವಾಗದೇ... ಆಪ್‌ ಕ್ಯಾ ಬೋಲ್‌ ರಹೆ ಹೋ ಸಮಜ್‌ ಮೆ ನಹಿ ಆರಹಾಹೈ... ಮೇರೆ ದುಖಾನ್‌ ಮೆ ಅಂದರ್‌ ಆಕೆ ದೇಖೊ... ಜೋ ಆಪ್‌ ದಿಖಾವೋಗೆ... ವೋ ಮೈ ದೂಂಗಾ ಎನ್ನಬೇಕೆ!

ನಾನೆಷ್ಟು ಅಂಗಡಿಯಲ್ಲಿ ತಡಕಾಡಿದರೂ ಸಾಸುವೆ ಇರುವುದು ಕಾಣಲಿಲ್ಲ. ಮನೆಗೆ ಬೇಕಾದ ಬೇರೆ ಕಿರಾಣಿ ಸಾಮಾನು ಖರೀದಿಸಿ, ನಾಳೆ ಈ ಅಂಗಡಿಯವನಿಗೆ ಮಸಾಲೆ ಡಬ್ಬಿಯಲ್ಲಿ ಅಳಿದುಳಿದ ನಾಲ್ಕಾರು ಸಾಸುವೆ ಕಾಳು ತಂದು ತೋರಿಸುವೆ ಎಂದು ಮನೆಗೆ ಹಿಂದಿರುಗಿದೆ.

ಮರುದಿನ ಮನೆಯಲ್ಲಿದ್ದ ನಾಲ್ಕಾರು ಸಾಸುವೆ ಕಾಳುಗಳನ್ನು ಪೇಪರಿನಲ್ಲಿ ಕಟ್ಟಿಕೊಂಡು ಹೋಗಿ, ಆ ಅಂಗಡಿಯವನಿಗೆ ತೋರಿಸಿದಾಗ... ‘ರಾವ್‌ ಸಾಬ್‌ ಎ ತೋ ‘ಸರ್ಸೊ’ ಹೈ ಸಾಬ್‌... ಎ ಇದರ್‌ ನಹಿ ಮಿಲೆಂಗೆ. ಎ ತೋ ಚಕ್ಕಿ (ಹಿಟ್ಟಿನ ಗಿರಣಿ)ಮೆ ಮಿಲ್‌ ತೆ ಹೈ’ ಎಂದಾಗ ನನಗೆ ಖುಷಿ ಆಯ್ತು. ಸಾಸುವೆಗೆ ಏನೆನ್ನುತ್ತಾರೆಂದು ತಿಳಿದುಕೊಂಡು ಚಕ್ಕಿ ಹಿಟ್ಟಿನ ಗಿರಣಿ ಎಲ್ಲಿದೆ ಎಂದು ತಿಳಿದುಕೊಂಡು ಹುಡುಕುತ್ತಾ ಸಾಗಿದೆ. ಹಾಗೆಯೇ ಹುಣಸೆಹಣ್ಣಿನ ಬಗ್ಗೆ ಭಾಷೆ ಅವಾಂತರವೂ ಆಯ್ತು. ಹುಣಸೆಹಣ್ಣಿಗೆ ‘ಇಮಲಿ’ ಎಂದು ಗೊತ್ತಾಯ್ತು. ‘ಸಾಸುವಿಗೆ–ಸರ್ಸೊ’, ‘ಹುಣಸೆಹಣ್ಣಿಗೆ–ಇಮಲಿ’, ‘ಕರಿಬೇವುಗೆ– ಕಡಿಪತ್ತಾ’ ಹೀಗೆಲ್ಲಾ ಭಾಷೆಯ ಅವಾಂತರವಾದದ್ದು/ ಮಾಸಿದ್ದು ನೆನೆಯುವಂತಾಯ್ತು.
–ರಘುನಾಥರಾವ್‌ ತಾಪ್ಸೆ ದಾವಣಗೆರೆ

***
ಭಯ ಉಂಟು ಮಾಡಿದ ಭಾಷೆ

ನಾವು ಸೌದಿ ಅರೇಬಿಯಾಗೆ ಮಗಳ ಮನೆಗೆ ಹೋಗಿದ್ದೆವು. ಪ್ರತಿ ಸೋಮವಾರ ಮಗಳು ಕ್ಯಾರಿಫೋರ್‌ಗೆ ಹೋಗಿ ಮನೆಗೆ ಬೇಕಾದ ಸಾಮಾನು ತರುತ್ತಿದ್ದಳು. ಮನೆಯಲ್ಲಿ ಕುಳಿತು ನಮಗೇನು ಕೆಲಸ, ಅವಳ ಜೊತೆ ನಾವೂ ಹೋಗುತ್ತಿದ್ದೆವು. ಆ ದಿನವೂ ಅದೇ ರೀತಿ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಿಲ್ಲಿನ ಹಣ ಪಾವತಿಸಿ ಅಲ್ಲಿಂದ ಹೊರಟೆವು.

ನಾವಿನ್ನು  ಹೊರಗೆ ಹೊರಡಬೇಕು ಎನ್ನುವಷ್ಟರಲ್ಲಿ, ತಲೆಗೆ ಕೆಂಪನೆಯ ಚೌಕುಳಿಯ ಸ್ಕಾರ್ಫ್‌ ಮತ್ತು ಬೆಳ್ಳನೆಯ ಉದ್ದನೆಯ ತೋಬ್ ಧರಿಸಿದ ಒಂದಷ್ಟು ಅರಬರು ಅಲ್ಲಿಗೆ ಬಂದು ಅವರ ಭಾಷೆಯಲ್ಲಿ ನಮಗೆ ಏನೋ ಹೇಳಲು ಆರಂಭಿಸಿದರು. ಅವರು ದೊಡ್ಡ ದನಿಯಲ್ಲಿ ಮಾತನಾಡಿದಾಗ ನಮಗೆ ಗಾಬರಿಯೇ ಆಯಿತು.

ಮೊದಲೇ ಸೌದಿ ಅಂದರೆ ಸಾಕಷ್ಟು ನಿಯಮಗಳು, ನಮ್ಮಿಂದ ಏನು ತಪ್ಪಾಯಿತೋ, ಇನ್ನೇನು ಕಾದಿದೆಯೋ ಎಂದು ಭಯವಾಯಿತು. ನಾವು ಅಲ್ಲಿಂದ ಹೊರಟು ಬಿಡಲು ಪ್ರಯತ್ನಿಸಿದೆವು. ಆದರೆ ಅವ ಏನೋ ಜೋರಾಗಿ ಹೇಳುತ್ತಿದ್ದ, ನಮಗೆ ಅದು ಅರ್ಥವಾಗದು, ಕೊನೆಗೆ ಅವರು ನಮ್ಮವರ ತೋಳು ಹಿಡಿದು ನಿಲ್ಲಿಸಿದರು. ಬಿಡದೆ ಸ್ವಲ್ಪ ಹೆಚ್ಚು ಕಡಿಮೆ ತಳ್ಳಿಕೊಂಡು ಆ ಸೂಪರ್ ಮಾರ್ಕೆಟ್ಟಿನ ಒಳಗೆ ಕರೆದು ಕೊಂಡು ಹೋಗಿಬಿಟ್ಟರು. ನಮ್ಮಿಬ್ಬರಿಗೆ ಏನು ಮಾಡುವುದೆಂದು ತೋಚಲೇ ಇಲ್ಲ. ಸೌದಿಯ ಕಥೆಗಳನ್ನು ಕೇಳಿದ್ದ ನನಗೆ ಗಾಬರಿಯಾಯಿತು.

ಆದರೆ ಅವರು ಅಲ್ಲಿನ ಪೊಲೀಸರಂತೆ ಕಾಣಲಿಲ್ಲ. ಏನೇ ಆಗಲಿ ಬಿಡದೆ ಅವರುಗಳು ನಮ್ಮನ್ನು ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಕರೆದುಕೊಂಡು ಹೋಗಿ ಒಂದು ಎಲ್‌ಇಡಿ ಟಿ.ವಿ ಮುಂದೆ ನಿಲ್ಲಿಸಿದರು. ಆದರೂ ಅವರು ಹೇಳುವುದಂತೂ ನಮಗೆ ಅರ್ಥವಾಗಲೇ ಇಲ್ಲ. ಒಂದಷ್ಟು ಹೊತ್ತಾದ ನಂತರ ಹಸ್ತ ಲಾಘವ ಮತ್ತು ನಗು ಮುಖದಿಂದ ಕೆಲವು ಸನ್ನೆಗಳ ಮೂಲಕ ಆ ಟಿ.ವಿಯನ್ನು ತೋರಿಸಿ ಅದು ನಮಗೆ ಬಹುಮಾನವಾಗಿ ಬಂದಿದೆಯೆಂದು ತಿಳಿಸಿದರು.

ಅವರ ಹಾವ ಭಾವಗಳಿಂದ ಬಹಳ ಕಷ್ಟಪಟ್ಟು ಅರ್ಥ ಮಾಡಿಕೊಂಡಿದ್ದಾಯಿತು. ನಾವು ಆ ದಿನ ನೂರನೆಯ ಕಸ್ಟಮರ್ ಆಗಿದ್ದರಿಂದ ನಮಗೆ ಆ ಟಿ.ವಿ ಬಹುಮಾನವಾಗಿ ಸಿಕ್ಕಿತ್ತು. ನಾವು ಮಾಡಿದ ನೂರು ರಿಯಾಲಿನ ವ್ಯಾಪಾರಕ್ಕೆ ನಮಗೆ ಹತ್ತು ಸಾವಿರ ರಿಯಾಲಿನ ಬಹುಮಾನ ಬಂದಿತು. ಆದರೂ ಗಾಬರಿಯಲ್ಲಿ ನಮಗೆ ಆ ಸಂತೋಷವನ್ನು ಜೀರ್ಣಿಸಿ ಕೊಳ್ಳಲು ಸಾಕಷ್ಟು ಸಮಯ ಹಿಡಿಸಿತು.

ಬಹುಮಾನ ಪಡೆದದ್ದಕ್ಕಿಂತ, ಸದ್ಯ ಅಲ್ಲಿಂದ ಪಾರಾಗಿ ಬಂದೆವಲ್ಲಾ ಎನ್ನುವ ಸಮಾಧಾನವೇ ಹೆಚ್ಚಾಗಿತ್ತು. ಬಹುಮಾನ ಬಂದ ಸಂತಸದಲ್ಲಿ ಬೀಗುವುದಕ್ಕೆ ಒಂದಷ್ಟು ಸಮಯವೇ ಹಿಡಿಸಿತು. ಈಗಲೂ ಆ ಟಿ.ವಿಯನ್ನು ನೋಡಿದಾಗ ಆ ದಿನ ನಡೆದದ್ದೆಲ್ಲವೂ ಮತ್ತೆ ಮತ್ತೆ ಪುನರಾವರ್ತನೆಯಾಗಿ ಕಿರು ನಗೆ ಹೊರ ಹೊಮ್ಮುತ್ತದೆ.
-ಮಂಜುಳಾ ರಾಜ್ ಬೆಂಗಳೂರು

***
ಕಲ್ಲುಸಕ್ಕರೆ ಕರಗದೇ ಉಳಿಯಿತು

ಕಾನ್ಪುರದ ಐಐಟಿಯಲ್ಲಿ ನಮ್ಮವರು ಎಂ.ಟೆಕ್ ಮಾಡುತ್ತಿದ್ದ ಸಮಯ. ಕರ್ನಾಟಕದಿಂದ ಹೋಗಿದ್ದ ನಾವು ಹಿಂದಿಯಲ್ಲಿ ವ್ಯವಹರಿಸಲು ಸ್ವಲ್ಪ ಮಟ್ಟಿಗೆ ತಡಕಾಡುತ್ತಿದ್ದುದಂತೂ ನಿಜ. ಹೆಚ್ಚಿನ ದಿನಸಿಗಳೆಲ್ಲ ಐಐಟಿ ಒಳಗೇ ಸಿಗುತ್ತಿದ್ದುದರಿಂದ ಗೇಟಿನ ಹೊರಗೆ ಸಿಗುತ್ತಿದ್ದ ತಾಜಾ ತರಕಾರಿಗಳನ್ನು ಕೊಳ್ಳಲು ಎಲ್ಲರೂ ಹೋಗುತ್ತಿದ್ದೆವು. ನವೆಂಬರ್-ಡಿಸೆಂಬರ್ ಕಾಲದ ಆಲೂಗಡ್ಡೆ, ಗೋಬಿ, ಬಟಾಣಿ, ಟೊಮೇಟೋ.. ಎಲ್ಲ ಕಣ್ತುಂಬುತ್ತಿದ್ದವು.

ಒಮ್ಮೆ ನನಗೆ ಗಂಟಲ ಹಿಂಸೆ ಜೋರಾಗಿ ಯಾವ ಔಷಧಿಯೂ ಕೆಲಸ ಮಾಡದೆ, ಕೊನೆಗೆ ಕೆಂಪು ಕಲ್ಲುಸಕ್ಕರೆ ತಂದು ಸೇವಿಸಿದರೆ ಒಳ್ಳಯದೆಂದು ತರಲು ಅಂಗಡಿಗೆ ಹೋದೆವು. ಅದನ್ನು ಹಿಂದಿಯಲ್ಲಿ ಹೇಗೆ ಕೇಳೋದು!!! ‘ಭಯ್ಯಾ, ಚೀನೀ ಹೈ?’ ‘ಹಾ..ಹೈ.. ಕಿತ್ನೀ ಚಾಹಿಯೇ?’ ‘ನಹೀ..ಚೀನೀ ಮೇ ಲಾಲ್ ಕಲರ್ ರಹ್ತಾ ಹೈ ನ?’
‘ಕ್ಯಾ?? ಲಾಲ್ ರಂಗ್? ವೋ ಕ್ಯಾ ಹೈ?’ ‘ವೋ.. ಮೋಟಾವಾಲಾ ಚೀನೀ ಮೇ.. ಪಾಕ್ ಮೇ ಡಾಲ್ತೇ ಹೈ ನ?’ ‘ಅರೇ ಕ್ಯಾ ...ಮಾಲೂಮ್ ನಹೀ’ ‘ವೋ..ಬಡಾ ಚೀನಿ ಕಲರ್ ಮೇ ಆತಾ ಹೈ ನ?‘ ‘ಕ್ಯಾ ಬಡ್ ಬಡ್ ಕರ್ತೇ ಹೋ ಪತಾ ನಹೀ... ಯೇ ಲೋ.. ಯಹೀ ಚೀನಿ ಹೈ.. ಚಾಹೋ ತೋ ಲೋ’ ಅಂತ್ಹೇಳಿ ಮಾಮೂಲಿಯ ಸಕ್ಕರೆಯ ಪೊಟ್ಟಣವನ್ನು ನನ್ನ ಮುಂದೆ ಕುಕ್ಕಿದ.

ನಾವಿಬ್ಬರೂ ಮುಖಮುಖ ನೋಡಿಕೊಂಡು ಅದನ್ನೇ ಮನೆಗೆ ತಂದು ಹೊಟ್ಟೆ ಬಿರಿಯುವಂತೆ ನಕ್ಕಿದ್ದೇ ನಕ್ಕಿದ್ದು!!! ಇವತ್ತಿಗೂ ನನ್ನ ಹಿಂದಿ ಸ್ವಲ್ಪ ಉತ್ತಮವಾಗಿದೆಯಾದ್ರೂ ಕೆಂಪು ಕಲ್ಲುಸಕ್ಕರೆಗೆ ಏನು ಹೇಳ್ತಾರೆ ನಂಗೊತ್ತಿಲ್ಲ. ನಿಮಗೇನಾದ್ರೂ ಗೊತ್ತಾ???
-ರೂಪಶ್ರೀ ನಾಗರಾಜ್ ಸುರತ್ಕಲ್

***
‘ನೀನೆಂಥ ಹೆಣ್ಣೆ’ ಎಂದು ಅಬ್ಬರಿಸಿದಾಗ

ಮೂರು ದಿನಗಳ ಅದ್ದೂರಿ ಮದುವೆ. ನಮ್ಮ ದೊಡ್ಡಪ್ಪನವರು ಕುಬೇರನ ಬಳಗದವರು. ತಮ್ಮ ಮಗಳ ಮದುವೆಗೆ ಖರ್ಚು ಮಾಡಲು ದುಡ್ಡಿಗೇನೂ ಬರವಿರಲಿಲ್ಲ.ಕೊಳ್ಳೇಗಾಲದಿಂದ ಚನ್ನಪಟ್ಟಣಕ್ಕೆ ಆಗಮಿಸಿದ್ದ ವರನ ತಂಡದವರಿಗೆ ಎಲ್ಲಾ ರೀತಿಯಿಂದಲೂ ಆನಂದವನ್ನುಂಟುಮಾಡಲು ನಮ್ಮವರೆಲ್ಲಾ ಸೊಂಟಕಟ್ಟಿ ನಿಂತಿದ್ದರು.

ಧಾರೆಯ ಸಮಯ. ಚಪ್ಪರದಡಿಯಲ್ಲಿ ಗಡಿಬಿಡಿಯಿಂದ ಶಾಸ್ತ್ರಗಳು ಜರುಗುತ್ತಿದ್ದವು. ಮದುವೆಗೆ ಕೊಳ್ಳೇಗಾಲದಿಂದ ಬಂದಿದ್ದ ಬೀಗರ ಕಡೆಯ ಎಳೆಯ ಮಗುವೊಂದು ಬಹಳ ಚಂಡಿ ಮಾಡುತ್ತಿತ್ತು. ಅಳುತ್ತಿದ್ದ ಮಗುವನ್ನು ಸಂತೈಸಲು ಅದರ ತಾಯಿ ಮಾಡುತ್ತಿದ್ದ ಎಲ್ಲ ಪ್ರಯತ್ನಗಳು ವಿಫಲಗೊಳ್ಳುತ್ತಿದ್ದವು. ಮಗುವಿನ ರಂಪದಿಂದ ಮದುವೆಯ ಸಂಭ್ರಮದಲ್ಲಿ ಓಡಾಡಿ ನಲಿಯಲು ಅವಕಾಶವಿಲ್ಲದ ಆ ತಾಯಿಗೆ ಕೋಪ ಮತ್ತು ಅಳು ಎರಡು ಒಂದೇ ಕಾಲದಲ್ಲಿ ಬಂದಿದ್ದವು.

ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ದೊಡ್ಡಮ್ಮನವರನ್ನು ಕುರಿತು-‘ನೋಡ್ರಿಯಾ...ಈ ಹಾಳಾದ ಕೂಸು ರಂಪ ಮಾಡ್ತಾದೆ... ಇದ ನೇಣಾಕೋಕೆ ಒಂದು ಹಗ್ಗ ಕೊಡ್ರಿಯಾ ‘ ಎಂದಳು. ನಮ್ಮ ದೊಡ್ಡಮ್ಮ ನಗುತ್ತಾ-‘ಮಕ್ಕಳು ಅತ್ತದ್ದಕ್ಕೆಲ್ಲ ಕೋಪ ಮಾಡ್ಕೊಂಡ್ರೆ ಹೇಗಮ್ಮ?...ಸ್ವಲ್ಪ ಹಾಲನ್ನಾದರೂ ಕುಡಿಸು’ ಎಂದು ಸಲಹೆ ನೀಡಿದರು.

‘ಅಯ್ಯೋ... ಇದಕ್ಕೆ ಹಾಲುಗೀಲು ಎಲ್ಲಾ ಕುಡಿಸಿದ್ದೀನಿ... ಹಾಳಾದ್ದು ಒಂದೇ ಸಮನೆ ಅಳ್ತಾನೆಯಿದೆ... ಒಂದು ಹಗ್ಗ ಕೊಡ್ರಿಯಾ... ನೇಣಾಕುದ್ರೆ ಸದ್ದಿಲ್ಲದೆ ಬಿತ್ತುಕೊತದೆ. ನಮ್ಮ ದೊಡ್ಡಮ್ಮ ಅವಳ ಮಾತನ್ನು ಕೇಳಿ ಗಾಬರಿಯಾದರು. ‘ಮಗೂನ ಸ್ವಲ್ಪ ಸಮಾಧಾನ ಮಾಡಮ್ಮ... ಚಪ್ಪರದ ಮುಂದಕ್ಕಾದರೂ ಎತ್ತಿಕೊಂಡು ಹೋಗಿ, ಏನನ್ನಾದರೂ ತೋರಿಸಮ್ಮ’ ಎನ್ನುತ್ತಿದ್ದಂತೆಯೇ- ‘ಏನಮ್ಮ ? ಮಗೀನ ನೇಣಾಕೂಕೆ ಒಂದು ಹಗ್ಗ ಕೊಡು ಅಂದ್ರೆ ಏನೇನೋ ಹೇಳ್ತೀಯಲ್ಲ... ಒಳ್ಳೆ ನೆಂಟಸ್ತನ ಮಾಡದಂಗಾಯ್ತು ‘ ಎಂದು ಆ ತಾಯಿ ವ್ಯಂಗ್ಯವಾಡಿದಳು. ಈಗ ನಮ್ಮ ದೊಡ್ಡಮ್ಮನ ಸಿಟ್ಟು ನೆತ್ತಿಗೇರಿತು.

‘ಇದೇನಮ್ಮ? ಹಿಂಗೆ ಹುಚ್ಚುಹುಚ್ಚಾಗಿ ಮಾತಾಡ್ತಿ... ಅಳೂ ಮಗುವನ್ನು ಎಲ್ಲಾದರೂ ನೇಣಾಕ್ತರೇನು?’ ಎಂದುದಕ್ಕೆ, ಆಕೆ ಮತ್ತಷ್ಟು ಕುಪಿತಳಾಗಿ-‘ಇನ್ನೇನು ಮಾಡ್ತಾರೆ?... ನನಗಲ್ಲ... ನಿಂಗೆಲ್ಲೊ ಹುಚ್ಚು ಹಿಡಿದೈತೆ... ಮಗೀನ ನೇಣಾಕೋಕೆ ಒಂದು ಹಗ್ಗ ಕೊಡದೇ ಇರೋಳು...ನೀನೆಂಥ ಹೆಣ್ಣೆ ?’ ಎಂದು ಹಂಗಿಸಿದಾಗ, ಪರಿಸ್ಥಿತಿ ಬಹಳ ವಿಕೋಪಕ್ಕೆ ತಿರುಗತ್ತಲಿತ್ತು.

ಅಷ್ಟರಲ್ಲಿ ಎರಡು ಕಡೆಯವರಿಗೂ ಆಪ್ತರಾಗಿದ್ದ ಮತ್ತು ಎರಡು ಕಡೆಯ ಆಡುನುಡಿಯ ಸೊಗಡನ್ನು ಚೆನ್ನಾಗಿ ಅರಿತಿದ್ದ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು, ನಡೆದ ಸಂಗತಿಯನ್ನು ಇಬ್ಬರಿಂದಲೂ ಕೇಳಿ ತಿಳಿದ ನಂತರ ನಗುತ್ತಾ, ಮೊದಲು ನಮ್ಮ ದೊಡ್ಡಮ್ಮನವರನ್ನು ಕುರಿತು- ‘ನೋಡಿ... ಕೊಳ್ಳೇಗಾಲದ ಕಡೆ ಮಗುವನ್ನು ನೇಣಾಕೋದು ಅಂದ್ರೆ... ಎರಡು ಕಂಬಗಳಿಗೆ ಹಗ್ಗ ಕಟ್ಟಿ ತೊಟ್ಟಿಲಂತೆ ಮಾಡಿ ಬಟ್ಟೆ ಹಾಕಿ ಮಲಗಿಸುವುದು’ ಎಂದಾಗ ನಮ್ಮ ದೊಡ್ಡಮ್ಮನವರ ಮುಖ ಅಚ್ಚರಿಯಿಂದ ಅರಳಿತು. ಈಗ ಕೊಳ್ಳೇಗಾಲದ ತಾಯಿಯತ್ತ ತಿರುಗಿ- ‘ನೋಡ್ರಿಯಾ...ಈ ಕಡೆ ನೇಣಾಕೋದು ಅಂದ್ರೆ...ಹಗ್ಗವನ್ನು ಕೊರಳಿಗೆ ಬಿಗಿದು ಕಟ್ಟಿ ಸಾಯಿಸುವುದು’ ಎಂದಾಗ ಕೆರಳಿ ಕೆಂಡವಾಗಿದ್ದ ಆ ತಾಯಿ ತಣ್ಣಗಾದಳು.
–ಸಿ ಪಿ ನಾಗರಾಜ ಬೆಂಗಳೂರು

***
ಪ್ಯಾಕೇಜ್‌ ಟೂರ್‌ನಲ್ಲಿ ಸಿಕ್ಕಿಕೊಂಡೆ

ಪ್ಯಾಕೇಜ್‌ ಟೂರ್‌ನಲ್ಲಿ ಒಮ್ಮೆ ಯುರೋಪ್ ಪ್ರವಾಸ ಹೊರಟಿದ್ದೆನು. ನಮ್ಮ 40 ಜನರ ತಂಡ ಬೆಂಗಳೂರು ವಿಮಾನ ನಿಲ್ದಾಣದಿಂದ ದುಬೈ ಮಾರ್ಗವಾಗಿ ಇಟಲಿಯ ರೋಮ್‌ ನಗರದಲ್ಲಿ ಮಧ್ಯಾಹ್ನ ಎರಡು ಗಂಟೆಗೆ ವಿಮಾನ ನಿಲ್ದಾಣದಲ್ಲಿ ಇಳಿದೆವು. ಹೋಟೆಲ್‌ಗೆ ಹೋಗಲು ಬಸ್‌ಗೆ ಕಾಯುತ್ತಿದ್ದೆವು. ಕೆಲವು ಸ್ನೇಹಿತರು ಮೂತ್ರ ವಿಸರ್ಜನೆಗೆಂದು ಮೂತ್ರಾಲಯಕ್ಕೆ ಹೋಗುತ್ತಿದ್ದರು. ನಾನು ಹತ್ತಿರದ ಮೂತ್ರಾಲಯಕ್ಕೆ ಹೋಗಿ ಬರುವುದರಲ್ಲಿ ಸ್ವಯಂ ಚಾಲಿತ ಬಾಗಿಲು ಬಂದಾಗಿತ್ತು.

ನಾನು ಎಷ್ಟೇ ಪ್ರಯತ್ನ ಪಟ್ಟರೂ ಬಾಗಿಲು ತೆಗೆಯಲಾಗಲಿಲ್ಲ. ಹೊರ ಹೋಗುವ ದಾರಿ ಹುಡುಕಲು ಅತ್ತಿಂದಿತ್ತ ಅಲೆದಾಡಿದೆ. ಗಾಬರಿಗೊಂಡ ನನ್ನ ಮುಖ ನೋಡಿದ ಕಪ್ಪು ಸಮವಸ್ತ್ರದ ಪೇದೆ ನನ್ನನ್ನು ಇಟಲಿ ಭಾಷೆಯಲ್ಲಿ ಪ್ರಶ್ನಿಸಿದ. ನಾನು ಇಂಗ್ಲಿಷ್‌ನಲ್ಲಿ ಸ್ವವಿವರ ಹೇಳಿದೆ. ಅವನಿಗೆ ಅರ್ಥವಾಗದೆ ನನ್ನನ್ನು ಕುರ್ಚಿ ತೋರಿಸಿ ಸನ್ನೆಯಿಂದ ಕುಳಿತುಕೊಳ್ಳಲು ಹೇಳಿದ.

ಇಬ್ಬರೂ ಮೂಗರ ಭಾಷೆಯಲ್ಲಿ ಮಾತನಾಡಿದರೂ ಪೊಲೀಸಪ್ಪ ಮಾತನಾಡಲಿಲ್ಲ. ನಾನು ಗಾಬರಿಗೊಂಡು ಆಲೋಚಿಸತೊಡಗಿದೆ. ಸುಮಾರು 10 ನಿಮಿಷದ ನಂತರ ಅವನ ಮೇಲಧಿಕಾರಿ ಬಂದು ನನ್ನ ಬಗ್ಗೆ ವಿಚಾರಿಸಿದ. ನಾನು  ಇದ್ದ ಬದ್ದ ಇಂಗ್ಲಿಷ್‌ನೆಲ್ಲಾ ಒಟ್ಟು ಮಾಡಿಕೊಂಡು ಸ್ವ ವಿವರ ನೀಡಿ ನಿಲ್ದಾಣದಿಂದ ಹೊರಹೋಗುವ ದಾರಿ ತೋರಿಸಿ ಎಂದು ವಿನಂತಿಸಿದೆ.

ಸನ್ನೆ ಮೂಲಕ ಹೊರ ಹೋಗುವಂತೆ ಸೂಚಿಸಿದ. ಅವನ ಸೂಚನೆಯಂತೆ ಹೊರಬಂದರೆ ನಮ್ಮ ತಂಡದ ಯಾರೂ ಕಾಣಿಸಲಿಲ್ಲ. ಸ್ವಲ್ಪ ಸಮಯದ ನಂತರ ನನ್ನ ಸ್ನೇಹಿತರು ನನ್ನ ಹುಡುಕುತ್ತಿರುವುದು ಕಾಣಿಸಿತು. ಅವರೊಡನೆ ಬಸ್‌ ನಿಲ್ದಾಣಕ್ಕೆ ಬಂದೆವು. ಅಬ್ಬಬ್ಬಾ ಎನ್ನುವಂತಾಗಿತ್ತು.
–ಟಿ.ಕೆ.ಚಿನ್ನಸ್ವಾಮಿ ಕೆ.ಆರ್. ನಗರ

***
ಛೀ ಕಳ್ಳ ಎನ್ನಲು ಹೋಗಿ...

ನಾನು ಕೇಂದ್ರ ಸರ್ಕಾರದ ಉದ್ಯಮದಲ್ಲಿ ಕೆಲಸಕ್ಕೆ ಸೇರಿ ವಿಶಾಖಪಟ್ಟಣಕ್ಕೆ ವರ್ಗವಾಯ್ತು. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವನಾದ್ದರಿಂದ ಅಲ್ಪಸ್ವಲ್ಪ ತೆಲುಗು ಬರುತ್ತಿತ್ತು ಅಷ್ಟೆ. ಹಾಗೇ ಒಂದು ದಿನ ಆಫೀಸಿನ ಸಹೋದ್ಯೋಗಿಯೊಬ್ಬರು ತಮ್ಮ ಎರಡು ವರ್ಷದ ಗಂಡು ಮಗುವನ್ನು ಆಫೀಸಿಗೆ ಕರೆದುಕೊಂಡು ಬಂದಿದ್ದರು. ಎಲ್ಲರಂತೆ ನಾನೂ ಮಗುವನ್ನು ಮಾತನಾಡಿಸಿದೆ.

ಆಫೀಸಿನಲ್ಲಿ ನಾನೊಬ್ಬನೇ ಪರರಾಜ್ಯದವರು. ಮಗುವನ್ನು ಮಾತನಾಡಿಸುವಾಗ ಕನ್ನಡದ ಭಾಷೆಯಲ್ಲಿ ‘ಛೀ ಕಳ್ಳ’ ಎಂದು ಹೇಳುವಂತೆ, ನಾನು ಅದನ್ನು ತೆಲುಗಿನಲ್ಲಿ ಭಾಷಾಂತರ ಮಾಡಿ ‘ಎಮ್‌ರಾ ದೊಂಗ ನಾ ಕೊಡಕ’ ಎಂದು ಪ್ರೀತಿಯಿಂದ ಮಾತನಾಡಿಸಿದೆ.

ನಮ್ಮ ಸಹೋದ್ಯೋಗಿಗೆ ನನ್ನ ಭಾಷೆಯಿಂದ ಶಾಕ್ ಆಯ್ತು. ಹೀಗೆನ್ನುತ್ತಿದ್ದಂತೆ ಅವರು ನನ್ನ ಮೇಲೆ ಸಿಕ್ಕಾಪಟ್ಟೆ ರೇಗಾಡಿದರು. ಹಾಗೂ ನನ್ನನ್ನು ತಪ್ಪಾಗಿ ಭಾವಿಸಿ ಒಂದು ತಿಂಗಳು ಮಾತನಾಡಲೇ ಇಲ್ಲ. ಅವಳು ಇಂಗ್ಲಿಷ್‌ನಲ್ಲಿ ನನಗೆ ನನ್ನ ಮಗನನ್ನು ಏನು ತಿಳಿದುಕೊಂಡಿದ್ದೀರಾ, ಹೀಗಾ ಮಗುವನ್ನು ಮಾತನಾಡಿಸೋದು ಎಂದು ಬೈದಳು.ನಾನು ತಬ್ಬಿಬ್ಬಾದೆ. ಏನೋ ಎಡವಟ್ಟಾಗಿದೆ ಎನಿಸಿತು. ದಾರಿ ತೋಚದೆ ನಾನು ವಿನಯದಿಂದ ಕ್ಷಮೆ ಕೇಳಿದೆ. ನಂತರ ತೆಲುಗು ಕಲಿತು ಮಾತನಾಡಲು ಮುಂದಾದೆ.
–ಎಸ್. ಶ್ರೀಕಂಠೇಶ್ವರ ಬೆಂಗಳೂರು

***
ಅಂತೂ ಮಲಯಾಳ ಕಲಿತೆ

ಬಹು ದಿನದ ಕನಸು, ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಇರಾದೆಯಲಿ ಚಿಕ್ಕ ಹಳ್ಳಿಯಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ ಮುಗಿಸಿದ ನಾನು, ಮಂಗಳೂರಿನಲ್ಲಿ ಓದುವ ತವಕದಿಂದ ಪದವಿ ಮುಗಿಸಿ ಉನ್ನತ ವ್ಯಾಸಂಗದ ಕನಸು ಹೊತ್ತು ಪ್ರಯಾಣ ಬೆಳೆಸಿದೆ. ಆದರೆ ಅಷ್ಟು ದೂರ ಕಳುಹಿಸಿ ಓದಿಸುವ ಮನಸ್ಸು ಮನೆಯಲ್ಲಿ ಯಾರಿಗೂ ಇರಲಿಲ್ಲ. ನನ್ನ ಆತ್ಮವಿಶ್ವಾಸ, ದೃಢಮನಸ್ಸು ಮಂಗಳೂರಿನ ಕಾಲೇಜು ಸೇರಿಸಿತು.

ಕಾಲೇಜು ಪ್ರಾರಂಭವಾಗುವ ಹಿಂದಿನ ದಿನ ಅಪ್ಪ, ಅಮ್ಮ, ಅಕ್ಕ ಎಲ್ಲರೂ ನನ್ನನ್ನು ಮಂಗಳೂರಿಗೆ ಬಿಡಲು ಬಂದಿದ್ದರು. ಬಾವಿಯೊಳಗಿನ ಕಪ್ಪೆಯಂತಿದ್ದ ನನಗೆ ಹೂರ ಜಗತ್ತು, ದೊಡ್ಡ ಸಿಟಿ ಮೈ ಝಂ ಎನಿಸಿದರೂ ಓದುವ ತವಕ. ಅಲ್ಲಿ ನಾನು ಉಳಿಯುವುದು ಪಿಜಿಯಲ್ಲಿ ಎಂದು ನಿರ್ಧಾರವಾಗಿತ್ತು. ಆದರೆ ಪಿ.ಜಿ ಕೇರಳ ಮೂಲದವರದು, ಮಲಯಾಳ ಬಿಟ್ಟರೆ ಬೇರೆ ಭಾಷೆ ಅವರಿಗೆ ಗೊತ್ತಿಲ್ಲ. ಅದೃಷ್ಟವೋ ದುರಾದೃಷ್ಟವೋ ಎಂಬಂತೆ ಕನ್ನಡ ಬಿಟ್ಟು ಬೇರೆ ಭಾಷೆ ನಂಗೊತ್ತಿಲ್ಲ.

ಅಪ್ಪ, ಅಮ್ಮ, ಅಕ್ಕ ನನ್ನ ಬಿಟ್ಟು ಹೋಗುವಾಗ ಕಣ್ಣಲ್ಲಿ ನೀರು ತುಂಬಿ ಭಾವುಕಳಾದ ನನ್ನ ಸಮಾಧಾನಪಡಿಸಿದ್ದು ಆ ಮಲಯಾಳಿ ಆಂಟಿ, ಅವರದೇ ಭಾಷೆಯಲ್ಲಿ. ಭಾಷೆಗೂ ಭಾವನೆಯಿದೆ ಎಂದು ಬೇಸರದ ಮನದಲ್ಲಿ ಅವರನ್ನು ಬೀಳ್ಕೊಟ್ಟು ಅಂದಿನಿಂದ ಮಲಯಾಳಿ ಆಂಟಿಯ ಜೊತೆ ಉಳಿಯುವ ದೃಢ ಮನಸ್ಸು ಮಾಡಿದೆ. ನನ್ನ ಭಾವನೆ ಅರ್ಥವಾಗಿತ್ತು. ಆದರೆ ಭಾಷೆ ಅರ್ಥೈಸಿಕೊಳ್ಳದ ಅವರು ಮಲಯಾಳದಲ್ಲಿಯೇ ಮಾತನಾಡಿಸುತ್ತಿದ್ದರು.

ಅವರು ಜೋರಾಗಿ ಮಾತನಾಡಿದರೆ ಜಗಳ ಮಾಡಿತ್ತಿರುವರೋ ಎನ್ನುವ ಭಯ ಆತಂಕ ಒಂದೆಡೆಯಾದರೆ ಮಲಯಾಳ ಭಾಷೆಯೇ ಬರದ ನನಗೆ ನನ್ನವರಾರೂ ನನ್ನೊಂದಿಗಿಲ್ಲ ಎನ್ನುವ ಅಳಲು. ರಾತ್ರಿ ಕಳೆಯಿತು. ಮರುದಿನ ಕಾಲೇಜಿಗೆ ಹೋಗುವ ಮೊದಲ ದಿನದ ಬೆಳಿಗ್ಗೆ ಆಂಟಿ ಬಂದು ಮಲಯಾಳಯಲ್ಲಿ ‘ವೆಳ್ಳ ಚೂಡಾಯಿ ಕುಳಿಕ್ಯಾನ ವಾ ಮೋಳೆ’ ಅಂದ್ರು. ನನಗೆ ಹಾಗಂದ್ರೆ ಏನು ಅಂತಾನೇ ಗೊತ್ತಾಗಿಲ್ಲ, ನಾನು ಅವರ ಮುಖ ನೋಡಿ ನಕ್ಕಿದೆ. ಅವರು ನಂಗೆ ಅರ್ಥವಾಯ್ತು ಅಂದ್ಕೊಂಡು ಹೋದ್ರು.

ಆದ್ರೆ 10 ನಿಮಿಷವಾದ್ರು ನಾನು ರೂಮ್ ಬಿಟ್ಟು ಹೋಗದಿರುವುದನ್ನು ನೋಡಿ ಮತ್ತೆ ಅದೇ ಮಾತನ್ನು ಹೇಳಿದರು. ಆಗ ನಂಗೆ ಭಯ ಆಯ್ತು, ಏನೋ ಆಗಿದೆ, ಹಾಗಾಗಿ ಇವರು ಏನೋ ಹೇಳ್ತಿದಾರೆ ಅಂದ್ಕೊಂಡೆ. ಅವರು ನನಗೆ ಅರ್ಥವಾಗದಿರುವುದನ್ನು ನೋಡಿ ವಾಟರ್‌ ಹಾಟ್ ಅಂತ ಹೇಳಿದಾಗ ಸ್ನಾನಕ್ಕೆ ಹೋಗು ಅಂತ ಹೇಳಿರಬಹುದು ಎಂದು ಬಾತ್‌ರೂಂ ನೋಡಿದಾಗ ನನಗೆ ತಿಳಿಯಿತು.

ಬಿಸಿ ನೀರು ಕಾಯಿಸಿದ್ದೀನಿ ಸ್ನಾನ ಮಾಡು ಅಂತ ಹೇಳ್ತಾ ಇದಾರೆ ಅಂತ ಆಮೇಲೆ ಗೊತ್ತಾಯ್ತು. ನಂತರ ಮೂರ್ನಾಲ್ಕು ತಿಂಗಳಲ್ಲಿ ಮೂಲ ಮಲಯಾಳಿಯವಳೇ ಎನ್ನುವ ರೀತಿ ಭಾಷೆ ಕಲಿತು ಮಾತನಾಡಿದ್ದಲ್ಲದೇ, ಕೇರಳಕ್ಕೂ ಹೋಗಿ ಬಂದೆ.  
-ಮನುಜಾ ಎಸ್. ಎಲ್ ಶಿರಳಗಿ ಉತ್ತರ ಕನ್ನಡ

***
‘ಸ್ವಲ್ಪ ತಪ್ಕೊಳಿ’ ಪ್ಲೀಸ್

ನಾವೆಲ್ಲ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆವು. ನಮ್ಮ ತಂಡದಲ್ಲಿ ಕರ್ನಾಟಕದ ಕೆಲ ಜಿಲ್ಲೆಯವರು ಸೇರಿದಂತೆ, ಆಂಧ್ರಮೂಲದವರು ಓರ್ವರಿದ್ದರು.
ಅಂದು ಊಟದ ಸಮಯ, ನಾನು ನನ್ನ ಸಹೋದ್ಯೋಗಿಗಳೊಡನೆ ಊಟ ಮಾಡುತ್ತಾ ಹರಟುತ್ತಿದ್ದೆ.

ಊಟಕ್ಕೆ ಕುಳಿತವರಲ್ಲಿ ಧಾರವಾಡ, ಚಿತ್ರದುರ್ಗ, ಬಾಗಲಕೋಟೆ ಹಾಗೂ ಆಂಧ್ರ ಮೂಲದ ಯುವಕನಿದ್ದ. ನಾನು ಬೆಂಗಳೂರಿನವಳು, ನನ್ನ ಕೆಲ ಬಂಧುಗಳದ್ದು ತೆಲುಗು ಮಾತೃ ಭಾಷೆಯಾದ್ದರಿಂದ ಅವರೆಲ್ಲರ ಮಧ್ಯೆ ನಾನು ಅಲ್ಪ ಸ್ವಲ್ಪ ತೆಲುಗು ಬಲ್ಲವಳಾಗಿದ್ದೆ. ಆದರೆ ನನ್ನ ಸಹೋದ್ಯೋಗಿಗಳಾದ ಸುಕನ್ಯಾ, ಅನುಷಾ, ಕಿರಣ್‌ರಿಗೆ ತೆಲುಗು ಅರ್ಥವಾಗುತ್ತಿರಲಿಲ್ಲ. ಆದರೂ ಆಂಧ್ರ ಮೂಲದ ನರೇಶ್ ನಮ್ಮಲ್ಲಿ ಒಬ್ಬ ಉತ್ತಮ ಸ್ನೇಹಿತನಾಗಿದ್ದ.

ನಾನು ನರೇಶ್‌ನೊಂದಿಗೆ ಸ್ವಲ್ಪ ತೆಲುಗು ಕನ್ನಡ ಬೆರೆಸಿ ಮಾತನಾಡುತ್ತಿದ್ದೆ. ಅವರೆಲ್ಲರು ನೀವು ಕನ್ನಡದಲ್ಲಿ ಮಾತಾಡಿ ಇಲ್ಲಾಂದ್ರೆ ನಮಗೇನು ಅರ್ಥವಾಗಲ್ಲ ಎಂದು ನಮ್ಮನ್ನು ಕೆಣಕಿದರು. ಆದರು ಹೇಗೋ ಅವರಿಗೂ ಅರ್ಥವಾಗೋ ರೀತಿ ನರೇಶ್ ಸಹ ಹೆಚ್ಚು ತೆಲುಗು ಸ್ವಲ್ಪ ಕನ್ನಡ ಬೆರೆಸಿ ನಮ್ಮೊಂದಿಗೆ ಹರಟುತ್ತಿದ್ದ.

ಊಟದ ವೇಳೆ ಸುಕನ್ಯಾ ಪಕ್ಕ ನರೇಶ್ ಕೂತಿದ್ದರಿಂದ, ಊಟದ ಬಳಿಕ ಸುಕನ್ಯಾ ಸ್ವಲ್ಪ ಸರ್ಕೊಳಿ ನಾನು ಕೈ ತೊಳಿಬೇಕೆಂದ್ರು. ಆಗ ನರೇಶ್ ಏನಂದ್ರಿ ಎಂದು ತೆಲುಗಿನಲ್ಲಿ ಕೇಳಿದಾಗ, ನಾನು ತೆಲುಗಿನಲ್ಲಿ ಸ್ವಲ್ಪ ಜರುಗಿ ಎಂಬ ಪದಕ್ಕೆ ‘ಕೊಂಚಂ ತಪ್ಪುಕೋಂಡಿ’ ಎಂದು ಹೇಳಿದೆ, ಆಗ ಸುನೀತ ತೆಲುಗು ಮಿಶ್ರಿತ ಕನ್ನಡದಲ್ಲಿ ‘ಸ್ವಲ್ಪ ತಪ್ಕೊಳಿ ನರೇಶ್’ ಎಂದಾಗ ಅಲ್ಲಿದ್ದವರಲ್ಲಿ ನಗು ಉಕ್ಕಿಬಂತು.
–ಅಮೂಲ್ಯ ಪಿ.ಎಲ್

***
‘ಭೋಜನ’ ತಂದ ನಿರಾಸೆ

ಸುಮಾರು ವರುಷಗಳ ಹಿಂದೆ ಅಣ್ಣ ಮಹಾರಾಷ್ಟ್ರದ ನಾಗಪುರದಲ್ಲಿ ಫ್ಯಾಕ್ಟರಿಯೊಂದರಲ್ಲಿ ನೌಕರಿಗೆ ಸೇರಿದ್ದ. ಒಂದು ಬಾರಿ ನಾನೂ ಅಲ್ಲಿಗೆ ಹೋಗಿದ್ದೆ. ಒಂದು ದಿನ ಮುಂಜಾನೆ ಆ ವಠಾರದ ಹಿರಿಯರೊಬ್ಬರು ಬಂದು ಹಿಂದಿಯಲ್ಲಿ ಹೇಳಿದರು ‘ಆಜ್ ಶ್ಯಾಮ್ ಆಟ್ ಬಜೆ ಹಮಾರಾ ಘರ್‌ಮೆ ಭೋಜನ್ ಹೈ. ಘರ್‌ಕಾ ಸಬ್ ಲೋಕ್ ಜರೂರ್ ಆನಾ’ (ಇಂದು ಸಾಯಂಕಾಲ ಎಂಟು ಗಂಟೆಗೆ ನಮ್ಮ ಮನೆಯಲ್ಲಿ ಊಟ ಇದೆ. ಮನೆಯ ಎಲ್ಲರೂ ತಪ್ಪದೇ ಬರಬೇಕು) ಎಂದು. ಅಣ್ಣ, ಅಣ್ಣನ ಹೆಂಡತಿ, ಅವನ ಮಕ್ಕಳು ಮತ್ತು ನಾನು ಎಲ್ಲರೂ ಸೇರಿ ಸರಿಯಾಗಿ ಎಂಟು ಗಂಟೆಗೆ ಅವರ ಮನೆಗೆ ಹೋಗಿ ತಲುಪಿದೆವು.

ಅವರ ಮನೆಯಲ್ಲಿ ಭರ್ಜರಿ ಪೂಜೆ ನಡೆಯುತ್ತಿತ್ತು. ಜನರೆಲ್ಲ ಸೇರಿ ಭಜನೆಯಲ್ಲಿ ಮಗ್ನರಾಗಿ ಹೋಗಿದ್ದರು. ಆದರೆ ಅಲ್ಲಿ ಊಟವಿರುವ ಯಾವುದೇ ಲಕ್ಷಣವೂ ಗೋಚರಿಸಲಿಲ್ಲ.ಅದೇ ಸಂದರ್ಭದಲ್ಲಿ ಅಣ್ಣನ ಫ್ಯಾಕ್ಟರಿಯಲ್ಲಿ ನೌಕರಿಗಿದ್ದ ಕರ್ನಾಟಕದವರೇ ಆದ ಒಬ್ಬರು ಅಲ್ಲಿಗೆ ಬಂದಿದ್ದರು. ಅಣ್ಣ ಅವರಲ್ಲಿ ಹೋಗಿ ಗುಟ್ಟಾಗಿ ವಿಚಾರಿಸಿದ, ‘ಮನೆ ಮಂದಿಯೆಲ್ಲ ಭೋಜನಕ್ಕೆ ಬನ್ನಿ ಎಂತ ಹೇಳಿ ಹೋಗಿದ್ದರು, ಆದರೆ ಇಲ್ಲಿ ಊಟದ ಯಾವ ಲಕ್ಷಣವೂ ಕಾಣುವುದಿಲ್ಲವಲ್ಲ!!’ ಎಂದ. ಆಗ ಅವರು ನಕ್ಕು ನುಡಿದರು ‘ಭೋಜನ ಅಂದರೆ ಊಟ ಅಲ್ಲ. ಅವರು ಬಂಗಾಳಿ ಜನ. ಭಜನೆಗೆ ಭೋಜನ ಅಂತಾರೆ, ಸಮುದ್ರಕ್ಕೆ ಸೊಮುಂದರ್, ಸುಮಿತ್ರಾಗೆ ಸೊಮಿತ್ರ ಹೀಗೆಲ್ಲ ಉಚ್ಚರಿಸುತ್ತಾರೆ’ ಅನ್ನಲು ನಮ್ಮೆಲ್ಲರ ಮುಖ ಪೆಚ್ಚಾಯಿತು. ಅದನ್ನು ತೋರಿಸಿಕೊಳ್ಳದೇ ನಾವೂ ಭಜನೆಗೆ ಬಂದವರ ಹಾಗೆ ನಟಿಸುತ್ತ ಭಜನೆ ಹೇಳುವವರ ಜತೆ ಕೆಲ ಹೊತ್ತು ಕುಳಿತುಕೊಂಡು ನಿಧಾನವಾಗಿ ಅಲ್ಲಿಂದ ಹೊರಬಿದ್ದೆವು.

ಮನೆಗೆ ಹೋಗಿ ಊಟ ಮಾಡೋಣ ಎಂದರೆ ಅಲ್ಲಿ ಯಾವ ತಯಾರಿಯೂ ಇಲ್ಲದ್ದರಿಂದ ನೇರವಾಗಿ ಹೊಟೇಲಿಗೆ ಹೋಗಿ ಊಟ ಮಾಡಿ ಮನೆ ಸೇರಿದೆವು. ನಾವು ಮೂರ್ಖರಾದದ್ದು ನೆನೆಸಿಕೊಂಡು ನಕ್ಕು ನಕ್ಕು ಮಲಗಿದೆವು. 
–ದೇವಿದಾಸ ಸುವರ್ಣ ಅಂಕೋಲಾ

***
ಮಧ್ಯಾಹ್ನದಾಗ ಆಯಾ ಜಿ...

ನನ್ನ ಪ್ರಾಥಮಿಕ ಶಿಕ್ಷಣ ಉರ್ದು ಭಾಷೆಯಲ್ಲಿ ಮುಗಿದರೂ ನನಗೆ ಆ ಭಾಷೆಯಲ್ಲಿ ಮಾತನಾಡಲು ಸಾಧ್ಯವೇ ಆಗಲಿಲ್ಲ! ಇವತ್ತಿಗೂ ಅಷ್ಟಕಷ್ಟೆ! ಆದ್ದರಿಂದ ಹೈಸ್ಕೂಲಿನಿಂದ ಕನ್ನಡ ಮಾಧ್ಯಮದಲ್ಲಿ ಕಲಿಕೆ ಮುಂದುವರೆಯಿತು. ಪಿ.ಯು.ಸಿ. ಮುಗಿಸಿಕೊಂಡು ಡಿ.ಇಡಿ ತರಬೇತಿಗಾಗಿ ಹುನಗುಮಂದಕ್ಕೆ ಹೋದೆನು. ಅಲ್ಲಿ ವಸತಿ ನಿಲಯದ ಸೌಲಭ್ಯವಿತ್ತು.

ಊಟಕ್ಕಾಗಿ ನಮ್ಮ ಮಾವನ ಮನೆಗೇ ಹೋಗಬೇಕಾಗಿ ಬಂತು. ನನಗೊಂದು ನುಂಗಲಾರದ ತುತ್ತೇ ಸರಿ ಅದು. ಕಾರಣವೇನೆಂದರೆ ನಮ್ಮ ಮುಮಾನಿಗೆ (ಅತ್ತೆ) ಕನ್ನಡ ಬಳಕೆ ತೀರ ಅಪರೂಪ, ಮಾತನಾಡಿದರೂ ಅದೇನು ಹೇಳುತ್ತಾರೋ ತಿಳಿಯುತ್ತಿರಲಿಲ್ಲ. ನನಗೆ? ಉರ್ದುವಿನಲ್ಲೇ ಅವರೊಂದಿಗೆ ಮಾತನಾಡಬೇಕಲ್ಲ! ಏನು ಮಾತನಾಡುವುದು? ದಿಕ್ಕೇ ತಪ್ಪಿದಂತಾಗುತ್ತಿತ್ತು...

ಅವರೇನೇ ಹೇಳಿದರೂ-ಕೇಳಿದರೂ ನನ್ನದೊಂದೇ ಉತ್ತರ ‘ಹಾಂ ಜಿ ಮುಮಾನಿ, ಹೂಂ ಜಿ ಮುಮಾನಿ, ಮೈ ಜಾಕಾತೂಂ ಜಿ ಮುಮಾನಿ’ ಇವಿಷ್ಟನ್ನು ಬಿಟ್ಟು ಹೆಚ್ಚೇನೂ ಮಾತನಾಡಲು ಹೋಗುತ್ತಿರಲಿಲ್ಲ. ಏನಾದರು ಹೇಳಲು ಹೋದರೆ ಕನ್ನಡ ಮಿಕ್ಸಾಗಿ ಬಿಡುತ್ತಿತ್ತು ನನ್ನ ಉರ್ದುವಿನಲ್ಲಿ!..

ಒಂದು ದಿನ ಜ್ವರ ಬಂದದ್ದರಿಂದ ಹಾಸ್ಟೆಲ್‌ನಿಂದ ಮನೆಗೆ ಬೇಗನೇ ಬಂದೆ. ನಮ್ಮ ಮುಮಾನಿ ‘ಕೀರೆ ಕಾಶಿಮ, ಜಲ್ದಿ ಆಯಾತೋ ರೆ’ ಎಂದಾಗ ‘ಆರಾಮ ನೈ ಜಿ’ ಎಂದು ಒಳನಡದೆ. ಜ್ವರ ಭಯಂಕರವಿದ್ದದ್ದರಿಂದ ನಮ್ಮ ಮುಮಾನಿ ವಿಕ್ಸನ್ನು ಹಚ್ಚುತ್ತಿರಲು ಹೊರಗೆ ನೋಡಿದ ಓಣಿಯವರು ನೋಡಿ ‘ಕೀ ರೆ ಬಾ ತಪ್(ಜ್ವರ) ಕಬ್ ಆಯೆ ರೆ’ ಎಂದು ಕೇಳಿದಾಗ ನಾನು ಏಕಾಯೇಕಿ ‘ಮಧ್ಯಾಹ್ನದಾಗ ಆಯಾ ಜಿ’ ಎಂದು ಹೇಳಿಬಿಟ್ಟಿ!

ವಿಕ್ಸನ್ನು ಹಚ್ಚುತ್ತಿದ್ದ ಮುಮಾನಿ ನನ್ನ ಮಾತನ್ನು ಕೇಳಿದ್ದೇ ತಡ, ನಗೆಯನ್ನು ತಡೆಯಲಾಗದೇ ಬೆನ್ನಿಗೆ ಜೋರಾಗಿ ಹೊಡೆದು, ಹಾ ಹಾ... ಎಂದು ನಗಲು ಪ್ರಾರಂಭಿಸಿದರು.ಅವರೊಂದಿಗೆ ಎಲ್ಲರೂ ಬಿದ್ದು ಬಿದ್ದು ನಗುತ್ತಿರುವಾಗ ನನಗಾದ ಮುಜುಗರಕ್ಕೆ ಜ್ವರವಾರಿದಂತಾಗಿ ಬುಡಕ್ಕನೆ ಎದ್ದು ವಾಪಸ್ ಹಾಸ್ಟೆಲ್‌ಗೆ ಹೋಗಿದ್ದೆ!

ಅಂದಿನಿಂದ ನನಗೆ ‘ಮಧ್ಯಾಹ್ನ ಕಾ ಕಾಶೀಮ, ಮಧ್ಯಾಹ್ನ ಕಾ ಕಾಶೀಮ’ ಎಂಬ ಅಡ್ಡ ಹೆಸರೇ ಬಿದ್ದುಬಿಟ್ಟಿತು. ಆದ್ದರಿಂದ ಈಗಲೂ ನಾನು ಉರ್ದುವಿನಲ್ಲಿ ಮಾತನಾಡುವ ಸಂದರ್ಭ ಬಂದಾಗಲೆಲ್ಲ ಸಾವಕಾಶವಾಗಿ ವಿಚಾರ ಮಾಡಿ ಮಾಡಿ ತಪ್ಪಾಗದಂತೆ ಕನ್ನಡ ಮಿಕ್ಸ್‌ ಆಗದಂತೆ ಎಚ್ಚರ ವಹಿಸಿ ಮಾತನಾಡಲು ಪ್ರಯತ್ನಿಸುತ್ತೇನೆ...
–ಕಾಶೀಮಸಾಹೇಬ ಜೆ. ಬುರಡಿ ಗದಗ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT