ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತ ಕೆರೆ ಒಡಲು ತುಂಬಿದ ಕೃಷ್ಣೆ

Last Updated 7 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದಿಲ್‌ಶಾಹಿ ಮನೆತನದ ಅರಸ, ಜಗದ್ವಿಖ್ಯಾತ ಗೋಳಗುಮ್ಮಟ ಕಟ್ಟಿಸಿದ ದೊರೆ ಮೊಹಮ್ಮದ್ ಆದಿಲ್‌ಶಾಹಿ ನಿರ್ಮಿಸಿದ ಮಮದಾಪುರ ದೊಡ್ಡ ಕೆರೆ, ಬೇಗಂ ತಾಲಾಬ್‌, ಮಮದಾಪುರ ಸಣ್ಣ ಕೆರೆ, ಸಾರವಾಡ, ಬಬಲೇಶ್ವರ, ತಿಡಗುಂದಿ ಹಾಗೂ ವಿಜಯಪುರ ನಗರದ ಉತ್ತರ ಭಾಗದಲ್ಲಿ ಬರುವ ಸರ್‌ ಎಂ.ವಿಶ್ವೇಶ್ವರಯ್ಯ ರೂಪಿಸಿದ ಭೂತನಾಳ ಕೆರೆಗಳೆಲ್ಲ ಈಗ ಮಡಿಲು ತುಂಬಿಸಿಕೊಳ್ಳುವ ಸಮಯ.

2014ರ ನವೆಂಬರ್‌ ತಿಂಗಳಿನಿಂದ 24 ತಿಂಗಳ ಅವಧಿಯ ಯೋಜನೆ ಇದಾಗಿದೆ. ಈಗ ಆರು ಕೆರೆಗಳಿಗೆ ನೀರು ಹರಿಯುತ್ತಿದ್ದು, ಬೇಗಂ ತಾಲಾಬ್ ಹಾಗೂ ಸಾರವಾಡ ಕೆರೆ ಭರ್ತಿಯಾಗಿವೆ. ತಿಡಗುಂದಿ ಕೆರೆಗೆ ನೀರು ಹರಿಸುವ ಪೈಪ್‌ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ.

ಉಳಿದ ನಾಲ್ಕು ಕೆರೆಗಳಿಗೆ ನೀರು ತುಂಬಲಾಗುತ್ತಿದೆ. ಬಬಲೇಶ್ವರ ಕೆರೆಗೆ ತಾಂತ್ರಿಕ ಕಾರಣಗಳಿಂದ ತಿಂಗಳಿಗೂ ಅಧಿಕ ಅವಧಿ ನೀರು ಹರಿಯುವುದು ಸ್ಥಗಿತಗೊಂಡಿತ್ತು.ಇದೀಗ ನೀರಿನ ಹರಿವು ಹೆಚ್ಚಳಗೊಳಿಸಲು ಮತ್ತೊಂದು 200 ಎಂಎಂ ವ್ಯಾಸದ ಪೈಪನ್ನು ಆಳದಲ್ಲಿ ಹೂಳಲಾಗಿದ್ದು, ನೀರಿನ ಹರಿವು ಮತ್ತೆ ಆರಂಭಗೊಂಡಿದೆ.

ಭೂತನಾಳ, ಬೇಗಂ ತಾಲಾಬ್‌ ನೀರನ್ನು ಕುಡಿಯುವ ನೀರಿಗೆ ಬಳಸಿಕೊಳ್ಳುವ ಯೋಜನೆ ರೂಪುಗೊಂಡಿದೆ. ಉಳಿದ ಕೆರೆಗಳು ಅಂತರ್ಜಲ ಹೆಚ್ಚಳಕ್ಕೆ ಸೀಮಿತ. ಸಪ್ತ ಕೆರೆ ತುಂಬಿದ ಬಳಿಕ ಯೋಜನೆ ಮುಂದುವರೆಸಿ ಮಖಣಾಪುರ, ಬರಟಗಿ, ಹಂಚಿನಾಳ ಕೆರೆ ತುಂಬುವ ಆಲೋಚನೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರದ್ದು. ನದಿ ಪಾತ್ರದಿಂದ 65 ಕಿ.ಮೀ. ದೂರದವರೆಗೂ ಪೈಪ್‌ಲೈನ್‌ ಮೂಲಕವೇ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ಈ ಸಪ್ತ ಕೆರೆಗಳನ್ನು ಒಮ್ಮೆ ಭರ್ತಿ ಮಾಡಲು 0.426 ಟಿಎಂಸಿ ಅಡಿ ನೀರು ಬೇಕು. ವರ್ಷಕ್ಕೆರಡು ಬಾರಿ ನೀರು ತುಂಬುವ ಯೋಜನೆಯಿದು. 0.852 ಟಿಎಂಸಿ ಅಡಿ ವರ್ಷಕ್ಕೆ ನಿಗದಿಯಾಗಿದೆ. ₹ 197 ಕೋಟಿ ಮೊತ್ತದ ಯೋಜನೆ ಇದಾಗಿದೆ.

ಕೆರೆಗಳ ಸಂಕ್ಷಿಪ್ತ ಮಾಹಿತಿ
ಬೇಗಂ ತಾಲಾಬ್: ಗೋಳಗುಮ್ಮಟ ಕಟ್ಟಿಸಿದ್ದ ದೊರೆ ಮೊಹಮ್ಮದ್ ಆದಿಲ್‌ಶಾಹಿ ವಿಜಯಪುರ ನಗರದ ಹೊರ ವಲಯದಲ್ಲಿ 1651–53ರ ಅವಧಿಯಲ್ಲಿ ಈ ತಾಲಾಬ್‌ ಕಟ್ಟಿಸಿದ್ದ. ಒಂಬತ್ತು ಲಕ್ಷ ಮೀರಿ ಬೆಳೆಯುತ್ತಿದ್ದ ಆಗಿನ ವಿಜಯಪುರ ನಗರದ ಜನತೆಯ ನೀರಿನ ದಾಹ ನೀಗಿಸಲು ಮತ್ತು ಉದ್ಯಾನ ನಿರ್ವಹಣೆಗೆ 234 ಎಕರೆ ವಿಸ್ತೀರ್ಣದಲ್ಲಿ ಕೆರೆಯನ್ನು ಪತ್ನಿ ಜಹಾ ಬೇಗಂ ಹೆಸರಿನಲ್ಲಿ ನಿರ್ಮಿಸಿದ.

ಬೇಗಂ ತಾಲಾಬ್‌ನಲ್ಲಿ ನಿರ್ಮಿಸಿದ ಕಲ್ಲಿನ ಮಂಟಪದ ಮೂಲಕ (ಕಂಟ್ರೋಲ್ ಛೇಂಬರ್), 15 ಇಂಚು ವ್ಯಾಸದ ಹೆಂಚಿನ ಪೈಪುಗಳನ್ನು ಬಳಸಿಕೊಂಡು ನಗರದ ಕೋಟೆಯನ್ನು ದಾಟಿ, ಸಾರವಾಡ ದಿಡ್ಡಿ (ಕೋಟೆಯ ಗುಂಬಜ್) ಮೂಲಕ ನಗರವನ್ನು ಪ್ರವೇಶಿಸುವ ಈ ಪೈಪ್‌ಲೈನ್ ವ್ಯವಸ್ಥೆ, ಅಲ್ಲಿಂದ ಖಾದಿ ಗ್ರಾಮೋದ್ಯೋಗ ಹಿಂಭಾಗದಲ್ಲಿರುವ ಅಲಿ ಆದಿಲ್‌ಶಾಹಿ ಗಂಜ್, ಬಾಗಲಕೋಟೆ ಕ್ರಾಸ್‌ನಲ್ಲಿರುವ ಅಂಡು ಮಸೀದಿ ಗಂಜ್ ನಂತರ ಅಸಾರ್ ಮಹಲ್ ಗಂಜ್ ಮತ್ತು ಅದರ ಮುಂಭಾಗದಲ್ಲಿರುವ ಬೃಹತ್ ಕೊಳಕ್ಕೆ ನೀರು ಸರಬರಾಜು ಮಾಡುತ್ತಿತ್ತು.

ಇದೇ ರೀತಿ ನಗರದ ಪ್ರಮುಖ ಸ್ಥಳಗಳಲ್ಲಿರುವ 11 ಮುಖ್ಯ ಜಲಸಂಗ್ರಹಾಗಾರಗಳಿಗೆ (ಗಂಜ್‌ಗಳು) ಇಲ್ಲಿಂದಲೇ ನೀರು ಗುರುತ್ವಾಕರ್ಷಣೆ ಮೂಲಕವೇ ಸರಬರಾಜಾಗುತ್ತಿತ್ತು. ಭೂಮಿಯ ಮೇಲ್ಮಟ್ಟದಿಂದ 30 ಅಡಿ ಆಳದಲ್ಲಿರುವ ಈ ಪೈಪ್‌ಲೈನ್‌ಗೆ ಸುತ್ತಲೂ ಗಚ್ಚಿನಿಂದ ಮಾಡಿದ ರಕ್ಷಾ ಕವಚವಿದೆ.

ಪೈಪ್‌ಲೈನ್‌ ಮಾರ್ಗದ ಮಧ್ಯದಲ್ಲಿ ತೊಂದರೆಗಳಿದ್ದರೆ, ಇಳಿದು ರಿಪೇರಿ ಮಾಡಲು, ಸ್ವಚ್ಛಗೊಳಿಸಲು ಬಾವಿಗಳನ್ನು ಕಟ್ಟಿದ್ದು, ಇಳಿದು ಹೋಗುವ ವ್ಯವಸ್ಥೆಯಿದೆ. ಇಂದಿಗೂ ಇದನ್ನು ವಿಜಯಪುರ ನಗರದಲ್ಲಿ ನೋಡಬಹುದು. ಈ ರೀತಿಯ ಕುಡಿಯುವ ನೀರು ಸರಬರಾಜಿನ ವ್ಯವಸ್ಥೆ ರೂಪುಗೊಂಡಿರುವುದು ಜಗತ್ತಿನ ಬೆರಳೆಣಿಕೆ ನಗರಗಳಲ್ಲಿ ಎಂಬುದು ಇದರ ವೈಶಿಷ್ಟ್ಯ. ಪ್ರಸ್ತುತ ತಾಲಾಬ್‌ ತುಂಬಿದ್ದು, ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಸೌಂದರ್ಯದ ಖನಿ: ಮಹಮ್ಮದ್‌ ಆದಿಲ್‌ಶಾಹಿ ಕೊಂಕಣದ ತನ್ನ ವಿಜಯ ಯಾತ್ರೆಯ ಸವಿ ನೆನಪಿಗಾಗಿ ಎಂದೂ ಬತ್ತದ ಕೆರೆಯನ್ನು ಕಟ್ಟಿಸುವ ಕನಸು ಕಂಡ. ಅವನ ಆದೇಶದಂತೆ ಮಂತ್ರಿಯು ಖವಾಸ್ಕಾನ ಬರಗಿ, ಚೌಡಾಪುರ, ಅನಂತಪುರ, ಖಾಸಬಾಗ್ ಗ್ರಾಮಗಳನ್ನು ಸ್ಥಳಾಂತರಿಸಿ ಆ ಸ್ಥಳದಲ್ಲಿ ಅದ್ಭುತವಾದ ಕೆರೆ ಕಟ್ಟಿಸಿದ. ಇದರ ಜೊತೆಗೆ ಈ ನಾಲ್ಕು ಗ್ರಾಮಗಳನ್ನು ಒಂದೆಡೆಯೇ ನಿರ್ಮಿಸಿ ಮಹಮದಪುರ ಎಂಬ ಹೊಸ ಊರು ನಿರ್ಮಿಸಿದ.

ಮಹಮದ್‌ ಆದಿಲ್‌ಶಾಹಿ ಇದರ ಪಕ್ಕದಲ್ಲೇ ಅರಮನೆ ನಿರ್ಮಿಸಿಕೊಂಡಿದ್ದ. ‘ಕೆರೆಯ ದಂಡೆಯಲ್ಲಿ ಉತ್ತರಾಭಿಮುಖವಾಗಿ ಇರುವ ಪರ್ಶಿಯನ್‌ ಭಾಷೆಯ ಶಾಸನ ಕೆರೆಯ ಇತಿಹಾಸ ತಿಳಿಸುತ್ತದೆ’ ಎನ್ನುತ್ತಾರೆ ಮಮದಾಪುರ ಗ್ರಾಮದ ಶಿಕ್ಷಕ ಚಂದ್ರಕಾಂತ ಪಾಟೀಲ.

ಕರಿ ಡುಗ್ಗು: ಈ ಕೆರೆಯ ನೀರನ್ನು ಬಳಸಿ ಅಚ್ಚುಕಟ್ಟು ಪ್ರದೇಶದ ರೈತರು ಅಕ್ಕಿ ಬೆಳೆಯುತ್ತಿದ್ದರು. ಹೊಳೆ ದಂಡೆವರೆಗೂ 13ಕಿ.ಮೀ. ಉದ್ದದ ಹೊಲಗಾಲುವೆ ಬಳಸಿ ಆಸುಪಾಸಿನ ರೈತರು ಬೆಳೆಯುತ್ತಿದ್ದ ‘ಕರಿ ಡುಗ್ಗು’ ನೆಲ್ಲು ಬಹಳ ಪ್ರಸಿದ್ಧಿ. ಈ ನೆಲ್ಲಿನ ಅಕ್ಕಿಯಲ್ಲಿ ಅನ್ನ ಬೇಯಿಸಿದರೆ ಸುವಾಸನೆ ಇಡೀ ಓಣಿಗೆ ಪಸರಿಸುತ್ತಿತ್ತು. ಒಂದೂವರೆ ದಶಕದಿಂದ ಕೆರೆ ಭಣಗುಡುತ್ತಿದ್ದರಿಂದ ತನ್ನ ವೈಭವ ಕಳೆದುಕೊಂಡಿತು. ಗದ್ದೆ ಬಯಲಿಗೆ ಜಾಲಿ ಆವರಿಸಿತು. ಇದೀಗ ಕೆರೆ ಮತ್ತೆ ಜೀವ ಕಳೆ ಪಡೆಯುತ್ತಿದೆ.

ಭೂತನಾಳ ಕೆರೆ: ವಿಜಯಪುರ ನಗರದ ಅರ್ಧ ಭಾಗದ ಜನತೆಗೆ ಕುಡಿಯುವ ನೀರು ಪೂರೈಸುವ 105 ವರ್ಷಗಳ ಇತಿಹಾಸ ಹೊಂದಿರುವ ಭೂತನಾಳ ಕೆರೆಗೆ ಪೈಪ್‌ಲೈನ್‌ ಮೂಲಕ ನೀರು ತುಂಬಿಸಲಾಗುತ್ತಿದೆ.

ವಿಜಯಪುರದ ಉತ್ತರ ಭಾಗದಲ್ಲಿರುವ ಭೂತನಾಳ ಕೆರೆ 534 ಎಕರೆ ವಿಸ್ತೀರ್ಣ ಹೊಂದಿದೆ. 1911ರಲ್ಲಿ ವಿಜಯಪುರ ನಗರದ 1.5 ಲಕ್ಷ ಜನರಿಗೆ ನಿತ್ಯ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಅಂದಿನ ನಗರಸಭೆ ಈ ಕೆರೆ ನಿರ್ಮಾಣ ಮಾಡಿರುವ ಐತಿಹ್ಯವಿದೆ. ಸರ್‌ ಎಂ.ವಿಶ್ವೇಶ್ವರಯ್ಯ ಕೆರೆ ನಿರ್ಮಾಣದ ನೀಲಿನಕ್ಷೆ ರೂಪಿಸಿ, ಸಲಹೆ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.

534 ಎಕರೆ ಬೃಹದಾಕಾರದ ವಿಸ್ತ್ರೀರ್ಣ ಹೊಂದಿರುವ ಭೂತನಾಳ ಕೆರೆ ಅಂದಾಜು 87.34 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ಈ ಕೆರೆಯ ಮಣ್ಣಿನ ಏರಿ 950 ಮೀಟರ್‌ ಉದ್ದ, 6.08 ಮೀಟರ್ ಎತ್ತರ, 3.50 ಮೀಟರ್ ಮೇಲು ಅಗಲ ಹೊಂದಿದೆ. ಕೆರೆಯ ಪುನಶ್ಚೇತನದಿಂದ 13.90 ಮೀಟರ್‌ ಘನಅಡಿ ವಿಸ್ತೀರ್ಣ ಹೆಚ್ಚಿದೆ. ಶೇ 0.14 ಟಿಎಂಸಿ ಅಡಿ ನೀರಿನ ಶೇಖರಣೆ ಸಾಮರ್ಥ್ಯವೂ ಹೆಚ್ಚಳಗೊಂಡಿದೆ. ಇದೀಗ ಕೆರೆಯಲ್ಲಿನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 279.5 ಎಂಸಿಎಫ್‌ಟಿ.

ಬಬಲೇಶ್ವರ ಕೆರೆ: ಇದು ಜಿನುಗು ಕೆರೆ. ಮಳೆಗಾಲದಲ್ಲಿ ಮಾತ್ರ ನೀರು ತುಂಬಿರುತ್ತಿತ್ತು. ಬೇಸಿಗೆ ವೇಳೆಗೆ ನೀರೆಲ್ಲ ಬಸಿಯುತ್ತಿತ್ತು. ಕೆರೆ ಖಾಲಿ ಖಾಲಿಯಿರುತ್ತಿತ್ತು. ವರುಣನ ಅವಕೃಪೆಯಿಂದ 15 ವರ್ಷಗಳಿಂದ ತುಂಬಿರಲಿಲ್ಲ. ಕೃಷ್ಣೆಯ ನೀರು ತುಂಬುವುದಕ್ಕೂ ಮುನ್ನ ಕೆರೆಗೆ ಕಾಯಕಲ್ಪ ಒದಗಿಸಲಾಗಿದೆ. ₹ 77 ಲಕ್ಷ ವೆಚ್ಚದಲ್ಲಿ ಏರಿ ದುರಸ್ತಿಗೊಳಿಸಲಾಗಿದೆ. ಕೆರೆಯ ನೀರು ಸೋರಿ ಹೋಗುವುದನ್ನು ತಪ್ಪಿಸಲು ಹೊರ ಭಾಗದಿಂದ ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಕೆರೆಯ ಅಂಗಳಕ್ಕೆ ಕಪ್ಪು ಮಣ್ಣು ತುಂಬಲಾಗಿದೆ. ಗ್ರಾಮದ 12 ಸಾವಿರ ಜನತೆಯ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ ಈ ಕೆರೆ.

ಸಿಹಿ ನೀರು ನೀಡಿತ್ತು
ಹಲ ವರ್ಷಗಳಿಂದ ಭಣಗುಡುತ್ತಿದ್ದ ಸಾರವಾಡ ಗ್ರಾಮದ ಪುಟ್ಟ ಕೆರೆ ಈಗ ತುಂಬಿ ತುಳುಕುತ್ತಿದೆ. ಏರಿ ಹಿಂಭಾಗದಲ್ಲಿ 1968ರಲ್ಲಿ ನಿರ್ಮಿಸಿದ ‘ಪೀರನ ಗುಂಡ’ ಎಂಬ ಸಾರ್ವಜನಿಕ ಬಾವಿಯೊಂದಿದೆ. ಬಾವಿಯಲ್ಲಿ ನೀರಿನ ಸೆಲೆ ಹೆಚ್ಚುತ್ತಿದ್ದಂತೆ ಹೂಳು ತೆಗೆದು ಸ್ವಚ್ಛಗೊಳಿಸಲಾಗಿದೆ. ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ರಸ್ತೆ ನಿರ್ಮಿಸಿದ್ದಾರೆ.

80 ಅಡಿ ಆಳದ ಬಾವಿಯಲ್ಲೀಗ ಕೃಷ್ಣೆಯ ಅಂತರ್ಜಲ ಶೇಖರಣೆಗೊಂಡಿದೆ. ಕುಡಿಯಲು ಯೋಗ್ಯವೇ ಎಂಬ ವರದಿಗಾಗಿ ನೀರನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಕಾರಾತ್ಮಕ ವರದಿ ದೊರೆತರೆ ಬಾವಿಗೆ ಪಂಪ್‌ಸೆಟ್‌ ಅಳವಡಿಸಿ, ಗ್ರಾಮದ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ಹಾಯಿಸಿ, ಪೈಪ್‌ಲೈನ್‌ ಮೂಲಕ ಪ್ರತಿ ಮನೆಯ ನಳಕ್ಕೆ ನೀರು ನೀಡುವ ಚಿಂತನೆ ಗ್ರಾಮ ಪಂಚಾಯ್ತಿ ಆಡಳಿತದಿಂದ ನಡೆದಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಪ್ರಮೋದ ಚಿಕ್ಕರೆಡ್ಡಿ.

ಪ್ರವಾಸೋದ್ಯಮ ಅಭಿವೃದ್ಧಿ...
ಬೇಗಂ ತಾಲಾಬ್, ಭೂತನಾಳ, ಮಮದಾಪುರ ದೊಡ್ಡ ಕೆರೆ ಬಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಪ್ರಸ್ತಾವವೊಂದನ್ನು ಕೆಬಿಜೆಎನ್‌ಎಲ್‌ ಅಧಿಕಾರಿಗಳು ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದ್ದಾರೆ.

ತಾಲಾಬ್‌ ಮುಂಭಾಗದ ವಿಶಾಲ ಮೈದಾನದಲ್ಲಿ ಉದ್ಯಾನ, ಬೋಟಿಂಗ್ ವ್ಯವಸ್ಥೆ, ನಡುಗಡ್ಡೆ ಹೋಟೆಲ್‌ ಸೌಕರ್ಯ, ಕಾರಂಜಿ ವ್ಯವಸ್ಥೆ, ಕೆರೆ ಅಂಗಳದ ಮೇಲ್ಭಾಗದ 30 ಎಕರೆ ನೀರು ನಿಲ್ಲದಿರುವ ಸ್ಥಳದಲ್ಲಿ ವಿವಿಧ ಆಟಗಳಿಗೆ ಮೈದಾನ, ಕೆರೆಯ ಸುತ್ತಲಿನ 7.5 ಕಿ.ಮೀ. ವ್ಯಾಪ್ತಿಯಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಸೇರಿದಂತೆ ಈ ಪ್ರದೇಶದ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸಲಾಗಿದೆ.

‘ಭೂತನಾಳ ಕೆರೆ, ಮಮದಾಪುರ ಕೆರೆ ಬಳಿಯೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಲಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್ ರಾಜೇಂದ್ರ ರೂಢಗಿ ಮಾಹಿತಿ ನೀಡಿದರು.

ಪಶು–ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪಿತು. ನಮ್ಮೂರ ಕೆರೆಯಲ್ಲಿ ದಶಕದ ಬಳಿಕ ಹಕ್ಕಿಗಳ ಕಲರವ ನೋಡಿ ಮನ ತುಂಬಿತು. ಕಣ್ಮರೆಯಾಗಿದ್ದ ಐತಿಹಾಸಿಕ ಕೆರೆಯ ಗತ ವೈಭವ ‘ದೀಪಾವಳಿ ಉಡುಗೊರೆ’ಯಾಗಿ ದೊರೆತಿದೆ. ನಾವು ಚಿಕ್ಕವರಿದ್ದ ಕಾಲಘಟ್ಟದಿಂದಲೂ ನಮ್ಮೂರ ಕೆರೆ ತುಂಬುವ ಭರವಸೆ ಕೇಳಿ ಕೇಳಿ ನಿರಾಸೆಯ ಮಡುವಿನಲ್ಲಿ ಮುಳುಗಿದ್ದೆವು. ನಮ್ಮ ಮೊಮ್ಮಕ್ಕಳ ಕಾಲಕ್ಕೂ ಕೆರೆ ತುಂಬುವ ಯೋಜನೆ ಅನುಷ್ಠಾನಗೊಳ್ಳುವುದಿಲ್ಲ ಎಂಬುದು ಮನದ ಮೂಲೆಯಲ್ಲಿ ಬೇರೂರಿತ್ತು.

ಇತ್ತ ದಶಕದಿಂದಲೂ ವರುಣನ ಅವಕೃಪೆ... ಒಟ್ಟಾರೆ ಬದುಕು ಬೆಂಗಾಡಾಗಿತ್ತು. ಇದೀಗ ಕೆರೆಗೆ ನೀರು ಹರಿಯುತ್ತಿದ್ದು ನಮ್ಮ ಕಂಗಳಲ್ಲಿ ಕನಸು ಮೊಳೆಯುತ್ತಿವೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಈ ಕೆರೆಗಳ ವ್ಯಾಪ್ತಿಯ ಗ್ರಾಮಸ್ಥರಾದ ನಬಿಸಾಬ್ ಹಾಗೂ ಗೃಹಿಣಿ ಕುಸುಮಾ ಹಿರೇಮಠ.

***
ರಾಜ್ಯದಲ್ಲಿ ₹5ಸಾವಿರ ಕೋಟಿ ವೆಚ್ಚದಲ್ಲಿ 1200 ಕೆರೆಗಳನ್ನು ತುಂಬುವ 65 ಯೋಜನೆ ಅನುಷ್ಠಾನಗೊಳಿಸಿದ್ದು, ಇದರಲ್ಲಿ 15 ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದವು ಪ್ರಗತಿಯಲ್ಲಿವೆ.
–ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

‌***
ಐದು ದಶಕದ ಬಳಿಕ ಭರ್ತಿ

2009ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸುರಿದ ಕುಂಭದ್ರೋಣ ಮಳೆಗೂ ಬೇಗಂ ತಾಲಾಬ್‌ ತುಂಬಿ ಕೋಡಿ ಹರಿದಿರಲಿಲ್ಲ. 1965–70ರ ನಡುವೆ ಮಾತ್ರ ತಾಲಾಬ್‌ ತುಂಬಿದ ನೆನಪು. ಅಲ್ಲಿಂದ ಇಲ್ಲಿವರೆಗೂ ಒಮ್ಮೆಯೂ ತುಂಬಿರಲಿಲ್ಲ. ಇದೀಗ ಮೈದುಂಬಿದೆ
–ಎನ್‌.ಕೆ.ಮನಗೊಂಡ ನಿವೃತ್ತ ಪ್ರಾಚಾರ್ಯ, ವಿಜಯಪುರ

***
ತಪ್ಪಿದ ಬವಣೆ

ಆರು ವರ್ಷಗಳಿಂದ ಕೆರೆಯಲ್ಲಿ ನೀರಿರಲಿಲ್ಲ. ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದವು. ತೊಗರಿಗೆ ಔಷಧಿ ಸಿಂಪಡಣೆಗೆ ಅಗತ್ಯ ನೀರಿಗೂ ಪರದಾಡಬೇಕಿತ್ತು. ಕೆರೆ ತುಂಬಿದ್ದರಿಂದ ರೈತರು ಬವಣೆ ಪಡುವುದು ತಪ್ಪಿದೆ, ಸಂತಸವಾಗಿದೆ.
–ಮುತ್ತು ಜಂಗಮಶೆಟ್ಟಿ ಸಾರವಾಡ

***
ಸಮಿತಿ ರಚನೆ...

ಐತಿಹಾಸಿಕ ಕೆರೆ ಸಂರಕ್ಷಣೆಗೆ ಸಮಿತಿ ರಚಿಸುವ ಆಲೋಚನೆ ಊರ ಪ್ರಮುಖರದ್ದು. ಕೆರೆಗೆ ನೀರು ತುಂಬಿದ ರೀತಿಯೇ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದರೆ ಚಲೋ ಇರುತ್ತದೆ. ಇದರಿಂದ ಕಳೆಗುಂದಿದ ಆದಿಲ್‌ಶಾಹಿ ಅರಸನ ಕೆರೆಯ ಗತ ವೈಭವ ಮರಳುತ್ತದೆ
–ನಾಗಪ್ಪ ಸುತಗುಂಡಿ ಮಮದಾಪುರ

***
ಭವಿಷ್ಯಕ್ಕೆ ಕೊಡುಗೆ

ಜನತೆ ನೀಡಿದ ಅವಕಾಶವನ್ನು ಜಲಸಂಪನ್ಮೂಲ ಸಚಿವರು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಮುಂದಿನ ಪೀಳಿಗೆಯೂ ಸ್ಮರಿಸುವ ಕಾಯಕ ಮಾಡಿದ್ದಾರೆ.
–ಉಮೇಶ ಕೋಳಕೂರ ಬಬಲೇಶ್ವರ ಜಿಲ್ಲಾ ಪಂಚಾಯ್ತಿ ಸದಸ್ಯ

***
ಜೀವ ಸೆಲೆ

1900ರಲ್ಲಿ ನಮ್ಮ ಹಿರಿಯರು ಕಟ್ಟಿಸಿದ್ದ ಬಾವಿ ಬತ್ತಿತ್ತು. ಇದೀಗ ಕೆರೆಗೆ ನೀರು ಬಿಡುತ್ತಿದ್ದಂತೆ ಜೀವಕಳೆ ತಳೆದಿದೆ. 18 ಎಕರೆ ಹೊಲದ ನೀರಾವರಿ ಈ ಬಾವಿ ಆಸರೆಯಲ್ಲೇ ನಡೆದಿದೆ. ಸ್ಥಗಿತಗೊಂಡಿದ್ದ ಕೊಳವೆಬಾವಿಗಳಿಗೂ ಅಂತರ್ಜಲ ಮರುಪೂರಣಗೊಂಡಿದೆ.
–ಬಾಪುರಾಯ ಎಸ್.ಯಾದವಾಡ ಬಬಲೇಶ್ವರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT