ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಭೂಮಿಯಲ್ಲಿ ಬೆಳೆಗಳು ತೊನೆದಾಡಿ

ಹೊಸ ಹೆಜ್ಜೆ–27
Last Updated 7 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಛಲವಿದ್ದರೆ ಕಾಡಾದರೇನು, ನಾಡಾದರೇನು ಎನ್ನುತ್ತಲೇ ಕಾಡಿನ ದಾರಿಯಲ್ಲಿ ತೆಂಗಿನ ಮಧ್ಯೆಯೂ ಹಲವು ರೀತಿಯ ಬೆಳೆಗಳನ್ನು ಬೆಳೆದು ಉತ್ತಮ ಲಾಭ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಾಣಧಾಳು ಗ್ರಾಮದ ಜಿ.ಎಸ್.ಚನ್ನಬಸಪ್ಪ.

ಚನ್ನಬಸಪ್ಪ ಅವರು ವೃತ್ತಿಯಲ್ಲಿ ವಕೀಲರು. ಚಿ.ನಾ.ಹಳ್ಳಿ ನ್ಯಾಯಾಲಯದಲ್ಲಿ ನೋಟರಿ ಕೂಡ ಆಗಿದ್ದಾರೆ. ತಮ್ಮ ಒತ್ತಡದ ವೃತ್ತಿ ನಡುವೆಯೂ ತಮಗೆ ಬಳುವಳಿಯಾಗಿ ಬಂದ ಕೃಷಿಯನ್ನು ಮಾತ್ರ ಬಿಟ್ಟಿಲ್ಲ. 20 ವರ್ಷಗಳ ಹಿಂದೆ ದಸೂಡಿ ಸಮೀಪದ ಮರೆನಡು ಗ್ರಾಮದ ಬಳಿ ಕೊಂಡ ಕಾಡುಭೂಮಿಯಲ್ಲಿ ಈಗ ಬೆಳೆಗಳು ತೊನೆಯಾಡುತ್ತಿವೆ. ನೂರಾರು ರೀತಿಯ ಗಿಡ-ಮರಗಳು ಅಲ್ಲಿ ಫಲ ಕಂಡಿವೆ.

28 ಎಕರೆ ಜಮೀನು ಕೊಂಡ ದಿನಗಳಲ್ಲಿ ಕಾಡಿನ ಮಧ್ಯೆ ಕೃಷಿ ಬದುಕು ಸಾಧ್ಯವೇ ಎಂಬ ಭಯ ವಾಸ್ತವವಾಗಿದ್ದರೂ ಎದೆಗುಂದದೆ ತೆಂಗಿನ ಗಿಡಗಳನ್ನು ನೆಟ್ಟು ಅವುಗಳ ಮಧ್ಯೆ 25ಕ್ಕೂ ಹೆಚ್ಚು ರೀತಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿ ಲಾಭದಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಆರಂಭ ಸುಲಭವಿರಲಿಲ್ಲ: ಕಾಡುಭೂಮಿಯಲ್ಲಿ ಹಾಗೂ ಬೆಲೆಯ ಏರಿಳಿತದಿಂದಾಗಿ ಆರಂಭದ ದಿನಗಳಲ್ಲಿ ಕಷ್ಟ ಅನುಭವಿಸಿದ್ದೇ ಹೆಚ್ಚು ಎನ್ನುತ್ತಾರೆ ಚನ್ನಬಸಪ್ಪ. ‘ಆರಂಭದಲ್ಲಿ ತೆಂಗಿನ ಗಿಡಗಳನ್ನಷ್ಟೇ ಹಾಕಿದ್ದೆ. ತೆಂಗಿನ ಸಸಿ ನಾಟಿ ಮಾಡಿದ ನಂತರ ಬೆಲೆಯಲ್ಲಿ ಸಾಕಷ್ಟು ಏರಿಳಿತ ಆಯಿತು. ಏನು ಮಾಡಬೇಕು ಎಂದೇ ದಿಕ್ಕು ತೋಚಲಿಲ್ಲ. ಇದರಿಂದ ಪಾರಾಗಲು ನಾನು ಕಂಡುಕೊಂಡಿದ್ದು ಮಿಶ್ರ ಬೆಳೆ ಪದ್ಧತಿ. ಇದರಿಂದ ನಾನು ಕಾಲಕ್ರಮೇಣ ಸುಧಾರಿಸುತ್ತಾ ಬಂದು ಲಾಭದ ಹಾದಿ ಹಿಡಿದೆ’ ಎನ್ನುತ್ತಾರೆ.

ಚನ್ನಬಸಪ್ಪ ಅವರು ಎಂಟು ಮಾರಿಗೆ (40/40 ಅಡಿ) ಒಂದರಂತೆ ನೆಟ್ಟ ತೆಂಗಿನ ಮರಗಳ ಮಧ್ಯೆ ಹತ್ತಾರು ಗಿಡಗಳನ್ನು ನೆಟ್ಟಿದ್ದಾರೆ. ಅವರ ತೋಟದಲ್ಲಿ ತೆಂಗು, ಅಡಿಕೆ, ಸಪೋಟ, ಮಾವು, ದಾಳಿಂಬೆ, ನಿಂಬೆ, ಕಿತ್ತಳೆ, ಮೂಸಂಬಿ, ನೇರಳೆ, ಪನ್ನೇರಳೆ, ಜಂಬುನೇರಳೆ, ಬೆಟ್ಟದ ನೆಲ್ಲಿ, ನಾಡುನೆಲ್ಲಿ, ಹುಣಸೆ, ಅಮಟೆ, ಜಾಕಾಯಿ, ಚಕ್ಕೆ, ಏಲಕ್ಕಿ, ಮೆಣಸು, ಸೀಬೆ, ಸೀತಾಫಲ, ರಾಮಫಲ ಸೇರಿದಂತೆ 25ಕ್ಕೂ ಹೆಚ್ಚು ತೋಟಗಾರಿಕೆ ಗಿಡಗಳಿವೆ. ಇವುಗಳ ಜತೆ ಬೇವು, ತೇಗ, ಹೊಂಗೆ, ಸಿಲ್ವರ್, ಅಶೋಕ ಮರಗಳನ್ನೂ ಬೆಳೆಸಿದ್ದಾರೆ. ಹೀಗೆ 20 ವರ್ಷಗಳ ಹಿಂದಷ್ಟೇ ಬರಡುನೆಲವಾಗಿದ್ದ ಭೂಮಿ ಈಗ ಹಚ್ಚ ಹಸುರಿನ ವನವಾಗಿದೆ. 

ಮೊದಲ ಸೌರಶಕ್ತಿ
ತಮ್ಮ ಕೃಷಿಭೂಮಿಯಲ್ಲಿ ಸೌರಶಕ್ತಿ ಅಳವಡಿಸಿರುವ ಇರುವ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿಯೇ ಮೊದಲ ಮತ್ತು ಏಕೈಕ ಸೌರಶಕ್ತಿ ಬಳಕೆದಾರರಾಗಿದ್ದಾರೆ. 15 ವರ್ಷಗಳ ಹಿಂದೆ ಸೌರಶಕ್ತಿ ಬಳಕೆ ಮಾಡಿಕೊಂಡು ಕೊಳವೆಬಾವಿಯಿಂದ ನೀರು ಎತ್ತುತ್ತಿದ್ದರು.  ಕ್ರಮೇಣ ಅಂತರ್ಜಲ ಮಟ್ಟ ಕುಸಿದ ಕಾರಣ ಆಳದಿಂದ ನೀರೆತ್ತಲು ಸಾಧ್ಯವಾಗದೆ ಮತ್ತೆ ವಿದ್ಯುತ್ತನ್ನೇ ಅವಲಂಬಿಸಿದ್ದಾರೆ. 28 ಎಕರೆ ಪ್ರದೇಶದಲ್ಲಿ ಒಟ್ಟು 5 ಕೊಳವೆ ಬಾವಿಗಳಿದ್ದು ಎಲ್ಲಾ ಗಿಡ-ಮರಗಳಿಗೂ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ.

ತಮ್ಮ ಜಮೀನಿನಲ್ಲಿ ಎರಡು ಗೋಕಟ್ಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಮಳೆಗಾಲದಲ್ಲಿ ಈ ಕಟ್ಟೆಗಳಲ್ಲಿ ನೀರು ಶೇಖರಣೆಯಾಗುತ್ತದೆ. ಇದರಿಂದ ಇವರ ತೋಟದಲ್ಲಿರುವ ಕೊಳವೆಬಾವಿಗಳ ಮರುಪೂರಣವಾಗಿ ನೀರಿಗೆ ತೊಂದರೆಯಾಗಿಲ್ಲ. 28 ಎಕರೆ ಜಮೀನಿನ ಫಲವತ್ತತೆ ಕಾಪಾಡುವುದು ಸಹ ಶ್ರಮದಾಯಕ ಕೆಲಸ ಎಂಬುದನ್ನು ಮನಗಂಡು ತೋಟದ ತ್ಯಾಜ್ಯಗಳಿಗೆ ಬೆಂಕಿಯಿಡದೆ ಅಡಿಕೆ ಗಿಡಗಳ ಸಾಲುಗಳ ಮಧ್ಯೆ ಹಾಕಿ ಗೊಬ್ಬರವಾಗಿಸುತ್ತಿದ್ದಾರೆ.

ಪ್ರತಿ ವರ್ಷ ಒಂದೊಂದು ಸಾಲಿಗೆ ಹಾಕಿ ಇಡೀ ತೋಟವನ್ನೇ ಫಲವತ್ತಾದ ಭೂಮಿ ಮಾಡುತ್ತಾ ಬರುತ್ತಿದ್ದಾರೆ. ಸಂಪೂರ್ಣ ಜಮೀನಿನಲ್ಲಿ ದೊಡ್ಡ ಹಾಗೂ ಸಣ್ಣ ಏರಿಗಳು, ಸಣ್ಣ ಸಣ್ಣ ಬದುಗಳ ನಿರ್ಮಾಣ ಮಾಡುವ ಮೂಲಕ ಮಳೆಗಾಲದಲ್ಲಿ ನೀರಿಂಗಿಸುವ ಕೆಲಸ ನಡೆದಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT