ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತೀರದಲ್ಲೊಂದು ಸಾವಿನ ದೋಣಿ!

Last Updated 4 ನವೆಂಬರ್ 2016, 19:59 IST
ಅಕ್ಷರ ಗಾತ್ರ

ಕಾರವಾರ: ದಡದಲ್ಲಿ ಅನಾಥವಾಗಿ ಬಿದ್ದಿರುವ ಮೀನುಗಾರಿಕಾ ದೋಣಿಯೊಂದು ‘ಸಾವಿನ ದೋಣಿ’ ಎಂಬ ಅಪಕೀರ್ತಿಗೆ ಗುರಿಯಾಗಿದ್ದು, ದುರಂತದ ಸರಮಾಲೆಯನ್ನೇ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ‘ಈ ದೋಣಿ ಮುಟ್ಟಿದರೆ ಸಾವು ಖಚಿತ’ ಎಂಬ ಮಾತು ಅವರಲ್ಲಿ ಬಲವಾಗಿ ಬೇರೂರಿದ್ದು, ಅದರ ಹೆಸರೆತ್ತಿದರೆ ಮೀನುಗಾರರೆಲ್ಲ ಬೆಚ್ಚಿ ಬೀಳುತ್ತಾರೆ.

ಈ ದೋಣಿ ಇರುವುದು ಇಲ್ಲಿನ ಕೋಡಿಬಾಗ ಕಡಲತೀರದ ಸಮೀಪದಲ್ಲಿ. ಕಡಲಿನ ಅಲೆಗಳ ಆರ್ಭಟಕ್ಕೆ ಸಿಲುಕಿ ತೀರದ ಬಳಿ ಅನಾಥವಾಗಿ ಬಿದ್ದಿದೆ. ಇದರ ತಳಭಾಗ  ಸ್ವಲ್ಪ ಭಾಗ ಉಸುಕಿನಲ್ಲಿ ಹುದುಗಿ ಹೋಗಿದ್ದು, ಒಳಭಾಗದಲ್ಲಿ ನೀರು ತುಂಬಿಕೊಂಡಿದೆ. ದೋಣಿಗೆ ಕಟ್ಟಿದ ಎರಡು ಹಗ್ಗ ಪಕ್ಕದಲ್ಲೇ ಬಿದ್ದಿದ್ದು, ಬಿಸಿಲು–ಮಳೆಗೆ ಸಿಕ್ಕ ದೋಣಿ ಹಾಳಾಗುತ್ತಿದೆ. ಸ್ಥಳೀಯ ಮೀನುಗಾರರು ಇದನ್ನು ಬಳಸುವುದಿರಲಿ. ಅದನ್ನು ಸುರಕ್ಷಿತ ಸ್ಥಳಕ್ಕೆ ಎಳೆದು ತರುವ ಧೈರ್ಯ ಕೂಡ ಮಾಡುತ್ತಿಲ್ಲ.

ತಳಕು ಹಾಕಿಕೊಂಡಿರುವ ಕಥೆ:  ‘ಇದು ಹೊನ್ನಾವರದ ಮೀನುಗಾರರೊಬ್ಬರಿಗೆ ಸೇರಿದ ದೋಣಿ. ಅವರು ಮೀನು ಹಿಡಿಯಲು ಕಡಲಿಗೆ ತೆರಳಿದಾಗ ದುರ್ಮರಣಕ್ಕೀಡಾದರು. ಕೆಲ ದಿನಗಳ ನಂತರ ಅವರ ಮನೆಯವರು ದೋಣಿಯನ್ನು ಗೋವಾದ ಮೀನುಗಾರನೊಬ್ಬನಿಗೆ ಮಾರಾಟ ಮಾಡಿದರು. ಅಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮಗುಚಿ ನಾಲ್ವರು ಮೀನುಗಾರರು ಕೊನೆಯುಸಿರೆಳೆದರು. ನಂತರ ಇದನ್ನು ಕಾರವಾರ ತಾಲ್ಲೂಕು ಸುಂಕೇರಿಯ ರತ್ನಾಕರ್ ಜಾಧವ್ ಎಂಬುವವರು ಖರೀದಿಸಿದರು.

ಮೀನುಗಾರಿಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿ ದೋಣಿಯಲ್ಲಿದ್ದ ಮೀನುಗಾರ ಪ್ರಾಣ ಕಳೆದುಕೊಂಡ. ಇನ್ನು, ಇದನ್ನು ಮುಟ್ಟಿದ ಮೀನುಗಾರರೂ ಮೇಲಿಂದ ಮೇಲೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಇದರ ಹತ್ತಿರ ಸುಳಿಯಲು ಭಯಪಡುವಂತಾಗಿದೆ’ ಎಂದು ವಿವರಿಸುತ್ತಾರೆ ಸ್ಥಳೀಯ ಸುನಿಲ್.

‘ಈ ದೋಣಿಯಿಂದ ಆಗುತ್ತಿರುವ ದುರಂತಗಳ ಬಗ್ಗೆ ಮಾಲೀಕನ ಕುಟುಂಬದವರು ಜ್ಯೋತಿಷಿಗಳ ಬಳಿ ಕೇಳಿದರು. ದುರ್ಘಟನೆಗಳಿಗೆಲ್ಲ ಆತ್ಮದ ಕಾಟವೇ ಕಾರಣವಾಗಿದ್ದು, ದೋಣಿಯನ್ನು ಸಮುದ್ರದಲ್ಲಿ ಬಿಟ್ಟುಬಿಡುವಂತೆ ಅವರು ತಿಳಿಸಿದಾಗ,  ಅದರಂತೆ ಅರಬ್ಬಿ ಸಮುದ್ರದಲ್ಲಿ ಅದನ್ನು ತೇಲಿ ಬಿಡಲಾಯಿತು. ಹೀಗೆ ನೀರಿನಲ್ಲಿ ಒಂಟಿಯಾಗಿ ನಿಂತಿದ್ದ ದೋಣಿಯನ್ನು ಮೀನುಗಾರನೊಬ್ಬ ದಡಕ್ಕೆ ತಂದು ಲಂಗರು ಹಾಕಿದ. ಆದರೆ ಕೆಲವೇ ಕ್ಷಣಗಳಲ್ಲಿ ಆತನ ದೇಹದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡು ಕುಸಿದುಬಿದ್ದ.

ಸ್ಥಳೀಯರು ಆತನನ್ನು ಗೋವಾ ಆಸ್ಪತ್ರೆಗೆ ಸೇರಿಸಿದ್ದು, ಆತ ಇನ್ನೂ ಚೇತರಿಸಿಕೊಂಡಿಲ್ಲ. ಈ ದೋಣಿ ಇರುವ ದಡದಲ್ಲಿ ಇತರೆ ಮೀನುಗಾರರು ತಮ್ಮ ದೋಣಿಯನ್ನು ನಿಲ್ಲಿಸಲೂ ಹಿಂಜರಿಯುತ್ತಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಮೀನುಗಾರ ಪ್ರಕಾಶ ಅಂಬಿಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT