ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣುಗಳಲ್ಲಿ ಸಮುದ್ರ ಬಾರದಂತೆ ನೋಡಿಕೊಳ್ಳಬೇಕು...

ನಿನ್ನಂಥ ಅಪ್ಪ ಇಲ್ಲ
Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಅಮ್ಮನ ಮುಖದ ನೆನಪೂ ನನಗಿಲ್ಲ, ಅಮ್ಮ ತೀರಿಕೊಂಡಾಗ ನಾನು ಆರು ತಿಂಗಳ ಕೂಸು.  ಸಿಂಪಿಯಲ್ಲಿ ಹೊಯ್‍ಹಾಲು ಹಾಕಿ ಅಪ್ಪ ನನ್ನನ್ನು ಬದುಕಿಸಿಕೊಂಡರು. ಮಾತು ಮಾತಿಗೂ ‘’ಕಂದಾ, ಕಂದಾ’’ ಎಂದೇ ನನ್ನನ್ನು ಕರೆಯುತ್ತಿದ್ದ ಅಪ್ಪ ತಾಯ್ತನದ ಅಂತಃಕರಣ ತುಂಬಿ ಸಲಹಿದರು. ನಾಟಕ ಕಂಪೆನಿಗಳಲ್ಲಿ ಅದರಲ್ಲೂ ರಂಗಸಂಗೀತದಲ್ಲಿ ಅಪ್ಪನಿಗೆ ಭಾಳ ದೊಡ್ಡ ಹೆಸರಿತ್ತು. ಕಂದ, ವೃತ್ತಪದ್ಯಗಳಿಗೆ ರಾಗಸಂಯೋಜನೆ ಮಾಡುವಲ್ಲಿ ಅಪ್ಪ ಎತ್ತಿದ ಕೈ’ - ಹೀಗೆ ತನ್ನ ತಂದೆ ಹಾನಗಲ್ ಬಾಬುರಾಯರ ವೃತ್ತಿರಂಗ ಪ್ರಭಾವಳಿ ಕುರಿತು ಎಂಬತ್ತೆರಡರ ಹಿರಿಯ ರಂಗನಟಿ ದಾವಣಗೆರೆಯ ಮನೂಬಾಯಿ ನಾಕೋಡ ಶತಮಾನದ ಸುಂದರ ರಂಗನೆನಪುಗಳನ್ನು ಹೂಪಕಳೆಗಳಂತೆ ಭಾವಕೋಶದಲ್ಲಿ ಜತನವಾಗಿಟ್ಟುಕೊಂಡಿದ್ದಾರೆ.

ನನ್ನ ತಾತ ಹಾನಗಲ್ ರಾಮಚಂದ್ರರಾಯರು ಕಿರಾಣಿ ಅಂಗಡಿ ವ್ಯಾಪಾರಿ. ಅಪ್ಪನಿಗೆ ಅಂಗಡಿಯಲ್ಲಿ ಕೂಡುವುದೆಂದರೆ ಸುತಾರಾಂ ಆಗುತ್ತಿರಲಿಲ್ಲ. ಅಪ್ಪನಿಗೆ ನಾಟಕಗಳ ಹುಚ್ಚು. ಆ ಹುಚ್ಚು ನಮಗೂ ಹಿಡಿಸಿದರು. ನನ್ನನ್ನು, ನನ್ನಕ್ಕ ತಾರಾಬಾಯಿಯನ್ನು ಎತ್ತಿನ ಗಾಡಿಯಲ್ಲಿ ಕೂಡಿಸಿಕೊಂಡು ಊರೂರು ನಾಟಕ ನೋಡಲು ಕರೆದುಕೊಂಡು ಹೋಗ್‍ತಿದ್ರು.  ನಾನು ಚಿಕ್ಕವಳಿದ್ದಾಗ ನಮ್ಮೂರಿಗೆ (ಹಾನಗಲ್) ಬಹಳಷ್ಟು ನಾಟಕ ಕಂಪೆನಿಗಳು ಬರ್ತಿದ್ವು.

ನಾವು ಒಂದಿನವೂ ಬಿಡದಂತೆ ನಾಟಕ ನೋಡ್ತಿದ್ವಿ. ಆಗ ಕಂಪೆನಿ ನಾಟಕಗಳ ಸೊಗಡು-ಸೊಗಸು ಬಹಳೇ ಖುಷಿಕೊಡ್ತಿತ್ತು.  ಕವಡೆಲೋಬಾನದ ಘಮ ಘಮ, ನಾಂದೀಪದದ ಸಮೂಹಗಾನ, ಪೂಜಾನೃತ್ಯ – ಹೀಗೆ ಅಪ್ಪಟ ವೃತ್ತಿನಾಟಕಗಳನ್ನು ತೋರಿಸಿದ, ಕಲಿಸಿದ ಕೀರ್ತಿ ಅಪ್ಪನದು. ನಮ್ಮಕ್ಕನಿಗೆ ಹಾಡುಗಳೆಂದರೆ, ನನಗೆ ಡಾನ್ಸ್ ಅಂದರೆ ಪಂಚಪ್ರಾಣ.

ವಾರಕ್ಕೊಮ್ಮೆ ಹುಬ್ಬಳ್ಳಿಗೆ ಕರ್ಕೊಂಡು ಹೋಗಿ ಗಿರ್ಮಿಟ್ಟು ಕೊಡಿಸಿ, ಹಿಂದಿ ಸಿನಿಮಾ ತೋರಿಸಿ, ನಾವು ನೋಡಿ ಬಂದ ಆ ಸಿನಿಮಾಹಾಡು ಅಕ್ಕ ಹಾಡಬೇಕು, ನಾನು ಡಾನ್ಸ್ ಮಾಡಬೇಕು. ಮನೆಯಲ್ಲೇ ಅಪ್ಪನಿಂದ ರಂಗತಾಲೀಮು. ಮಧುಬಾಲಾ, ಗುರುದತ್, ರಾಜ್‌ಕಪೂರ್ – ಹೀಗೆ ಎಲ್ಲ ಸಿನಿತಾರೆಗಳ ಕುರಿತು ವಿವರವಾಗಿ ಹೇಳ್ತಿದ್ರು. ಮುಂಬೈಗೆ ಹೋಗಿ ಬೀಳಗಿಯ ಅಮೀರಬಾಯಿ-ಗೋಹರಬಾಯಿ ಅಕ್ಕತಂಗಿಯವರು ಭಾಳ ಫೇಮಸ್ ಆಗಿದ್ದು ನೀವೂ ಹಾಗೇ ಆಗ್ಬೇಕು ಎಂದು ಅವರ ಹಾಡುಗಾರಿಕೆ, ಸಿನಿಮಾ, ರಂಗನಾಟಕಗಳ ಬಗ್ಗೆ ಬೋಧಿಸುತ್ತಿದ್ದರು ಅಪ್ಪ.

ಯಾವುದೇ ನಾಟಕ-ಸಂಗೀತಶಾಲೆಯಲ್ಲೂ ಕಲಿಸಲಾಗದ ಅಭಿನಯ-ರಂಗಸಂಗೀತವನ್ನು ಅಪ್ಪ ಮನೆಯಲ್ಲೇ ಹೇಳಿಕೊಟ್ಟರು, ಅಪ್ಪ ನಾಕೈದು ನಾಟಕಗಳನ್ನು ಬರೆದಿದ್ದರು.  ಅವುಗಳಲ್ಲಿ ‘ಚಲನಪ್ರಪಂಚ’, ‘ಮದುವೆಹುಚ್ಚು’ ದಾಖಲೆ ಮಾಡಿದ್ದವು. ಚಲನಪ್ರಪಂಚದಲ್ಲಿ ‘ದಲಾಲಿ ದೌಲತ್’ ಪಾತ್ರದಲ್ಲಿ ಅಪ್ಪ ಅದ್ಭುತವಾಗಿ ನಟಿಸ್ತಿದ್ರು.  ನನ್ನಣ್ಣ ಕೇಶವ ಪುಟ್ಟ ಪಾತ್ರ ಮಾಡ್ತಿದ್ದ, ಈ ನಾಟಕಗಳು ಗರುಡರ ಕಂಪೆನಿಯಲ್ಲಿ ಪ್ರಯೋಗ ಕಂಡಿದ್ದವು.

ಹಾರ್ಮೋನಿಯಂ ನುಡಿಸುವುದರಲ್ಲಿ ಅಪ್ಪನಿಗೆ ಸರಿಸಾಟಿ ಯಾರೂ ಇರ್ಲಿಲ್ಲ.  ನನಗೆ ಹಾರ್ಮೋನಿಯಂ ನುಡಿಸುವುದನ್ನು ಕಲಿಸಿದರು.  ಸಿನಿಮಾಹಾಡು–ರಂಗಗೀತೆಗಳಿಗೂ ಇರುವ ಫರಕುಗಳನ್ನು ಹಾಡಿ ತೋರಿಸಿಕೊಡ್ತಿದ್ರು. ಅಕ್ಕ ಒಂದು ಸಂಗೀತಕಛೇರಿ ನಡೆಸುವಷ್ಟು ಶಾಸ್ತ್ರೀಯ ಸಂಗೀತ ಕಲಿತಳು.

ಕೆಲಕಾಲ ಶಿರಸಿಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದಳು, ಅದಕ್ಕೆಲ್ಲ ಅಪ್ಪನೇಗುರು. ಒಮ್ಮೆ ಗಂಗಾವತಿ ಕ್ಯಾಂಪಿನಲ್ಲಿ (ಕುಡುಗೋಲು ಜೆಟ್ಟಪ್ಪನವರ ನಾಟಕ ಕಂಪೆನಿ) ನಾಟಕ ನಡೆಯುತ್ತಿದ್ದಾಗ ಅಪ್ಪ ನನ್ನ ನೃತ್ಯಕ್ಕೆ ಸವಾಲಿನಂತೆ ಅರ್ಧತಾಸು ಜುಗಲ್‍ಬಂದಿಯಾಗಿ ಹಾರ್ಮೋನಿಯಂ ನುಡಿಸಿದ್ದರು.  ಹಿಂದೂಸ್ತಾನಿ ಸಂಗೀತದಲ್ಲಿ ಅಪ್ಪನಿಗೆ ಅಪಾರ ಶ್ರಮವಿತ್ತು, ಅವರಲ್ಲಿ ಸ್ವರ-ಶ್ರುತಿ-ರಾಗ–ಭಾವಶುದ್ಧಿಗಳಿದ್ದವು. 

ಅಮರಫಲ್, ಘೋಡೆಸವಾರದಂತಹ ನಾಟಕಗಳಲ್ಲಿ ಅಗ್‍ದಿ ಸಣ್ಣ ವಯಸ್ಸಿನಲ್ಲೇ ನಾಯಕಿಯಾಗಿ ಅಭಿನಯಿಸಬೇಕೆಂದರೆ ಸಾಧಾರಣ ಮಾತಲ್ಲ, ಅದಕ್ಕೆಲ್ಲ ಅಪ್ಪನ ಪ್ರೋತ್ಸಾಹ, ಗುರುವಾಗಿ ತೋರಿದ ದಾರಿಯೇ ದೊಡ್ಡಕಾರಣ. ವಾಮನರಾಯ ಮಾಸ್ತರ ಕಂಪೆನಿ, ಅರ್ಜುನಸಾಕಂಪೆನಿ, ಗರುಡರಕಂಪೆನಿ, ಹಲಗೇರಿ ಕುಡುಗೋಲು ಜೆಟ್ಟ್ಟೆಪ್ಪ ಕಂಪೆನಿ ಇಂತಹ ಅನೇಕ ಹೆಸರಾಂತ ನಾಟಕ ಕಂಪೆನಿಗಳಲ್ಲಿ ಅಪ್ಪನ ಸಂಗೀತದ ಮೆರಗಿಗೆ ಮರುಳಾಗದವರೇ ಇರ್ಲಿಲ್ಲ.  ಬಾಲ್ಯದಲ್ಲೇ ಅದೆಲ್ಲ ನಮ್ಮ ರಂಗ ಬದುಕಿಗೆ ದಟ್ಟಪ್ರಭಾವ ಬೀರಿ ನಾನು, ನನ್ನಕ್ಕ ಸಿಂಗಿಂಗ್ ಸ್ಟಾರ್‌ಗಳಾದೆವು.

ರಾಜಾಹರಿಶ್ಚಂದ್ರದ ತಾರಾಮತಿ, ಲಂಕಾದಹನದ ಸೀತೆ, ಬಾಣಸಿಗಭೀಮದ ದ್ರೌಪದಿ, ಘೋಡೆಸವಾರದ ದೇವರಾಣಿ, ಕಿತ್ತೂರು ಚೆನ್ನಮ್ಮ, ಹೇಮರೆಡ್ಡಿಮಲ್ಲಮ್ಮ, ಚಿತ್ರಾಂಗದ, ಮಹಾಸತಿ ಅನಸೂಯ - ಹೀಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಹಾಡುನಟಿಯಾಗಿ, ಖಳನಾಯಕಿಯಾಗಿ, ವಿನೋದವಾರಿಧಿಯಾಗಿ ಅರವತ್ತಕ್ಕೂ ಹೆಚ್ಚು ವರುಷಗಳ ಕಾಲ ಪರಿಪೂರ್ಣ ಅಭಿನೇತ್ರಿಯಾಗಿ ಜನರು ನನ್ನನ್ನು ಗುರುತಿಸಿದ್ದಾರೆ.

ಅದಕ್ಕೆಲ್ಲ ಅಪ್ಪನೇ ಕಾರಣ. ನನಗೆ ಸಂಘ–ಸಂಸ್ಥೆಗಳು ಗೌರವಿಸಿ ನೀಡಿದ ಸನ್ಮಾನ ಪತ್ರಗಳಿಗಿಂತ ಅಪ್ಪ ಮತ್ತು ಪ್ರೇಕ್ಷಕರು ನೀಡುತ್ತಿದ್ದ ಚಪ್ಪಾಳೆಗಳು ಮುಖ್ಯ.  ಹರಿಶ್ಚಂದ್ರ ನಾಟಕದಲ್ಲಿನ ನನ್ನ ಅಭಿನಯ ಮೆಚ್ಚಿ ಒಬ್ಬ ಪ್ರೇಕ್ಷಕ ವಜ್ರದುಂಗುರವನ್ನೇ ಉಡುಗೊರೆಯಾಗಿ ನೀಡಲು ಸ್ಟೇಜ್‌ಗೆ ಬಂದಾಗ ನನ್ನ ಗಂಡನೆನಿಸಿದ ಮಹಾಶಯ ಸಹಿಸಲಿಲ್ಲ.

ಆಗ ನಾಟಕಗಳು ರಾತ್ರಿ ಹನ್ನೊಂದು ಗಂಟೆಗೆ ಶುರುವಾಗಿ ರಾತ್ರಿ 2-3 ಗಂಟೆಗೆ ಬಿಡುತ್ತಿದ್ದವು.  ಅಪ್ಪ ಒಂದು ಕೈಯಲ್ಲಿ ನನ್ನನ್ನು ಇನ್ನೊಂದು ಕೈಯಲ್ಲಿ ನನ್ನಕ್ಕಳನ್ನು ಹಿಡಕೊಂಡು ಮನೆಗೆ ಜೋಪಾನವಾಗಿ ಕರ್ಕೊಂಡು ಬರುತ್ತಿದ್ರು. ಪಾತ್ರ ಮಾಡಿ ದಣಿದಿದ್ದ ನಮಗೆ ಅಷ್ಟೊತ್ತಿನಲ್ಲಿ ಬಿಸಿಬಿಸಿ ಅಡುಗೆ ಮಾಡಿ ಬಡಿಸ್ತಿದ್ರು.  ವಾರಕ್ಕೊಮ್ಮೆ ರುಚಿಕಟ್ಟಾಗಿ ಚಿಕನ್ ಮಾಡ್ತಿದ್ರು.

ನನ್ನ ರಂಗಕನಸು ಈಡೇರಿದೆ.  ನನ್ನ ಹಿರಿಯ ಮಗಳು ಕಲ್ಪನಾ ಉತ್ತಮ ಗಾಯಕಿ ಆಗಿದ್ದಾಳೆ.  ಕಿರಿಯ ಮಗಳು ಭಾರತಿ ಅಭಿನಯ ಚತುರೆ ಆಗಿದ್ದಾಳೆ.  ಇಂತಹ ಕನಸುಗಳನ್ನು ನನ್ನಪ್ಪ, ನನ್ನಲ್ಲಿ ಮತ್ತು ನನ್ನ ಅಕ್ಕನಲ್ಲಿ ಕಂಡಿದ್ದರು. ನಾನು ಅದನ್ನು ಮಕ್ಕಳಲ್ಲಿ ಸಾಕ್ಷಾತ್ಕಾರ ಮಾಡಿಕೊಂಡೆ. ಅಪ್ಪನ ಮಾತುಗಳು ಬರೀ ಮಾತುಗಳಾಗಿರಲಿಲ್ಲ, ನಾಳಿನ ಬದುಕಿನ ಕಾರ್ಣೀಕಸತ್ಯಗಳಾಗಿದ್ದವು. ಯಾವಾಗಲೂ ಸಂತಸದ ರಿವಾಜುಗಳು ಸರಳವಾಗಿರುವುದಿಲ್ಲ.

ಮನದೊಳಗಿನ ಪ್ರೀತಿಯ ಗಾಳಿಯು ಅದಕ್ಕೆ ಉತ್ತರ ಮತ್ತು ಅಂತಃಕರಣದ ಮುಖಾಬಿಲೆ ಎಂಬುದಕ್ಕೆ ಐವತ್ತರ ದಶಕದ ಅನೇಕ ಹಿಂದಿ ಸಿನಿಮಾಗಳನ್ನು ಆದರ್ಶವಾಗಿಟ್ಟುಕೊಂಡ ಜೀವನಪಾಠದ ಬೋಧನೆ ಅಪ್ಪನದು.  ಜೀವನದಲ್ಲಿ ಸಮಸ್ಯೆಗಳು ತೂಫಾನದಂತೆ ಬರ್ತವೆ, ಆದರೆ ಕಣ್ಣುಗಳಲ್ಲಿ ಸಮುದ್ರ ಬಾರದಂತೆ ನಡಕೊಂಡ್ರೆ ಬದುಕು ಸರಳ-ಸುಗಮ ಆಗ್ತದೆ.

ಹಸುಗೂಸಿರುವಾಗ ನನಗೆ ಅಮ್ಮನ ಕೊರತೆ ನೀಗಲು ತಾಯಿ-ತಂದೆ-ಬಂಧು ಎಲ್ಲ ಅಪ್ಪನೇ ಆಗಿದ್ದರು.  ಆತನದು ಅಪ್ಪಟ ಭಾವಪ್ರಪಂಚ. ನಾವು ರಂಗಭೂಮಿಯ ಗಂಧರ್ವರು ಅಳುವುದಕ್ಕಿಂತ ಅರಳುವುದನ್ನು ಕಲಿಯಬೇಕು. ನಾಟಕದಲ್ಲಿ ನಾವು ಪಡೆಯುವದಕ್ಕಿಂತ ನಮ್ಮ ಪಾಲಿಗೆ ಕಳೆದುಕೊಳ್ಳುವುದೇ ಜಾಸ್ತಿ.  ಇದು ನನ್ನ ಅನುಭವಕ್ಕೂ ಬಂತು. 

ಆಯ್ಕೆ ಹಾಗೂ ವಯಸ್ಸಿನ ಅಂತರಕ್ಕಾಗಿ ಪ್ರೇಮವಿವಾಹ ಬೇಡೆಂದು ನನ್ನ ಮದುವೆ ವಿಷಯದಲ್ಲಿ ಅಪ್ಪನಿಗೆ ತಕರಾರುಗಳಿದ್ದವು. ‘ನಿನ್ನ ಮಡಿಲಲ್ಲೇ ಪ್ರಾಣ ಬಿಡುವೆ…ನನ್ನ ಪ್ರೇಮಪುತ್ಥಳಿ….. ಅನುರಾಗಸಿಂಧು…’ ಮುಂತಾಗಿ ನಾಯಕನಟನ ಮಾತುಗಳಂತೆ ಮರಳು ಮಾಡುವ ಕಂಪೆನಿ ಮಾಲೀಕರೇ ವಿಲನ್‌ಗಳಾಗುತ್ತಾರೆಂಬುದು ನನ್ನ ಬದುಕಿನಲ್ಲಿ ಸಾಬೀತುಗೊಳ್ಳುವಷ್ಟರಲ್ಲಿ ಅಪ್ಪನನ್ನು ಕಳಕೊಂಡಿದ್ದೆ. ಇದು ನನ್ನ ಮಕ್ಕಳ ಬದುಕಿನಲ್ಲಿ ಪುನರಾವರ್ತನೆ ಆಗಬಾರದೆಂದು ಸಾಕಷ್ಟು ಎಚ್ಚರವಹಿಸಿದೆನಾದರೂ ಅದು ಸಾಧ್ಯವಾಗಲಿಲ್ಲ. ನಮ್ಮ ವೃತ್ತಿರಂಗ ನಟಿಯರು ಶಾಪಗ್ರಸ್ತರೆಂಬುದನ್ನು ಅಪ್ಪ ಆಗಾಗ ಹೇಳುತ್ತಿದ್ದ, ಸುಂದರ ರಂಗನಾಯಕಿಯರ ದುರಂತಕಥೆಗಳನ್ನು ನಾನು ಮೆಲುಕಾಡುತ್ತೇನೆ. ಹೀಗೆ ಮನೂಬಾಯಿ ದಾವಣಗೆರೆ ಶಹರದ ಎಲ್ಲಮ್ಮನಗರದಲ್ಲಿ ಶತಮಾನದ ವೃತ್ತಿರಂಗ ನೆನಪುಗಳನ್ನು ಕಾಪಿಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT