ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯದ ಗುರಿ

ರಣಜಿ: ವಿದರ್ಭ ಎದುರು ಇಂದಿನಿಂದ ಪೈಪೋಟಿ, ವಿನಯ್ ಬಳಗವೇ ನೆಚ್ಚಿನ ತಂಡ
Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ
ವಡೋದರ: ಕಲೆಯ ತವರು ಎನಿಸಿರುವ ವಡೋದರದಲ್ಲಿ ಹ್ಯಾಟ್ರಿಕ್‌ ಜಯದ ಸುಂದರ ಚಿತ್ರ ಬಿಡಿಸಲು ಕರ್ನಾಟಕ ತಂಡದ ಆಟಗಾರರು ಕಾಯುತ್ತಿದ್ದಾರೆ. ಇದಕ್ಕಾಗಿ ಇಲ್ಲಿನ ಮೋತಿಬಾಗ್‌ ಮೈದಾನದಲ್ಲಿ ವಿದರ್ಭ ಎದುರು ಶನಿವಾರ ವೇದಿಕೆ ಸಿದ್ಧಗೊಂಡಿದೆ.
 
ನಗರದ ಮನಮೋಹಕ ತಾಣವೆನಿಸಿರುವ ಲಕ್ಷ್ಮೀ ವಿಲಾಸ ಅರಮನೆಗೆ ಹೊಂದಿಕೊಂಡು ಮೈದಾನ ವಿದೆ. ಈ ಬಾರಿಯ ರಣಜಿ ಟೂರ್ನಿಯ ಎರಡು ಪಂದ್ಯಗಳು ಇಲ್ಲಿನ ರಿಲಯನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದವು. ಮೋತಿಬಾಗ್‌ನಲ್ಲಿ ಆಯೋಜನೆ ಯಾಗಿರುವ ಮೊದಲ ಪಂದ್ಯವಿದು.
 
ವಿನಯ್‌ ಕುಮಾರ್‌ ನಾಯಕತ್ವದ ರಾಜ್ಯ ತಂಡ ಎರಡು ದಿನಗಳ ಹಿಂದೆಯೇ ಬಂದು ಅಭ್ಯಾಸ ನಡೆಸಿದೆ. ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ತಂಡ ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜಾರ್ಖಂಡ್ ಎದುರಿನ ಪಂದ್ಯ ಡ್ರಾ ಆಗಿತ್ತು. ದೆಹಲಿ ಮತ್ತು ಅಸ್ಸಾಂ ವಿರುದ್ಧದ ಪಂದ್ಯಗಳಲ್ಲಿ ಕರ್ನಾಟಕ ಬೋನಸ್ ಅಂಕ ಸಮೇತ ಗೆಲುವು ಪಡೆದಿತ್ತು. ತಂಡದ ಖಾತೆಯಲ್ಲಿ ಒಟ್ಟು 17 ಪಾಯಿಂಟ್ಸ್‌ ಇವೆ.
 
ಎರಡು ವರ್ಷಗಳಲ್ಲಿ ಆರು ಟ್ರೋಫಿ ಜಯಿಸಿ ಹೋದ ವರ್ಷ ಲೀಗ್‌ ಹಂತದಲ್ಲಿ ಸೋತಿದ್ದ ರಾಜ್ಯ ತಂಡ ಹಿಂದಿನ ಎಲ್ಲಾ ಕಹಿ ನೆನಪುಗಳು ಕೊಚ್ಚಿ ಹೋಗುವಂತೆ ಆಡುತ್ತಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಕಾರಣ ಆಟಗಾರರ ವಿಶ್ವಾಸ ಕೂಡ ಇಮ್ಮಡಿಗೊಂಡಿದೆ. ಶುಕ್ರವಾರ ಅಭ್ಯಾಸ ನಡೆಸುವಾಗ ಆಟಗಾರರ ಮೊಗದ ಮೇಲೆ ಎದ್ದು ಕಾಣುತ್ತಿದ್ದ ಆತ್ಮವಿಶ್ವಾಸವೇ ಇದಕ್ಕೆ ಸಾಕ್ಷಿ.
 
ಆದರೂ ರಾಜ್ಯದ ಆಟಗಾರರು ಗೆಲುವಿನಲ್ಲಿ ಮೈಮರೆತಿಲ್ಲ. ನಾಯಕ ವಿನಯ್‌ ಇದೇ ಮಾತನ್ನು ಹೇಳಿದ್ದಾರೆ. ‘ಆರಂಭದ ಮೂರು ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಖುಷಿ ತಂದಿದೆ. ಇಷ್ಟಕ್ಕೆ ಮುಂದಿರುವ ನಮ್ಮ ಗುರಿಯನ್ನು ಮರೆತಿಲ್ಲ. ಯಾವ ತಂಡವನ್ನೂ ಹಗುರ ವಾಗಿ ಪರಿಗಣಿಸುವುದಿಲ್ಲ’ ಎಂದಿದ್ದಾರೆ.
 
ಬ್ಯಾಟಿಂಗ್‌ನಲ್ಲಿ ಸಾಟಿಯಿಲ್ಲ 
ಕರ್ನಾಟಕ ತಂಡ ಮುಂಬೈನಲ್ಲಿ ನಡೆದ ತನ್ನ ಹಿಂದಿನ ಪಂದ್ಯದಲ್ಲಿ ಅಸ್ಸಾಂ ಎದುರು ಹತ್ತು ವಿಕೆಟ್‌ಗಳ ಗೆಲುವು ಪಡೆದಿತ್ತು. ರಾಬಿನ್ ಉತ್ತಪ್ಪ, ಕರುಣ್‌ ನಾಯರ್‌ ಮತ್ತು ಸ್ಟುವರ್ಟ್ ಬಿನ್ನಿ ಶತಕ ಹೊಡೆದಿದ್ದರು. ಅದಕ್ಕೂ ಹಿಂದಿನ ಪಂದ್ಯಗಳಲ್ಲಿ ಮೀರ್‌ ಕೌನೇನ್ ಅಬ್ಬಾಸ್‌ ಮತ್ತು ಸಿ.ಎಂ. ಗೌತಮ್‌ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಬಲ ತುಂಬಿದ್ದರು. ಮೊದಲ ಪಂದ್ಯದಲ್ಲಿ ಆರ್‌. ಸಮರ್ಥ್‌ ದ್ವಿಶತಕ ಹೊಡೆದಿದ್ದರು. 
 
ಹೀಗೆ ಒಬ್ಬರಲ್ಲಾ ಒಬ್ಬರು ತಂಡಕ್ಕೆ ಆಸರೆಯಾಗುತ್ತಿರುವ ಕಾರಣ ತಂಡದ ಬ್ಯಾಟಿಂಗ್ ವಿಭಾಗ ಉತ್ತಮವಾಗಿದೆ. ಈಗ ಮನೀಷ್‌ ಪಾಂಡೆ ಕೂಡ ಮರಳಿದ್ದರಿಂದ ಆನೆಬಲ ಬಂದಂತಾಗಿದೆ. ನ್ಯೂಜಿಲೆಂಡ್‌ ಎದುರಿನ ಏಕದಿನ ಸರಣಿಗೆ ಮನೀಷ್‌ ರಾಷ್ಟ್ರೀಯ ತಂಡದಲ್ಲಿದ್ದರು. ಈಗ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಕರುಣ್‌ ನಾಯರ್‌ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಕರುಣ್‌ ಜಾಗವನ್ನು ಮನೀಷ್‌ ತುಂಬಲಿದ್ದಾರೆ.
 
ಗಾಯದ ಕಾರಣದಿಂದ ದೆಹಲಿ ಮತ್ತು ಕೋಲ್ಕತ್ತ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದ ವಿನಯ್‌ ವಿದರ್ಭ ಎದುರು ಕಣಕ್ಕಿಳಿಯಲಿದ್ದಾರೆ. ಕರುಣ್‌ ಅಲಭ್ಯರಾಗಿರುವ ಕಾರಣ ವಿಕೆಟ್‌ ಕೀಪರ್‌ ಸಿ.ಎಂ. ಗೌತಮ್ ಅವರಿಗೆ ಉಪನಾಯಕ ಸ್ಥಾನ ವಹಿಸಲಾಗಿದೆ. 
 
ತೊಡೆಸಂಧು ನೋವಿಗೆ ಒಳಗಾಗಿರುವ ಅಭಿಮನ್ಯು ಮಿಥುನ್‌ ಜಾಗದಲ್ಲಿ ವಿನಯ್ ಆಡಲಿದ್ದಾರೆ. ಇಷ್ಟು ಬದಲಾವಣೆ ಹೊರತುಪಡಿಸಿದರೆ ಹಿಂದಿನ ಪಂದ್ಯಗಳಲ್ಲಿ ಆಡಿದ್ದ ತಂಡವೇ ಕಣಕ್ಕಿಳಿಯಲಿದೆ.
 
ಮುಂದುವರಿಯುವುದೇ ಸ್ಪಿನ್‌ ಮೋಡಿ:‌
ದೆಹಲಿ ಮತ್ತು ಅಸ್ಸಾಂ ವಿರುದ್ಧದ ಪಂದ್ಯಗಳಲ್ಲಿ ರಾಜ್ಯ ತಂಡ ಗೆಲುವು ಪಡೆಯಲು ಬೌಲರ್‌ಗಳು ಪ್ರಮುಖ ಕಾರಣರಾಗಿದ್ದರು. ದೆಹಲಿ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 90 ರನ್‌ಗೆ ಆಲೌಟ್‌ ಮಾಡಿದ್ದರು. 
 
ವೇಗಿಗಳಾದ ವಿನಯ್‌, ಎಸ್‌.  ಅರವಿಂದ್‌ ಮತ್ತು ಸ್ಟುವರ್ಟ್‌ ಬಿನ್ನಿ ಅವರ ಜೊತೆ ಸ್ಪಿನ್ನರ್‌ಗಳಾದ ಕೆ. ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಅವರ ಬಲ ರಾಜ್ಯ ತಂಡಕ್ಕಿದೆ. ಆಫ್‌ ಸ್ಪಿನ್ನರ್ ಗೌತಮ್‌ ಮೂರು ಪಂದ್ಯಗಳಿಂದ 18 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ವಿನಯ್‌ ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಿದೆ. ಸ್ಪಿನ್ನರ್‌ಗಳ ಜಾದೂ ಮುಂದುವರಿಯಬೇಕಿದೆ.
 
ಮೊದಲ ಜಯದ ತುಡಿತ
ಫಯಾಜ್‌ ಫಜಲ್‌ ನಾಯಕತ್ವದ ವಿದರ್ಭ ತಂಡ ಈ ಬಾರಿಯ ಟೂರ್ನಿಯಲ್ಲಿ ಮೊದಲ ಗೆಲುವಿನ ತುಡಿತದಲ್ಲಿದೆ. ಈ ತಂಡ ಮೂರು ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳು ಡ್ರಾ ಆಗಿವೆ. ಒಟ್ಟು ಏಳು ಪಾಯಿಂಟ್ಸ್‌ನಿಂದ ಗುಂಪಿನಲ್ಲಿ ಆರನೇ ಸ್ಥಾನ ಹೊಂದಿರುವ ವಿದರ್ಭ ತನ್ನ ಹಿಂದಿನ ಪಂದ್ಯದಲ್ಲಿ ಜಾರ್ಖಂಡ್‌ ಎದುರು  ಮೊದಲ ಇನಿಂಗ್ಸ್‌ನಲ್ಲಿ105 ರನ್‌ಗೆ ಆಲೌಟ್‌ ಆಗಿತ್ತು.
 
ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ 444 ರನ್‌ ಕಲೆ ಹಾಕಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಸಂಜಯ್‌ ರಾಮಸ್ವಾಮಿ ಶತಕ ಹೊಡೆದಿದ್ದರು. ಈ ತಂಡದಲ ್ಲಿರುವ ಕರ್ನಾಟಕದ ಗಣೇಶ್‌ ಸತೀಶ್‌ ಕೂಡ ಉತ್ತಮ ಲಯದಲ್ಲಿದ್ದಾರೆ. ದಾವಣಗೆರೆ ಯ ಗಣೇಶ್, ತಮ್ಮದೇ ಊರಿನ ವಿನಯ್ ಕುಮಾರ್‌ ನಾಯಕ ತ್ವದ ರಾಜ್ಯ ತಂಡದ  ತಂತ್ರಗಳನ್ನು ಎದುರಿಸಲು ಹೇಗೆ ಪ್ರತಿತಂತ್ರ ರೂಪಿಸಿ ದ್ದಾರೆ ಎನ್ನು ವುದು ಕುತೂಹಲಕ್ಕೆ ಕಾರಣವಾಗಿದೆ.
 
ತಂಡಗಳು:
ಕರ್ನಾಟಕ:ಆರ್‌. ವಿನಯ್‌ ಕುಮಾರ್‌ (ನಾಯಕ), ಸಿ.ಎಂ. ಗೌತಮ್‌ (ಉಪ ನಾಯಕ), ಮಯಂಕ್‌ ಅಗರವಾಲ್‌, ಆರ್‌. ಸಮರ್ಥ್‌, ರಾಬಿನ್‌ ಉತ್ತಪ್ಪ, ಮನೀಷ್‌ ಪಾಂಡೆ, ಸ್ಟುವರ್ಟ್‌ ಬಿನ್ನಿ, ಶ್ರೇಯಸ್‌ ಗೋಪಾಲ್‌, ಎಸ್‌. ಅರ ವಿಂದ್‌, ಕೆ. ಗೌತಮ್‌, ಮೀರ್‌ ಕೌನೇನ್‌ ಅಬ್ಬಾಸ್‌, ರೋನಿತ್‌ ಮೋರೆ, ಅರ್ಜುನ ಹೊಯ್ಸಳ, ಪ್ರತೀಕ್‌ ಜೈನ್‌ ಮತ್ತು ಅಬ್ರಾರ್‌ ಖಾಜಿ.
 
ವಿದರ್ಭ: ಫಯಾಜ್‌ ಫಜಲ್‌ (ನಾಯಕ), ಗಣೇಶ್‌ ಸತೀಶ್‌ (ಉಪ ನಾಯಕ), ಆದಿತ್ಯ ಸರ್ವಾಟೆ, ರವಿ ಜಾಂಗಡಿ, ಶ್ರೀಕಾಂತ್‌ ವಾಘ್‌, ರವಿ ಠಾಕೂರ್‌, ಅಕ್ಷಯ್‌ ವಾಖರೆ, ಆದಿತ್ಯ ಶನ್ವಾರೆ, ಜಿತೇಶ್ ಶರ್ಮಾ, ಲಲಿತ್‌ ಯಾದವ್‌, ಕೆ. ಅಕ್ಷಯ್‌, ಜಿ. ರಜನೀಶ್‌, ಆರ್‌. ಸಂಜಯ್‌, ಅಕ್ಷಯ್‌ ಕಾರ್ನಿವರ್ ಮತ್ತು ಸ್ವಪ್ನಿಲ್‌ ಬಂಡಿವಾರ್‌. ಅಂಪೈರ್‌ಗಳು: ರೋಹನ್‌ ಪಂಡಿತ್‌ ಹಾಗೂ ನವದೀಪ್‌ ಸಿಂಗ್‌, ರೆಫರಿ: ಪ್ರಣವ್‌ ರಾಯ್‌.
ಪಂದ್ಯ ಆರಂಭ: ಬೆಳಿಗ್ಗೆ 9.30.
 
**
 
ಗಾಯದಿಂದ ಚೇತರಿಸಿಕೊಂಡು ಮರಳಿದ ನಾಯಕ ವಿನಯ್‌
‘ಹಿಂದೆ ನಾವು ಮಾಡಿದ ಸಾಧನೆ, ಗೆದ್ದ ಪಂದ್ಯಗಳೆಲ್ಲವೂ ಈಗ ಇತಿಹಾಸ. ಪ್ರತಿ ಪಂದ್ಯವೂ ನಮಗೆ ಹೊಸ ಆರಂಭ. ಆದ್ದರಿಂದ ಹಳೆಯದ್ದನ್ನು ಮರೆತು ಹೊಸ ಸಾಧನೆಯತ್ತ ಗಮನ ಹರಿಸಿದ್ದೇವೆ’ ಎಂದು ಕರ್ನಾಟಕ ತಂಡದ ನಾಯಕ ವಿನಯ್‌ ಕುಮಾರ್‌ ಹೇಳಿದ್ದಾರೆ.
 
ಜಾರ್ಖಂಡ್‌ ಎದುರಿನ ಪಂದ್ಯದ ವೇಳೆ ಬಲಗೈ ವೇಗಿ ವಿನಯ್‌ ಬಲಗಾಲಿನ ಸ್ನಾಯುಸೆಳೆತದ ನೋವಿಗೆ ಒಳಗಾಗಿದ್ದರು. ಆದ್ದರಿಂದ ದೆಹಲಿ ಮತ್ತು ಅಸ್ಸಾಂ ವಿರುದ್ಧದ ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೂ ತಂಡದ ಜೊತೆಗಿದ್ದು ಯುವ ಆಟಗಾರರಿಗೆ ಮಾರ್ಗದರ್ಶನ ಮಾಡಿದ್ದರು.
 
ಈಗ ಅವರು ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನೆಟ್ಸ್‌ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದರು. ಇಲ್ಲಿನ ಮೋತಿ ಬಾಗ್‌ ಅಂಗಳದ ನೆಟ್ಸ್‌ನಲ್ಲಿಯೂ ಶುಕ್ರ ವಾರವೂ ಹೆಚ್ಚು ಬೌಲಿಂಗ್ ಮಾಡಿ ದರು.
 
‘ಯಾವುದೇ ಟೂರ್ನಿಯಿರಲಿ ಗೆಲುವಿನ ಆರಂಭ ಪಡೆಯಬೇಕು ಎಂಬುದು ಪ್ರತಿ ತಂಡದ ಲೆಕ್ಕಾಚಾರ. ನಾವೂ ಅದೇ ನಿರೀಕ್ಷೆಯಲ್ಲಿದ್ದೆವು. ಅಂದುಕೊಂಡಂತೆಯೇ ಆಗಿರುವುದ ರಿಂದ ಮುಂದಿನ ಪಂದ್ಯ ಗಳಲ್ಲಿ ಬಲಿಷ್ಠ ತಂಡಗಳ ಸವಾಲು ಎದುರಿಸುವ ಆತ್ಮ ವಿಶ್ವಾಸ ಬಂದಿದೆ’ ಎಂದೂ ವಿನಯ್‌ ಹೇಳಿದರು.
 
ಗಾಯದ ನೋವಿನಿಂದ ಚೇತರಿಸಿ ಕೊಂಡ ಬಗ್ಗೆ ಮಾತನಾಡಿದ ಅವರು ‘ಎರಡು ವಾರ ವಿಶ್ರಾಂತಿ ಪಡೆದ ಕಾರಣ ಪೂರ್ಣವಾಗಿ ಚೇತರಿಸಿಕೊಂಡಿ ದ್ದೇನೆ. ಗುಣಮುಖ ನಾಗಲು ಸಮಯ ಬೇಕಿದ್ದ ಕಾರಣ ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯ ವಾಗಲಿಲ್ಲ. ಆ ನೋವಿನಲ್ಲಿಯೂ ದಿನಕ್ಕೆ 8ರಿಂದ 10 ಓವರ್‌ಗಳು ಬೌಲ್‌ ಮಾಡಿ ಅಭ್ಯಾಸ ನಡೆಸುತ್ತಿದ್ದೆ’ ಎಂದರು.
 
‘ಬೇಗನೆ ಚೇತರಿಸಿಕೊಂಡರೆ ಫೀಲ್ಡಿಂಗ್ ಮಾಡಬಹುದು ಎನ್ನುವ ಲೆಕ್ಕಾಚಾರದೊಂದಿಗೆ ಹಿಂದಿನ ಎರಡೂ ಪಂದ್ಯಗಳ ವೇಳೆ ತಂಡದ ಜೊತೆಗಿದ್ದೆ’ ಎಂದೂ ನುಡಿದರು. ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ವಿನಯ್‌ ಕೆಲವು ಹೊತ್ತು ಫೀಲ್ಡಿಂಗ್ ಮಾಡಿದ್ದರು. ಇದಕ್ಕೂ ಮೊದಲು ಅವರು ನೆಟ್ಸ್‌ನಲ್ಲಿ ಆರು ಓವರ್‌ ಬೌಲಿಂಗ್ ಮಾಡಿ ದೈಹಿಕ ಕಸರತ್ತು ನಡೆಸಿದ್ದರು. 
 
ವಿದರ್ಭ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡಿದ ‘ದಾವಣಗೆರೆ ಎಕ್ಸ್‌ ಪ್ರೆಸ್‌’ ವಿನಯ್‌ ‘ಇಲ್ಲಿನ ಪಿಚ್‌ ಅನ್ನು ಕೆಂಪು ಮಣ್ಣಿನಲ್ಲಿ ಸಜ್ಜು ಮಾಡಿರು ವಂತೆ ಕಾಣಿಸುತ್್ತಿದೆ. ಆದ್ದರಿಂದ ಪಿಚ್‌ ವೇಗದ ಬೌಲರ್‌ಗಳು ನೆರವಾಗುವ ನಿರೀಕ್ಷೆಯಿದೆ. ಮೂರು ಮತ್ತು ನಾಲ್ಕನೇ ದಿನದಾಟದಲ್ಲಿ ಸ್ಪಿನ್ನರ್‌ಗಳಿಗೆ ಸಹಾಯಕವಾಗಬಹುದು’ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT