ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಕೀಲಿಕೈ ಏಕಾಗ್ರತೆ

Last Updated 6 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸಾರ್, ನೋಡಿ. ಇವಳು ಯಾವಾಗಲೂ ಪುಸ್ತಕ ಹಿಡಿದುಕೊಂಡೇ ಇರುತ್ತಾಳೆ. ಮಟಗುಟ್ಟುತ್ತ ಓದುತ್ತಲೇ ಇರುತ್ತಾಳೆ. ಆದರೆ ಅವನು ಯಾವಾಗಲೂ ಆಟ. ಫಾರ್ಮುಲಾಗಳನ್ನು ಬಾಯಿಪಾಠ ಮಾಡುವಾಗಲೂ ಚೆಂಡನ್ನು ಗೋಡೆಗೆ ಎಸೆದು ಕ್ಯಾಚ್ ಹಿಡಿಯುತ್ತಾ ಬಾಯಿಪಾಠ ಮಾಡುತ್ತಿರುತ್ತಾನೆ....... ಆಮೇಲೆ ರಿಸಲ್ಟ್ ನೋಡಿದ್ರೆ ಅವಳಿಗಿಂತ ಇವನೇ ಹೆಚ್ಚು ಅಂಕ ಗಳಿಸಿರುತ್ತಾನೆ. ಇದು ಹೇಗೆ ಸಾರ್?’  ಪೋಷಕರ ಅಚ್ಚರಿಯ ಪ್ರಶ್ನೆ.

ಅದು ಹೇಗೋ ನಮ್ಮಲ್ಲಿ ಓದುವುದು ಎಂದರೆ ಪುಸ್ತಕ ಹಿಡಿದು ಕೂರುವುದು, ಓದುವಂತೆ ಮಾಡುವುದು (ನಟಿಸುವುದು?) ಎಂಬ ನಂಬಿಕೆ ರೂಢಿಯಾಗಿಬಿಟ್ಟಿದೆ. ಆದರೆ ಅದು ಹಾಗಲ್ಲ. ಓದುವುದು ಎಂದರೆ ಮನಸ್ಸು ಹೊಸ ವಿಚಾರವೊಂದನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ತೊಡಗಿಕೊಳ್ಳುವುದು. ಅಥವಾ ತಿಳಿದ ವಿಚಾರದ ಅರಿವನ್ನು ವಿಸ್ತರಿಸುವ ಪ್ರಯತ್ನ ಮಾಡುವುದು. ಪ್ರತಿಯೊಂದು ಯಶಸ್ಸಿನ ಹಿಂದೆ ಪ್ರಯತ್ನವಿದೆ. ಪ್ರಯತ್ನ ಸರ್ವೇಸಾಮಾನ್ಯ. ಆದರೆ ಫಲ ಮಾತ್ರ ಒಬ್ಬೊಬ್ಬರಿಗೆ ಒಂದೊಂದು ತರ. ಕಾರಣವೇನು?

ಯಶಸ್ವಿ ವ್ಯಕ್ತಿಗಳನ್ನು, ‘ನಿಮ್ಮ ಗೆಲುವಿನ ಗುಟ್ಟೇನು?’ – ಎಂದು ಪ್ರಶ್ನಿಸಿದರೆ ಉತ್ತರ ದೊರೆತೀತೆ? ಅವರು ತಾವೇನು ಮಾಡಿದರು ಎಂದು ತಿಳಿಸಬಲ್ಲರು. ಆದರೆ ತಾವು ‘ಹೇಗೆ ಮಾಡಿದೆವು’ ಎಂದು ಹೆಚ್ಚಿನ ಬಾರಿ ಅವರಿಗೇ ತಿಳಿದಿರುವುದಿಲ್ಲ! ವಿಜಯದ ಗುಟ್ಟು ಕೇಳುವಾಗ ಪರೋಕ್ಷವಾಗಿ ‘ನಿಮ್ಮ ಯಶಸ್ಸಿನ ಕೀಲಿಕೈ ಕೊಡುವಿರಾ?’ ಎಂದು ಕೇಳುತ್ತಿರುತ್ತೇವೆ. ವ್ಯಕ್ತಿ ಅಸಾಮಾನ್ಯ ಶಕ್ತಿಯ ಆಗರ, ಸಕಲ ಸಾಧ್ಯತೆಗಳ ಭಂಡಾರ. ಆದರೆ ಅವೆಲ್ಲವನ್ನು ಅನಾವರಣ ಮಾಡಲು ಅವನಿಗೆ ಬೇಕೊಂದು ಕೀಲಿಕೈ! ಏಕಾಗ್ರತೆಯೇ ಆ ಕೀಲಿಕೈ. ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಎಲ್ಲರಿಗೂ ಬೇಕು ಏಕಾಗ್ರತೆ. ವಿದ್ಯಾರ್ಥಿಗೆ ಸಂಬಂಧಿಸಿದಂತೆ, ಪುಸ್ತಕವನ್ನು ಕೈಯಲ್ಲಿ ಹಿಡಿದು ಮನಸ್ಸು ಎಲ್ಲೆಲ್ಲೋ ಓಡಾಡಲು ಬಿಟ್ಟರೆ ಓದಿದ್ದು ಏನೂ ಪ್ರಯೋಜನವಾಗದು. ಏಕೆಂದರೆ ಅದು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗೆ ಏಕಾಗ್ರತೆ ಕೀಲಿಕೈ.

ಹೇಗೆ ಮಸೂರವೊಂದು ಸೂರ್ಯಕಿರಣಗಳನ್ನು ಒಂದು ಬಿಂದುವಿನತ್ತ ಕೇಂದ್ರೀಕರಿಸಿ ಅಪಾರ ಶಾಖವನ್ನು ಉತ್ಪತ್ತಿ ಮಾಡಬಲ್ಲದೊ ಹಾಗೇ ವಿದ್ಯಾರ್ಥಿಯ ಮನಸ್ಸು ವಿಷಯದಲ್ಲಿ ಕೇಂದ್ರೀಕೃತವಾಗಬೇಕು, ಆಗ ವಿಷಯಸಂಗ್ರಹಣೆ ಸಂಚಯನ ನಡೆಯಲು ಸಾಧ್ಯ. ಒಂದು ಗಂಟೆಯ ಅವಧಿಯ ಓದಿನಲ್ಲಿ ಮನಸ್ಸು ಅದೆಷ್ಟು ಸುತ್ತು ಹೊರಗೆ ಹೋಗಿ ಬರುತ್ತದೆ ಎಂಬುದು ಆಯಾ ವ್ಯಕ್ತಿಗಳಿಗೆ ಮಾತ್ರ ಗೊತ್ತು. ಮನಸ್ಸೆಂಬ ಅದ್ಭುತ ಉಪಕರಣವನ್ನು ವಿಷಯಗಳನ್ನು ಗ್ರಹಿಸಲು, ವಿಸ್ತರಿಸಲು, ಮತ್ತು ವಿಮರ್ಶಿಸಲು ಬಳಸುತ್ತೇವೆ. ಇದು ಅತ್ಯಂತ ಸೂಕ್ಷ್ಮ ಉಪಕರಣವೂ ಹೌದು. ಅದು ಏಕಾಗ್ರಗೊಂಡಾಗ ಬಹಳ ಸಮರ್ಪಕವಾಗಿ ಕೆಲಸ ಮಾಡುತ್ತದೆ. ಹಾಗಾದರೆ ಮನಸ್ಸನ್ನು ಏಕಾಗ್ರಗೊಳಿಸಲು ಇರುವ ಉಪಾಯಗಳೇನು? ಹಾಗೆಯೇ ಮನಸ್ಸು ಏಕಾಗ್ರಗೊಳ್ಳದಿರಲು ಕಾರಣಗಳೇನು?

ಮನಸ್ಸು ಏಕಾಗ್ರಗೊಳ್ಳದಿರುವುದು ಅದರ ಸಹಜ ಸ್ವಭಾವ. ಅಚ್ಚರಿಯೆನಿಸಿದರೂ ಇದು ನಿಜ. ಮನಸ್ಸು ಸ್ವಭಾವತಃ ಚಂಚಲ. ಅಭ್ಯಾಸದಿಂದ ಮಾತ್ರ ಅದನ್ನು ನೆಲೆಗೊಳಿಸಲು ಸಾಧ್ಯ. ಜ್ಞಾಪಕಶಕ್ತಿಯ ವೃದ್ಧಿ, ಏಕಾಗ್ರತೆಯ ವೃದ್ಧಿಗಳಿಗೆ ಯಾವ ದಿವ್ಯೌಷಧವೂ ಇಲ್ಲ. ವಿದ್ಯಾರ್ಥಿ, ವಿಜ್ಞಾನಿ, ಯೋಗಿ ಯಾರೇ ಆದರೂ ಏಕಾಗ್ರತೆಯನ್ನು ಸಾಧಿಸಿದಾಗಲೇ ಅವರವರ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯ. ಆದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳ ಮನಸ್ಸು ಚಂಚಲಗೊಳ್ಳಲು ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು: 1) ದೈಹಿಕ ಕಾರಣಗಳು,  2) ಮಾನಸಿಕ ಕಾರಣಗಳು, 3) ಸಾಮಾಜಿಕ ಕಾರಣಗಳು.

ದೇಹ ಸುಸ್ಥಿತಿಯಲ್ಲಿರದಿದ್ದರೆ ಮನಸ್ಸು ಕೂಡ ಸ್ಥಿರವಾಗಿ ಇರುವುದಿಲ್ಲ. ದುರ್ಬಲತೆ, ಆಯಾಸ, ಜನ್ಮಸಹಜ ವೈಕಲ್ಯ, ಅನಾರೋಗ್ಯ(ಕಾಯಿಲೆ) – ಇವು ಏಕಾಗ್ರತೆಯ ಭಂಗಕ್ಕೆ ಕಾರಣವಾಗುವ ದೈಹಿಕ ಅಂಶಗಳು. ‘ಸಾರ್, ಮಗುವಿಗೆ ತಾಯಿಯಿಲ್ಲ. ನಾನು ದುಡಿಯಲು ಹೊರಗೆ ಹೋಗುತ್ತೇನೆ. ಅವಳನ್ನು ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದೇನೆ. ಬೆಳಗ್ಗೆ ಕಾಲೇಜಿಗೆ ಲೇಟಾಗುತ್ತದೆ ಎಂದು ತಿಂಡಿ ತಿನ್ನದೆ ಹೊರಡುತ್ತಾಳೆ. ಮತ್ತೆ ರಾತ್ರಿ ಸುಸ್ತಾಗಿದೆ ಎಂದು ಏನೂ ತಿನ್ನದೆ ಮಲಗುತ್ತಾಳೆ.’ ಇದು ಪಿ. ಯು. ಓದುತ್ತಿರುವ ಮಗಳ ಬಗ್ಗೆ ತಂದೆ ತೋಡಿಕೊಂಡ ಸಮಸ್ಯೆ. ಪರೀಕ್ಷೆಯಲ್ಲಿ ಅಂಕ ಕಡಿಮೆ, ಅನಾರೋಗ್ಯದ ಕಾರಣದಿಂದ ಪದೇ ಪದೇ ಗೈರು ಹಾಜರಾಗುತ್ತಾಳೆ ಎಂದು ನಾನು ಆಕ್ಷೇಪಿಸಿ ಪೋಷಕರನ್ನು ಕರೆತರಲು ಹೇಳಿದಾಗ ಅವರು ಬಂದು ಈ ವಿವರಣೆ ನೀಡಿದರು.

ನಾನು ಆಡಳಿತಮಂಡಳಿಯ ಗಮನಕ್ಕೆ ಈ ವಿಚಾರವನ್ನು ತಂದೆ. ಜೊತೆಗೆ ವರ್ಗ ಅಧ್ಯಾಪಕರನ್ನು ಕರೆಸಿ, ಹತ್ತಿರದ ಅಂಗನವಾಡಿಯಿಂದ ಪೌಷ್ಟಿಕ ಆಹಾರದ ಪುಡಿಯನ್ನು ತರಿಸಿ ಮಧ್ಯಾಹ್ನದ ವೇಳೆಯಲ್ಲಿ ಈ ವಿದ್ಯಾರ್ಥಿನಿಗೆ ನೀಡಲು ಸೂಚಿಸಿದೆ. ಇದು ತಾತ್ಕಾಲಿಕ ಪರಿಹಾರ. ಆದರೆ ಈ ಪರಿಹಾರವೂ ಸಿಗದೆ ಒದ್ದಾಡುವ  ಅನೇಕ ವಿದ್ಯಾರ್ಥಿಗಳಿರುತ್ತಾರೆ. ‘ಸಾರ್, ಪ್ರತಿದಿನ ಇವನು ಮಧ್ಯಾಹ್ನದ ತರಗತಿಯಲ್ಲಿ ನಿದ್ದೆ ಮಾಡುತ್ತಾನೆ. ವರ್ಗ ಅಧ್ಯಾಪಕರ ದೂರು. ಕತ್ತೆತ್ತಿ ನೋಡಿದೆ. ಕಟ್ಟುಮಸ್ತಾದ ಆರೋಗ್ಯಪೂರ್ಣ ಶರೀರ. ಎಲ್ಲೋ ನೋಡಿದಂತಿದೆ ಎನಿಸಿತು. ಹೌದು, ಪ್ರತಿದಿನ ಬೆಳಿಗ್ಗೆ ನಾವೆಲ್ಲ ಬರುವ ಮೊದಲೇ ಕಾಲೇಜಿಗೆ ಬಂದು ಕಬಡ್ಡಿ ತಂಡದೊಂದಿಗೆ ಸತತವಾಗಿ ಆಟದ ಅಭ್ಯಾಸ ಮಾಡುತ್ತಿರುತ್ತಾನೆ!’

‘ನೀನು ಕಬಡ್ಡಿ ಆಡುತ್ತಿ ಅಲ್ಲವೇ?’ ಹೌದೆಂದ. ವಿಪರೀತ ಸುಸ್ತು, ದಣಿವು, ತರಗತಿಯಲ್ಲಿ ಏಕಾಗ್ರತೆ ಇಲ್ಲ. ನಿದ್ದೆ. ಮಧ್ಯಂತರ ಪರೀಕ್ಷೆ ಮುಗಿದ ಕೂಡಲೆ ಕಬಡ್ಡಿ ಮೊದಲಾದ ಶ್ರಮಭರಿತ ಆಟ ನಿಲ್ಲಿಸಿ, ಅಂತಿಮ ಪರೀಕ್ಷೆ ಮುಗಿದ ಬಳಿಕ ಮತ್ತೆ ಅಭ್ಯಾಸ ಮುಂದುವರೆಸುವಂತೆ ಹೇಳಿದೆ. ಆಹಾರ, ವ್ಯಾಯಾಮ ಮತ್ತು ನಿದ್ರೆ – ಇವು ಸಮತೋಲನದಲ್ಲಿದ್ದಾಗಲೇ ಮನಸ್ಸು ಏಕಾಗ್ರಗೊಳ್ಳಲು ಸಾಧ್ಯ.

ಅದೇ ತಾನೆ ತರಗತಿಯಲ್ಲಿ ಮೊಬೈಲ್ ಬಳಸಿ ಸಿಕ್ಕಿಬಿದ್ದ ವಿದ್ಯಾರ್ಥಿಗೆ ಬೆವರಿಳಿಸಿ ಬಂದಿದ್ದೆ. ಇಬ್ಬರು ಕಂಠಕೌಪೀನಧಾರಿಗಳು ಹುಸಿನಗೆಬೀರಿ ಕೈ ಕುಲುಕಿ ಪರಿಚಯ ಮಾಡಿಕೊಂಡರು.

‘ಸಾರ್, ನಾವು ಖಗಪ ಮೊಬೈಲ್ ಕಂಪೆನಿಯ ಪ್ರತಿನಿಧಿಗಳು. ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಉಚಿತ ಸಿಮ್ ನೀಡಲು ಬಂದಿದ್ದೇವೆ.’
‘ಸಂತೋಷ. ಆದರೆ ಕಾಲೇಜಿನ ಆವರಣದಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಆದುದರಿಂದ ನಿಮ್ಮ ಸಿಮ್ ಇಂದ ಹೆಚ್ಚು ಪ್ರಯೋಜನವಿಲ್ಲ.’
‘..... ಅದು ಹಾಗಲ್ಲ ಸಾರ್. ’ ಕಾಲೇಜಿನ ಅವಧಿ ಮುಗಿದ ಮೇಲೆ, ಆವರಣದ ಹೊರಗೆ...’

‘ಕ್ಷಮಿಸಿ. ಮಕ್ಕಳ ಮನಸ್ಸಿನ ಮೇಲೆ ಅವುಗಳ ಬಳಕೆಯಿಂದ ಅಡ್ಡಪರಿಣಾಮವೇ ಹೆಚ್ಚು. ವಿವೇಚನೆಯಿಲ್ಲದ ವಯಸ್ಸಿಗೆ, ಮನಸ್ಸಿಗೆ ಈ ದೂರಸಂಪರ್ಕಜಾಲದ ಚಟ ಹತ್ತಿದರೆ ಏನಾಗುತ್ತದೆ, ಅದರ ಪರಿಣಾಮ ಏನು ಎಂಬುದು ಗೊತ್ತಿದೆಯೇನ್ರಿ ನಿಮಗೆ? ನಿಮ್ಹಾನ್ಸ್‌ನ ಡಿ-ಅಡಿಕ್ಷನ್ ವಾರ್ಡ್‌ಗೆ ಒಮ್ಮೆ ಭೇಟಿ ಕೊಡಿ.....’ ರೇಗಿದೆ. ಅವರಿಬ್ಬರು ಎದ್ದುಹೋದರು.

ಇಂದು ಮನಸ್ಸಿನ ಏಕಾಗ್ರತೆ ಹದಗೆಡಲು ಕಾರಣ, ವಿದ್ಯುನ್ಮಾನ ಉಪಕರಣಗಳು, ಮೊಬೈಲ್, ದೂರದರ್ಶನ, ಅಂತರ್ಜಾಲ. ಹಾಗೆಂದು ಇವುಗಳನ್ನು ದೂರಿ ದೂರೀಕರಿಸುವಂತೆಯೂ ಇಲ್ಲ. ಏಕೆಂದರೆ ಇವುಗಳ ಮೂಲಕವೇ ಅವರಿಗೆ ನಾನು ಪರೀಕ್ಷಾದಿನದ ಹಿಂದಿನ ರಾತ್ರಿಯೋ, ಅಥವಾ ಅದೇ ದಿನ ಬೆಳಗ್ಗೆಯೋ ಕೊನೆಕ್ಷಣದ ಸಂದೇಹಗಳನ್ನು ಪರಿಹರಿಸಿದ್ದುಂಟು. ಇವುಗಳ ಬಳಕೆಯ ಇತಿ-ಮಿತಿಯ ವಿವೇಚನೆ ಇರಬೇಕು ಅಷ್ಟೆ. ಇಲ್ಲವಾದರೆ, ಬ್ಯಾಗಿನೊಳಗಿನ ಮೊಬೈಲು ಅವನ ಗಮನದ ಕೇಂದ್ರವಾಗಿದ್ದು ಕಲಿಕೆ ಕುಂಠಿತವಾಗುತ್ತದೆ.

ಇದಷ್ಟೇ ಅಲ್ಲದೆ ತಮ್ಮ ಮಗ ಅಥವಾ ಮಗಳು ಡಿಸ್‌ಲೆಕ್ಸಿಯಾದಿಂದ ಅಥವಾ ಕಾಗ್ನೆಟಿವ್ ಸಮಸ್ಯೆಗಳಿಂದ ಅಥವಾ ಬೇರೆಯ ಸಣ್ಣಪ್ರಮಾಣದ ಮನೋರೋಗದಿಂದ ಬಳಲುತ್ತಿದ್ದಾರೆಂಬ ವಿಚಾರವನ್ನೇ ಅರಿಯದ ತಂದೆ-ತಾಯಿಯರೂ ಇದ್ದಾರೆ. ಇಂತಹ ಮಾನಸಿಕ ಸವಾಲುಗಳೂ ಏಕಾಗ್ರತೆ ಸಾಧಿಸಲು ಅಡ್ಡಿಯಾಗುತ್ತವೆ. ಸೂಕ್ತ ನೆರವು, ಒತ್ತಾಸೆ, ಔಷಧಗಳಿಂದ ಈ ಸಮಸ್ಯೆಯಿಂದ ಪಾರಾಗಬಹುದು.

ಪರೀಕ್ಷಾ ಕೊಠಡಿಗೆ ಕಾಲೆಳೆದುಕೊಂಡು ನಿಧಾನಗತಿಯಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಗದರಿಸಿದೆ, ‘ಏನಮ್ಮಾ, ಪರೀಕ್ಷೆಗೆ ಕೂಡ ತಡವಾಗಿ ಬರುತ್ತೀರಲ್ಲ, ಅಷ್ಟೊಂದು ತಾತ್ಸಾರವೆ?’  ಹಾಗೆಂದವನೆ ಅವಳ ಮುಖವನ್ನು ಗಮನಿಸಿದೆ. ದುಃಖ ಮಡುಗಟ್ಟಿ ನಿಂತಿತ್ತು, ಅತ್ತು ಕಣ್ಣುಗಳೆಲ್ಲ ಊದಿಕೊಂಡಿದ್ದವು. ಮೆಲ್ಲಗೆ ಕೇಳಿದೆ, ‘ಯಾಕೆ ಪುಟ್ಟಿ? ಇಷ್ಟೊಂದು ಬೇಸರದಲ್ಲಿದ್ದಿಯಾ?’

‘ಸಾರ್, ನೆನ್ನೆ ನನ್ನ ತಂದೆ-ತಾಯಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ......’
ನಾಲ್ಕು ಸಮಾಧಾನದ ಮಾತಾಡಿ ಅವಳನ್ನು ಪರೀಕ್ಷಾ ಕೊಠಡಿಗೆ ಕಳಿಸಿದೆ. ಆದರೆ ಸುಧಾರಿಸಿಕೊಳ್ಳಲು ನನಗೇ ಬಹಳ ಹೊತ್ತು ಬೇಕಾಯಿತು. ನಮ್ಮ ಕುಟುಂಬ, ನಮ್ಮ ಸಮಾಜ ನಿರ್ಮಿಸುವ ಹಲವು ಒತ್ತಡಗಳು ಏಕಾಗ್ರತೆಗೆ ಮಾರಕವಾಗಬಲ್ಲವು. ಒಂದು ಸಂಜೆ ನಾನು ಕಚೇರಿಯ ಕೊಠಡಿಗೆ ಬೀಗ ಹಾಕುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಬಾಗಿಲ ಬಳಿ ನಿಂತು ಕೈಮುಗಿದ. ಅವನು ಒಳ್ಳೆಯ ವಿದ್ಯಾರ್ಥಿ. ‘ಸಾರ್, ನಮ್ಮ ಮನೆ ತುಂಬ ಚಿಕ್ಕದು. ರಾತ್ರಿ ಎಲ್ಲ ಮಲಗಿದ ಮೇಲೆ ನಾನು ಬಚ್ಚಲುಮನೆಯಲ್ಲಿ ಕುರ್ಚಿ ಹಾಕಿಕೊಂಡು ಓದಬೇಕು. ಮತ್ತು ಬೆಳಗಿನ ಜಾವವೇ ನೀರು ಬರುವುದರಿಂದ ಮತ್ತೆ ಎಲ್ಲರೊಂದಿಗೆ ಬೇಗ ಎದ್ದುಬಿಡಬೇಕು. ನೀವು ಅನುಮತಿ ನೀಡಿದರೆ ನಾನು ಕಾಲೇಜಿನಲ್ಲಿ ತರಗತಿಗಳು ಮುಗಿದ ಬಳಿಕ ಇನ್ನೂ ಒಂದು ಗಂಟೆ ಕಾಲ ತರಗತಿಯಲ್ಲೇ ಕುಳಿತಿದ್ದು ಓದಿಕೊಂಡು ಹೋಗುತ್ತೇನೆ.’

ಓದಲು ಬೇಕಾದ ಏಕಾಗ್ರತೆಗೆ ಭಂಗ ತರಬಲ್ಲ ಈ ಬಗೆಯ ಆರ್ಥಿಕ, ಸಾಮಾಜಿಕ ಸವಾಲುಗಳು ಅನೇಕವಿವೆ, ಅದನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದ್ದಾರೆ.

ಏಕಾಗ್ರತೆಯಿಲ್ಲದೆ ಕಲಿಕೆಯಿಲ್ಲ. ವಿವೇಕಾನಂದರೆನ್ನುತ್ತಾರೆ: ‘ವಿದ್ಯೆಯ ಸಾರವೇ ಮನಸ್ಸಿನ ಏಕಾಗ್ರತೆ, ಅದು ಕೇವಲ ವಿಷಯ ಸಂಗ್ರಹಣೆ ಅಲ್ಲ. ನಾನೇನಾದರೂ ಮತ್ತೆ ವಿದ್ಯೆ ಕಲಿಯಬೇಕೆಂದಾದರೆ ಮತ್ತು ಈ ವಿಚಾರದಲ್ಲಿ ನನ್ನ ಅಭಿಪ್ರಾಯಕ್ಕೆ ಮನ್ನಣೆ ಇರುವುದಾದರೆ, ನಾನು ವಿಷಯಗಳ ಅಧ್ಯಯನ ಮಾಡುವುದೇ ಇಲ್ಲ. ನಾನು ಮನಸ್ಸಿನ ಏಕಾಗ್ರತೆಯನ್ನೂ ಮತ್ತು ಅದನ್ನು ಹಿಂಪಡೆದುಕೊಳ್ಳುವುದನ್ನು ಕಲಿಯುತ್ತೇನೆ. ಇಂತಹ ನುರಿತ ಮನಸ್ಸಿನಿಂದ ಸುಲಭವಾಗಿ ಬೇಕಾದಂತೆ ವಿಷಯಗಳನ್ನು ಅರಿತುಕೊಳ್ಳಬಲ್ಲೆ. ಮಕ್ಕಳಲ್ಲಿ ನಾವು ಜೊತೆ ಜೊತೆಯಾಗೇ ಮನಸ್ಸಿಗೆ ಏಕಾಗ್ರತೆಯನ್ನೂ ಮತ್ತು ಮನಸ್ಸನ್ನು ಹಿಂಪಡೆಯುವುದನ್ನು ಹೇಳಿಕೊಡಬೇಕು.  ಇದೊಂದು ಆದರ್ಶ ನೆಲೆ. ಈ ನೆಲೆಗೆ ಮುಟ್ಟುವ ಮನ, ಏಕಾಗ್ರತೆ ನಮ್ಮ ವಿದ್ಯಾರ್ಥಿಗಳಿಗೆ ದೊರೆಯಲಿ.’

(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT