ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಹಕ್ಕು ಗುರುತಿಸಿ

Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಆರೋಗ್ಯ ಅತಿ ಮುಖ್ಯವಾದ ಮಾನವ ಹಕ್ಕುಗಳಲ್ಲಿ ಒಂದು ಎಂಬುದನ್ನು ವಿಶ್ವಸಂಸ್ಥೆ 1948ರಲ್ಲೇ ಘೋಷಿಸಿತ್ತು. ಯಾವುದೇ ದೇಶದ ಪ್ರಜೆಗೆ ಸಿಗಬೇಕಾದ ಮೂಲಭೂತ ಮಾನವ ಹಕ್ಕುಗಳಲ್ಲಿ ಆರೋಗ್ಯ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂಬುದನ್ನು ಅಂತರರಾಷ್ಟ್ರೀಯ ಸಾರ್ವಜನಿಕ ಸೇವಾ ಸಂಸ್ಥೆಗಳು ಪದೇಪದೇ ನಿರೂಪಿಸಿವೆ. ಆದರೆ, ನಮ್ಮ ದೇಶದ ಸಂವಿಧಾನವು ಆರೋಗ್ಯವನ್ನು ಮಾನವ ಹಕ್ಕು ಎಂದು ಗುರುತಿಸದಿರುವುದು ದೊಡ್ಡ ವಿಪರ್ಯಾಸ. 
 
ರಾಷ್ಟ್ರೀಯ ಆರೋಗ್ಯ ನೀತಿಯ ಅಂಕಿ ಅಂಶಗಳೇ ಹೇಳುವಂತೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಖಾಸಗಿ ಆರೋಗ್ಯ ಜಾಲವು ಶೇಕಡ 80ರಷ್ಟು ಹೊರರೋಗಿಗಳಿಗೆ ಮತ್ತು ಶೇಕಡ 60ರಷ್ಟು ಒಳರೋಗಿಗಳಿಗೆ ಸೇವೆ ನೀಡುತ್ತಿದೆ. ಇದರರ್ಥ ಸರ್ಕಾರದ ಆರೋಗ್ಯ ವ್ಯವಸ್ಥೆ ಶೇಕಡ 20ಕ್ಕಿಂತ ಕಡಿಮೆ ವ್ಯಾಪ್ತಿಯಲ್ಲಿ ತನ್ನ ಸೇವೆಗಳನ್ನು ಜನರಿಗೆ ಕೊಡುತ್ತಿದೆ. ಸರ್ಕಾರ ಮೇಲುಗೈ ಸಾಧಿಸಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿಯನ್ನು ಸೃಷ್ಟಿಸಿಯಾಗಿದೆ.
 
ಸರ್ಕಾರದ ಮತ್ತು ಖಾಸಗಿ ಆರೋಗ್ಯ ವಲಯಗಳ ಆಸ್ಪತ್ರೆಗಳಲ್ಲಿ ರೋಗಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ಸ್ವರೂಪ, ಪ್ರಮಾಣ ಮತ್ತು ಗುಣಮಟ್ಟ ಅತ್ಯಂತ ಶೋಚನೀಯವಾಗಿದೆ. ಗುಣಮಟ್ಟದ ಚಿಕಿತ್ಸೆ ತಕ್ಕಮಟ್ಟಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ದುಡ್ಡಿದ್ದವರಿಗೆ ಮಾತ್ರ ಅದು ಲಭ್ಯ. ಈ ಪರಿಸ್ಥಿತಿಗೆ ಹಲವು ಕಾರಣಗಳನ್ನು ವಿಶ್ಲೇಷಿಸಬಹುದು.
 
ಒಂದು, ಕೇಂದ್ರ ಸರ್ಕಾರ ಆರೋಗ್ಯದ ಆಯವ್ಯಯಕ್ಕೆ ಮೀಸಲಿಟ್ಟಿರುವ ಅತಿ ಕಡಿಮೆ ಆರ್ಥಿಕ ಸಹಾಯ. ಒಟ್ಟು ರಾಷ್ಟ್ರೀಯ ಉತ್ಪಾದನೆಯ ಶೇಕಡ 1.04ರಷ್ಟನ್ನು ಮಾತ್ರ ಆರೋಗ್ಯಕ್ಕಾಗಿ ಮೀಸಲಿಡಲಾಗಿದೆ. ಇದು ದೇಶದ ಆರೋಗ್ಯ ವೆಚ್ಚದ ಶೇಕಡ 30ಕ್ಕಿಂತ ಕಡಿಮೆಯಾಗಿದೆ.
 
ಎರಡನೆಯದು, ಆರೋಗ್ಯ ಸೇವೆಯಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ಮತ್ತು  ಅಂತಃಕರಣದ ಅಭಾವ. ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ರಕ್ತಗತವಾಗಿದೆ. ಕೈತುಂಬಾ ಸಂಬಳ ಸಿಗುತ್ತಿದ್ದರೂ, ಮಾತ್ರೆ ಚೀಟಿ ಬರೆದುಕೊಡಲು, ರೋಗಿಯನ್ನು ಮುಟ್ಟಿದರೂ ಲಂಚ ತೆಗೆದುಕೊಳ್ಳುವ ಮಟ್ಟಿಗೆ ಇದು ವ್ಯಾಪಿಸಿದೆ. 
 
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಗುರಿ ಯೋಜನೆಯ ಜಿಲ್ಲಾ ಮಟ್ಟದ ಬಜೆಟ್‌ನಲ್ಲಿ  ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರವಿದೆ. ವಿತರಣೆಯಾದ ಔಷಧಗಳು ರೋಗಿಗಳಿಗೆ ಉಚಿತವಾಗಿ ಸಿಗುವುದರಲ್ಲೂ ಸಿಬ್ಬಂದಿಯ ಮತ್ತು ಕಪ್ಪು ಮಾರುಕಟ್ಟೆ ಜಾಲದ ಹುನ್ನಾರವಿದೆ. ಹಲವು ಸಂದರ್ಭಗಳಲ್ಲಿ ಔಷಧಗಳು ರೋಗಿಗಳಿಗೆ ನ್ಯಾಯಯುತವಾಗಿ ವಿತರಣೆಯೂ ಆಗದೆ ಅವಧಿ ಮುಗಿದು ಹಾಳಾಗಿರುತ್ತವೆ.
 
ಕರ್ನಾಟಕ ಲೋಕಾಯುಕ್ತ ವರದಿ ಪ್ರಕಾರ, ಆರೋಗ್ಯದ ಬಜೆಟ್‌ನ ಸುಮಾರು ಶೇ 25ರಷ್ಟು ಭ್ರಷ್ಟಾಚಾರಕ್ಕೆ ಪೋಲಾಗುತ್ತಿದೆ. ಇದಲ್ಲದೆ, ಸ್ವಚ್ಛತೆ, ಸೋಂಕುರಹಿತ ಕ್ರಮಗಳ ಮಾನದಂಡಗಳಾವುವೂ ಸಮರ್ಪಕವಾಗಿ ಈಡೇರುತ್ತಿಲ್ಲದಿರುವುದು ಸರ್ಕಾರಿ ಆಸ್ಪತ್ರೆಗಳ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಇನ್ನೂ ಕೆಳಗಿಳಿಸಿವೆ. ಇದರಿಂದ ಇರುವ ರೋಗದ ಜೊತೆಗೆ ಇನ್ನಿತರ ರೋಗಗಳನ್ನೂ ಅಂಟಿಸಿಕೊಂಡು ಹೊರಬರುವ ಬಡ ರೋಗಿಗಳ ಪಾಡನ್ನು ಸರ್ಕಾರವೂ ಕೇಳುತ್ತಿಲ್ಲ. 
 
ಖಾಸಗಿ ಆರೋಗ್ಯ ವ್ಯವಸ್ಥೆಯ ಭ್ರಷ್ಟಾಚಾರದ ಸ್ವರೂಪ ವಿಭಿನ್ನಮತ್ತು ಅಪಾಯಕಾರಿಯಾದದ್ದು. ಆರೋಗ್ಯವನ್ನು ಖಾಸಗೀಕರಣಗೊಳಿಸಿ ಅದನ್ನು ಉದ್ಯಮವನ್ನಾಗಿಸಿರುವ ಸರ್ಕಾರದ ನೀತಿಗಳು, ರೋಗಿಗಳನ್ನು ಕೇವಲ ಗ್ರಾಹಕರನ್ನಾಗಿಸಿವೆ. ಖಾಸಗಿ ವಲಯದ ವ್ಯೆದ್ಯರು ಔಷಧ ಉದ್ಯಮಿಗಳ ಕಪಿಮುಷ್ಟಿಯಲ್ಲಿದ್ದಾರೆ. ವ್ಯೆದ್ಯರಿಗೆ ಸಿಗುವ ಕಮಿಷನ್, ಹೊರದೇಶಗಳಿಗೆ ಉಚಿತ ಪ್ರವಾಸ ಮುಂತಾದ ಅನಧಿಕೃತ ನಡವಳಿಕೆಗಳು ಈ ಕ್ಷೇತ್ರದಲ್ಲಿ ಅತಿ ಹೆಚ್ಚು. 
 
ಇದಲ್ಲದೆ ವ್ಯೆದ್ಯಕೀಯ ನಿರ್ಲಕ್ಷ್ಯದ ಕೇಸುಗಳು ವ್ಯಾಪಕವಾಗಿವೆ. ಅತ್ಯುನ್ನತ ವೈದ್ಯಕೀಯ ಸೌಲಭ್ಯಗಳಿವೆಯೆಂದು ತೋರಿಸಿಕೊಳ್ಳುವ ಖಾಸಗಿ ಆಸ್ಪತ್ರೆಗಳಲ್ಲೇ ಇವು ನಡೆಯುತ್ತಿವೆ. ಇತ್ತೀಚೆಗಷ್ಟೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ವ್ಯೆದ್ಯಕೀಯ ನಿರ್ಲಕ್ಷ್ಯಕ್ಕೆ ಒಳಗಾಗಿ ಮೃತಪಟ್ಟ ರೋಗಿಯ ಸಂಬಂಧಿಗಳಿಗೆ ವ್ಯೆದ್ಯರು ₹ 23.5 ಲಕ್ಷ ಪರಿಹಾರ ನೀಡಬೇಕೆಂದು ಗ್ರಾಹಕರ ವೇದಿಕೆ ತೀರ್ಪು ನೀಡಿದೆ.
 
ಈ ರೋಗಿಗೆ ಹೃದಯ ಸಂಬಂಧಿ ಅಪಾಯದ ಸೂಚನೆಗಳಿದ್ದರೂ, ಹೃದಯ ಸಂಬಂಧಿ ಕೇಸುಗಳನ್ನು ನಿಭಾಯಿಸುವ ವಿಭಾಗ ಆಸ್ಪತ್ರೆಯ ನಿರ್ದಿಷ್ಟ  ಘಟಕದಲ್ಲಿ ಇಲ್ಲದಿದ್ದರೂ ವೈದ್ಯರು ಬೆನ್ನುಹುರಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆಯಿಂದ ಉಂಟಾದ ಹೃದಯ ಸಂಬಂಧಿ ತೊಡಕನ್ನು ನಿಭಾಯಿಸಲಾಗದೆ ರೋಗಿ ಮೃತಪಟ್ಟಿದ್ದಾರೆ.
 
ಹಾಗೆಯೇ ಅಂಗಾಂಗ ಜೋಡಣೆಗೆ ಪರವಾನಗಿ ಇಲ್ಲದಿದ್ದರೂ ಇದೇ ಆಸ್ಪತ್ರೆಯು 2011ರಲ್ಲಿ ಒಬ್ಬ ರೋಗಿಯ ಪ್ರಾಣ ತೆಗೆದುಕೊಂಡಿತ್ತು. ಹಲವು ಆಸ್ಪತ್ರೆಗಳ ಕಿಡ್ನಿ ಹಗರಣಗಳಂತೂ ವರದಿಯಾಗುತ್ತಲೇ ಇರುತ್ತವೆ. ಬೆಳಕಿಗೆ ಬರುವ ಕೇಸುಗಳು ಕಡಿಮೆಯೆಂದೇ ಹೇಳಬೇಕಾಗುತ್ತದೆ. 
 
ಮೂರನೆಯದು, ತಜ್ಞ ವೈದ್ಯರ ಕೊರತೆ ನೀಗಿಸಲು ಅಣಬೆಗಳಂತೆ ತಲೆ ಎತ್ತಿರುವ ವೈದ್ಯಕೀಯ ಕಾಲೇಜುಗಳು ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಕೊಡುತ್ತಿಲ್ಲ. ವೈದ್ಯಕೀಯ ಕಾಲೇಜುಗಳ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವ ಮತ್ತು ಅಂಗೀಕರಿಸುವ ಭಾರತೀಯ ವೈದ್ಯಕೀಯ ಮಂಡಳಿಯ ಕಾರ್ಯ ನಿರ್ವಹಣೆಯಲ್ಲೂ ವ್ಯಾಪಕ ಭ್ರಷ್ಟಾಚಾರವಿದೆ. ಕಳಪೆ ಗುಣಮಟ್ಟದ ಕಾಲೇಜುಗಳಿಗೆ ಒಪ್ಪಿಗೆ ನೀಡಿರುವ ಹಲವು ಉದಾಹರಣೆಗಳಿವೆ. ಮಂಡಳಿಯ ಅಧ್ಯಕ್ಷರ ಮೇಲೆಯೇ ಭ್ರಷ್ಟಾಚಾರದ ಕೇಸುಗಳಾಗಿವೆ. 
 
ನಾಲ್ಕನೆಯದು, ವ್ಯೆದ್ಯಕೀಯ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟ ನಿಯಂತ್ರಿಸುವ ಯಾವುದೇ ನಿರ್ದಿಷ್ಟ ವ್ಯವಸ್ಥೆ ಇಲ್ಲದಿರುವುದು. ವೈದ್ಯಕೀಯ ಸೇವೆಯಲ್ಲಿನ ತಪ್ಪುಗಳಿಗೆ ದೂರು ನೀಡಲು ರೋಗಿಗಳಿಗೆ ಈಗಿರುವ ಏಕೈಕ ಮಾರ್ಗವೆಂದರೆ ಗ್ರಾಹಕರ ವೇದಿಕೆ. ಎಷ್ಟೋ ಸಂದರ್ಭಗಳಲ್ಲಿ ಕೇಸುಗಳು ಸಾಬೀತಾಗುವಲ್ಲಿ ಸೋಲುತ್ತವೆ. ಅದಲ್ಲದೆ, ಆರ್ಥಿಕ ಪರಿಹಾರ ಸೂಚಿಸಲು ವೇದಿಕೆ ಉಪಯೋಗಿಸುವ ಮಾನದಂಡವು ಅಪಘಾತದ ಕೇಸುಗಳಲ್ಲಿ ನಿರ್ಧರಿಸಲಾಗುವ ಮೋಟಾರು ವಾಹನ ಕಾಯ್ದೆಯ ವಿಧಾನ ಎಂಬುದು ವಿಪರ್ಯಾಸ.
 
ಆರೋಗ್ಯ ಸಂಸ್ಥೆಗಳ ಸಾಂಸ್ಥಿಕ ರೂಪದ ಯಾವುದೇ ಲೋಪದೋಷಗಳಿಗೆ ದೂರು ನೀಡಲು ಸಮರ್ಪಕ ಮಾರ್ಗಗಳಿಲ್ಲ. ಆಯಾ ಜಿಲ್ಲೆಯ ಆರೋಗ್ಯ ಕಮಿಷನರ್ ಅಥವಾ ಆರೋಗ್ಯ ಇಲಾಖೆಗೆ ದೂರು ನೀಡಲು ಸೂಕ್ತ ಅವಕಾಶಗಳಿಲ್ಲ. ರಾಜ್ಯದ ‘ಸಕಾಲ’ ಯೋಜನೆಯಲ್ಲೂ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ದೂರು ನೀಡುವ ಅವಕಾಶವಿಲ್ಲ.
 
ಖಾಸಗಿ ವೈದ್ಯಕೀಯ ನಿಯಂತ್ರಣ ಅಧಿನಿಯಮ 2007ರ ನಿಯಮಗಳನ್ನೂ ಜಿಲ್ಲಾಡಳಿತಗಳು ಸಮರ್ಪಕವಾಗಿ ನೋಡಿಕೊಳ್ಳುತ್ತಿಲ್ಲ. ನಿಯಮದ ಪ್ರಕಾರ, ಖಾಸಗಿ ಆಸ್ಪತ್ರೆಗಳು ತಾವು ಕೊಡುವ ಸೇವೆಗಳು, ಅದರ ದರಗಳ ವಿವರವನ್ನು ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರಕಟಿಸಬೇಕು. ಆದರೆ ಈ ನಿಯಮಗಳನ್ನು ಖಾಸಗಿ ಆಸ್ಪತ್ರೆಗಳು ಪಾಲಿಸುತ್ತಿಲ್ಲ. 
 
ಎಲ್ಲಾ ಪ್ರಕಾರದ ಖಾಸಗಿ ಆರೋಗ್ಯ ಸೇವಾ ಕೇಂದ್ರಗಳ ನೋಂದಣಿ ವ್ಯವಸ್ಥೆಯನ್ನು ಸರಿದಾರಿಗೆ ತರಲು 2010ರಲ್ಲಿ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ ತರಲಾಯಿತಾದರೂ, 2014ರ ವರದಿಯ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಸಾವಿರಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳು ಪರವಾನಗಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿವೆ.
 
ಆಸ್ಪತ್ರೆಗಳ ಸೇವೆ, ವೈದ್ಯಕೀಯ ಸೌಲಭ್ಯಗಳ ಗುಣಮಟ್ಟ ಪರಿಶೀಲಿಸಿ ಮಾನ್ಯತೆ ನೀಡುವ ಎನ್.ಎ.ಬಿ.ಎಚ್ ಸಂಸ್ಥೆಯ ಕಾರ್ಯವ್ಯಾಪ್ತಿ ಮಾನ್ಯತೆ ನೀಡುವ ಪ್ರಕ್ರಿಯೆಗಷ್ಟೇ ಸೀಮಿತವಾಗಿದೆ. ವೈದ್ಯಕೀಯ ಶಿಕ್ಷಣದ ಗುಣಮಟ್ಟ ಪರಿಶೀಲಿಸಿ ಕಾಲೇಜುಗಳಿಗೆ ಮಾನ್ಯತೆ ನೀಡುವ ‘ನ್ಯಾಕ್’ ಸಂಸ್ಥೆಗೂ ಇದೇ ಮಿತಿಯಿದೆ. ಸಮೀಕ್ಷೆಯ ನಂತರ ಸೇವೆಗಳು ಸಾರ್ವಜನಿಕರಿಗೆ ಯಾವ ಗುಣಮಟ್ಟದಲ್ಲಿ ವಿತರಣೆಯಾಗುತ್ತಿವೆ ಎಂದು ನಿರಂತರವಾಗಿ ಪರಿಶೀಲಿಸುವ ಯಾವ ಪ್ರಾಧಿಕಾರವೂ ಇಲ್ಲ. 
 
ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ಸದಸ್ಯರಿಗೆ ನೀಡುವ ವೃತ್ತಿಪರ ನೈತಿಕ ನಡವಳಿಕೆಗಳ ಮಾರ್ಗದರ್ಶಿ ಕೇವಲ ಪ್ರಕಟಣೆಗಷ್ಟೇ ಸೀಮಿತವಾಗಿದೆ. ವೈದ್ಯರ ವೃತ್ತಿಪರ ನಡವಳಿಕೆಗಳಿಗೆ ಮೇಲ್ವಿಚಾರಣೆಯ ವ್ಯವಸ್ಥೆಯಿಲ್ಲ. ವೈದ್ಯರ ಸ್ವಯಂಪ್ರೇರಿತ ನಿಯಂತ್ರಣವಷ್ಟೇ ಇದೆ. ತಜ್ಞ ವೈದ್ಯಕೀಯ ಕ್ಷೇತ್ರದ ನಿರಂತರ ಜ್ಞಾನಾರ್ಜನೆಗೆ ನಿರಂತರ ವೈದ್ಯಕೀಯ ಶಿಕ್ಷಣ (CME) ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತವಾದರೂ, ಸಮರ್ಪಕ ಮೇಲ್ವಿಚಾರಣೆ ಇಲ್ಲ. 
 
ನಮ್ಮಲ್ಲಿ ಈಗಿರುವ ಎಲ್ಲಾ ನಿಯಂತ್ರಣ ವ್ಯವಸ್ಥೆಗಳು ಆರೋಗ್ಯ ಸೇವೆಗಳಲ್ಲಿ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಸೋತಿವೆ. ಈ ವ್ಯವಸ್ಥೆಗಳು ಮಾರುಕಟ್ಟೆ ಆಧಾರಿತ ವಿಧಾನಗಳನ್ನು ಅನುಸರಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ. ರೋಗಿಯನ್ನು ಗ್ರಾಹಕನೆಂಬಂತೆ ನೋಡುವ ದೃಷ್ಟಿಕೋನವು ಮೂಲ ಕಾರಣ.
 
ವಿಶ್ವ ಆರೋಗ್ಯ ಸಂಸ್ಥೆಯು, ಆರೋಗ್ಯ ಸೇವೆಗಳಲ್ಲಿ ಸಾಮಾಜಿಕ ನ್ಯಾಯವನ್ನು ದೊರಕಿಸಲು ದೇಶದ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುವುದರಿಂದ ಮಾತ್ರ ಸಾಧ್ಯವೆಂಬುದನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ. ಹಲವು ರಾಷ್ಟ್ರಗಳ ಆರೋಗ್ಯ ವ್ಯವಸ್ಥೆಗಳ ವೈಜ್ಞಾನಿಕ ಅಧ್ಯಯನಗಳ ಮೂಲಕ ಇದು ಸಾಬೀತಾಗಿದೆ.
 
ಆರೋಗ್ಯ ವ್ಯವಸ್ಥೆಯನ್ನು ಗುಣಪಡಿಸಲು ಸಮರ್ಪಕ ನಿಯಂತ್ರಣ ವ್ಯವಸ್ಥೆ ಆರೋಗ್ಯ ಕ್ಷೇತ್ರದ ಎಲ್ಲಾ ಹಂತಗಳಲ್ಲಿ ಬೇಕಾಗಿದೆ. ವೈದ್ಯರ ಸ್ವಯಂಪ್ರೇರಿತ ನಿಯಂತ್ರಣದಿಂದ ಮೊದಲುಗೊಂಡು ವೈದ್ಯಕೀಯ ಶಿಕ್ಷಣ, ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಸೇವೆಗಳು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ಆರೋಗ್ಯ ಇಲಾಖೆಯ ಹಂತದವರೆಗೂ ನಿಯಂತ್ರಣದ ವ್ಯವಸ್ಥೆ ಬೇಕಾಗಿದೆ.
 
ಲೋಪದೋಷಗಳಿಗೆ ಕಟ್ಟುನಿಟ್ಟಾದ ಶಿಕ್ಷೆಯೂ ಇರಬೇಕು. ಇದಕ್ಕೆ ಸಮರ್ಪಕವಾದ ಕಾನೂನುಗಳ ಅವಶ್ಯಕತೆಯೂ ಇದೆ. ಶಾಸಕಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ಇದರಲ್ಲಿ ಮುತುವರ್ಜಿ ವಹಿಸಬೇಕಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಯು ಆರೋಗ್ಯವನ್ನು ಮಾನವ ಹಕ್ಕನ್ನಾಗಿ ಗುರುತಿಸುವ 
ಮಾರ್ಗದರ್ಶಿಯನ್ನು ಸರ್ಕಾರಕ್ಕೆ ಸೂಚಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.
 
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಮಸ್ಯೆಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆ ತರುವುದಾಗಿ ರಾಜ್ಯದ ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ, ಇರುವ ಸರ್ಕಾರಿ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು ಮತ್ತು ವಿಸ್ತರಿಸುವುದು ಸರ್ಕಾರದ ಗುರಿಯಾಗಿರಬೇಕು.  ಆರೋಗ್ಯ ಸೇವೆಗಳನ್ನು ವ್ಯಕ್ತಿಕೇಂದ್ರಿತ ವ್ಯವಸ್ಥೆಯಿಂದ ಸಮುದಾಯ ಕೇಂದ್ರಿತ ವ್ಯವಸ್ಥೆಯಾಗಿ ಪರಿವರ್ತಿಸುವ ಗುರುತರ ಜವಾಬ್ದಾರಿ ಸರ್ಕಾರಕ್ಕಿದೆ. ಏಕೆಂದರೆ ಆರೋಗ್ಯ ಜನರ ಹಕ್ಕು.
 
***
ಅಸಮರ್ಪಕ ವಾದ
ಸರ್ಕಾರಿ ಆಸ್ಪತ್ರೆಗಳ ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಖಾಸಗೀಕರಣದ ಅವಶ್ಯಕತೆ ಇದೆಯೆಂದು ಪ್ರತಿಪಾದಿಸುವ ಯಾವುದೇ ಸರ್ಕಾರ, ಇಂತಹ ಕ್ರಮ ಈಗಾಗಲೇ ವಿಫಲಗೊಂಡಿರುವ ಹಲವು ಉದಾಹರಣೆಗಳನ್ನು ನೋಡಬೇಕಾಗಿದೆ. ನಮ್ಮದೇ ರಾಜ್ಯದ ಉದಾಹರಣೆ ನೀಡುವುದಾದರೆ: ಒಪೆಕ್ ರಾಷ್ಟ್ರಗಳು ದಾನವಾಗಿ ನೀಡಿದ್ದ ಸುಮಾರು 73 ಎಕರೆ ವಿಸ್ತಾರದ ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸರ್ಕಾರ 2002ರಲ್ಲಿ ಅಪೋಲೊ ಆಸ್ಪತ್ರೆಗಳ ಸಂಸ್ಥೆಯ ಸುಪರ್ದಿಗೆ ಹತ್ತು ವರ್ಷಗಳ ಒಪ್ಪಂದದ ಮೇರೆಗೆ ವಹಿಸಿತು.
 
ಆದರೆ, 2012ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಖಾಸಗಿ ಸಂಸ್ಥೆಯ ಪಾಲುದಾರಿಕೆಯ ಆಡಳಿತದಲ್ಲಿ ಆಸ್ಪತ್ರೆಯ ಒಳರೋಗಿಗಳ ನೋಂದಣಿಯು ಶೇ 85ರಿಂದ ಶೇ 58ಕ್ಕೆ ಇಳಿಮುಖವಾಗಿತ್ತು. 
 
ಬಿಪಿಎಲ್ ಒಳರೋಗಿಗಳ ಸೇವೆ ಶೇ 94.7ರಿಂದ ಶೇ 21.4ರಷ್ಟು ಹೊರರೋಗಿಗಳ ಸೇವೆಯಲ್ಲಿ ಶೇ 92.8ರಿಂದ ಶೇ 7.5ರಷ್ಟು ಇಳಿಮುಖವಾಗಿದ್ದು ಕಂಡುಬಂದಿತು. ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ಸರ್ಕಾರಿ ಆಸ್ಪತ್ರೆ ಖಾಸಗೀಕರಣದ ಮುಖ್ಯ ಉದ್ದೇಶ ಎಂದು ವಾದಿಸುವ ರಾಜಕಾರಣಿಗಳು ವೈಜ್ಞಾನಿಕವಾಗಿ ಸಮೀಕ್ಷೆಗೊಳಪಟ್ಟ ಉದಾಹರಣೆಗಳನ್ನಾದರೂ ತಿಳಿಯಬೇಕು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT