ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಹುಟ್ಟು

ಕಥೆ
Last Updated 5 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಜಗಕ್ಕೆ ಬೆಳಕು ಹರಿದಿದ್ದರೂ ದುರುಗಪ್ಪನಿಗೆ ಮಾತ್ರ ಬೆಳಕಾಗಿರಲಿಲ್ಲ. ತನ್ನ ತಾಯಿಯ ಪಕ್ಕದಲ್ಲಿ ಗಾಢನಿದ್ರೆಗೆ ಶರಣಾಗಿದ್ದ. ತಾಯಿ ಸರಸಮ್ಮ, ದುರುಗಪ್ಪ ಇಬ್ಬರೂ ಲೇಟಾಗಿ ಮಲಗಿದ್ದರಿಂದ ಬೆಳಕಾದದ್ದು ಅವರ ಅರಿವಿಗೆ ಬಂದಿರಲಿಲ್ಲ. ದುರುಗಪ್ಪನದು ಕುರಿಕಾಯುವ ಕಾಯಕ. ಹಿಂದಿನ ದಿನ ಜಡಿಮಳೆ ಬಂದಿತ್ತು. ಅದರಲ್ಲೇ ಕುರಿಗಳ ಹಿಂಡನ್ನು ಅಟ್ಟು ಮಾಡಿಕೊಂಡು, ಬಂದು ದೊಡ್ಡಿಗೆ ಸೇರಿಸುವಲ್ಲಿ ಹರಸಾಹಸ ಮಾಡಿದ್ದನು.

ಜಡಿಮಳೆಯಲ್ಲಿ ನೆನೆದು ಬಂದಿದ್ದರಿಂದ ಮೈನಡುಕ ಜಾಸ್ತಿಯಾಗಿ, ಚಳಿ–ಜ್ವರ ಬಂದಿತ್ತು. ಸರಸಮ್ಮ ಗಂಜಿ ಮಾಡಿ ಕುಡಿಸಿ, ಜೊತೆಗೆ ಕಷಾಯವನ್ನೂ ಮಾಡಿ ಕುಡಿಸುವಷ್ಟರಲ್ಲಿ ಮಧ್ಯೆರಾತ್ರಿ ಮೀರಿತ್ತು. ದುರುಗಪ್ಪ ಇನ್ನೂ ಮಲಗಿದ್ದ. ಸರಸಮ್ಮ ಬಂದು ಅವನ ಹಣೆಯ ಮೇಲೆ ಕೈಯಿಟ್ಟು ನೇವರಿಸಿದಳು. ಜ್ವರ ಕಡಿಮೆಯಾಗಿತ್ತು. ಕಷಾಯ ಕೆಲಸ ಮಾಡಿತ್ತು. ನಿರುಮ್ಮಳಾಗಿ ಅವನನ್ನೇ ನೋಡುತ್ತಾ ಕುಳಿತಳು. ಅಮ್ಮ ಪಕ್ಕದಲ್ಲಿ ಕುಳಿತದ್ದನ್ನು ನೋಡಿ ಆಗ ದುರುಗಪ್ಪ ಪಿಳಿಪಿಳಿ ಕಣ್ಣುಬಿಟ್ಟ. ಸರಸಮ್ಮ ಮಗನ ದೇಹವನ್ನು ಸ್ಪರ್ಶಿಸಿದಳು. ಅವನ ದೇಹ ಸೊರಗಿ ಕೃಶವಾಗಿದೆ. ಬಡವಾಗಿರುವ ಮಗನನ್ನು ನೋಡುತ್ತಿದ್ದಂತೆ ಕಣ್ಣಿಂದ ಕಣ್ಣೀರು ಉದುರಿದವು.

ಸರಸಮ್ಮಳಿಗೆ ದುರುಗನದೇ ಚಿಂತೆ. ಮಗ ನಾಕಕ್ಷರ ಕಲಿತು, ದೊಡ್ಡ ಆಫೀಸರಾಗಿ, ದೊಡ್ಡ ಮನುಷ್ಯನಾಗೋ ಕನಸು ಕಂಡಿದ್ದಳು. ಐದು ವರ್ಷದ ಹಿಂದೆ ದುರುಗಪ್ಪ ತಪ್ಪದೇ ಇಸ್ಕೂಲಿಗೆ ಹೋಗಿ ಬರುತ್ತಿದ್ದ, ಇಸ್ಕೂಲ್‌ ಇದ್ದಿದ್ದು ಊರಿಗೆ ಎರಡು ಮೈಲಿ ದೂರದಲ್ಲಿ. ದಿನಾಲೂ ನಡೆದುಕೊಂಡೇ ಹೋಗಿಬರುತ್ತಿದ್ದನು. ಅವನ ಜೊತೆ ಕ್ವಾಮಟಿಗರ ರತ್ನಯ್ಯಶೆಟ್ಟಿಯ ಮಗ ಹರೀಶ್‌, ನಾಯ್ಕರ ಬುಡ್ಡೀರಾ, ಕರಿಯ, ಚಲುವ – ಎಲ್ಲರೂ ಒಟ್ಟಿಗೆ ಸ್ಕೂಲಿಗೆ ಹೋಗಿಬರುತ್ತಿದ್ದರು.

ಸ್ಕೂಲಿನಲ್ಲಿ ಆಟ–ಪಾಠದಲ್ಲಿ ಇವನೇ ಮುಂದೆ ಇರುತ್ತಿದ್ದ. ಆಗಾಗ ಕ್ವಾಮಟಿಗರ ಹರೀಶ್‌, ನಾಯ್ಕರ ಕರಿಯ  ಇವನನ್ನು ಕೆಣಕುತ್ತಿದ್ದರಂತೆ. ಓದಿನಲ್ಲಿ ಅವರು ದಡ್ಡಶಿಖಾಮಣಿಗಳಂತೆ, ಯಾವಾಗಲೂ ಗದ್ದಲ–ಗಲಾಟೆ ಮಾಡುವುದು, ಹುಡುಗಿಯರನ್ನ ಚುಡಾಯಿಸುವುದು... ಮಾಸ್ತರರಿಗೆ ಅಂಜದೆ, ಇವರ ಉಪಟಳ ಜಾಸ್ತಿಯಾಗಿತ್ತು.

ಕೊನೆಗೆ ಸ್ಕೂಲ್‌ಮಾಸ್ತರ್‌ ಅವರ ನಡತೆಯ ಬಗ್ಗೆ, ಅವರ ತಂದೆ ತಾಯಿಗಳಿಗೂ ವರದಿ ಮಾಡಿದ್ದರು. ಅದರಿಂದ ಪ್ರಯೋಜನವಾಗದೆ, ಒಂದು ದಿನ ಹರೀಶ್‌, ಬುಡ್ಡೀರಾ, ಕರಿಯರನ್ನ ತರಗತಿಯ ಹೊರಗಡೆ ಒಂಟಿಕಾಲಲ್ಲಿ ನಿಲ್ಲಿಸಿದ್ದರು. ದಡ್ಡರಿಗೆ, ತುಂಟರಿಗೆ, ಕೊಡಬಹುದಾದ ಕನಿಷ್ಟ ಶಿಕ್ಷೆಯನ್ನ ಮಾಸ್ಟರ್‌ ವಿಧಿಸಿದ್ದರು. ದುರುಗಪ್ಪ ಬುದ್ಧಿವಂತ.

ತುಂಬಾ ಶ್ರದ್ಧೆಯಿಂದ ಕಲಿಯುತ್ತಿದ್ದ. ಯಾರ ತಂಟೆಗೂ ಹೋಗುವವನಲ್ಲ. ಅಂದಿನ ಪಾಠವನ್ನ ಅಂದೇ ಓದಿ ಮುಗಿಸಿ, ಮಾಸ್ಟರ್‌ ಕೇಳುವ ಪ್ರಶ್ನೆಗಳಿಗೆ ಸರಾಗವಾಗಿ ತಪ್ಪಿಲ್ಲದೆ ಉತ್ತರಿಸುವ ಜಾಣ ಹುಡುಗ. ಮಾಸ್ತರರಿಗೆ ಇವನೆಂದರೆ ಅಚ್ಚು ಮೆಚ್ಚಿನ ಹುಡುಗನಾಗಿದ್ದ. ದುರುಗಪ್ಪನ ಕುರಿತ ಮೇಷ್ಟ್ರುಗಳ ಆಸ್ಥೆ–ಮೆಚ್ಚಿನ ಮಾತುಗಳು ಹರೀಶ್‌–ಕರಿಯನಿಗೆ ಅಸನೀಯವಾಗಿ ವಿಲಿವಿಲಿ ಒದ್ದಾಡತೊಡಗಿದರು. ‘ಇವನಿದ್ರೆ ನಮ್ಗೆ ತೊಂದ್ರೆ ತಪ್ಪಿದ್ದಲ್ಲ. ಇವ್ನಿಗೆ ಲಾತ ಕೊಡಬೇಕು. ಇಲ್ದಿದ್ರೆ ನಮ್ಗೆ ಉಳಿಗಾಲವಿಲ್ಲ’ ಎಂದು ಸಂಚು ಹೂಡಿದರು.

ಸ್ಕೂಲಿಗೆ ಹೋಗುವ ದಾರಿಯಲ್ಲಿ ಹೊಂಗೆಯ ತೋಪು ಸಿಗುವುದು. ಅದು ನಿರ್ಜನ ಪ್ರದೇಶ. ಆ ಸಮಯವನ್ನೇ ಕಾಯುತ್ತಿದ್ದ ಹರೀಶ್‌, ದುರುಗಪ್ಪನನ್ನು ಕೆಣಕಿದ. ‘ಏನ್ಲಾ, ನಿಂದು ಜಾಸ್ತಿಯಾಯ್ತು. ಆ ಮೇಷ್ಟ್ರು ಯಾವಾಗ್ಲೂ ನಿನ್ನನ್ನೇ ಮೆರೆಸ್ತಾರೆ. ಬಾರಿ ದೊಡ್ಮನುಷ್ಯ ಕಣೋ ನೀನು’ ಅಂದನು. ‘ನಂದೇನ್‌ ಜಾಸ್ತಿಯಲ್ಲ, ನನ್‌ ಪಾಡ್ಗೆ ನಾನ್‌ ಇದ್ದೇನೆ ಅಷ್ಟೇ’ ಎಂದ ದುರುಗಪ್ಪ.

‘ಬಾಯಿಗೆ ಬಂದಂಗೆ ಮಾತನಾಡಿದ್ರೆ ಚೆನ್ನಾಗಿರಲ್ಲ’ – ದುರುಗ ಪ್ರತಿಭಟಿಸಿದ. ‘ಏನ್ಲಾ ಮಾಡ್ತೀಯಾ... ನನ್ಮಗನೇ...’ ಎಂದ ಹರೀಶ್. ‘ಜಾತಿ ಹಿಡ್ದು ಹೀಯಾಳ್ಸಿದ್ರೆ... ಏನಾಗುತ್ತೆ ಗೊತ್ತಾ?’ – ಚಲುವ ಮಧ್ಯೆ ಪ್ರವೇಶಿಸಿ ದುರುಗಪ್ಪನ ಪರವಾಗಿ ಮಾತನಾಡಿದನು. ‘ಇವನೊಬ್ಬ ಬೇರೆ... ಬಾಯ್‌ ಮುಚ್ಚಲೇ...’ ಎಂದು ದುರುಗಪ್ಪನನ್ನು ಸಿಟ್ಟಿನಿಂದ ಹರೀಶ್‌ ಬೈಯುತ್ತಾ, ಜೋರಾಗಿ ತಳ್ಳಿದನು. ‘ಅಮ್ಮಾ...’ ಎಂದು ಕಿರುಚುತ್ತಾ ನೆಲಕ್ಕೆ ರಭಸವಾಗಿ ಬಿದ್ದನು. ಅವನ ಮೊಣಕೈ ಕಲ್ಲಿಗೆ ತಾಕಿ ತರಚಿತಲ್ಲದೆ, ರಕ್ತ ಜಿನುಗಿತು. ಮೊಣಕಾಲು ಚಿಪ್ಪಿಗೂ ಏಟು ಬಿದ್ದು ಒದ್ದಾಡಿದನು. ಅದನ್ನು ನೋಡಿದ ಹರೀಶ್‌ ಅಲ್ಲಿಂದ ಪೇರಿಕಿತ್ತ. ಕರಿಯ ಕಣ್ಣು ಬಾಯಿ ಬಿಡುತ್ತ ಭಯದಿಂದ ನಡುಗುತ್ತಾ ನಿಂತ.

ಚಲುವ ಬಂದು ದುರುಗಪ್ಪನನ್ನು ಮೇಲೆತ್ತಿ, ಜಿನುಗುತ್ತಿದ್ದ ರಕ್ತ ಒರೆಸುತ್ತಾ ಸಂತೈಸಿದನು. ಚಲುವನಿಗೆ ಏನೂ ತೋಚದೆ, ಸ್ಕೂಲಿಗೆ ಹೋಗಲೋ ಬೇಡವೋ ಎಂದು ದ್ವಂದ್ವಕ್ಕೆ ಬಿದ್ದನು. ‘ಏನ್ಲಾ ದುರುಗ ಸ್ಕೂಲ್ಗೋಗೋಣವೇ’ ಎಂದಾಗ ಮೂಗಿನಿಂದ ಸುರಿಯುತ್ತಿದ್ದ ಸಿಂಬಳ ಒರೆಸಿಕೊಳ್ಳುತ್ತಾ – ‘ನಡಿಯೋ ಮನೆಗೆ ಹೋಗೋಣ... ನನ್ಗೆ ಸಾನೆ ನೋವಾಗಿದೆ’ ಎಂದಾಗ, ವಿಧಿಯಿಲ್ಲದೆ ಚಲುವ ಅವನನ್ನು ಮನೆಗೆ ಕರೆದುಕೊಂಡು ಹೊರಟನು. ಅವರು ಅತ್ತ ಕಡೆ ಹೋದ ನಂತರ, ಇಂದು ಸ್ಕೂಲಿಗೆ ಹೋದ್ರೆ ನಮ್ಗೆ ಗ್ರಹಚಾರ ತಪ್ಪಿದ್ದಲ್ಲ ಎಂದು ಬಗೆದು ಹರೀಶ್‌ ಮತ್ತು ಕರಿಯ ಅಲ್ಲಿಂದ ಮಾಯಾವಾದರು.

ದುರುಗಪ್ಪನನ್ನು ಮನೆಗೆ ಕರೆದುಕೊಂಡು ಬಂದ ಚಲುವ, ಅವನ ತಾಯಿಗೆ ಈ ಸ್ಥಿತಿಗೆ ಬಂದಿರುವುದನ್ನ ತಿಳಿಸಿದನು. ಅವಳು ಮಗನನ್ನು ಅಪ್ಪಿಕೊಂಡು ಅಳಲು ಪ್ರಾರಂಭಿಸಿದಳು. ಹೆತ್ತಕರುಳು ವಿಲಿವಿಲಿ ಒದ್ದಾಡಿತು. ಯಾವ ಯಾವುದೋ ಸೊಪ್ಪನ್ನ ತಂದು ಎರಡು ಕೈಯಿಂದ ಚೆನ್ನಾಗಿ ಹಿಂಡಿ, ರಸವನ್ನು ಗಾಯದ ಮೇಲೆ ಸುರಿದಳು. ಆ ರಸ ಹಾಕಿದ ತಕ್ಷಣ ‘ಅವ್ವಾ’ ಅಂತಾ ಚೀರಾಡಿದನು.

ರಾತ್ರಿಯೆಲ್ಲಾ ಚಳಿಜ್ವರ ಬಂದು ನರಳಿದ. ಸರಸಮ್ಮ ಮಗನ ಅರೈಕೆಯಲ್ಲಿ ನಿದ್ದೆ ಮರೆತಳು. ಅಷ್ಟರಲ್ಲಿ ಅವಳ ಗಂಡ ಶಂಕ್ರಪ್ಪ ಬಂದನು. ನಡೆದಿದ್ದನ್ನೆಲ್ಲಾ ಹೇಳಿದಳು. ‘ಇಸ್ಕೂಲ್ಗೋಗಿ ಆ ಮೇಷ್ಟ್ರಿಗೆ ವಸಿ ಕೇಳ್ಬಾ, ನಮ್ಮುಡ್ಗ ಯಾವ ತಪ್ಪು ಮಾಡಿದ್ದಾಂತ ಈ ರೀತಿ ಶಿಕ್ಷೆ ಕೊಟ್ಟಿದ್ದಾರೆ. ಆ ಹರೀಶ ಈ ಪಾಟಿ ಗಾಯ ಆಗೋವಂಗೆ ಒಡ್ದಿದ್ದಾನಲ್ಲಾ, ಅವ್ನು ಕೈಸೇದೋಗ’ ಎಂದು ಸಂಕಟದಿಂದ ಹೇಳಿ, ಸೀರೆ ಸೆರಗಿನಿಂದ ಕಣ್ಣೀರು ಒರೆಸಿಕೊಂಡಳು.

‘ಆಯ್ತು, ಹೆಡ್‌ಮೇಷ್ಟ್ರೀಗೆ ಕೇಳ್ತೀನಿ, ನೀ ಸುಮ್ಕಿರು, ಸಂಕ್ಟಪಡ್ಬೇಡಾ?’ ಎಂದು ಸಂತೈಸಿದನು. ‘ವಸಿ ತರಾಟ್ಗೇ ತಕ್ಕೋ... ನಾವುಗಳ್‌ ಅಂದ್ರೆ ಅದೇನ್‌ ಸದ್ರ ಇವ್ರಿಗೆ, ಜಾತಿ ಬೇರೆ ಎತ್ತಾಡ್ತಾರೆ, ನಮ್ಗೂನು ಕಾನೂನು ಗೊತ್ತೈತಿ ಅಂತ ಹೇಳ್ಬಾ’ ಎಂದು ಸಿಡುಕಿನಿಂದಲೇ ಹೇಳಿದಳು.

ಬೆಳಗ್ಗೆ ದುರುಗ ಎದ್ದಾಗ ಅವನ ಮೈ–ಕೈ ನೋವು ಕಡಿಮೆಯಾಗಿತ್ತು. ಮುಖ ತೊಳೆದುಕೊಂಡು ಸ್ಕೂಲಿನ ಬ್ಯಾಗ್‌ ಹೆಗಲ ಮೇಲೆ ಹಾಕಿಕೊಂಡು ಸಿದ್ಧನಾದ ಮಗನನ್ನು ಶಂಕರಪ್ಪ ಹೆಡ್‌ಮಾಸ್ಟರ್ ಹತ್ತಿರ ಕರೆದುಕೊಂಡು ಬಂದನು. ಇವರು ಬಂದಿದ್ದು ನೋಡಿದ ಹೆಡ್‌ಮಾಸ್ಟರ್‌ಗೆ ಕೆಡುಕೆನಿಸಿತು. ಮುಂದೇನೋ ಅನಾಹುತ ಕಾದಿದೆಯೆಂದು ಕಪ್ಪಿಟ್ಟಿತು ಅವರ ಮುಖ.

‘ನನ್ಮಗನ್ನ ನೋಡಿ. ಏನ್‌ ತಪ್ಪು ಮಾಡಿದಾನಂತ ಗಾಯ ಆಗೊಂಗೆ ಹೊಡೆದಿದ್ದಾನಲ್ಲಾ... ಅವನೇನು ಮನುಷ್ಯನಾ? ಇವತ್ತು ಅವನ್ನ ಸುಮ್ಗೆ ಬಿಡಾಕಿಲ್ಲ’ ಏರುಧ್ವನಿಯಲ್ಲಿ ಕೇಳಿದ ಶಂಕರಪ್ಪ.

‘ಏನ್‌ ನಡೆಯಿತೋ ದುರುಗಣ್ಣ’ ಹೆಡ್‌ಮಾಸ್ಟರ್ ಪ್ರಶ್ನಿಸಿದರು.
‘ನಿನ್‌ ಕಂಡ್ರೆ ಮೇಷ್ಟ್ರೀಗೆಲ್ಲಾ ಇಷ್ಟ, ನೀನಿದ್ರೆ ತಾನೆ, ನಿನ್‌ ಇಷ್ಟ ಪಡೋದು ಅಂತ ಅಂದ್ರು’.
‘ಯಾರ್‌ ಅಂದಿದ್ದು’
‘ಹರೀಶ, ಕರಿಯಾ...’
‘ಇನ್ನೇನು ಹೇಳಿದ್ರು...?’
‘ಜಾತಿ ಹೆಸರು ಹೇಳಿ ಹೀಯಾಳಿಸಿದ್ರು’.
‘ನೋಡಿ ನೋಡಿ... ಹಿಂಗೆ ಜಾತಿಪಾತಿ ಹಿಡ್ದು ಹೀಯಾಳ್ಸಿದ್ರೆ ಏನಾಗುತ್ತೆ ಗೊತ್ತಾ’ ಗುಡುಗಿದ ಶಂಕ್ರಪ್ಪ.

ಹೆಡ್‌ಮಾಸ್ಟರ್‌ಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿತು. ಹುಡುಗರು ಮಾಡಿಕೊಳ್ಳುವ ಹುಡುಗಾಟಿಕೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಪರಿಜ್ಞಾನವಿಲ್ಲ, ಜೊತೆಗೆ ಜಾತಿ ನಿಂದನೆ ಬೇರೆ. ಆ ಕ್ವಾಮಿಟಿಗರ ರತ್ನಮ್ಮ ಶೆಟ್ಟಿ ಪ್ರಭಾವ ವ್ಯಕ್ತಿ, ಅವನ ಮಗ ಮಾಡಿರುವ ಅಪರಾಧ ಅಂತಿಥದ್ದಲ್ಲ. ಇವರೇನಾದರೂ ಪೊಲೀಸ್‌ ಕಂಪ್ಲೇಂಟ್‌ ಕೊಟ್ಟರೆ ಮುಗಿಯಿತು, ಮುಂದೆ ಅದು ಯಾವ ಹಂತಕ್ಕೆ ಹೋಗುವುದೆಂಬುದನ್ನು ಹೇಳಲಿಕ್ಕೆ ಬರುವುದಿಲ್ಲ.

ದುರುಗಪ್ಪ ಹಿಂದುಳಿದ ಜಾತಿಯ ಹುಡುಗನಾದರೂ ಒಳ್ಳೆಯ ನಡವಳಿಕೆಯ ಹುಡುಗ, ಚೆನ್ನಾಗಿ ಕಷ್ಟಪಟ್ಟು ಓದುತ್ತಾನೆ, ಜೀವನದಲ್ಲಿ ಮುಂದೆ ಸಾಧಿಸಬೇಕೆಂಬ ಛಲವಿದೆ. ಅವನಿಗೆ ಎಲ್ಲಾ ಮೇಷ್ಟ್ರು ಅನುಕಂಪವಿದೆ. ಒಂದು ಕಡೆ ಪ್ರಬಲರ ದಬ್ಬಾಳಿಕೆ, ಇನ್ನೊಂದು ಕಡೆ ದುರ್ಬಲರ ಅಸಹಾಯಕತೆ. ಈ ಪರಿಸ್ಥಿತಿಯ ಆಳವನ್ನು ಅರಿತು ಅದನ್ನ ತಿಳಿಗೊಳಿಸಲು ಹೆಡ್‌ಮಾಸ್ಟರ್‌ ಮುಂದಾದರು.

‘ನೋಡಿ ಶಂಕರಪ್ಪನೋರೆ, ಹುಡುಗುಡುಗ್ರು ಸೇರ್‍ಕೊಂಡು ಅನಾಹುತ ಮಾಡ್ಕೊಂಡಿದ್ದಾರೆ. ಅದು ತಪ್ಪೇ... ಆ ಹುಡುಗನ್ನ ವಿಚಾರಿಸಿ ಅವ್ನಿಗೆ ಶಿಕ್ಷೆ ಕೊಡ್ಸುತೀನಿ, ನೀವ್‌ ಮನ್ಗೋಗಿ ಆಯ್ತಾ...’ ಎಂದರು. ‘ಅದೆಂಗಾಯ್ತದೆ ಸಾಮಿ... ಜಾತಿ ಹಿಡ್ದು ಅವ್‌ಮಾನ ಮಾಡಿದ್ರೆ ಎಂಗೇಳಿ? ನಮ್ಗೂನೂ ಮಾನ ಮರ್ಯಾದೆ ಇದೆ. ನಾವೂನು ಮನುಷ್ಯರೇ?’ ಎಂದು ಶಂಕ್ರಪ್ಪ ಕೋಪದಿಂದ ಉತ್ತರಿಸಿದ.

‘ಹಾಗಲ್ಲ ಶಂಕ್ರಣ್ಣ... ಬಾ ಇಲ್ಲಿ ಕೂತ್ಕೊಳ್ಳಿ’ ಎಂದು ಎದ್ದು ಕುರ್ಚಿಯನ್ನು ತೋರಿಸಿದರು. ‘ಶಂಕ್ರಪ್ಪನೋರೆ, ನನ್‌ ಮಾತು ಕೇಳಿ. ಅವರ್‍ನ ಕರ್‍ಸಿ, ವಿಚಾರಣೆ ಮಾಡಿ ಶಿಕ್ಷೆ ಕೊಡ್ತೀನಿ, ನನ್‌ ನಂಬಿ’ ಎಂದಾಗ ಶಂಕ್ರಪ್ಪ ಮೆತ್ತಗಾದನು. ‘ಮೇಷ್ಟ್ರು ಒಳ್ಳೆಯವರಂತೆ ಕಾಣ್ತಾರೆ, ಅವ್ರ ಮಾತನ್ನ ನಂಬೋಣ’ ಅಂತ ಮನಸ್ಸು ನುಡಿದಾಗ ಚೇರಿನಿಂದ ಎದ್ದನು, ದುರುಗಪ್ಪ ಕ್ಲಾಸಿಗೆ ಬಂದನು.

ಹೆಡ್‌ಮಾಸ್ಟರ್‌ ಹರೀಶ ಮತ್ತು ಕರಿಯನ್ನ ತಮ್ಮ ಕೊಠಡಿಗೆ ಕರೆಸಿದರು. ಶಾಂತ ರೀತಿಯಲ್ಲಿ ವಿಚಾರಣೆ ನಡೆಸಿದರು. ಮಾಡಿರುವ ತಪ್ಪನ್ನ ಒಬ್ಬರ ಮೇಲೆ ಒಬ್ಬರು ಹೇಳಿದರು.ಅವರ ಹೇಳಿಕೆಯನ್ನ ಗಮನಿಸಿದ ಹೆಡ್‌ಮಾಸ್ಟರ್‌ ಅವರಿಗೆ ಘಟನೆ ನಡೆದಿರುವುದು ಮನವರಿಕೆಯಾಯ್ತು. ಇದರಲ್ಲಿ ಇಬ್ಬರೂ ಭಾಗಿಯಾಗಿರುವ ಸತ್ಯಸಂಗತಿ ಅರಿವಿಗೆ ಬಂದಾಗ – ‘ಇಬ್ರಿಗೂ ಟೀಸಿ ಕೊಟ್ಟು ಕಳುಸ್ತೀನಿ ಎಚ್ಚರಿಕೆ.

ನೀವ್‌ ಬಂದಿರೋದು ಓದೋಕೋ ಇಲ್ಲಾ ಚೇಷ್ಟೆ ಮಾಡೋಕೊ... ನಿಮ್ಮಪ್ಪಂದಿರನ್ನ ನಾಳೆ ಕರೆದುಕೊಂಡು ಬನ್ನಿ’ ಎಂದು ಗದರಿಸಿದರು. ಅಷ್ಟಕ್ಕೇ ಅವರು ನಿಕ್ಕರ್‌ನಲ್ಲಿ ಒಂದಾ ಮಾಡಿಕೊಂಡರು. ಕ್ಲಾಸಿಗೆ ಬಂದಾಗ ‘ಇದೆಲ್ಲಾ ದುರುಗನದೇ ಇಕ್ಮತ್‌’ ಎಂದು ದುರುಗನನ್ನು ಕೆಕ್ಕರುಗಣ್ಣಿನಿಂದ ನೋಡುತ್ತಾ ಕುಳಿತರು.

ರತ್ನಯ್ಯಶೆಟ್ಟಿ ಅವರನ್ನ ಶಾಲೆಗೆ ಕರೆಸಿ, ಅವರ ಮಗನಿಂದಾದ ಅನಾಹುತ, ಶಾಲೆಯಲ್ಲಿ ಅವನ ನಡತೆಯ ಬಗ್ಗೆ ಹೆಡ್‌ಮಾಸ್ಟರ್‌ ಹೇಳಿದರಲ್ಲದೆ, ಅವನನ್ನು ತಿದ್ದಿ ಸರಿದಾರಿಗೆ ತರುವಂತೆ ಎಚ್ಚರಿಕೆ ನೀಡಿದರು. ಇದರಿಂದ ಕುಪಿತನಾದ ರತ್ನಯ್ಯಶೆಟ್ಟಿ, ಹೆಡ್‌ಮಾಸ್ಟರ್‌ ಮಾತನ್ನೇ ಗಣನೆಗೆ ತೆಗೆದುಕೊಳ್ಳದೆ ಮಗನ ಪರವಾಗಿ ವಾದಿಸಿದರು. ಆಗ, ‘ನೀವ್‌ ಊರಿಗೆ ದೊಡ್ಡ ಮನುಷ್ಯರು. ಮಗನ್ಗೆ ಬುದ್ಧಿ ಹೇಳಿ, ತಿದ್ದೋದು ಬಿಟ್ಟು ಹೀಗೆ ಮೊಂಡುವಾದ ಮಾಡಿದ್ರೆ ಹೇಗೆ?’ ಎಂದು ಸಿಟ್ಟಿನಿಂದಲೇ ಹೆಡ್‌ಮಾಸ್ಟರ್‌ ಹೇಳಿದರು.

‘ನನ್ಮಗ ನಿಮ್ಗಿಂತಾ ನನ್ಗೆ ಚೆನ್ನಾಗಿ ಗೊತ್ತು, ನನ್‌ಮಗನ ಬಗ್ಗೆ ನೀವೇನ್‌ ಹೇಳ್ಬೇಡಿ’ ‘ಹಾಗಲ್ಲ ಸಾರ್‌, ಇದು.... ಇದು... ತುಂಬಾ ಸೂಕ್ಷ್ಮವಾದ ವಿಷಯ’ ಎಂದು ಅವರ ಮನಮುಟ್ಟುವಂತೆ ನಡೆದ ಪ್ರಸಂಗವನ್ನು ಹೆಡ್‌ಮಾಸ್ಟರ್‌ ವಿವರಿಸಿದರು. ಆಗ ಅವರು ತಣ್ಣಗಾಗಿ – ‘ಹೀಗೋ ವಿಷ್ಯ... ಅದೇನೋ ಕ್ರಮ ತೆಗೆದುಕೊಳ್ತಿರೋ ತೆಗೆದುಕೊಳ್ಳಿ’ ಎಂದು ಹೇಳಿ ಹೊರಹೊರಟರು.

ದುರುಗ ಕ್ಲಾಸಿಗೆ ಬಂದಾಗ ಯಾರೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಬದಲಾಗಿ ಕೊಂಕು ಮಾತನಾಡುವುದು, ಅವನು ಬಂದರೆ ದೂರ ಸರಿಯುವುದು, ಅವನನ್ನು ಅಲಕ್ಷಿಸುವುದು ನಡೆಯುತ್ತಿತ್ತು. ಇದರಿಂದ ದುರುಗ ಅವಮಾನಿತನಾಗಿ, ಒಂಟಿಯಾಗಿ ಇರುವ  ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಕೆಡುಕೆನಿಸಿತು. ‘ಏನೂ ತಪ್ಪು ಮಾಡದ ನನ್ಗೆ ಈ ರೀತಿಯ ಬಹಿಷ್ಕಾರವೇ!’ ಎಂದು ಮನನೊಂದಿತು.

ಇಂದು ದುರುಗ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದ. ಸರಸಮ್ಮಳಿಗೆ ಗಾಬರಿಯಾಯ್ತು. ‘ಯಾಕೋ ಮಗ ಇಸ್ಕೂಲಿಗೆ ಹೋಗೋಲ್ವೆ’ ಎಂದು ಕೇಳಿದಳು.‘ಹೋಗಮ್ಮ... ಇನ್ಮುಂದೆ ನಾನು ಸ್ಕೂಲಿಗೆ ಹೋಗಲ್ಲ. ದನವೋ, ಕುರಿನೋ ಕಾಯ್ದುಕೊಂಡು ಮನೇಲಿ ಇರ್‍ತೀನಿ’ ಎಂದನು. ‘ಹಂಗಂದ್ರೆ ಹೆಂಗಪ್ಪ? ಇರೋನು ಒಬ್ಬ ಮಗ. ನಾಕಕ್ಷರ ಕಲಿಯದ್ಬುಟ್ಟು ಹೋಗಲ್ಲ ಅಂತೀಯಲ್ಲಪ್ಪ’ ಎಂದು ಕೇಳಿದಳು.

‘ನೀನು ಹೋಗು ಅಂತಾ ಹಟ ಮಾಡಿದ್ರೆ ಕೆರೆನೋ... ಬಾವಿನೋ ನೋಡ್ಕಂತೀನಿ’ ಅಂದನು. ‘ವಂಶಕ್ಕೆ ಇರೋನು ನೀನೊಂದೇ ಕುಡಿ, ಓದಿ ದೊಡ್ಡವನಾಗ್ಲಿ ಅನ್ನೊ ಕನ್ಸು ನಂದು. ಅದ್ಕೆ ಕಲ್ಲು ಹಾಕ್ಬೇಡಪ್ಪಾ’ ಎಂದು ತಾಯಿ ಅಂಗಲಾಚಿದಳು. ‘ನನ್ನಿಂದ ಸಾಧ್ಯವಿಲ್ಲ...’  ಎಂದು ದುರುಗ ಕಡ್ಡಿಮುರಿದಂತೆ ಹೇಳಿದನು. ‘ಅಯ್ಯೊ ಶಿವನೇ, ನಾಕಕ್ಷರ ಕಲಿಯದ್ಬುಟ್ಟು ಹೋಗಲ್ಲ ಅಂತೀಯಲ್ಲ’ ಎಂದು ಕಣ್ಣು ಬಾಯಿ ಬಿಟ್ಟಳು.

ಎರಡು ಮೂರು ದಿನ ಕಳೆಯಿತು. ವಾರೊಪ್ಪತ್ತು ಕಳೆದರೂ ದುರುಗ ಸ್ಕೂಲಿಗೆ ಹೋಗುವ ಲಕ್ಷಣಗಳು ಕಾಣಲಿಲ್ಲ. ಆಗ ಶಂಕ್ರಪ್ಪನೇ – ‘ಅವ್ನು ಇಸ್ಕೂಲಿಗೆ ಹೋಗಲ್ಲಂತಿದ್ದಾನೆ. ಇರೋ ಒಬ್ಬ ಮಗ ಕಣ್ಮುಂದೆ ಇರ್‍ಲಿ ಬಿಡು’ ಎಂದು ಹೆಂಡತಿಗೆ ಸಮಾಧಾನ ಹೇಳಿದ.

ತಾಯಿ ಕರುಳು ಕೇಳಬೇಕೆ... ನನ್ಮಗ ನಾಕಕ್ಷರ ಕಲಿಯಲಿಲ್ಲವಲ್ಲ ಅನ್ನೊ ಸಂಕ್ಟ ಬೇರೆ. ನಾಲ್ಕು ಹೊತ್ತು ಅದೇ ಚಿಂತೆಯಲ್ಲಿ ದಿನಗಳು ಉರುಳಿದವು. ಬೇರೆ ದಾರಿ ತೋರದೆ ದುರುಗನಿಗೆ ಕುರಿಕಾಯಲು ಸರ್ಕಾರದ ಸಾಲದ ಹಣವನ್ನು ತೆಗೆದುಕೊಂಡು ಕುರಿ ಮೇಯಿಸಲು ಹಾಕಿದರು.

ದುರುಗನಿಗೆ ದನ–ಕರುಗಳೆಂದರೆ ಪ್ರಾಣ. ದಿನಾಲೂ ಎದ್ದು ರೊಪ್ಪದಿಂದ ಕುರಿಗಳನ್ನು ಎಬ್ಬಿಸಿ ರೊಪ್ಪದ ಮುಂದಿನ ತಡಿಕೆ ಬೇಲಿಯೊಳಗೆ ಕೂಡುವುದು, ಅಲ್ಲಿ ಕುರಿಗಳು ಪಿಚಕೆ ಹಾಕಿದರೆ ಅವುಗಳ ಗಂಜಲವನ್ನು ಒಂದು ಕಡೆ ಹರಿದುಬಂದು ಸಂಗ್ರಹವಾಗುವಂತೆ ಮಾಡಿದ್ದನು. ಉಂಡು ಕಾಲಿಗೆ ಚಪ್ಪಲಿ ಹಾಕಿಕೊಂಡು ಹೊರಟನೆಂದರೆ, ಮತ್ತೆ ಸೂರ್ಯ ಪಶ್ಚಿಮದಲ್ಲಿ ಮುಳುಗುವ ಹೊತ್ತಿನಲ್ಲಿ ಮನೆಗೆ ಬರುವನು.

ಅದೊಂದು ದಿನ ಕುರಿಗಳನ್ನು ಮೇಯಲು ಬಿಟ್ಟು ಮರದಡಿಯಲ್ಲಿ ಮಲಗಿದ್ದನು. ಆ ಸಮಯದಲ್ಲಿ ಕುರಿಗಳು ಬಯಲಿನಲ್ಲಿ ಮೇಯಲು ಅನತಿ ದೂರದಲ್ಲಿರುವ ಹೊಲಕ್ಕೆ ಹೋಗಿದ್ದವು. ಆ ಹೊಲದ ಯಜಮಾನ ಬಂದು ಕುರಿಗಳನ್ನು ಹೊಲದಿಂದ ಆಚೆ ಅಟ್ಟಿ, ಕೂಗು ಹಾಕಿದನು. ಯಾರ ಸುಳಿವೂ ಸಿಗದಾಗ ಸುತ್ತಲೂ ಕಣ್ಣಾಯಿಸಿದ ಅವನಿಗೆ ದೂರದಲ್ಲಿ ಮರದಡಿಯಲ್ಲಿ ದುರುಗ ಮಲಗಿದ್ದು ಕಾಣಿಸಿತು.

ಅವನನ್ನು ಎಬ್ಬಿಸಿದಾಗ, ಗಾಬರಿಯಿಂದಲೇ ಮೇಲೆದ್ದು ಎದುರು ನಿಂತ ವ್ಯಕ್ತಿಯನ್ನು ದುರುಗ ನೋಡಿದ. ಕುರಿಗಳು ಹೊಲದ ಬದಿಯಲ್ಲೇ ಮೇಯುತ್ತಿರುವುದನ್ನು ಗಮನಿಸಿ ಆ ಕಡೆ ಹೊರಟ. ಅವನನ್ನು ತಡೆದ ಹೊಲದ ಯಜಮಾನ – ‘ಕುರಿಗಳನ್ನ ಹೊಲದಲ್ಲಿ ಮೇಯಲು ಬಿಟ್ಟು ಇಲ್ಲಿ ಮಲಗಿದ್ದೀಯಾ...’ ಎಂದು ಸಿಟ್ಟಿನಿಂದ ಅವವಿಗೆ ಬಾರಿಸಿದ. ತಬ್ಬಿಬ್ಬಾಗಿ ಏಟನ್ನ ತಪ್ಪಿಸಿಕೊಳ್ಳುತ್ತಾ ‘ಇನ್ಮುಂದೆ ನಿಮ್ಮ ಹೊಲಕ್ಕೆ ಹೋಗ್ದಂಗೆ ನೋಡ್ಕಂತನಿ’ ಎಂದು ಬಿರಬಿರನೆ ಅಲ್ಲಿಂದ ಹೊರಟನು.

ದಿನಾಲೂ ಕಾಡುಮೇಡು ಅಲೆದು, ಹಳ್ಳಕೊಳ್ಳಗಳಲ್ಲಿ ನೀರು ಕುಡಿದು, ಮಳೆ ಬಿಸಿಲಿಗೆ ಮೈಯೊಡ್ಡಿ ಕಲ್ಲುಮುಳ್ಳಿನ ಮೇಲೆ ನಡೆದು ದಿನಗಳನ್ನು ಸವೆಸುತ್ತಿದ್ದನು. ಕಾಯಿಲೆ ಕಸಾಲೆ ಬಂದರೂ ಧೃತಿಗೆಡದೆ, ಕುರಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾಯಕವನ್ನು ತಪ್ಪದೇ ಮಾಡುತ್ತಿದ್ದನು.ಅವುಗಳಿಗೆ ಕಾಯಿಲೆ ಬಂದರೆ, ಗಿಡಮೂಲಿಕೆಯಿಂದಲೇ ಔಷಧಿ ತಯಾರಿಸಿ ಕೊಡುವುದನ್ನು ಕಲಿತಿದ್ದನು. ಕಾಯಿಲೆಬಿದ್ದ   ಕುರಿಯನ್ನು ನೋಡಿದರೆ ಸಾಕು. ಅದಕೆ ಯಾವ ಕಾಯಿಲೆ ಬಂದಿದೆ ಎಂದು ತಕ್ಷಣ ಹೇಳುವ ಛಾತಿಯನ್ನು ಪಡೆದಿದ್ದನು.

ಬೇಸಿಗೆ ಬಂತೆಂದರೆ ಸಾಕು, ಕುರಿಗಳನ್ನು ಹೊಡೆದುಕೊಂಡು ವಲಸೆ ಹೋಗುತ್ತಿದ್ದನು. ಮತ್ತೆ ಹಿಂದಿರುಗಿ ಬರುತ್ತಿದ್ದುದು ಮಳೆ ಪ್ರಾರಂಭವಾದ ಮೇಲೆಯೇ. ಅಂದರೆ 3–4 ತಿಂಗಳು ಊರು ಬಿಡುತ್ತಿದ್ದ. ಒಂದು ಕಡೆ ನೆಲೆ ನಿಲ್ಲದೆ, ಯಾವೂರೆಂದರೆ ಆ ಊರಿನಲ್ಲೇ ಉಳಿಯುತ್ತಿದ್ದ. ಉಳಿದಿದ್ದ ಶ್ರೀಮಂತ ಕುಟುಂಬದವರ ಹೊಲದಲ್ಲಿ ಕುರಿಗಳನ್ನು ರಾತ್ರಿಹೊತ್ತು ಕೂಡುತ್ತಿದ್ದ.

ಬೆಳದಿಂಗಳ ಬೆಳಕಿನಲ್ಲೇ ಅಡುಗೆ ಮಾಡಿಕೊಂಡು, ಊಟ ಮಾಡಿ ಕುರಿಗಳ ಜೊತೆಯಲ್ಲೇ ಮಲಗುತ್ತಿದ್ದನು. ಬೆಳದಿಂಗಳು ಇಲ್ಲದಿದ್ದಾಗ ಸಾಯಂಕಾಲವೇ ಅಡುಗೆ ಮಾಡಿಟ್ಟುಕೊಂಡು, ಕತ್ತಲಾದ ಬಳಿಕ ಲಾಟೀನು ಹತ್ತಿಸಿ, ಊಟ ಮುಗಿಸಿ, ಮಲಗುವನು. ಕತ್ತಲು–ಬೆಳಕು ಅವನಿಗೆ ಒಂದೇ ಆಗುತ್ತಿತ್ತು. ಅವನ ಜೀವನ ಕೂಡ ಅದಕ್ಕೆ ಹೊರತಾಗಿರಲಿಲ್ಲ.

ಕುರಿಗಳ ಪಿಚಿಕೆ ಮತ್ತು ಗಂಜಲ ಹೊಲದಲ್ಲೇ ಬಿಡುತ್ತಿದ್ದರಿಂದ ದಿನಕೆ ಇಂತಿಷ್ಟು ದವಸ ಮತ್ತು ಹಣ ಅವನಿಗೆ ಹೊಲದ ಯಜಮಾನನಿಂದ ದೊರೆಯುತ್ತಿತ್ತು. ಹೀಗೆ ಸಂಗ್ರಹವಾದ ದವಸ–ಧಾನ್ಯವನ್ನು ಒಂದು ಕತ್ತೆಯ ಮೇಲೆ ಹೇರಿಕೊಂಡು ಮುಂದಿನ ಊರಿಗೆ ಹೋಗುತ್ತಿದ್ದರ. ದವಸ–ಧಾನ್ಯ ಹೆಚ್ಚು ಸಂಗ್ರಹವಾದಾಗ, ಅವರಪ್ಪ ಅವನು ನೆಲೆಸಿರುವ ಹತ್ತಿರ ಬಂದು ತೆಗೆದುಕೊಂಡು ಹೋಗುತ್ತಿದ್ದ. ಕುರಿಯ ತುಪ್ಪಟ ಸಾಕಷ್ಟು ಬೆಳೆದಿದ್ದರೆ, ಅದನ್ನೂ ಕೂಡ ಮರಿಗಿಷ್ಟೆಂದು ಬೆಲೆ ನಿಗದಿ ಮಾಡಿ ತುಪ್ಪಟವನ್ನು ಕತ್ತರಿಸಿಕೊಳ್ಳಲು ಹೇಳುತ್ತಿದ್ದರು. ಕುರಿ ಕಾಯುವುದರಿಂದ, ಕುರಿಯಿಂದ ಏನೆಲ್ಲಾ ಉಪಯೋಗ–ಲಾಭವಿದೆ ಎನ್ನುವುದನ್ನು ದುರುಗ ಅರಿತಿದ್ದ.

ವಲಸೆ ಹೋಗಿದ್ದವರು ಊರಿಗೆ ವಾಪಸ್‌ ಬಂದರೆ ಸಾಕು, ಅವನ ತಾಯಿಗಂತೂ ಹಬ್ಬ ಆಚರಿಸಿದಷ್ಟು ಸಂತೋಷ. ಮಗನಿಗೆ ಎಣ್ಣೆ ಸ್ನಾನ ಮಾಡಿಸಿ, ಹೋಳಿಗೆ ಇಲ್ಲವೇ ಕರಿಗಡಬು ಮಾಡಿ ಊಟಕ್ಕೆ ಬಡಿಸುತ್ತಿದ್ದಳು. ದುರುಗಪ್ಪನೆಂದರೆ ಅವಳಿಗೆ ಸರ್ವಸ್ವವಾಗಿ, ವಂಶದ ಕುಡಿಯಾಗಿ ಕಂಗೊಳಿಸುತ್ತಿದ್ದ.

ಒಂದು ದಿನ ರಾತ್ರಿ ಊಟ ಮುಗಿಸಿದ ದುರುಗಪ್ಪ ಮಲಗಲು ರೊಪ್ಪಕ್ಕೆ ಬಂದನು. ತಂದಿದ್ದ ಮುದ್ದೆಯನ್ನು ನಾಯಿಗೆ ಹಾಕಿ, ಬಟ್ಟಲಲ್ಲಿ ನೀರನ್ನು ಇಟ್ಟು, ಅಟ್ಟಣಿಕೆ ಹತ್ತಿ ಮಲಗಲು ಸಿದ್ಧನಾದ. ರೊಪ್ಪದ ಗೇಟಿನ ಬಳಿ ಯಾವುದೋ ಪ್ರಾಣಿ ನುಸುಳಿದ ಶಬ್ದ ಕೇಳಿಸಿತು. ಅತ್ತ ದೃಷ್ಟಿಯನ್ನು ಹಾಯಿಸಿದನು. ನಾಯಿಯು ಗುರ್‌ಗುರ್ ಅನ್ನುತ್ತಿತ್ತು. ಒಂದು ಉದ್ದವಾದ ಬಡಿಗೆ ತೆಗೆದುಕೊಂಡು ಶಬ್ದ ಬಂದ ಕಡೆಗೆ ನಡೆದ. ಪ್ರಾಣಿಯೊಂದು ಕುರಿಯ ತಲೆ ಹಿಡಿದು ಎಳೆದಾಡುತ್ತಿತ್ತು. ಕುರಿಗಳು ಚದುರಿ ಅರಚುತ್ತ ಒದ್ದಾಡುತ್ತಿದ್ದವು.

ನೋಡಿದರೆ ಅದು ತೋಳ! ಕೈಯಲ್ಲಿದ್ದ ಬಡಿಗೆಯಿಂದ ತಲೆಯ ಮೇಲೆ ಬಡಿದಾಗ ಅದು ತಪ್ಪಿಸಿಕೊಂಡು ದುರುಗನ ಮೇಲೆ ಎರಗಿತು. ನಾಯಿ ಕೂಡ ತೋಳದ ಮೇಲೆ ಎರಗಿತು. ಪುನಾ ತೋಲ ದುರುಗನ ಮೇಲೆ ಎರಗಿ, ತನ್ನ ಪಂಜದಿಂದ ಗಿಬರಿದ್ದರಿಂದ ರಕ್ತ ಜಿನುಗುತ್ತಿತ್ತು. ಪ್ರಾಣಕ್ಕೆ ಕುತ್ತು ಬರುವ ಸಂಭವ ಇದ್ದರೂ ಅದರೊಂದಿಗೆ ಸೆಣಸಾಡಿದ. ಅಷ್ಟರೊಳಗೆ ರೊಪ್ಪದ ಹೊರಗಡೆ ಜನ ಜಮಾಯಿಸಿದ್ದರು. ದುರುಗನಿಗೆ ಧೈರ್ಯ ಬಂತು. ಬಡಿಗೆಯನ್ನು ಎತ್ತಿ ಅದರ ತಲೆಯ ಮೇಲೆ ಬಡಿದಾಗ, ಆ ಏಟಿಗೆ ಗಾಬರಿಗೊಂಡ ತೋಳ ಅಲ್ಲಿಂದ ಓಡಿತು.

ದುರುಗನಿಗೆ ಕೈಕಾಲು ಮುಖದ ಮೇಲೆ ತರಚಿ, ರಕ್ತ ಜಾಸ್ತಿಯೇ  ಜಿನುಗುತ್ತಿತ್ತು. ತೋಳ ಗಿಬರಿದಾಗ ಅಲ್ಲಲ್ಲಿ ಮಾಂಸಖಂಡ ಕಿತ್ತು ಬಂದಿತ್ತು.ಸರಸಮ್ಮ ಬಟ್ಟೆಯನ್ನು ಗಾಯಗಳಿಗೆ ಪಟ್ಟಿ ಕಟ್ಟಿ ಮಗನನ್ನು ಮನೆಗೆ ಕರೆದುಕೊಂಡು ಬಂದು ಉಪಚರಿಸಿದಳು. ದುರುಗ ಚಳಿಜ್ವರ ಪೀಡಿತನಾದ. ಸರಸಮ್ಮ ಉಪ್ಪಿನ ಕಾವು ಕೊಡುತ್ತಿದ್ದಳು. ಗಾಯದ ನೋವಿಗೆ ತಡೆಯಲಾರದೆ ‘ಅಯ್ಯೋ.... ಅಮ್ಮಾ...’ ಅಂತ ಕನಲುವನು.

ದಿನಗಳುರುಳಿದವು. ದುರುಗನು ಕುರಿಕಾಯುವ ಕೆಲಸವನ್ನ ಮತ್ತಷ್ಟು ಹಚ್ಚಿಕೊಂಡ. ಈಗೀಗ ಯಾವುದೇ ಕುರಿಗೆ ಕಾಯಿಲೆ ಬಂದರೆ ತಕ್ಷಣ ಆ ಕಾಯಿಲೆಯ ಮೂಲವನ್ನ ಹಿಡಿದು, ಅದಕ್ಕೆ ಸರಿಯಾದ ಔಷಧೋಪಚಾರ ಮಾಡುತ್ತಿದ್ದ. ಕುರಿಗಳಿಗೆ ಹೆಸರನ್ನೂ ಇಟ್ಟಿದ್ದ. ಕೆಂಚಿಗ, ಭದ್ರ, ಬುರುಗ, ಕಾಟ – ಮುಂತಾಗಿ ಒಂದೊಂದಕ್ಕೂ ಒಂದು ಹೆಸರಿಟ್ಟಿದ್ದ.

ಸರಸಮ್ಮಳಿಗಂತೂ ಮಗನನ್ನು ಕುರಿ ಕಾಯುವುದನ್ನ  ಬಿಡಿಸಿ, ಇಸ್ಕೂಲಿಗೆ ಹಾಕಿ ನಾಕಕ್ಷರ ಕಲಿಸುವ ಹಂಬಲ ಹೆಚ್ಚಾಯ್ತು. ದಿನಾಲೂ ಕಂಡ ಕಂಡ ದೇವರಿಗೆ ಕೈಮುಗಿದು ಹರಕೆ ಹೊತ್ತುಕೊಳ್ಳುವಳು. ಅವರಿವರನ್ನು ಕರೆದು ಮಗನಿಗೆ ಬುದ್ಧಿ ಮಾತನ್ನ ಹೇಳಿಸುತ್ತಿದ್ದಳು. ಮಗ ಓದಬೇಕು. ದೊಡ್ಡ ದೊಡ್ಡ ಚಾಕರಿ ಮಾಡಬೇಕು ಎನ್ನುವುದು ಅವಳ ಜೀವನದ ಆಸೆಯಾಗಿತ್ತು.

ಅಂದು ಬೆಳಿಗ್ಗೆ ಸರಸಮ್ಮ ರೊಟ್ಟಿ ಸುಡಲು ಒಲೆ ಮುಂದೆ ಕುಂತಾಗ, ದುರುಗ ಬಂದು ಕುಕ್ಕರ ಕಾಲಲ್ಲಿ ಕುಳಿತು ಸಣ್ಣ ಸಣ್ಣ ಪುಳ್ಳೆಗಳನ್ನು ಒಲೆಗೆ ಹಾಕಿ ಉರಿಯಲು ಸಹಾಯ ಮಾಡುತ್ತಿದ್ದ. ರೊಟ್ಟಿ ತಟ್ಟುವಾಗ ಅವಳ  ಬೆರಳುಗಳು ರೊಟ್ಟಿಯ ಮೇಲೆ ಮೂಡಿದವು. ಅದನ್ನು ತದೇಕಚಿತ್ತದಿಂದ ನೋಡುತ್ತಿದ್ದಾಗ ಕಣ್ಣೀರಿನ ಹನಿ ರೊಟ್ಟಿಯ ಮೇಲೆ ಬಿತ್ತು.

ಸರಸಮ್ಮ ಭಾವುಕಳಾದಳು. ಕಣ್ಣೀರನ್ನು ಒರೆಸಿಕೊಳ್ಳುತ್ತಾ – ‘ಎದೆ ಮೂಳೆ ಮುರ್ಕಂಡು ದುಡಿದರೂ ಸುಖ ಇಲ್ಲ. ಮಗ ನಾನೇಳದನ್ನ ವಸಿಕೇಳು’ ಎಂದಳು.‘ಅದೇನವ್ವ ಹೇಳು ಮತ್ತೆ...’ ‘ಮಗಾ, ನಿನ್ನ ನೋಡಿದ್ರೆ ಕರ್‍ಳು ಕಿತ್‌ ಬರುತ್ತೆ. ಮತ್ತೆ ಇಸ್ಕೂಲಿಗೆ ಸೇರ್‍ಕಪ್ಪಾ... ಕುರಿ ಕಾಡುಮೇಡಂತಾ ತಿರುಗಿ ಹಾಳಾಗ್ಬೇಡ. ಕೂಲಿ ಮಾಡಿ, ಗೇದು ನಿನ್ನನ್ನು ಓದುಸ್ತೀನಿ. ನಿನ್ನ ವಾರ್‍ಗೆರೆಲ್ಲ ಕಾಲೇಜು ಮೆಟ್ಲು ಹತ್ತಿದ್ದಾರೆ. ನೀನೂ ಅವರಂಗ ಆಗಪ್ಪಾ...’ ಎಂದು ತಲೆಯ ನೇವರಿಸಿದಳು.

‘ಈಗ ಹೋದ್ರೆ ಎಂಗವ್ವ ನನ್ನನ್ನು ಸ್ಕೂಲಿಗೆ ಸೇರಿಸ್ಕಂಡಾರು? ಐದು ವರ್ಷದಿಂದ್ಲೂ ನನ್ನ ಹೆಸ್ರು ಮಡಿಕಂಡಿದ್ದಾರಾ?’ ಎಂದು ದುರುಗಪ್ಪ ಕೇಳಿದ. ‘ಇಸ್ಕೂಲಿಗೋಗಿ ತೆಗೆಸಿ ನೋಡು ಮಗ. ನಿನ್ನ ಹಣೆಬರಹ ಚೆನ್ನಾಗಿದ್ರೆ ಇರುತ್ತೆ’ ಎಂದು ನಯವಾಗಿ ಹೇಳುತ್ತಾ ಮನವರಿಕೆ ಮಾಡಿಕೊಟ್ಟಳು. ‘ಥತ್‌ ಹೋಗವ್ವ! ಯಾವಾಗ್ಲೂ ನೀನು ಇಸ್ಕೂಲ್‌ ಅಂತಾ ಹೇಳ್ತೀಯಾ, ನನ್ಗಂತೂ ಸಾಕಾಗಿಹೋಗಿದೆ’ ಎಂದು ಮಗ ಸಿಡಿಮಿಡಿಗೊಂಡ.

‘ಇದೊಂದ್ಕಿತ ಇಸ್ಕೂಲಿಗೆ ಹೋಗಿ ತೆಗೆಸಿನೋಡು ಮಗ’ ಎಂದು ತಾಯಿ ಅಂಗಲಾಚಿದಳು. ‘ನನ್ಗೇನೂ ಇಷ್ಟ ಇಲ್ಲ ಕಣವ್ವ... ನಿಮ್ಗೋಸ್ಕರನಾದ್ರೂ ಇಸ್ಕೂಲಿಗೋಗಿ, ವಿಚಾರಿಸ್ತೀನಿ, ಆಯ್ತಾ...?’ ಎಂದ. ‘ನೀನ್‌ ನಾಕಕ್ಷರ ಕಲ್ತೆರೇ ಅಷ್ಟೇ ಸಾಕು ಮಗ’ ಎಂದು ತಾಯಿ ಮಗನಿಗೆ ನೆಟಿಕೆ ತೆಗೆದಳು. ‘ಮೊದ್ಲು ರೊಟ್ಟಿ ಕೊಡವ್ವ...’ ಅಂತ ದುರುಗ ನಗುಮುಖದಿಂದ ಕೇಳಿದ.

ಮರುದಿನ ದುರುಗ ರೊಪ್ಪಕ್ಕೆ ಹೋಗಿ ಕುರಿ ಮಂದೆಯನ್ನ ಬಿಡದೆ, ಸೀದಾ ಸ್ಕೂಲಿನ ಹತ್ತಿರ ಬಂದ. ಐದು ವರ್ಷದ ಹಿಂದೆ ಇದ್ದ ಯಾವ ಮೇಷ್ಟ್ರುಗಳೂ ಕಾಣಲಿಲ್ಲ. ಬದಲಾಗಿ ಸ್ಕೂಲಿನ ಜವಾನ ಮಾತ್ರ ಕಾಣಿಸಿದ. ಅವನ ಹತ್ತಿರ ಬಂದು. ‘ನಾನ್‌ ಮತ್ತೆ ಸ್ಕೂಲಿಗೆ ಸೇಕ್ಕಬೇಕು, ಯಾರನ್ನ ಕೇಳೋದು’ ಅಂತ ಕೇಳಿದಾಗ, ಹೆಚ್‌.ಎಂ. ರೂಮಿನ ಕಡೆ ಕೈ ತೋರಿಸಿದ ಆತ – ‘ಅಲ್ಲಿ ಹೋಗಿ ವಿಚಾರಿಸು’ ಎಂದು ಹೇಳಿದ.

ಹೆಡ್‌ ಮಾಸ್ಟರ್‌ ರೂಮಿನತ್ತಿರ ಬಂದುನಿಂತ ದುರುಗ ಒಳಗೆ ಹೋಗಲೋ ಬೇಡವೋ ಎಂದು ಯೋಚಿಸಿದ. ಅಷ್ಟರಲ್ಲಿ ಟೀಚರ್‌ ಒಬ್ಬರು ಬಂದು – ‘ಏಕೆ ಇಲ್ಲಿ ನಿಂತಿದ್ದೀಯಾ’ ಎಂದು ಕೇಳಿದರು. ಹೆಚ್‌.ಎಂ. ಅವರನ್ನ ನೋಡಬೇಕಂದ. ‘ಒಳಗಡೆ ಹೋಗು’ ಎಂದಾಗ ಧೈರ್ಯ ಮಾಡಿ ಹೆಡ್‌ಮಾಸ್ಟರ್‌ ಮುಂದೆ ಕೈಕಟ್ಟಿ ನಿಂತನು.

ಫೈಲ್‌ ಒಂದರಲ್ಲಿ ಮುಖ ಹುದುಗಿದ್ದ ಹೆಚ್‌.ಎಂ. ತನ್ನ ಎದುರು ನಿಂತಿದ್ದ ಹುಡುಗನನ್ನು ನೋಡಿ ‘ಏನ್‌ ಬೇಕು?’ ಎಂದರು. ತೊದಲುತ್ತಲೇ – ‘ಸಾರ್‌, ನಾನ್‌ ಮತ್ತೆ ಸ್ಕೂಲಿಗೆ ಸೇರ್‍ಕೋಬೇಕಂತಾ ಬಂದಿದ್ದೀನಿ’ ಅಂದ ತಕ್ಷಣ ಅವರು ಅವಾಕ್ಕಾದರು. ಅವರಿಗೆ ಆಶ್ಚರ್ಯವೋ ಆಶ್ಚರ್ಯ. ಅವನ ವೃತ್ತಾಂತ ವಿಚಾರಿಸಿದರು.

ದುರುಗ ಓದಿನ ಅಭಿಲಾಷೆಯನ್ನ ವ್ಯಕ್ತಪಡಿಸಿದಾಗ ಸಂತಸಗೊಂಡು – ‘ಈಗ ಹುಡುಗರು ಶಾಲೆಗೆ ಬರೋದೇ ಅಪರೂಪ, ಬಂದರೂ ಓದಿನಲ್ಲಿ ಅಷ್ಟಕಷ್ಟೇ. ಅಂತಹದರಲ್ಲಿ ಈ ಹುಡ್ಗ ಓದ್ತೀನಿ ಅಂತ ಮುಂದೆ ಬಂದಿದ್ದಾನೆ’ ಅಂತಾ ಸೋಜಿಗವನ್ನ ವ್ಯಕ್ತಪಡಿಸಿದರು. ಅಕ್ಷರ ವಂಚಿತರ ಸಂಖ್ಯೆ ದೇಶದಲ್ಲಿ ಅಧಿಕವಾಗಿರುವಾಗ ದೃಢವಾಗಿ ಓದೇ ತೀರುತ್ತೇನೆಂಬ ದೃಢಕಾಯ ಹುಡುಗನನ್ನು ನೋಡಿದಾಗ ಅವರ ಮನಸ್ಸು ಕರಗಿತು.

ಹಿಂದಿನ ಎಲ್ಲಾ ದಾಖಲೆಗಳನ್ನು ತೆಗೆಸಿ, ಯಾವ ವರ್ಷ ಯಾವ ತರಗತಿಯಲ್ಲಿದ್ದ ಎನ್ನುವುದನ್ನ ಪತ್ತೆಹಚ್ಚಿದರು. ಹುಡುಗನ ಬೆನ್ನುತಟ್ಟಿ ‘ನಾಳೆಯೇ ಸ್ಕೂಲಿಗೆ ಬಾ’ ಎಂದು ಹೇಳಿದಾಗ ಅವನ ಮುಖ ಅರಳಿತು. ಸರಸಮ್ಮಳಿಗೆ ಮಗ ಸ್ಕೂಲಿಗೆ ಸೇರುವ ವಿಷಯ ತಿಳಿದು ಹರ್ಷಚಿತ್ತಳಾದಳು. ಅವಳ ಕಣ್ಣಮುಂದೆ ಮಗನ ಭವ್ಯ ಭವಿಷ್ಯದ ನಾಳೆಗಳು ಮೂಡತೊಡಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT